Saturday, 23rd November 2024

ಗೆಸ್ಟ್ ಅಲ್ಲ, ಘೋಸ್ಟ್ ಅಪಿಯರೆನ್ಸ್

ತುಂಟರಗಾಳಿ

ಸಿನಿಗನ್ನಡ

ಸದ್ಯಕ್ಕೆ ಸ್ಯಾಂಡಲ್‌ವುಡ್‌ನಲ್ಲಿ ಅತಿ ಹೆಚ್ಚು ಟಾಕ್ ಆಗ್ತಾ ಇರೋ ವಿಷ್ಯ ಯಾವುದು ಅಂದ್ರೆ ಈಗ ಅದಕ್ಕೆ ಚಿಕ್ಕ ಮಗು ಕೂಡಾ ಸರಿಯಾಗಿ ಉತ್ತರ ಕೊಡುತ್ತೆ. ಅದು ‘ಜೈಲರ್’ ಸಿನಿಮಾದಲ್ಲಿನ ಶಿವರಾಜ್ ಕುಮಾರ್ ಅವರ ಗೆಸ್ಟ್ ಅಪಿಯರೆನ್ಸ್. ಅದು ಕಟ್ಸ್ ಇರೋ ಅಪಿಯರೆನ್ಸ್ ಕೂಡಾ. ಇದು ಸ್ಯಾಂಡಲ್ ವುಡ್ ವಿಷಯ ಅಲ್ಲದಿದ್ರೂ ಈ ವಿಚಾರದ ಗಂಧ ಮಾತ್ರ ಗಾಳಿಯಲ್ಲಿ ಥೇಟ್ ಸ್ಯಾಂಡಲ್‌ವುಡ್‌ನಂತೇ ಥಿಯೇಟರಿಂದ ಥಿಯೇಟರ್‌ಗೆ ಹರಡುತ್ತಿದೆ. ಅದಕ್ಕೆ ಕಾರಣ ಜೈಲರ್ ಚಿತ್ರದ ತಮ್ಮ ಪಾತ್ರದಲ್ಲಿ ಒಂಚೂರೂ ಹಾರಾಡದೆ, ಸೈಲೆಂಟ್ ಆಗಿಯೇ ಎಲ್ಲರನ್ನೂ ಇಂಪ್ರೆಸ್ ಮಾಡಿರೋ ಶಿವಣ್ಣ ಅವರ ಅಭಿನಯ.

ಇದನ್ನು ನೋಡಿ ನಮ್ಮ ಕನ್ನಡದ ನಿರ್ದೇಶಕರು ಶಿವಣ್ಣ ಅವರನ್ನ ಹೇಗೆ ಬಳಸಿಕೊಳ್ಳಬೇಕು ಅನ್ನೋದನ್ನ ಕಲಿಬೇಕು ಅನ್ನೋ ಥರ ಅತಿರೇಕದ ಮಾತುಗಳೂ ಈಗ ಕೇಳಿಬರುತ್ತಿವೆ. ಅದು ಸಂಪೂರ್ಣ ನಿಜವಂತೂ ಖಂಡಿತಾ ಅಲ್ಲ. ಕನ್ನಡದಲ್ಲಿ ಅನೇಕ ನಿರ್ದೇಶಕರು ಶಿವಣ್ಣ ಅವರ ಕೆರಿಯರ್‌ಗೆ ಟ್ವಿಸ್ಟ್ ಕೊಟ್ಟಿರೋದು ಎಲ್ಲರಿಗೂ ಗೊತ್ತಿರೋ ಸಂಗತಿ. ಈಗ ಮುಂಬರುವ ‘ಘೋಸ್ಟ್’ ಚಿತ್ರದಲ್ಲೂ ಅದೇ ಲಕ್ಷಣ ಕಾಣುತ್ತಿದೆ. ಶಿವಣ್ಣ ಅವರನ್ನು ಮಾಸ್ ಪಾತ್ರದಲ್ಲಿ ನೋಡಲು ಇಷ್ಟಪಡೋ ಅಭಿಮಾನಿಗಳಿಗೆ ಘೋಸ್ಟ್ ರಿಯಲ್ ಟ್ರೀಟ್‌ನಂತೆ ಭಾಸವಾಗುತ್ತಿದೆ.

ಅದರಲ್ಲೂ ಕನ್ನಡ, ತೆಲುಗು, ತಮಿಳು ಮೂರೂ ಭಾಷೆಗಳಲ್ಲಿ ಶಿವಣ್ಣ ತಾವೇ ಡಬ್ ಮಾಡಿಬಿಟ್ಟಿರುವ ಘೋಸ್ಟ್ ಚಿತ್ರದ ಟ್ರೈಲರ್‌ನಲ್ಲಿನ ಡೈಲಾಗ್ ನೋಡಿದ್ರೆ, ಎಲ್ಲರಿಗೂ ಅರವತ್ತರಲ್ಲಿ ಅರಳು ಮರುಳು ಆದ್ರೆ, ಶಿವಣ್ಣ ಮಾತ್ರ ಅರವತ್ತರಲ್ಲೂ ಅರಳುತ್ತಿದ್ದಾರೆ, ಮತ್ತೆ ಮತ್ತೆ ಪ್ರೇಕ್ಷಕರನ್ನು, ಅಭಿಮಾನಿಗಳನ್ನು ಮರುಳು
ಮಾಡುತ್ತಿದ್ದಾರೆ ಅನ್ನೋದಂತೂ, ಅವರದ್ದೇ ಮಾತಿನಲ್ಲಿ ಹೇಳೋದಾದ್ರೆ, ‘೧೦೦ ಪಸೆಂಟ್’ ಸತ್ಯ.

ಲೂಸ್ ಟಾಕ್

ಏನ್ ತಲೈವಾ ಅವ್ರೇ. ಜೈಲರ್ ಸಿನಿಮಾದಲ್ಲಿ ಎಲ್ಲರೂ ಶಿವಣ್ಣನ ಬಗ್ಗೆ ಅಷ್ಟೊಂದ್ ಮಾತಾಡ್ತಾ ಇದ್ದಾರೆ?
– ಹೌದು ನಿಜ. ಹೀರೋ ನಾನು. ಆದ್ರೆ ಎಲ್ಲ ಅಟೆನ್ಷನ್ ಶಿವಣ್ಣನಿಗೆ ಸಿಕ್ತಾ ಇರೋದ್ ನೋಡಿ ನಂಗೆ ಪೆನ್ಷನ್ ಸಿಗೋ ಟೈಮಾಯ್ತಾ ಅಂತ ಟೆನ್ಷನ್ ಆಗ್ತಿದೆ.

ಹಂಗೆಲ್ಲ ಏನಿಲ್ಲಬಿಡಿ, ಈ ನಿಮ್ಮ ಡೈರೆಕ್ಟರ್ ನೆಲ್ಸನ್ ಈ ಸಿನಿಮಾ ಸಕ್ಸಸ್‌ನಿಂದ ಆಕಾಶದಲ್ಲಿ ಹಾರಾಡ್ತಾ ಇದ್ದಾರಂತೆ?
– ಅಯ್ಯೋ, ಅವರು ಅಂಥ ಮನುಷ್ಯ ಅಲ್ಲ. ಎಷ್ಟೇ ಮೇಲೆ ಹೋದ್ರೂ ಅವರ ಕಾಲು ನೆಲದ ಮೇಲೇ ಇರುತ್ತೆ. ಅವರ ಹೆಸರೇ ನೆಲ್-ಸನ್ ಅಲ್ವಾ. ಅಪ್ಪಟ
ಮಣ್ಣಿನ ಮಗ.

ಪಾಪ ಅವರ ಲಾಸ್ಟ್ ಸಿನಿಮಾ ಫ್ಲಾಪ್ ಆದ್ರೂ ಈಗ ನಿಮಗೆ ಹಿಟ್ ಕೊಟ್ಟಿದ್ದಾರೆ ಅಲ್ವಾ?
– ಹೌದೌದು. ನಾಲ್ಕು ಜನ ನೋಡಿ ಹೊಗಳುವಂಥ ಸಿನಿಮಾ ಕೊಟ್ಟಿದ್ದಾರೆ. ಉಗುಳುವಂಥ ಸಿನಿಮಾ ಕೊಟ್ಟಿದ್ರೆ, ನಾನು ತಲೈವಾ ಅಲ್ಲ, ಸಲೈವಾ
ಅನ್ನಿಸಿಕೊಳ್ಳಬೇಕಿತ್ತು.

ಸರಿ, ಜೈಲರ್ ಸಿನಿಮಾದಲ್ಲಿ ಶಿವಣ್ಣನ ಅಭಿನಯದ ಬಗ್ಗೆ ನಿಮ್ಮ ವೈಯಕ್ತಿಕ ಅನಿಸಿಕೆ ಏನು?
– ನಾನು ಒಂದ್ ಸಲ ಹೇಳಿದ್ರೆ ಅದು ನೂರ್ ಸಲ ಹೇಳಿದಂಗೆ ಅಂತಾರೆ ಜನ. ಆದ್ರೆ ಶಿವಣ್ಣ ಏನೂ ಹೇಳದೇನೇ ನೂರ್ ಸಲ ಹೇಳಿದಂಗೆ ಅನ್ನೋ ಥರ ಕಣ್ಣಲ್ಲೇ ಆಕ್ಟ್ ಮಾಡಿದ್ದಾರೆ. ಎಷ್ಟೇ ಆದ್ರೂ ಗಾಜನೂರು ಗಂಡು. ಜತೆಗೆ ಯಾವಾಗ್ಲೂ ಮಾತಾಡುವಾಗ ‘೧೦೦ %, ೧೦೦%’ ಅಂತ ಬೇರೆ ಅಂತಿರ್ತಾರೆ.

ಸರಿ, ಕೊನೆಯದಾಗಿ ಈ ಸಿನಿಮಾದ ಶಿವಣ್ಣನ ಗೆಸ್ಟ್ ಅಪಿಯರೆನ್ಸ್ ನೋಡಿ ನಿಮ್ಮ ಅಭಿಮಾನಿಗಳ ರಿಯಾಕ್ಷನ್ ಏನಿತ್ತು?
– ರೀ, ಅದನ್ನ ಯಾರಾದ್ರೂ ಗೆಸ್ಟ್ ಅಪಿಯರೆನ್ಸ್ ಅಂತಾರೇನ್ರೀ, ಗೆಸ್ಟ್ ಅಲ್ಲ, ಅದು ಘೋಸ್ಟ್ ಅಪಿಯರೆನ್ಸ್..

(ಕಾಲ್ಪನಿಕ ಸಂದರ್ಶನ)

ನೆಟ್ ಪಿಕ್ಸ್ 
ಇಂಡಿಯಾ ಪಾಕಿಸ್ತಾನದ ಮಧ್ಯೆ ಯುದ್ಧ ನಡೆದು ಕದನವಿರಾಮ ಘೋಷಣೆ ಮಾಡಲಾಗಿತ್ತು. ಆದರೆ ಎರಡೂ ಕಡೆಯ ಸೈನಿಕರು ಮತ್ತು ಸೇನಾ ಮುಖ್ಯಸ್ಥರು
ಗಡಿಯಲ್ಲಿ ಬೀಡುಬಿಟ್ಟು ಎಚ್ಚರಿಕೆಯಿಂದ ಕಾಯುತ್ತಿದ್ದರು. ಅಫಿಷಿಯಲ್ ಆಗಿ ಕದನ ಆಗುತ್ತಿರಲಿಲ್ಲವಾದರೂ ಆಗಾಗ ಸಮಯ ಸಿಕ್ಕರೆ ಕದನದ ನಡುವೆ ಛಾನ್ಸ್ ಸಿಕ್ಕಾಗಲೆಲ್ಲ, ಸೈಕಲ್ ಗ್ಯಾಪ್‌ನಲ್ಲಿ ಕರಾಮತ್ತು ತೋರಿಸಲು ಎರಡೂ ಕಡೆಯವರು ಸಿದ್ಧವಾಗಿದ್ದರು.

ಭಾರತೀಯ ಸೇನೆಯ ಮುಖ್ಯಸ್ಥ ಖೇಮು ತನ್ನ ಸೈನಿಕರೊಂದಿಗೆ ಗಡಿಭಾಗದಲ್ಲಿ ಸಣ್ಣ ಅಡಗುದಾಣದ ಹಿಂದೆ ಕೂತಿದ್ದ. ಆ ಕಡೆ ಪಾಕಿಸ್ತಾನದ ಸೇನಾಮುಖ್ಯಸ್ಥ ಅಫ್ಜಲ್ ಖಾನ್ ಕೂಡ ಅದೇ ರೀತಿ ಭಾರತೀಯ ಸೇನೆಗೆ ಕಾಣದಂತೆ ತನ್ನ ಸಂಗಡಿಗರೊಂದಿಗೆ ಕೂತಿದ್ದ. ಬಹಳ ಹೊತ್ತು ಎರಡೂ ಕಡೆ ಸದ್ದೇ ಇರಲಿಲ್ಲ. ಎರಡೂ ತಂಡಗಳಿಗೂ ಆ ಕಡೆ ಇರುವವರ ಬಗ್ಗೆ ಮಾಹಿತಿ ಇತ್ತು. ಮಧ್ಯರಾತ್ರಿಯ ಹೊತ್ತಲ್ಲಿ ಖೇಮು ಇದ್ದಕ್ಕಿದ್ದಂತೆ ‘ಮನ್ಸೂರ್ ಖಾನ್’ ಅಂತ ಕೂಗಿದ. ಈ ದನಿ ಕೇಳಿ ಆ ಕಡೆಯಿಂದ ಮನ್ಸೂರ್ ಖಾನ್ ‘ಏನು?’ ಅಂತ ಎದ್ದು ನಿಂತ. ಖೇಮು ಅವನ ತಲೆಗೆ ಗುರಿ ಇಟ್ಟು ಗುಂಡು ಹಾರಿಸಿ ಕೊಂದ.

ಸ್ವಲ್ಪ ಹೊತ್ತು ನಿಶ್ಯಬ್ದ. ನಂತರ ಖೇಮು, ‘ಅಬ್ದುಲ್ ರಜಾಕ್’ ಅಂತ ಕೂಗಿದ. ಆ ಕಡೆಯಿಂದ ರಜಾಕ್ ‘ಏನು?’ ಅಂತ ಎದ್ದು ನಿಂತ. ಖೇಮು ಮತ್ತೆ ಗುಂಡು ಹಾರಿಸಿ
ಕೊಂದ. ಆ ಕಡೆ ಸೇನಾಮುಖ್ಯಸ್ಥ, ‘ನನ್ಮಕ್ಳ ನಿಮಗೇನ್ ತಲೆ ಕೆಟ್ಟಿದೆಯಾ, ಅವ್ನು ಅಟೆಂಡೆನ್ಸ್ ಹಾಕೋನ್ ಥರಾ ಹೆಸರು ಕೂಗಿದ್ರೆ, ಸ್ಟೂಡೆಂಟ್ಸ್ ಥರ ಎದ್ದು ನಿಲ್ತೀರಲ್ಲ’ ಅಂತ ಬೈದ. ಆಗ ಅವರಲ್ಲೊಬ್ಬ ಸೈನಿಕ, ‘ಸರ್, ನಾವೂ ಅದೇ ಟೆಕ್ನಿಕ್ ಯೂಸ್ ಮಾಡೋಣ’ ಅಂತ ಸಲಹೆ ಕೊಟ್ಟ. ಸರಿ ಅಂತ ಆ ಕಡೆ ಸೇನಾ ಮುಖ್ಯಸ್ಥ ಅಫ್ಜಲ್ ಖಾನ್, ‘ಖೇಮು’ ಎಂದು ಜೋರಾಗಿ ಕೂಗಿದ. ಈ ಕಡೆ ಖೇಮು ಏನೂ ಉತ್ತರಿಸದೆ ಸುಮ್ಮನೇ ಕುಳಿತಿದ್ದ. ೫ ನಿಮಿಷ ಆಯ್ತು. ನಮ್ಮ ಪ್ಲ್ಯಾನ್ ವರ್ಕ್ ಆಗಲಿಲ್ಲ ಅನ್ನೋ ಸಿಟ್ಟಲ್ಲಿ ಅಫ್ಜಲ್ ಖಾನ್ ಕೂತಿದ್ದ. ಆಗ ಖೇಮು ಎದ್ದು ‘ಯಾರಪ್ಪಾ ಅದು ನನ್ನ ಕರೆದಿದ್ದು’ ಅಂತ ಕೂಗಿದ. ಆಗ ಅಫ್ಜಲ್ ಖಾನ್, ‘ನಾನೇ ನಾನೇ’ ಅಂತ ಎದ್ದು ನಿಂತ. ಖೇಮು ನೇರ ಅವನ ತಲೆಗೆ ಗುಂಡು ಹಾರಿಸಿ ಕೂತ್ಕೊಂಡ.

ಲೈನ್ ಮ್ಯಾನ್
ಆರ್ಟಿಫಿಶಿಯಲ್ ಪದದ ವಿರುದ್ಧ ಪದ ಯಾವುದು?
– ಹಾರ್ಟಿಫಿಶಿಯಲ್

ಫೋರ್ಜರಿ ಮಾಡಿ ಸಿಕ್ಕಿಬಿದ್ರೆ ಅದು
– ‘ಸಹಿ’ ಸುದ್ದಿ

ನೀವು ಫೋರ್ಜರಿ ಮಾಡಿಲ್ಲ ಅಂತ ಪ್ರೂವ್ ಮಾಡೋದು
– ‘ರುಜು’ವಾತು

ಅಪ್ಪ ಎಲ್ಲಾ ಆಸ್ತಿ ನನ್ನ ಹೆಸರಿಗೇ ಬರೆಯಲಿ’ ಅಂತ ಆಸೆಪಡೋದು
– ‘ಸಹಿ’ತಾಸಕ್ತಿ

ಸಮಯಕ್ಕೆ ತಕ್ಕಂತೆ ಕಾಂಗ್ರೆಸ್ -ಬಿಜೆಪಿ ಇಬ್ಬರ ಕಡೆಗೂ ಪ್ರೀತಿ ತೋರಿಸೋ ಕುಮಾರಸ್ವಾಮಿ ಅವರಿಗೊಂದು ಬಿರುದು 
– ಕಮಲಾ-ಕರ

ಲೇಟೆಸ್ಟ್ ಟ್ರೆಂಡ್
– ಕೆಲವರು ‘ಐ ಸ್ಟಾಂಡ್ ವಿತ್’ ಅನ್ನೋಕೆ ‘ತುದಿಗಾಲಲ್ಲೇ ನಿಂತಿರ್ತಾರೆ’

ಮಾತೆತ್ತಿದರೆ, ‘ಐ ಸ್ಟ್ಯಾಂಡ್ ವಿತ್’ ಅನ್ನೋರದ್ದು
– ‘ಸ್ಟ್ಯಾಂಡ್’ ಅಪ್ ಕಾಮಿಡಿ

‘ಐ ಸ್ಟ್ಯಾಂಡ್ ವಿತ್‘ ಅನ್ನೋದು ಎಲ್ಲ ಟೈಮಲ್ಲೂ ಸಪೋರ್ಟ್ ಮಾಡಿದ ಹಾಗಾಗಲ್ಲ

– ಯಾಕಂದ್ರೆ, ಯಾರಾದ್ರೂ ಎಲೆಕ್ಷನ್ನಿಗೆ ನಿಂತಾಗ ‘ಐ ಸ್ಟಾಂಡ್ ವಿತ್’ ಅಂದ್ರೆ, ನಾನು ಅವರ ವಿರುದ್ಧ ಸ್ಪರ್ಧೆ ಮಾಡ್ತಾ ಇದ್ದೀನಿ ಅಂತ ಅರ್ಥ.

‘ಮತ’ದಾರರು ರಾಜಕಾರಣಿಗಳನ್ನ ಹೇಗೆ ಹೆದರಿಸಬಹುದು?
– ನೀನ್ ಹಿಂಗೇ ಆಡ್ತಾ ಇದ್ರೆ, ನನ್ ಕೈ ಮಾತಾಡಲ್ಲ, ನನ್ ‘ಬೆರಳು’ ಮಾತಾಡುತ್ತೆ ಅಷ್ಟೇ.

ವಾಟ್ಸಾಪ್‌ನಲ್ಲಿ ಒಂದ್ ಟಿಕ್ ಬಂದ್ರೆ ಹಂಗೆ, ಎರಡು, ಮೂರು ಟಿಕ್ ಬಂದ್ರೆ ಹಿಂಗೆ ಅಂತ ಬರ್ತಾ ಇರೋ ಫೇಕ್ ಮೆಸೇಜ್ ಹಿಂದಿರೋದು
– ಸೋಷಿಯಲ್ ಮೀಡಿಯಾ ಪೊಲಿ’ಟಿಕ್ಸ್’