Saturday, 14th December 2024

ಹೆಚ್ಚಿತು ವಿಶ್ವಾಸಾರ್ಹತೆ

ಅಭಿಮತ

ಜೆ.ಸಿ.ಜಾಧವ

ದೇಶವೊಂದರ ಆರ್ಥಿಕ ಪರಿಸ್ಥಿತಿ ಅತ್ಯುತ್ತಮವಾಗಿರಬೇಕಾದರೆ ಅಲ್ಲಿನ ಆರ್ಥಿಕ ನೀತಿಗಳು ಹಾಗೂ ಸರಕಾರಿ ಸ್ವಾಮ್ಯದ ಆರ್ಥಿಕ ಸಂಸ್ಥೆಗಳು ಬಲಿಷ್ಠ ವಾಗಿರಬೇಕು. ಆಗ ಮಾತ್ರ ಆರ್ಥಿಕವಾಗಿ ಮುನ್ನಡೆ ಸಾಧಿಸಬಹುದು. ವಿಶ್ವದ ಆರ್ಥಿಕತೆಯನ್ನು ಪರಿಗಣಿಸಿದಾಗ ಭಾರತವು ಗಮನಾರ್ಹ ಸ್ಥಾನದಲ್ಲಿರು ವುದು ಹೆಮ್ಮೆಯ ಸಂಗತಿ. ೧೫ನೇ ಶತಮಾನದವರೆಗೆ ಭಾರತದ ಆರ್ಥಿಕತೆಯು ಜಾಗತಿಕವಾಗಿ ಮುಂಚೂಣಿಯಲ್ಲಿತ್ತು.

೧೬ನೇ ಶತಮಾನದಲ್ಲಿ ಈ ವಿಷಯದಲ್ಲಿ ಭಾರತ ಮತ್ತು ಚೀನಾ ಸರಿಸಮನಾಗಿದ್ದವು. ೧೭ನೇ ಶತಮಾನದ ವೇಳೆಗೆ ಭಾರತವನ್ನು ಹಿಂದಿಕ್ಕಿ ಚೀನಾ ಬೆಳೆಯಿತು. ಮುಂದೆ ೧೮ ಮತ್ತು ೧೯ನೇ ಶತಮಾನಗಳಲ್ಲಿ ಚೀನಾ ಹಾಗೂ ಭಾರತವನ್ನು ಹಿಂದಿಕ್ಕಿ ಅನೇಕ ದೇಶಗಳು ಬೆಳೆದವು. ಪ್ರಸ್ತುತ ಭಾರತವು ಜಾಗತಿಕ ಆರ್ಥಿಕತೆಯಲ್ಲಿ ತನ್ನದೇ ಆದ ಸ್ಥಾನವನ್ನು ಕಂಡುಕೊಂಡಿದೆ ಎಂಬುದು ಬಹುತೇಕರಿಗೆ ಗೊತ್ತಿರುವ ಸಂಗತಿಯೇ. ಪ್ರಧಾನಿ ಮೋದಿಯವರು ಕಳೆದ ಆಗಸ್ಟ್ ೧೦ರಂದು ಲೋಕಸಭೆಯಲ್ಲಿ ಭಾಷಣ ಮಾಡುವ ಸಂದರ್ಭದಲ್ಲಿ, ಸರಕಾರಿ ಸ್ವಾಮ್ಯದ ಕೆಲವು ಸಂಸ್ಥೆಗಳ ಕಾರ್ಯವೈಖರಿಯನ್ನು ಉದಾಹರಣೆಯಾಗಿ ಉಲ್ಲೇಖಿಸಿದರು.

ನಿರ್ದಿಷ್ಟವಾಗಿ ಸರಕಾರಿ ಸ್ವಾಮ್ಯದ ಬ್ಯಾಂಕುಗಳು, ಎಚ್‌ಎ ಎಲ್ ಹಾಗೂ ಭಾರತೀಯ ಜೀವವಿಮಾ ನಿಗಮ (ಎಲ್‌ಐಸಿ) ಅಗಾಧವಾಗಿ ಬೆಳೆದು ಲಾಭ ನೀಡುತ್ತಿರುವುದರ ಬಗ್ಗೆ ಅವರಲ್ಲಿ ಹೆಮ್ಮೆಯಿತ್ತು. ಈ ಪೈಕಿ ಎಲ್‌ಐಸಿ ೧೯೫೬ರಿಂದ ಕೇಂದ್ರ ಸರಕಾರದ ಸ್ವಾಮ್ಯತ್ವದಲ್ಲಿದ್ದರೂ, ಈ ೬೭ ವರ್ಷಗಳ ಅವಽಯಲ್ಲಿ ಅದು ಯಾವತ್ತೂ ಸರಕಾರದ ನೆರವನ್ನು ಬಯಸಿಲ್ಲ ಮತ್ತು ಪಡೆದಿಲ್ಲ. ಬದಲಾಗಿ ಪ್ರತಿವರ್ಷವೂ ಲಾಭಾಂಶದ ರೂಪದಲ್ಲಿ ಸಾವಿರಾರು ಕೋಟಿ ರುಪಾಯಿ ಗಳನ್ನು ಕೇಂದ್ರ ಸರಕಾರಕ್ಕೆ ನೀಡುತ್ತಾ ಬಂದಿದೆ ಎಂಬುದು ಗಮನಿಸ ಬೇಕಾದ ಸಂಗತಿ. ಅಲ್ಲದೆ ಬೇರೆ ಆರ್ಥಿಕ ಸಂಸ್ಥೆಗಳಿಗೂ ಹಣದ ನೆರವನ್ನು ನೀಡಿದ ಹೆಗ್ಗಳಿಕೆ ಎಲ್‌ಐಸಿಯದ್ದು.

೨೦೨೨ರ ವರ್ಷದಲ್ಲಿ, ಸಾರ್ವಜನಿಕ ಪ್ರಾರಂಭಿಕ ಷೇರು ವಿತರಣೆಯಲ್ಲಿ (ಐಪಿಒ) ಎಲ್ ಐಸಿಯ ಪಾಲು ಶೇ.೩೫ರಷ್ಟಿತ್ತು. ಹಾಗೆ ನೋಡಿದರೆ ಎಲ್‌ಐಸಿ ಬಗ್ಗೆ ವ್ಯಕ್ತಿಗತವಾಗಿ ಮತ್ತು ಸಾಮುದಾಯಿಕವಾಗಿ ಪ್ರಶಂಸೆಯ ಮಾತು ಗಳು ಕೇಳಿಬರುವುದು ವಿರಳವಾಗಿದ್ದರೂ, ದೇಶದ ಆರ್ಥಿಕತೆಯೆಡೆಗೆ ಯಾವಾಗಲೂ ಅನುಪಮ ಕೊಡುಗೆ ನೀಡುತ್ತಾ ಎಲೆಮರೆಯ ಕಾಯಿಯಂತೆ ಕಾರ್ಯನಿರ್ವಹಿಸುತ್ತಾ ಬಂದಿದೆ ಎಲ್‌ಐಸಿ. ದೇಶದ ಮೂಲಭೂತ ಸೌಕರ್ಯಗಳ ವಲಯದಲ್ಲಿ ಎಲ್‌ಐಸಿ ಲಕ್ಷಾಂತರ ಕೋಟಿ ರುಪಾಯಿಗಳಷ್ಟು ಹೂಡಿಕೆ ಮಾಡಿರುವುದೇ ಈ ಮಾತಿಗೆ ಸಾಕ್ಷಿ. ಈ ಎಲ್ಲ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಪ್ರಧಾನಿ ಮೋದಿಯವರು, ದೇಶದ ಪ್ರಜಾಪ್ರಭುತ್ವದ ದೇಗುಲವೆಂದೇ ಪರಿಗಣಿತವಾಗಿರುವ ಸಂಸತ್ತಿನಲ್ಲಿ ಎಲ್‌ಐಸಿಯ ಕಾರ್ಯವೈಖರಿಯ ಬಗ್ಗೆ ಹಾಗೂ ಅದು ನಿರಂತರವಾಗಿ ಲಾಭದಲ್ಲಿರುವ ಬಗ್ಗೆ ಮೆಚ್ಚುಗೆ ಸೂಚಿಸಿರುವುದು.

ಇದು ಎಲ್‌ಐಸಿಯ ಸಮಸ್ತ ಬಳಗಕ್ಕೆ ಹರ್ಷವನ್ನು ತಂದಿರುವುದರ ಜತೆಗೆ ಜವಾಬ್ದಾರಿಯನ್ನೂ ಹೆಚ್ಚಿಸಿದೆ ಎನ್ನಲಡ್ಡಿಯಿಲ್ಲ. ಹಾಗೆಯೇ, ದೇಶದ ಸರಕಾರಿ ಸ್ವಾಮ್ಯದ ೧೨ ಬ್ಯಾಂಕುಗಳು ೨೦೨೨-೨೩ರ ಆರ್ಥಿಕ ವರ್ಷದಲ್ಲಿ ಒಟ್ಟು ೧,೦೪,೬೪೯ ಕೋಟಿ ರುಪಾಯಿ ಲಾಭ ಗಳಿಸಿವೆ. ಹಾಗೆ ನೋಡಿದರೆ ಇವು ೨೦೧೮ರಲ್ಲಿ ಸುಮಾರು ೮೫,೦೦೦ ಕೋಟಿ ರುಪಾಯಿಯಷ್ಟು ನಷ್ಟವನ್ನು ಅನುಭವಿಸಿದ್ದವು. ಬ್ಯಾಂಕುಗಳ ಅನುತ್ಪಾದಕ ಆಸ್ತಿಯ ಪ್ರಮಾಣ ಭಾರಿ ಗಾತ್ರ
ದಲ್ಲಿದ್ದುದು ಈ ನಷ್ಟಕ್ಕೆ ಕಾರಣವಾಗಿತ್ತು. ಆದರೀಗ ಹಳಿಗೆ ಮರಳಿರುವ ಬ್ಯಾಂಕುಗಳು ದೇಶದ ಆರ್ಥಿಕತೆಯ ಸುಸ್ಥಿತಿಗೆ ತಮ್ಮದೇ ಆದ ಕೊಡುಗೆ ನೀಡಿರುವುದು ಹೆಮ್ಮೆಯ ಬೆಳವಣಿಗೆ. ಮತ್ತೊಂದೆಡೆ, ಸರಕಾರಿ ಸ್ವಾಮ್ಯದ ಹಿಂದೂಸ್ಥಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್‌ಎಎಲ್) ಸಂಸ್ಥೆಯು ಸ್ವದೇಶಿ ತಂತ್ರಜ್ಞಾನದ ಬಳಕೆಯೊಂದಿಗೆ ‘ತೇಜಸ್’ನಂಥ ಸುಧಾರಿತ ಯುದ್ಧವಿಮಾನಗಳನ್ನು ತಯಾರಿಸುತ್ತಿದೆ, ತನ್ಮೂಲಕ ಈ ವಲಯದಲ್ಲಿ ಭಾರತವು ಸ್ವಾವಲಂಬಿಯಾಗುವಂತಾಗಲು ಮಹತ್ತರ ಕೊಡುಗೆಯನ್ನು ನೀಡುತ್ತಿದೆ.

ಇನ್ನು, ಭಾರತದ ಷೇರು ಮಾರುಕಟ್ಟೆಯೂ ಉಚ್ಛ್ರಾಯ ಸ್ಥಿತಿಯಲ್ಲಿದೆ. ೨೦೨೩ರ ಅವಧಿಯಲ್ಲಿ ಐಪಿಒ ಮೂಲಕ ಸುಮಾರು ೫೦ ಕಾರ್ಪೊರೇಟ್ ಸಂಸ್ಥೆಗಳಿಂದ ೮೦,೦೦೦ ಕೋಟಿ ರುಪಾಯಿ ಬಂಡವಾಳವು ಷೇರು ಮಾರುಕಟ್ಟೆಗೆ ಹರಿದುಬರಲಿದೆ ಎಂಬುದು ಆರ್ಥಿಕ ತಜ್ಞರ ಅಭಿಮತ. ೨೦೨೧ರಲ್ಲಿ
೫.೫೧ ಕೋಟಿಯಷ್ಟಿದ್ದ ಡಿಮ್ಯಾಟ್ ಖಾತೆಗಳು ೨೦೨೩ರ ವೇಳೆಗೆ ೧೧.೪೪ ಕೋಟಿಗಳಿಗೆ ಏರಿರುವುದು ಮತ್ತೊಂದು ಉಲ್ಲೇಖನೀಯ ಸಂಗತಿ. ಹೀಗೆ ವಿವಿಧ ವಲಯಗಳ ಮಹತ್ತರ ಕೊಡುಗೆಯಿಂದಾಗಿ ದೇಶದ ಆರ್ಥಿಕತೆಗೆ ಪೂರಕವಾಗುವ ವಾತಾವರಣ ಸೃಷ್ಟಿಯಾಗಿರುವುದರಿಂದ, ಜಾಗತಿಕ ಆರ್ಥಿಕತೆಯಲ್ಲಿ ಭಾರತವು ಸದ್ಯದಲ್ಲೇ ಮತ್ತಷ್ಟು ಜಿಗಿತ ಕಾಣುವುದರಲ್ಲಿ ಯಾವುದೇ ಸಂದೇಹವಿಲ್ಲ.