Saturday, 23rd November 2024

ಅನುದಾನ- ಮುನಿರತ್ನ ಪಾಲಿಗೆ ಗಗನಕುಸುಮ

ಸಿನಿಗನ್ನಡ

ತುಂಟರಗಾಳಿ

ಕನ್ನಡ ಚಿತ್ರರಂಗದಲ್ಲಿ ಈಗ ನಟ ದರ್ಶನ್ ‘ಡಿ ಬಾಸ್’ ಪದವಿಯಿಂದ ಡಿಬಾರ್ ಆಗ್ತಾರಾ ಅನ್ನೋದು ಎಲ್ಲರೂ ಕೇಳ್ತಾ ಇರೋ ಪ್ರಶ್ನೆ. ಯಾಕಂದ್ರೆ ಆ ಜಾಗದ ಮೇಲೆ ಈಗ ಆಕ್ಷನ್‌ಪ್ರಿನ್ಸ್ ಧ್ರುವ ಸರ್ಜಾ ಕಣ್ಣು ಹಾಕಿದ್ದಾರೆ. ‘ನಾನೇನ್ ಮಾಡ್ಲಿ, ನನ್ನ ಹೆಸರೂ ಡಿ ಅಕ್ಷರದಿಂದಲೇ ಶುರು ಆಗುತ್ತೆ’ ಅನ್ನೋ ವಾದ ಅವರದ್ದು ಇರಬಹುದು. ಒಟ್ಟಿನಲ್ಲಿ ಈ ‘ಡಿ ಬಾಸ್’ ಹೆಸರಲ್ಲಿನ ವಿವಾದ ಈಗ ಸ್ಯಾಂಡಲ್ ವುಡ್‌ನ ಸದ್ಯಕ್ಕೆ ಬಿಗ್‌ಬಾಸ್‌ಗಿಂತಲೂ ಹಾಟ್ ಸುದ್ದಿ.

ಚಿತ್ರರಂಗದಲ್ಲಿ ಮೊದಲೆಲ್ಲಾ ನಟರುಗಳಿಗೆ ಅವರು ಮಾಡುವ ಸಿನಿಮಾಗಳ ಆಧಾರದ ಮೇಲೆ ಅವರ ನಟನೆಯ ಆಧಾರದ ಮೇಲೆ ಅವರಿಗೆ ತಕ್ಕ ಬಿರುದುಗಳನ್ನು ಕೊಡಲಾಗುತ್ತಿತ್ತು. ಡಾ.ರಾಜ್ ಕುಮಾರ್ ಅವರಿಗೆ ಅಸಂಖ್ಯ ಬಿರುದುಗಳು ಇದ್ದರೂ ಉಳಿದ ನಟರಿಗೆ ಅವರವರ ಇಮೇಜ್‌ಗೆ ತಕ್ಕಂತೆ ವಿಶೇಷಣಗಳು ಇರ್ತಾ ಇದ್ವು. ಆದರೆ, ಇತ್ತೀಚೆಗೆ ತಮ್ಮ ನೆಚ್ಚಿನ ನಟರಿಗೆ ಅವರವರ ಅಭಿಮಾನಿಗಳು ತಮಗೆ ಬೇಕಾದ ಹೆಸರುಗಳನ್ನು ಕೊಟ್ಟು ಕೊಳ್ಳೋದು ಕಾಮನ್ ಆಗಿದೆ. ಹಾಗಾಗಿ ಆ ನಟನ ಅಭಿಮಾನಿಗಳು ಒಂದು ಬಿರುದು ಕೊಟ್ರೆ, ಅಂಥದ್ದೇ ಬಿರುದನ್ನು ನಮ್ಮ ನಟನಿಗೂ ಕೊಡಬೇಕು ಎಂದು ಇನ್ನೊಬ್ಬ ನಟನ ಅಭಿಮಾನಿಗಳು ಹಠಕ್ಕೆ ಬೀಳುತ್ತಾರೆ.

ಇದು ಹೊಸದೇನಲ್ಲ ಬಿಡಿ. ಈಗ ಅದೇನೋ ಒಂಥರಾ ಬಾಸ್ ಕಲ್ಚರ್ ಶುರುವಾಗಿದೆ. ತಮ್ಮ ನೆಚ್ಚಿನ ನಟನನ್ನು ಬಾಸ್ ಅಂತ ಕರೆಯೋದು ರೂಢಿ ಆಗಿಬಿಟ್ಟಿದೆ. ಹಾಗಾಗಿ ದರ್ಶನ್ ಅಭಿಮಾನಿಗಳು ಅವರನ್ನು ‘ಡಿ ಬಾಸ್’ ಅಂತಾರೆ. ಆದರೆ ಈಗ ಅವರ ಪೇಟೆಂಟ್ ಬಾಸ್ ಪದಕ್ಕೆ ಕೊಕ್ಕೆ ಬೀಳೋ ಲಕ್ಷಣ ಗಳಿವೆ. ಅದಕ್ಕೆ ಕಾರಣ ಈಗ ಧ್ರುವ ಸರ್ಜಾ ಡಿ ಬಾಸ್ ಅಂತ -ಮಸ್ ಆಗ್ತಾ ಇರೋದು. ಅಲ್ಲದೆ ಧ್ರುವ ಮತ್ತು ದರ್ಶನ್ ನಡುವೆ ಎಲ್ಲವೂ ಸರಿ ಇಲ್ಲ ಅನ್ನೋದು ಇದಕ್ಕೆ ಇಂಬು ನೀಡುತ್ತಿದೆ.

ಇತ್ತೀಚೆಗೆ ಸ್ವತಃ ಧ್ರುವ ಅವರೇ ಮಾತನಾಡಿ ‘ನನ್ನ ಮತ್ತು ದರ್ಶನ್ ನಡುವೆ ಸಮಸ್ಯೆ ಇದೆ. ಅದನ್ನು ಬಚ್ಚಿಟ್ಟು ನಗ್ತಾ ನಗ್ತಾ ನಾಟಕ ಮಾಡೋಕೆ ನನಗೆ ಬರಲ್ಲ, ನನ್ನ ಕೆಲವು ಪ್ರಶ್ನೆಗಳಿಗೆ ದರ್ಶನ್ ಉತ್ತರಿಸಬೇಕು. ಆಮೇಲೆ ಮಾತ್ರ ಎಲ್ಲ ಸರಿಹೋಗೋದು’ ಅಂತ ನೇರವಾಗಿ ಹೇಳಿದ್ದಾರೆ. ಆದರೆ ಅವರ ಹುಟ್ಟುಹಬ್ಬದ ದಿನ ಅಂತೂ ಅವರ ಅಭಿಮಾನಿಗಳು ಅವರನ್ನು ಡಿ ಬಾಸ್ ಎಂದೇ ಹೊತ್ತು ಮೆರೆಸಿ ದ್ದಾರೆ, ಡಿ ಬಾಸ್ ಅಂದ್ರೆ ದರ್ಶನ್ ಅನ್ನೋ ಮಾತನ್ನು ಮರೆಸಿದ್ದಾರೆ. ಇದೆಲ್ಲವನ್ನೂ ನೋಡಿ, ಹಂಗಾದ್ರೆ ಈಗ ಸ್ಯಾಂಡಲ್‌ವುಡ್‌ನ ಡಿ ಬಾಸ್ ಅಲ್ಲದಿದ್ರೂ, ‘ದಿ ಬಾಸ್’ ಯಾರು ಅಂತ ಸ್ವಯಂ ಘೋಷಿತ ‘ಆರ್ ಬಾಸ್’ ರಕ್ಷಿತ್ ಬುಲೆಟ್ ತಲೆಕೆಡಿಸಿಕೊಂಡಿದ್ದಾರಂತೆ.

ಲೂಸ್ ಟಾಕ್ – ಮುನಿರತ್ನ
ಏನ್ ಮುನಿರತ್ನ ಅವ್ರೇ, ಡಿಕೆಶಿ ಕಾಲು ಹಿಡಿಯೋಕೆ ಹೋಗಿದ್ರಂತೆ?
– ಅಯ್ಯೋ, ನಮ್ಮ ಕ್ಷೇತ್ರಕ್ಕೆ ಅನುದಾನ ಕೊಡ್ಲಿಲ್ಲ ಅಂದ್ರೆ ಇನ್ನೇನ್ ಮಾಡೋದು, ಆದ್ರೆ ನೋಡಿ ಕಾಲು ಹಿಡಿದ್ರೂ ನಿಮ್ಮಂಥ ಜನ ಅದಕ್ಕೂ ಜುಟ್ಟು
ಹಿಡಿಯೋಕೆ ಬರ್ತೀರ.

ಹಂಗಲ್ಲ ಸರ್, ಸರಿ, ಅನುದಾನ ಕೊಡಲಿಲ್ಲ ಅಂದ್ರೆ ಏನ್ ಮಾಡ್ತೀರಾ?
– ಏನೋ ಕ್ಷೇತ್ರಕ್ಕೆ ಒಳ್ಳೆದಾಗ್ಲಿ ಅಂತ ಕೇಳ್ತೀನಪ್ಪ, ಕೊಡ್ಲಿಲ್ಲಾ ಅಂದ್ರೆ ಏನ್ ‘ಕುರುಕ್ಷೇತ್ರ’ ಮಾಡೋಕಾಗುತ್ತಾ? ಅದನ್ನ ನಾನಾಗ್ಲೇ ಮಾಡಿ ಆಗಿದೆ.

ಅದೂ ಸರಿನೇ, ಆದ್ರೆ ಬಿಜೆಪಿ ಸರಕಾರದಲ್ಲಿ ಅನುದಾನ ಸಿಕ್ಕಾಗ್ಲೂ ನೀವು ಏನೂ ಕೆಲಸ ಮಾಡಿಲ್ಲವಂತೆ?
– ರೀ, ದಾನ ಆಗ್ಲಿ, ಅನುದಾನ ಆಗ್ಲಿ, ಇನ್ನೊಬ್ಬರು ನಮಗೆ ಕೊಟ್ಟಿದ್ದನ್ನ ನಾವು ಮತ್ತೊಬ್ಬರಿಗೆ ಕೊಟ್ರೆ ನಮಗೆ ಕೊಟ್ಟವರಿಗೆ ಅವಮಾನ ಮಾಡಿದಂಗೆ. ಅದನ್ನ ನಮ್ಮತ್ರನೇ ಇಟ್ಕೊಬೇಕು.

ಸರಿ ಹೋಯ್ತು, ಆದ್ರೆ ಆಗ ನಮ್ಮ ಜನರು ನಿಮಗೆ ಕೊಟ್ಟ ಮನವಿ ಪತ್ರಗಳೆಲ್ಲಾ ನಿಮ್ಮ ಮನೆಯಲ್ಲೇ ಇವೆಯಂತೆ?
– ಹಲೋ, ಎಲ್ಲಾ ತಗೊಂಡೋಗಿ ಮನೇಗ್ ಇಟ್ಕೊಳ್ಳೋಕೆ ಅವೇನ್ ವೋಟರ್ ಐಡಿಗಳಾ?, ಅಲ್ಲೇ ದಾರಿಲೇ ಹರಿದುಹಾಕಿ ಬರ್ತೀನಿ.

ಸಮಾಧಾನ, ನಿಮ್ಮ ವೀಕ್‌ನೆಸ್ ನೀವೇ ಹೇಳ್ಕೊಬೇಡಿ ಸರ್. ಆಯ್ತು, ನಿಮ್ಮ ಕ್ಷೇತ್ರದಲ್ಲಿ ಸೋತ ಅಭ್ಯರ್ಥಿ ಕುಸುಮಾ ಅವರಿಗೆ ನಿಮಗಿಂತಾ ಜಾಸ್ತಿ ಬೆಲೆ, ಅವರು ಹೇಳಿದ ಕೆಲಸಗಳನ್ನೆಲ್ಲಾ ಸಿಎಂ ಮಾಡಿಕೊಡ್ತಾರೆ ಅಂತ ನೀವೇ ಹೇಳಿದ್ದೀರ. ಒಂದ್ ಕೆಲ್ಸ ಮಾಡಿಬಿಡಿ ನೀವೇ ಸಿಎಂ
ಆಗಿಬಿಡಿ.

– ಅಯ್ಯೋ ಅದೆಲ್ಲ ನಮ್ಮ ಪಾಲಿಗೆ ಗಗನ‘ಕುಸುಮ’ ಬಿಡಿ.

(ಕಾಲ್ಪನಿಕ ಸಂದರ್ಶನ)

ನೆಟ್ ಪಿಕ್ಸ್
ಈ ಸುರಪಾನ ಬಂದಿದ್ದೇ ಸುರರಿಂದ, ಅಂದ್ರೆ ದೇವತೆಗಳಿಂದ ಅಲ್ವಾ. ಅವರೇ ನಮಗೆ ಇದನ್ನೆಲ್ಲಾ ಕಲಿಸಿದ್ದು. ಅದಕ್ಕೇ ಹೆಂಡನ ಪರಮಾತ್ಮ ಅಂತಾರೋ ಏನೋ ಗೊತ್ತಿಲ್ಲ. ಸರಿ, ಹಿಂಗೇ ಒಂದ್ಸಲ ದೇವಲೋಕದಿಂದ ನಾರದ ಭೂಮಿಗ್ ಬಂದಿದ್ದ. ಅವ್ನು ಅಲ್ಲಿ ಇಲ್ಲಿ ಬತ್ತಿ ಇಡೋ ಕೆಲ್ಸ ಮಾಡಿ ಸುಸ್ತಾಗಿ ಒಂದ್ ಬಾರಿಗೆ ಹೋಗಿ ಎಣ್ಣೆ ಕುಡಿಯೋಕ್ ಕೂತ್ಕೊಂಡ. ಅಲ್ಲಿ ಖೇಮು ವೆಯ್ಟರ್ ಕೆಲ್ಸ ಮಾಡ್ತಾ ಇದ್ದ. ನಾರದ ಬಂದ ಕೂಡಲೇ ಖೇಮು ಹೋಗಿ, ‘ಸರ್, ಏನ್ ಕೊಡ್ಲಿ’ ಅಂದ. ಅದಕ್ಕೆ ನಾರದ ‘ಒಂದ್ ಕ್ವಾರ್ಟರ್ ರಮ್ ಕೊಡಪ್ಪಾ’ ಅಂದ. ಸರಿ ಖೇಮು ಹೋಗಿ ತಂದುಕೊಟ್ಟ.

ನಾರದ ಒಂದ್ ಫುಲ್ ಕ್ವಾರ್ಟರ್ ಕುಡಿದ. ಅವನಿಗೆ ಅದು ಏನೂ ಏರಲಿಲ್ಲ. ಸರಿ ಅಂತ ಖೇಮುನ ಕರೆದು ಇನ್ನೊಂದ್ ಕ್ವಾರ್ಟರ್ ತರಿಸಿದ. ಕುಡಿದ. ಅದೂ ಏರಲಿಲ್ಲ. ಇನ್ನೊಂದಾಯ್ತು. ಫುಲ್‌ಬಾಟ್ಲ್ ಆಯ್ತು. ನಾರದ ಸುಮ್ನೆ ಆರ್ಡರ್ ಮಾಡ್ತಾನೇ ಇದ್ದ. ಖೇಮು ತಂದ್ ಕೊಡ್ತಾ ಇದ್ದ. ಇವ್ನು ಕುಡಿತಾ ಇದ್ದ. ಸರಿ, ಎರಡ್ ಪುಲ್‌ಬಾಟ್ಲ್ ಆಯ್ತು. ವೆಯ್ಟರ್ ಖೇಮು ನೋಡ್ತಾನೇ ಇದ್ದ. ಇವ್ನು ಮತ್ತೆ ಇನ್ನೊಂದ್ ಕ್ವಾರ್ಟರ್ ಆರ್ಡರ್ ಮಾಡೋಕೆ ಖೇಮುನ ಕರೆದ. ಖೇಮುಗೆ ಇವನು ಕುಡಿತಾ ಇರೋ ಪರಿ ನೋಡಿ ಸಿಕ್ಕಾಪಟ್ಟೆ ಆಶ್ಚರ್ಯ ಆಗಿತ್ತು.

ಇನ್ನೊಂದ್ ಕ್ವಾರ್ಟರ್ ತಂದುಕೊಟ್ಟು, ‘ಸರ್, ನಂಗೆ ಒಂದ್ ಡೌಟು, ನೀವು ಇಷ್ಟೊಂದ್ ಕುಡಿದ್ರೂ ನಿಮಗೆ ಒಂಚೂರೂ ಏರಿಲ್ಲವಲ್ಲ ಹೆಂಗೆ?’ ಅಂದ. ಅದಕ್ಕೆ ನಾರದ, ‘ಇಲ್ಲಾ ಕಣಮ್ಮಾ, ಹೆಂಡ ಕುಡಿದ್ರೆ ಚಿತ್ತಾಗೋದು, ಕಿಕ್ ಹೊಡೆಯೋದು, ಏರೋದು, ಇದೆಲ್ಲ ಏನಿದ್ರೂ ಬರೀ ನಿಮ್ಮಂಥ ಮನುಷ್ಯರಿಗೆ, ನಾನು ನಾರದ, ದೇವಲೋಕದಿಂದ ಬಂದಿದೀನಿ’ ಅಂದ. ಆವಾಗ ವೆಯ್ಟರ್ ಖೇಮು ಅಂದ, ‘ಹಾ, ಬಡ್ಡಿ ಮಗಂಗೆ ಇವಾಗ್ ಏರ್ತು ನೋಡು’

ಲೈನ್ ಮ್ಯಾನ್
ಆಗ ತಾನೇ ಬೀಡಿಯಿಂದ ಸಿಗರೇಟ್‌ಗೆ ಶಿಫ್ಟ್ ಆಗಿರೋದು ಯಾವಾಗ ಗೊತ್ತಾಗುತ್ತೆ ?
– ಅಂಗಡಿಗೆ ಹೋಗಿ, ‘ಅಣ್ಣಾ, ಅರ್ಧ ಕಟ್ ವಿಲ್ಸ್ ಕೊಡಿ’ ಅಂತ ಕೇಳಿದಾಗ

ಚಕ್ರವರ್ತಿ ಸೂಲಿಬೆಲೆ ಮೇಲೆ ಸುಮೋಟೋ ಕೇಸ್

– ಅವರತ್ರ ಇರೋದು ಸುಮೋ ಅಲ್ಲ ಟೊಯೋಟಾಕಾರ್. ಟೊಯೋಟೋ ಕೇಸ್ ಹಾಕಬೇಕಿತ್ತು ಅಲ್ವಾ?

ಹಂಗಾದ್ರೆ, ಇತ್ತೀಚೆಗೆ ಅವರು ಆಡಿ ಕಾರನ್ನು ತಗೊಂಡಿದ್ದಾರಂತೆ. ಅದಕ್ಕೇನ್ ಮಾಡ್ಬೇಕು?
– ಹಂಗಾದ್ರೆ ಯಾವ ಸೆಕ್ಷನ್ ‘ಅಡಿ’ ಬುಕ್ ಮಾಡಬೇಕು ಅಂತ ಯೋಚನೆ ಮಾಡಬೇಕು

ಶಿವರಾಜ್ ಕುಮಾರ್ ಅವರ ‘ಘೋಸ್ಟ್’ ಸಿನಿಮಾದಲ್ಲಿ ಹೀರೋಯಿನ್ನೇ ಇಲ್ವಂತೆ

– ಗೊತ್ತಿಲ್ದೇ ಇರೋರು ಪ್ರಚಾರದ ವಿಷಯದಲ್ಲಿ ಶಿವಣ್ಣನ ಹೆಸರಿನ ಜತೆ ಪದೇ ಪದೆ ಕೇಳಿಬರೋ ‘ಅನುಪಮ’ ಖೇರ್ ಅವರ ಹೆಸರನ್ನು ಕೇಳಿ ಕೇಳಿ ಅವರನ್ನೇ ಹೀರೋಯಿನ್ ಅಂದ್ಕೊಂಡ್ರೆ ಕಷ್ಟ.

ಬಾಂಡ್ಲಿಯಲ್ಲಿ ಹಾಕಿರೋ ಪೂರಿ ಎದ್ದೇಳಬೇಕು ಅಂದ್ರೆ ರಾಷ್ಟ್ರಗೀತೆ ಹಾಡ್ಬೇಕು ಅನ್ನೋ ಜೋಕು ಕೆಲವರಿಗೆ ಬೇಸರ ತರಿಸಿದೆ
– ಜೋಕನ್ನ ಸೀರಿಯಸ್ಸಾಗಿ ತಗೋಬೇಡಿ. ಅದು ಬರೀ ‘ಸ್ಟ್ಯಾಂಡ್ ಅಪ್’ ಕಾಮಿಡಿ.

ಕುಡುಕನ ಹತ್ರ ಹೋಗಿ ‘ನಿನ್ನ ಮೇಲೆ ಕೇಸ್ ಹಾಕ್ತೀವಿ’ ಅಂತ ಹೇಳಿದ್ರೆ ಏನಂತಾನೆ?
– ಯಾವ ಬ್ರ್ಯಾಂಡು, ಎಷ್ಟ್ ಕೇಸು? ಹಾಕಿ ಹಾಕಿ ಕೇಸಿದ್ರೆ ಕೈಲಾಸ.

ಶಾರ್ಟ್ ಟರ್ಮ್ ಮೆಮೊರಿ ಲಾಸ್ ಅಂದ್ರೇನು?
– ರಾತ್ರಿ ಗುಂಡು ಹಾಕಿ, ಕಷ್ಟಗಳನ್ನು ಬೆಳಗ್ಗೆವರೆಗೂ ಮರೆಯೋದು

ಎಂಥಾ ಅನಕ್ಷರಸ್ಥ ಹುಡುಗನ ಎದೆ ಸೀಳಿದರೂ ಎರಡಕ್ಷರ ಇದ್ದೇ ಇರುತ್ತೆ

– ಯಾವುದಾದರೂ ಹುಡುಗಿಯ ಹೆಸರಿನದ್ದು