ವಿಶ್ಲೇಷಣೆ
ಗಣೇಶ್ ಭಟ್, ವಾರಣಾಸಿ
ಪ್ರಬಲ ಜಾತಿಗಳ ನಾಯಕರು ರಾಜಕೀಯ ಹಾಗೂ ಸಾಮಾಜಿಕ ವ್ಯವಸ್ಥೆಯ ಮೇಲೆ ನಿಯಂತ್ರಣವನ್ನು ಹೇರುವ ಪರಿಸ್ಥಿತಿಯಿದೆ. ಜಾತಿಗಳ ಮತದಾರರ ಸಂಖ್ಯೆಯನ್ನು ಆಧರಿಸಿ ಸರಕಾರಿ ಸೌಲಭ್ಯಗಳನ್ನು ಹಂಚಲು ಹೋದರೆ, ಹರಿಯಾಣ, ಉತ್ತರ ಪ್ರದೇಶಗಳಲ್ಲಿ ಹಿಂದೆ ಪ್ರಭಾವ ಶಾಲಿಯಾಗಿದ್ದ ‘ಖಾಪ್ ಪಂಚಾಯತ್ ವ್ಯವಸ್ಥೆ ಮತ್ತೆ ಪ್ರಬಲವಾಗಲಿದೆ.
ಶತಮಾನಗಳಿಂದ ನಡೆದುಬಂದ ಅಸ್ಪೃಶ್ಯತೆಯ ಕಾರಣದಿಂದಾಗಿ ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ ಹಿಂದುಳಿದಿದ್ದ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಜನರಿಗೆ ಸಮಾನತೆಯನ್ನು ಒದಗಿಸುವ ಉದ್ದೇಶದಿಂದ ಡಾ.ಬಿ.ಆರ್. ಅಂಬೇಡ್ಕರ್ ನೇತೃತ್ವದ ಸಮಿತಿಯು ರೂಪಿಸಿದ ಸಂವಿಧಾನವು ಆರ್ಟಿಕಲ್ ೧೫(೪)ರ ಅಡಿಯಲ್ಲಿ ಈ ಎರಡೂ ವರ್ಗಗಳ ಜನರಿಗೆ ಸರಕಾರಿ ಉದ್ಯೋಗಗಳಲ್ಲಿ ಮೀಸಲಾತಿಯನ್ನು ಘೋಷಿಸಿತು. ಈ ಮೀಸಲಾತಿಯು ಮೊದಲ ೧೦ ವರ್ಷಗಳ ವರೆಗೆ ಮಾತ್ರ ಘೋಷಿಸಲ್ಪಟ್ಟಿತ್ತಾದರೂ ಉದ್ದೇಶಿತ ಗುರಿ ಸಾಧನೆಯಾಗದ ಕಾರಣ ಇಂದಿನವರೆಗೂ ಮುಂದುವರಿಸಲ್ಪಟ್ಟಿದೆ.
ನಂತರದ ದಿನಗಳಲ್ಲಿ ಹಿಂದುಳಿದ ವರ್ಗಗಳು ಹಾಗೂ ಇತರ ಹಿಂದುಳಿದ ವರ್ಗಗಳಿಗೂ ಸರಕಾರಿ ಉದ್ಯೋಗ ಹಾಗೂ ಶಿಕ್ಷಣಗಳಲ್ಲಿ ಮೀಸಲಾತಿಯು ಕೊಡಲ್ಪಟ್ಟಿತು. ಭಾರತದಲ್ಲಿ ಯಾವಾಗ ಜಾತಿ ಆಧಾರಿತ ರಾಜಕೀಯ ವ್ಯವಸ್ಥೆಯು ಆರಂಭವಾಯಿತೋ, ಅಂದಿನಿಂದ ರಾಜಕೀಯ ಪಕ್ಷಗಳು ವಿವಿಧ ಜಾತಿಯವರಿಗೆ ಜಾತಿ ಆಧಾರಿತ ಮೀಸಲಾತಿಯ ಆಮಿಷವನ್ನೊಡ್ಡಿ ಅವರನ್ನು ಮತಬ್ಯಾಂಕುಗಳನ್ನಾಗಿಸಿಕೊಂಡವು. ಕೆಲವು ರಾಜಕೀಯ ನಾಯಕರು ತಮ್ಮ ಜಾತಿಯ ಜನರನ್ನು, ತಮ್ಮ ಪ್ರಮುಖ ಮತದಾರರನ್ನಾಗಿ ಬಳಸಿಕೊಳ್ಳಲು ಆರಂಭಿಸಿದರು.
ಉತ್ತರ ಪ್ರದೇಶದಲ್ಲಿ ಮುಲಾಯಂಸಿಂಗ್ ಯಾದವ್ ಹಾಗೂ ಬಿಹಾರದಲ್ಲಿ ಲಾಲೂಪ್ರಸಾದ್ ಯಾದವ್‌ರಂಥ ನಾಯಕರು ಯಾದವ ಸಮುದಾಯವನ್ನು ಬೆನ್ನಿಗಿಟ್ಟುಕೊಂಡು ಅಧಿಕಾರದ ಪಡಸಾಲೆಗೆ ಬಂದರು. ಅವಿಭಜಿತ ಆಂಧ್ರದಲ್ಲಿ ವೈ.ಎಸ್.ರಾಜಶೇಖರ ರೆಡ್ಡಿಯವರ ಬೆಂಬಲಕ್ಕೆ ರೆಡ್ಡಿ ಸಮುದಾಯ ಮತ್ತು ಚಂದ್ರಬಾಬು ನಾಯ್ಡು ಬೆಂಬಲಕ್ಕೆ ನಾಯ್ಡು ಸಮುದಾಯ ನಿಂತಿತು. ಹರಿಯಾಣದಲ್ಲಿ ಜಾಟ್ ಸಮುದಾಯದ ರಾಜಕೀಯ ನಾಯಕರ ಪ್ರಾಬಲ್ಯ
ವಿದ್ದರೆ, ರಾಜಸ್ಥಾನದಲ್ಲಿ ರಜಪೂತ, ಗುಜ್ಜಾರ್ ಹಾಗೂ ಜಾಟ್ ಸಮುದಾಯದ ನಾಯಕರದ್ದೇ ಕಾರುಬಾರು. ಕರ್ನಾಟಕದಲ್ಲೂ ಇಂಥದೇ ಕೆಲವಷ್ಟು
ಸಮೀಕರಣ ಇರುವುದನ್ನು ಬಿಡಿಸಿ ಹೇಳಬೇಕಿಲ್ಲ.
ಎಲ್ಲಾ ರಾಜಕೀಯ ಪಕ್ಷಗಳು ಪಂಚಾಯತ್ ಚುನಾವಣೆಯಿಂದ ವಿಧಾನಸಭೆ, ಲೋಕಸಭೆ ಚುನಾವಣೆಗಳವರೆಗೂ, ಆಯಾ ಪ್ರದೇಶಗಳ ಜಾತಿ ಸಮೀ
ಕರಣದ ಆಧಾರದಲ್ಲಿ ಅಭ್ಯರ್ಥಿಗಳನ್ನು ಆಯ್ಕೆ ಮಾಡುತ್ತವೆ. ಕೆಲವೊಂದು ಜಾತಿಯ ಸ್ವಾಮೀಜಿಗಳು ವೇದಿಕೆಯಲ್ಲಿ ನಿಂತು, ತಮ್ಮ ಜಾತಿಯವರಿಗೆ ಇಷ್ಟು ಮೀಸಲಾತಿ ಕೊಡಬೇಕು ಎಂದು ರಾಜಕೀಯ ನಾಯಕರಿಗೆ ತಾಕೀತು ಮಾಡುವಷ್ಟು ‘ಜಾತಿ ರಾಜಕೀಯ’ ಪ್ರಬಲವಾಗಿದೆ. ದೇಶದ ಜನಸಂಖ್ಯೆಯ ಶೇ.೨೦ರಷ್ಟು ಭಾಗ ಪರಿಶಿಷ್ಟ ಜಾತಿ (ಎಸ್‌ಸಿ), ಶೇ.೯ರಷ್ಟು ಭಾಗ ಪರಿಶಿಷ್ಟ ಪಂಗಡ (ಎಸ್‌ಟಿ), ಶೇ.೪೦ರಷ್ಟು ಭಾಗ ಇತರ ಹಿಂದುಳಿದ ವರ್ಗಗಳಾಗಿದ್ದು (ಒಬಿಸಿ) ಮೀಸಲಾತಿಯನ್ನು ಪಡೆಯುತ್ತಿದ್ದಾರೆ.
ಉಳಿದ ಶೇ.೩೦ರಷ್ಟು ಜನರು ಯಾವುದೇ ರೀತಿಯ ಮೀಸಲಾತಿ ಪಡೆಯುವ ಅರ್ಹತೆಯನ್ನು ಹೊಂದಿರದ, ಸಾಮಾನ್ಯ ವರ್ಗಕ್ಕೆ ಸೇರಿದ ಮೇಲ್ಜಾತಿ ಯವರೆಂದು ಗುರುತಿಸಲ್ಪಟ್ಟ ಜಾತಿಗಳಿಗೆ ಸೇರಿದವರು. ಬ್ರಾಹ್ಮಣರು, ಕ್ಷತ್ರಿಯ ಸಮುದಾಯದ ರಜಪೂತ ಪಂಗಡ, ವೈಶ್ಯ ಸಮುದಾಯದ ಮಾರ್ವಾಡಿ ಗಳು ಮೊದಲಾದ ವರು ಸಾಮಾನ್ಯ ವರ್ಗಕ್ಕೆ ಸೇರಿದವರಾಗಿದ್ದಾರೆ. ಇವರು ಜಾತಿಸ್ತರದಲ್ಲಿ ಮೇಲ್ಜಾತಿಯವರು ಎಂದು ಗುರುತಿಸಲ್ಪಟ್ಟಿದ್ದರೂ, ಇವರಲ್ಲೂ ಸಾಕಷ್ಟು ಮಂದಿ ಬಡವರಿದ್ದಾರೆ. ಆದರೆ ಜಾತಿ ಆಧಾರಿತ ಮೀಸಲಾತಿ ವ್ಯವಸ್ಥೆಯಲ್ಲಿ ಸಾಮಾನ್ಯ ವರ್ಗದ ಬಡವರಿಗೆ ಸರಕಾರದಿಂದ ಯಾವುದೇ ಸಹಾಯಗಳು ಸಿಗದೇ, ಅವರು ಬಡವರಾಗಿಯೇ ಉಳಿಯುವಂತಾಯಿತು.
ನರೇಂದ್ರ ಮೋದಿ ಸರಕಾರವು ಆರ್ಥಿಕವಾಗಿ ಹಿಂದುಳಿದಿರುವ (ಇಕನಾಮಿಕ್ ವೀಕರ್ ಸೆಕ್ಷನ್- ಇಡಬ್ಲ್ಯುಎಸ್) ಮೇಲ್ಜಾತಿಯ ಜನರಿಗೆ ಉನ್ನತ
ವಿದ್ಯಾಭ್ಯಾಸ ಹಾಗೂ ಸರಕಾರಿ ಹುದ್ದೆಗಳಲ್ಲಿ ಶೇ.೧೦ರ ಮೀಸಲಾತಿಯನ್ನು ಕಲ್ಪಿಸಿಕೊಡುವ ಕಾನೂನನ್ನು ೨೦೧೯ರಲ್ಲಿ ಜಾರಿಗೆ ತಂದಿತು. ಇದರನ್ವಯ, ವಾರ್ಷಿಕವಾಗಿ ೮ ಲಕ್ಷ ರುಪಾಯಿಗಿಂತ ಕಡಿಮೆ ಆದಾಯವಿರುವ ಹಾಗೂ ೫ ಎಕರೆಗಳಿಗಿಂತ ಕಡಿಮೆ ಭೂಮಿಯಿರುವ ವ್ಯಕ್ತಿಗಳು ಇಡಬ್ಲ್ಯುಎಸ್
ವಿಭಾಗದಲ್ಲಿ ಗುರುತಿಸಲ್ಪಟ್ಟು ಮೀಸಲಾತಿಯನ್ನು ಪಡೆದರು. ಎಸ್‌ಸಿ, ಎಸ್‌ಟಿ ಮತ್ತು ಒಬಿಸಿಗಳ ಹೊರತಾದ ಸಾಮಾನ್ಯವರ್ಗದ ಎಲ್ಲಾ ಜಾತಿಗಳ
ಬಡವರು ಈ ಮೀಸಲಾತಿಯ ಸೌಲಭ್ಯವನ್ನು ಪಡೆಯುತ್ತಿದ್ದಾರೆ. ಇಡಬ್ಲ್ಯುಎಸ್ ಮೀಸಲಾತಿ ವ್ಯವಸ್ಥೆಯು ಜಾತಿ ಆಧಾರಿತ ಮೀಸಲಾತಿ ವ್ಯವಸ್ಥೆ
ಗಿಂತ ಹೆಚ್ಚು ವೈಜ್ಞಾನಿಕವಾಗಿದ್ದು, ನಿಜವಾಗಿಯೂ ಆರ್ಥಿಕವಾಗಿ ಹಿಂದುಳಿದವರಿಗೆ ಮತ್ತು ಅರ್ಹರಿಗೆ ಸರಕಾರದ ಸೌಲಭ್ಯಗಳು ತಲುಪುತ್ತವೆ. ಜಾತಿ
ಆಧಾರಿತ ಮೀಸಲಾತಿ ವ್ಯವಸ್ಥೆಯಲ್ಲಿ ನಿರ್ದಿಷ್ಟ ಜಾತಿಯ ಜನರು ಎಷ್ಟೇ ಸದೃಢರಾಗಿದ್ದರೂ ಮತ್ತೆ ಮತ್ತೆ ಮೀಸಲಾತಿಯನ್ನು ಪಡೆಯುತ್ತಲೇ ಇರು
ತ್ತಾರೆ.
ತಂದೆಯು ಮೀಸಲಾತಿಯ ಆಧಾರದಲ್ಲಿ ವಿದ್ಯಾಭ್ಯಾಸ ಹಾಗೂ ಉದ್ಯೋಗವನ್ನು ಪಡೆದಿದ್ದರೂ, ಆರ್ಥಿಕವಾಗಿ ಉತ್ತಮ ಸ್ಥಾನಕ್ಕೇರಿದ್ದರೂ, ಆತನ ಮಗನೂ ಅದೇ ಜಾತಿ ಮೀಸಲಾತಿಯ ಆಧಾರದಲ್ಲಿ ಉನ್ನತ ವಿದ್ಯಾಭ್ಯಾಸ ಮತ್ತು ಸರಕಾರಿ ಉದ್ಯೋಗಗಳಿಗೆ ಅರ್ಹನಾಗುತ್ತಾನೆ. ಆದರೆ, ಆರ್ಥಿಕತೆ ಯನ್ನು ಆಧರಿಸಿದ ಮೀಸಲಾತಿ ವ್ಯವಸ್ಥೆಯಲ್ಲಿ, ವ್ಯಕ್ತಿಯೋರ್ವನ ವಾರ್ಷಿಕ ವರಮಾನದ ಮಟ್ಟವು ೮ ಲಕ್ಷಗಳನ್ನು ಮೀರಿದಾಗ, ಆತ ತನ್ನಿಂತಾನೇ ಮೀಸಲಾತಿಯ ಸೌಲಭ್ಯದಿಂದ ಹೊರ ಗುಳಿಯುತ್ತಾನೆ. ಶೇ.೧೦ರಷ್ಟಿರುವ ಇಡಬ್ಲ್ಯುಎಸ್ ಮೀಸಲಾತಿಯು, ಶೇ.೩೦ರಷ್ಟಿರುವ ದೇಶದ ಸಾಮಾನ್ಯ ವರ್ಗದ ಜನರಿಗೆ ಹಂಚಿಹೋಗುತ್ತದೆ.
೨೦೧೧ರಲ್ಲಿ ಭಾರತದಲ್ಲಿ ಸಾಮಾಜಿಕ, ಆರ್ಥಿಕ ಹಾಗೂ ಜಾತಿ ಗಣತಿಯನ್ನು ಮಾಡಲಾಗಿತ್ತು. ಆದರೆ ಈ ಗಣತಿಯು ಜಾತಿಗಣತಿಗಿಂತ ದೇಶದ
ಜನರ ಸಾಮಾಜಿಕ ಮತ್ತು ಆರ್ಥಿಕ ಮಾಹಿತಿಯನ್ನು ಕಲೆಹಾಕುವ ಬಗ್ಗೆ ಹೆಚ್ಚು ಒತ್ತುಕೊಟ್ಟಿತ್ತು. ೨೦೧೪ರಲ್ಲಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ನರೇಂದ್ರ ಮೋದಿ ಸರಕಾರವು ಜನಕಲ್ಯಾಣ ಯೋಜನೆಗಳ ಫಲಾನುಭವಿಗಳನ್ನು ೨೦೧೧ರ ಗಣತಿಯು ಸಂಗ್ರಹಿಸಿದ ಸಾಮಾಜಿಕ ಹಾಗೂ ಆರ್ಥಿಕವಾಗಿ ಹಿಂದುಳಿದವರ ಮಾಹಿತಿಗಳ ಆಧಾರದಲ್ಲೇ ಆಯ್ಕೆ ಮಾಡಿತು.
೨೦೧೧ರ ಗಣತಿಯ ಅನ್ವಯ ಕಚ್ಚಾಮನೆಗಳಲ್ಲಿ ವಾಸಿಸುತ್ತಿದ್ದ ೩ ಕೋಟಿ ಮಂದಿಗೆ ‘ಪ್ರಧಾನಮಂತ್ರಿ ಆವಾಸ್ ಯೋಜನೆ’ ಅಡಿ ಮನೆಗಳನ್ನು ಕಟ್ಟಿಸಿ ಕೊಡ ಲಾಯಿತು. ಉಚಿತ ಅಡುಗೆ ಅನಿಲದ ಸಂಪರ್ಕಕೊಡುವ ಪ್ರಧಾನಮಂತ್ರಿ ಉಜ್ವಲ ಯೋಜನೆ ಯಡಿಯಲ್ಲಿ ೧೨ ಕೋಟಿ ಮಹಿಳೆಯರ ಆಯ್ಕೆ
ಯನ್ನೂ ೨೦೧೧ರ ಈ ಗಣತಿಯ ಆಧಾರದಲ್ಲೇ ಮಾಡಲಾಯಿತು. ಮಾತ್ರವಲ್ಲ, ೨.೫ ಕೋಟಿ ಮನೆಗಳಿಗೆ ಉಚಿತ ವಿದ್ಯುದೀಕರಣ ಹಾಗೂ ೧೨ ಕೋಟಿ ಉಚಿತ ಶೌಚಾಲಯ ಒದಗಿಸಿಕೊಡುವ ಯೋಜನೆಗಳ ಫಲಾನುಭವಿಗಳನ್ನೂ ಸಾಮಾಜಿಕ ಮತ್ತು ಆರ್ಥಿಕ ಗಣತಿಯ ಅಂಕಿ-ಅಂಶಗಳನ್ನು ಆಧರಿಸಿಯೇ ಆಯ್ಕೆಮಾಡಲಾಯಿತು.
ಬಿಹಾರದಲ್ಲಿ ನಿತೀಶ್ ಕುಮಾರ್ ನೇತೃತ್ವದ ಸರಕಾರವು ಇತ್ತೀಚೆಗೆ ಜಾತಿಗಣತಿಯನ್ನು ನಡೆಸಿ ಅಂಕಿ-ಅಂಶಗಳನ್ನು ಪ್ರಕಟಿಸಿದೆ. ಹೆಚ್ಚು ಮತದಾ
ರರು ಇರುವ ಜಾತಿಗಳನ್ನು ಕಂಡುಹಿಡಿಯುವುದೇ ಈ ಜಾತಿಗಣತಿಯ ಉದ್ದೇಶವಾಗಿತ್ತು. ಕಾಂಗ್ರೆಸ್ ನಾಯಕ ರಾಹುಲ್ ಗಾಂಽಯವರು, ತಮ್ಮ ಪಕ್ಷವು
೨೦೨೪ರಲ್ಲಿ ಅಽಕಾರಕ್ಕೆ ಬಂದ ೨ ಗಂಟೆಗಳ ಒಳಗಾಗಿ ಜಾತಿಗಣತಿಯನ್ನು ಘೋಷಿಸುವುದಾಗಿ ಹೇಳಿರುವುದು, ಕಾಂಗ್ರೆಸ್ ಪಕ್ಷವೂ ಜಾತಿಗಣತಿಯ ಹಿಂದೆ
ಬಿದ್ದಿದೆ ಎಂಬುದನ್ನು ಸೂಚಿಸುತ್ತದೆ. ದೇಶದ ಜನ ಸಂಖ್ಯೆಯ ಶೇ.೪೦ರಷ್ಟಿರುವ ಇತರ ಹಿಂದುಳಿದ ಜಾತಿಗಳ (ಒಬಿಸಿ) ಮತದಾರರದಲ್ಲಿರುವ ದೊಡ್ಡ
ಜಾತಿಗಳನ್ನು ಕಂಡುಹಿಡಿದು ಅವರನ್ನು ಓಲೈಸುವುದೇ ಜಾತಿಗಣತಿಯ ಮುಖ್ಯ ಉದ್ದೇಶವಾಗಿದೆ.
ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ಜಾತಿಗಳು ಹೆಚ್ಚು ಸೌಲಭ್ಯವನ್ನು ಪಡೆಯಬೇಕು ಎಂದು ರಾಹುಲ್ ಗಾಂಧಿಯವರು ಹೇಳಿರುವುದು ಪ್ರಜಾ
ಪ್ರಭುತ್ವ ವ್ಯವಸ್ಥೆಯ ಪಾಲಿಗೆ ಅಪಾಯಕಾರಿ ಬೆಳವಣಿಗೆಯಾಗಿದೆ. ಒಬಿಸಿ ಜಾತಿಗಳಲ್ಲಿ ಹೆಚ್ಚು ಜನಸಂಖ್ಯೆಯಿರುವ ಜಾತಿಯನ್ನು ಜಾತಿಗಣತಿಯ
ಮೂಲಕ ಗುರುತಿಸಿ, ಅವರಿಗೆ ಹೆಚ್ಚಿನ ರಾಜಕೀಯ ಪ್ರಾತಿನಿಧ್ಯ ಮತ್ತು ಆರ್ಥಿಕ ಆಮಿಷವನ್ನು ಒಡ್ಡುವುದು ಈ ಜಾತಿಗಣತಿಯ ಮುಖ್ಯ ಉದ್ದೇಶವಾಗಿದೆ.
ದೊಡ್ಡ ಪ್ರಮಾಣದ ಮತದಾರರು ಇರುವ ಜಾತಿಗಳಿಗೆ ವಿಶೇಷ ಸವಲತ್ತುಗಳು, ಮೀಸಲಾತಿಗಳನ್ನು ಘೋಷಿಸಿದರೆ, ಕಡಿಮೆ ಪ್ರಮಾಣದ ಮತದಾರರನ್ನು ಹೊಂದಿರುವ ಜಾತಿಗಳ ಜನರು ಭಾರಿ ನಿರ್ಲಕ್ಷ್ಯಕ್ಕೆ ಒಳಗಾಗುವ ಸಾಧ್ಯತೆಯಿದೆ. ಪ್ರತಿಭಾ ಪಲಾಯನದ ಸಂಭಾವ್ಯತೆ ಹೆಚ್ಚಾಗಲಿದೆ. ಈಗಾಗಲೇ ದೇಶದಲ್ಲಿ ತಮ್ಮ ಪ್ರತಿಭೆಗೆ ಸಮರ್ಪಕ ಅವಕಾಶಗಳು ಸಿಗದೆ ವಿದೇಶಗಳಿಗೆ ತೆರಳುವವರ ಸಂಖ್ಯೆ ದೊಡ್ಡದಿದೆ. ಜಾತಿಗಳ ಜನಸಂಖ್ಯೆ ಆಧಾರಿತ ಪ್ರಾತಿನಿಧ್ಯ ವ್ಯವಸ್ಥೆ ಆರಂಭವಾದರೆ, ವಿದೇಶಗಳಿಗೆ ತೆರಳಿ ಅಲ್ಲೇ ನೆಲೆಗೊಳ್ಳುವ ಭಾರತದ ಪ್ರತಿಭಾವಂತರ ಸಂಖ್ಯೆ ದುಪ್ಪಟ್ಟಾಗಬಹುದು. ಇದರಿಂದ ದೇಶವು ಪ್ರತಿಭಾವಂತರ ಅಭಾವವನ್ನು ಎದುರಿಸ ಬೇಕಾದೀತು!
ಭಾರತದ ಹಳ್ಳಿಗಳಲ್ಲಿ ಪ್ರಬಲ ಜಾತಿಗಳ ನಾಯಕರು ರಾಜಕೀಯ ಹಾಗೂ ಸಾಮಾಜಿಕ ವ್ಯವಸ್ಥೆಯ ಮೇಲೆ ನಿಯಂತ್ರಣವನ್ನು ಹೇರುವ ಪರಿಸ್ಥಿತಿಯೂ
ಇದೆ. ಜಾತಿಗಳ ಮತದಾರರ ಸಂಖ್ಯೆಯನ್ನು ಆಧರಿಸಿ ಸರಕಾರಿ ಸೌಲಭ್ಯಗಳನ್ನು ಹಂಚಲು ಹೋದರೆ, ಹರಿಯಾಣ, ಉತ್ತರ ಪ್ರದೇಶಗಳಲ್ಲಿ ಕೆಲವು ವರ್ಷ ಗಳ ಹಿಂದಿನವರೆಗೂ ಪ್ರಭಾವಶಾಲಿಯಾಗಿದ್ದ ‘ಖಾಪ್ ಪಂಚಾಯತ್’ ವ್ಯವಸ್ಥೆ ಮತ್ತೆ ಪ್ರಬಲವಾಗಲಿದೆ. ಜಾಟ್ ಸಮುದಾಯದಲ್ಲಿ ಸಾಂವಿಧಾನಿಕ
ವ್ಯವಸ್ಥೆಗೆ ಪರ್ಯಾಯವಾಗಿ ಕಾರ್ಯಾಚರಿಸುತ್ತಿದ್ದ ಈ ಖಾಪ್ ಪಂಚಾಯತ್‌ಗಳು ಮೂಲಭೂತವಾದಿಗಳಾಗಿ ಬೆಳೆದು, ಸ್ತ್ರೀ ಸಮಾನತೆ ಹಾಗೂ ಅಭಿವೃದ್ಧಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದವು.
ತಮ್ಮ ಸಮುದಾಯದ ಯುವಕ-ಯುವತಿಯರು ಸಮುದಾಯದ ಹೊರಗಿನವರನ್ನು ವಿವಾಹವಾದರೆ, ಅಂಥವರಿಗೆ ‘ಮರ್ಯಾದಾ ಹತ್ಯೆ’ಯಂಥ ತೀರ್ಪನ್ನೂ ಈ ಪಂಚಾಯತ್‌ಗಳು ನೀಡುತ್ತಿದ್ದವು. ಖಾಪ್ ಪಂಚಾಯತ್ ವ್ಯವಸ್ಥೆಯು ಸಂವಿಧಾನ-ವಿರೋಧಿ ಎಂದು ಸುಪ್ರೀಂ ಕೋರ್ಟ್ ತೀರ್ಪನ್ನೂ ಕೊಟ್ಟಿದೆ. ಆದರೆ ಜಾತಿಗಣತಿ ಆಧಾರಿತ ಮೀಸಲಾತಿ ವ್ಯವಸ್ಥೆ ಜಾರಿಗೆ ಬಂದರೆ, ಜಾತಿ-ಜಾತಿಗಳ ಖಾಪ್ ಪಂಚಾಯತ್ ವ್ಯವಸ್ಥೆಗಳೂ ಪುನಃ ಚಿಗಿತು ಕೊಂಡಾವು.
ಪ್ರಜಾಪ್ರಭುತ್ವವು ಕುಟುಂಬ, ಜಾತಿ, ಧರ್ಮಗಳನ್ನು ಮೀರಿ ನಿಲ್ಲಬೇಕಾದ ವ್ಯವಸ್ಥೆಯಾಗಿದೆ. ಅಭ್ಯರ್ಥಿಯೊಬ್ಬನ ವೈಯಕ್ತಿಕ ಸಾಮರ್ಥ್ಯ ಹಾಗೂ
ಪ್ರತಿಭೆಗಳು ಆತನ ಆಯ್ಕೆಯ ಮಾನದಂಡವಾಗ ಬೇಕೇ ವಿನಾ, ಅವನ ಜಾತಿ-ಧರ್ಮಗಳು ಮುಖ್ಯವಾಗಬಾರದು. ದೇಶದ ಇಂದಿನ ಪ್ರಧಾನಿ ನರೇಂದ್ರ
ಮೋದಿಯವರು ಜಾತಿಯ ಹೆಸರಿನಲ್ಲಿ ಅಧಿಕಾರಕ್ಕೆ ಬಂದವರಲ್ಲ. ಲಾಲ್ ಬಹಾದುರ್ ಶಾಸ್ತ್ರಿ, ಮೊರಾರ್ಜಿ ದೇಸಾಯಿ, ಪಿ.ವಿ.ನರಸಿಂಹರಾವ್, ಅಟಲ್ ಬಿಹಾರಿ ವಾಜಪೇಯಿ, ಮನಮೋಹನ್ ಸಿಂಗ್ ಇವರ‍್ಯಾರೂ ತಮ್ಮ ಜಾತಿಯ ಜನಸಂಖ್ಯೆಗೆ ಅನುಗುಣವಾಗಿ ಪ್ರಧಾನಿಗಳಾದವರಲ್ಲ. ಪ್ರಧಾನಿ,
ಮುಖ್ಯಮಂತ್ರಿಗಳಂಥ ಹುದ್ದೆಗೆ ಆಯ್ಕೆಯಾಗಬಲ್ಲ ವ್ಯಕ್ತಿಗಳು ತಮ್ಮ ಯೋಗ್ಯತೆಯ ಆಧಾರದಲ್ಲಿ ಮಾತ್ರ ಆಯ್ಕೆಯಾಗಬೇಕು. ಆದರೆ ಜಾತಿಗಣತಿಯಂಥ
ಪ್ರತಿಗಾಮಿ ಗಣತಿ ವ್ಯವಸ್ಥೆಯು ಜಾರಿಯಾದಲ್ಲಿ, ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯ ಮೂಲಸೆಲೆಯನ್ನೇ ಅದು ನಾಶಮಾಡಲಿದೆ ಹಾಗೂ ‘ಬಲಿಷ್ಠರು
ಮಾತ್ರ ಉಳಿದುಕೊಳ್ಳಲು ಯೋಗ್ಯರು’ ಎಂಬ ಧೋರಣೆಯನ್ನು ಅದು ನೆಲೆಗೊಳಿಸಲಿದೆ.
ದೇಶದ ಸಾಮಾಜಿಕ ಹಾಗೂ ಆರ್ಥಿಕ ಗಣತಿಯು ನಡೆದು ೧೨ ವರ್ಷಗಳಾಗುತ್ತಾ ಬಂದರೂ, ಸಿಎಎ/ಎನ್ ಆರ್‌ಸಿ ಗಲಾಟೆಯಲ್ಲಿ ಪುನಃ ಆರ್ಥಿಕ ಗಣತಿ ಯನ್ನು ನಡೆಸಲು ಕೇಂದ್ರ ಸರಕಾರಕ್ಕೆ ಸಾಧ್ಯವಾಗಿಲ್ಲ. ಆರ್ಥಿಕವಾಗಿ ಹಿಂದುಳಿದವರನ್ನು ಪತ್ತೆಹಚ್ಚಿ ಸಶಕ್ತರನ್ನಾಗಿಸಲು ಆರ್ಥಿಕ ಗಣತಿ ಅತ್ಯಗತ್ಯ ವಾಗಿದೆ. ಹೀಗಾಗಿ ಕೇಂದ್ರ ಸರಕಾರವು ಈ ನಿಟ್ಟಿನಲ್ಲಿ ಆದ್ಯಗಮನವನ್ನು ಹರಿಸಬೇಕಾಗಿದೆ.
(ಲೇಖಕರು ಹವ್ಯಾಸಿ ಬರಹಗಾರರು)