Saturday, 23rd November 2024

ಖತರ್ನಾಕ್ ಬುದ್ದಿ ಕೊಟ್ಟ ಕ್ರೋಮೋಸೋಮ್

ಹಿಂದಿರುಗಿ ನೋಡಿದಾಗ

ಸುಮಾರು ೧ ಲಕ್ಷ ವರ್ಷಗಳ ಹಿಂದೆ ಭೂಮಿಯ ವಿವಿಧ ಭಾಗಗಳಲ್ಲಿ ನಿಯಾಂದರ್ಥಾಲ್, ಡೆನಿಸೋವನ್, ಫ್ಲಾರೆಸ್ ಕುಬ್ಜ ಮುಂತಾದ ಮಾನವರು ತಮ್ಮ ಪಾಡಿಗೆ ಬದುಕನ್ನು ನಡೆಸಿಕೊಂಡು ಹೋಗುತ್ತಿದ್ದರು. ಇದೇ ಅವಧಿಯಲ್ಲಿ ಆಫ್ರಿಕ ಖಂಡದಲ್ಲಿ ನಮ್ಮ ಪೂರ್ವಜರಾದ ಹೋಮೋ ಸೆಪಿಯನ್ಸ್ ‘ಬುದ್ಧಿವಂತ ಮಾನವರು’ ಬದುಕಿದ್ದರು. ಇವರ ಸಂಖ್ಯೆ ಅಷ್ಟೇನೂ ದೊಡ್ದದಾಗಿರಲಿಲ್ಲ. ಆಫ್ರಿಕದಲ್ಲಿನ ಅಷ್ಟೂ ಸೆಪಿಯನ್‌ಗಳನ್ನು ಲೆಕ್ಕ ಹಾಕಿದರೆ ಅದು ೧ ಲಕ್ಷವನ್ನು ಮೀರುತ್ತಿರಲಿಲ್ಲ. ಈ ಪೂರ್ವಜರು ನೋಡುವುದಕ್ಕೆ ಹೆಚ್ಚು ಕಡಿಮೆ ನಮ್ಮಂತೆಯೇ ಇದ್ದರು. ಅದು ಹೋಲಿಕೆಗೆ ಮಾತ್ರ ಸೀಮಿತವಾಗಿತ್ತು. ಆದರೆ ನಮಗಿರುವ ಬೌದ್ಧಿಕ ಸಾಮರ್ಥ್ಯಗಳಲ್ಲಿ ಅಲ್ಪಾಂಶವೂ ಅವರಿಗಿರಲಿಲ್ಲ. ಅವರಿಗೆ ತಮಗಿಂತಲೂ ಶಕ್ತಿಶಾಲಿಯಾದ ಪ್ರಾಣಿಗಳ ಕಣ್ತಪ್ಪಿಸಿ ಬದುಕುವ ಅನಿವಾರ್ಯತೆಯಿತ್ತು.

ಅವರದ್ದು ಸದಾ ಜೀವಭಯದಿಂದ ಕೂಡಿದ ಬದುಕಾಗಿತ್ತು. ಸುಮಾರು ೫೦,೦೦೦ ವರ್ಷಗಳ ಹಿಂದೆ ಒಂದು ‘ಮಹಾನ್ ಅವಘಡ’ ಸಂಭವಿಸಿತು. ಹಾಗೆಂದ ಮಾತ್ರಕ್ಕೆ ಯಾವುದೇ ಅಗ್ನಿಪರ್ವತ ಸೋಟಿಸಲಿಲ್ಲ, ಸುನಾಮಿ ಏಳಲಿಲ್ಲ, ಭೂಮಿಗೆ ಉಲ್ಕೆ ಅಪ್ಪಳಿಸಲಿಲ್ಲ. ಆ ಅವಘಡವೆಂದರೆ- ಇದ್ದಕ್ಕಿದ್ದ ಹಾಗೆ ನಮ್ಮ ಪೂರ್ವಜರು ‘ಬುದ್ಧಿವಂತ’ರಾಗಿಬಿಟ್ಟರು! ಈ ಬುದ್ಧಿವಂತಿಕೆಯೆಂಬ ಅವಘಡದ ಕಾರಣ ನಿಯಾಂದರ್ಥಾಲ್, ಡೆನಿಸೋವನ್, ಫ್ಲಾರೆಸ್ ಕುಬ್ಜ ಮಾನವರೆಲ್ಲರೂ ನಾಮಾವಶೇ ಷವಾಗಿ ಹೋದರು.

ಅದುವರೆಗೂ ಆಫ್ರಿಕ ಖಂಡಕ್ಕಷ್ಟೇ ಸೀಮಿತವಾಗಿದ್ದ ಪೂರ್ವಜರು, ಯುರೋಪ್  ಖಂಡವನ್ನು ಪ್ರವೇಶಿಸಿದರು. ಅಲ್ಲಿ ಆಗಲೇ ನಿಯಾಂದರ್ಥಾಲ್ ಮಾನವರು ಬೀಡುಬಿಟ್ಟಿದ್ದರು. ಪೂರ್ವಜರು ಎಷ್ಟು ಬುದ್ಧಿವಂತರಾಗಿದ್ದರೆಂದರೆ, ನಿಯಾಂದರ್ಥಾಲ್‌ಗಳು ವಾಸವಾಗಿದ್ದ ಪ್ರದೇಶಗಳಲ್ಲಿ ಒಂದೂ ಹಣ್ಣನ್ನು ಬಿಡದೆ ಎಲ್ಲವನ್ನೂ ತಾವೇ ತಿಂದು ಮುಗಿಸುತ್ತಿದ್ದರು. ಹಾಗೆಯೇ ಅವರಿಗೆ ಒಂದೂ ಜಿಂಕೆಯು ದೊರೆಯದ ಹಾಗೆ ಎಲ್ಲ ಪ್ರಾಣಿಗಳನ್ನೂ ಬೇಟೆಯಾಡಲಾರಂಭಿಸಿದರು. ತಿನ್ನಲು ಆಹಾರವೇ ಸಿಗದಂಥ ಸ್ಥಿತಿ ಉಂಟಾದಾಗ ಅವರು ಹಸಿವನ್ನು ತಡೆಯಲಾಗದೆ ಜೀವಬಿಡಲಾರಂಭಿಸಿದರು.

ನಿಯಾಂದರ್ಥಾಲ್‌ಗಳು ನಮ್ಮ ಪೂರ್ವಜರನ್ನು ಪ್ರತಿಭಟಿಸಲಿಲ್ಲವೆ, ಅವರೊಂದಿಗೆ ಹೋರಾಡಲಿಲ್ಲವೇ ಎನ್ನುವ ಪ್ರಶ್ನೆ ಸಹಜವಾಗಿ ಉದ್ಭವಿಸುತ್ತದೆ. ಅದಕ್ಕೆ ಉತ್ತರವಾಗಿ, ಬಹುಶಃ ಅವರು ಹೋರಾಡಿರಲೇಬೇಕು ಎನ್ನಬೇಕಾಗುತ್ತದೆ. ಆದರೆ ನಮ್ಮ ಪೂರ್ವಜರ ನವೀನ ಯುದ್ಧತಂತ್ರಗಳ ಮುಂದೆ,
ಅಸಹಾಯಕರಾದ ಅವರು ಶರಣಾಗಿರಲೇಬೇಕು. ವರ್ಷಗಳು ಕಳೆಯುತ್ತಿದ್ದ ಹಾಗೆ, ಯುರೋಪಿನಲ್ಲಿ ನಿಯಾಂದರ್ಥಾಲ್ ಸಂತತಿ ಕ್ಷೀಣಿಸುತ್ತಾ ಹೋಗಿ ಒಂದು ದಿನ ನಿರ್ನಾಮವಾಗಿ ಹೋಯಿತು. ಅವರು ಇದ್ದ ಕಡೆಯಲ್ಲೆಲ್ಲ ನಮ್ಮ ಪೂರ್ವಜರು ಬೇರುಬಿಟ್ಟರು. ಯುರೋಪ್ ಖಂಡವನ್ನು ಪ್ರವೇಶಿಸಿ ಆಕ್ರಮಿಸಿಕೊಂಡ ನಂತರ, ನಮ್ಮ ಪೂರ್ವಜರಲ್ಲಿ ಕೆಲವರು ಪೂರ್ವಾ ಭಿಮುಖವಾಗಿ ಚಲಿಸಿ ಇಂದಿನ ಸೈಬೀರಿಯ ಪ್ರದೇಶವನ್ನು ತಲುಪಿದರು.

ಅದು ಡೆನಿಸೋವನ್ ಮಾನವರು ವಾಸವಾಗಿದ್ದ ಪ್ರದೇಶ. ಅವರು ಸಾವಿರಾರು ವರ್ಷಗಳಿಂದ ಸೈಬೀರಿಯದ ಚಳಿಗೆ ಹೊಂದಿಕೊಂಡು ಯಶಸ್ವೀ ಬದುಕನ್ನು ನಡೆಸುತ್ತಿದ್ದರು. ಅಲ್ಲಿಗೆ ಬಂದ ನಮ್ಮ ಪೂರ್ವಜರು ಚಳಿಯನ್ನು ಎದುರಿಸಲು ನಾನಾ ತಂತ್ರಗಳನ್ನು ರೂಪಿಸಿಕೊಂಡರು. ಪ್ರಾಣಿಗಳ ತುಪ್ಪುಳ ಬಳಸಿ ಉಡುಪು, ಬೂಟು ಹಾಗೂ ಟೊಪ್ಪಿಯನ್ನು ತಯಾರಿಸಿಕೊಂಡರು. ಡೆನಿಸೋವನ್ ಮಾನವರ ಸಹಜ ಆಹಾರ ಮೂಲಗಳನ್ನೆಲ್ಲ ಕೊಳ್ಳೆಹೊಡೆದರು. ಆಹಾರ ದೊರೆಯದ ಕಾರಣ ಡೆನಿಸೋವನ್‌ಗಳು ಹಸಿವಿನಿಂದ ಸಾಯಲಾರಂಭಿಸಿದರು. ಕೊನೆಗೆ ಒಬ್ಬರೂ ಉಳಿಯಲಿಲ್ಲ. ನಮ್ಮ ಪೂರ್ವಜರು ಮತ್ತಷ್ಟು ಪೂರ್ವದ ಕಡೆಗೆ, ನಂತರ ಆಗ್ನೇಯ ದಿಕ್ಕಿನತ್ತ ಚಲಿಸಿದಾಗ ಅಲ್ಲಿ ಕುಬ್ಜ ಫ್ಲಾರೆಸ್ ಮಾನವರಿದ್ದದ್ದನ್ನು ನೋಡಿದರು. ಜತೆಗೆ ಕುಬ್ಜ ಆನೆಗಳಿದ್ದವು. ನಮ್ಮ ಪೂರ್ವಜರ ದೈತ್ಯಶಕ್ತಿ ಮತ್ತು ತಂತ್ರಗಳ ನಡುವೆ ಕುಬ್ಜ ಮಾನವರು ಹೆಚ್ಚು ಕಾಲ ಉಳಿಯದೆ ನಾಮಾವಶೇಷವಾದರು.

ಹೀಗೆ ನಮ್ಮ ಪೂರ್ವಜರು ಉತ್ತರ ಮತ್ತು ದಕ್ಷಿಣ ಅಮೆರಿಕ, ಆಸ್ಟ್ರೇಲಿಯಾ ಮುಂತಾದೆಡೆಯೆಲ್ಲ ಆಹಾರ ಹುಡುಕಿಕೊಂಡು ವಲಸೆ ಹೋದರು. ಅಲ್ಲಿದ್ದ ಜನರ ಆಹಾರವನ್ನು ಕಸಿದುಕೊಂಡು, ಅವರನ್ನು ನಿರ್ನಾಮ ಮಾಡಿದರು. ಕೊನೆಗೆ, ಭೂಮಿಯ ಮೇಲೆ ಇದ್ದಿರಬಹುದಾದ ಎಲ್ಲ ನಮೂನೆಯ ಮಾನವ
ಪ್ರಭೇದಗಳನ್ನು ನಿರ್ನಾಮ ಮಾಡಿ ಏಕಮೇವಾದ್ವಿತೀಯರಾದರು. ಜೀವಜಗತ್ತಿನ ಇತಿಹಾಸದಲ್ಲಿ ಇಂಥ ‘ಖತರ್ನಾಕ್ ಬುದ್ಧಿಶಕ್ತಿ’ ಅದುವರೆಗೂ ಯಾವುದೇ ಜೀವಿಗೆ ದಕ್ಕಿರಲಿಲ್ಲ.

ಅದನ್ನು ಮೊದಲ ಬಾರಿಗೆ ದಕ್ಕಿಸಿಕೊಂಡ ನಮ್ಮ ಪೂರ್ವಜರು ‘ಹೊಸ ವರದ ಅಹಂಕಾರದಿಂದ ಕೊಬ್ಬಿದ ಭಸ್ಮಾಸುರನಂತೆ’ ಎಲ್ಲವನ್ನೂ ನಾಶ ಮಾಡಲಾರಂಭಿಸಿದರು. ಒಂದು ಘಟ್ಟದಲ್ಲಿ ನಾಶಮಾಡಲು ಯಾವುದೇ ಮಾನವ ಪ್ರಭೇದಗಳು ಉಳಿದಿರಲಿಲ್ಲ. ಆಗ ನಮ್ಮ ಪೂರ್ವಜರ ನಡುವೆ ಹಲ ವು ಗುಂಪುಗಳು ಏರ್ಪಟ್ಟು ಪರಸ್ಪರ ಹೊಡೆದಾಡತೊಡಗಿದರು.ಈ ಯುದ್ಧಗಳಲ್ಲಿ ದೈಹಿಕವಾಗಿ-ಮಾನಸಿಕವಾಗಿ-ತಂತ್ರಗಾರಿಕೆಯಲ್ಲಿ ಕೈಮೇಲಾದ ಗುಂಪುಗಳು ಉಳಿದವು. ಮಿಕ್ಕವು ಸದ್ದಿಲ್ಲದೆ ಅಳಿದವು. ನಮ್ಮ ಪೂರ್ವಜರಿಗೆ ಮಾತ್ರ ಈ ‘ಭಸ್ಮಾಸುರ ಶಕ್ತಿ’ ಹೇಗೆ ಬಂತು ಎಂದು ಅಚ್ಚರಿಯಾಗುತ್ತದೆ.

ನಿಖರ ಕಾರಣ ನಮಗೆ ಗೊತ್ತಿಲ್ಲ. ಆದರೂ ವಿಜ್ಞಾನಿಗಳು ಒಂದು ಸಿದ್ಧಾಂತವನ್ನು ಮಂಡಿಸಿರುವರು. ಚಿಂಪಾಂಜ಼ಿ, ಗೊರಿಲ್ಲ, ಉರಾಂಗುಟನ್ ಮುಂತಾದ ಅಗ್ರಸ್ತನಿಗಳಲ್ಲಿ ೨೪+೨೪=೪೮ ಕ್ರೋಮೋಸೋಮುಗಳಿವೆ. ನಮ್ಮಲ್ಲಿ ಹಾಗೂ ನಮ್ಮ ಪೂರ್ವಜರಲ್ಲಿ ೨೩+೨೩=೪೬ ಕ್ರೋಮೋಸೋಮುಗಳು ಮಾತ್ರ ಇವೆ. ಇದು ಹೇಗೆ ಸಾಧ್ಯವಾಯಿತು? ಇದಕ್ಕೆ ಕಾರಣ ಉತ್ಪರಿವರ್ತನೆ! ಅಗ್ರಸ್ತನಿಗಳಲ್ಲಿರುವ ಹೆಚ್ಚುವರಿ ೨೪ನೇ ಜೊತೆಯ ಕ್ರೋಮೋಸೋಮು, ನಮ್ಮ ಪೂರ್ವಜರ ೨ನೆಯ ಕ್ರೋಮೋಸೋಮಿನೊಡನೆ ವಿಲೀನವಾದವು. ವಂಶವಾಹಿಗಳು ಹೊಸ ಕ್ರಮಗತಿಯನ್ನು ರೂಪಿಸಿಕೊಂಡು, ಮರುಜೋಡಣೆ
ಯಾದವು. ಕೆಲವು ವಂಶವಾಹಿಗಳು ಸದಾಕಾಲಕ್ಕೂ ಸ್ಥಗಿತವಾದವು. ಕೆಲವು ಹೊಸ ವಂಶವಾಹಿಗಳು ಹುಟ್ಟಿಕೊಂಡವು.

ಈ ಹೊಸ ನಮೂನೆಯ ೨ನೆಯ ಕ್ರೋಮೋಸೋಮು, ನಮ್ಮ ಪೂರ್ವಜರಿಗೆ ಪ್ರಳಯಾಂತಕ ಬುದ್ಧಿವಂತಿಕೆ ಕೊಟ್ಟವು ಎನ್ನಲಾಗಿದೆ. ಇದು ನಿಜವಾಗಿ ದ್ದಲ್ಲಿ, ಹೊಸ ೨ ಕ್ರೋಮೋಸೋಮಿನ ಜನ್ಮವು ಕೇವಲ ನಮ್ಮ ಪೂರ್ವಜರಲ್ಲಿ, ಅಂದರೆ ಸೆಪಿಯನ್ಸ್ ಜನರಿಗೆ ಮಾತ್ರ ಸೀಮಿತವಾಗಿತ್ತೇ ಅಥವಾ
ನಿಯಾಂದರ್ಥಾಲ್, ಡೆನಿಸೋವನ್, ಫ್ಲಾರೆಸ್‌ಗಳಲ್ಲೂ ನಡೆಯಿತೇ? ಎನ್ನುವ ಪ್ರಶ್ನೆ ಏಳುತ್ತದೆ. ಇದಕ್ಕೆ ಉತ್ತರ ತಿಳಿದಿಲ್ಲ. ಬಹುಶಃ ಇತರ ಪ್ರಭೇದ ಗಳಲ್ಲೂ ಈ ಉತ್ಪರಿವರ್ತನೆ ನಡೆದಿರಬೇಕು ಎನ್ನುವ ವಾದಕ್ಕೆ ಹೆಚ್ಚಿನ ಒಲವು ದೊರೆತಿದೆ.

ಹಾಗಿದ್ದ ಮೇಲೆ ನಮ್ಮ ಪೂರ್ವಜರಲ್ಲಿ ಮಾತ್ರ ಯಾಕೆ ಈ ಸರ್ವದಮನಕಾರಿ ಬುದ್ಧಿವಂತಿಕೆ ಬೆಳೆಯಿತು ಎಂಬ ಪ್ರಶ್ನೆಗೆ ಒಪ್ಪಬಹುದಾದ ವಿವರಣೆಯನ್ನು ನೀಡಲು ಸಾಧ್ಯವಾಗಿಲ್ಲ. ಬಹುಶಃ ಎಲ್ಲ ರೀತಿಯ ಕೊರತೆಗಳ ನಡುವೆ ಬದುಕುವ ಛಲ ಅವರಲ್ಲಿ ಅಧಿಕವಾಗಿ ಇದ್ದಿರಬೇಕು. ನಮ್ಮ ಪೂರ್ವಜರ ವರ್ತನೆಗಳಲ್ಲಿ ಕಂಡುಬಂದ ಕೆಲವು ವಿಶಿಷ್ಟ ಗುಣಲಕ್ಷಣಗಳು ಅವರು ಬುದ್ಧಿವಂತರಾಗಲು ನೆರವಾದವು ಎನ್ನಲಾಗಿದೆ. ಅವನ್ನು ಸ್ಥೂಲವಾಗಿ ಗಮನಿಸೋಣ. ನಿಯಾಂದರ್ಥಾಲ್ ಮಾನವನು ನಮ್ಮ ಪೂರ್ವಜರಿಗಿಂತ ಕಟ್ಟುಮಸ್ತಾಗಿದ್ದ, ಬಲಶಾಲಿಯಾಗಿದ್ದ.

ಅವನೊಡನೆ ದ್ವಂದ್ವಯುದ್ಧಕ್ಕೆ ಇಳಿದಿದ್ದರೆ, ನಮ್ಮ ಪೂರ್ವಜ ಸೋಲುತ್ತಿದ್ದ. ಹಾಗೆಯೇ ಚಿಂಪಾಂಜ಼ಿ, ಗೊರಿಲ್ಲಗಳ ದೈಹಿಕ ಶಕ್ತಿಯೂ ಅಪಾರ. ಇಂದಿಗೂ ನಾವು ಚಿಂಪಾಂಜ಼ಿಯನ್ನು ಸ್ವತಂತ್ರವಾಗಿ ಎದುರಿಸಲಾರೆವು. ಆದರೂ ನಮ್ಮ ಪೂರ್ವಜರು ನಿಯಾಂದರ್ಥಾಲಾದಿಯಾಗಿ ಎಲ್ಲ ಅಗ್ರಸ್ತನಿಗಳನ್ನು, ವೂಲಿ ಮ್ಯಾಮಥ್, ಸೇಬರ್ ಟೂತ್ ಟೈಗರ್ ಮುಂತಾದ ಶಕ್ತಿಶಾಲಿ ಜೀವಿಗಳನ್ನು ಯಶಸ್ವಿಯಾಗಿ ಎದುರಿಸಿ ಬದುಕಿದರು. ಇದು
ಹೇಗೆ ಸಾಧ್ಯವಾಯಿತು? ಎಂಬ ಪ್ರಶ್ನೆಏಳುತ್ತದೆ. ಇದಕ್ಕೆ ಒಂದು ಉತ್ತರ ಸಹಕಾರ ತತ್ತ್ವ!

ನಮ್ಮ ಪೂರ್ವಜರ ಪ್ರಳಯಾಂತಕ ಬುದ್ಧಿಗೆ ‘ಒಗ್ಗಟ್ಟಿನಲ್ಲಿ ಬಲವಿದೆ’ ಎಂಬ ತತ್ತ್ವ ಹೊಳೆಯಿತು. ಒಬ್ಬ ಪೂರ್ವಜನು ಒಬ್ಬ ನಿಯಾಂದರ್ಥಾಲ್ ಮಾನವನನ್ನು ಎದುರಿಸಲು ಸಾಧ್ಯವಾಗುತ್ತಿರಲಿಲ್ಲ, ನಿಜ. ಒಬ್ಬನ ಬದಲು ೧೦ ಪೂರ್ವಜರು, ಒಬ್ಬ ನಿಯಾಂದರ್ಥಾಲ್ ಮಾನವನ ಮೇಲೆ ಒಮ್ಮೆಲೆ ಮುಗಿಬಿದ್ದರೆ, ಆಗ ಆತ ಬದುಕುಳಿಯುವ ಸಾಧ್ಯತೆ ಕ್ಷೀಣವಾಗುತ್ತಿತ್ತು. ಇದನ್ನು ಅರಿತ ನಮ್ಮ ಪೂರ್ವಜರು ಎಲ್ಲ ರೀತಿಯ ಕೆಲಸಗಳಲ್ಲಿ ಸಹಕಾರ ತತ್ತ್ವವನ್ನು ಅಳವಡಿಸಿಕೊಂಡರು. ಹಾಗಾಗಿ ಅವರು ವೂಲಿ ಮ್ಯಾಮಥ್, ಸೇಬರ್ ಟೂತ್ ಟೈಗರ್ ಮುಂತಾದ ಹಿಂಸ್ರಪಶುಗಳನ್ನು ಸುಲಭವಾಗಿ ಬೇಟೆಯಾಡಲು ಸಾಧ್ಯವಾಯಿತು. ಉರಿವ ಪಂಜು, ಬಿಲ್ಲು ಬಾಣ, ಭರ್ಜಿ ಹಿಡಿದುಕೊಂಡು ೨೫-೩೦ ಜನ ಒಮ್ಮೆಲೆ ಅರಚುತ್ತಾ ನುಗ್ಗಿದಾಗ, ವೂಲಿ ಮ್ಯಾಮತ್ ಹೌಹಾರಿ ಓಡುತ್ತಿತ್ತು.

ಹೀಗೆ ಓಡುತ್ತಿದ್ದ ಅದು ಬೆಟ್ಟದಂಚಿಗೆ ಬಂದಾಗ ನಿಲ್ಲುತ್ತಿತ್ತು. ನಮ್ಮ ಪೂರ್ವಜರ ಟೋಲಿಯು ಮತ್ತಷ್ಟು ಗದ್ದಲ ಮಾಡಿದಾಗ, ಅದು ಬೇರೆ ದಾರಿಯಿಲ್ಲದೆ ಬೆಟ್ಟದಿಂದ ಜಾರಿ ಕೆಳಕ್ಕೆ ಬೀಳುತ್ತಿತ್ತು. ಅಲ್ಲಿಗೆ ನಮ್ಮ ಪೂರ್ವಜರ ಉದ್ದೇಶ ಈಡೇರುತ್ತಿತ್ತು. ಈ ಸಹಕಾರ ತತ್ತ್ವವನ್ನು ನಾವು ಇಂದಿಗೂ ಪಾಲಿಸುತ್ತಿದ್ದೇವೆ. ಕಾಶ್ಮೀರದಲ್ಲಿ ರೈತ ಬೆಳೆದ ಸೇಬನ್ನು ಸಗಟು ವ್ಯಾಪಾರಿ ಕೊಂಡು ಅಲ್ಲಿನ ಕಾರ್ಖಾನೆಗೆ ಪೂರೈಸುತ್ತಾನೆ. ಕಾರ್ಖಾನೆ ವ್ಯವಸ್ಥಿತವಾಗಿ ಸೇಬಿಗೆ ಮೇಣದ ಲೇಪವನ್ನು ಹಚ್ಚುತ್ತದೆ. ಮತ್ತೊಬ್ಬ ಸಗಟು ವ್ಯಾಪಾರಿ ಅದನ್ನು ಕೊಂಡು ರೈಲಿನ ಮೂಲಕ ಬೆಂಗಳೂರಿನ ಮತ್ತೊಬ್ಬ ಸಗಟು ವ್ಯಾಪಾರಿಗೆ ಕಳಿಸುತ್ತಾನೆ.

ಅವನಿಂದ ಚಿಲ್ಲರೆ ವ್ಯಾಪಾರಿಗಳು ಕೊಳ್ಳುತ್ತಾರೆ. ಅವರಿಂದ ನಾವು ಸೇಬನ್ನು ಕೊಂಡು ತಿನ್ನುತ್ತೇವೆ. ಸೇಬನ್ನು ಬೆಳೆದ ರೈತ, ಮೇಣ ಲೇಪಿಸಿದ ಕಾರ್ಮಿಕ, ಬೆಂಗಳೂರಿಗೆ ರವಾನಿಸಿದ ಸಗಟು ವ್ಯಾಪಾರಿ, ಸೇಬನ್ನು ಮಾರಿದ ಚಿಲ್ಲರೆ ವ್ಯಾಪಾರಿ ನಮಗೆ ವೈಯುಕ್ತಿಕವಾಗಿ ಗೊತ್ತಿಲ್ಲ. ಆದರೂ ಇವರೆಲ್ಲರ ವ್ಯವಸ್ಥಿತ ಸಹಕಾರದಿಂದ ನಮಗೆ ಸೇಬು ದೊರೆಯುತ್ತಿದೆ. ಇಂಥ ಸಹಕಾರ ತತ್ತ್ವವು ಚಿಂಪಾಂಜ಼ಿಗಳಲ್ಲಾಗಲಿ ನಮ್ಮ ದಾಯಾದಿ ಪೂರ್ವಜರಲ್ಲಾಗಲಿ ಇರಲಿಲ್ಲ. ಚಿಂಪಾಂಜ಼ಿಗಳಲ್ಲೂ ಕುಟುಂಬವಿದೆ, ಸಮುದಾಯವಿದೆ.

ಅವು ಮತ್ತೊಂದು ಸುಪರಿಚಿತ ಚಿಂಪಾಂಜ಼ಿಗೆ ನೆರವಾಗಬಹುದೇನೋ. ಆದರೆ ಅಪರಿಚಿತ ಚಿಂಪಾಂಜ಼ಿಗೆ ನೆರವಾಗುವುದಿಲ್ಲ. ನಮ್ಮ ದಾಯಾದಿ
ಪೂರ್ವಜರೂ ವೈಯುಕ್ತಿಕವಾಗಿ ಕೌಟುಂಬಿಕವಾಗಿ ನಮ್ಮ ಸೆಪಿಯನ್ ಪೂರ್ವಜರ ಜತೆ ಹೊಡೆದಾಡಿರಬಹುದು. ಆದರೆ ಅವರೆಲ್ಲರೂ ಸಮುದಾಯ ಸ್ವರೂಪದಲ್ಲಿ ಒಮ್ಮನದಿಂದ ಹೋರಾಡಿದರಾ ಎನ್ನುವ ಬಗ್ಗೆ ಅನುಮಾನವಿದೆ. ಮಾನವರು ತಮ್ಮ ಬುದ್ಧಿವಂತಿಕೆಯಿಂದ ಚಂದ್ರನ ಅಂಗಳವನ್ನು ಮೆಟ್ಟಿ ಮಂಗಳನ ಅಂಗಳಕ್ಕೆ ಜಿಗಿಯುತ್ತಿರುವುದು ಸತ್ಯ. ಹಾಗೆಯೇ ಅದೇ ಬುದ್ಧಿವಂತಿಕೆಯಿಂದ ಸಿದ್ಧವಾಗಿರುವ ಪರಮಾಣು ಬಾಂಬುಗಳು ಯಾವಾಗ ಸೆಪಿಯನ್ಸ್‌ರನ್ನು ನಾಮಾವಶೇಷ ಮಾಡುತ್ತವೆಯೋ ಎಂಬ ಭೀತಿಯ ಕತ್ತಿ ನಮ್ಮ ತಲೆಮೇಲೆ ತೂಗುತ್ತಿರುವುದು ಪರಮಸತ್ಯವಾಗಿದೆ.