ಅಭಿವೃದ್ದಿ ಪರ್ವ
ಡಾ.ಜಗದೀಶ್ ಮಾನೆ
ಉತ್ತರ ಭಾರತದಲ್ಲಿ ಐಟಿ ಸಂಬಂಧಿತ ಉದ್ಯೋಗಾವಕಾಶಗಳು ಸಾಕಷ್ಟು ಇಲ್ಲದಿರುವ ಕಾರಣಗಳಿಂದಲೇ ಆ ಭಾಗದ ಯುವಸಮೂಹ ಬೆಂಗಳೂರು, ಹೈದರಾಬಾದ್‌ನತ್ತ ಮುಖ ಮಾಡುತ್ತಿರುವುದು. ಈ ಸಮಸ್ಯೆಯನ್ನು ನೀಗಿಸಲೆಂದೇ ಹೊಸ ಪ್ರಯತ್ನಕ್ಕೆ ಕೈಹಾಕಿರುವ ಸಿಎಂ ಯೋಗಿ ಆದಿತ್ಯನಾಥರು ಲಖನೌನಲ್ಲಿ ಐಟಿ ಹಬ್ ನಿರ್ಮಿಸಲು ಮುಂದಾಗಿದ್ದಾರೆ.
ದೇಶದ ದೊಡ್ಡ ರಾಜ್ಯವೆನಿಸಿದ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರೀಗ ಒಂದು ದಿಟ್ಟ ನಿರ್ಧಾರವನ್ನು ಕೈಗೊಂಡಿದ್ದಾರೆ. ಮಾಹಿತಿ ತಂತ್ರಜ್ಞಾನ (ಐಟಿ) ಕ್ಷೇತ್ರದ ‘ಹಬ್’ ಮತ್ತು ಜಾಗತಿಕ ಮಟ್ಟದ ಸಂಶೋಧನಾ ಕೇಂದ್ರದ ನಿರ್ಮಾಣಕ್ಕೆ ಬೇಕಾಗುವ ಎಲ್ಲ ಅನುಕೂಲತೆಗಳನ್ನು ಕಲ್ಪಿಸಿ ಕೊಡುವುದಕ್ಕೆ ಉತ್ತರ ಪ್ರದೇಶದ ರಾಜಧಾನಿ ಲಖನೌನಲ್ಲಿ ಸಕಲ ಸಿದ್ಧತೆಗಳಾಗಿವೆ.
ಇಷ್ಟು ದಿನ ಬೆಂಗಳೂರಿನೊಟ್ಟಿಗೆ ಸ್ಪರ್ಧೆ ಮಾಡುವುದಕ್ಕೆ ಹೈದರಾಬಾದ್, ಗುರುಗ್ರಾಮ ಮಾತ್ರವೇ ಇದ್ದವು, ಇದೀಗ ಲಖನೌ ಕೂಡ ಜತೆಗೂಡಲಿದೆ. ವರ್ತಮಾನದಲ್ಲಿ ಈ ಐಟಿ ಕ್ಷೇತ್ರವು ಭಾರತದ ಆರ್ಥಿಕತೆಯ ಅತಿದೊಡ್ಡ ಶಕ್ತಿಯಾಗಿದೆ. ದೇಶದ ಒಟ್ಟು ಜಿಡಿಪಿಗೆ ಮಾಹಿತಿ ತಂತ್ರಜ್ಞಾನದ ಸೇವಾವಲಯವೊಂದೇ ಗಣನೀಯ ಕೊಡುಗೆ ನೀಡುತ್ತಿದೆ. ಜತೆಗೆ ವಿದೇಶಗಳಲ್ಲಿ ನೆಲೆಸಿರುವ ಐಟಿ ವೃತ್ತಿಪರರ ಮೂಲಕ ನಮಗೆ ಹಣದ ರವಾನೆಯಾಗುತ್ತಿದೆ. ಭಾರತದ ಇನೋಸಿಸ್, ಟಿಸಿಎಸ್, ವಿಪ್ರೋ ಸೇರಿದಂತೆ ಅನೇಕ ಐಟಿ ಸಂಸ್ಥೆಗಳು ಲಕ್ಷಾಂತರ ಉದ್ಯೋಗಗಳನ್ನು ಸೃಷ್ಟಿಸುವ ಮೂಲಕ ದೇಶದ ಆರ್ಥಿಕತೆಗೆ ಮಹತ್ತರ ಕೊಡುಗೆಗಳನ್ನು ನೀಡುತ್ತಿವೆ.
ಬೆಂಗಳೂರು, ಹೈದರಾಬಾದ್ ಹಾಗೂ ಗುರುಗ್ರಾಮ ಸೇರಿದಂತೆ ದೇಶದ ಅನೇಕ ಪ್ರದೇಶಗಳಲ್ಲಿ ದೊಡ್ಡ ಕಂಪನಿಗಳು, ಐಟಿ ಹಬ್‌ಗಳು, ಐಟಿ ಪಾರ್ಕುಗಳು ತಲೆಯೆತ್ತುತ್ತಿವೆ. ಪಿಯುಸಿ ಓದುತ್ತಿರುವ ಇಂದಿನ ವಿದ್ಯಾರ್ಥಿ ಗಳಿಗೆ ‘ನೀವು ಮುಂದೇನಾಗುತ್ತೀರಿ?’ ಅಂತ ಹಾಗೇ ಸುಮ್ಮನೆ ಕೇಳಿದರೆ, ‘ಸಾಫ್ಟ್ ವೇರ್ ಎಂಜಿನಿಯರ್ ಆಗುತ್ತೇವೆ’ ಎಂಬ ಉತ್ತರ ಬರುವುದೇ ಜಾಸ್ತಿ. ಅಂದರೆ ಇಂದು ಐಟಿ ಕ್ಷೇತ್ರವು ನಮ್ಮನ್ನು ಅಷ್ಟರಮಟ್ಟಿಗೆ ಆವರಿಸಿಕೊಂಡಿದೆ.
ಮುಂಬರುವ ದಿನಗಳಲ್ಲೂ ಮನುಷ್ಯ ತಂತ್ರಜ್ಞಾನದ ಮೇಲೆಯೇ ಹೆಚ್ಚಾಗಿ ಅವಲಂಬಿಯಾಗುತ್ತಾ ಹೋಗುತ್ತಾನೆ. ಆದರೆ ಆಗ ಕೂಡ ಬದಲಾಗುತ್ತಿರುವ ತಂತ್ರ ಜ್ಞಾನಕ್ಕೆ ತಕ್ಕಂತೆ ನಾವೂ ಬದಲಾಗುತ್ತಿರಬೇಕಾಗುತ್ತದೆ. ಕೃತಕ ಬುದ್ಧಿಮತ್ತೆ (ಆರ್ಟಿಫಿಷಿಯಲ್ ಇಂಟೆಲಿಜೆನ್ಸ್) ಇಂದು ವೇಗವಾಗಿ ಬೆಳೆಯುತ್ತಿದ್ದು, ಇದನ್ನು ಸರಿಯಾಗಿ ಅರ್ಥೈಸಿಕೊಂಡು ಬಳಸುತ್ತಾ ನಾವೂ ಬೆಳೆಯುವುದು ಹೇಗೆ ಎಂಬುದನ್ನು ತಿಳಿದುಕೊಳ್ಳಬೇಕು. ಅದರೊಟ್ಟಿನಲ್ಲಿ ಇನ್ನೂ ಹೆಚ್ಚೆಚ್ಚು ಹೊಸ ಅನ್ವೇಷಣೆ ಗಳು ಆಗಬೇಕಿವೆ. ಹೀಗಾದಾಗ ಈ ಕ್ಷೇತ್ರದಲ್ಲಿ ಉದ್ಯೋಗಾವಕಾಶಗಳು ಹೆಚ್ಚುತ್ತಾ ಹೋಗುತ್ತವೆ. ನಮ್ಮ ದೇಶದಲ್ಲಂತೂ ಐಟಿ ಕ್ಷೇತ್ರದಲ್ಲಿ ಕೆಲಸ ಮಾಡುವುದಕ್ಕೆ ಭರಪೂರ ಮಾನವ ಸಂಪನ್ಮೂಲವಿದೆ.
ಪಶ್ಚಿಮದ ರಾಷ್ಟ್ರಗಳಿಗೆ ಹೋಲಿಸಿದರೆ ತುಲನಾತ್ಮಕವಾಗಿ ಕಡಿಮೆ ವೇತನಕ್ಕೆ ದುಡಿಯಬಲ್ಲ ಪ್ರತಿಭಾವಂತರು ನಮ್ಮಲ್ಲಿ ಸಿಗುತ್ತಾರೆ. ಇದರಿಂದ ಭಾರತಕ್ಕೆ
ಬರುವ ಉದ್ಯಮಗಳ ಸಂಖ್ಯೆಯೂ ಹೆಚ್ಚುತ್ತದೆ. ಹೀಗಾಗಿ ಇಂಥ ಅವಕಾಶಗಳನ್ನು ಬಳಸಿಕೊಳ್ಳುವುದಕ್ಕೆ ದೊಡ್ಡ ಹೆಜ್ಜೆಗಳನ್ನಿಡುತ್ತಿದೆ ಉತ್ತರ ಪ್ರದೇಶದ ಯೋಗಿ
ಆದಿತ್ಯನಾಥರ ಸರಕಾರ. ಸದ್ಯಕ್ಕೆ ಐಟಿ ಹಾಗೂ ಕೌಶಲಾಭಿವೃದ್ಧಿ ವಿಷಯದಲ್ಲಿ ಉತ್ತರದ ರಾಜ್ಯಗಳ ಪ್ರಗತಿ ಬಹಳ ಕಡಿಮೆ. ಬೆಂಗಳೂರನ್ನು ‘ಭಾರತದ ಸಿಲಿಕಾನ್ ವ್ಯಾಲಿ’, ‘ಐಟಿ ಹಬ್’ ಎಂದೇ ಗುರುತಿಸಲಾಗುತ್ತದೆ. ಇನ್ನು ಹೈದರಾಬಾದನ್ನು ‘ಸೈಬರಾಬಾದ್’ ಎಂದೇ ಕರೆಯುವಷ್ಟರ ಮಟ್ಟಿಗೆ ಐಟಿ ವಲಯದಲ್ಲಿ
ಅದು ಗಮನಾರ್ಹವಾಗಿ ಗುರುತಿಸಿಕೊಂಡಿದೆ.
ಇತ್ತೀಚಿನ ದಿನಗಳಲ್ಲಿ ಗುರುಗ್ರಾಮದತ್ತಲೂ ಮುಖಮಾಡಿವೆ ಐಟಿ ಕಂಪನಿಗಳು. ಇದನ್ನು ಬಿಟ್ಟರೆ ಉತ್ತರದ ಬೇರಾವ ರಾಜ್ಯದಲ್ಲೂ ದೊಡ್ಡ ಪ್ರಮಾಣದ ಐಟಿ ಹಬ್‌ಗಳನ್ನು ಕಾಣುವುದಕ್ಕೆ ಸಾಧ್ಯವಿಲ್ಲ. ಉತ್ತರ ಭಾರತದಲ್ಲಿ ಐಟಿ ಸಂಬಂಧಿತ ಉದ್ಯೋಗಾವಕಾಶಗಳು ಸಾಕಷ್ಟು ಇಲ್ಲದಿರುವ ಕಾರಣಗಳಿಂದಲೇ ಆ ಭಾಗದ
ಯುವಸಮೂಹ ಬೆಂಗಳೂರು, ಹೈದರಾಬಾದ್ ನತ್ತ ಮುಖ ಮಾಡುತ್ತಿರುವುದು. ಈ ಸಮಸ್ಯೆ ಯನ್ನು ನೀಗಿಸಲೆಂದೇ ಯೋಗಿ ಆದಿತ್ಯನಾಥರು ಹೊಸ ಪ್ರಯತ್ನಕ್ಕೆ ಕೈಹಾಕಿದ್ದಾರೆ. ಉತ್ತರ ಪ್ರದೇಶ ಸರಕಾರ ಕಳೆದ ತಿಂಗಳು ನೀಡಿದ್ದ ಮಾಧ್ಯಮ ಪ್ರಕಟಣೆಯಲ್ಲಿ, ಲಖನೌದಲ್ಲಿ ಸುಮಾರು ೪೦ ಎಕರೆ ವಿಸ್ತೀರ್ಣದ ಪ್ರದೇಶದಲ್ಲಿ ಬೃಹತ್ ಐಟಿ ಹಬ್ ನಿರ್ಮಿಸುವ ಯೋಜನೆಯನ್ನು ಹಮ್ಮಿಕೊಂಡಿರುವುದರ ಮತ್ತು ಸಂಬಂಧಿತ ಕೆಲಸ ಶುರುವಾಗಿರುವುದರ ಉಲ್ಲೇಖವಿತ್ತು.
ಲಖನೌ-ಕಾನ್ಪುರ ರಸ್ತೆಯ ಪಕ್ಕದಲ್ಲಿ ನೆಲೆಗೊಳ್ಳಲಿರುವ ಈ ಐಟಿ ಹಬ್‌ನಲ್ಲಿ, ೧೧.೪ ಎಕರೆಯಲ್ಲಿ ಐಟಿ ಪಾರ್ಕ್, ೭.೪ ಎಕರೆಯಲ್ಲಿ ಬಿಜಿನೆಸ್ ಪಾರ್ಕ್, ೭ ಎಕರೆಯಲ್ಲಿ ಇಂಟರ್‌ನ್ಯಾಷನಲ್ ಇನ್‌ಕ್ಯುಬೇಷನ್ ಸೌಲಭ್ಯಗಳ ನಿರ್ಮಾಣ, ೫ ಎಕರೆ ಪ್ರದೇಶದಲ್ಲಿ ಗ್ರೀನ್ ಪಾರ್ಕ್ ನಿರ್ಮಿಸಿ, ೫.೫ ಎಕರೆ ಪ್ರದೇಶವನ್ನು ರಸ್ತೆ ನಿರ್ಮಾಣಕ್ಕೆ ಬಳಸಲಾಗುತ್ತದಂತೆ. ಹೈಡ್ರಾಲಿಕ್ ಪಾರ್ಕಿಂಗ್ ವ್ಯವಸ್ಥೆಯನ್ನೂ ಕಲ್ಪಿಸಲಾಗುತ್ತದಂತೆ. ಐಟಿ ಪಾರ್ಕ್ ಮಾತ್ರವಲ್ಲದೆ, ಸಂಶೋಧನೆ ಮತ್ತು ಅಭಿವೃದ್ಧಿ ಕ್ಷೇತ್ರವನ್ನೂ ಗಮನದಲ್ಲಿಟ್ಟುಕೊಂಡು ನೂತನ ತಂತ್ರಜ್ಞಾನಗಳ ಅನ್ವೇಷಣೆಗೆ ಹೆಚ್ಚಿನ ಒತ್ತು ನೀಡಲಾಗುತ್ತದೆ.
ಮಹಿಳಾ ಉದ್ಯಮಶೀಲರಿಗಾಗಿ ಪ್ರತ್ಯೇಕ ಕೇಂದ್ರವನ್ನು ಸ್ಥಾಪಿಸುದರ ಜತೆಗೆ, ಕೌಶಲ ಹಾಗೂ ಜ್ಞಾನದ ವರ್ಧನೆಯ ನಿಟ್ಟಿನಲ್ಲಿ ವಿವಿಧ ಅಕಾಡೆಮಿಗಳನ್ನೂ ಸ್ಥಾಪಿಸಲಾಗುತ್ತದೆ ಎಂಬುದು ಲಭ್ಯಮಾಹಿತಿ. ಒಟ್ಟಾರೆ ಹೇಳುವುದಾದರೆ, ಅಧ್ಯಯನ, ಅನ್ವೇಷಣೆ, ಉದ್ಯೋಗಾವಕಾಶ ಮತ್ತು ವ್ಯಾಪಾರದಂಥ ಸ್ತರಗಳನ್ನು ಗಮನದಲ್ಲಿಟ್ಟುಕೊಂಡು ಈ ಐಟಿ ಹಬ್ ಅನ್ನು ನಿರ್ಮಿಸಲಾಗುತ್ತಿದೆ. ಬೆಂಗಳೂರಿಗೆ ಹೋಲಿಸಿದಾಗ ಸಾಕಷ್ಟು ಹಿಂದುಳಿದಿರುವಂತೆ ಸದ್ಯಕ್ಕೆ ಕಾಣುವ ಲಖನೌ ನಗರಕ್ಕೆ ಬಂಡವಾಳ ಹೂಡಿಕೆಯನ್ನು ಸೆಳೆಯುವುದು ಸಾಧ್ಯವಾದೀತೇ ಎಂಬ ಪ್ರಶ್ನೆ ಕೆಲವರನ್ನು ಕಾಡಬಹುದು. ಆದರೆ ೩೦ ವರ್ಷಗಳ ಹಿಂದೆ ಬೆಂಗಳೂರು ಕೂಡ ಹೀಗಿರಲಿಲ್ಲ, ಅಲ್ಲವೇ? ಒಂದೊಂದಾಗಿ ಕಂಪನಿಗಳು ಬರುವುದಕ್ಕೆ ಶುರುವಾದ ನಂತರವಷ್ಟೇ ಬೆಂಗಳೂರಿನ ಚಹರೆ ಮತ್ತು ಪ್ರಾಮುಖ್ಯ ಬದಲಾಗಿದ್ದು.
ಹೀಗಾಗಿ ಐಟಿ ಉದ್ಯಮಕ್ಕೆ ಅಗತ್ಯವಿರುವ ಎಲ್ಲ ಸೌಲಭ್ಯ-ಸವಲತ್ತು-ಸಬ್ಸಿಡಿಗಳನ್ನು ಕೊಡುವ ಮೂಲಕ ಹೊರಗಿನ ಸಂಸ್ಥೆಗಳನ್ನೂ ಇಲ್ಲಿಗೆ ಬಂಡವಾಳ ಹೂಡಿಕೆಗೆ ಸೆಳೆಯಲು ಆದಿತ್ಯನಾಥರ ಸರಕಾರ ಸಜ್ಜಾಗಿದೆ. ಇಲ್ಲಿ ಮತ್ತೊಂದು ಅಂಶವನ್ನೂ ಗಮನಿಸಬೇಕು. ಸಿಎಂ ಆದಿತ್ಯನಾಥರ ದಿಟ್ಟ ಕ್ರಮಗಳಿಂದಾಗಿ ಉತ್ತರ ಪ್ರದೇಶ ದಲ್ಲಿನ ಭೂಗತ ಚಟುವಟಿಕೆಗಳು ಬಹಳಷ್ಟು ಹತೋಟಿಗೆ ಬಂದಿವೆ ಹಾಗೂ ನಗರಗಳಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳಾಗುತ್ತಿವೆ. ಮೂಲಸೌಕರ್ಯದ
ವರ್ಧನೆಗೂ ಸಾಕಷ್ಟು ಗಮನ ಹರಿಸಲಾಗಿದೆ ಮತ್ತು ಐತಿಹಾಸಿಕ ನಗರಗಳ ಮಹತ್ವದ ವರ್ಧನೆಗೂ ಕ್ರಮಗಳನ್ನು ಕೈಗೊಳ್ಳಲಾಗಿದೆ.
ಪ್ರಸ್ತುತ ನಿರ್ಮಾಣವಾಗುತ್ತಿರುವ ಅಯೋಧ್ಯೆಯ ರಾಮಮಂದಿರದ ಕಾಮಗಾರಿ ಸಂಪನ್ನಗೊಂಡರೆ, ಅಯೋಧ್ಯೆಯು ಅಂತಾರಾಷ್ಟ್ರೀಯ ಮಟ್ಟದಲ್ಲಿ ಜನರನ್ನು
ಸೆಳೆಯುವುದು ಖರೆ. ಕಳೆದ ೧೦ ವರ್ಷಗಳಲ್ಲಿ ಉತ್ತರ ಪ್ರದೇಶವು ಆರ್ಥಿಕವಾಗಿ ಸಾಕಷ್ಟು ಅಭಿವೃದ್ಧಿ ಹೊಂದಿದ್ದು, ೨೦೩೦ರ ವರ್ಷದ ವೇಳೆಗೆ ಜಿಡಿಪಿಯ ಜತೆಗೆ ಅಲ್ಲಿನ ಜನರ ತಲಾದಾಯವನ್ನೂ ಹೆಚ್ಚಿಸಲು ರಾಜ್ಯ ಸರಕಾರ ನಿರ್ಧರಿಸಿದೆ (ಸದ್ಯ ಭಾರತದ ಜಿಡಿಪಿ ೩.೭೫ ಲಕ್ಷ ಕೋಟಿ ರು. ದಾಟುವ ಮೂಲಕ ವಿಶ್ವದ ೫ನೇ ಶ್ರೀಮಂತ ರಾಷ್ಟ್ರವೆನಿಸಿಕೊಂಡಿದ್ದರೂ, ತಲಾದಾಯದ ವಿಷಯದಲ್ಲಿ ಭಾರತವು ಜಾಗತಿಕ ಪಟ್ಟಿಯಲ್ಲಿ ೧೩೯ನೇ ಸ್ಥಾನದಲ್ಲಿದೆ).
ಉತ್ತರ ಪ್ರದೇಶ, ಬಿಹಾರ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳಲ್ಲಿ ಜನಸಂಖ್ಯೆ ಹೇರಳವಾಗಿದೆ; ಆದರೆ ಮೂಲಭೂತ ಸೌಕರ್ಯಗಳು, ಗುಣಮಟ್ಟದ ಶಿಕ್ಷಣ,
ಜಾಗೃತಿ, ರಾಜಕೀಯ ಇಚ್ಛಾಶಕ್ತಿ ಈ ಬಾಬತ್ತುಗಳಲ್ಲಿನ ಕೊರತೆಯ ಕಾರಣದಿಂದಾಗಿ ಈ ರಾಜ್ಯಗಳು ಬಹಳ ವರ್ಷಗಳಿಂದಲೂ ಹಿಂದುಳಿದ ರಾಜ್ಯಗಳ ಪಟ್ಟಿಯಲ್ಲಿವೆ. ಈ ಸಮಸ್ಯೆಗಳಿಂದ ಹೊರಬರಬೇಕೆಂದರೆ ಈ ಭಾಗಗಳಲ್ಲಿ ಹೆಚ್ಚೆಚ್ಚು ಉದ್ಯೋಗಗಳು ಸೃಷ್ಟಿಯಾಗಬೇಕು. ಇದರಿಂದ ಜನರ ಜೀವನಮಟ್ಟ ಸುಧಾರಿಸುತ್ತದೆ, ಶಿಕ್ಷಣದ ಕುರಿತಾಗಿ ಜನರೂ ಹೆಚ್ಚೆಚ್ಚು ಜಾಗೃತರಾಗುತ್ತಾರೆ.
ತನ್ಮೂಲಕ ಓದುವವರ ಸಂಖ್ಯೆ ಮತ್ತು ಕೌಶಲಾಭಿವೃದ್ಧಿಗೆ ಒಡ್ಡಿಕೊಳ್ಳುವವರ ಸಂಖ್ಯೆ ಹೆಚ್ಚುತ್ತವೆ. ಹೀಗಾದಾಗ ಅಲ್ಲಿನ ಜಿಡಿಪಿ ಹಾಗೂ ಜನರ ತಲಾದಾಯ
ಎರಡೂ ತಾನೇತಾನಾಗಿ ಹೆಚ್ಚಾಗುತ್ತವೆ. ತಡವಾಗಿಯಾದರೂ ಇಂಥದೊಂದು ದೊಡ್ಡ ಪ್ರಯತ್ನ ಉತ್ತರ ಪ್ರದೇಶದಲ್ಲಿ ಆಗುತ್ತಿರುವುದು ಸಂತೋಷದ ಸಂಗತಿ.
ಹಾಗೆಂದ ಮಾತ್ರಕ್ಕೆ ಇದೊಂದೇ ಅಂತ ಅಲ್ಲ; ಬೆಂಗಳೂರು, ಹೈದರಾಬಾದ್, ಗುರು ಗ್ರಾಮ, ಲಖನೌಗಳಂತೆ ದೇಶದ ಮಿಕ್ಕೆಲ್ಲ ರಾಜ್ಯಗಳ ವಿವಿಧ ಪ್ರದೇಶಗಳೂ
ಅಭಿವೃದ್ಧಿಯ ಮುಖವನ್ನು ಕಾಣುವಂತಾಗಬೇಕು. ಉತ್ತರದ ಎಲ್ಲ ರಾಜ್ಯಗಳೂ ಇಂಥ ಆಲೋಚನಾಕ್ರಮಕ್ಕೆ ಒಡ್ಡಿಕೊಂಡು ಕಾರ್ಯಪ್ರವೃತ್ತವಾದರೆ,
ಮುಂಬರುವ ೧೦ ವರ್ಷಗಳಲ್ಲಿ ಸಾಕಷ್ಟು ಬದಲಾವಣೆಯಾಗುವುದು ಕಟ್ಟಿಟ್ಟಬುತ್ತಿ.
ಆಗ ದೇಶದ ಉತ್ತರ ಭಾಗಗಳಿಂದ ದಕ್ಷಿಣದತ್ತ ಉದ್ಯೋಗಕ್ಕಾಗಿ ವಲಸೆ ಬರುವವರ ಸಂಖ್ಯೆಯೂ ತಗ್ಗುತ್ತದೆ. ಅದರ ಜತೆಜತೆಗೆ ಭಾರತದ ಆರ್ಥಿಕತೆಯಲ್ಲೂ ಗಣನೀಯ ಅಭಿವೃದ್ಧಿ ಯಾಗುತ್ತದೆ. ಈ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇಡುತ್ತಿರುವ ಉತ್ತರ ಪ್ರದೇಶದ ಚಿಂತನಾಕ್ರಮ ಶ್ಲಾಘನೀಯ.
(ಲೇಖಕರು ರಾಜ್ಯಶಾಸ್ತ್ರದ ಅಧ್ಯಾಪಕರು)