ಭಾಸ್ಕರಾಯಣ
ಎಂ.ಕೆ.ಭಾಸ್ಕರ ರಾವ್
ದೇಶದಲ್ಲಿ ಸ್ವಾತಂತ್ರ್ಯೋತ್ತರ ಪ್ರಥಮ ಭಾರತೀಯ ಸರಕಾರ ಅಧಿಕಾರಕ್ಕೆ ಬಂದಾಗಲೇ ಪ್ರಧಾನಿ ಪಟ್ಟದೊಂದಿಗೆ ಉಪಪ್ರಧಾನಿ ಪಟ್ಟವೂ ಅಸ್ತಿತ್ವ ಪಡೆಯಿತು. ಈ ಸಲಹೆ ಮುಂದಿಟ್ಟ ಮಹಾನುಭಾವ ಯಾರೋ?! ಜವಾಹರಲಾಲ್ ನೆಹರು ಮತ್ತು ಸರ್ದಾರ್ ವಲ್ಲಭಭಾಯಿ ಪಟೇಲರು ಕ್ರಮವಾಗಿ ಈ ಹುದ್ದೆಗಳನ್ನು ಅಲಂಕರಿಸಿದರು.
ಡಾ.ಬಿ.ಆರ್. ಅಂಬೇಡ್ಕರ್ ನೇತೃತ್ವದಲ್ಲಿ ರಚನೆಯಾಗಿ ಭಾರತ ಒಪ್ಪಿಕೊಂಡಿರುವ ಸಂವಿಧಾನದ ವಿಚಾರದಲ್ಲಿ ನಡೆದಷ್ಟು, ಈ ಕ್ಷಣದಲ್ಲೂ ಮಂಥನ ವಾಗುತ್ತಿರುವಷ್ಟು ವಾದ, ಪ್ರತಿವಾದ ಜತೆಗೆ ಒಂದಿಷ್ಟು ಪ್ರಮಾಣದ ವಿತಂಡವಾದ ಅಷ್ಟಿಷ್ಟಲ್ಲ. ಈ ಚರ್ಚೆ ನಮ್ಮ ಸಂವಿಧಾನದ ಜೀವಂತಿಕೆಗೆ ಪರಮ ಸಾಕ್ಷಿ. ಸಂವಿಧಾನ ರಚನೆ ಹಂತದಲ್ಲಿ ಸಂವಿಧಾನಕರ್ತರು ಊಹಿಸಿರದ ಅನೇಕ ಬದಲಾವಣೆಗಳು ಏಳೂವರೆ ದಶಕಾವಽಯಲ್ಲಿ ಘಟಿಸಿವೆ. ಅದಕ್ಕೆ ಪರಿಹಾರ ಹುಡುಕುವ ದಿಸೆಯಲ್ಲಿ ಕಾಲದಿಂದ ಕಾಲಕ್ಕೆ ತಿದ್ದುಪಡಿ ಮೂಲಕ ಸಂವಿಧಾನವನ್ನು ಇನ್ನಷ್ಟು ಜನಪರಗೊಳಿಸುವ ಯತ್ನ ನಡೆದಿದೆ.
ಅದೇ ಕಾಲಕ್ಕೆ ಆಳುವ ಪಕ್ಷಗಳು ಸಂವಿಧಾನದ ಆಶಯಗಳನ್ನು ದುರುಪಯೋಗಪಡಿಸಿಕೊಂಡ ಉದಾಹರಣೆ ಗಳೂ ನಮ್ಮ ಮುಂದಿವೆ. ಸಂವಿಧಾನವನ್ನು ಪಾಲಿಸಿ ಅದರಂತೆ ನಡೆದು ಕೊಳ್ಳುವುದು ಒಂದಾದರೆ, ಸಂವಿಧಾನದಲ್ಲಿ ಉಲ್ಲೇಖವೇ ಆಗಿರದ ಹುದ್ದೆಗಾಗಿ ಕಚ್ಚಾಡುವುದು ಇನ್ನೊಂದು. ಎರಡನೆಯ ಮಾತಿಗೆ ಕರ್ನಾಟಕ ದಲ್ಲಿ ಉಪಮುಖ್ಯಮಂತ್ರಿ ಹುದ್ದೆಗೆ ನಡೆದಿರುವ ಪೈಪೋಟಿ ಒಂದು ನಿದರ್ಶನ. ಸಂವಿಧಾನದಲ್ಲಿ ಪ್ರಧಾನ ಮಂತ್ರಿ, ಮುಖ್ಯಮಂತ್ರಿ ಸ್ಥಾನದ ಬಗ್ಗೆ ಮಾತ್ರವೇ ಉಲ್ಲೇಖವಿದೆ. ಉಪಪ್ರಧಾನಿ ಇಲ್ಲವೇ ಉಪ ಮುಖ್ಯಮಂತ್ರಿ ಹುದ್ದೆಯ ಪ್ರಸ್ತಾಪವಿಲ್ಲ.
ಆದರೂ ಅಧಿಕಾರದ ಅಮಲನ್ನು ನೆತ್ತಿಗೆ ಏರಿಸಿ ಕೊಂಡಿರುವ ರಾಜಕಾರಣಿಗಳಲ್ಲಿ ಸಂವಿಧಾನ ಹೇಳದಿರುವುದನ್ನು ಹೇರುವ ಪ್ರವೃತ್ತಿ ಢಾಳಾಗಿದೆ. ಬಹುತೇಕ ಸಂದರ್ಭಗಳಲ್ಲಿ ಆಡಳಿತ ಪಕ್ಷದೊಳಗೆ ಭುಗಿ ಲೇಳುವ ಭಿನ್ನಮತವನ್ನು ನಿಯಂತ್ರಣಕ್ಕೆ ತರಲು ಸಂವಿಧಾನೇತರ ಹುದ್ದೆ ಸೃಷ್ಟಿಗೆ ಮುಂದಾಗುವ ಪರಿಪಾಠವೂ ಸಾಮಾನ್ಯವಾಗಿದೆ. ಇಂಥ ಸಂವಿಧಾನೇತರ ಹುದ್ದೆ ಉಪಪ್ರಧಾನಿ ಮತ್ತು ಉಪಮುಖ್ಯಮಂತ್ರಿಯದು.
ದೇಶದಲ್ಲಿ ಸ್ವಾತಂತ್ರ್ಯೋತ್ತರ ಪ್ರಥಮ ಭಾರತೀಯ ಸರಕಾರ ಅಽಕಾರಕ್ಕೆ ಬಂದಾಗಲೇ ಪ್ರಧಾನಿ ಪಟ್ಟದೊಂದಿಗೆ ಉಪಪ್ರಧಾನಿ ಪಟ್ಟವೂ ಅಸ್ತಿತ್ವ ಪಡೆಯಿತು. ಈ ಸಲಹೆ ಮುಂದಿಟ್ಟ ಮಹಾನುಭಾವ ಯಾರೋ. ಜವಾಹರಲಾಲ್ ನೆಹರು ಮತ್ತು ಸರ್ದಾರ್ ವಲ್ಲಭಭಾಯಿ ಪಟೇಲರು ಕ್ರಮವಾಗಿ ಈ ಹುದ್ದೆಗಳನ್ನು ಅಲಂಕರಿಸಿ ದರು. ಪಟೇಲರ ನಿಧನಾನಂತರ ಬರೋಬ್ಬರಿ ೧೭ ವರ್ಷ ತಥಾಕಥಿತ ಉಪಪ್ರಧಾನಿ ಹುದ್ದೆ ತೆರವಾಗಿಯೇ ಇತ್ತು. ಇಂದಿರಾ ಗಾಂಧಿ ಪ್ರಧಾನಿಯಾದಾಗ ಮುರಾರ್ಜಿ ದೇಸಾಯಿ ಉಪಪ್ರಧಾನಿಯಾದರು. ನಂತರದ ದಿನ ಗಳಲ್ಲಿ ಚೌಧರಿ ಚರಣ್‌ಸಿಂಗ್, ಬಾಬು ಜಗಜೀವನ ರಾಂ, ಯಶವಂತರಾವ್ ಚೌಹಾಣ್, ಚೌಧರಿ
ದೇವೀಲಾಲ್ ಹಾಗೂ ಲಾಲ್‌ಕೃಷ್ಣ ಆಡ್ವಾಣಿ ಈ ಹುದ್ದೆ ಅನುಭವಿಸಿದರು.
೨೦೦೪ರಲ್ಲಿ ಅಧಿಕಾರಕ್ಕೆ ಬಂದ ಮನಮೋಹನ್ ಸಿಂಗ್, ನಂತರ ೨೦೧೪ರಲ್ಲಿ ಪ್ರಧಾನಿಯಾದ ನರೇಂದ್ರ ಮೋದಿ ತಲಾ ಹತ್ತು ವರ್ಷ ಉಪಪ್ರಧಾನಿ ಹುದ್ದೆಯ ಅಗತ್ಯವೇ ಇಲ್ಲದಂತೆ ಕಾರ್ಯ ನಿರ್ವಹಿಸಿದ್ದಾರೆ. ಡಿಪಿಎಂ ಹುದ್ದೆಗಾಗಿ ಈ ಇಬ್ಬರ ಮೇಲೆ ಒತ್ತಡ ಬರಲಿಲ್ಲ ಎನ್ನುವುದು ಗಮನಾರ್ಹ. ಸಂವಿಧಾನದಲ್ಲಿ ಉಲ್ಲೇಖವೇ ಇಲ್ಲದ ಹುದ್ದೆ ಯನ್ನು ಕಾರ್ಯಾಂಗ ಸೃಷ್ಟಿಸಬಹುದೆ? ಉಪ ಪ್ರಧಾನಿ ಅಥವಾ ಉಪಮುಖ್ಯಮಂತ್ರಿ ಸ್ಥಾನಗಳ ಉಲ್ಲೇಖ ಸಂವಿಧಾನದಲ್ಲಿ ಇಲ್ಲ ಎನ್ನುವುದು ನಿಜ;
ಆದರೆ, ಆ ಹುದ್ದೆಗಳು ಸಲ್ಲದು ಎಂಬ ನಿರ್ಬಂಧದ ಷರಾ ಕೂಡ ಸಂವಿಧಾನದಲ್ಲಿ ಇಲ್ಲ. ನಮ್ಮ ರಾಜಕಾರಣ ಅಪೇಕ್ಷಿಸಿರುವ ‘ರೋಗಿ ಬಯಸಿದ, ವೈದ್ಯ ಹೇಳಿದ’ ಕಾರ್ಯಕಾರಣ ಇದು.
ಉಪಪ್ರಧಾನಿ ಹುದ್ದೆ ಸೃಷ್ಟಿಸುವ ಅಗತ್ಯ ನೆಹರು ಅವರಿಗೆ ಯಾಕೆ ಬಂತು ಎನ್ನುವುದನ್ನು ಮನವರಿಕೆ ಮಾಡಿಕೊಂಡರೆ ಮುಂದಿನದೆಲ್ಲವೂ ಅರ್ಥವಾಗುತ್ತದೆ.
ಸ್ವಾತಂತ್ರ್ಯ ಬಂದ ಹೊಸದರಲ್ಲಿ ಪಟೇಲರೇ ಪ್ರಧಾನಿಯಾಗಬೇಕೆನ್ನುವುದು ಆಡಳಿತ ಪಕ್ಷದಲ್ಲಿ ಬಲವತ್ತರ ವಾದವಾಗಿತ್ತು. ಆದರೆ ಮಹಾತ್ಮ ಗಾಂಧಿಯವರ
ಅಪೇಕ್ಷೆಯಂತೆ ನೆಹರು ಪ್ರಧಾನಿಯಾದರು. ಮುಂದೆ ಏನೂ ಆಗಬಹುದೆಂಬ ಶಂಕೆಯಲ್ಲಿ ನೆಹರು ಸೃಷ್ಟಿಸಿದ ಹುದ್ದೆ ಉಪಪ್ರಧಾನಿ ಪಟ್ಟದ್ದು. ಮುಂದೆ ಅದೇ ಒಂದು ರೂಢಿಯಾಯಿತು.
ದೇವೀಲಾಲರು ಪ್ರಮಾಣ ವಚನ ಸ್ವೀಕರಿಸುವ ಹಂತದಲ್ಲಿ ‘ಉಪಪ್ರಧಾನಿಯಾಗಿ ಪ್ರಮಾಣ ಮಾಡುತ್ತೇನೆ’ ಎಂದಿದ್ದು ಆ ಕಾಲದಲ್ಲಿ ದೊಡ್ಡ ಚರ್ಚೆಗೆ ಕಾರಣ ವಾಗಿತ್ತು. ಪ್ರಧಾನಿಯ ಸ್ಥಾನ ಮಾತ್ರವೇ ಸಾಂವೈಧಾನಿಕವಾಗಿ ಗುರುತಿಸಿರುವ ಹುದ್ದೆ. ಉಳಿದವರೆಲ್ಲರೂ ಪ್ರಧಾನಿ ಸಲಹೆ ಮೇರೆಗೆ ರಾಷ್ಟ್ರಪತಿಯಿಂದ ನೇಮಕ ಗೊಂಡವರು ಎನ್ನುವುದು ಚರ್ಚೆಯ ಹೂರಣ. ಈ ಮಾತು ರಾಜ್ಯ ರಾಜ್ಯ ಗಳಲ್ಲಿ ಹುಟ್ಟಿಕೊಂಡಿರುವ ಉಪಮುಖ್ಯಮಂತ್ರಿ ಸ್ಥಾನಗಳಿಗೂ ಸಮಾನವಾಗಿ ಅನ್ವಯ.
ಪಶ್ಚಿಮ ಬಂಗಾಳ, ಒಡಿಶಾ, ತಮಿಳುನಾಡು, ರಾಜಸ್ಥಾನ, ತೆಲಂಗಾಣ, ಕೇರಳ, ತ್ರಿಪುರಾ, ಪಂಜಾಬ್, ಉತ್ತರಾಖಂಡ, ಪುದುಚೆರಿ, ಪಂಜಾಬ್, ಸಿಕ್ಕಿಂ ರಾಜ್ಯ/ಕೇಂದ್ರಾಡಳಿತ ಪ್ರದೇಶಗಳಲ್ಲಿ ಉಪ ಮುಖ್ಯಮಂತ್ರಿ ಹುದ್ದೆ ಇಲ್ಲ. ದೆಹಲಿ ‘ಆಪ್’ ಸರಕಾರದಲ್ಲಿ ಡಿಸಿಎಂ ಆಗಿದ್ದ ಮನೀಷ್ ಸಿಸೋಡಿಯಾ ಹಗರಣಗಳ ಸುಳಿಗೆ ಸಿಕ್ಕಿ ಪಟ್ಟ ಕಳೆದು ಕೊಂಡಿದ್ದಾರೆ. ಅಲ್ಲಿ ಇನ್ನೊಬ್ಬರನ್ನು ಆ ಹುದ್ದೆಗೆ ನೇಮಿಸಿಲ್ಲ. ಡಿಸಿಎಂ ಇಲ್ಲದ ರಾಜ್ಯಗಳ ಯಾದಿ ನೋಡಿದಿರಿ. ಆ ಹುದ್ದೆಯುಳ್ಳ ರಾಜ್ಯಗಳತ್ತ ದೃಷ್ಟಿ ಹಾಯಿಸೋಣ.
ಯಾವುದೇ ಒಂದು ರಾಜ್ಯ ಸಚಿವ ಸಂಪುಟದಲ್ಲಿ ಎಷ್ಟು ಜನ ಡಿಸಿಎಂ ಇರುತ್ತಾರೆ ಎನ್ನುವುದು ಕುತೂಹಲಕಾರಿ. ರಾಜ್ಯ ವಿಧಾನಸಭೆಯ ಸ್ಥಾನಬಲದ ಶೇ.೧೫ ಪ್ರಮಾಣ ಮೀರದಂತೆ ಮಂತ್ರಿಗಳನ್ನು ನೇಮಿಸಿಕೊಳ್ಳಲು ಅವಕಾಶವಿದೆ. ಈಗ ಕರ್ನಾಟಕ ವಿಧಾನಸಭೆಯಲ್ಲಿ ೨೨೪ ಶಾಸಕರಿದ್ದಾರೆ. ಅವರಲ್ಲಿ ಶೇ.೧೫ ಎಂದರೆ ೩೪ ಸಚಿವರು ಇರಬಹುದು. ಈ ಲೆಕ್ಕದಿಂದ ಸಿಎಂ ಹೊರಗೇ ಉಳಿಯುತ್ತಾರೆ. ಬೇರೆ ಬೇರೆ ರಾಜ್ಯಗಳಲ್ಲಿ ವಿಧಾನಸಭಾ ಶಾಸಕ ಬಲ ಆಧರಿಸಿ ಸಂಪುಟ ರಚನೆ ಯಾಗುತ್ತದೆ. ಆದರೆ ಒಂದು ರಾಜ್ಯದ ಸಚಿವ ಸಂಪುಟದಲ್ಲಿ ಎಷ್ಟು ಜನ ಡಿಸಿಎಂ ಇರಬೇಕು? ಸಂವಿಧಾನದಲ್ಲಿ ಈ ಹುದ್ದೆಯ ಪ್ರಸ್ತಾಪವೇ ಇಲ್ಲ ಎಂದ ಮೇಲೆ ಈ ಪ್ರಶ್ನೆ ಉದ್ಭವಿಸುವುದೇ ಇಲ್ಲ. ಸಂವಿಧಾನದ ಈ ಮೌನ ವೃತ್ತಿನಿರತ ರಾಜಕಾರಣಿಗಳಿಗೆ ವರದಾನ ಎನಿಸಿದೆ. ಬಿಹಾರ, ಕರ್ನಾಟಕ, ಚಂಡೀಗಢ, ಹರಿಯಾಣ, ಹಿಮಾಚಲ ಪ್ರದೇಶ, ಮಿಜೋರಾಂ, ಅರುಣಾಚಲ ಪ್ರದೇಶದಲ್ಲಿ ತಲಾ ಒಂದರಂತೆ ಡಿಸಿಎಂಗಳಿದ್ದಾರೆ. ಉತ್ತರ ಪ್ರದೇಶ, ನಾಗಾಲ್ಯಾಂಡ್, ಮೇಘಾಲಯ ರಾಜ್ಯಗಳಲ್ಲಿ ತಲಾ ಇಬ್ಬರಂತೆ ಡಿಸಿಎಂಗಳಿದ್ದಾರೆ.
ವೈಎಸ್‌ಆರ್ ಕಾಂಗ್ರೆಸ್ ಆಡಳಿತದಲ್ಲಿರುವ ಆಂಧ್ರ ಪ್ರದೇಶ ಮುಖ್ಯಮಂತ್ರಿ ಜಗನ್‌ಮೋಹನ್ ರೆಡ್ಡಿ ಐವರನ್ನು ಡಿಸಿಎಂ ಪಟ್ಟದಲ್ಲಿ ಕೂರಿಸಿದ್ದಾರೆ. ಗಾಬರಿ
ಯಾಗುವುದು ಬೇಡ, ಆ ರಾಜ್ಯದಲ್ಲಿ ಐವರು ಡಿಸಿಎಂ ಇರುವುದು ನಿಜ. ಇದು ಇತರ ಆನೇಕ ರಾಜ್ಯಗಳಲ್ಲಿ ಡಿಸಿಎಂ ಹುದ್ದೆಗೆ ಬೇಡಿಕೆ ಹೆಚ್ಚುತ್ತಿರುವುದರ ಒಳಗುಟ್ಟುಗಳಲ್ಲಿ ಒಂದು.ರಾಜ್ಯದಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿ. ಅವರ ಜತೆ ಡಿ.ಕೆ.ಶಿವಕುಮಾರ್ ಡಿಸಿಎಂ. ಪಕ್ಷ ಅಧಿಕಾರಕ್ಕೆ ಬಂದ ಬಳಿಕ ಯಾರು ಸಿಎಂ ಆಗಬೇಕೆಂಬ ಬಗ್ಗೆ ಕಾಂಗ್ರೆಸ್‌ನಲ್ಲಿ ನಡೆದ ವಾಗ್ಯುದ್ಧದ, ಶೀತಲ ಸಮರದ ನೆನಪು ಮಾಸಿಲ್ಲ. ಅಂತೂ ಇಂತೂ ಎಂಬಂತೆ ಈ ಇಬ್ಬರ ಮನವೊಲಿಸುವಲ್ಲಿ ಯಶಸ್ವಿ
ಯಾದ ಹೈಕಮಾಂಡ್, ಎರಡೂವರೆ ವರ್ಷದ ಬಳಿಕ ಡಿಕೆಶಿ ಅವರಿಗೆ ಸಿಎಂ ಹುದ್ದೆ ಪಟ್ಟಕಟ್ಟುವ ಮೂಗಿಗೆ ತುಪ್ಪ ಸವರುವ ಮಾತು ಕೊಟ್ಟಿದೆಯಂತೆ.
ಅಲ್ಲೀವರೆಗೆ ಏಕೈಕ ಡಿಸಿಎಂ ಆಗಿರುವುದಕ್ಕೆ ಡಿಕೆಶಿ ಒಪ್ಪಿಕೊಂಡಿದ್ದಾರಂತೆ. ಪಕ್ಷ ಅಽಕಾರಕ್ಕೆ ಬಂದು ಮೂರು ತಿಂಗಳು ಈಗಷ್ಟೇ ಕಳೆದಿದೆ. ಮಳೆ ಕೈಕೊಟ್ಟ
ಕಾರಣ ರಾಜ್ಯದ ೧೯೦ ತಾಲೂಕುಗಳು ಬರದಲ್ಲಿವೆ ಎನ್ನುವುದು ಸರಕಾರದ್ದೇ ಅಽಕೃತ ಮಾಹಿತಿ. ಬರ ನಿರ್ವಹಣೆ ಹೇಗೆ, ಕುಡಿಯುವ ನೀರಿಗೆ ಮಾಡ
ಬೇಕಿರುವ ಪರ್ಯಾಯ ಸಿದ್ಧತೆಗಳೇನು, ಜನ ಊರು ತೊರೆದು ಗುಳೇ ಹೋಗುವುದನ್ನು ತಡೆಯುವುದು ಹೇಗೆ ಎಂಬಿತ್ಯಾದಿ ಬಗ್ಗೆ ಆಡಳಿತ ಪಕ್ಷದಲ್ಲಿ,
ಸರಕಾರದಲ್ಲಿ ಅಗತ್ಯದ ಚರ್ಚೆ ನಡೆದಿಲ್ಲ. ಅಲ್ಲಿ ಈಗ ಇರುವ ಏಕೈಕ ಬೇಡಿಕೆ ಎಂದರೆ ಇನ್ನಷ್ಟು ಡಿಸಿಎಂ ಸ್ಥಾನ ಬೇಕು ಎನ್ನುವುದಷ್ಟೇ. ಯಾವ ಯಾವ ಜಾತಿ
ಶಾಸಕರನ್ನು ಆ ಸ್ಥಾನಕ್ಕೆ ತರಬೇಕೆಂಬ ಅಕ್ಷರಶಃ ತೌಡು ಕುಟ್ಟುವ ಕೆಲಸ ಅಲ್ಲಿ ಸಾಗಿದೆ.
ಕರ್ನಾಟಕದ ಆಡಳಿತ ಪಕ್ಷದಲ್ಲಿ ನಡೆದಿರುವ ಲಡಾಯಿ ಜನರಿಗೆ ವಾಕರಿಕೆ ಬರಿಸುತ್ತಿದೆ. ಕಾಂಗ್ರೆಸ್ ಗೂ ಬಿಜೆಪಿಗೂ ಎಳ್ಳು ಕಾಳಿನಷ್ಟೂ ವ್ಯತ್ಯಾಸವಿಲ್ಲ ಎಂಬ ತೀರ್ಮಾನದ ಹತ್ತಿರಕ್ಕೆ ಜನ ಬಂದಿದ್ದಾರೆ. ಅಗತ್ಯವೇ ಇಲ್ಲದ ಹುದ್ದೆಗೆ ಪೈಪೋಟಿ ಯಾಕೆ? ಬದ್ಧತೆಯಲ್ಲಿ ಮಾಡಬೇಕಿರುವ ಕೆಲಸಕ್ಕೆ ಈ ಖೊಟ್ಟಿ ಅಲಂಕಾರ ಬೇಕೇ? ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿ ಆಗಿದ್ದ ಸಮಯದಲ್ಲಿ ಉಪಮುಖ್ಯಮಂತ್ರಿ ಸ್ಥಾನಕ್ಕೆ ಬೇಡಿಕೆ ಬಂದಿತ್ತು, ಆದರೆ ಹೆಗಡೆ ಅದನ್ನು ತಿರಸ್ಕರಿಸಿದರು. ಆರೋಗ್ಯ ಸಂಬಂಽ ಚಿಕಿತ್ಸೆಗಾಗಿ ವಿದೇಶಕ್ಕೆ ಹೋಗುವ ಸನ್ನಿವೇಶ ಸೃಷ್ಟಿಯಾದಾಗ ಅವರು ಸಂಪುಟ ಸಭೆ ಅಧ್ಯಕ್ಷತೆ ವಹಿಸುವ ಅಧಿಕಾರ ವನ್ನು ಗೃಹಸಚಿವ ಬಿ.ರಾಚಯ್ಯನವರಿಗೆ ಒಪ್ಪಿಸಿ ಏಕಕಾಲಕ್ಕೆ ಎಚ್.ಡಿ.ದೇವೇಗೌಡರನ್ನೂ ಎಸ್.ಆರ್ .ಬೊಮ್ಮಾಯಿ ಅವರನ್ನೂ ಕೆರಳಿಸಿ, ಕೆಂಡಾಮಂಡಲ ರಾಗಿಸಿದ್ದರು. ಸಂವಿಧಾನದಲ್ಲಿ ಪ್ರಸ್ತಾಪವೇ ಇಲ್ಲದ ಹುದ್ದೆ ರಚನೆಗೆ ಹೆಗಡೆ ವಿರುದ್ಧವಾಗಿದ್ದರು.
ಈ ರಾಜ್ಯದಲ್ಲಿ ಮೊದಲ ಡಿಸಿಎಂ ಹುದ್ದೆ ಸೃಷ್ಟಿಯಾಗಿದ್ದು ವೀರಪ್ಪ ಮೊಯಿಲಿ ಮುಖ್ಯಮಂತ್ರಿ ಯಾಗಿದ್ದ (೧೯೯೨) ಅವಽಯಲ್ಲಿ. ಸಿಎಂ ಸ್ಥಾನಕ್ಕೆ ಪೈಪೋಟಿ ನಡೆಸಿದ್ದ ಎಸ್.ಎಂ. ಕೃಷ್ಣ ಡಿಸಿಎಂ ಆದರು. ಮುಂದೆ ಕೆಲವು ವರ್ಷ ನಂತರ ಅವರು ಸಿಎಂ ಕೂಡ ಆದರು. ದೇವೇಗೌಡರು ಪ್ರಧಾನಿ ಯಾದ ತರುವಾಯ ತೆರವಾದ ಸಿಎಂ ಸ್ಥಾನಕ್ಕೆ ಜೆ. ಎಚ್.ಪಟೇಲರು ಬಂದರು. ಅವರೊಂದಿಗೆ ಸಿದ್ದರಾಮಯ್ಯ ಡಿಸಿಎಂ ಆದರು. ಮುಂದೆ ಕಾಂಗ್ರೆಸ್ -ಜೆಡಿಎಸ್ ಸಮ್ಮಿಶ್ರ ಸರಕಾರ ಧರ್ಮಸಿಂಗ್ ನೇತೃತ್ವ ದಲ್ಲಿ ರಚನೆಯಾದಾಗ ಸಿದ್ದರಾಮಯ್ಯ ಎರಡನೇ ಬಾರಿಗೆ ಡಿಸಿಎಂ ಆದರು.
ಎರಡೆರಡು ಬಾರಿ ರಾಜ್ಯದ ಸಿಎಂ, ಡಿಸಿಎಂ ಆದುದು ಸಿದ್ದರಾಮಯ್ಯ ಭಾಗ್ಯ! ಜಗದೀಶ ಶೆಟ್ಟರ್ ಸಿಎಂ ಪಟ್ಟಕ್ಕೆ ಬಂದಾಗ ಅವರೊಂದಿಗೆ ಆರ್.ಅಶೋಕ ಮತ್ತು ಕೆ.ಎಸ್. ಈಶ್ವರಪ್ಪ ಡಿಸಿಎಂ ಆದರು. ೨೦೧೮ರಲ್ಲಿ ಜೆಡಿಎಸ್ -ಕಾಂಗ್ರೆಸ್ ಸಮ್ಮಿಶ್ರ ಸರಕಾರ ಬಂದಾಗ ಎಚ್.ಡಿ.ಕುಮಾರಸ್ವಾಮಿ ಸಿಎಂ. ಅವರೊಂದಿಗೆ ಜಿ.ಪರಮೇಶ್ವರ ಡಿಸಿಎಂ. ಆ ಸರಕಾರ ಉರುಳಿ ಬಿಜೆಪಿಯ ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿಯದಾಗ ಸಿ.ಎಸ್. ಅಶ್ವತ್ಥನಾರಾಯಣ, ಗೋವಿಂದ ಕಾರ
ಜೋಳ ಮತ್ತು ಲಕ್ಷ್ಮಣ ಸವದಿ ಡಿಸಿಎಂ ಆದರು.
ಎಷ್ಟು ಜನರನ್ನು ಬೇಕಾದರೂ ಡಿಸಿಎಂ ಮಾಡ ಬಹುದು ಎನ್ನುವು ದನ್ನು ರಾಜ್ಯಕ್ಕೆ ತೋರಿಸಿಕೊಟ್ಟ ಖ್ಯಾತಿ ಯಡಿಯೂರಪ್ಪನವರದು! ಅಂದಹಾಗೆ ೨೦೧೩-೧೮ರ ಅವಧಿಯಲ್ಲಿ ಸಿಎಂ ಆಗಿದ್ದ ಸಿದ್ದರಾಮಯ್ಯ, ಡಿಸಿಎಂ ಹುದ್ದೆಗೆ ಖಂಡ ತುಂಡ ವಿರೋಧ ವ್ಯಕ್ತಪಡಿಸಿ ಯಶಸ್ವಿಯಾಗಿದ್ದರು. ಶಾಸಕಾಂಗ ಆಡಳಿತ ಪಕ್ಷದಲ್ಲಿ ಪರ್ಯಾಯ ಶಕ್ತಿಕೇಂದ್ರ ರಚನೆಯಾಗುವುದು ಬೇಡ ಎಂದಿದ್ದ ಅವರು ಕಾಂಗ್ರೆಸ್‌ನಲ್ಲಿ ಉಪಮುಖ್ಯಮಂತ್ರಿ ಹುದ್ದೆಯೇ ಇಲ್ಲ ಎಂದು ಹಳತೆಲ್ಲವನ್ನೂ ಮರೆತ ವರಂತೆ ಹೇಳಿದ್ದರು. ಅವರ ಉದ್ದೇಶ ಪರಮೇಶ್ವರ ಅವರನ್ನು ಹೊರಗೆ ಇಡುವುದಷ್ಟೇ ಆಗಿತ್ತು. ಆದರೆ ಈಗ ಹೈಕಮಾಂಡ್ ತೀರ್ಮಾನದಂತೆ ತಾವು
ನಡೆಯಲು ಸಿದ್ಧ, ಡಿಸಿಎಂ ಸಂಖ್ಯೆ ಹೆಚ್ಚಿಸಬೇಕೆಂಬ ತೀರ್ಮಾನಕ್ಕೆ ಹೈಕಮಾಂಡ್ ಬಂದಲ್ಲಿ ತಾವು ಅದಕ್ಕೆ ಬದ್ಧ ಎಂದಿರುವುದು ಡಿಕೆಶಿ ಪ್ರಭಾವ ತಗ್ಗಲಿ ಎನ್ನುವ
ಕಾರಣಕ್ಕೇ ಇರಬಹುದೇ…?