ಸಂಗತ
ಡಾ.ವಿಜಯ್ ದರಡಾ
ಕ್ರಿಕೆಟ್ ವಿಶ್ವಕಪ್‌ನಲ್ಲಿ ಅಫ್ಘಾನಿಸ್ತಾನದ ತಂಡ ಪಾಕಿಸ್ತಾನವನ್ನು ಸೋಲಿಸುತ್ತದೆ ಎಂದು ಯಾರೂ ನಿರೀಕ್ಷಿಸಿರಲಿಲ್ಲ! ಏಕೆಂದರೆ ಐಸಿಸಿ ವರ್ಲ್ಡ್ ಕಪ್‌ನಲ್ಲೇ ಅಫ್ಘಾನಿಸ್ತಾನ ಅತ್ಯಂತ ದುರ್ಬಲ ತಂಡವೆಂದು ಎಲ್ಲರೂ ಭಾವಿಸಿದ್ದರು. ಆದರೆ ಅಫ್ಘಾನಿಸ್ತಾನದ ಹುಡುಗರ ಉತ್ಸಾಹ, ಕೆಚ್ಚು ಯಾವ ಪರಿಯಿತ್ತೆಂದರೆ, ಅವರು ಪಾಕಿಸ್ತಾನವನ್ನು ೮ ವಿಕೆಟ್‌ಗಳಿಂದ ಸೋಲಿಸಿ ಎಸೆದರು. ಇದೇ ಅಫ್ಘಾನಿಸ್ತಾನ್ ತಂಡ ೨ ವಾರದ ಹಿಂದೆ ಇಂಗ್ಲೆಂಡ್ ತಂಡವನ್ನೂ ಮಣಿಸಿತ್ತು.
ಈಗ ಪಾಕಿಸ್ತಾನವನ್ನು ಸೋಲಿಸಿದ ಮೇಲೆ ಅಫ್ಘಾನಿಸ್ತಾನದ ಖೋಸ್ಟ್ ಹಾಗೂ ಕಾಬೂಲ್ ಸೇರಿದಂತೆ ಸಾಕಷ್ಟು ಹಳ್ಳಿ ಮತ್ತು ನಗರಗಳಲ್ಲಿ ಅಭೂತಪೂರ್ವ ಸಂಭ್ರಮಾಚರಣೆ ನಡೆಯಿತು. ಗೆದ್ದಾಗ ಸಂಭ್ರಮಿಸುವುದು ಸಹಜವೇ. ಆದರೆ ಅಫ್ಘಾನಿಸ್ತಾನದ ಈ ಸಂಭ್ರಮಾಚರಣೆ ವಿಶೇಷವಾಗಿತ್ತು. ಇದು ಸಾಮಾನ್ಯ ಸಂಭ್ರಮಾಚರಣೆಯಾಗಿರಲಿಲ್ಲ. ಬದಲಿಗೆ, ಶತ್ರುವನ್ನು ಸೋಲಿಸಿದ ಮೇಲೆ ನಡೆಸಿದ ಸಂಭ್ರಮಾಚರಣೆಯಂತಿತ್ತು! ಮ್ಯಾಚ್ ಗೆಲ್ಲುತ್ತಿದ್ದಂತೆ ತಾಲಿಬಾನಿಗಳು ರಸ್ತೆಗಿಳಿದು ಗಂಡು ಹಾರಿಸಿ ಸಂಭ್ರಮಾಚರಣೆ
ಆರಂಭಿಸಿದ್ದರು! ಜನರು ಕೂಡ ಮನೆಯಿಂದ ಹೊರಬಂದು ಅವರ ಜತೆ ಸೇರಿ ಖುಷಿಯಿಂದ ಕುಣಿಯತೊಡಗಿದ್ದರು.
ಅನುಮಾನವೇ ಬೇಡ, ಪಾಕಿಸ್ತಾನವನ್ನು ವಿಶ್ವಕಪ್ ಕ್ರಿಕೆಟ್‌ನಲ್ಲಿ ಸೋಲಿಸಿದ ಮೇಲೆ ಅಫ್ಘಾನಿಸ್ತಾನ ತಾನು ಶತ್ರುವನ್ನು
ಸೋಲಿಸಿದ್ದೇನೆ ಎಂದೇ ಸಂಭ್ರಮಾಚರಣೆ ನಡೆಸಿದೆ. ಅದು ಬಹಳ ಬೇಗ ಸಾಬೀತಾಯಿತು ಕೂಡ. ಪಂದ್ಯದಲ್ಲಿ ೮೭ ರನ್ ಸಿಡಿಸಿ, ಗೆಲುವಿನ ನಂತರ ‘ಮ್ಯಾನ್ ಆಫ್ ದಿ ಮ್ಯಾಚ್’ ಟ್ರೋಫಿ ಸ್ವೀಕರಿಸಲು ಪೋಡಿಯಂಗೆ ಬಂದ ಅಫ್ಘಾನಿಸ್ತಾನದ ಬ್ಯಾಟ್ ಮನ್ ಇಬ್ರಾಹಿಂ ಜದ್ರಾನ್ ‘ಪಾಕಿಸ್ತಾನದಿಂದ ಬಲವಂತವಾಗಿ ಹೊರದಬ್ಬಿಸಿಕೊಳ್ಳುತ್ತಿರುವ ಎಲ್ಲ ಆಫ್ಘಾನ್ ನಿರಾಶ್ರಿತರಿಗೆ ಈ ಬಹು ಮಾನವನ್ನು ನಾನು ಅರ್ಪಿಸುತ್ತೇನೆ’ ಎಂದು ಬಹಿರಂಗವಾಗಿ ಹೇಳಿದರು. ಜದ್ರಾನ್ ನೀಡಿದ ಈ ಹೇಳಿಕೆ ಪಾಕಿಸ್ತಾನದ ಕೆನ್ನೆಗೆ ಬಾರಿಸಿದ ತಪರಾಕಿಯಂತಿತ್ತು.
ಅಫ್ಘಾನಿಸ್ತಾನದ ಒಬ್ಬ ವ್ಯಕ್ತಿಯಿಂದ ಇಂಥದ್ದೊಂದು ಹೇಳಿಕೆ ಬರುತ್ತದೆಯೆಂದು ಪಾಕಿಸ್ತಾನ ಕನಸಿನಲ್ಲೂ ನಿರೀಕ್ಷಿಸಿರಲಿಲ್ಲ.
ಹಾಗಿದ್ದರೆ ಅಫ್ಘಾನಿಸ್ತಾನದ ಈ ಸಿಟ್ಟಿಗೆ ಕಾರಣವೇನು? ನವೆಂಬರ್ ೧ರೊಳಗೆ ಅ-ನಿಸ್ತಾನದ ೧೭ ಲಕ್ಷ ನಿರಾಶ್ರಿತರು ಪಾಕಿಸ್ತಾನ ದಿಂದ ಜಾಗ ಖಾಲಿ ಮಾಡಬೇಕೆಂದು ಪಾಕ್ ಸರಕಾರ ಕಟ್ಟುನಿಟ್ಟಿನ ಆದೇಶ ಹೊರಡಿಸಿತ್ತು. ಈ ಆದೇಶಕ್ಕೆ ಅಫ್ಘಾನಿಸ್ತಾನದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿರುವುದಷ್ಟೇ ಅಲ್ಲ, ಬೇರೆ ಬೇರೆ ದೇಶಗಳು ಕೂಡ ಮಾನವೀಯ ಹಿನ್ನೆಲೆಯಲ್ಲಿ ಇದನ್ನು ತೀವ್ರವಾಗಿ ಟೀಕಿಸಿವೆ. ಅಷ್ಟು ಕಡಿಮೆ ಅವಧಿಯಲ್ಲಿ ಅಷ್ಟೊಂದು ದೊಡ್ಡ ಸಂಖ್ಯೆಯ ಜನರು ದೇಶ ಬಿಟ್ಟು ಹೋಗಬೇಕೆಂದರೆ ಹೇಗೆ ಸಾಧ್ಯ? ಅವರು ಎಲ್ಲಿಗೆ ಹೋಗಬೇಕು, ಏನು ಮಾಡಬೇಕು? ಆ ನಿರಾಶ್ರಿತರಿಗೆ ಆಹಾರ ಕೊಡುವವರು ಯಾರು? ಇದು ಬಹಳ ದೊಡ್ಡ ದುರಂತಕ್ಕೆ ನಾಂದಿ ಹಾಡುವುದಿಲ್ಲವೇ? ಪಾಕಿಸ್ತಾನದ ವಿರುದ್ಧ ಅಫ್ಘಾನಿಸ್ತಾನದಲ್ಲಿ ಎಂಥಾ ಆಕ್ರೋಶ ಮಡುಗಟ್ಟಿದೆಯೆಂಬು ದನ್ನು ಕಾಬೂಲ್ ಪೊಲೀಸ್ ಇಲಾಖೆ ಮಾಡಿದ ಟ್ವೀಟ್ ನೋಡಿದರೂ ತಿಳಿಯುತ್ತದೆ.
‘ಅಫ್ಘಾನಿಸ್ತಾನದ ಈ ಗೆಲುವಿನಲ್ಲಿ ಕೆಲವರಿಗೆ ವಿಶೇಷವಾದ ಸಂದೇಶ ಅಡಗಿದೆ. ನಾವು ಪ್ರಗತಿ ಸಾಧಿಸುತ್ತಿದ್ದೇವೆ. ನಮ್ಮನ್ನು ನೋಡಿ ಕಲಿಯಿರಿ, ಆದರೆ ನಮಗೆ ತೊಂದರೆ ಕೊಡಲು ಬರಬೇಡಿ’ ಎಂದು ಆ ಟ್ವೀಟ್‌ನಲ್ಲಿ ನಿಗೂಢವಾಗಿ ಹೇಳಲಾಗಿದೆ. ಅದರಲ್ಲಿ ಪಾಕಿಸ್ತಾನದ ಹೆಸರನ್ನು ಎಲ್ಲೂ ಹೇಳಿಲ್ಲ. ಆದರೆ ಕಾಬೂಲ್ ಪೊಲೀಸರು ಏನು ಹೇಳುತ್ತಿದ್ದಾರೆ ಮತ್ತು ಅವರು ಪಾಕಿಸ್ತಾನವನ್ನು ಗುರಿಯಾಗಿಸಿಕೊಂಡೇ ಈ ‘ಉರಿಸುವ ಹೇಳಿಕೆ’ ನೀಡುತ್ತಿದ್ದಾರೆ ಎಂಬುದನ್ನು ಯಾರು ಬೇಕಾದರೂ ನೂರಕ್ಕೆ ನೂರು ಖಚಿತವಾಗಿ ಊಹಿಸಬಹುದು. ಮ್ಯಾಚ್ ಗೆದ್ದ ಮೇಲೆ ಅಫ್ಘಾನಿಸ್ತಾನದ ತಾಲಿಬಾನ್ ಸರಕಾರದ ಪ್ರಧಾನ ಮಂತ್ರಿಗಳ ಕಚೇರಿಯ ಚೀಫ್ ಆಫ್ ಸ್ಟಾಫ್ ಅವರ ‘ಎಕ್ಸ್’ (ಟ್ವಿಟರ್) ಖಾತೆಯಲ್ಲೂ ತಂಡವನ್ನು ಅಭಿನಂದಿಸುವ ಸಂದೇಶ ಬಿತ್ತರವಾಯಿತು.
ಅಷ್ಟೇಕೆ, ಮಾಜಿ ಅಧ್ಯಕ್ಷ ಹಮೀದ್ ಕರ್ಜೈ ಕೂಡ ಕೂಡಲೇ ತಮ್ಮ ದೇಶದ ಕ್ರಿಕೆಟ್ ತಂಡವನ್ನು ಮುಕ್ತ ಕಂಠದಿಂದ ಅಭಿನಂದಿಸಿ ದರು. ನಿಜ ಹೇಳಬೇಕೆಂದರೆ, ಈ ಸೋಲು ಪಾಕಿಸ್ತಾನಿಗಳಿಗೆ ತುಂಬಾ ನೋವುಂಟುಮಾಡಿದೆ. ಅವರ ಹೃದಯ ಒಡೆದಿದೆ. ಪಾಕಿಸ್ತಾನದ ಮಾಜಿ ವೇಗಿ ಶೋಯೆಬ್ ಅಖ್ತರ್ ಆ ಗಾಯಕ್ಕೆ ಮುಲಾಮು ಹಚ್ಚುವ ಪ್ರಯತ್ನ ಮಾಡಿದರು. ‘ಆಫ್ಘನ್ನರು ನಮ್ಮ ಅಣ್ಣ ತಮ್ಮಂದಿರು. ನಾವು ನಮ್ಮ ಸೋದರರ ಕೈಲಿ ಸೋಲು ಅನುಭವಿಸಿದ್ದೇವೆ’ ಎಂದು ಹೇಳಿದರು. ಆದರೆ ಪ್ರಶ್ನೆಯಿರುವುದು ಏನೆಂದರೆ, ಆಫ್ಘನ್ನರು ಕೂಡ ಈಗ ಪಾಕಿಸ್ತಾನೀಯರನ್ನು ತಮ್ಮ ಸಹೋದರರು ಎಂದು ಒಪ್ಪಿಕೊಳ್ಳಲು ಸಿದ್ಧರಿದ್ದಾರೆಯೇ? ವಾಸ್ತವ ಏನೆಂದರೆ, ಅಫ್ಘಾನಿಸ್ತಾನದ ಜನರು ಪಾಕಿಸ್ತಾನದ ಜನರನ್ನು ತಮ್ಮ ಅತಿದೊಡ್ಡ ಶತ್ರುಗಳು ಎಂಬಂತೆ ನೋಡುತ್ತಿದ್ದಾರೆ. ಅದೇ ವೇಳೆ, ಭಾರತೀಯರನ್ನು ತಮ್ಮ ನಿಜವಾದ ಸ್ನೇಹಿತರು ಎಂಬಂತೆ ಪರಿಗಣಿಸಿದ್ದಾರೆ.
ತಾಲಿಬಾನ್ ಪರ ಧೋರಣೆ ಹೊಂದಿರುವ ಪತ್ರಕರ್ತರೊಬ್ಬರು ಸೋಷಿಯಲ್ ಮೀಡಿಯಾದಲ್ಲಿ ‘ಭಾರತದಿಂದ ಬಂದ ಈ ಪಠಾಣ್ ಅಫ್ಘಾನಿಸ್ತಾನದ ಪಠಾಣ್ ಜತೆ ಸೇರಿ ಹೇಗೆ ಪಾಕ್ ವಿರುದ್ಧದ ಆಫ್ಘನ್ನರ ಗೆಲುವನ್ನು ಸಂಭ್ರಮಿಸುತ್ತಿದ್ದಾರೆ ನೋಡಿ. ಪಂದ್ಯದ ವೇಳೆ ಅಫ್ಘಾನಿಸ್ತಾನಕ್ಕೆ ಭಾರತ ನೀಡಿದ ಬೆಂಬಲಕ್ಕೆ ನಾವು ಆಭಾರಿಯಾಗಿದ್ದೇವೆ’ ಎಂದು ಬರೆದಿದ್ದರು. ಆಫ್ಘನ್ನರ ಗೆಲುವಿಗೆ ಭಾರತಕ್ಕೆ ಧನ್ಯವಾದ ಹೇಳುವ ಹಾಗೂ ಪಾಕಿಸ್ತಾನವನ್ನು ಯದ್ವಾ ತದ್ವಾ ಟೀಕಿಸುವ ಇನ್ನೂ ಅಸಂಖ್ಯ ಟ್ವೀಟುಗಳು ಹರಿದಾಡಿವೆ.
ಈ ಅಧ್ಯಾಯದಿಂದ ಜಗತ್ತಿಗೆ ರವಾನೆಯಾದ ಸಂದೇಶವೇನು ಗೊತ್ತಾ? ಪಾಕಿಸ್ತಾನದ ನಿಜವಾದ ಬಣ್ಣವೀಗ ಅಫ್ಘಾನಿಸ್ತಾನದಲ್ಲೂ ಬಯಲಾಗಿದೆ. ಅಫ್ಘಾನಿಸ್ತಾನದ ಜನಸಾಮಾನ್ಯರು ತಮ್ಮ ಸಂಕಷ್ಟಗಳಿಗೆ ಪಾಕಿಸ್ತಾನವೇ ಜವಾಬ್ದಾರಿ ಎಂದು ಮೊದಲಿನಿಂದಲೂ ನಂಬಿದ್ದರು. ಆದರೆ, ತಾಲಿಬಾನಿಗಳು ಅದನ್ನು ಒಪ್ಪುತ್ತಿರಲಿಲ್ಲ. ಈಗ ತಾಲಿಬಾನಿಗಳು ಕೂಡ ಪಾಕಿಸ್ತಾನದ ಕುತಂತ್ರವನ್ನು ಮನಗಂಡಿದ್ದಾರೆ. ಇಷ್ಟು ದಿನ ಪಾಕಿಸ್ತಾನದ ಸೇನೆ ತಾಲಿಬಾನಿಗಳಿಗೆ ಬೆಂಬಲ ನೀಡುವಂತೆ ನಾಟಕ ಮಾಡುತ್ತಿತ್ತು ಅಷ್ಟೆ. ಅದು ತಾಲಿಬಾನ್‌ಗೆ ತಡವಾಗಿ ಅರ್ಥವಾಗಿದೆ. ಪಾಕಿಸ್ತಾನದವರು ಹಣಕ್ಕಾಗಿ ಅಫ್ಘಾನಿಸ್ತಾನದ ವಿರುದ್ಧ ಅಮೆರಿಕಕ್ಕೂ ಸಾಕಷ್ಟು ಸಹಾಯ ಮಾಡಿದ್ದಾರೆ ಎಂಬುದು ಕೂಡ ಅಫ್ಘಾನಿಸ್ತಾನಕ್ಕೀಗ ಅರ್ಥವಾಗಿದೆ.
ಅಫ್ಘಾನಿಸ್ತಾನದಿಂದ ತನ್ನ ಸೇನೆಯನ್ನು ಹಿಂದಕ್ಕೆ ತೆಗೆದುಕೊಂಡ ನಂತರವೂ ಅಮೆರಿಕದ ಸೇನೆ ಪಾಕಿಸ್ತಾನದಲ್ಲಿ ಬೀಡುಬಿಟ್ಟು
ಸಾಕಷ್ಟು ಕಾಲ ಆಫ್ಘನ್ನರ ಮೇಲೆ ಕಣ್ಣು ನೆಟ್ಟಿತ್ತು. ಈಗಲೂ ಯಾವುದೇ ಸಂದರ್ಭದಲ್ಲಿ ಅಮೆರಿಕಕ್ಕೆ ಸಹಾಯ ಮಾಡಲು
ಪಾಕಿಸ್ತಾನದ ಸೇನೆ ಸಿದ್ಧವಾಗಿ ನಿಂತಿದೆ. ತಾಲಿಬಾನ್‌ಗೆ ಅರ್ಥವಾಗಿರುವ ಇನ್ನೊಂದು ಕಟುವಾಸ್ತವ ಏನೆಂದರೆ, ಪಾಕಿಸ್ತಾನದ ಆರ್ಥಿಕ ಪರಿಸ್ಥಿತಿ ಬಹಳ ಶೋಚನೀಯ ಹಂತಕ್ಕೆ ತಲುಪಿದೆ. ಒಂದೊಂದು ರೊಟ್ಟಿಯ ತುಣುಕಿಗೂ ಪಾಕಿಸ್ತಾನ ಪರದಾಡುತ್ತಿದೆ. ಹಾಗಿರುವಾಗ ಅವರು ಹೇಗೆ ಬೇರೆಯವರಿಗೆ ಸಹಾಯ ಮಾಡಲು ಸಾಧ್ಯ? ಆದರೆ ಭಾರತದ ಔದಾರ್ಯದ ಮುಖವೇ ಬೇರೆ.
ಭಾರತವು ಅಫ್ಘಾನಿಸ್ತಾನದಲ್ಲಿ ಸಂಸತ್ ಭವನವನ್ನು ಮಾತ್ರವಲ್ಲದೆ ಸಾಕಷ್ಟು ಅಣೆಕಟ್ಟುಗಳನ್ನು ನಿರ್ಮಿಸಿದೆ. ಅಲ್ಲಿನ ಜನಸಾ ಮಾನ್ಯರಿಗೆ ನೆರವಾಗಲಿ ಎಂದು ಅನೇಕ ಆಸ್ಪತ್ರೆಗಳನ್ನು ಕಟ್ಟಿಕೊಟ್ಟಿದೆ. ಅಫ್ಘಾನಿಸ್ತಾನದ ಮರುನಿರ್ಮಾಣಕ್ಕೆ ನೆರವಾಗುವ ಅನೇಕ ಯೋಜನೆಗಳನ್ನು ಭಾರತ ಸರಕಾರ ಖುದ್ದಾಗಿ ನಿಂತು ಮುನ್ನಡೆಸಿದೆ. ಅಫ್ಘಾನಿಸ್ತಾನದ ಬಡವರಿಗೆ ಬೇಕಾದ ಔಷಧ, ಆಹಾರ ಮುಂತಾದ ಮೂಲಭೂತ ಅಗತ್ಯಗಳನ್ನು ಒದಗಿಸುವಲ್ಲಿ ಭಾರತ ಯಾವತ್ತೂ ಹಿಂದೆ ಬಿದ್ದಿಲ್ಲ. ತಾಲಿಬಾನ್ ಸರಕಾರಕ್ಕೆ
ಭಾರತ ಮಾನ್ಯತೆ ನೀಡದಿದ್ದರೂ ಅಲ್ಲಿನ ಜನಸಾಮಾನ್ಯರಿಗೆ ನೆರವಾಗುತ್ತಲೇ ಬಂದಿದೆ.
ಹೀಗಿರುವಾಗ, ಪಾಕಿಸ್ತಾನವು ಅಫ್ಘಾನಿಸ್ತಾನದಲ್ಲಿ ಸಾಕಷ್ಟು ಕಳ್ಳಾಟ ಆಡುತ್ತಿದೆ ಹಾಗೂ ಆಫ್ಘಾನ್ ಗಡಿಯಲ್ಲಿನ ಕೆಲ ಪ್ರದೇಶ ಗಳನ್ನು ಕಬಳಿಸಲು ಹವಣಿಸುತ್ತಿದೆ ಎಂಬುದು ತಾಲಿಬಾನ್‌ನ ಗಮನಕ್ಕೆ ಬಂದಿದೆ. ಆದ್ದರಿಂದಲೇ ಪಾಕಿಸ್ತಾನಕ್ಕೆ ಪಾಠ ಕಲಿಸಲು ತಾಲಿಬಾನ್ ಸರಕಾರವು ತೆಹ್ರೀಕ್ -ಎ-ತಾಲಿಬಾನ್‌ಗೆ ಸಹಾಯ ಮಾಡುತ್ತಿದೆ. ವಾಸ್ತವವಾಗಿ ಇಷ್ಟು ವರ್ಷ ಇಸ್ಲಾಂ ಹೆಸರಿನಲ್ಲಿ ಅಫ್ಘಾನಿಸ್ತಾನವನ್ನು ತನ್ನ ಕಿಸೆಯೊಳಗೆ ಇರಿಸಿಕೊಳ್ಳಲು ಪಾಕಿಸ್ತಾನ ಹುನ್ನಾರ ನಡೆಸಿತ್ತು. ಆದರೆ ಅದು ಅಫ್ಘಾನಿಸ್ತಾನಕ್ಕೆ ಗೊತ್ತಾದ ಮೇಲೆ ಉಭಯ ದೇಶಗಳ ನಡುವೆ ಶತ್ರುತ್ವ ಆಳವಾಗುತ್ತಾ ಸಾಗಿದೆ.
ಇಂಥ ದ್ವೇಷಮಯ ಪರಿಸ್ಥಿತಿಯಲ್ಲಿ ಪಾಕಿಸ್ತಾನದ ತಂಡವನ್ನು ಅಫ್ಘಾನಿಸ್ತಾನ ಸೋಲಿಸಿದರೆ ಸಂಭ್ರಮಾಚರಣೆ ನಡೆಸುವುದು ಸಹಜವೇ ಅಲ್ಲವೇ! ತಾಲಿಬಾನ್ ಸರಕಾರಕ್ಕೆ ನನ್ನದೊಂದು ಮನವಿಯಿದೆ. ಕ್ರೀಡೆಯಲ್ಲಿ ತಮ್ಮ ಕೌಶಲವನ್ನು ತೋರಿಸಲು ನಿಮ್ಮ
ಹೆಣ್ಣುಮಕ್ಕಳಿಗೂ ಅವಕಾಶ ಮಾಡಿಕೊಡಿ. ಅವರಿಗೆ ನಿಮ್ಮ ನೆಲದಲ್ಲಿ ಸಮಾನ ಹಕ್ಕುಗಳನ್ನು ನೀಡಿ. ಜೀವನದಲ್ಲಿ ಮುಂದೆ ಬರಲು ಮಹಿಳೆಯರಿಗೆ ಎಲ್ಲಾ ಅವಕಾಶಗಳನ್ನು ನೀಡಿ. ನಿಮ್ಮ ಪುರುಷರ ಕ್ರಿಕೆಟ್ ತಂಡಕ್ಕಿರುವ ಅದ್ಭುತ ಶಕ್ತಿಯೇ ಆಫ್ಘನ್
ಹೆಣ್ಣುಮಕ್ಕಳಿಗೂ ಇದೆ. ಅವರೂ ಅದನ್ನು ಜಗತ್ತಿಗೆ ತೋರಿಸಲಿ.
(ಲೇಖಕರು ಹಿರಿಯ ಪತ್ರಕರ್ತರು ಹಾಗೂ ರಾಜ್ಯಸಭಾ
ಸದಸ್ಯರು)