Friday, 13th December 2024

ಸೂಕ್ತರಿಗೆ ಸಲ್ಲಲಿ ರಾಜ್ಯೋತ್ಸವ ಪ್ರಶಸ್ತಿ

ಇನ್ನು ಮೂರು ದಿನಗಳ ನಂತರ ಕರ್ನಾಟಕ ರಾಜ್ಯೋತ್ಸವ ಆಚರಣೆ ನಡೆಯಲಿದೆ. ಹೀಗಾಗಿ ರಾಜ್ಯೋತ್ಸವ ಪ್ರಶಸ್ತಿ ಕುರಿತಾದ ಚರ್ಚೆಗಳು ಮುನ್ನೆಲೆಗೆ ಬಂದಿವೆ. ಕರ್ನಾಟಕ ಸರಕಾರ ಕೊಡುವ ಪ್ರತಿಷ್ಠಿತ ಪುರಸ್ಕಾರಗಳ ಸಾಲಿಗೆ ರಾಜ್ಯೋತ್ಸವ ಪ್ರಶಸ್ತಿಯೂ ಸೇರಿದೆ. ಕರ್ನಾಟಕ ಏಕೀಕರಣವಾಗಿ ಎಷ್ಟು ವರ್ಷಗಳಾಗುತ್ತದೋ ಅಷ್ಟು ಪ್ರಶಸ್ತಿಗಳನ್ನು ಆಯಾ ವರ್ಷ ನೀಡಲು ಈ ಹಿಂದೆಯೇ ಸರಕಾರ ತಿರ್ಮಾನ ಕೈಗೊಂಡಿತ್ತು.

ಅದರಂತೆಯೇ ಈ ವರ್ಷ ೬೮ ಪ್ರಶಸ್ತಿಗಳನ್ನು ನೀಡಲು ರಾಜ್ಯೋತ್ಸವ ಪ್ರಶಸ್ತಿ ಆಯ್ಕೆ ಸಮಿತಿ ನಿರ್ಧರಿಸಿದೆ. ರಾಜ್ಯೋತ್ಸವ ಪ್ರಶಸ್ತಿಗೆ ಲಾಬಿಗಳೂ  ಜೋರಾ ಗಿಯೇ ನಡೆದಿವೆ. ಹೀಗಾಗಿ ಸಹಜವಾಗಿಯೇ ನಿಜವಾದ ಕಲಾವಿದರು ಹಾಗೂ ಸಾಧಕರಿಗೆ ಪ್ರಶಸ್ತಿ, ಪುರಸ್ಕಾರಗಳ ಬಗ್ಗೆ ನಿರಾಸೆ, ಜುಗುಪ್ಸೆ ಉಂಟಾಗಿದೆ. ಸೇವಾ ಸಿಂಧು ಪೋರ್ಟಲ್ ಮೂಲಕ ೨೫ ಸಾವಿರ ಅರ್ಜಿಗಳು ಸಲ್ಲಿಕೆಯಾಗಿದ್ದು, ಪ್ರತಿ ಅರ್ಜಿಗೆ ೧೫ ಮಂದಿ ಶಿಫಾರಸು ಮಾಡಿದ್ದಾರೆ. ಈ ಮಧ್ಯೆ ಅವಧಿ ಮುಗಿದ ಮೇಲೂ ಶಾಸಕರು ಹಾಗೂ ಸಚಿವರ ಮೂಲಕ ಖುದ್ದಾಗಿ ಅರ್ಜಿಗಳು ಸಲ್ಲಿಕೆ ಆಗುತ್ತಲೇ ಇವೆ. ಗ್ರಾಮೀಣ ಭಾಗದ ನೈಜ ಕಲಾವಿದರು ಹಾಗೂ ಸಾಹಿತಿಗಳು ಇಂದಿನ ದಿನಗಳಲ್ಲಿ ಶಾಸಕರು, ಸಚಿವರ ಬಳಿ ಹೋಗಿ ಶಿಫಾರಸು ಪತ್ರ ಪಡೆಯುವುದು ಅಸಾಧ್ಯದ ಸಂಗತಿ. ಜತೆಗೆ ಇಂದಿನ ಎಷ್ಟು ಮಂದಿ ಶಾಸಕರು ಹಾಗೂ ಸಚಿವರಿಗೆ ಕನಿಷ್ಠ ತಮ್ಮ ಕ್ಷೇತ್ರದಲ್ಲಿರುವ ಕಲಾವಿದರು, ಸಾಹಿತಿಗಳು, ಉತ್ತಮ ಶಿಕ್ಷಕರ ಹೆಸರು ತಿಳಿದಿದೆ? ಶಿ-ರಸು ಪತ್ರ ಕೊಡಿಸುವುದಾಗಿ ಕಲಾವಿದರಿಂದ ಹಣ ಪೀಕುವ ಜನಪ್ರತಿನಿಧಿಗಳ ಬೆಂಬಲಿಗರೂ ಇದ್ದಾರೆ.

ಹಾಗಾಗಿ, ಅರ್ಹ ಕಲಾವಿದರು ಮತ್ತು ಸಾಹಿತಿಗಳಿಗೆ ಪ್ರಶಸ್ತಿ ಎಂಬುದು ಬಹುತೇಕ ಸಂದರ್ಭಗಳಲ್ಲಿ ಗಗನಕುಸುಮವಾಗಿದೆ. ಪ್ರಶಸ್ತಿ ಆಯ್ಕೆ ಸಮಿತಿ ಯವರು ಇಂಥವರ ಬಗ್ಗೆ ಎಚ್ಚರ ವಹಿಸಲೇಬೇಕು. ಕಲೆ, ಸಂಸ್ಕೃತಿ, ಸಾಹಿತ್ಯದ ಕೆಲಸ ಮಾಡುತ್ತಿರುವವರನ್ನು ಪ್ರಶಸ್ತಿಗೆ ಆಯ್ಕೆ ಮಾಡುವ ಮೂಲಕ ಸೂಕ್ತ ನ್ಯಾಯ ಒದಗಿಸಬೇಕು. ಈ ಮೂಲಕ, ಅರ್ಹ ಕಲಾವಿದರು ಮತ್ತು ಸಾಹಿತಿಗಳಿಗೆ ಗೌರವ ಸಲ್ಲುವಂತೆ ನೋಡಿಕೊಳ್ಳಬೇಕು. ಆ ಮೂಲಕ ಪ್ರಶಸ್ತಿಯ ಮೌಲ್ಯವನ್ನೂ ಹೆಚ್ಚಿಸಬೇಕು.