Friday, 13th December 2024

ಶುದ್ಧ ಜೀವನಶೈಲಿ ಇಂದಿನ ಅಗತ್ಯ

ಕರೋನೋತ್ತರ ಅವಧಿಯಲ್ಲಿ ಹೃದ್ರೋಗ-ಹೃದಯಾಘಾತದ ಹೆಚ್ಚಳ ಸಂಬಂಧ ಕಳೆದೊಂದು ವಾರದ ತೀವ್ರ ಚರ್ಚೆಯ ವಸ್ತು. ಇತ್ತೀಚಿನ ದಿನಗಳಲ್ಲಿ ಹೃದಯಾಘಾತದಿಂದ ಮೃತಪಡುತ್ತಿರುವವರ ಸಂಖ್ಯೆ ಹೆಚ್ಚಳವಾಗುತ್ತಿದ್ದು ಕೋವಿಡ್ ಬಳಿಕದ ಅಡ್ಡ ಪರಿಣಾಮವೇ ಇದಕ್ಕೆ ಕಾರಣ ಎಂಬ ವಾದ ಕೇಳಿಬಂದಿದೆ. ಸುಮಾರು ೩೦ ಪ್ರತಿಶತದಷ್ಟು ಹೃದಯಾಘಾತವನ್ನು ೪೦ ವರ್ಷ ಕ್ಕಿಂತ ಕಡಿಮೆ ವಯಸ್ಸಿನ ಜನರು ಎದುರಿಸುತ್ತಾರೆ.

ಕರ್ನಾಟಕದಲ್ಲೇ ಇಂಥ ಹೃದಯಾಘಾತ ಪ್ರಕರಣಗಳು ಶೇ.೨೨ ರಷ್ಟು ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿಯೇ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಅವರು ಇತ್ತೀಚೆಗೆ, ಕೋವಿಡ್ ಸೋಂಕಿತರು ಹೃದಯಾಘಾತವನ್ನು ತಪ್ಪಿಸಲು ಸ್ವಲ್ಪ ಸಮಯ ದವರೆಗೆ ವ್ಯಾಯಾಮವೂ ಸೇರಿದಂತೆ ಶಾರೀರಿಕ ಕಸರತ್ತು, ತೀವ್ರ ಒತ್ತಡದ ಸೇವೆಗಳಿಂದ ದೂರವಿರಬೇಕು ಎಂಬ ಸಲಹೆ ನೀಡಿ ದ್ದರು. ಇದೇ ಸಂದರ್ಭದಲ್ಲಿ ಕರೋನಾ ಸನ್ನಿವೇಶದಲ್ಲಿನ ಆರ್ಥಿಕ ಹಿನ್ನಡೆಯನ್ನು ಸರಿದೂಗಿಸಲು ಭಾರತದಲ್ಲಿ ಉದ್ಯೋಗಿಗಳು ವಾರಕ್ಕೆ ೭೦ ಗಂಟೆ ಕಾರ್ಯ ನಿರ್ವಹಿಸಬೇಕೆಂದು ಇನೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ ಹೇಳಿದ್ದಾರೆ.

ಈ ಎರಡೂ ವೈರುಧ್ಯಗಳು ಸಹ ಪರಸ್ಪರ ತೀವ್ರ ಚರ್ಚೆಯನ್ನು ಹುಟ್ಟು ಹಾಕಿವೆ. ಆದರೆ ವೈದ್ಯರ ಪ್ರಕಾರ ಕೋವಿಡ್‌ನಿಂದಲೇ ಹೃದಯಾಘಾತ ಹೆಚ್ಚಳ ಎಂಬುದಕ್ಕೆ ಯಾವುದೇ ವೈಜ್ಞಾನಿಕ ಮಾಹಿತಿ ಇಲ್ಲ. ಇಲ್ಲಿ ಗಮನಿಸಬೇಕಾದುದು ಕೋವಿಡ್‌ನ ಆರಂಭಿಕ ಘಟ್ಟಗಳಲ್ಲಿ ಬಳಕೆಯಾದ ಸ್ಟೆರಾ ಯ್ಡ್‌ಗಳ ಸೇವನೆ ಬಹುತೇಕರಲ್ಲಿ ಅಡ್ಡಪರಿಣಾಮ ಉಂಟುಮಾಡಿರುವ ಸಾಧ್ಯತೆ ಯನ್ನು ಯಾರೂ ಅಲ್ಲಗಳೆಯುತ್ತಿಲ್ಲ. ಇದನ್ನು ಹೊರತುಪಡಿಸಿ, ಆಧುನಿಕ ನಗರಕೇಂದ್ರಿತ ಜೀವನದಲ್ಲಿ, ಯಾಂತ್ರಿಕತೆಗೆ ಬಲಿಬಿದ್ದು, ಒತ್ತಡ ನಿರ್ವಹಿಸಲಾಗದೇ ಕಿರಿಯ ವಯಸ್ಸಿಗೇ ಹೃದಯಾಘಾತಕ್ಕೊಳಗಾಗುತ್ತಿರುವವರ ಸಂಖ್ಯೆ ಹೆಚ್ಚಿರುವುದೂ
ನಿಜ.

ಇದಕ್ಕೆ ವೃತ್ತಿಸ್ಥಳದಲ್ಲಿನ ಒತ್ತಡವೊಂದೇ ಕಾರಣವಲ್ಲ. ಜೀವನ ಶೈಲಿ, ಧೂಮಪಾನ-ಮಧ್ಯಪಾನದಂಥ ಹವ್ಯಾಸಗಳು, ದಿನಚರಿ ಯಲ್ಲಿನ ಏರುಪೇರು, ಮಾಲಿನ್ಯ, ಕೌಟುಂಬಿಕ ಸಂಬಂಧಗಳಲ್ಲಿನ ಟೊಳ್ಳುತನ ಇತ್ಯಾದಿಗಳ ಕೊಡುಗೆಯೂ ಸಾಕಷ್ಟಿದೆ. ಯುವ ಜನಾಂಗ ಸ್ಪರ್ಧೆಗೆ ಬಿದ್ದು, ಶೀಘ್ರ ಯಶಸ್ಸು, ದಿಢೀರ್ ಶ್ರೀಮಂತಿಕೆಯ ಕನಸಿನತ್ತ ಓಡುತ್ತಿದ್ದು, ಆರೋಗ್ಯಕರ ಜೀವನವನ್ನು ನಿರ್ಲಕ್ಷಿಸುತ್ತಿದ್ದಾರೆ ಎಂಬುದರಲ್ಲಿ ಅನುಮಾನವಿಲ್ಲ. ಜತೆಗೆ ಗಂಟೆಗಳವರೆಗೆ ಕೂತೇ ಕೆಲಸ ಮಾಡುವ, ಎಲ್ಲಕ್ಕೂ ಯಂತ್ರಗಳನ್ನು ಅವಲಂಬಿಸುವ ಸೆಡೆಂಟರಿ ಜೀವನ ಶೈಲಿಯ ಪರಿಣಾಮ ಬೊಜ್ಜು ಹಾಗೂ ಕೊಬ್ಬಿನ ಸಂಗ್ರಹ ಹೆಚ್ಚುತ್ತಿದೆ. ಈ ಬಗೆಗೆ ವೈದ್ಯ ಸಮುದಾಯ ಎಚ್ಚರಿಸುತ್ತಿದ್ದಂತೆಯೇ ಚಟುವಟಿಕೆಯ ಜೀವನ ರೂಢಿಸಿಕೊಳ್ಳಲಾಗದ ಮಂದಿ, ದೇಹದಾರ್ಢ್ಯ ಕಾಪಾಡಿಕೊಳ್ಳಲು ಜಿಮ್‌ನಂಥ ಅತಿಯಾದ ಕಸರತ್ತಿನ ಮೊರೆ ಹೋಗುತ್ತಿದ್ದಾರೆ.

ಇಂಥ ಅತಿ ದೇಹದಂಡನೆಯ ಬದಲು ನಿಯಮಿತ-ಪೌಷ್ಟಿಕಾಂಶಯುಕ್ತ ಆಹಾರ ಸೇವನೆ, ಉತ್ತಮ ವಿಶ್ರಾಂತಿ, ಶುದ್ಧ-ಶಿಸ್ತುಬದ್ಧ ಜೀವನ ಶೈಲಿ, ದೈನಂದಿನ ಚಟುವಟಿಕೆಯ ಬಗೆಗೆ ಯೋಚಿಸುವ ಅಗತ್ಯ ಹಿಂದೆಂದಿಗಿಂತಲೂ ಹೆಚ್ಚಿದೆ.