ವಿಶ್ಲೇಷಣೆ
ಪ್ರಕಾಶ್ ಶೇಷರಾಘವಾಚಾರ್
‘ಬೆಚ್ಚನೆಯ ಮನೆಯಿರಲು, ವೆಚ್ಚಕ್ಕೆ ಹೊನ್ನಿರಲು, ಇಚ್ಛೆಯನರಿವ ಸತಿಯಿರಲು ಸ್ವರ್ಗಕ್ಕೆ ಕಿಚ್ಚು ಹಚ್ಚೆಂದ ಸರ್ವಜ್ಞ’ ಎಂಬ ವಚನ ನಿಮಗೆ ಗೊತ್ತಿರುವಂಥದೇ. ಇತ್ತೀಚೆಗೆ ಪ್ರಧಾನಿ ಮೋದಿಯವರು ಸಂಸದ ತೇಜಸ್ವಿ ಸೂರ್ಯ ಮಾಡಿದ್ದ ಟ್ವೀಟ್‌ಗೆ ಉತ್ತರವಾಗಿ ‘Congratulations to all those who have got their homes’ ಎಂದು ನನ್ನ ಸ್ನೇಹಿತ ಪ್ರದೀಪ್ ಪೈ ಮನೆಯ ಗೃಹಪ್ರವೇಶದ ಬಗ್ಗೆ ಟ್ವೀಟ್ ಮಾಡಿದ್ದರು. ಕುತೂಹಲದಿಂದ ಪ್ರದೀಪ್ ಪೈಗೆ ಫೋನಾಯಿಸಿ ಏನಿದರ ಹಿನ್ನೆಲೆ ಎಂದು ಪ್ರಶ್ನಿಸಿದಾಗ, ಕೇಂದ್ರ ಸರಕಾರವು ಜಾರಿಗೆ ತಂದಿರುವ ‘ಸ್ವಾಮಿಹ್’ ಯೋಜನೆಯ ಬಗ್ಗೆ ತಿಳಿಸಿದರು.
ಮಧ್ಯಮ ವರ್ಗದವರು ಬಿಲ್ಡರ್‌ಗಳ ತಪ್ಪಿಗೆ ಅನುಭವಿಸುತ್ತಿರುವ ಶಿಕ್ಷೆಗೆ ಬಹು ದೊಡ್ಡ ಪರಿಹಾರವಾಗಿರುವ ಯೋಜನೆ ಇದಾಗಿದೆ. ಮನೆ ಖರೀದಿಸಲು ಹಣ ಕೊಟ್ಟು ಸಂಕಷ್ಟದಲ್ಲಿ ಸಿಲುಕಿ ರುವವರಿಗೆ ‘ಸ್ವಾಮಿಹ್’ ಯೋಜನೆ ಆಪದ್ಬಾಂಧವ ನಾಗಿದೆ. ಈ ಯೋಜನೆಯಿಂದ ಮಧ್ಯಮ ವರ್ಗಕ್ಕೆ ಬಹುದೊಡ್ಡ ಸಹಾಯವಾಗಿದ್ದು ಮೋದಿ ಸರಕಾರವು ಅಭಿನಂದನಾರ್ಹವಾಗಿದೆ. ‘ಮದುವೆ ಮಾಡಿ ನೋಡು, ಮನೆ ಕಟ್ಟಿ ನೋಡು’ ಎಂಬ ಗಾದೆ ಮಧ್ಯಮ ವರ್ಗದವರ ಕಷ್ಟಗಳ ಪ್ರತಿಬಿಂಬ. ಸ್ವಂತ ಸೂರಿಗಾಗಿ ಹಂಬಲಿಸುವ ಅವರು ಅದಕ್ಕಾಗಿ ಬ್ಯಾಂಕು ಗಳಲ್ಲಿ ಸಾಲ-ಸೋಲ ಮಾಡಿ ಕನಸನ್ನು ನನಸಾಗಿಸಿಕೊಳ್ಳುತ್ತಾರೆ.
ಇಂದಿನ ದುಬಾರಿ ದುನಿಯಾದಲ್ಲಿ ಸ್ವಂತಮನೆ ಕಟ್ಟಿಕೊಳ್ಳುವುದು ಸುಲಭವಲ್ಲ. ಕೈಗೆಟುಕುವ ದರದಲ್ಲಿ ಫ್ಲೈಟ್ ಖರೀದಿಸುವುದೊಂದೇ ಉಳಿದಿರುವ ಆಯ್ಕೆ. ಇಂಥ ಹಂಬಲದೊಂದಿಗೆ ಕೆಲವರು ಜನಪ್ರಿಯ ಬಿಲ್ಡರ್ ಗಳ ಮೊರೆಹೋಗುತ್ತಾರೆ. ಕೆಲವೊಮ್ಮೆ ಗ್ರಹಚಾರ ಕೆಟ್ಟಾಗ ಅಂಥ ಬಿಲ್ಡರ್‌ಗಳೂ ಇವರಿಗೆ ವಂಚಿಸಿ ಬಿಡುತ್ತಾರೆ. ಬಿಲ್ಡರ್ ಗಳನ್ನು ನಂಬಿ ಬ್ಯಾಂಕ್ ಸಾಲ ಮಾಡಿ ಹಣ ಪಾವತಿಸಿ ಹೊಸಮನೆಯ ಕನಸು ಕಾಣುತ್ತಾರೆ. ಆದರೆ, ಅನೇಕ ವೇಳೆ ಬಿಲ್ಡರ್ ಹಣವನ್ನು ದುರುಪಯೋಗ ಮಾಡಿ ಕೊಂಡು ಫ್ಲೈಟ್ ನಿರ್ಮಾಣ ನಿಂತುಹೋದಾಗ ಹಣ ಕೊಟ್ಟವರ ಬವಣೆ ಹೇಳತೀರದು. ಇತ್ತ ಮನೆಯೂ ಇಲ್ಲ, ಅತ್ತ ಬ್ಯಾಂಕ್ ಸಾಲಕ್ಕೆ ಇಎಂಐ ಕಟ್ಟಬೇಕಾದ ಅನಿವಾರ್ಯತೆ. ಈ ಜಂಜಾಟದಲ್ಲಿ ಬಳಲಿ ಬೆಂಡಾದ ವರು ಲಕ್ಷಾಂತರ ಮಂದಿ.
ಇವರಂತೆಯೇ ಮನೆ ಖರೀದಿಸಲು ಹಣ ಕೊಟ್ಟವರು ಬಿಲ್ಡರ್ ಮೇಲೆ ಕೇಸು ದಾಖಲಿಸಿ ಮನೆಗಾಗಿ ಒತ್ತಡ ಹಾಕಬೇಕು. ಸಹಾಯ ಮಾಡಬಲ್ಲವರು ಎಂದೆನಿಸಿದ
ವರನ್ನು ಆಗಾಗ ಭೇಟಿ ಮಾಡಬೇಕು. ಸ್ವಂತ ಕೆಲಸವನ್ನು ಬಿಟ್ಟು ಮನೆ ಪಡೆಯಲು ಒದ್ದಾಡಬೇಕು. ಜತೆಗೆ, ಲಾಯರ್ ಫೀಸ್‌ಗೆಂದು ಮತ್ತಷ್ಟು ಹಣ ಖರ್ಚುಮಾಡಿ
ಆರ್ಥಿಕ ಹೊರೆಯನ್ನೂ ಅನುಭವಿಸಬೇಕು. ಇದರಿಂದ ಕುಟುಂಬದವರಿಗೆ ಆಗುವ ಮಾನಸಿಕ ಒತ್ತಡವನ್ನು ವಿವರಿಸಲಾಗದು.
೨೦೧೮-೧೯ರಲ್ಲಿ, ದೇಶದಲ್ಲಿನ ಒಟ್ಟು ೧,೫೦೦ ಗೃಹ ನಿರ್ಮಾಣ ಯೋಜನೆಗಳಲ್ಲಿ ೯ ಲಕ್ಷ ಮನೆಗಳು ಅರ್ಧಕ್ಕೇ ನಿಂತುಹೋಗಿದ್ದವು. ಬಹುತೇಕ ಸಂದರ್ಭಗಳಲ್ಲಿ ಬಿಲ್ಡರ್ ಗಳ ದುರಾಸೆ ಪ್ರವೃತ್ತಿ, ಪಡೆದ ಹಣವನ್ನು ಮತ್ತೊಂದು ಪ್ರಾಜೆಕ್ಟ್‌ನಲ್ಲಿ ಸುರಿಯುವಿಕೆ, ಅನಗತ್ಯ ವಿಳಂಬ ಇತ್ಯಾದಿ ಗಳಿಂದಾಗಿ ವೆಚ್ಚವು ಹೆಚ್ಚಾಗಿ ನಷ್ಟದ ಭೀತಿಯಿಂದ ಅವರು ನಿರ್ಮಾಣವನ್ನು ಸ್ಥಗಿತಗೊಳಿಸುತ್ತಾರೆ. ಹೀಗಾಗಿ, ಮನೆ ಖರೀದಿಸಲು ದೊಡ್ಡು ಕೊಟ್ಟವರು ತಮ್ಮ ತಪ್ಪಿಲ್ಲದಿದ್ದರೂ ಬಿಲ್ಡರ್‌ಗಳ ತಪ್ಪಿನಿಂದಾಗಿ
ನಾನಾ ಸಂಕಷ್ಟ ಅನುಭವಿಸಬೇಕಾಗಿದೆ.
ಬಿಲ್ಡರ್‌ಗಳಿಗೆ ಅಂಕುಶ ಹಾಕಿ ಖರೀದಿದಾರರ ಹಿತ ಕಾಪಾಡಲೆಂದು ೨೦೧೬ರಲ್ಲಿ ‘ರೆರಾ’ ಕಾಯ್ದೆಯನ್ನು ಜಾರಿಗೆ ತರಲಾಯಿತು. ಆದರೆ ಇದರಿಂದ ನಿರೀಕ್ಷಿತ -ಲ ದೊರೆಯುತ್ತಿಲ್ಲದ ಕಾರಣ ಮೋದಿ ಸರಕಾರವು ೨೦೧೯ರಲ್ಲಿ ‘ಸ್ವಾಮಿಹ್’ (Special Window for Affordable and Medium Income Housing
SWAMIH) ಎಂಬ ಯೋಜನೆಯನ್ನು ರೂಪಿಸಿ ಜಾರಿಗೆ ತಂದಿತು. ಇದರಡಿ ಕೇಂದ್ರ ಹಣಕಾಸು ಸಚಿವಾಲಯವು ೨೫,೦೦೦ ಕೋಟಿ ರು. ಬಂಡವಾಳ ನಿಧಿಯನ್ನು ಸ್ಥಾಪಿಸಿದ್ದು, ಭಾರತೀಯ ಸ್ಟೇಟ್ ಬ್ಯಾಂಕ್ ಕ್ಯಾಪಿಟಲ್ ವೆಂಚರ್ಸ್ (SBICaps Ventures) ಈ ನಿಧಿಯ ನಿರ್ವಹಣೆ ಮಾಡುತ್ತದೆ. ನಿಂತುಹೋಗಿ ರುವ ಗೃಹನಿರ್ಮಾಣ ಪ್ರಾಜೆಕ್ಟ್‌ಗಳಿಗೆ ಈ ಯೋಜನೆಯಡಿ ಬಂಡವಾಳ ಹೂಡಿ ಪೂರ್ಣಗೊಳಿಸಲಾಗುತ್ತಿದೆ. ಯೋಜನೆಯ ಆಯ್ಕೆಯು ಬಂಡವಾಳ ಹೂಡಿದರೆ, ಹಾಕಿದ ಬಂಡವಾಳಕ್ಕೆ ಶೇ.೧೨ರಷ್ಟು ಆದಾಯ ದೊರೆಯುವ ಯೋಜನೆಗಳನ್ನು ಮಾತ್ರ ಆಯ್ಕೆಮಾಡಿಕೊಳ್ಳಲಾಗುತ್ತದೆ.
ಹೊಸದಾಗಿ ಆರಂಭೀಸುವ ಪ್ರಾಜೆಕ್ಟ್ ಗಳಿಗೆ ಹಣಸಹಾಯ ದೊರೆಯವುದಿಲ್ಲ. ಈ ನಿಧಿಯು ಅರ್ಧಕ್ಕೆ ನಿಂತ ಯೋಜನೆಗಳಿಗೆ ಮಾತ್ರ ಸೀಮಿತವಾಗಿದೆ. ಹಣ ಹಾಕಿ ಮನೆಗಾಗಿ ಮರದಾಡುತ್ತಿರುವ ಸಂತ್ರಸ್ತರಿಗಾಗಿ ಈ ಯೋಜನೆ ಕೆಲಸ ಮಾಡುತ್ತದೆ. ಮನೆಗಳ ನಿರ್ಮಾಣಕ್ಕೆ ಬಂಡವಾಳ ಹೂಡಿದ ಮೇಲೆ SBICaps Ventures ಅಂಥ ಯೋಜನೆಗಳನ್ನು ತನ್ನ ಹಿಡಿತಕ್ಕೆ ತೆಗೆದುಕೊಳ್ಳುತ್ತದೆ. ಒಮ್ಮೆ ಇವರು ಮಧ್ಯ ಪ್ರವೇಶಿಸಿದರೆಂದರೆ, ಮೂಲ ಬಿಲ್ಡರ್‌ನ ಪಾತ್ರ ಏನೂ ಇರುವುದಿಲ್ಲ. ಫ್ಲೈಟ್ ಖರೀದಿಗೆ ಹಣ ಕೊಟ್ಟವರು ‘ರೆರಾ’ ಅಥವಾ ನ್ಯಾಯಲಯದಲ್ಲಿ ಮೊಕದ್ದಮೆ ಹೂಡಿದ್ದರೆ ಅವನ್ನು ಹಿಂಪಡೆಯಬೇಕು. ನಿವೇಶನದ ಮಾಲೀಕತ್ವದ ಬಗ್ಗೆಯಾಗಲೀ, ಪರಿಸರ ಸಂಬಂಧ ಖಟ್ಲೆಯಾಗಲೀ, ಇತರೆ ಕಾನೂನು ತೊಡಕುಗಳಾಗಲೀ ಇದ್ದಲ್ಲಿ ಅಂಥ ಯೋಜನೆಗಳನ್ನು ಕೈಗೆತ್ತಿ ಕೊಳ್ಳುವುದಿಲ್ಲ.
ಫ್ಲೈಟ್ ಖರೀದಿ ದಾರರು ತಾವು ಬಾಕಿ ನೀಡಬೇಕಾದ ಹಣವನ್ನು SBICaps Ventures ಎಸ್ಕ್ರೊ ಖಾತೆಗೆ ಪಾವತಿಸಬೇಕು. ಕಳೆದ ೩ ವರ್ಷದಿಂದ ೧೨,೫೦೦ ಕೋಟಿ ರು. ಮೌಲ್ಯದ ೧೩೦ ಯೋಜನೆಗಳನ್ನು ಅನುಮೋದಿಸಲಾಗಿದೆ. ಈ ಯೋಜನೆಯಡಿ, ಅರ್ಧಕ್ಕೆ ನಿಂತ ಒಂದು ಪ್ರಾಜೆಕ್ಟ್ ಮೇಲೆ ಗರಿಷ್ಠ ೪೦೦ ಕೋಟಿ ರು. ಮಾತ್ರ ಬಂಡವಾಳ ಹೂಡಲಾಗುವುದು. ಈಗಾಗಲೇ ೨೦,೫೫೭ ಮನೆಗಳನ್ನು ಮುಗಿಸಿ ಕೊಡಲಾಗಿದೆ. ಒಟ್ಟು ೩೫,೦೦೦ ಕೋಟಿ ರು. ಹಣವು ನಿಂತಿದ್ದ ಯೋಜನೆಗಳಲ್ಲಿ ಸಿಲುಕಿದ್ದನ್ನು ಬಿಡಿಸಲಾಗಿದೆ. ಈ ಯೋಜನೆಯಲ್ಲಿ ಮುಂದಿನ ೩ ವರ್ಷದಲ್ಲಿ ೮೧,೦೦೦ ಮನೆಗಳನ್ನು ಮುಗಿಸುವ ಗುರಿ ಹೊಂದಲಾಗಿದೆ. ‘ಸ್ವಾಮಿಹ್’ ಯೋಜನೆಯಡಿ ಮೊದಲು ಕೈಗೊಂಡಿದ್ದು, ೨೦೧೬ರಿಂದ ನಿರ್ಮಾಣ ಸ್ಥಗಿತವಾಗಿದ್ದ ಮುಂಬಯಿ ಹೊರವಲಯದ ರಿವಾಲಿ ಪಾರ್ಕ್‌ನ ೭೦೮ ಮನೆಗಳ ಸಮುಚ್ಚಯದ ಯೋಜನೆ. ೨೦೨೦ರಲ್ಲಿ ಇದರ ನಿರ್ಮಾಣವು ಮುಗಿದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ವರ್ಚುವಲ್
ಕಾರ್ಯಕ್ರಮದಲ್ಲಿ, ಪೂರ್ಣ ಗೊಂಡ ಮನೆಯ ಮಾಲೀಕರಿಗೆ ಕೀ ನೀಡಿದರು.
೨೦೧೦ರಲ್ಲಿ ಬೆಂಗಳೂರಿನ ಕನಕಪುರ ರಸ್ತೆಯಲ್ಲಿ ಮಂತ್ರಿ ಸೆರನಿಟಿ ಹೆಸರಿನಲ್ಲಿ ೨,೫೦೦ಕ್ಕೂ ಹೆಚ್ಚು ಫ್ಲೈಟ್‌ಗಳ ನಿರ್ಮಾಣ ಯೋಜನೆಯನ್ನು ‘ಮಂತ್ರಿ ಡೆವಲಪರ್ಸ್’ ಆರಂಭಿಸಿದಾಗ, ಅವರ ಅಬ್ಬರದ ಪ್ರಚಾರದಿಂದ ಆಕರ್ಷಿತರಾದ ನೂರಾರು ಜನ ಸ್ವಂತ ಮನೆ ಹೊಂದುವ ಕನಸನ್ನು ಸಾಕಾರಗೊಳಿಸಿಕೊಳ್ಳಲು ಮುಂಗಡ ಹಣವನ್ನುಕೊಟ್ಟು ಫ್ಲೈಟ್ ಅನ್ನು ಕಾಯ್ದಿರಿಸಿದರು. ಮಂತ್ರಿ ಗ್ರೂಪ್ ಅನೇಕ ಸಮಸ್ಯೆಗಳ ಸುಳಿಯಲ್ಲಿ ಸಿಲುಕಿದ ಪರಿಣಾಮ ಹಣದ ಕೊರತೆಯಿಂದಾಗಿ ಮನೆ ನಿರ್ಮಾಣವು ಸ್ಥಗಿತವಾಯಿತು. ಹಣಕೊಟ್ಟವರು ಮನೆಯೂ ಇಲ್ಲ ಹಣವೂ ಇಲ್ಲದೆ ಪರದಾಡುವಂತಾಯಿತು. ೨೦೧೮ರ ವರ್ಷ ಬಂದರೂ, ಸ್ಥಗಿತಗೊಂಡಿದ್ದ
ಯೋಜನೆ ಪುನರಾರಂಭವಾಗುವ ಯಾವುದೇ ಲಕ್ಷಣಗಳು ಕಾಣಲಿಲ್ಲ. ಆಗ ‘ಸ್ವಾಮಿಹ್’ ಯೋಜನೆಯ ಮಾಹಿತಿ ದೊರೆತು ಸಂತ್ರಸ್ತರು ಸಂಸದ ತೇಜಸ್ವಿ ಸೂರ್ಯರನ್ನುಭೇಟಿ ಮಾಡಿ ತಮ್ಮ ಸಂಕಷ್ಟವನ್ನು ವಿವರಿಸಿದರು.
ಅವರ ಪ್ರಯತ್ನದ ಫಲವಾಗಿ ‘ಸ್ವಾಮಿಹ್’ ಯೋಜನೆಯ ವ್ಯಾಪ್ತಿಗೆ ಮಂತ್ರಿ ಸೆರೆನಿಟಿಯು ಯಶಸ್ವಿಯಾಗಿ ಸೇರಿಕೊಳ್ಳುವಂತಾಯಿತು. ೨೦೨೦ರಲ್ಲಿ ಈ ಯೋಜನೆಯಡಿ ಮಂತ್ರಿ ಸೆರೆನಿಟಿಯ ಎಲ್ಲಾ ೧೫೬೦ ಫ್ಲೈಟ್‌ಗಳ ಪುನರ್ ನಿರ್ಮಾಣಕ್ಕೆ ಚಾಲನೆ ದೊರೆಯಿತು. ೨೦೨೨ರಲ್ಲಿ ನಿರ್ಮಾಣವು ಮುಗಿದು ಫ್ಲೈಟ್‌ಗ ಳನ್ನು, ಅದರ ಖರೀದಿಗೆ ಹಣ ನೀಡಿದ್ದವರಿಗೆ ಹಸ್ತಾಂತರಿಸಲಾಯಿತು. ಕಂಪನಿಯು ದಿವಾಳಿಯಾಗಿ ಶಾಶ್ವತವಾಗಿ ನಿಂತು ಹೋಗುತ್ತಿದ್ದ ಯೋಜನೆಗಳಿಗೆ ಸ್ವಾಮಿಹ್ ಯೋಜನೆಯು ಮರುಜೀವ ನೀಡುತ್ತಿದೆ. ಈ ಯೋಜನೆಗೆ ಸಾಲ ಕೊಟ್ಟಿದ್ದ ಬ್ಯಾಂಕು ಮತ್ತು ಬಂಡವಾಳ ಹೂಡಿದವರ ಹಣವು ವಾಪಸ್ ಸಿಗುವಂತಾಗಿದೆ. ಒಂದು ಅಂದಾಜಿನ ಪ್ರಕಾರ ದೇಶದಲ್ಲಿ ಈ ರೀತಿ ಸ್ಥಗಿತವಾಗಿರುವ ಗೃಹ ನಿರ್ಮಾಣ ಯೋಜನೆಯಲ್ಲಿ ೪,೪೮,೦೦೦ ಕೋಟಿ ರು. ಹಣ ಸಿಕ್ಕಿ ಹಾಕಿಕೊಂಡಿದೆ. ಇದು ದೇಶದ ಜಿಡಿಪಿಯ ಶೇ. ೩ರಷ್ಟು ಎಂದು ಅಂದಾಜಿಸಲಾಗಿದೆ.
ಮಧ್ಯಮ ವರ್ಗದ ಜನರು ಸ್ವಂತ ಸೂರನ್ನು ಹೊಂದಲು ಗೃಹಸಾಲ ಪಡೆದು ಬಿಲ್ಡರ್‌ಗಳನ್ನು ನಂಬಿ ಹಣ ಹೂಡುತ್ತಾರೆ. ಮನೆ ನಿರ್ಮಾಣ ಮುಗಿಸುವಷ್ಟರಲ್ಲಿ
ಬಹುತೇಕರು ಪೂರ್ತಿ ಮೊತ್ತವನ್ನು ನೀಡಿರುತ್ತಾರೆ. ಬಿಲ್ಡರ್ ನಿರ್ಮಾಣವನ್ನು ತಡ ಮಾಡಿದರೆ ಪಡೆದ ಸಾಲಕ್ಕೆ ತಿಂಗಳ ಕಂತು ಪಾವತಿಯು ಆರಂಭವಾಗುತ್ತದೆ. ಬರುವ ಸಂಬಳದಲ್ಲಿ ಇಎಂಐ ಕಟ್ಟಬೇಕಾದ ಮತ್ತು ಹಾಲಿ ಇರುವ ಮನೆಗೆ ಬಾಡಿಗೆಯನ್ನು ತೆರಬೇಕಾದ ಇಕ್ಕಟ್ಟಿನ ಪರಿಸ್ಥಿತಿ ಯನ್ನು ಸಾವಿರಾರು ಜನರು ಇಂದಿಗೂ ಅನುಭವಿಸುತ್ತಿದ್ದಾರೆ.
ಮೋದಿ ಸರಕಾರದ ದೂರದರ್ಶಿತ್ವದ ಕಾರಣ ಸಹಸ್ರಾರು ಮಧ್ಯಮ ವರ್ಗದ ಕುಟುಂಬಗಳಲ್ಲಿ ನೆಮ್ಮದಿಯ ನಗುವನ್ನು ಮತ್ತೆ ಕಾಣುವಂತಾಗಿದೆ. ಮನೆ
ದೊರೆಯುವುದೇ ಅನುಮಾನವಾಗಿ ಮುಂದೆ ದಾರಿ ಕಾಣದಂಥ ಸ್ಥಿತಿಯಲ್ಲಿದ್ದವರಿಗೆ ‘ಸ್ವಾಮಿಹ್’ ಯೋಜನೆಯ ಮೂಲಕ ಮನೆಯು ದೊರೆತಾಗ ಆಗುವ ಸಂತೋಷವನ್ನು ವರ್ಣಿಸಲು ಸಾಧ್ಯವಿಲ್ಲ. ‘ಸ್ವಾಮಿಹ್’ ನಿಧಿಯಿಂದ ನೀಡುವ ಹಣವು ಅರ್ಧಕ್ಕೆ ನಿಂತ ಪ್ರಾಜೆಕ್ಟ್ ಗಳನ್ನು ಮುಗಿಸಿ ಮನೆ ಮಾಲೀಕರಿಗೆ ಮನೆ ದೊರೆಯುವಂತೆ ಮಾಡಲು ಹೂಡುವ ಬಂಡವಾಳವೇ ಹೊರತು, ಅದು ಸಹಾಯಧನವಾಗಲೀ ಸಬ್ಸಿಡಿಯಾಗಲೀ ಬಿಲ್ಡರ್ ಗಳಿಗೆ ನೀಡುವ ಸಾಲವಾಗಲೀ ಅಲ್ಲ.
ಮೋದಿ ಸರಕಾರದ ಅವಧಿಯಲ್ಲಿ ಅನೇಕ ಜಟಿಲ ಸಮಸ್ಯೆಗಳಿಗೆ ಪರಿಹಾರ ದೊರೆತಿದೆ.
ಆದರೆ ಸ್ವಾಮಿಹ್ ಯೋಜನೆಯಿಂದ ದೊರೆಯುತ್ತಿರುವ ಪರಿಹಾರಕ್ಕೆ ಸಮನಾದದ್ದು ಯಾವುದೂ ಇಲ್ಲ ಎಂದು ಹೇಳಬಹುದು. ಜನರ ಭಾವನೆಗೆ ಸ್ಪಂದಿಸುವುದು ಉತ್ತಮ ಆಡಳಿತದ ಲಕ್ಷಣ. ಆ ನಿಟ್ಟಿನಲ್ಲಿ ಮೋದಿ ಸರಕಾರವು ಮೊದಲ ಶ್ರೇಣಿಯಲ್ಲಿ ತೇರ್ಗಡೆಯಾಗಿದೆ.