ನವದೆಹಲಿ: ಐಫೋನ್ ಹ್ಯಾಕಿಂಗ್ ಪ್ರಯತ್ನ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಸರ್ಕಾರ, ಆಯಪಲ್ ಕಂಪನಿಗೆ ಗುರುವಾರ ನೋಟಿಸ್ ಕಳುಹಿಸಿದ್ದು, ಸರ್ಕಾರಿ ಪ್ರಾಯೋಜಿತ ದಾಳಿ ನಡೆದಿದೆ ಎನ್ನುವುದಕ್ಕೆ ಸಾಕ್ಷ್ಯಾಧಾರ ಒದಗಿಸುವಂತೆ ಕೇಳಿದೆ.
ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಕಂಪನಿಗೆ ನೋಟಿಸ್ ನೀಡಿದ್ದು, ತಕ್ಷಣ ಪ್ರತಿಕ್ರಿಯೆ ನೀಡುವಂತೆ ನಿರ್ದೇಶನ ನೀಡಿದೆ. ಸರ್ಕಾರಿ ಪ್ರಾಯೋಜಿತ ದಾಳಿಯ ಬಗ್ಗೆ ಅಂತಿಮ ನಿರ್ಣಯ ತಿಳಿಸುವಂತೆ ಆಯಪಲ್ ಕಂಪನಿಯ ಅಧಿಕಾರಿಗಳಿಗೆ ಸಚಿವಾಲಯ ತಿಳಿಸಿದೆ.
ವಿವಾದ ಶುರುವಾಗಿದ್ದೇ ಅ.31ರಂದು. ಇಂಡಿಯಾ ಒಕ್ಕೂಟದ ಸದಸ್ಯರುಗಳಾದ ಕಾಂಗ್ರೆಸ್ ಸಂಸದ ಶಶಿ ತರೂರ್, ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ, ಪ್ರಿಯಾಂಕಾ ಚೆತುರ್ವೇದಿ (ಶಿವಸೇನಾ ಪಕ್ಷದ ರಾಜ್ಯಸಭಾ ಸದಸ್ಯ), ಅಸಾದುದ್ದೀನ್ ಒವೈಸಿ (ಲೋಕಸಭಾ ಸದಸ್ಯ, ಎಐಎಂಐಎಂ), ರಾಘವ್ ಚಡ್ಡಾ (ಆಯಪ್ ಪಕ್ಷದ ರಾಜ್ಯಸಭಾ ಸದಸ್ಯ) ಮತ್ತು ಐಎನ್ಸಿ ವಕ್ತಾರರಾದ ಪವನ್ ಖೇರಾ ಮತ್ತು ಸುಪ್ರಿಯಾ ಶ್ರೀನಾಥೆ ಅವರುಗಳಿಗೆ ಸೋಮವಾರ ರಾತ್ರಿ ಆಯಪಲ್ ಕಂಪನಿಯಿಂದ ಎಚ್ಚರಿಕೆ ಸಂದೇಹಗಳು ಹೋಗಿದ್ದು, ಇದು ಸರ್ಕಾರಿ ಪ್ರಾಯೋಜಕತ್ವದ ಹ್ಯಾಕಿಂಗ್ ಯತ್ನ ಎಂದು ಆರೋಪಿಸಲಾಗಿದೆ. ಆದರೆ, ಈ ಆರೋಪವನ್ನು ಕೇಂದ್ರ ಸರ್ಕಾರ ನಯವಾಗಿ ತಿರಸ್ಕರಿಸಿದೆ.
ಸಚಿವ ಅಶ್ವಿನಿ ವೈಷ್ಣವ್ ಅವರು ಪ್ರತಿಕ್ರಿಯೆ ನೀಡಿದ್ದು, ಫೋನ್ ಹ್ಯಾಕಿಂಗ್ ಬಗ್ಗೆ ಯಾರೆಲ್ಲ ರಾಜಕಾರಣಿಗಳು ಧ್ವನಿ ಎತ್ತಿದ್ದಾರೋ ಅದನ್ನು ಪರಿಗಣಿಸಿ, ಪರಿಶೀಲಿಸುವುದಾಗಿ ತಿಳಿಸಿದ್ದಾರೆ.