ಇದೇ ಅಂತರಂಗ ಸುದ್ದಿ
vbhat@me.com
ಪತ್ರಿಕೆಗಳಲ್ಲಿ ಕೆಲವು ಶೀರ್ಷಿಕೆಗಳನ್ನು ನೋಡಿದಾಗ, ನಮ್ಮ ಮುಂದೆ ಕೆಲವು ಪ್ರತಿಮೆ (ಇಮೇಜು)ಗಳು ನಿಲ್ಲುತ್ತವೆ. ಉದಾಹರಣೆಗೆ, ‘ನಗರದಲ್ಲಿ ಹೊಸ ಆಸ್ಪತ್ರೆ
ಉದ್ಘಾಟನೆ’ ಎಂಬ ಶೀರ್ಷಿಕೆ. ಇದನ್ನು ಓದುವಾಗ, ನಗರದಲ್ಲಿ ಕಾಯಿಲೆ ಪೀಡಿತರ ಸಂಖ್ಯೆ ಹೆಚ್ಚುತ್ತಿದೆ, ವೈದ್ಯಕೀಯ ಸೌಲಭ್ಯ-ಸವಲತ್ತು ಸಹ ಸುಧಾರಿಸುತ್ತಿದೆ ಎಂದು ತಕ್ಷಣಕ್ಕೆ ಅಂದುಕೊಳ್ಳಬಹುದು.
ಅದೇ ರೀತಿ, ‘ನಗರದಲ್ಲಿ ನೂತನ ಪೊಲೀಸ್ ಠಾಣೆ ಉದ್ಘಾಟನೆ’ ಎಂಬ ಶೀರ್ಷಿಕೆ ನೋಡಿದರೆ, ನಗರದಲ್ಲಿ ಅಪರಾಧ ಕೃತ್ಯ, ಸಂಖ್ಯೆ ಹೆಚ್ಚುತ್ತಿದೆ, ಅದನ್ನು ನಿಯಂತ್ರಿಸಲು ಹೊಸ ಠಾಣೆಗಳನ್ನು ತೆರೆಯಲಾಗುತ್ತಿದೆ ಎಂಬ ನಿರ್ಧಾರಕ್ಕೆ ಬರಬಹುದು. ಗೃಹ ಸಚಿವರೊಬ್ಬರು, ತಾವು ಅಧಿಕಾರಕ್ಕೆ ಬಂದ ನಂತರ ಇಪ್ಪತ್ತು ನೂತನ ಪೊಲೀಸ್ ಠಾಣೆಗಳನ್ನು ತೆರೆದಿದ್ದೇವೆ ಎಂದು ಬೀಗಿದರೆ, ಸಮಾಜದಲ್ಲಿ ಅಪರಾಧ ಕೃತ್ಯಗಳು ಹೆಚ್ಚುತ್ತಿವೆ ಎಂದು ಭಾವಿಸಬಹುದು. ಹೊಸ ಠಾಣೆ, ಹೊಸ ಆಸ್ಪತ್ರೆ ತೆರೆಯುವುದು ಒಳ್ಳೆಯ ಸುದ್ದಿಯೇನಲ್ಲ. ಆದರೆ ಇನ್ನೊಂದು ಅರ್ಥದಲ್ಲಿ ಅದನ್ನು ಸಕಾರಾತ್ಮಕವಾಗಿ ಪರಿವರ್ತಿಸಿಕೊಂಡು, ಅಪರಾಧ ಪ್ರವೃತ್ತಿ ತಡೆಗೆ ಸರಕಾರ ಮುಂದಾ ಗಿದೆ ಮತ್ತು ವೈದ್ಯಕೀಯ ಕಾಳಜಿಗೆ ಸರಕಾರ ಒತ್ತು ನೀಡುತ್ತಿದೆ ಎಂದು ಅರ್ಥೈಸಲೂಬಹುದು.
‘ಬೆಂಗಳೂರಿನಲ್ಲಿ ಹೊಸ ಬಡಾವಣೆ ಉದ್ಘಾಟನೆ’ ಎಂಬ ಶೀರ್ಷಿಕೆ ಓದುವಾಗ, ನನ್ನ ಮುಂದೆ ಥಟ್ಟನೆ ನಿಲ್ಲುವ ಪ್ರತಿಮೆ ಅಂದ್ರೆ, ನೂರಾರು ಹಳ್ಳಿಗಳು ಸತ್ತು ಹೋಗಿ ಅಥವಾ ಸಾವಿರಾರು ಹಳ್ಳಿಗಳು ವೃದ್ಧಾಶ್ರಮವಾಗಿ ನಗರದಲ್ಲಿ ಒಂದು ಬಡಾವಣೆ ನಿರ್ಮಾಣವಾಗಿದೆ ಎಂಬುದು. ಬೆಂಗಳೂರಿನಲ್ಲಿ ಒಂದು ಹೊಸ ಬಡಾವಣೆ ನಿರ್ಮಾಣವಾಯಿತು ಎಂದು ಸಂತೋಷಪಡುವಾಗ, ಅವೆಷ್ಟೋ ಅಸಂಖ್ಯ ಹಳ್ಳಿಗಳು ವೃದ್ಧಾಶ್ರಮವಾಗಿ ಪರಿವರ್ತಿತವಾದವಲ್ಲ ಎಂಬ ಗಾಬರಿಯೂ ಆಗಬೇಕು.
‘ಕನ್ನಡ ಮಾಧ್ಯಮ ಶಾಲೆಗಳ ಮುಚ್ಚಲು ಮುಂದಾದ ಸರಕಾರ’ ಎಂಬ ಒಂದು ಶೀರ್ಷಿಕೆಯಂತೂ ನಮ್ಮ ಮುಂದೆ ಹಲವು ಪ್ರತಿಮೆಗಳನ್ನು ನಿಲ್ಲಿಸುತ್ತವೆ. ಕನ್ನಡ ಮಾಧ್ಯಮ ಶಾಲೆಗಳಿಗೆ ಬೇಡಿಕೆ ತಗ್ಗುತ್ತಿದೆ, ಕನ್ನಡ ಮಾಧ್ಯಮದಲ್ಲಿ ಕಲಿಯಲು ವಿದ್ಯಾರ್ಥಿಗಳು ಮುಂದೆ ಬರುತ್ತಿಲ್ಲ, ಇಂಗ್ಲಿಷ್ ಮಾಧ್ಯಮದತ್ತ ಜನರು ಆಕರ್ಷಿತ ರಾಗುತ್ತಿದ್ದಾರೆ, ರಾಜಧಾನಿಯಲ್ಲಿ ಕನ್ನಡ ತಿರಸ್ಕಾರಕ್ಕೆ ಒಳಗಾಗುತ್ತಿದೆ… ಹೀಗೆ ಅನೇಕ ಪ್ರತಿಮೆಗಳ ಮೆರವಣಿಗೆ ನಮ್ಮ ಮುಂದೆ ಹಾದುಹೋಗುತ್ತದೆ.
ನಗರದ ಬಡಾವಣೆಯೊಂದರಲ್ಲಿ ವೈನ್ಶಾಪ್ ತಲೆಯೆತ್ತಿದರೆ, ಅದು ಕಳಿಸುವ ಸಂದೇಶವೂ ಹಲವು.
ವೈನ್ಶಾಪ್ ಉದ್ಘಾಟನೆ ಎಂಬ ಸುದ್ದಿ ಪತ್ರಿಕೆಗಳಲ್ಲಿ ಆಗಾಗ ಪ್ರಕಟವಾಗುವುದಿಲ್ಲ. ಕಾರಣ ವೈನ್ಶಾಪ್ಗಳ ಉದ್ಘಾಟನೆ ಆಗಾಗ ನಡೆಯುತ್ತಲೇ ಇರುತ್ತದೆ.
ಅಷ್ಟಕ್ಕೂ ವೈನ್ ಶಾಪ್ಗಳಿಗೆ ಯಾವ ಪ್ರಚಾರವೂ ಬೇಕಿಲ್ಲ. ಹೀಗಾಗಿ ವೈನ್ಶಾಪ್ ಮಾಲೀಕರು ತಮ್ಮ ಸುದ್ದಿ ಪ್ರಕಟಿಸಿ ಎಂದು ಯಾವ ಪತ್ರಿಕೆಗಳಿಗೂ ಹೇಳುವುದಿಲ್ಲ. ಇನ್ನು, ‘ನಗರದ ಬಡಾವಣೆಯಲ್ಲಿ ನೂತನ ಪುಸ್ತಕ ಮಳಿಗೆ ಉದ್ಘಾಟನೆ’ ಎಂಬ ಶೀರ್ಷಿಕೆ ಹಲವು ಸಕಾರಾತ್ಮಕ ಸಂದೇಶಗಳನ್ನು ಕಳಿಸುತ್ತದೆ. ಮೊನ್ನೆ ಬೆಂಗಳೂರಿನ ಎಚ್ಎಸ್ಆರ್ ಲೇಔಟಿನಲ್ಲಿ ಸಪ್ನ ಪುಸ್ತಕ ಮಳಿಗೆ ಉದ್ಘಾಟನೆಯಾದಾಗ, ಆ ಬಡಾವಣೆಯಲ್ಲಿ ಅಕ್ಷರ ಪ್ರೇಮಿಗಳ ಸಂಖ್ಯೆ ಹೆಚ್ಚುತ್ತಿದೆ, ಪುಸ್ತಕ ಪ್ರೇಮಿಗಳು ಆ ಬಡಾವಣೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ, ವೈನ್ಶಾಪ್ ಉದ್ಘಾಟನೆ ಆಗುವುದಕ್ಕಿಂತ ಪುಸ್ತಕ ಮಳಿಗೆ ಉದ್ಘಾಟನೆ ಆಗುವುದು ಒಳ್ಳೆಯದು.. ಹೀಗೆ ಹಲವು ಇಮೇಜುಗಳು ಹಾದುಹೋದವು.
ಫೋಟೋ ಶಿಷ್ಟಾಚಾರಗಳು
ವಿದೇಶಗಳಿಗೆ ಹೋದಾಗ ಸಾಮಾನ್ಯವಾಗಿ ಎಲ್ಲರೂ ಫೋಟೋ ತೆಗೆಯಲು ಉತ್ಸುಕರಾಗಿರುತ್ತಾರೆ. ವಿದೇಶವನ್ನು ಕಣ್ಣಿಗಿಂತ, ಮೊಬೈಲ್ ಕೆಮರಾ ಕಣ್ಣಿನ ಮೂಲಕ ನೋಡುವವರೇ ಹೆಚ್ಚು. ಆ ಪರಿ ಫೋಟೋ ಕ್ಲಿಕ್ಕಿಸುತ್ತಾರೆ. ಇತ್ತೀಚೆಗೆ ನನ್ನ ಸ್ನೇಹಿತರೊಬ್ಬರು ನಾಲ್ಕು ದಿನಗಳ ಸಿಂಗಾಪುರ ಪ್ರವಾಸಕ್ಕೆ ಹೋಗಿದ್ದರು. ಅವರು ಆ ಅವಧಿಯಲ್ಲಿ ಹನ್ನೆರಡು ಸಾವಿರ ಫೋಟೋ ತೆಗೆದಿದ್ದರು. ಆ ಪೈಕಿ ನಾಲ್ಕು ಸಾವಿರ ಸೆಲಿ! ರೆಸ್ಟೋರೆಂಟಿನಲ್ಲಿ ಪ್ರೇಮಿಗಳಿಬ್ಬರು ಊಟ ಮಾಡುವಾಗ ಸ್ನೇಹಿತರು ಅವರ ಅನುಮತಿಯಿಲ್ಲದೇ, ಫೋಟೋ ತೆಗೆದರಂತೆ. ಅದಕ್ಕೆ ಅವರಿಬ್ಬರೂ ತೀವ್ರ ಆಕ್ಷೇಪ ವ್ಯಕ್ತಪಡಿಸಿ, ಪೊಲೀಸ್ ಕಂಪ್ಲೇಂಟ್ ಕೊಡುವ ತನಕ
ರಾದ್ಧಾಂತವಾಗಿದ್ದನ್ನು ವಿವರಿಸಿದರು.
ಈ ದಿನಗಳಲ್ಲಿ ಮೊಬೈಲ್ ಫೋಟೋಗ್ರಫಿ ಸಾಮಾನ್ಯ. ಆದರೂ ಫೋಟೋ ತೆಗೆಯುವಾಗ ಕೆಲವು ಸಾಮಾನ್ಯ ನಿಯಮಗಳನ್ನು ಪಾಲಿಸಲೇಬೇಕು. ಕೆಲವರು ಪ್ರೈವೆಸಿಯನ್ನು ಜಾಗರೂಕವಾಗಿ ಪಾಲಿಸುತ್ತಾರೆ. ಅದು ಅವರ ಖಾಸಗಿ ವಿಷಯ. ಅವರು ಯಾರ ಉಪದೇಶವನ್ನೂ ಕೇಳುವುದಿಲ್ಲ. ಕೆಲವು ದಿನಗಳ ಹಿಂದೆ, ಜೋರ್ಡಾನಿನ ಮರುಭೂಮಿಯಲ್ಲಿ ಹೋಗುತ್ತಿರುವಾಗ, ಸುಮಾರು ಹತ್ತು-ಹನ್ನೆರಡು ಒಂಟೆಗಳು ಒಂದು ಸಾಲಿನಲ್ಲಿ ಹೋಗುವುದನ್ನು ಕಂಡು, ಕೆಮರಾಕ್ಕೆ ಒಳ್ಳೆಯ
ಆಹಾರ ಸಿಕ್ಕಿತು ಎಂದು ಸನಿಹಕ್ಕೆ ಹೋಗುವಂತೆ ವಾಹನ ಚಲಾಯಿಸುತ್ತಿದ್ದ ಸ್ನೇಹಿತ ಕಿರಣ್ಗೆ ಹೇಳಿದೆ. ಕಾರಿನಿಂದ ಕೆಳಗಿಳಿದು ಹತ್ತಾರು ಫೋಟೋಗಳನ್ನು ಕ್ಲಿಕ್ಕಿಸಿದೆ. ಇದನ್ನು ಗಮನಿಸಿದ ಒಂಟೆ ಸವಾರನೊಬ್ಬ ಹತ್ತಿರ ಬಂದು, ಹಣ ನೀಡುವಂತೆ ಹೇಳಿದ.
ಇಂಥ ಸಂದರ್ಭದಲ್ಲಿ ಅವರ ಬಳಿ ವಾದ ಮಾಡಿ ಪ್ರಯೋಜನವಿಲ್ಲ. ಅವರು ಹೇಳಿದಷ್ಟು ಅಲ್ಲವಾದರೂ, ನಿಮಗೆ ತೋಚಿದಷ್ಟು ಹಣವನ್ನು ಕೊಟ್ಟು ಜಾಗ ಖಾಲಿ ಮಾಡುವುದು ಜಾಣತನ. ವಿದೇಶಗಳಿಗೆ ಹೋದಾಗ, ಅನೇಕರು ಇಂಥ ಸನ್ನಿವೇಶಗಳಲ್ಲಿ ಪಿಗ್ಗಿ ಬೀಳುತ್ತಾರೆ. ಅಪರಿಚಿತ ವ್ಯಕ್ತಿಗಳ ಫೋಟೋ ತೆಗೆಯುವಾಗ, ಯಾವುದಕ್ಕೂ ಅನುಮತಿ ಪಡೆಯುವುದು ಒಳ್ಳೆಯದು. ಕೆಲ ತಿಂಗಳುಗಳ ಹಿಂದೆ, ಈಜಿ ರಾಜಧಾನಿ ಕೈರೋದಲ್ಲಿರುವ ಗಿಜಾ ಪಿರಮಿಡ್ಡುಗಳನ್ನು ನೋಡಲು ಹೋಗಿದ್ದೆ.
ಅಲ್ಲಿಗೆ ಹೋದವರೆಲ್ಲ ಪಿರಮಿಡ್ಡುಗಳ ಮುಂದೆ ನಿಂತು ಫೋಟೋ ತೆಗೆಸಿಕೊಳ್ಳುವುದು ಸಾಮಾನ್ಯ. ನನ್ನೊಂದಿಗಿದ್ದ ಸ್ನೇಹಿತರು ಅಷ್ಟೇನೂ ಒಳ್ಳೆಯ ಫೋಟೋಗ್ರಾ ಫರ್ ಆಗಿರಲಿಲ್ಲ. ನಾನು ಬೇರೆ ಯವರ ಸಹಾಯ ಪಡೆಯುವುದು ಅನಿವಾರ್ಯವಾಗಿತ್ತು. ನನ್ನ ಅಸಹಾಯಕತೆಯನ್ನು ಗಮನಿಸುತ್ತಿದ್ದ ವ್ಯಕ್ತಿಯೊಬ್ಬ ಹತ್ತಿರ ಬಂದು, ‘ನಾನು ನಿಮ್ಮ ಫೋಟೋ ತೆಗೆದುಕೊಡುತ್ತೇನೆ’ ಎಂದು ಹೇಳಿದ. ನಾನು ನನ್ನ ಕೆಮರಾ ಕೊಟ್ಟೆ. ಆತ ಹತ್ತಾರು ಫೋಟೋ ತೆಗೆದ. ಕೆಮರಾ ವಾಪಸ್ ಕೊಡುವಾಗ, ‘ಟೆನ್ ಡಾಲರ್ಸ್’ ಎಂದ. ನಾನು ಮರುಮಾತಿಲ್ಲದೇ, ಅವನ ಕೈಗೆ ಐದು ಡಾಲರ್ ಕೊಟ್ಟೆ. ಆತ ಸುಮ್ಮನೆ ಸ್ವೀಕರಿಸಿದ.
ಖಂಡಿತವಾಗಿಯೂ ಆತ ಹಣ ಕೇಳದೇ ಹೋಗಲಾರ ಎಂಬುದು ಗೊತ್ತಿತ್ತು. ನಂತರ ಆತ ತೆಗೆದ ಫೋಟೋಗಳನ್ನು ನೋಡಿದೆ. ಹತ್ತು ಡಾಲರ್ ಕೊಟ್ಟಿದ್ದರೂ ಪರ
ವಾಗಿರಲಿಲ್ಲ ಎನಿಸಿತು. ಅಷ್ಟು ಚೆನ್ನಾಗಿ ತೆಗೆದಿದ್ದ. ಇಂಥ ಸಂದರ್ಭ ದಲ್ಲಿ, ಅಪರಿಚಿತರ ಜತೆ ವಾಗ್ವಾದ-ಚೌಕಾಶಿ ಒಳ್ಳೆಯದಲ್ಲ. ನಿಮ್ಮ ದೌರ್ಬಲ್ಯವನ್ನು ಅವರು ಬಳಸಿಕೊಳ್ಳಲು ಪ್ರಯತ್ನಿಸುತ್ತಾರೆ. ವಿದೇಶಗಳಿಗೆ ಹೋದಾಗ, ಕೈಯಲ್ಲಿ ಕೆಮರಾ ಅಥವಾ ಮೊಬೈಲ್ ಇದೆಯೆಂದು ಎಲ್ಲಾ ಕಡೆಗಳಲ್ಲೂ ಫೋಟೋ ಕ್ಲಿಕ್ಕಿಸ ಬಾರದು. ಅದರಲ್ಲೂ ವ್ಯಕ್ತಿಗಳ ಫೋಟೋ ತೆಗೆಯುವಾಗ ಜಾಗ ರೂಕವಾಗಿರಬೇಕು. ಅದರಲ್ಲೂ ಚಿಕ್ಕಮಕ್ಕಳ ಫೋಟೋವನ್ನು ಪಾಲಕರ ಅನುಮತಿಯಿಲ್ಲದೇ ತೆಗೆಯಲೇಕೂಡದು.
ಒಮ್ಮೆ ಮುದ್ದಾದ ಮಗುವಿನ ಫೋಟೋವನ್ನು ಮೊಬೈಲಿನಲ್ಲಿ ಕ್ಲಿಕ್ಕಿಸಿದ್ದನ್ನು, ಮಗುವಿನ ತಾಯಿ ಪ್ರಶ್ನಿಸಿದ್ದಳು. ಇಂಥ ಸಂದರ್ಭದಲ್ಲಿ ಮರು ಮಾತಾಡದೇ, ಫೋಟೋಗಳನ್ನು ಡಿಲೀಟ್ ಮಾಡುವುದು ಜಾಣತನ. ಅಪರಿಚಿತ ವ್ಯಕ್ತಿಗಳ ಫೋಟೋವನ್ನು ಕ್ಲಿಕ್ಕಿಸುವಾಗ ಕಡ್ಡಾಯವಾಗಿ ಅವರ ಅನುಮತಿ ಪಡೆಯಲೇಬೇಕು.
ಅಂಕಣಗಳ ಸರದಾರ
ನಾಲ್ಕು ದಶಕಗಳ ಕಾಲ, ‘ಪ್ರಜಾವಾಣಿ’ ದೈನಿಕ ಮತ್ತು ‘ಸುಧಾ’ ವಾರಪತ್ರಿಕೆಗೆ ಸಮದರ್ಶಿ, ವಿಚಾರಪ್ರಿಯ ಮತ್ತು ಎಚ್ಚೆಸ್ಕೆ ಹೆಸರುಗಳಿಂದ ಬರೆದ, ಎಚ್.ಎಸ್. ಕೃಷ್ಣಸ್ವಾಮಿ ಅಯ್ಯಂಗಾರ್ ಅವರು ಎಚ್ಚೆಸ್ಕೆ ಎಂಬ ಮೂರಕ್ಷರಗಳಿಂದಲೇ ಪರಿಚಿತರು.
ವಾರದ ವ್ಯಕ್ತಿ, ವ್ಯಕ್ತಿ ವಿಶೇಷ, ವಾರದಿಂದ ವಾರಕ್ಕೆ, ಆರ್ಥಿಕ ಚಿಂತನೆ ಎಚ್ಚೆಸ್ಕೆ ಅಂಕಣಗಳಲ್ಲಿ ಕೆಲವು. ನಿಯತವಾಗಿ ಅವರಷ್ಟು ದೀರ್ಘಕಾಲ ಅಂಕಣಗಳನ್ನು ಬರೆದ ವರು ಬೇರೊಬ್ಬರಿಲ್ಲ. ಅಂಕಣಗಳ ಜತೆಗೆ ಲಲಿತ ಪ್ರಬಂಧಗಳನ್ನು ಬರೆದ ಎಚ್ಚೆಸ್ಕೆ, ಕಳ್ಳಹೊಕ್ಕ ಮನೆ, ಚಂದ್ರಕಾಂತಿ, ಸುರ ಹೊನ್ನೆ, ಮೇಘಲಹರಿ
ಮುಂತಾದವು ಪ್ರಬಂಧ ಸಂಕಲನಗಳನ್ನು ಪ್ರಕಟಿಸಿzರೆ. ಎಚ್ಚೆಸ್ಕೆ ಕಾದಂಬರಿಗಳನ್ನೂ ಬರೆದರು. ‘ಬಯಕೆಯ ಬೆಲೆ’ ಮುಖ್ಯವಾದ ಕಾದಂಬರಿಗಳಲ್ಲಿ ಒಂದು. ಶ್ರೀ ರಾಮಾನುಜಾಚಾರ್ಯರು, ವಿ. ಕೆ. ಆರ್.ವಿ.ರಾವ್, ಲಾಲ್ ಬಹಾದುರ್ ಶಾಸ್ತ್ರೀ, ಬಿ.ಆರ್. ಅಂಬೇಡ್ಕರ್, ಜಯಪ್ರಕಾಶನಾರಾಯಣ, ಯಮುನಾಚಾರ್ಯರು ಮುಂತಾದವರ ಕುರಿತು ವಿಸ್ತೃತ ವ್ಯಕ್ತಿ ಚಿತ್ರಗಳನ್ನು ಬರೆದಿzರೆ. ಅವರ ಅಂಕಣ ಬರಹಗಳಿಂದ ಆಯ್ದ ಸಾವಿರಾರು ಲೇಖನಗಳನ್ನು ಬದುಕು-ಬೆಳಕು,
ಮಾನ್ಯರು-ಅಸಾಮಾನ್ಯರು, ಗಗನಚುಕ್ಕಿ-ಭರಚುಕ್ಕಿ, ಹೊನ್ನ ಬಿತ್ತಿ ಬೆಳೆದವರು ಮುಂತಾದ ಕೃತಿಗಳಲ್ಲಿ ಕಾಣಬಹುದಾಗಿದೆ.
ಒಮ್ಮೆ ಎಚ್ಚೆಸ್ಕೆಯವರನ್ನುಸಂದರ್ಶನಕಾರನೊಬ್ಬ, ‘ಪತ್ರಿಕಾ ಬರವಣಿಗೆ ನಿಮ್ಮ ಸೃಜನಶೀಲ ಸಾಹಿತ್ಯದ ಮೇಲೆ ಎಂಥ ಪರಿಣಾಮ ಬೀರಿದೆ?’ ಎಂದು ಕೇಳಿದರು. ಅದಕ್ಕೆ ಅವರು ನೀಡಿದ ಉತ್ತರ- ‘ಇದರಿಂದ ನನ್ನ ಬರವಣಿಗೆ ಸುಲಭವಾಗಿದೆ. ಯಾವ ವಿಚಾರದ ಬಗ್ಗೆ ಬೇಕಿದ್ದರೂ ಬರೆಯಬ ಎನ್ನುವ ಆತ್ಮವಿಶ್ವಾಸ ನೀಡಿದೆ. ಬರ್ನಾರ್ಡ್ ಷಾ ವಿಚಾರದಲ್ಲೂ ಹೀಗೇ ಆಯ್ತು. ಈ ಎರಡೂ ರೀತಿಯ ಬರವಣಿಗೆಗಳೂ ಬೇರೆ ಬೇರೆ ಅಂತ ನಾನು ತಿಳಿದಿದ್ದೇನೆ. ಹಾ.ಮಾ.ನಾಯಕರು ನನ್ನನ್ನು
‘ಎರಡು ಶೈಲಿಗಳ ಸರದಾರರು’ ಅಂತ ಕರೆದರು. ಇದನ್ನು ನಾನೇ ಹೇಳಿಕೊಳ್ಳಲು ಸಂಕೋಚ ಆಗುತ್ತದೆ. ಆದರೆ ಎರಡೂ ಬರವಣಿಗೆಗಳ ಶೈಲಿ ಬೇರೆಯೇ. ಆ ವೈವಿಧ್ಯ ಕಾಪಾಡಿಕೊಂಡಿದ್ದೇನೆ. ಇದೂ ಕೂಡ ನಿರಂತರ ಪ್ರಯತ್ನವೇ.
ಒಮ್ಮೆ ಪುತಿನ ನನ್ನ ಬಗ್ಗೆ ಹೇಳಿದ್ದರು, ವಿದ್ವತ್ತಿನಿಂದ ಪ್ರೌಢವೂ, ಲೋಕಾನುಭವದಿಂದ ಪರಿಷ್ಕೃತವೂ ಆದ ತಣ್ಣ ಮನಸ್ಸು ನನ್ನದು ಅಂತ. ಅವರು ಹೇಳಿದ ಮೇಲೆಯೇ ನನಗೆ ಗೊತ್ತಾದದ್ದು, ಹಾಗಿರಬಹುದೇನೋ ಅಂತ. ಮತ್ತೊಂದು ಪ್ರಶ್ನೆ- ‘ಈ ನಿರಂತರ ಬರವಣಿಗೆ ನಿಮ್ಮ ವೈಯಕ್ತಿಕ, ಕೌಟುಂಬಿಕ ಜೀವನದ ತ್ಯಾಗ ಬೇಡಿದೆಯೇ?’ ಅದಕ್ಕೆ ಎಚ್ಚೆಸ್ಕೆ ಹೇಳಿದರು- ‘ಇಷ್ಟೆ ಬರೆಯಬೇಕು ಅಂದರೆ ಆರೋಗ್ಯ ಚೆನ್ನಾಗಿರಬೇಕು. ನನ್ನ ಕುಟುಂಬದ ಆರೋಗ್ಯದ ಈ ಆರೋಗ್ಯ ಇದೆ ಅಂತ ನನ್ನ ಭಾವನೆ. ಇದರಲ್ಲಿ ಅಂಥ ತ್ಯಾಗವೇನೂ ಇಲ್ಲ. ನನ್ನ ಸಾಮಾಜಿಕ ಚಟುವಟಿಕೆ ತುಂಬಾ ಕಡಿಮೆ. ನನ್ನ ಬರವಣಿಗೆಯೇ ನನ್ನನ್ನು ಆರೋಗ್ಯವಾಗಿ ಇಟ್ಟಿದೆ.’
ತಮ್ಮ ಅಂಕಣ ಬರಹವನ್ನು ಎಚ್ಚೆಸ್ಕೆ ಒಂದು ಕವನದಲ್ಲಿ ಹೀಗೆ ಹಿಡಿದಿಟ್ಟಿದ್ದಾರೆ:
ನಾನೊಬ್ಬ ಅಂಕಣಕಾರ
ಹುಟ್ಟುತ್ತಲೇ ಸಾಯುವಂಥ ಲೇಖನಗಳ ಬರಹಗಾರ
ನನಗಿಲ್ಲವೇ ಇಲ್ಲವಂತೆ ಸಾಹಿತ್ಯದ ಅಧಿಕಾರ
ನಿಜಸ್ವಾಮಿ ನನಗಿಲ್ಲ ಖಂಡಿತ ಆ ಬಡಿವಾರ
ಎದೆ ತುಂಬಿ ತಂದಿರುವೆ ತುಂಬೆ ಹೂಗಳ ಹಾರ
ಅನುಕೂಲವಾಗುವ ನಿದರ್ಶನ
ಒಮ್ಮೆ ಓಶೋಗೆ ಅವರ ಭಕ್ತನೊಬ್ಬ ಸಾಯಂಕಾಲದ ಪ್ರವಚನ ಮುಗಿದ ಬಳಿಕ ಕೇಳಿದನಂತೆ: ‘ಓಶೋ, ಕೆಲವರು ತಮಗೆ ಬೇಕಾದಂತೆ, ತಮ್ಮ ವಾದವನ್ನು ಸಮರ್ಥಿಸಿಕೊಳ್ಳಲು ಅನುಕೂಲವಾಗುವ ನಿದರ್ಶನ, ದೃಷ್ಟಾಂತಗಳನ್ನು ಕೊಡುತ್ತಾರೆ. ಅದನ್ನು ಕೇಳಿದಾಗ ಅವರು ಹೇಳುವುದು ನಿಜ ಎಂದು ಅನಿಸುತ್ತದೆ. ಈ ಬಗ್ಗೆ ನೀವು ಏನು ಹೇಳುತ್ತೀರಾ?’ ಅದಕ್ಕೆ ಓಶೋ, ಮು ನಸ್ರುದ್ದೀನ್ ಜೀವನದಲ್ಲಿ ನಡೆದ ಒಂದು ಪ್ರಸಂಗವನ್ನು ಹೇಳಿದರಂತೆ.
ಮುನಿಗೆ ಎಂಬತ್ತು ವರ್ಷಗಳಾಗಿದ್ದಾಗ, ಅವನ ಹೆಂಡತಿ ನಿಧನಳಾದಳು. ಆತ ತನ್ನ ಅರವತ್ತು ವರ್ಷ ವಯಸ್ಸಿನ ಮಗನಿಗೆ ತಕ್ಷಣ ಬರುವಂತೆ ಹೇಳಿ ಕಳಿಸಿದ. ತಾಯಿ ನಿಧನದ ಬಳಿಕ, ಏಕಾಂಗಿಜೀವನ ಸಾಗಿಸುತ್ತಿರುವ ತನ್ನ ತಂದೆಯನ್ನು ನೋಡಲು ಮಗ ಬಂದ. ‘ನೋಡು ಮಗನೇ, ಈ ವಯಸ್ಸಿನಲ್ಲಿ ನನಗೆ ಒಬ್ಬ ಹೆಣ್ಣಿನ
ಅಗತ್ಯವಿದೆ. ನಾನು ಮತ್ತೊಂದು ಮದುವೆ ಆಗಬೇಕೆಂದು ನಿರ್ಧರಿಸಿದ್ದೇನೆ. ಈ ವಿಷಯವನ್ನು ನಿನಗೆ ತಿಳಿಸುವುದಕ್ಕಾಗಿ ಕರೆದೆ’ ಎಂದು ಮು ಹೇಳಿದ.
ತಂದೆಯ ಮಾತು ಕೇಳಿ ಮಗ ಹೌಹಾರಿದ. ತುಸು ಚಿಂತಾಕ್ರಾಂತನಾದ. ‘ಇದೇನು ಈ ವಯಸ್ಸಿನಲ್ಲಿ ಮತ್ತೊಂದು ಮದುವೆಯಾ? ಈ ಮುದಿವಯಸ್ಸಿನಲ್ಲಿ ನಿನಗೆ ಯಾರು ಹೆಣ್ಣು ಕೊಡುತ್ತಾರೆ? ನಿನ್ನನ್ನು ವರಿಸಲು ಯಾರು ಮುಂದೆ ಬರುತ್ತಾರೆ?’ ಎಂದು ಕೇಳಿದ. ‘ಹಾಗೇಕೆ ಹೇಳುತ್ತೀಯಾ? ನನ್ನನ್ನು ಮದುವೆಯಾಗುವ ಹೆಣ್ಣು ಮುಂದಿನ ಮನೆಯಲ್ಲಿzಳೆ’ ಎಂದ ಮುಸಮಾಧಾನದಿಂದ.
ಆ ಮಾತು ಕೇಳಿದ ಮುನ ಮಗ ಜೋರಾಗಿ ನಕ್ಕುಬಿಟ್ಟ. ’ಅಪ್ಪಾ ಇದೆಂಥ ಜೋಕು? ನಿನಗೇನಾದರೂ ಹುಚ್ಚು ಹಿಡಿದಿದೆಯಾ? ಮುಂದಿನ ಮನೆ ಆ ಹುಡುಗಿಗೆ ಕೇವಲ ಹದಿನೆಂಟು ವರ್ಷ ವಯಸ್ಸು, ಗೊತ್ತಾ?’ ಎಂದ. ಅದಕ್ಕೆ ಮು ಹೇಳಿದ- ‘ನನಗೆ ಹುಚ್ಚು ಹಿಡಿದಿದೆಯಾ ಅಂತ ಕೇಳುತ್ತೀಯಲ್ಲ? ನನ್ನನ್ನು ಏನಂತ ಭಾವಿಸಿದ್ದೀಯಾ? ನಾನು ನಿನ್ನ ತಾಯಿಯನ್ನು ಮದುವೆಯಾದಾಗ, ಆಕೆಗೂ ಹದಿನೆಂಟು ವರ್ಷವಾಗಿತ್ತು. ಈಕೆಗೂ ಹದಿನೆಂಟು ವರ್ಷ ವಯಸ್ಸಾಗಿದೆ. ನಾನು ಯಾವತ್ತೂ ಹದಿನೆಂಟು ವರ್ಷದವಳನ್ನು ಮದುವೆಯಾಗೋದು. ನಿನ್ನ ತಾಯಿಗೆ ನೀಡಿದ ನ್ಯಾಯವನ್ನೇ, ಮುಂದಿನ ಮನೆ ಹುಡುಗಿಗೂ ನೀಡಲಿದ್ದೇನೆ. ಸೀಯರ
ವಿಷಯದಲ್ಲಿ ನಾನು ಪಕ್ಷಪಾತಿಯಲ್ಲ’.
ಗಣ್ಯರ ವಿದೇಶಯಾತ್ರೆ ಶಿಷ್ಟಾಚಾರ
ಒಂದು ಕಾಲವಿತ್ತು, ರಾಷ್ಟ್ರಪತಿಗಳು ವಿದೇಶ ಪ್ರವಾಸ ಹೊರಟರೆ, ಉಪರಾಷ್ಟ್ರಪತಿ, ಪ್ರಧಾನಿ ಮತ್ತು ಅವರ ಸಂಪುಟ ಸಹೋದ್ಯೋಗಿಗಳು ಹಾಗೂ ರಾಜ ತಾಂತ್ರಿಕರು ವಿಮಾನ ನಿಲ್ದಾಣಕ್ಕೆ ಹೋಗಿ, ಬೀಳ್ಕೊಟ್ಟು ಬರುತ್ತಿದ್ದರು. ರಾಷ್ಟ್ರಪತಿಯವರು ವಿದೇಶದಿಂದ ಮರಳಿದಾಗಲೂ, ಅವರ ಸ್ವಾಗತಕ್ಕೆ ಅದೇ ತಂಡ ಹಾಜರ್ ಇರುತ್ತಿತ್ತು. ಅನಂತರದ ದಿನಗಳಲ್ಲಿ ಇದೊಂದು ಶಿಷ್ಟಾಚಾರವೇ ಆಯಿತು. ಅನಂತರ ಯಾರೇ ಅಽಕಾರಕ್ಕೆ ಬರಲಿ, ಈ ಶಿಷ್ಟಾಚಾರ ಮುಂದುವರಿದು ಕೊಂಡು ಹೋಯಿತು.
ರಾಷ್ಟ್ರಪತಿಗಳು ವಿದೇಶಕ್ಕೆ ಹೊರಟಾಗ, ಉಪರಾಷ್ಟ್ರಪತಿ ಮತ್ತು ಪ್ರಧಾನಿ, ವಿಮಾನ ನಿಲ್ದಾಣಕ್ಕೆ ಆಗಮಿಸುವುದು ಸರಿ. ಆದರೆ ಪ್ರಧಾನಿಯವರು ವಿದೇಶ ಪ್ರವಾಸಕ್ಕೆ ಹೊರಟಾಗ, ಸ್ವತಃ ರಾಷ್ಟ್ರಪತಿಗಳೂ ವಿಮಾನ ನಿಲ್ದಾಣಕ್ಕೆ ಆಗಮಿಸಿ, ಸುಖ ಪ್ರಯಾಣ ಕೋರಿ, ಬೀಳ್ಕೊಡುತ್ತಿದ್ದರು. ಪ್ರಧಾನಿ ಜವಾಹರಲಾಲ್ ನೆಹರು ಅವರು ವಿದೇಶಕ್ಕೆ ಹೊರಟು ನಿಂತಾಗ ಡಾ.ರಾಜೇಂದ್ರ ಪ್ರಸಾದ ಖುದ್ದಾಗಿ ಆಗಮಿಸುತ್ತಿದ್ದರು. ಡಾ.ರಾಜೇಂದ್ರ ಪ್ರಸಾದ ಒಂದು ಅವಽ ಮುಗಿಸಿದ
ಬಳಿಕ, ಅವರಿಬ್ಬರ ಸಂಬಂಧ ಹಳಸಿತು. ನೆಹರು ಅವರು ಡಾ.ಪ್ರಸಾದರ ಜತೆಯಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳಲು ಇಷ್ಟಪಡುತ್ತಿರಲಿಲ್ಲ.
ಒಮ್ಮೆ ಪ್ರಧಾನಿ ನೆಹರು ಇರಾನ್ಗೆ ಹೊರಟಿದ್ದರು. ಪ್ರಧಾನಿಯವರನ್ನು ಬೀಳ್ಕೊಡಲು ರಾಷ್ಟ್ರಪತಿಯವರು ವಿಮಾನ ನಿಲ್ದಾಣಕ್ಕೆ ಆಗಮಿಸುತ್ತಿದ್ದಾರೆ ಎಂಬ ಮಾಹಿತಿ ನೆಹರುಗೆ ಸಿಕ್ಕಿತು. ಆಗ ಪ್ರಧಾನಿಯವರು ತುಸು ಸಿಡಿಮಿಡಿಗೊಂಡವರಂತೆ, ಬರುವುದಿದ್ದರೆ ಬೇಗ ಬರಲು ಹೇಳಿ ಎಂದರಂತೆ. ಹತ್ತು ನಿಮಿಷಗಳಾದರೂ ರಾಷ್ಟ್ರಪತಿಯವರ ಆಗಮನ ಆಗದಿದ್ದಾಗ, ತಾಳ್ಮೆ ಕಳೆದುಕೊಂಡ ನೆಹರು, ‘ರಾಷ್ಟ್ರಪತಿಯವರು ಇನ್ನೂ ಬಂದಿಲ್ಲವಲ್ಲ? ಅವರೇನು ರಾಷ್ಟ್ರಪತಿ ಭವನದಿಂದ
ಕಾಲ್ನಡಿಗೆಯಲ್ಲಿ ಬರುತ್ತಿzರಾ?’ ಎಂದು ಕೇಳಿದರಂತೆ.
ಈ ವಿಷಯವನ್ನು ಮಾಜಿ ರಾಜತಾಂತ್ರಿಕ ಮತ್ತು ಕೇಂದ್ರದ ಮಾಜಿ ಸಚಿವ ಕೆ.ನಟವರ ಸಿಂಗ್ ತಮ್ಮ ಕೃತಿಯೊಂದರಲ್ಲಿ ಬರೆದಿದ್ದಾರೆ. ಪ್ರಧಾನಿ ವಿದೇಶ ಯಾತ್ರೆ ಹೊರಟಾಗ ರಾಷ್ಟ್ರಪತಿಗಳು ಬೀಳ್ಕೊಡಲು ವಿಮಾನ ನಿಲ್ದಾಣಕ್ಕೆ ಆಗಮಿಸುವುದು ಅನೇಕ ವರ್ಷಗಳವರೆಗೆ ಮುಂದುವರಿದು ಕೊಂಡು ಬಂದಿತು. ನಂತರ ಈ ಸಂಪ್ರದಾಯ ನಿಂತಿತು. ರಾಷ್ಟ್ರಪತಿ ವಿದೇಶಕ್ಕೆ ಹೊರಟಾಗ ಮಾತ್ರ ಪ್ರಧಾನಿ ಬರುತ್ತಿದ್ದರು. ಆದರೆ ಪ್ರಧಾನಿ ವಿದೇಶ ಪ್ರವಾಸಕ್ಕೆ ಹೊರಟಾಗ ವಿಮಾನ ನಿಲ್ದಾಣಕ್ಕೆ ಸಂಪುಟ ಸಹೋದ್ಯೋಗಿಗಳು ಬರುವ ಶಿಷ್ಟಾಚಾರ ಮುಂದುವರಿದು ಕೊಂಡು ಬಂದಿತು. ಮೋದಿಯವರು ಪ್ರಧಾನಿಯಾದ ಬಳಿಕ ಇದೊಂದು ನಿರರ್ಥಕ ಕಸರತ್ತು ಎಂದು ಪರಿಗಣಿಸಿ, ಈ ಶಿಷ್ಟಾಚಾರವನ್ನು ಸಹ ತೆಗೆದು ಹಾಕಲಾಗಿದೆ.