ನೂರೆಂಟು ವಿಶ್ವ
ಅಮೆರಿಕದ ಹಿರಿಯ ಪತ್ರಕರ್ತ ವಾಲ್ಟರ್ ಐಸಾಕ್ಸನ್ ಅವರು ಕಟ್ಟಿಕೊಟ್ಟಿರುವ ವಿಶ್ವದ ನಂಬರ್ ೧ ಶ್ರೀಮಂತ ವ್ಯಕ್ತಿ ಎಲಾನ್ ಮಸ್ಕ್ರ ಜೀವಚರಿತ್ರೆಯಲ್ಲಿನ ರೋಚಕ ಸಂಗತಿಗಳ ಕುರಿತು ಹಿಂದಿನ ವಾರ ಈ ಅಂಕಣದಲ್ಲಿ ಪ್ರಸ್ತಾಪಿಸಿದ್ದೆ. ಓದುಗರಿಗೆ ಇಂಥದೊಂದು ರುಚಿಕಟ್ಟಾಗಿರುವ ಭಕ್ಷ್ಯವನ್ನು ಉಣಬಡಿಸಿರುವ ಕೃತಿಕಾರ ವಾಲ್ಟರ್ ಐಸಾಕ್ಸನ್ ಕುರಿತಾಗಿ ಈ ಬಾರಿ ಬರೆಯಬೇಕೆನಿಸಿತು. ಹೀಗಾಗಿ ಅವರ ಬಗೆಗಿನ ಒಂದಿಷ್ಟು ಹೂರಣವನ್ನು ನಿಮಗಿಲ್ಲಿ ನೀಡಿರುವೆ.
ಈ ಹಿಂದೆಯೇ ಉಲ್ಲೇಖಿಸಿರುವಂತೆ, ೧೯೯೦ರ ದಶಕದಲ್ಲಿ ಸುದೀರ್ಘ ಅವಽಗೆ ಅಮೆರಿಕದ ‘ಟೈಮ್’ ನಿಯತ ಕಾಲಿಕದ ಸಂಪಾದಕರಾಗಿದ್ದ ಐಸಾಕ್ಸನ್, ೯/೧೧ರ ಭಯೋತ್ಪಾದಕ ದಾಳಿ ಸಂಭವಿಸಿದಾಗ ವಿಶ್ವಪ್ರಸಿದ್ಧ ‘ಸಿಎನ್ಎನ್’ ಸುದ್ದಿವಾಹಿನಿಯ ಮುಖ್ಯಸ್ಥರಾಗಿದ್ದರು. ೨೦೦೩ರಲ್ಲಿ ಆಸ್ಟೆನ್ ಇನ್ಸ್ಟಿಟ್ಯೂಟ್ ಸೇರಿ ೧೪ ವರ್ಷ ಮುಂಚೂಣಿ ಹುದ್ದೆಯಲ್ಲಿದ್ದವರು. ಹೆನ್ಸಿ ಕಿಸಿಂಜರ್, ಬೆಂಜಮಿನ್ ಫ್ರಾಂಕ್ಲಿನ್, ಆಲ್ಬರ್ಟ್ ಐನ್ಸ್ಟೀನ್ ಸೇರಿದಂತೆ ಹತ್ತು ಹಲವು ಗಣ್ಯರ ಜೀವನಚರಿತ್ರೆಗಳನ್ನು ಬರೆದಿರುವ ಅಕ್ಷರಬ್ರಹ್ಮ ಇವರು. ಇಂಥ ಐಸಾಕ್ಸನ್ಗೆ ಈಗ ೭೧ರ ಹರೆಯ.
ಲೂಸಿಯಾನಾದಲ್ಲಿ ಸರಳವಾಗಿ ಬದುಕುತ್ತಿದ್ದಾರೆ. ಎಲ್ಲರ ಕೈಗೂ ಸಿಗುತ್ತಾರೆ. ಹಾರ್ವರ್ಡ್ನಲ್ಲಿ ಓದಿದ, ರೋಡ್ಸ್ ಸ್ಕಾಲರ್ಶಿಪ್ ಪಡೆದ, ಹಿಂದೊಮ್ಮೆ ಸಿಐಎ ಸೇರಲು ಹೋಗಿ ತಿರಸ್ಕೃತಗೊಂಡ ಹಳೆಯ ಶೈಲಿಯ ಮನುಷ್ಯ ನೀತ. ಇವಾನ್ ಥಾಮಸ್ ಜತೆ ಸೇರಿ ಅವರು ೧೯೮೬ರಲ್ಲಿ ಬರೆದ ಮೊದಲ ಪುಸ್ತಕ ‘ದಿ ವೈಸ್ ಮೆನ್’ನಲ್ಲಿ ನಾವು ಹಳೆಯ ಐಸಾಕ್ಸನ್ರನ್ನು ಪೂರ್ತಿಯಾಗಿ ನೋಡಬಹುದು. ಅವರಲ್ಲೊಂದು ಚಿನ್ನದ ರೋಲೋಡೆಕ್ಸ್ ವಾಚಿದೆ. ಈ ವಯಸ್ಸಿನಲ್ಲೂ ಪಾರ್ಟಿಗಳಲ್ಲಿ ತುಂಬಾ ಮುಕ್ತವಾಗಿ ಎಲ್ಲರ ಜತೆ ಬೆರೆತು ಮೋಜು ಮಾಡುತ್ತಾರೆ. ಅವರ ಸ್ನೇಹಿತನೂ, ಅವರ ಬಳಿಕ ‘ಟೈಮ್’ ನಿಯತಕಾಲಕದ ಉತ್ತರಾಧಿಕಾರಿಯೂ ಆದ ರಿಚರ್ಡ್ ಸ್ಟೆಂಗೆಲ್, ‘ಐಸಾಕ್ಸನ್ ಅವರು ಆಸ್ಪೆನ್ನಲ್ಲಿದ್ದಾಗ ಜಗತ್ತಿನ ಇತಿಹಾಸದಲ್ಲೇ ಅತ್ಯಂತ ಬುದ್ಧಿವಂತ ಆಡಳಿತಗಾರ ನಾಗಿದ್ದರು’ ಎಂದು ನೆನಪಿಸಿಕೊಳ್ಳು ತ್ತಾರೆ.
ಬಹುಶಃ, ಬಾಬ್ ವುಡ್ವರ್ಡ್ ಹಾಗೂ ಜಾನ್ ಬೆಲುಶಿ ಬಳಿಕ ಜತೆಯಾದ ಅತ್ಯಂತ ಅನುರೂಪವಲ್ಲದ ‘ಲೇಖಕ- ವಿಷಯ’ ಜೋಡಿ ಐಸಾಕ್ಸನ್ ಹಾಗೂ ಮಸ್ಕ್ ಇರಬಹುದು! ಐಸಾಕ್ಸನ್ ಅಲ್ಲದೆ ಇನ್ನಾರೂ ಮಸ್ಕ್ರನ್ನು ತಾಳಿಕೊಳ್ಳಲು ಸಾಧ್ಯವಿರಲಿಲ್ಲ ಬಿಡಿ. ಪತ್ರಕರ್ತನಾಗಿ ಹಾಗೂ ಪ್ರತಿಭಾವಂತ ಬಿಸಿನೆಸ್ಮನ್ ಆಗಿ ಐಸಾಕ್ಸನ್ ಯಾವಾಗಲೂ ತನಗೇನು ಬೇಕೋ ಅದನ್ನು ತಿಳಿದುಕೊಳ್ಳುವಲ್ಲಿ ಅಥವಾ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿರುವ ವ್ಯಕ್ತಿ. ಆ ಗುಣಗಳೇ ಅವರೊಳಗಿನ ದೈತ್ಯನಿಗೆ ಆಹಾರವಾಗಿದ್ದರೆ ಬಹುಶಃ ಅದರಿಂದಾಗಿಯೇ ಮಸ್ಕ್ರಂಥ ವ್ಯಕ್ತಿಯ ಜೀವನಚರಿತ್ರೆಯನ್ನೂ ಯಶಸ್ವಿಯಾಗಿ ಬರೆಯಲು ಅವರಿಂದ ಸಾಧ್ಯವಾಗಿದೆ.
‘ನೋಡಿ, ನಾನು ಮತ್ತು ಆತ ಬಹಳ ಡಿಫರೆಂಟ್. ನಾನು ಸುಂದರ ಬಾಲ್ಯದಿಂದ ಬಂದು ಮಾಧ್ಯಮ ಲೋಕದಲ್ಲಿ ಸೆಟ್ಲ್ ಆದವನು. ಮಸ್ಕ್ರ ಬಾಲ್ಯ ಕೆಟ್ಟದಾಗಿತ್ತು.
ಹೀಗಾಗಿ ಅವರಿಗೆ ಈಗಾಗಲೇ ಹೆಸರು ಮಾಡಿದ ಎಲ್ಲರ ಬಗ್ಗೆಯೂ ಭಯಾನಕ ಸಿಟ್ಟಿದೆ. ಅಂದರೆ, ಮೊದಲಿಗೆ ಅವರ ಮೈಂಡ್ಸೆಟ್ ಅರ್ಥ ಮಾಡಿಕೊಳ್ಳುವುದಕ್ಕೇ ನಾನು ಸಾಕಷ್ಟು ಕೆಲಸ ಮಾಡಬೇಕು. ಅದರ ಜತೆಗೆ, ನನ್ನಂಥವರು ತನ್ನ ಜೀವನ ಚರಿತ್ರೆ ಬರೆಯುತ್ತಿದ್ದಾರೆ ಎಂಬುದನ್ನು ಮಸ್ಕ್ ಕೂಡ ಸರಿಯಾಗಿ ಅರ್ಥ ಮಾಡಿಕೊಳ್ಳಬೇಕು’ ಎಂದು ಐಸಾಕ್ಸನ್ ಒಂದೆಡೆ ಹೇಳಿದ್ದಂಟು.
ನ್ಯೂಯಾರ್ಕ್ನ ಸೆಂಟ್ರಲ್ಪಾರ್ಕ್ ವೆಸ್ಟ್ನಲ್ಲಿ ಈಗಲೂ ಅವರದ್ದೊಂದು ಮನೆಯಿದೆ. ಆದರೆ ಐಸಾಕ್ಸನ್ ಹುಟ್ಟಿ ಬೆಳೆದಿದ್ದೆಲ್ಲ ನ್ಯೂ ಓರ್ಲೀನ್ಸ್ನಲ್ಲಿ. ಅವರ ತಂದೆ ಇಲೆಕ್ಟ್ರಿಕಲ್ ಎಂಜಿನಿಯರ್ ಹಾಗೂ ರಿಯಲ್ ಎಸ್ಟೇಟ್ ಏಜೆಂಟ್ ಆಗಿದ್ದರು. ತಾವು ಪತ್ರಕರ್ತರಾದದ್ದು, ತರುವಾಯ ಜೀವನ ಚರಿತ್ರೆಕಾರರಾಗಿ ಹೊರಹೊಮ್ಮಿದ್ದು ಹೇಗೆಂಬುದರ ಕುರಿತು ಐಸಾಕ್ಸನ್ ಒಂದು ಕತೆ ಹೇಳುತ್ತಾರೆ. ಅವರಿಗೊಬ್ಬ ಬಾಲ್ಯದ ಗೆಳೆಯನಿದ್ದನಂತೆ. ಅವನು ಕಾದಂಬರಿಕಾರ ವಾಕರ್ ಪರ್ಸಿಯ ಸಂಬಂಧಿಕ. ಅವನೊಮ್ಮೆ ಐಸಾಕ್ಸನ್ ಬಳಿ ‘ಲೂಸಿಯಾ ನಾದಿಂದ ಎರಡು ರೀತಿಯ ಜನರು ಬರುತ್ತಾರೆ.
ಒಬ್ಬರು ಉಪದೇಶ ಮಾಡುವವರು, ಇನ್ನೊಬ್ಬರು ಕತೆಗಾರರು. ಉಪ ದೇಶ ಮಾಡುವವರಿಗಿಂತ ಕತೆಗಾರನಾಗುವುದು ಒಳ್ಳೆಯದು!’ ಎಂದು ಹೇಳಿದ್ದನಂತೆ.
ಐಸಾಕ್ಸನ್ ಅವರ ಅಪ್ಪ ಮನೆಗೆ ‘ಟೈಮ್’ ಮತ್ತು ‘ಸಂಡೇ ರಿವ್ಯೂ’ ತರಿಸುತ್ತಿದ್ದರು. ‘ಬುಕ್ ಆಫ್ ದಿ ಮಂತ್’ ಕ್ಲಬ್ಗೂ ಅವರು ಸದಸ್ಯರಾಗಿದ್ದರು. ಹೈಸ್ಕೂಲ್ನ ಲ್ಲಿದ್ದಾಗ ಐಸಾಕ್ಸನ್ ‘ಸ್ಟೇಟ್ಸ್-ಐಟಮ್’ಗೆ ಬೇಸಿಗೆ ಕೆಲಸಕ್ಕೆ ಹೋಗುತ್ತಿದ್ದರು (ಅಲ್ಲೇ ಅವರು ‘ಅಮೆರಿಕನ್ ಸ್ಕೆಚಸ್’ ಎಂಬ ತಮ್ಮ ೨೦೦೯ರ ಕಿರು ಪ್ರೊಫೈಲ್ಗಳ ಕೃತಿಗೆ ಪೀಠಿಕೆ ಹಾಕಿದ್ದರು!). ‘ಜನರಿಗೆ ಮಾತನಾಡುವುದು ಇಷ್ಟ ಎಂಬುದೇ ಪತ್ರಿಕೋದ್ಯಮಕ್ಕಿರುವ ಕೀಲಿಕೈ’ ಎಂದು ಅಲ್ಲೇ ಅವರಿಗೆ ಮನವರಿಕೆಯಾಗಿತ್ತು. ಒಮ್ಮೆ ‘ಸಂಡೇ ಟೈಮ್ಸ್’ನ ಲಂಡನ್ ಆವೃತ್ತಿಯ ಸಂಪಾದಕ ಹೆರಾಲ್ಡ್ ಇವಾನ್ಸ್ ಅವರಿಗೆ ಐಸಾಕ್ಸನ್ ತಮ್ಮದೊಂದಷ್ಟು ‘ಸ್ಟೇಟ್ಸ್-ಐಟಮ್’ ಲೇಖನಗಳನ್ನು ಕಳುಹಿಸಿದರು. ಅವು ಇವಾನ್ಸ್ಗೆ ಮೆಚ್ಚುಗೆಯಾದವು.
ಅದು ೧೯೭೩ರ ಬೇಸಗೆ. ವಾಟರ್ಗೇಟ್ ಹಗರಣದ ಕಾಲವದು. ಬಹುಶಃ ಮುಂದೊಂದು ದಿನ ಐಸಾಕ್ಸನ್ ಕೂಡ ವುಡ್ವರ್ಡ್ ಅಥವಾ ಬನ್ ಸ್ಟೀನ್ ಆಗುತ್ತಾರೆಂದು ಇವಾನ್ಸ್ ಭಾವಿಸಿರಬಹುದು. ಹೀಗಾಗಿ ಐಸಾಕ್ಸನ್ಗೆ ‘ಸಂಡೇ ಟೈಮ್ಸ್’ ನಲ್ಲಿ ಕೆಲಸ ನೀಡಿ ತನಿಖಾ ತಂಡಕ್ಕೆ ಸೇರಿಸಿದರು. ಆದರೆ ಬಹಳ ಬೇಗ ಆ ಜಾಗ ತನ್ನದಲ್ಲ ಎಂಬುದು ಐಸಾಕ್ಸನ್ಗೆ ಮನವರಿಕೆಯಾಯಿತು. ‘ನನಗೆ ಜನರೆಂದರೆ ತುಂಬಾ ಇಷ್ಟ. ಹಾಗಿರುವಾಗ ಅವರನ್ನು ಹೇಗೆ ತನಿಖೆ ಮಾಡಲಿ?’
ಎಂದು ‘ಅಮೆರಿಕನ್ ಸ್ಕೆಚಸ್’ನಲ್ಲಿ ಮುಂದೊಮ್ಮೆ ಅವರು ಬರೆದಿದ್ದರು. ಆದರೆ ಇವಾನ್ಸ್ರ ಕೆಲಸ ನೋಡಿ ಅವರೊಂದಷ್ಟು ಹೊಸ ಸಂಗತಿಗಳನ್ನು ಕಲಿತರು. ನಂತರ ‘ಟೈಮ್ಸ್’ನಲ್ಲಿ ಕೆಲಸ ಮಾಡುವಾಗ ಹಾಗೂ ಜೀವನಚರಿತ್ರೆ ಬರೆಯುವಾಗ ಐಸಾಕ್ಸನ್ಗೆ ಅವು ಉಪಯೋಗಕ್ಕೆ ಬಂದವು. ಅಷ್ಟೊತ್ತಿಗೆ ಅವರು ಮಾಗಿದ್ದರು. ‘ನೀವು ಯಾರ ಬಗ್ಗೆ ಬರೆಯುತ್ತೀರೋ ಅವರ ವಿಶ್ವಾಸ ಉಳಿಸಿಕೊಂಡೇ ಅವರ ಬಗ್ಗೆ ತನಿಖೆಯನ್ನೂ ಮಾಡಲು ಸಾಧ್ಯವಿದೆ’ ಎಂದು ಐಸಾಕ್ಸನ್
ಈಗ ಹೇಳುತ್ತಾರೆ.
ಆಕ್ಸ್ ಫರ್ಡ್ನಲ್ಲಿ ರೋಡ್ಸ್ ಸ್ಕಾಲರ್ಶಿಪ್ ಪಡೆದು ಓದು ಮುಗಿಸಿದ ಬಳಿಕ ೨೪ನೇ ವರ್ಷಕ್ಕೆ ವಾಲ್ಟರ್ ನ್ಯೂ ಓರ್ಲೀನ್ಸ್ ಮತ್ತು ‘ಸ್ಟೇಟ್ಸ್-ಐಟಂ’ಗೆ ಮರಳಿದರು. ಅದು ನಂತರ ‘ಟೈಮ್ಸ್ ಪಕೆಯೂನ್’ನಲ್ಲಿ ವಿಲೀನವಾಯಿತು. ಅಲ್ಲಿ ಅವರಿಗೆ ೧೯ ವರ್ಷದ ಯುವ ವರದಿಗಾರನೊಬ್ಬ ಸ್ನೇಹಿತನಾಗಿದ್ದ. ಅವನ ಹೆಸರು ಡೀನ್ ಬಾಕ್ವೆಟ್. ‘ವಾಲ್ಟರ್ ಬೇರೆಯದೇ ತರ ಹದ ಮನುಷ್ಯ. ಆತ ಮಹತ್ವಾಕಾಂಕ್ಷಿ. ತಾನೇನಾಗಬೇಕು ಎಂಬುದರ ಬಗ್ಗೆ ಅವರಿಗೆ ಬಹಳ ಸ್ಪಷ್ಟತೆಯಿತ್ತು. ನಿಜವಾ
ಗಿಯೂ ಮಹತ್ವಾಕಾಂಕ್ಷೆಯುಳ್ಳ ಜನರು ಸ್ವಲ್ಪ ಎಡವಟ್ಟು ಕೂಡ ಆಗಿರುತ್ತಾರೆ’ ಎಂದು ಬಾಕ್ವೆಟ್ ನೆನಪಿಸಿಕೊಳ್ಳುತ್ತಾರೆ. ಬಹುಶಃ ಸ್ವತಃ ಬಾಕ್ವೆಟ್ ಕೂಡ ಇಂತಹುದೇ ವ್ಯಕ್ತಿಯಾಗಿದ್ದರು ಅನ್ನಿಸುತ್ತದೆ.
ಏಕೆಂದರೆ ನಂತರ ಅವರು ‘ನ್ಯೂಯಾರ್ಕ್ ಟೈಮ್ಸ್’ನ ಎಕ್ಸಿಕ್ಯೂಟಿವ್ ಎಡಿಟರ್ ಆಗಿದ್ದರು. ಅದಿರಲಿ. ನ್ಯೂ ಒರ್ಲೀನ್ಸ್ ನಲ್ಲಿ ಈ ಇಬ್ಬರು ಯುವ ಪತ್ರಕರ್ತರು ಗಳಸ್ಯ ಕಂಠಸ್ಯ ಗೆಳೆಯರಾಗಿ ಒಬ್ಬ ಭ್ರಷ್ಟ ಉದ್ಯಮಿಯ ಬಗ್ಗೆ ವರದಿ ಮಾಡಿದರು. ಆ ಉದ್ಯಮಿ ಇವರ ಮೇಲೆ ಬಹಳ ದುಬಾರಿ ಮೊತ್ತಕ್ಕೆ ಕೇಸು ಹಾಕುತ್ತೇನೆಂದು ಧಮಕಿ ಹಾಕಿದ. ಐಸಾಕ್ಸನ್ ಥರಗುಟ್ಟಿಹೋದರು. ‘ಆದರೆ ಡೀನ್ ಬಾಕ್ವೆಟ್ ನನಗೆ ಧೈರ್ಯ ತುಂಬಿದ. ಏಕೆಂದರೆ ಅವನಿಗೆ ಸುದ್ದಿ ಕೊಟ್ಟವನು ಅಮೆರಿಕದ
ಅಟಾರ್ನಿಯಾಗಿದ್ದ. ಇನ್ನು ಸ್ವಲ್ಪ ದಿನದಲ್ಲೇ ಆ ಬಿಸಿನೆಸ್ಮನ್ ಗೆ ಶಿಕ್ಷೆಯಾಗುತ್ತದೆ ನೋಡು ಎಂದು ಡೀನ್ ಹೇಳಿದ್ದ. ಹಾಗೇ ಆಯಿತು’ ಎಂದು ಐಸಾಕ್ಸನ್ ನೆನಪಿಸಿಕೊಳ್ಳುತ್ತಾರೆ.
ಕ್ರಮೇಣ ಐಸಾಕ್ಸನ್ ವರದಿಗಾರನಾಗಿ ಗಮನ ಸೆಳೆಯತೊಡಗಿದರು. ಒಂದು ವಾರ ಅವರಿಗೆ ೨ ಫೋನ್ ಕರೆಗಳು ಬಂದವು. “ಯಾರೋ ಫೋನ್ ಮಾಡಿ, ‘ನಾನು ಕಾರ್ಡ್ ಮೆಯೆರ್ನ ಸ್ನೇಹಿತ. ಒಮ್ಮೆ ಭೇಟಿಯಾಗೋಣವೇ?’ ಎಂದು ಕೇಳಿದರು. ನನಗೆ ಆ ಧ್ವನಿಯ ಪರಿಚಯವಿತ್ತು. ಆಕ್ಸ್ ಫರ್ಡ್ನಲ್ಲಿದ್ದಾಗ ಆ
ನಿಗೂಢ ವ್ಯಕ್ತಿ ಆಗಾಗ ನಮ್ಮ ಕ್ಯಾಂಪಸ್ಗೆ ಬಂದು ಬುದ್ಧಿವಂತ ಹುಡುಗರ ಜತೆ ಮಾತನಾಡುತ್ತಿದ್ದ. ಆಗೆಲ್ಲ ತಾನು ಅಮೆರಿಕನ್ ದೂತಾವಾಸದ ಸಾಂಸ್ಕೃತಿಕ ವಿಭಾಗದಲ್ಲಿ ಕೆಲಸ ಮಾಡುತ್ತೇನೆ ಎನ್ನುತ್ತಿದ್ದ. ಆದರೆ ಅವನು ಸಿಐಎ ಏಜೆಂಟ್ ಆಗಿದ್ದ ಎಂಬುದು ಆಮೇಲೆ ನಮಗೆ ತಿಳಿಯಿತು. ಕೊನೆಗೊಮ್ಮೆ ಭೇಟಿಯಾದಾಗ
ನನ್ನ ಬಳಿ ‘ಸಿಐಎ ಸೇರುತ್ತೀಯಾ?’ ಎಂದು ಕೇಳಿದ. ನಾನು ಒಪ್ಪಿಕೊಂಡೆ. ‘ಆದರೆ ನೀನು ರಹಸ್ಯ ಏಜೆಂಟ್ ಆಗಿ ಕೆಲಸ ಮಾಡಬೇಕಿಲ್ಲ. ಅರ್ಥಶಾಸ್ತ್ರ ಓದಿದ್ದೀಯಲ್ಲವೇ? ಲ್ಯಾಂಗ್ಲಿ ಯಲ್ಲಿ ಅನಾಲಿಸ್ಟ್ ಆಗಿ ಕೆಲಸ ಮಾಡು’ ಎಂದ.
ಯಾಕೆ ನಾನು ಅಂಡರ್ಕವರ್ ಏಜೆಂಟ್ ಆಗಿ ಕೆಲಸ ಮಾಡಬಾರದು ಎಂದು ಕೇಳೋಣ ಎಂದುಕೊಂಡಿದ್ದೆ. ಆದರೆ ಕೇಳಲಿಲ್ಲ” ಎಂದು ಐಸಾಕ್ಸನ್ ನೆನಪಿಸಿಕೊಳ್ಳುತ್ತಾರೆ. ಕೆಲ ದಿನಗಳಲ್ಲೇ ಅವರಿಗೆ ‘ಟೈಮ್’ ಸಂಪಾದಕರು ಕರೆ ಮಾಡಿದರು. ಹಾಗಾಗಿ ಲ್ಯಾಂಗ್ಲಿ ಬದಲು ಐಸಾಕ್ಸನ್ ‘ಟೈಮ್’ ಕೆಲಸ ಒಪ್ಪಿಕೊಂಡರು. ‘ನಾನೇನೂ ಒಳ್ಳೆಯ ಗುಪ್ತಚರ ಆಗುತ್ತಿದ್ದೆನೆಂದು ನನಗೆ ಅನ್ನಿಸುವುದಿಲ್ಲ. ಆ ಕೆಲಸಕ್ಕೆ ಸೇರಿದ್ದರೆ ಖಂಡಿತ ಏನಾದರೂ ಎಡವಟ್ಟು ಮಾಡಿಕೊಳ್ಳುತ್ತಿದ್ದೆ’ ಎಂದೂ ಅವರು ಹೇಳುತ್ತಾರೆ.
೧೯೭೮ರಲ್ಲಿ ಐಸಾಕ್ಸನ್ ‘ಟೈಮ್’ ನಿಯತಕಾಲಿಕೆ ಸೇರಿದರು. ಅದು ‘ವಾಸ್ಪ್ ಎಸ್ಟಾಬ್ಲಿಷ್ಮೆಂಟ್’ ಎಂಬ ಕಂಪನಿಯ ಅಂಗಸಂಸ್ಥೆಯಾಗಿತ್ತು. ಅದ್ಭುತವಾದ ಲೇಖನಗಳನ್ನು ಪ್ರಕಟಿಸುತ್ತಿತ್ತು. ‘ಟೈಮ್’ ಜತೆಗೇ ಆ ಕಂಪನಿ ‘ಪೀಪಲ್’, ‘ಸ್ಪೋರ್ಟ್ಸ್ ಇಲ್ಲಸ್ಟ್ರೇಟೆಡ್’, ‘ಫಾರ್ಚೂನ್’ ಮುಂತಾದ ಪ್ರಸಿದ್ಧ ನಿಯತ ಕಾಲಿಕೆಗಳನ್ನೂ ಹೊರತರುತ್ತಿತ್ತು. ಅವೆಲ್ಲವೂ ಸಾಕಷ್ಟು ಹಣ ಮಾಡುತ್ತಿದ್ದವು. ಹೀಗಾಗಿ ಅವುಗಳ ಹಣದಲ್ಲಿ ‘ಟೈಮ್’ಗೆ ಒಳ್ಳೆಯ ಮುದ್ರಣ ಕಾಗದ, ಅದ್ಭುತವಾದ ಪ್ರಿಂಟಿಂಗ್ ತಂತ್ರಜ್ಞಾನ ಹಾಗೂ ಸಾಕಷ್ಟು ಪ್ರಭಾವ ಸಿಗುತ್ತಿತ್ತು. ಜಾಗತಿಕ ಪತ್ರಿಕೋದ್ಯಮದಲ್ಲಿ ಅದೊಂದು ಬೇರೆಯದೇ ಯುಗ. ಪ್ರತಿ ಸೋಮವಾರ ಹೊರಬರುತ್ತಿದ್ದ ‘ಟೈಮ್’ ಪತ್ರಿಕೆ ಆ ವಾರದ ಅಜೆಂಡಾವನ್ನು ತಾನೇ ನಿಗದಿಪಡಿಸುತ್ತಿತ್ತು. ಜಗತ್ತಿನ ಬೇರೆ ಬೇರೆ ಭಾಗಗಳಲ್ಲಿ ಅದರ ಬೇರೆ ಬೇರೆ ಆವೃತ್ತಿಗಳು
ಪ್ರಕಟವಾಗುತ್ತಿದ್ದವು. ‘ಟೈಮ್’ ಕಚೇರಿಯ ಸಂಸ್ಕೃತಿ ಕೊಂಚ ಸೆಕ್ಸಿಸ್ಟ್ ಆಗಿತ್ತು. ಅಲ್ಲಿನ ಲೇಖಕರು ಹಾಗೂ ಸಂಪಾದಕರೆಲ್ಲ ಹೆಚ್ಚಾಗಿ ಬಿಳಿಯರೇ ಆಗಿರುತ್ತಿದ್ದರು. ಗರಿಗರಿಯಾದ ಬಿಳಿ ಶರ್ಟ್ ತೊಟ್ಟು ಅವರೆಲ್ಲ ಆಫೀಸಿಗೆ ಬರುತ್ತಿದ್ದರು. ಐಸಾಕ್ಸನ್ ಕೂಡ ಅವರಲ್ಲೊಬ್ಬರಾದರು. ಚೆನ್ನಾಗಿ ಕೆಲಸ ಮಾಡಿದರು.
ಅವರಲ್ಲಿ ಆತ್ಮವಿಶ್ವಾಸ ತುಳುಕುತ್ತಿತ್ತು. ಅವರಿಗೆ ಮೆಂಟರ್ಗಳನ್ನು ಹುಡುಕಿಕೊಳ್ಳುವುದಕ್ಕೆ ಕಷ್ಟ ವಾಗ ತ್ತಿರಲಿಲ್ಲ. ‘ಟೈಮ್’ನಲ್ಲಿ ಆಗ ತುಂಬಾ ಬದ್ಧತೆಯಿಂದ ಕೆಲಸ ಮಾಡುತ್ತಿದ್ದ ಸಾಕಷ್ಟು ಯುವ ಪತ್ರಕರ್ತರಿದ್ದರು. ಐಸಾಕ್ಸನ್ ಅಲ್ಲಿ ಗ್ರೇಡನ್ ಕಾರ್ಟರ್ (ನಂತರ ಇವರು ‘ಸ್ಪೈ’ ಮ್ಯಾಗಜೀನ್ ಹುಟ್ಟುಹಾಕಿದರು, ಬಳಿಕ ‘ವ್ಯಾನಿಟಿ ಫಾರ್’ ಮುನ್ನಡೆಸಿದರು), ಕರ್ಟ್ ಆಂಡರ್ಸನ್ (ಇನ್ನೊಬ್ಬ ‘ಸ್ಪೈ’ ಸಹ-ಸಂಸ್ಥಾಪಕ, ಬಳಿಕ ಇವರು ‘ನ್ಯೂಯಾರ್ಕ್’ ಮ್ಯಾಗಜೀನ್ ನಡೆಸಿದರು) ಹಾಗೂ ಜಿಮ್ ಕೆಲ್ಲಿ (ಐಸಾಕ್ಸನ್ ಬಳಿಕ ‘ಟೈಮ್’ ಮ್ಯಾಗಜೀನ್ನ ಮ್ಯಾನೇಜಿಂಗ್ ಎಡಿಟರ್ ಆದರು) ಜತೆ ಕೆಲಸ ಮಾಡಿದರು. ಅವರಿಂದ ಕೆಲಸ ಕಲಿತರು. ಅಲ್ಲಿ ಮೌರೀನ್ ಡೌಡ್, ಅಲೆಸಾಂಡ್ರಾ ಸ್ಟಾನ್ಲಿ, ಮಿಶಿಕೋ ಕಕುತಾನಿ ಹಾಗೂ -ಂಕ್ ರಿಚ್ರಂಥ ಪ್ರಸಿದ್ಧ ಪತ್ರಕರ್ತರೂ ಐಸಾಕ್ಸನ್ ಮೇಲೆ ಪ್ರಭಾವ ಬೀರಿದರು. ಇವರೆಲ್ಲ ನಂತರದ ವರ್ಷಗಳಲ್ಲಿ ‘ಟೈಮ್’ ಮ್ಯಾಗಜೀನ್ನಲ್ಲೇ ಅಂಕಣಕಾರರಾದರು ಅಥವಾ ವಿಮರ್ಶಕರಾದರು.
ಮಹತ್ವಾಕಾಂಕ್ಷಿಯಾಗಿದ್ದ ಐಸಾಕ್ಸನ್ ಯಾವತ್ತೂ ಖಡಕ್ ವ್ಯಕ್ತಿಯಾಗಿರಲಿಲ್ಲ. ಹಾಗಂತ ಅವರು ಖಡಕ್ ವರದಿಗಳನ್ನು ಬರೆಯಲಿಲ್ಲ ಎಂದೇನಲ್ಲ. ಐಸಾಕ್ಸನ್ ೧೯೮೦ರ ದಶಕದಲ್ಲಿ ರೊನಾಲ್ಡ್ ರೇಗನ್ರ ಅಧ್ಯಕ್ಷೀಯ ಚುನಾವಣೆಯ ಪ್ರಚಾರಾಂದೋಲನವನ್ನು ವರದಿ ಮಾಡಿದ್ದರು. ಟೈಮ್ ಮ್ಯಾಗಜೀನ್ನ ವಿದೇಶಿ ವರದಿಗಾರನಾಗಿ ಕಮ್ಯುನಿಸಂನ ಅವಸಾನವನ್ನೂ ಅದ್ಭುತವಾಗಿ ದಾಖಲಿಸಿದ್ದರು. ನಂತರ ಅದರ ಮ್ಯಾನೇಜಿಂಗ್ ಎಡಿಟರ್ ಆಗಿ ಬಡ್ತಿ ಪಡೆದರು. ೧೯೯೬ರಲ್ಲಿ ಅವರನ್ನು ‘ಟೈಮ್’ ಮ್ಯಾಗಜೀನ್ನ ಸಂಪಾದಕ ರಾಗಿ ನೇಮಕ ಮಾಡಿದಾಗ ಇನ್ನೂ ಇಂಟರ್ನೆಟ್ ಸಾಕಷ್ಟು ಜನಪ್ರಿಯವಾಗಿರಲಿಲ್ಲ. ಅದು ಪತ್ರಿಕೆಗಳಿಗೆ ಮರಣಶಾಸನ ಬರೆಯಲಿದೆ ಎಂದು ಯಾರೂ ಊಹಿಸಿರಲಿಲ್ಲ. ಆದರೆ ಐಸಾ ಕ್ಸನ್ಗೆ ಇದ್ಯಾಕೋ ಒಳ್ಳೆಯದಕ್ಕೆ ಬಂದಿದ್ದಲ್ಲ, ಏನೋ ಕಾದಿದೆ ಎಂದು ಅನ್ನಿಸಿತ್ತು. ಆದರೆ ಅಲೆಗೆ ತಕ್ಕಂತೆ ಹುಟ್ಟು ಹಾಕಬೇಕಿತ್ತು.
ಅವರು ‘ಟೈಮ್ ಇಂಕ್’ನ ಮೊದಲ ವೆಬ್ಸೈಟನ್ನು ಹುಟ್ಟುಹಾಕಿದರು. ಅದರ ಹೆಸರು ‘ಪಾತ್ -ಂಡರ್’. ಅದು ಐಸಾಕ್ಸನ್ರ ಬಾಲ್ಯದ ನಿಕ್ನೇಮ್ ಆಗಿತ್ತಂತೆ. ಆ
ವೆಬ್ಸೈಟಿಗೆ ಒಂದು ರೂಪ ಕೊಟ್ಟಮೇಲೆ ಮತ್ತೆ ವಾರಪತ್ರಿಕೆಗೆ ಮರಳಿದ್ದರು. ಆಗ ಮ್ಯಾಗಜೀನ್ನಲ್ಲಿ ತಂತ್ರಜ್ಞಾನ ಮತ್ತು ವಿಜ್ಞಾನದ ಬಗ್ಗೆ ಬರೆಯಲು ಹೊಸ
ವಿಭಾಗ ಆರಂಭಿಸುವ ಮೂಲಕ ಸಿಲಿಕಾನ್ ವ್ಯಾಲಿಯ ಜತೆ ಸಂಬಂಧ ಬೆಳೆಸಿದರು. ಆ ದಶಕದ ಕೊನೆಯಲ್ಲಿ ಟೈಮ್ ವಾರ್ನರ್ ಕಂಪನಿ ಅಮೆರಿಕಾ ಆನ್ಲೈನ್ ಕಂಪನಿಯಲ್ಲಿ ವಿಲೀನಗೊಂಡಿತು.
ಆಗೆಲ್ಲ ಕಾರ್ಪೊರೇಟ್ ಸಿನರ್ಜಿಯ ಆಟ ಬಹಳ ಜೋರಾಗಿತ್ತು. ಐಸಾಕ್ಸನ್ ಸಿಎನ್ಎನ್ಗೆ ಹೋದರು. ಅಥವಾ ಸಿಎನ್ಎನ್ ಅವರನ್ನು ‘ಬುಟ್ಟಿಗೆ ಹಾಕಿಕೊಂಡಿತು’ ಎಂದರೇ ಸರಿ. ಅಲ್ಲಿಯವರೆಗೂ ಅವರು ಟಿವಿಯಲ್ಲಿ ಯಾವತ್ತೂ ಕೆಲಸ ಮಾಡಿರಲಿಲ್ಲ. ಅಷ್ಟೇಕೆ, ಅವರು ಟಿವಿ ನೋಡುವುದೇ ಬಹಳ ಕಡಿಮೆಯಾಗಿತ್ತು. ಆದರೆ ವೃತ್ತಿಜೀವನದಲ್ಲಿ ಅದೊಂದು ಬಡ್ತಿ ಯಂತೆ ಸಿಕ್ಕಿತ್ತು. “ನಾನು ಸಿಎನ್ಎನ್ಗೆ ಹೋದೆ. ಅದೊಂಥರಾ ‘ನಮಗೆ ಪೇಪರ್ ಸುತ್ತಿದ ಡೋನಟ್ ಬೇಕು’ ಎಂಬಂ
ತಿತ್ತು. ಆದರೆ ನಾನು ‘ನೀವೇನು ಮಾತಾಡುತ್ತಿದ್ದೀರೋ ನನಗೆ ಅಂತಪಾರು ಹರಿಯುತ್ತಿಲ್ಲ’ ಎಂಬಂತಿದ್ದೆ. ಒಂದು ರೀತಿಯಲ್ಲಿ ಅದೊಂದು ಸಾಂಸ್ಕೃತಿಕ ಸಂಘರ್ಷ. ಟಿವಿ ಸ್ಟುಡಿಯೋದಲ್ಲಿ ಮಗ್ ಹಿಡಿದು ಕುಳಿತು ಸಿಹಿಯಾಗಿ ಮಾತನಾಡಬೇಕು ಎಂಬುದಷ್ಟೇ ಅಲ್ಲಿ ಮುಖ್ಯವಾಗಿತ್ತು” ಎನ್ನುತ್ತಾರೆ ಐಸಾಕ್ಸನ್.
೨೦೦೩ರವರೆಗೆ ಅವರು ಸಿಎನ್ಎನ್ನಲ್ಲಿದ್ದರು. ನಂತರ ಆಸ್ಪೆನ್ ಇನ್ಸ್ಟಿಟ್ಯೂಟ್ನ ಸಿಇಒ ಆಗಲು ಸಿಎನ್ಎನ್ ತೊರೆದರು. ವಾಲ್ಟರ್ ಐಸಾಕ್ಸನ್ ಅವರ ತರುವಾಯದ ವೃತ್ತಿಜೀವನ ಮತ್ತು ಅದರ ವರ್ಣರಂಜಿತ ಆಯಾಮಗಳ ಕುರಿತೂ ಬರೆಯುವುದು ಸಾಕಷ್ಟಿದೆ, ಮುಂದೆ ಎಂದಾದರೂ ಅದನ್ನು ಬರೆದೇನು. ಈ ಬಾರಿ ಐಸಾಕ್ಸನ್ ಬಗ್ಗೆ ಇಷ್ಟು ವಿಸ್ತಾರವಾಗಿ ಬರೆಯಲು ಕಾರಣ, ಇಂಥ ಸಾಧನಾಶೀಲ ಪತ್ರಕರ್ತ, ಎಲಾನ್ ಮಸ್ಕ್ರಂಥ ವಿಲಕ್ಷಣ ವ್ಯಕ್ತಿಯ ಜೀವನಚರಿತ್ರೆ
ಬರೆದಿದ್ದಾರೆ ಎಂಬುದನ್ನು ನಿಮಗೆ ಮನವರಿಕೆ ಮಾಡಿಕೊಡುವುದಾಗಿತ್ತು. ಎಲಾನ್ ಮಸ್ಕ್ರನ್ನು ಐಸಾಕ್ಸನ್ ತಮ್ಮ ಕೃತಿಯಲ್ಲಿ ಅನಾವರಣ ಮಾಡಿರುವ ಪರಿಯನ್ನು ಕಣ್ತುಂಬಿಕೊಳ್ಳಲು ನೀವೀಗ ಬಯಸುತ್ತಿರಬಹುದಲ್ಲವೇ?!