ಕಾವೇರಿ ನದಿ ನೀರನ್ನು ತಮಿಳುನಾಡಿಗೆ ಹರಿಸಬಾರದು ಎಂದು ಆಗ್ರಹಿಸಿ ಮಂಗಳವಾರ ಬೆಂಗಳೂರು ಬಂದ್ಗೆ ಕೊಟ್ಟಿರುವ ಕರೆಗೆ ಉತ್ತಮ ಸ್ಪಂದನೆ ದೊರೆತಿದೆ. ಅಲ್ಲಲ್ಲಿ ಚಿಕ್ಕಪುಟ್ಟ ಗಲಾಟೆಗಳನ್ನು ಹೊರತು ಪಡಿಸಿದರೆ ಬಹುತೇಕ ಶಾಂತಿಯುತ ಬಂದ್ ನಡೆದಿದೆ.
ಆದರೆ ಸಂಘಟನೆಗಳಲ್ಲೇ ಒಗ್ಗಟ್ಟು ಇಲ್ಲದಿರುವುದು ಅಪಹಾಸ್ಯಕ್ಕೀಡಾಗಿದೆ. ಕನ್ನಡ ನುಡಿ, ನೆಲ, ಜಲಕ್ಕೆ ಅಪಾಯ ಬಂದಾಗ ಕನ್ನಡಪರ ಸಂಘಟನೆಗಳು, ರೈತ ಸಂಘಟನೆಗಳು ಒಗ್ಗಟ್ಟಾಗಿ ಹೋರಾಡಿದರೆ ಫಲ ಸಿಗುತ್ತದೆ. ಒಗ್ಗಟ್ಟಿನಲ್ಲಿ ಬಲ ಇದೆ ಎಂಬ ಮಾತಿದೆ. ಪ್ರತ್ಯೇಕವಾಗಿ ಹೋರಾಡಿದರೆ ಪ್ರಯೋಜನವಿಲ್ಲ. ಈಗ ಕಾವೇರಿ ನದಿ ನೀರು ವಿಚಾರದಲ್ಲಿ ಮಂಡ್ಯ ಜಿಲ್ಲೆಯಲ್ಲಿ ಹಾಗೂ ರಾಜ್ಯದ ವಿವಿಧೆಡೆ ಸಂಘಟನೆಗಳು ಬೇರೆ ಬೇರೆಯಾಗಿ ಚಳವಳಿ ನಡೆಸುವ ಬದಲು ಒಟ್ಟುಗೂಡಿ ನಡೆಸುವುದು ಅಗತ್ಯವಿದೆ.
ಬಂದ್ ವಿಚಾರದಲ್ಲೂ ಎಲ್ಲ ರೈತ ಹಾಗೂ ಕನ್ನಡಪರ ಸಂಘಟನೆಗಳಿಂದ ಒಂದೇ ನಿಲುವು- ಒಂದೇ ಧ್ವನಿ ಮೊಳಗಬೇಕಿತ್ತು. ವಿವಿಧ ಸಂಘಟನೆಗಳ ಮುಖಂಡರು ಪ್ರತಿಷ್ಠೆಗೆ ಅಂಟಿಕೊಂಡು ಜಿಲ್ಲೆ ಬಂದ್, ಬೆಂಗಳೂರು ಬಂದ್, ಕರ್ನಾಟಕ ಬಂದ್ ಎಂದು ಭಿನ್ನ ಧ್ವನಿಗಳಲ್ಲಿ ಕರೆ ನೀಡುವುದು ಸರಿಯೇ? ಈ ಕುರಿತು ಯೋಚಿಸುವ ಅಗತ್ಯವಿದೆ. ಕಾವೇರಿ ನೀರಿನ ವಿಚಾರದಲ್ಲಿ ರಾಜ್ಯ ಸಂಕಷ್ಟಕ್ಕೆ ಸಿಲುಕಿದೆ. ರಾಜ್ಯದ ಎಲ್ಲ ರೈತ, ಕನ್ನಡಪರ ಸಂಘಟನೆಗಳು, ಮಠಾಧಿಪತಿಗಳು, ರಾಜಕೀಯ ಪಕ್ಷಗಳು ಒಗ್ಗಟ್ಟು ಪ್ರದರ್ಶಿಸಿ ನ್ಯಾಯ ಪಡೆಯುವುದೊಂದೇ ಈಗ ಉಳಿದಿರುವ ಮಾರ್ಗ.
ಕಾವೇರಿ ನೀರಿನ ವಿಷಯ ರಾಜ್ಯದ ಯಾವುದೇ ಒಂದು ಪ್ರಾಂತ್ಯ, ಜಿಲ್ಲೆಗೆ ಸಂಬಂಧಿಸಿದ ವಿಚಾರವಲ್ಲ. ಅಖಂಡ ಕರ್ನಾಟಕಕ್ಕೆ ಸಂಬಂಧಿಸಿದ ವಿಷಯ. ರಾಜಕೀಯ ಲಾಭಕ್ಕಾಗಿ ನೀರಿನ ವಿಚಾರವನ್ನು ಯಾರೊಬ್ಬರೂ ಬಳಕೆ ಮಾಡಿಕೊಳ್ಳಬಾರದು. ಹಾಗೆ ಮಾಡಿದರೆ ಅದು ಅಕ್ಷಮ್ಯ. ರಾಜಕೀಯ, ಧಾರ್ಮಿಕ, ಚಲನಚಿತ್ರ ರಂಗ ಸೇರಿದಂತೆ ಎಲ್ಲ ಕ್ಷೇತ್ರಗಳ ಗಣ್ಯರೂ ಒಗ್ಗಟ್ಟಾಗಿ ಹೋರಾಡಬೇಕು. ನೀರಿನ ಕೊರತೆ ಎದುರಿಸುತ್ತಿರುವ ಸಂಕಷ್ಟದ ಈ ಸಂದರ್ಭದಲ್ಲಿ ರಾಜ್ಯಕ್ಕೆ ನ್ಯಾಯ ದೊರಕಿಸಿಕೊಡಬೇಕು.