Saturday, 14th December 2024

ಹೃದಯಾಘಾತ: ಎಚ್ಚರಿಕೆ ಅಗತ್ಯ

ನಟ ವಿಜಯ ರಾಘವೇಂದ್ರ ಅವರ ಪತ್ನಿ ಸ್ಪಂದನಾ ಹಠಾತ್ ನಿಧನರಾಗಿದ್ದಾರೆ. ಇನ್ನೂ ಚಿಕ್ಕವಯಸ್ಸಿನ ಅವರ ಸಾವಿಗೆ ಹೃದಯಾಘಾತವೇ ಕಾರಣವೆಂದು ಹೇಳಲಾಗುತ್ತಿದೆ. ಪ್ರೀತಿಸಿ ಮದುವೆಯಾಗಿದ್ದ ನಿರ್ಮಾಪಕ ಚಿನ್ನೇಗೌಡರ ಪುತ್ರ ವಿಜಯ್- ಮಾಜಿ ಪೊಲೀಸ್ ಅಧಿಕಾರಿ ಬಿ.ಕೆ.ಶಿವರಾಮ್ ಅವರ ಪುತ್ರಿ ಸ್ಪಂದನಾ ಕನ್ನಡ ಚಿತ್ರರಂಗದ ಆದರ್ಶ ದಂಪತಿ ಎಂದೇ ಜನಪ್ರಿಯ ರಾಗಿದ್ದರು.

ಅವರ ದಾಂಪತ್ಯ ಹೀಗೆ ಮುಗಿದಿರುವುದು ನಿಜಕ್ಕೂ ದುಃಖಕರ. ಇತ್ತೀಚೆಗೆ ೨೦ರಿಂದ ೪೦ರ ನಡುವಿನ ವಯಸ್ಸಿನ ಯುಜನರು ಹೃದಯ ಸಂಬಂಧಿ ದಾಳಿಗೆ ತುತ್ತಾಗುವುದು ಹೆಚ್ಚುತ್ತಿರುವುದು ಆಘಾತಕಾರಿ ಸಂಗತಿ. ವ್ಯಕ್ತಿಯ ೫೦ ಅಥವಾ ೬೦ರ ಹರೆಯದಲ್ಲಿ ಸಂಭವಿಸುವ ಸಾಮಾನ್ಯ ಹೃದಯಾಘಾತಗಳಂತೆ ಇವಲ್ಲ, ಬದಲಿಗೆ ಇವನ್ನು ವೈದ್ಯ ಪರಿಭಾಷೆಯಲ್ಲಿ ಪಿಸಿಎಡಿ-ಪ್ರೈಮರಿ ಎಕರೋನರಿ ಆರ್ಟರಿ ಡಿಸೀಸ್ ಎನ್ನಲಾಗುತ್ತದೆ. ಇಂಥ ಪ್ರಕರಣಗಳಲ್ಲಿ ಶೇ.೧೨-೧೩ರಷ್ಟು ಜನರು ಮಾತ್ರ ಮಧುಮೇಹ ಅಥವಾ ಅಽಕ ರಕ್ತದೊತ್ತಡ ಹೊಂದಿದ್ದು, ಉಳಿದಂತೆ ಬಹುತೇಕ ಪ್ರಕರಣಗಳಿಗೆ ಅತಿಯಾದ ದೈಹಿಕ ಕಸರತ್ತು ಹಾಗೂ ಅವೈಜ್ಞಾನಿಕ ಡಯೆಟ್ ಪದ್ಧತಿ ಕಾರಣವಾಗುತ್ತಿದೆ ಎಂಬುದು ಗಮನಾರ್ಹ.

ಜತೆಗೆ ಕೆಟ್ಟ ಮತ್ತು ಒತ್ತಡದ ಜೀವನಶೈಲಿ, ಅತಿ ಮಾಲಿನ್ಯ ಮತ್ತು ಅಧಿಕ ಕಾರ್ಬ್ ಆಹಾರ ಸೇವನೆಯೂ ಹೃದಯಾಘಾತದ ಹೆಚ್ಚಳದಲ್ಲಿ ಪ್ರಮುಖ ಪಾತ್ರ ವಹಿಸಬಹುದು ಎನ್ನುತ್ತಾರೆ ವೈದ್ಯರು. ಯುವಜನರು ಏನನ್ನು ತಿನ್ನುತ್ತಾರೆ ಎನ್ನುವುದಕ್ಕಿಂತ ಇದು ಯಾವ ರೀತಿಯ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡುತ್ತಿದೆ ಎಂಬುದನ್ನು ಅರಿಯಬೇಕಿದೆ. ತಡವಾಗಿ ಮಾಡುವ ಊಟ/ ರಾತ್ರಿಯ ಊಟ ಮತ್ತು ಸಿಎಆರ್ ಬೋಹೈಡ್ರೇಟ್‌ಗಳು ಮತ್ತು ಮಾಂಸ, ಆಹಾರ ಪದ್ಧತಿಯ ಭಾಗವಾಗಿರುವ ಬಗ್ಗೆ ವೈದ್ಯಲೋಕ ಕಳವಳ ವ್ಯಕ್ತಪಡಿಸಿದೆ.

ಇನ್ನು ಮಾದಕ ವಸ್ತು ಬಳಕೆ ಅಥವಾ ಅತಿಯಾದ ಆಲ್ಕೋಹಾಲ್ ಬಳಕೆ, ಧೂಮಪಾನ, ಕೌಟುಂಬಿಕ ಇತಿಹಾಸ, ಅಧಿಕ ರಕ್ತದೊತ್ತಡ, ಅಧಿಕ ಕೊಲೆಸ್ಟ್ರಾಲ್
ಮಟ್ಟಗಳು, ದೈಹಿಕ ಚಟುವಟಿಕೆಯ ಕೊರತೆ, ಮಧುಮೇಹ ದುರ್ಬಲ, ಗ್ಲುಕೋಸ್ ಸಹಿಷ್ಣುತೆ, ಕಳಪೆ ಆಹಾರವೂ ಯುವಜನರಲ್ಲಿ ಹೃದಯಾಘಾತಕ್ಕೆ
ಕಾಣವಾಗಬಲ್ಲ ಅಂಶಗಳು. ಸಾಮಾನ್ಯವಾಗಿ ಚಿಕ್ಕ ವಯಸ್ಸಿನ ಹೃದಯಾಘಾತಗಳಲ್ಲಿ ಯಾವುದೇ ಲಕ್ಷಣಗಳು, ಮುನ್ಸೂಚನೆಯಿಲ್ಲದೆ ಬರುತ್ತವೆ, ಹೃದಯ ಸಂಬಂಧಿ ಕಾಯಿಲೆಯ ಯಾವ ಲಕ್ಷಣಗಳೂ ಮೊದಲು ಇರುವುದಿಲ್ಲ. ಕರೋನೋತ್ತರ ಜಗತ್ತಿನಲ್ಲಂತೂ ಯಾವುದೇ ಆರೋಗ್ಯ ವಿಚಾರದಲ್ಲಿ ನಮ್ಮ ನಿಯಂತ್ರಣ ಹೇದವಿಲ್ಲದಾಗಿದೆ. ಹೀಗಾಗಿ ಸಾಕಷ್ಟು ಮುನ್ನೆಚ್ಚರಿಕೆ ಅತ್ಯಗತ್ಯ.

ಆರೋಗ್ಯವಂತ ನಾಗರಿಕರು ಯಾವುದೇ ರಾಷ್ಟ್ರಕ್ಕೆ ಅತ್ಯಂತ ದೊಡ್ಡ ಆಸ್ತಿ. ಇದನ್ನು ರಕ್ಷಿಸಿಕೊಳ್ಳುವ ಹೊಣೆ ನಮ್ಮೆಲ್ಲರ ಮೇಲಿದೆ.