Saturday, 23rd November 2024

ಇದು ಎಲಾನ್ ಮಸ್ಕ್ ಬಯಾಗ್ರಫಿಯಲ್ಲ, ಭಯಾಗ್ರಫಿ !

ನೂರೆಂಟು ವಿಶ್ವ

vbhat@me.com

ಐಸಾಕ್ಸನ್ ಈ ಪುಸ್ತಕ ಬರೆಯಲು ಶುರುಮಾಡಿದಾಗಿನಿಂದ ಮಸ್ಕ್‌ರ ಆಪ್ತರನೇಕರು ದೂರಿದ್ದಿದೆ. ಏಕೆಂದರೆ ಮಸ್ಕ್‌ರನ್ನು ಕಂಡರೆ ತುಂಬಾ ಜನರಿಗೆ ಆಗುವುದಿಲ್ಲ. ಅದಕ್ಕೆ ಕಾರಣಗಳಿವೆ. ಕೆಲವರಿಗೆ ಮಸ್ಕ್‌ರ ಜೋಕುಗಳು ಇಷ್ಟವಾಗುವುದಿಲ್ಲ. ಇನ್ನು ಕೆಲವರ ಕಣ್ಣಲ್ಲಿ ಮಸ್ಕ್ ಒಬ್ಬ ಕಂತ್ರಿ, ಸಲಿಂಗಕಾಮಿಗಳ ವಿರೋಽ, ಯಹೂದಿಗಳನ್ನು ಕಂಡರಾಗದವನು.

ಇಂಟರ್‌ನೆಟ್ ಬಂದು ಮುದ್ರಣ ಮಾಧ್ಯಮವನ್ನು ಹಾಳುಮಾಡುವುದಕ್ಕಿಂತ ಮುಂಚೆ ೧೯೯೦ರ ದಶಕದಲ್ಲಿ ಸುದೀರ್ಘ ಅವಧಿಗೆ ವಾಲ್ಟರ್ ಐಸಾಕ್ಸನ್ ಅವರು ‘ಟೈಮ್’ ನಿಯತಕಾಲಿಕದ ಸಂಪಾದಕರಾಗಿದ್ದರು. ೯/೧೧ರ ಭಯೋತ್ಪಾದಕ ಕೃತ್ಯ ಸಂಭವಿಸಿದಾಗ ಅವರು ಜಗತ್ಪ್ರಸಿದ್ಧ ‘ಸಿಎನ್‌ಎನ್’ ಟವಿ ಚಾನಲ್‌ನ
ಮುಖ್ಯಸ್ಥ ರಾಗಿದ್ದರು. ೨೦೦೩ರಲ್ಲಿ ಆಸ್ಟೆನ್ ಇನ್‌ಸ್ಟಿಟ್ಯೂಟ್ ಸೇರಿ ೧೪ ವರ್ಷ ಮುಂಚೂಣಿ ಹುದ್ದೆಯಲ್ಲಿದ್ದರು. ಆದರೆ ಅವರು ಅತಿಹೆಚ್ಚು ಸಮಯ ಕಳೆದಿದ್ದು ಗಣ್ಯವ್ಯಕ್ತಿಗಳ ಜೀವನ ಚರಿತ್ರೆ ಬರೆಯುವುದರಲ್ಲಿ. ಹೆನ್ರಿ ಕಿಸಿಂಜರ್, ಬೆಂಜಮಿನ್ ಫ್ರಾಂಕ್ಲಿನ್, ಐನ್‌ಸ್ಟೀನ್, ಸ್ಟೀವ್ ಜಾಬ್ಸ್ ಹೀಗೆ ಸಾಕಷ್ಟು ಸಾಧಕರ ಜೀವನಚರಿತ್ರೆ ಗಳನ್ನು ಅವರು ಬರೆದಿದ್ದಾರೆ.

ಇತ್ತೀಚೆಗಷ್ಟೇ ಐಸಾಕ್ಸನ್‌ರ ಹೊಸಕೃತಿ ಪ್ರಕಟವಾಗಿದೆ. ಅದು ವಿಶ್ವದ ನಂ.೧ ಶ್ರೀಮಂತ ಉದ್ಯಮಿ ಎಲಾನ್ ಮಸ್ಕ್ ಅವರ ಜೀವನಚರಿತ್ರೆ. ಸಾಕಷ್ಟು ವಿಷಯ ಗಳಲ್ಲಿ ದೈತ್ಯಸಾಧನೆ ಮಾಡಿರುವ ಈತ ಅಷ್ಟೇ ತಿಕ್ಕಲ ಮತ್ತು ಸಿಡುಕ. ‘ಮಸ್ಕ್ ಮೂಡ್’ ಬದಲಾದರೆ ಜಗತ್ತಿನಲ್ಲಿ ಭಾರಿ ಬದಲಾವಣೆಗಳಾಗುತ್ತವೆ. ಉದಾಹರಣೆಗೆ, ರಷ್ಯಾ ವಿರುದ್ಧದ ಹೋರಾಟದಲ್ಲಿ ಉಕ್ರೇನ್ ಇವರದೇ ‘ಸ್ಟಾರ್‌ಲಿಂಕ್’ ಉಪಗ್ರಹಗಳನ್ನು ನೆಚ್ಚಿದೆ. ಸಾಕಷ್ಟು ಜನ ಇವರನ್ನು ‘ಹೀರೋ’ ಎಂದು ಆರಾಧಿಸುತ್ತಾರೆ. ಮನುಷ್ಯನನ್ನು ಮಂಗಳ ಗ್ರಹಕ್ಕೆ ಕರೆದೊಯ್ಯುವ, ಕೃತಕ ಬುದ್ಧಿಮತ್ತೆಯ ದುಷ್ಪರಿಣಾಮಗಳ ವಿರುದ್ಧ ಹೋರಾ ಡುವ, ಮಧ್ಯೆ ಮಧ್ಯೆ ಸಾಧ್ಯ ವಿರುವಷ್ಟು ಸುಂದರಿಯರೊಂದಿಗೆ ಮೋಜುಮಾಡುವ ವರ್ಣರಂಜಿತ ವ್ಯಕ್ತಿ ಎಲಾನ್ ಮಸ್ಕ್.

ಆದರೆ ಇವರು ಕ್ರಮೇಣ ಬಾಂಡ್ ಸಿನಿಮಾದ ವಿಲನ್ ಆಗುತ್ತಿದ್ದಾರಾ ಎಂಬ ಗೊಂದಲದಲ್ಲಿ ನೀವಿದ್ದಲ್ಲಿ, ಐಸಾಕ್ಸನ್ ಪುಸ್ತಕ ನಿಮಗೆ ಯಾವ ಸಹಾಯವನ್ನೂ ಮಾಡುವುದಿಲ್ಲ. ಕಾರಣ, ಈ ಪುಸ್ತಕವನ್ನವರು ‘ಟೈಮ್’ ನಿಯತಕಾಲಿಕದ ಶೈಲಿಯಲ್ಲಿ ಬರೆದಿದ್ದಾರೆ. ಯಾವುದೇ ಅಜೆಂಡಾಗಳಿಲ್ಲದೆ, ಎಲ್ಲೂ ಉದ್ವೇಗ ಕ್ಕೊಳಗಾಗದೆ ಮಸ್ಕ್‌ರನ್ನು ಇಲ್ಲಿ ಚಿತ್ರಿಸಿರುವ ಐಸಾಕ್ಸನ್, ಮಸ್ಕ್ ಬದುಕಿಗೆ ಸಂಬಂಧಿಸಿದ ಸಂಗತಿಗಳನ್ನು ತಾವು ಗ್ರಹಿಸಿದ ಬಗೆಯಲ್ಲೇ ಓದುಗರಿಗೆ ತಲುಪಿಸುವ ಕೆಲಸವನ್ನಷ್ಟೇ ಮಾಡಿದ್ದಾರೆ.

ಇದಕ್ಕಾಗಿ ಅವರು ಮಸ್ಕ್ ಜತೆ ೨ ವರ್ಷಕ್ಕೂ ಹೆಚ್ಚು ಸಮಯ ಸುತ್ತಾಡಿದ್ದಾರೆ, ಫ್ಯಾಕ್ಟರಿಯಿಂದ ಹಿಡಿದು ರಾಕೆಟ್ ಉಡಾವಣಾ ಕೇಂದ್ರದವರೆಗೆ ಮಸ್ಕ್ ಹೋಗುವಲ್ಲಿಗೆಲ್ಲ ಅಂಡಲೆದಿದ್ದಾರೆ. ಮಸ್ಕ್‌ರನ್ನು ಬಲ್ಲ ೧೨೮ ಜನರನ್ನು ಸಂದರ್ಶಿಸಿದ್ದಾರೆ, ಅರ್ಧರಾತ್ರಿಯ ಫೋನ್‌ಕರೆ, ಮೆಸೇಜುಗಳನ್ನೂ ನಿಭಾಯಿಸಿದ್ದಾರೆ. ಗಮ್ಮತ್ತೆಂದರೆ, ಐಸಾಕ್ಸನ್ ಒಂದೊಂದು ವಿಷಯವನ್ನು ವರದಿ ಮಾಡಿದಾಗಲೂ ಅದರ ಬಗ್ಗೆ ಮಸ್ಕ್ ಟ್ವೀಟ್ ಮಾಡುತ್ತಿದ್ದರು, ತನ್ಮೂಲಕ ತಮ್ಮ ಜೀವನಚರಿತ್ರೆ
ರೂಪುಗೊಳ್ಳುತ್ತಿರುವುದನ್ನು ನಿರಂತರ ಸುದ್ದಿಯಾಗಿಸಿದ್ದರು. ಐಸಾಕ್ಸನ್ ಬರೆದ ಈ ಹಿಂದಿನ ಯಾರ ಜೀವನಚರಿತ್ರೆಯ ವಿಷಯದಲ್ಲೂ ಹೀಗಾಗಿರಲಿಲ್ಲ. ಆದರೆ ಈ ಪುಸ್ತಕ ಬರೆಯುವಾಗ ಮಸ್ಕ್ ಮಾಡುತ್ತಿದ್ದ ಕಿತಾಪತಿಗಳು ಕೆಲವೊಮ್ಮೆ ಐಸಾಕ್ಸನ್‌ರನ್ನು ಪೇಚಿಗೆ ಸಿಲುಕಿಸುತ್ತಿದ್ದವು.

ಕಾರಣ, ಜಗತ್ತಿನ ಅತಿದೊಡ್ಡ ಶ್ರೀಮಂತ ಮಾಡುವ ಟ್ವೀಟ್‌ಗಳು ಕ್ಷಣಾರ್ಧದಲ್ಲಿ ಕೋಟ್ಯಂತರ ಜನರನ್ನು ತಲುಪಿ, ಅವರಿಂದ ಓತಪ್ರೋತ ಪ್ರತಿಕ್ರಿಯೆ ಪಡೆಯುತ್ತಿದ್ದವು. ಏಪ್ರಿಲ್‌ನಲ್ಲೊಮ್ಮೆ ಮಸ್ಕ್, ‘ಟೆಸ್ಲಾ, ಸ್ಟಾರ್‌ಲಿಂಕ್ ಮತ್ತು ಟ್ವಿಟರ್ ಈ ಮೂರರ ಕಾರಣದಿಂದಾಗಿ ನನ್ನ ತಲೆಯಲ್ಲಿ ಜಾಗತಿಕ ಆರ್ಥಿಕತೆಗೆ ಸಂಬಂಧಿಸಿ ಜಗತ್ತಿನ ಇನ್ನಾವುದೇ ವ್ಯಕ್ತಿಗಿಂತ ಹೆಚ್ಚು ರಿಯಲ್‌ಟೈಮ್ ಡೇಟಾ ಸಂಗ್ರಹವಾಗಿರಬಹುದು’ ಎಂದು ಟ್ವೀಟ್ ಮಾಡಿದ್ದರು!

ವಿಲಕ್ಷಣ ವ್ಯಕ್ತಿ ಮಸ್ಕ್‌ಗೆ ದಡ್ಡ ಶ್ರೀಮಂತರೆಂದರೆ ಅಸೀಮ ತಿರಸ್ಕಾರ, ತಮ್ಮ ಸ್ಟೇಟಸ್ ಕಾಪಾಡಿಕೊಳ್ಳಲು ಈ ಶ್ರೀಮಂತರು ಮಾಡುವ ಕಸರತ್ತುಗಳ ಬಗ್ಗೆ ಅಪಾರ ಅನುಕಂಪ! ಟ್ವಿಟರನ್ನು ಖರೀದಿಸಿದ ಮೇಲೆ ಮಾಧ್ಯಮಗಳಿಗೆ ತಮ್ಮ ಬ್ಲೂಟಿಕ್ ಕೂಡ ಉಳಿಸಿಕೊಳ್ಳಲು ಬಿಡದ ಅವರಿಗೆ ಸೆಲೆಬ್ರಿಟಿಗಳು- ಕೋಟ್ಯಧಿಪತಿಗಳ ಜತೆ ಓಡಾಡುತ್ತ ಪಾರ್ಟಿ ಮಾಡುವುದೆಂದರೆ ಇಷ್ಟ. ಹೊರಗೆ ಕಾಣಿಸಿಕೊಂಡಾಗ ಏನಾದರೂ ಎಡವಟ್ಟು ಮಾಡಿಕೊಳ್ಳುವುದೂ ಅವರ ಜಾಯಮಾನವೇ; ಸರಿಯಾಗಿ ಬೆಳವಣಿಗೆ ಹೊಂದಿಲ್ಲದ ಅತಿಬುದ್ಧಿವಂತ ಮಕ್ಕಳಿರ‍್ತಾರಲ್ಲ, ಹಾಗೆ. ‘ಮಸ್ಕ್‌ರ ಜೋಕುಗಳಲ್ಲಿ ಬರೀ ೬೯, ಸೆಕ್ಸ್, ಮೂತ್ರ, ಅಮೇಧ್ಯ, ಹೂಸು, ಡ್ರಗ್ಸ್ ನಂಥ ವಿಷಯಗಳೇ ಇರುತ್ತವೆ.

ಜತೆಗಿರುವ ಸಂಭಾವಿತರಿಗೆ ಮುಜುಗರ ಮಾಡಲು ಬೇಕಾಗುವಂಥದ್ದೆಲ್ಲ ಅವರ ಮಾತಿನಲ್ಲಿ ತುಂಬಿರುತ್ತವೆ’ ಎನ್ನುತ್ತಾರೆ ಐಸಾಕ್ಸನ್. ಇಂಥ ವಿಲಕ್ಷಣ ಆಯಾಮ
ಗಳ ಉಲ್ಲೇಖ ಈ ಜೀವನಚರಿತ್ರೆಯಲ್ಲಿದೆ ಎಂಬುದು ನಿಮ್ಮ ಗಮನಕ್ಕೆ. ಐಸಾಕ್ಸನ್ ಅಲ್ಲದೆ ಇನ್ನಾರೂ ಮಸ್ಕ್ ರನ್ನು ತಾಳಿಕೊಳ್ಳಲು ಸಾಧ್ಯವಿರಲಿಲ್ಲ.
ಪತ್ರಕರ್ತನಾಗಿ, ಪ್ರತಿಭಾವಂತ ಉದ್ಯಮಿಯಾಗಿ ತಮಗೆ ಬೇಕಾದ್ದನ್ನು ತಿಳಿದುಕೊಳ್ಳುವಲ್ಲಿ ಮತ್ತು ಪಡೆದುಕೊಳ್ಳುಲ್ಲಿ ಐಸಾಕ್ಸನ್ ಸಮರ್ಥರು. ಈ ಗುಣಗಳೇ ಅವರೊಳಗಿನ ದೈತ್ಯನಿಗೆ ಆಹಾರವಾಗಿದ್ದರೆ ಬಹುಶಃ ಅದರಿಂದಾಗಿಯೇ ಮಸ್ಕ್‌ರಂಥವರ ಜೀವನಚರಿತ್ರೆಯನ್ನೂ ಯಶಸ್ವಿಯಾಗಿ ಬರೆಯಲು ಅವರಿಂದ ಸಾಧ್ಯವಾಗಿದೆ.

ಮಸ್ಕ್ ಜತೆ ಐಸಾಕ್ಸನ್ ಒಡನಾಟ ಶುರುವಾಗಿದ್ದು ೨೦೨೧ರಲ್ಲಿ. ಆಗಿನ್ನೂ ಎಂಜಿನಿಯರ್ ಆಗಿ ಮಸ್ಕ್ ಹೆಚ್ಚು ಸುದ್ದಿಯಲ್ಲಿದ್ದರೇ ವಿನಾ, ಈಗಿನಂತೆ ವಿವಾದಗಳಲ್ಲಿ ಮುಳುಗಿರಲಿಲ್ಲ. ಟೆಸ್ಲಾ ಮತ್ತು ಸ್ಪೇಸೆಕ್ಸ್‌ನ ಯಶಸ್ಸಿನಿಂದಾಗಿ ಜಗತ್ತಿನ ಅತಿದೊಡ್ಡ ಶ್ರೀಮಂತನಾಗಿದ್ದ ಅವರನ್ನು ‘ಟೈಮ್’ ನಿಯತಕಾಲಿಕವು ೨೦೨೧ರ ವರ್ಷದ ವ್ಯಕ್ತಿ ಎಂದು ಬಣ್ಣಿಸಿ, ‘ಈತ ನಮ್ಮ ಭೂಮಿಯನ್ನು ಉಳಿಸಲು, ನಮಗೆ ಇನ್ನೊಂದು ಗ್ರಹವನ್ನು ಪತ್ತೆಹಚ್ಚಿಕೊಡಲು ಬಯಸುತ್ತಾರೆ’ ಎಂದು ಬರೆದಿತ್ತು. ಬಹುಶಃ ಈ ಪ್ರಸಿದ್ಧಿಯನ್ನು ಕಂಡೇ, ತನ್ನ ಬಗ್ಗೆ ಪುಸ್ತಕವೊಂದನ್ನು ಬರೆಸಲು ಇದೇ ಸೂಕ್ತಸಮಯ ಎಂದು ಮಸ್ಕ್ ಯೋಚಿಸಿರಬೇಕು. ಆಗ ಅವರಿಗೆ ಹೊಳೆದಿದ್ದೇ ಐಸಾಕ್ಸನ್. ಕಾರಣ, ಅಮೆಜಾನ್‌ನಲ್ಲಿ ಐಸಾಕ್ಸನ್‌ರ ಫ್ರಾಂಕ್ಲಿನ್, ಐನ್‌ಸ್ಟೀನ್ ಮತ್ತು ಡಾ ವಿನ್ಸಿ ಕೃತಿಗಳು ‘ದಿ ಜೀನಿಯಸ್ ಬಯಾಗ್ರಫೀಸ್’ ಹೆಸರಲ್ಲಿ ಒಂದೇ ಪ್ಯಾಕೇಜ್
ನಲ್ಲಿ ಮಾರಾಟವಾಗುತ್ತವೆ. ಈ ಸಾಧಕರೊಂದಿಗೆ ತಾನೂ ಸೇರಿಕೊಳ್ಳಬಾರದೇಕೆ ಎಂದು ಮಸ್ಕ್‌ಗೆ ಅನ್ನಿಸಿರಬಹುದು.

ನಂತರದ ಬೆಳವಣಿಗೆಗಳು ಮಜವಾಗಿವೆ. ಜೀವನಚರಿತ್ರೆ ಬಗ್ಗೆ ಐಸಾಕ್ಸನ್ ಮತ್ತು ಮಸ್ಕ್ ಫೋನ್‌ನಲ್ಲೇ ಸುಮಾರು ೧ ತಾಸು ಚರ್ಚಿಸಿದರು. ಆಗ ಐಸಾಕ್ಸನ್, ‘ನೀವು ನಡೆಸುವ ಸಭೆಗಳು, ನಿಮ್ಮ ಕಾರ್ಖಾನೆಯ ಅಸೆಂಬ್ಲಿಲೈನ್ ಹೀಗೆ ಎಲ್ಲೆಡೆ ನಾನು ಭೇಟಿನೀಡುತ್ತೇನೆ. ನಿಮ್ಮ ಮಾಜಿ ಪತ್ನಿ, ಪ್ರೇಯಸಿಯರು, ಮಕ್ಕಳು, ಶತ್ರುಗಳು, ನೌಕರರನ್ನೂ ಸಂದರ್ಶಿಸುತ್ತೇನೆ. ಇಂಥ ವಿಷಯ ಬರೆಯುವಂತಿಲ್ಲ ಎಂದು ನೀವು ನನಗೆ ಹೇಳಬಾರದು; ಏನು ಬರೆಯಬೇಕು/ಬರೆಯಬಾರದು
ಎಂಬುದು ನನಗೆ ಬಿಟ್ಟದ್ದು’ ಎಂದು ಷರತ್ತು ಹಾಕಿದರು. ಅದಕ್ಕೆ ಮಸ್ಕ್ ಗೋಣುಹಾಕಿದರು.

ಫೋನ್ ಮಾತುಕತೆ ಮುಗಿಯಿತು. ೨೦ ನಿಮಿಷದ ನಂತರ ಐಸಾಕ್ಸನ್‌ರ ಫೋನ್ ‘ಕಿಣಿಕಿಣಿ’ ಎಂದಿತು. ತೆರೆದು ನೋಡಿದರೆ, ‘ನಿಮಗೆ ಟೆಸ್ಲಾ, ಸ್ಪೇಸೆಕ್ಸ್ ಹಾಗೂ ನನ್ನ ಬಗ್ಗೆ ಕುತೂಹಲವಿದೆ ಅಂತಾದರೆ, ಐಸಾಕ್ಸನ್ ನನ್ನ ಜೀವನಚರಿತ್ರೆ ಬರೆಯುತ್ತಿದ್ದಾರೆ’ ಎಂಬುದಾಗಿ ಮಸ್ಕ್ ಟ್ವೀಟ್ ಮಾಡುತ್ತಿದ್ದರು! ಇಂಥ ‘ಅನ್ಪ್ರೆಡಿಕ್ಟಬಲ್ ಆಸಾಮಿ’ ಮಸ್ಕ್! ಕೃತಿರಚನೆಯ ಹಂತದಲ್ಲಿ ಐಸಾಕ್ಸನ್ ಒಂದಷ್ಟು ವಿಲಕ್ಷಣ ಬೆಳವಣಿಗೆಗಳಿಗೆ ಸಾಕ್ಷಿಯಾಗಬೇಕಾಯಿತು. ಸಾಕಷ್ಟು ರಾಜಕೀಯ ಸಂಪರ್ಕಗಳನ್ನು ಹೊಂದಿರುವ ನ್ಯೂ ಒರ್ಲೀನ್ಸ್‌ನ ಆನಿ ಮಿಲ್ಲಿಂಗ್ ಎಂಬ ಶ್ರೀಮಂತೆ ಐಸಾಕ್ಸನ್ ಬಳಿ ಬಂದು, ‘ನೀವೀಗ ಬರೆಯುತ್ತಿರುವ ಜೀವನಚರಿತ್ರೆಯ ವಸ್ತು
ನನಗಿಷ್ಟವಾಗಲಿಲ್ಲ; ಆತನ ಮೌಲ್ಯಗಳೇ ಸರಿಯಿಲ್ಲ’ ಎಂದು ನೇರಾನೇರ ಅಸಮಾಧಾನ ವ್ಯಕ್ತಪಡಿಸಿದರು.

ಆಗ ಐಸಾಕ್ಸನ್, ‘ಮಸ್ಕ್ ಟ್ವೀಟ್ ಮಾಡುವ ಕೆಲ ವಿಷಯಗಳು ನಿಮಗಿಷ್ಟವಾಗದಿರಬಹುದು. ಆದರೆ ಜಗತ್ತಿನ ಎಲ್ಲಾ ದೇಶಗಳ ಎಲ್ಲಾ ಬಾಹ್ಯಾಕಾಶ ಸಂಶೋಧನಾ ಕೇಂದ್ರಗಳು ಈ ವರ್ಷ ಅಂತ ರಿಕ್ಷಕ್ಕೆ ಕಳುಹಿಸಿದ ಒಟ್ಟು ಉಪಗ್ರಹಗಳಿಗಿಂತ ಹೆಚ್ಚು ಉಪಗ್ರಹ ಮತ್ತು ಗಗನನೌಕೆಗಳನ್ನು ಮಸ್ಕ್ ಒಬ್ಬರೇ ಅಂತರಿಕ್ಷಕ್ಕೆ ಕಳುಹಿ
ಸಿದ್ದಾರೆ. ಅವರು ಕಟ್ಟಿ ಬೆಳೆಸಿದ ಕಾರು ಕಂಪನಿಯ ಮೌಲ್ಯವು ವಿಶ್ವದ ಇನ್ನಿತರ ೯ ಪ್ರತಿಷ್ಠಿತ ಕಾರು ಕಂಪನಿಗಳ ಒಟ್ಟು ಮೌಲ್ಯಕ್ಕಿಂತ ದೊಡ್ಡದು’ ಎಂದರು. ಅದಕ್ಕೆ ಆನಿ, ‘ನಾನೂ ಅದನ್ನು ಮೆಚ್ಚುತ್ತೇನೆ; ಆದರೆ ಅವರ ಮೌಲ್ಯಗಳೇ ಬೇರೆ, ನನ್ನವೇ ಬೇರೆ. ಹೀಗಾಗಿ ನನಗೆ ಅವರನ್ನು ಕಂಡರಾಗುವುದಿಲ್ಲ’ ಎಂದರು.

ಆಗ ಐಸಾಕ್ಸನ್, ‘ಆದರೆ ನೀವು ಮಂಗಳ ಗ್ರಹಕ್ಕೆ ರಾಕೆಟ್ ಕಳಿಸಿದ್ದೀರಾ?’ ಎಂದು ಕೇಳಿದ್ದಕ್ಕೆ ಆನಿಸಿಡಿಮಿಡಿಗೊಂಡು, ‘ನಿಮ್ಮ ತಲೆ! ರಾಕೆಟ್ ಕಟ್ಟಿಕೊಂಡು
ನಾನೇನು ಮಾಡಲಿ!’ ಎಂದು ಅಬ್ಬರಿಸಿ ನಿರ್ಗಮಿಸಿದರು! ಐಸಾಕ್ಸನ್ ಈ ಪುಸ್ತಕ ಬರೆಯಲು ಶುರುಮಾಡಿದಾಗಿನಿಂದ ಮಸ್ಕ್‌ರ ಆಪ್ತರನೇಕರು ಹೀಗೆ ದೂರಿದ್ದಿದೆ. ಏಕೆಂದರೆ ಮಸ್ಕ್ ರನ್ನು ಕಂಡರೆ ತುಂಬಾ ಜನರಿಗೆ ಆಗುವುದಿಲ್ಲ. ಅದಕ್ಕೆ ತರ ಹೇವಾರಿ ಕಾರಣಗಳಿವೆ. ಕೆಲವರಿಗೆ ಮಸ್ಕ್‌ರ ಜೋಕುಗಳು ಇಷ್ಟವಾಗುವುದಿಲ್ಲ. ಇನ್ನು ಕೆಲವರ ಕಣ್ಣಲ್ಲಿ ಮಸ್ಕ್ ಒಬ್ಬ ಕಂತ್ರಿ, ಸಲಿಂಗಕಾಮಿಗಳ ವಿರೋಧಿ, ಯಹೂದಿಗಳನ್ನು ಕಂಡ ರಾಗದವನು. ಆದರೆ ಮಸ್ಕ್ ಬಗ್ಗೆ ಇನ್ನೂ ಯಾವ ನಿರ್ಧಾ
ರಕ್ಕೂ ಬರದಿರುವವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಎಂಬುದು ಐಸಾಕ್ಸನ್‌ರ ಲೆಕ್ಕಾಚಾರ. ಅವರೆಲ್ಲ ಮಸ್ಕ್‌ರ ಸಾಧನೆ ನೋಡಿ ನಿಬ್ಬೆರಗಾಗಿದ್ದು, ಅವರ ಬಗ್ಗೆ ಹೆಚ್ಚೆಚ್ಚು ತಿಳಿದುಕೊಳ್ಳಲು ತವಕಿಸುತ್ತಿದ್ದಾರೆ, ಪುಸ್ತಕ ಬರುವುದಕ್ಕೇ ಕಾಯುತ್ತಿದ್ದಾರೆ.

ಮಸ್ಕ್ ಅನೇಕ ಸಲ ಪೇಚಿಗೆ ಸಿಲುಕಿದ ಅಥವಾ ಎಡವಟ್ಟು ಮಾಡಿಕೊಂಡು ಸಿಕ್ಕಿಬಿದ್ದ ಘಟನೆಗಳೂ ಈ ಪುಸ್ತಕದಲ್ಲಿವೆ. ತಮ್ಮ ಒಡೆತನದ ನ್ಯೂರಾಲಿಂಕ್ ಕಂಪನಿಯ (ಇದು ಮಿದುಳಿನೊಳಗೆ ಅಳವಡಿಸುವ ಕಂಪ್ಯೂಟರ್ ಚಿಪ್‌ಗಳನ್ನು ಅಭಿವೃದ್ಧಿಪಡಿಸುತ್ತಿದೆ) ಎಕ್ಸಿಕ್ಯುಟಿವ್ ಶಿವೋನ್ ಜಿಲಿಸ್ ಎಂಬಾಕೆಗೆ ಮಸ್ಕ್ ವೀರ್ಯದಾನ ಮಾಡಿದ್ದರು. ಮಸ್ಕ್‌ರ ಪತ್ನಿ ಗ್ರೈಮ್ಸ್‌ಗೆ ತಿಳಿಸದೆಯೇ ತಾನು ಅವನ ಇಬ್ಬರು ಮಕ್ಕಳಿಗೆ ತಾಯಿಯಾಗಬೇಕೆಂದು ಜಿಲಿಸ್ ಬಯಸಿದ್ದಳು. ಗ್ರೈಮ್ಸ್‌ಗೆ
ಅಷ್ಟೊತ್ತಿಗಾಗಲೇ ಮಸ್ಕ್‌ನಿಂದ ಇಬ್ಬರು ಮಕ್ಕಳಿದ್ದರು. ಗರ್ಭಧಾರಣೆಯ ವೇಳೆ ಏನೋ ತೊಂದರೆಯಾಗಿ ಜಿಲಿಸ್ ಆಸ್ಟಿನ್‌ನ ಆಸ್ಪತ್ರೆಯಲ್ಲಿದ್ದಾಗ, ಅಲ್ಲೇ ಪಕ್ಕದ ಕೋಣೆಯಲ್ಲಿ ಗ್ರೈಮ್ಸ್ ಮತ್ತು ಮಸ್ಕ್‌ರ ಮಗುವನ್ನು ಹೊಟ್ಟೆಯೊಳಗಿರಿಸಿಕೊಂಡಿದ್ದ ಸರೋಗೇಟ್ ತಾಯಿಯೂ ಇದ್ದಳು! ಅಲ್ಲಿಗೆ ಬಂದುಹೋಗುತ್ತಿದ್ದ ಗ್ರೈಮ್ಸ್‌ಗೂ, ಅಲ್ಲೇ ಚಿಕಿತ್ಸೆ ಪಡೆಯುತ್ತಿದ್ದ ಜಿಲಿಸ್‌ಗೂ ಪರಿಚಯವಾಗಿತ್ತು.

ಜಿಲಿಸ್ ಹೊಟ್ಟೆಯಲ್ಲಿ ಮಸ್ಕ್‌ನ ಮಕ್ಕಳು ಬೆಳೆಯುತ್ತಿರುವುದು ಗ್ರೈಮ್ಸ್‌ಗೆ ಗೊತ್ತಿರಲಿಲ್ಲ. ನಂತರ ಈ ವಿಷಯ ತಿಳಿದಾಗ ಗ್ರೈಮ್ಸ್ ಕೂಗಾಡಿ ರಂಪಾಟ ಮಾಡಿದ್ದಳು. ತನಗೆ ಮಸ್ಕ್‌ನಿಂದ ಹುಟ್ಟಿದ ಗಂಡುಮಗುವಿಗೆ ಆಕೆ ‘ಎಕ್ಸ್’ ಎಂದೂ, ಹೆಣ್ಣು ಮಗುವಿಗೆ ‘ವೈ’ ಎಂದೂ, ನಂತರ ಹುಟ್ಟಿದ ಗಂಡುಮಗುವಿಗೆ ‘ಟೆಕ್ನೋ ಮೆಕ್ಯಾನಿಕಸ್’ ಎಂದೂ ಹೆಸರಿಟ್ಟಿದ್ದಳು. ಈ ಮಕ್ಕಳನ್ನು, ಜಿಲಿಸ್ ಮತ್ತು ಮಸ್ಕ್‌ಗೆ ಹುಟ್ಟಿದ ಮಕ್ಕಳ ಜತೆ (ಗಂಡು ಮಗುವಿಗೆ ಸ್ಪ್ರೈಡರ್ ಶೇಖರ್ ಎಂದೂ, ಹೆಣ್ಣು ಮಗುವಿಗೆ ಅಜೂರ್ ಆಸ್ಟ್ರಾ ಅಲೈಸ್ ಎಂದೂ ಹೆಸರು) ಆಟವಾಡಲು ಬಿಡೋದಿಲ್ಲ ಎಂದು ಗ್ರೈಮ್ಸ್ ಹೇಳಿದ್ದಳು. ಇದರ ಬಗ್ಗೆ ಐಸಾಕ್ಸನ್ ಮಜವಾಗಿ ಬರೆದಿದ್ದಾರೆ. ಹಾಲಿವುಡ್‌ನ ಪ್ರಸಿದ್ಧ ನಟಿ ಅಂಬರ್ ಹರ್ಡ್ ಜತೆಗಿನ ಮಸ್ಕ್‌ರ ರೋಚಕ ಸಂಬಂಧದ ಬಗ್ಗೆಯೂ ಈ ಕೃತಿಯಲ್ಲಿ ಉಲ್ಲೇಖವಿದೆ.

ನಿಂತಲ್ಲಿ ನಿಲ್ಲದೆ ಸದಾ ಅಲ್ಲಿಂದಿಲ್ಲಿಗೆ ಓಡಾಡುತ್ತಲೇ ಇರುವ ಚಂಚಲಶೀಲ ಮಸ್ಕ್‌ರ ಹಿಂದೆ ಐಸಾಕ್ಸನ್ ಕೂಡ ಪುಸ್ತಕ ರಚನೆಯ ಅನಿವಾರ್ಯತೆಯಿಂದಾಗಿ ಪ್ರತಿ ತಿಂಗಳು ಸುತ್ತಾಡಿದ್ದಿದೆ. ಲಾಸ್ ಏಂಜಲೀಸ್‌ನಲ್ಲಿನ ಸ್ಪೇಸೆಕ್ಸ್ ಕಾರ್ಖಾನೆ, ಅಲ್ಲಿಂದ ಫ್ರೀಮಾಂಟ್‌ನಲ್ಲಿನ ಟೆಸ್ಲಾ ಕಾರ್ಖಾನೆ, ತರುವಾಯ ಟೆಕ್ಸಾಸ್‌ನ ಬೋಕಾಚಿಕಾದಲ್ಲಿನ ಸ್ಟಾರ್‌ಶಿಪ್ ಲಾಂಚ್ ಹೀಗೆ ಮಸ್ಕ್‌ರ ಹಿಂದೆ ಐಸಾಕ್ಸನ್ ಬಿಡುವಿಲ್ಲದೆ ತಿರುಗಾಡಿದ್ದಾರೆ. ಎಲ್ಲದರ ಬಗ್ಗೆಯೂ ಪ್ರಶ್ನೆ ಕೇಳಿ ಕೇಳಿ ಮಸ್ಕ್‌ರ ತಲೆತಿನ್ನುವುದ ಕ್ಕಿಂತ ಅವರೊಂದಿಗೆ ಸ್ವತಃ ಓಡಾಡಿ ಎಲ್ಲವನ್ನೂ ಗಮನಿಸಿ ಅರಿಯುವುದೇ ಒಳ್ಳೆಯದೆಂದು ಅವರು ಹೀಗೆ ಮಾಡಿದ್ದಂತೆ.

ಎಲಾನ್ ಮಸ್ಕ್ ಅಪ್ಪಟ ಪ್ಲೇಬಾಯ್, ಜತೆಗೆ ಅತಿದೊಡ್ಡ ಶ್ರೀಮಂತ ಬೇರೆ. ಪಾರ್ಟಿ ಮಾಡುವುದರಲ್ಲಿ ನಿಸ್ಸೀಮನಾ ದರೂ ಐಸಾಕ್ಸನ್ ಜತೆ ಎಂದಿಗೂ ಪಾರ್ಟಿ ಮಾಡಲಿಲ್ಲ. ಐಸಾಕ್ಸನ್ ಹೇಳುವ ಪ್ರಕಾರ, ಎಲಾನ್ ಮಸ್ಕ್ ಎಂಬ ವ್ಯಕ್ತಿ ಒಬ್ಬನೇ ಅಲ್ಲ, ಅದು ಏಳೆಂಟು ವ್ಯಕ್ತಿತ್ವಗಳ ಸಂಗಮ. ಮೀಮ್‌ಗಳನ್ನು ಹಚ್ಚಿ ಎಸೆಯುವ, ಮಸ್ಕ್, ಮೂರ್ಖನಂತಾಡುವ ಮಸ್ಕ್, ಎಂಜಿನಿಯರಿಂಗ್ ಮೋಡ್‌ನಲ್ಲಿರುವ ಮಸ್ಕ್, ಅಪ್ಪಟ ವ್ಯಾಪಾರೋದ್ಯಮಿ ಮಸ್ಕ್ ಹೀಗೆ ವೈವಿಧ್ಯ ಮಯ ಮುಖಗಳನ್ನು ಕಂಡಿರುವ ಐಸಾಕ್ಸನ್‌ಗೆ ‘ಎಂಜಿನಿಯರ್ ಮಸ್ಕ್’ ಬಹಳ ಇಷ್ಟವಂತೆ.

‘ಒಮ್ಮೆ ಯಾವುದೋ ರಾಕೆಟ್ ಮಾದರಿ ಸರಿಯಾಗಿಲ್ಲ ಎಂಬ ಚರ್ಚೆ ನಡೆಯುತ್ತಿದ್ದಾಗ ಮಸ್ಕ್ ಅಲ್ಲಿಗೆ ತೆರಳಿ ಒಂದು ವಾಲ್ವ್‌ನ ವಿನ್ಯಾಸ ಬದಲಿಸುವಂತೆ ಹೇಳುತ್ತಾರೆ; ಹಾಗೆ ಮಾಡಿ ಪರೀಕ್ಷೆ ನಡೆಸಿ ದಾಗ ಅದು ಸರಿಯಾಗಿಬಿಡುತ್ತದೆ! ಅಂಥ ಸರ್‌ಪ್ರೈಸ್‌ಗಳನ್ನು ನೀಡುವ ಮಸ್ಕ್ ನನಗಿಷ್ಟ. ಕೆಲವೊಮ್ಮೆ ಅವರು ನಿಷ್ಕರುಣಿ ಯಂತೆ ನಡೆದುಕೊಳ್ಳುವುದನ್ನೂ ಕಂಡಿರುವೆ; ಆದರೆ ಅವರಲ್ಲಿ ಆ ಕರುಣೆಯ ಜೀನ್‌ನ ಕೊರತೆಯಿರುವುದರಿಂದಲೇ ಮಸ್ಕ್ ಇಷ್ಟು ದೊಡ್ಡ ಉದ್ಯಮ ಸಾಮ್ರಾಜ್ಯವನ್ನು ಕಟ್ಟಲು ಸಾಧ್ಯವಾಗಿದೆ’ ಎಂದು ಹೇಳಿಕೊಂಡಿದ್ದಾರೆ ಐಸಾಕ್ಸನ್. ಕತೆ ಹೇಳಿದಂತೆ ಮಸ್ಕ್ ಬಗ್ಗೆ ಈ ಕೃತಿಯಲ್ಲಿ ಬರೆದುಕೊಂಡು ಹೋಗಿರುವ
ಐಸಾಕ್ಸನ್ ಎಲ್ಲೂ ಉಪದೇಶಿಸುವುದಕ್ಕೆ ಹೋಗಿಲ್ಲ ಎಂಬುದು ಗಮನಾರ್ಹ.

‘ಮಸ್ಕ್ ತಮಗೆ ತೋಚಿದ್ದನ್ನೆಲ್ಲಾ ಟ್ವೀಟ್ ಮಾಡುತ್ತಿರುತ್ತಾರೆ. ಹೆಚ್ಚಿನ ಸಲ ಅವರು ಹೇಳುವುದಕ್ಕೂ, ಮಾಡುವ ಟ್ವೀಟ್‌ಗಳಿಗೂ ವೈರುಧ್ಯವಿರುತ್ತದೆ. ಹೀಗಿರುವಾಗ, ಸತತ ೨ ವರ್ಷಗಳ ಕಾಲ ಅವರು ಏನನ್ನು ಹೇಳಿದ್ದಾರೋ ಅದನ್ನೇ ಐಸಾಕ್ಸನ್ ಬರೆಯುವುದಕ್ಕೆ ಏನಾದರೂ ಬೆಲೆಯಿದೆಯೇ? ಇಷ್ಟಕ್ಕೂ ಮಸ್ಕ್ ಒಬ್ಬ ಸೆಲೆಬ್ರಿಟಿಯಾಗಿರುವುದರಿಂದ ಆ ‘ಸ್ಟೇಟಸ್’ ಅನ್ನು ಮತ್ತು ತಮ್ಮ ಅಭಿಮಾನಿಗಳನ್ನು ಉಳಿಸಿಕೊಳ್ಳಲು ಅವರು ನಿರಂತರ ಕಸರತ್ತು ಮಾಡುತ್ತಿರುತ್ತಾರೆ.
ಅಂದರೆ ಅವರು ಸಾರ್ವಜನಿಕ ಜೀವನದಲ್ಲೂ ನಟಿಸುತ್ತಿದ್ದಾರೆ. ಒಬ್ಬನ ಜೀವನಚರಿತ್ರೆಯನ್ನೂ ಎಷ್ಟೇ ಪ್ರಾಮಾಣಿಕವಾಗಿ ಬರೆಯುತ್ತೇನೆ ಎಂದು ಹೇಳಿಕೊಂಡರೂ, ಜೀವನಚರಿತ್ರೆ ಬರೆಸಿಕೊಳ್ಳುವ ವ್ಯಕ್ತಿಯೇ ಸಂಪೂರ್ಣ ಅಸಲಿ ಅಲ್ಲದಿದ್ದರೆ ಜೀವನಚರಿತ್ರೆ ಅಸಲಿಯಾಗಲು ಸಾಧ್ಯವೇ?’ ಎಂದು ಪ್ರಶ್ನಿಸುವವರೂ ಇದ್ದಾರೆ. ಇದಕ್ಕೆ ಐಸಾಕ್ಸನ್‌ರ, ‘ಜನರಿಗೆ ಮಸ್ಕ್ ಬಗ್ಗೆ ಅಭಿಮಾನವಿದ್ದರೆ, ಈ ಪುಸ್ತಕ ಓದಿದ ನಂತರ ಅವರನ್ನು ಇಷ್ಟಪಡುವುದಕ್ಕೆ ಇನ್ನಷ್ಟು ಕಾರಣಗಳು ಸಿಗುತ್ತವೆ; ಅವರು ಮಸ್ಕ್‌ರನ್ನು ದ್ವೇಷಿಸುತ್ತಿದ್ದರೆ ದ್ವೇಷಕ್ಕೆ ಇನ್ನಷ್ಟು ಕಾರಣಗಳು ಸಿಗುತ್ತವೆ’ ಎಂಬ ಸ್ಪಷ್ಟ ಅಭಿಮತ ಉತ್ತರವಾಗಬಲ್ಲದು.