Saturday, 14th December 2024

ವಾರಕ್ಕೆ 70 ತಾಸು ಕೆಲಸ ಸಾಧ್ಯವೇ, ಸಾಧುವೇ ?

ವಿಶ್ಲೇಷಣೆ

ರಮಾನಂದ ಶರ್ಮಾ

‘ನಮ್ಮ ದೇಶದ ಯುವಕರು ವಾರಕ್ಕೆ ೭೦ ಗಂಟೆ ಶ್ರಮವಹಿಸಿ ಕೆಲಸ ಮಾಡಬೇಕು. ಹಾಗಾದಾಗಲೇ ದೇಶದ ಆರ್ಥಿಕ ಪ್ರಗತಿಯ ವೇಗ ಹೆಚ್ಚುತ್ತದೆ’ ಎಂದು ಕರೆ ಕೊಟ್ಟಿದ್ದಾರೆ ಇನ್ಫೋಸಿಸ್‌ನ ಸಹ ಸಂಸ್ಥಾಪಕ ನಾರಾಯಣ ಮೂರ್ತಿಯವರು. ನಿರೀಕ್ಷೆಯಂತೆ ಅವರ ಈ ಸಲಹೆಯು ದೇಶಾದ್ಯಂತ ಸಂಚಲನ
ಮೂಡಿಸಿದ್ದು, ಪರ-ವಿರುದ್ಧದ ಹೇಳಿಕೆಗಳ ಪ್ರವಾಹ ಸಾಮಾಜಿಕ ಜಾಲತಾಣಗಳಲ್ಲಿ ಹರಿಯುತ್ತಿದೆ.

ಸಾಮಾನ್ಯವಾಗಿ ಯಾವುದೇ ವಿಷಯದಲ್ಲಿನ ಮೂರ್ತಿಯವರ ಸಲಹೆ-ಸೂಚನೆಗಳಿಗೆ ಜನರು ಸಕಾರಾತ್ಮಕ ಪ್ರತಿಕ್ರಿಯೆಯನ್ನು ನೀಡುತ್ತಾರೆ, ಹಾರ್ದಿಕ ವಾಗಿ ಸ್ವಾಗತಿಸುತ್ತಾರೆ.  ಆದರೆ ಈ ಬಾರಿ ಅವರ ಹೇಳಿಕೆಗೆ ಮಿಶ್ರ ಪ್ರತಿಕ್ರಿಯೆ ದೊರೆತಿದ್ದು ಈ ಪೈಕಿ ಕೆಲವಂತೂ ತೀಕ್ಷ್ಣವಾಗಿವೆ. ಮೂರ್ತಿಯವರ ಹೇಳಿಕೆ ಯನ್ನು ಬಹುತೇಕ ಉದ್ಯಮಿಗಳು ನಿರೀಕ್ಷೆಯಂತೆ ಸ್ವಾಗತಿಸಿದ್ದರೆ, ದುಡಿಯುವ ವರ್ಗದವರು ಬಹು ಎಚ್ಚರಿಕೆಯಿಂದ ಪ್ರತಿಕ್ರಿಯಿಸಿದ್ದಾರೆ. ಈ ಪೈಕಿ ಕೆಲವರು ಸಲಹೆಯನ್ನು ವಿರೋಧಿಸಿರುವುದರ ಜತೆಗೆ ‘ಇದು ಕೇವಲ ಐಟಿ ಕ್ಷೇತ್ರಕ್ಕೆ ಸೀಮಿತವೇ?’ ಎಂದೂ ಪ್ರಶ್ನಿಸಿದ್ದಾರೆ.

ಮೂರ್ತಿಯವರ ಸಲಹೆಯಲ್ಲಿ ಮೇಲ್ನೋಟಕ್ಕೆ ಆಕ್ಷೇಪಾರ್ಹವಾಗಿರುವಂಥದ್ದೇನೂ ಇಲ್ಲ. ದೇಶದ ಆರ್ಥಿಕತೆ, ಪ್ರಗತಿಯ ಬಗ್ಗೆ ಕಾಳಜಿ ಹೊಂದಿರು ವವರು ಹೇಳಬಹುದಾದುದನ್ನು ಅವರು ಸ್ವಲ್ಪ ನೇರವಾಗಿ ಮತ್ತು ಸ್ಪಷ್ಟವಾಗಿ ಹೇಳಿದ್ದಾರೆ. ೨ನೇ ಮಹಾಯುದ್ಧದಲ್ಲಿ ಸೋತು ಸುಣ್ಣವಾಗಿ ಆರ್ಥಿಕ ಅಧೋಗತಿಗೆ ಇಳಿದ ಜರ್ಮನಿ ಇಂದು ವಿಶ್ವದಲ್ಲಿ ಆರ್ಥಿಕವಾಗಿ ಬಲಾಢ್ಯವಾಗಿರುವ ದೇಶಗಳ ಪಟ್ಟಿಯಲ್ಲಿ ಕಾಣುವುದರ ಹಿಂದೆ ಅಲ್ಲಿನ ಉದ್ಯೋಗಿಗಳು ವಾರಕ್ಕೆ ೭೦-೯೦ ತಾಸು ಕೆಲಸ ಮಾಡಿರುವುದೇ ಕಾರಣ ಎಂದಿರುವ ಮೂರ್ತಿಯವರು, ಹಿರೋಶಿಮಾ-ನಾಗಾಸಾಕಿ ಮೇಲೆ ಅಮೆರಿಕದ ಬಾಂಬ್ ದಾಳಿಯ ನಂತರ ಜಪಾನ್ ದೇಶ ಎದ್ದು ನಿಂತಿರುವುದನ್ನು ಉದಾಹರಿಸುತ್ತಾರೆ.

ಕೆಲಸದ ಅವಧಿ ಹೆಚ್ಚಿದರೆ ಉತ್ಪಾದಕತೆಯೂ ಹೆಚ್ಚಿ ದೇಶದ ಪ್ರಗತಿಗೆ ಮತ್ತು ಅಭಿವೃದ್ಧಿಗೆ ಸಹಾಯಕವಾಗುತ್ತದೆ ಎಂಬುದು ಅವರ ಚಿಂತನೆ.
ಮೂರ್ತಿ ಯವರ ಸಲಹೆಯನ್ನು ಬೆಂಬಲಿಸುವವರು, ಪ್ರಧಾನಿ ನರೇಂದ್ರ ಮೋದಿಯವರು ದಿನಕ್ಕೆ ೧೬ ಗಂಟೆ ಕೆಲಸ ಮಾಡುವುದನ್ನು ಹಾಗೂ ಸ್ವತಃ ಮೂರ್ತಿಯವರೇ ೧೫ ಗಂಟೆ ಕೆಲಸ ಮಾಡುವುದನ್ನು ಉಲ್ಲೇಖಿಸುತ್ತಾರೆ. ಜಿಂದಾಲ್ ಸ್ಟೀಲ್‌ನ ಸಜ್ಜನ್ ಜಿಂದಾಲ್ ಅವರು ಮೂರ್ತಿಯವರನ್ನು ಬಲವಾಗಿ ಸಮರ್ಥಿಸಿಕೊಳ್ಳುತ್ತಾ, ‘ಭಾರತ ದಂಥ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ದೇಶಕ್ಕೆ ವಾರದಲ್ಲಿ ೫ ದಿನ ದುಡಿಯುವ ಯುವಜನರ ಅಗತ್ಯವಿಲ್ಲ. ಇದು ಉದ್ಯೋಗಿಗಳ ವಿನಾಶದ ಉದ್ದೇಶವನ್ನು ಹೊಂದಿರದೆ ಅವರ ಸಮರ್ಪಣಾಭಾವದ ಅಂಶವನ್ನು ಪ್ರತಿಬಿಂಬಿಸುತ್ತದೆ.

೨೦೪೭ರ ಹೊತ್ತಿಗೆ ದೇಶವು ವಿಶ್ವದ ಮಹಾನ್ ಆರ್ಥಿಕ ಶಕ್ತಿಯಾಗಿ ರೂಪುಗೊಳ್ಳಬೇಕಿದ್ದು, ೫ ದಿನಗಳ ವಾರದ ಸಂಸ್ಕೃತಿ ಈ ಉದ್ದೇಶ ಸಾಧನೆಗೆ ಪೂರಕ ವಾಗಿಲ್ಲ’ ಎಂದು ಅಭಿಪ್ರಾಯ ಪಟ್ಟಿದ್ದಾರೆ. ‘ಅಭಿವೃದ್ಧಿ ಹೊಂದಿದ ದೇಶಗಳಿಗಿಂತ ನಮ್ಮ ಪರಿಸ್ಥಿತಿಗಳು ಹಾಗೂ ನಾವು ಎದುರಿಸುತ್ತಿರುವ ಸವಾಲು ಗಳು ಭಿನ್ನವಾಗಿವೆ. ಕೆಲ ದೇಶಗಳಲ್ಲಿ ನೌಕರರು ವಾರದಲ್ಲಿ ೪-೫ ದಿನ ಕೆಲಸ ಮಾಡುತ್ತಿದ್ದರೆ, ಅವರ ಹಿಂದಿನ ತಲೆಮಾರುಗಳು ಹೆಚ್ಚು ಸಮಯ ದುಡಿದಿರುವುದೇ ಅದಕ್ಕೆ ಕಾರಣ. ಭಾರತದ ಬಹುದೊಡ್ಡ ಶಕ್ತಿಯಿರುವುದು ಯುವಜನರಲ್ಲಿ. ದೇಶವನ್ನು ‘ಸೂಪರ್ ಪವರ್’ ಮಾಡುವ ನಿಟ್ಟಿನಲ್ಲಿ ಯುವಕರು ವಿರಾಮಕ್ಕಿಂತಲೂ ಕೆಲಸಕ್ಕೆ ಹೆಚ್ಚು ಆದ್ಯತೆ ನೀಡಬೇಕು’ ಎಂಬ ಅವರ ಅಭಿಪ್ರಾಯ ಚಿಂತನಾರ್ಹ ಎನ್ನಬಹುದು.

ಭಾರತದಲ್ಲಿನ ಉತ್ಪಾದಕತೆ ಮತ್ತು ವಾರದ ಕಾರ್ಯಾವಧಿಗಳ ಬಗೆಗಿನ ಟೀಕೆ-ಆಕ್ರೋಶ ಏನೇ ಇರಲಿ, ಇಂಟರ್‌ನ್ಯಾಷನಲ್ ಲೇಬರ್ ಆರ್ಗನೈಸೇಷನ್‌ನ
ವರದಿಯ ಪ್ರಕಾರ ಭಾರತೀಯರು ಈಗಾಗಲೇ ಜಾಗತಿಕವಾಗಿ ಅತಿಹೆಚ್ಚು ಕೆಲಸ ಮಾಡುವ ವರ್ಗಕ್ಕೆ ಸೇರಿದ್ದಾರೆ. ಇಲ್ಲಿ ಉದ್ಯೋಗಿಯೊಬ್ಬ ವಾರಕ್ಕೆ ಸರಾಸರಿ ೪೭.೧೦ ಗಂಟೆ ಕೆಲಸ ಮಾಡುತ್ತಾನೆ. ಜಗತ್ತಿನ ೧೦ ದೊಡ್ಡ ಆರ್ಥಿಕತೆಯ ದೇಶಗಳಿಗೆ ಹೋಲಿಸಿದರೆ, ಭಾರತದ ಉದ್ಯೋಗಿಗಳು ದೀರ್ಘಾವಧಿಯ ಸರಾಸರಿ ಕಾರ್ಯಾವಧಿ ನಿಟ್ಟಿನಲ್ಲಿ ಮೇಲುಗೈ ಸಾಧಿಸಿದ್ದಾರೆ. ಈ ಜಾಗತಿಕ ಪಟ್ಟಿಯಲ್ಲಿ ಭಾರತವು ೭ನೇ ಸ್ಥಾನದಲ್ಲಿದೆ ಎನ್ನಲಾಗುತ್ತಿದೆ.

ವಿಪರ್ಯಾಸವೆಂದರೆ, ಅಧಿಕ ಕಾರ್ಯಾವಧಿಯ ಹೊರತಾಗಿಯೂ ಕಾರ್ಮಿಕರ ಆದಾಯದ ಬಾಬತ್ತಿನಲ್ಲಿ ಭಾರತವು ಫ್ರಾನ್ಸ್, ಸ್ವೀಡನ್‌ಗಿಂತಲೂ ಹಿಂದಿದೆ. ಸದಾ ಲಾಭ ಹೆಚ್ಚಿಸುವ ತವಕದಲ್ಲಿರುವ ಮತ್ತು ಈ ನಿಟ್ಟಿನಲ್ಲಿ ಕಾರ್ಮಿಕರ ಉತ್ಪಾದಕತೆಯು ಅಂತಾರಾಷ್ಟ್ರೀಯ ಮಾನದಂಡಕ್ಕಿಂತ ತುಂಬಾ ಕಡಿಮೆ ಎಂದು ಅಲವತ್ತು ಕೊಳ್ಳುವ ಕೆಲವು ಉದ್ಯಮಿಗಳು ನಾರಾಯಣ ಮೂರ್ತಿಯವರ ಸಲಹೆಯೊಂದಿಗೆ ತಮ್ಮ ಅನಿಸಿಕೆಯನ್ನೂ ಸೇರಿಸಿ ವ್ಯಾಖ್ಯಾನಿಸುತ್ತಿದ್ದಾರೆ. ಮಾರಿಕೋ ಗ್ರೂಪ್ ಅಧ್ಯಕ್ಷ ಹರ್ಷ ಮಾರಿವಾಲಾ ಅವರು, ‘ವಾರಕ್ಕೆ ೭೦ ಗಂಟೆಗಳ ಕೆಲಸ ಎಂಬುದು ಕೇವಲ ಗಡಿಯಾರದ ಮುಳ್ಳಿನ ತಿರುಗುವಿಕೆಗೆ ಸಂಬಂಧಿಸಿದ್ದಲ್ಲ; ಆ ಅವಧಿಯಲ್ಲಿ ವ್ಯಕ್ತಿಯು ಕೆಲಸದಲ್ಲಿ ತೋರಿಸುವ ಉತ್ಸಾಹ ಮತ್ತು ಗುಣಮಟ್ಟ ಬಹಳ ಮುಖ್ಯ. ೭೦ ಗಂಟೆಗಳ ಕೆಲಸದ ಸವಾಲನ್ನು ಯುವಜನರು ಸ್ವೀಕರಿಸಬೇಕು.

ಇದರಿಂದ ವೇತನದ ಹೆಚ್ಚಳ ಮತ್ತು ಕಲಿಕೆ ಸಾಧ್ಯವಾಗುತ್ತದೆ’ ಎನ್ನುವ ಮೂಲಕ ಮೂರ್ತಿಯವರ ಸಲಹೆಯನ್ನು ಸಮರ್ಥಿಸಿಕೊಂಡಿದ್ದಾರೆ. ಮಹೀಂದ್ರಾ ಕಂಪನಿಯ ಸಿ.ಪಿ. ಗುರ್ನಾನಿ ಅವರು, ‘ಮೂರ್ತಿಯವರು ಬಹುಶಃ ಕಂಪನಿಗಾಗಿ ೪೦ ಗಂಟೆ ಮತ್ತು ನಿಮಗಾಗಿ ೩೦ ಗಂಟೆ ಕೆಲಸ ಮಾಡಿ ಎಂದು ಹೇಳಿರಬೇಕು. ಅವರ ಹೇಳಿಕೆ ಒಂದು ಕಂಪನಿಗೆ ಮಾತ್ರವಲ್ಲದೆ, ದೇಶಕ್ಕೆ ಮತ್ತು ದೇಶದ ಯುವಜನತೆಗೆ ಸಂಬಂಧಿಸಿದ್ದು. ಉದ್ಯೋಗಿಯೊಬ್ಬ ವಾರದಲ್ಲಿ ೭೦ ಗಂಟೆ ಕೆಲಸ ಮಾಡಲು ಮುಂದಾದರೆ, ಅವನ ವ್ಯಕ್ತಿತ್ವ ಇತರರಿಗಿಂತಲೂ ಭಿನ್ನವಾಗುವುದರ ಜತೆಗೆ ದೇಶದ ಪಥವನ್ನೂ ಬದಲಿಸುತ್ತದೆ. ಒಂದು ಕ್ಷೇತ್ರದಲ್ಲಿ ನೈಪುಣ್ಯ ಬೇಕಿದ್ದರೆ, ಇಂಥ ತೀವ್ರ ಪರಿಶ್ರಮ ಅಗತ್ಯ’ ಎಂದು ಮೂರ್ತಿಯವರೊಂದಿಗೆ ಸಹಮತ ವ್ಯಕ್ತಪಡಿಸಿದ್ದಾರೆ.

ಭಾರತೀಯರ ಕಾರ್ಯಾವಧಿಯು ವಿದೇಶದಲ್ಲಿರುವುದಕ್ಕಿಂತ ಕಮ್ಮಿ ಎನ್ನುವುದು ತೀರಾ ಸಾಮಾನ್ಯವಾದ ದೂರು. ಕಾರ್ಮಿಕರು ಹೆಚ್ಚಿನ ಸಂಬಳ-ಸಾರಿಗೆ-ಸವಲತ್ತುಗಳನ್ನು ಕೇಳಿದಾಗ ಬಹುತೇಕ ಉದ್ಯಮಿಗಳು, ‘ಕತಾರ್, ಇಟಲಿ, ಇಂಗ್ಲೆಂಡ್, ಸಿಂಗಾಪುರ ಮುಂತಾದ ದೇಶಗಳನ್ನೊಮ್ಮೆ ನೋಡಿ, ಅವರ ಕಾರ್ಯಾವಧಿ ಮತ್ತು ಉತ್ಪಾದಕತೆಯನ್ನೂ ಒಮ್ಮೆ ಗಮನಿಸಿ’ ಎಂದು ಮೂದಲಿಸುವುದು ತೀರಾ ಸಾಮಾನ್ಯ. ಆದರೆ ಅನ್ಯದೇಶಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ, ಭಾರತೀಯ ಉದ್ಯೋಗಿಗಳ ಕಾರ್ಯಾವಧಿಯು ಹೀಗೆ ಮೂದಲಿಸಲ್ಪಡುವಷ್ಟು ಕಮ್ಮಿಯೇನೂ ಇಲ್ಲ.

ಅದೇನೇ ಇರಲಿ, ಕಾರ್ಯಾವಧಿಯ ವಿಷಯದಲ್ಲಿ  ಮೂರ್ತಿಯವರು ನೀಡಿರುವ ಸಲಹೆಗೆ ಶ್ರಮಿಕ ವರ್ಗದವರು ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ‘ನೀವು ಉದ್ಧಾರ ಆಗುವುದಕ್ಕೆ ಯುವಕರನ್ನು ಬಲಿ ಹಾಕುತ್ತೀರಾ?’ ಎಂದು ಕೇಳಿದವರಿದ್ದಾರೆ. ‘ವಾರಕ್ಕೆ ೭೦ ಗಂಟೆಯನ್ನು ದುಡಿಮೆಗೆ ಮೀಸಲಾಗಿಟ್ಟರೆ, ಉತ್ಪಾದಕತೆಗಿಂತ ಕೆಲಸಗಾರರ ಮೇಲೆ ವ್ಯತಿರಿಕ್ತ ಪರಿಣಾಮವಾಗುತ್ತದೆ. ಕೆಲಸದ ಮೇಲಿನ ಅತಿಯಾದ ಗಮನವು ದೈಹಿಕ ಮತ್ತು ಮಾನಸಿಕ ಆರೋಗ್ಯ ಸೇರಿದಂತೆ ಒಟ್ಟಾರೆ ಯೋಗಕ್ಷೇಮದಲ್ಲಿನ ಕ್ಷೀಣತೆಗೆ ಕಾರಣವಾಗಬಹುದು’ ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ. ಇನ್ನು ಕೆಲವರು, ‘ಇದು ಮಹಿಳೆಯರನ್ನು ಕೆಲಸದಿಂದ ಹೊರಹಾಕುವ ಹುನ್ನಾರ. ೭೦ ಗಂಟೆ ಕೆಲಸ ಮಾಡುವುದರಿಂದ ಮಹಿಳೆಯು ಮಾಡಬೇಕಾಗುವ
ಮನೆಗೆಲಸ, ಮಕ್ಕಳ ಪಾಲನೆ-ಪೋಷಣೆಯ ಮೇಲೆ ವ್ಯತಿರಿಕ್ತ ಪರಿಣಾಮವಾಗುತ್ತದೆ. ಪುರುಷರು ಆಕೆಯ ಕೆಲಸವನ್ನು ಹಂಚಿಕೊಳ್ಳುವುದಿಲ್ಲ.

ಯುವಜನರು ಕೆಲಸದ ಹೊರೆಯಿಂದಾಗಿ ತಮಗಾಗಿ ಮತ್ತು ಕುಟುಂಬಕ್ಕಾಗಿ ಸಮಯ ನೀಡಲಾಗದೆ ಚಿಕ್ಕ ವಯಸ್ಸಿನಲ್ಲೇ ಅನಾರೋಗ್ಯಕ್ಕೆ ತುತ್ತಾಗು ತ್ತಿದ್ದಾರೆ. ಹೀಗಿರುವಾಗ ದಿನಕ್ಕೆ ಸರಾಸರಿ ೧೨ ಗಂಟೆ ದುಡಿಯಬೇಕು ಎಂದು ಕರೆ ನೀಡಿರುವುದು ದೇಶದ ಆರೋಗ್ಯ ವ್ಯವಸ್ಥೆಯೇ ಕುಸಿದು ಬೀಳಲು ಕಾರಣವಾಗಬಹುದು’ ಎಂದು ಕೆಲವರು ಎಚ್ಚರಿಸಿದ್ದಾರೆ. ಈ ಅಭಿಪ್ರಾಯ ಸರಣಿ ಹೀಗೇ ಮುಂದುವರಿದು, ‘ದೇಶದ ಪ್ರಗತಿಯ ನೆಪವೊಡ್ಡಿ ಕಾರ್ಪೊರೇಟ್ ಕಂಪನಿಗಳು ತಮ್ಮ ಲಾಭಕ್ಕಾಗಿ, ತಮ್ಮ ಬೇಳೆ ಬೇಯಿಸಿಕೊಳ್ಳುವುದಕ್ಕಾಗಿ ಹೂಡಿರುವ ಹುನ್ನಾರವಿದು.

ಇತ್ತೀಚೆಗೆ ಹೆಚ್ಚಾಗಿರುವ ಹೃದಯಾಘಾತಗಳಿಗೆ ಕಾರ್ಯದೊತ್ತಡವೇ ಕಾರಣ. ಅಧಿಕ ಕಾರ್ಯಾವಧಿಯಿಂದಾಗಿ ಕೆಲಸ ಮತ್ತು ಖಾಸಗಿ ಬದುಕಿನ ನಡುವಿನ ಸಮತೋಲನ ಕಷ್ಟವಾಗಿ ಕೌಟುಂಬಿಕ ಜೀವನ ಅಸ್ತವ್ಯಸ್ತವಾಗುತ್ತದೆ. ಹೀಗಾದಲ್ಲಿ ನಮ್ಮ ವೈಯಕ್ತಿಕ ಬದುಕಿನ ಕಥೆಯೇನು? ಅದನ್ನು ನಾವು ಸಂಪೂರ್ಣ ತ್ಯಜಿಸಬೇಕೇ? ಹೆಚ್ಚು ಅವಧಿಯ ಕೆಲಸ ಬೇಕಿದ್ದರೆ ಹೆಚ್ಚಿನ ಸಂಬಳ ನೀಡಿ. ೧೬-೧೮ ತಾಸು ಕೆಲಸ ಮಾಡುವವರಿಗೆ ಕೈಗೊಬ್ಬ, ಕಾಲಿಗೊಬ್ಬ ಮತ್ತು ಕರೆದಾಗ ಒಬ್ಬ ಹೀಗೆ ಸಹಾಯಕರು ಇರುತ್ತಾರೆ. ಅವರ ನಿತ್ಯದ ಬದುಕು ಅಡೆತಡೆಯಿಲ್ಲದೆ ಸರಾಗವಾಗಿ ನಡೆಯುತ್ತದೆ.

ಸಾಮಾನ್ಯ ಉದ್ಯೋಗಿಗಳು ಇದನ್ನು ನಿರೀಕ್ಷಿಸಬಹುದೇ? ದಿನದ ೨೪ ಗಂಟೆಯಲ್ಲಿ ೧೨ ತಾಸು ಕೆಲಸ, ೮ ಗಂಟೆ ನಿದ್ರೆ, ೨ ಗಂಟೆ ವೈಯಕ್ತಿಕ ಕೆಲಸ ಮತ್ತು ೨ ಗಂಟೆ (ನಗರ ಪ್ರದೇಶಗಳಲ್ಲಿ) ಟ್ರಾಫಿಕ್ ಜಾಮ್‌ನಲ್ಲಿ ಕಳೆಯುತ್ತವೆ. ಹೀಗಿರುವಾಗ ಮಕ್ಕಳ ಓದು, ಟ್ಯೂಷನ್, ಷಾಪಿಂಗ್ ಮತ್ತು ಮನೆಯ ನಿಗಾವಣೆ ನೋಡಿಕೊಳ್ಳುವವರು ಯಾರು?’ ಎಂದು ಸಾಗುತ್ತದೆ. ಉದ್ಯೋಗಿಗಳ ಉತ್ಪಾದಕತೆಯನ್ನು ಹೆಚ್ಚಿಸಲು, ತನ್ಮೂಲಕ ದೇಶದ ಆರ್ಥಿಕತೆಯನ್ನು ‘ಟಾಪ್ ಗೇರ್’ಗೆ ಏರಿಸಲು ಕೆಲಸದ ಅವಧಿಯನ್ನು ಹೆಚ್ಚಿಸುವುದಕ್ಕಿಂತ, ಉದ್ಯೋಗಿಗಳ ವಾಡಿಕೆಯ ಕಾರ್ಯಾವಧಿಯಲ್ಲಿಯೇ ಇದು ಸಾಧ್ಯವಾಗುವಂತೆ ಅವರ ಸಮಯ ಪರಿಪಾಲನೆಗೆ ಆದ್ಯತೆ ನೀಡಿದಲ್ಲಿ, ಕಾಲಹರಣಕ್ಕೆ ಆಸ್ಪದ ನೀಡುವ ಲಂಚ್ -ಟೀ ಬ್ರೇಕ್ ಮೇಲೆ ನಿಯಂತ್ರಣ, ಸಾರ್ವಜನಿಕ ರಜಾದಿನಗಳಲ್ಲಿ ಕಡಿತ ಮುಂತಾದವುಗಳ ಬಗ್ಗೆ ಗಮನ ಹರಿಸಿದಲ್ಲಿ ಅದು ಸೂಕ್ತ ನಡೆಯಾದೀತು.

ಭಾರತದಲ್ಲಿ ಕೆಲಸದ ದಿನಗಳಿಗಿಂತ ರಜಾದಿನಗಳೇ ಹೆಚ್ಚು ಎಂಬ ದೂರುಗಳಿವೆ. ಉದ್ಯೋಗಿಗಳು ವಾರಾಂತ್ಯದಲ್ಲಿ ಕುಟುಂಬದೊಂದಿಗೆ ಕಳೆದು ‘ತಾಜಾ ತಾಜಾ’ ಆಗಿ ನಳನಳಿಸುತ್ತಾ ಕಚೇರಿಗೆ ಬರಲಿ ಎಂದು ಸ್ಪೇನ್, ಸ್ಕಾಟ್ಲೆಂಡ್, ಯುಎಇ, ನ್ಯೂಜಿಲೆಂಡ್, ಬೆಲ್ಜಿಯಂ ಮತ್ತು ಜಪಾನ್ ದೇಶಗಳು ನಾಲ್ಕು ದಿನಗಳ ವಾರಕ್ಕೆ ಬದಲಾಗುತ್ತಿರುವಾಗ, ನಾರಾಯಣ ಮೂರ್ತಿಯವರ ಸಲಹೆಯನ್ನು ಉದ್ಯಮಗಳು ಹಾಗೂ ಸರಕಾರ ಹೇಗೆ ನೋಡುತ್ತವೆ ಎಂಬುದು ಕುತೂಹಲ ಹುಟ್ಟಿಸಿರುವ ಸಂಗತಿಯಾಗಿದೆ.

(ಲೇಖಕರು ಬ್ಯಾಂಕಿಂಗ್ ಕ್ಷೇತ್ರದ ಪರಿಣತರು)