ಸಂಗತ
ವಿಜಯ್ ದರಡಾ
ಮುಂದಿನ ವಾರ ದೀಪಾವಳಿ ಹಬ್ಬದ ಸಂಭ್ರಮ. ಆದರೆ ಗಾಜಾಪಟ್ಟಿಯಿಂದ ಬರುತ್ತಿರುವ ಗೋಳಿನ ಕಥೆಗಳು ಎಲ್ಲರನ್ನೂ ಬೇಸರದಲ್ಲಿ ಮುಳುಗಿಸಿವೆ. ಗಾಜಾದಲ್ಲಿ ಬಾಂಬ್ ದಾಳಿಯಿಂದ ಧ್ವಂಸಗೊಂಡ ಬೃಹತ್ ಕಟ್ಟಡಗಳ ಅವಶೇಷಗಳಡಿಯಿಂದ ಪುಟ್ಟ ಹುಡುಗಿಯೊಬ್ಬಳನ್ನು ಪರಿಹಾರ ಕಾರ್ಯಾ ಚರಣೆ ನಡೆಸುವವರು ರಕ್ಷಣೆ ಮಾಡಿದ್ದಾರೆ. ಆಕೆ ರಕ್ತದಲ್ಲಿ ತೋಯ್ದು ಹೋಗಿದ್ದಳು. ಯಾರಾಕೆ? ಯಾರಿಗೂ ಗೊತ್ತಿರಲಿಲ್ಲ. ಕೂಡಲೇ ಅವಳನ್ನು ಹತ್ತಿರದ ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ಅಲ್ಲಿ ಆಕೆಯ ರಕ್ತಸಿಕ್ತ ಮುಖವನ್ನು ಒರೆಸಿ ಸ್ವಚ್ಛಗೊಳಿಸಿದ ಮೇಲೆ ಪಕ್ಕದ ಬೆಡ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಇನ್ನೊಬ್ಬ ಗಾಯಾಳು ಹುಡುಗಿ ಜೋಯಾ ಎಂಬಾಕೆ ಇವಳನ್ನು ಗುರುತಿಸಿ ‘ಅಯ್ಯೋ ನನ್ನ ಅಕ್ಕ ಜಾರಾ’ ಎಂದು ಅಳತೊಡಗಿದಳು.
ಇಬ್ಬರೂ ಅಸಾಧ್ಯ ನೋವಿನಿಂದ ಚಡಪಡಿಸುತ್ತಿದ್ದರೂ ಮುಖದಲ್ಲೊಂದು ಮಂದಹಾಸ ಮೂಡಿತ್ತು. ಬಹುಶಃ ಅವರಿಬ್ಬರ ಅಪ್ಪ ಅಮ್ಮಂದಿರು ಬಾಂಬ್
ದಾಳಿಯಲ್ಲಿ ಈಗಾಗಲೇ ಸಾವನ್ನಪ್ಪಿರಬಹುದು. ಒಮ್ಮೆ ಯೋಚಿಸಿ ನೋಡಿ. ಇಂಥ ಪುಟ್ಟ ಹುಡುಗಿಯರ ಬದುಕು ಇನ್ನುಮುಂದೆ ಹೇಗಿರಬಹುದು? ಪಾಪ, ಗಾಜಾದಲ್ಲಿ ಇವರಂತೆಯೇ ಅನಾಥರಾದ ಇನ್ನಷ್ಟು ಪುಟ್ಟ ಮಕ್ಕಳ ಕಥೆಯೇನು? ಹಮಾಸ್ನವರು ತಿಂಗಳ ಹಿಂದೆ ಇಸ್ರೇಲ್ ಮೇಲೆ ರಾಕೆಟ್ ದಾಳಿ ನಡೆಸಿ, ಬಳಿಕ ಗಡಿಯೊಳಗೆ ನುಗ್ಗಿ ಹಿಂಸಾಚಾರ ನಡೆಸಿದಾಗಲೇ, ‘ಖಂಡಿತ ಇಸ್ರೇಲ್ ಇದಕ್ಕೆ ಪ್ರತೀಕಾರ ತೀರಿಸಿಕೊಳ್ಳಲು ಗಾಜಾ ಮೇಲೆ ಸಿಡಿಲಬ್ಬರದ ದಾಳಿ
ನಡೆಸುತ್ತದೆ, ಆಗ ಗಾಜಾದಲ್ಲಿರುವ ಅಮಾಯಕರು ಅದರ ಬಿಸಿ ಉಣ್ಣುತ್ತಾರೆ; ಹಮಾಸ್ ಮೇಲೆ ಆಗಸದಿಂದ ಉದುರುವ ಬಾಂಬ್ ಮತ್ತು ಕ್ಷಿಪಣಿಗಳಿಗೆ ಉಗ್ರರು ಯಾರು ಮತ್ತು ಮುಗ್ಧರು ಯಾರು ಎಂಬುದು ಹೇಗೆ ತಾನೇ ತಿಳಿಯುತ್ತದೆ..’ ಎಂದು ನಾನು ಹೇಳಿದ್ದೆ. ಈಗ ನನ್ನ ಆತಂಕ ನಿಜವಾಗಿದೆ.
ಸಾವಿರಾರು ಜನರು ಗಾಜಾಪಟ್ಟಿಯಲ್ಲಿ ಸಾವನ್ನಪ್ಪಿದ್ದಾರೆ. ಅವರಲ್ಲಿ ೪೦೦೦ಕ್ಕೂ ಹೆಚ್ಚು ಸಂತ್ರಸ್ತರು ಮಕ್ಕಳು. ಸಾವಿರಾರು ಜನರು ಅಂಗವಿಕಲ ರಾಗಿದ್ದಾರೆ. ಒಬ್ಬರಿಗೆ ಕೈ ಮುರಿದಿದೆ. ಇನ್ನೊಬ್ಬರಿಗೆ ಕಾಲು ಮುರಿದಿದೆ. ಮತ್ತೊಬ್ಬರಿಗೆ ಕಣ್ಣುಗಳೇ ಹೋಗಿವೆ. ಇಸ್ರೇಲ್ ಮೇಲೆ ಅಂದು ಹಮಾಸ್ ನಡೆಸಿದ್ದು
ಅಮಾನವೀಯ ದಾಳಿಯೆಂಬುದು ನಿಜ. ಆದರೆ ಈಗ ಇಸ್ರೇಲಿಗರು ಸೇಡಿನಿಂದ ಹಮಾಸ್ ಮೇಲೆ ನಡೆಸುತ್ತಿರುವ ದಾಳಿ ಯಾವ ರೀತಿಯಲ್ಲೂ ಅದಕ್ಕಿಂತ ಕಡಿಮೆ ಕ್ರೌರ್ಯದ್ದಲ್ಲ ಎಂಬುದನ್ನೂ ಒಪ್ಪಿಕೊಳ್ಳಲೇಬೇಕು.
ಗಾಜಾಪಟ್ಟಿಯಲ್ಲಿ ಸಿಲುಕಿರುವ ಜನರು ನನ್ನ ಸಂಬಂಧಿಕರೂ ಅಲ್ಲ, ಮನೆಯವರೂ ಅಲ್ಲ. ಆದರೆ ಅವರೆಲ್ಲರೂ ನನ್ನಂತೆಯೇ ಮನುಷ್ಯರು ಎಂಬು ದನ್ನು ಹೇಗೆ ಮರೆಯಲಿ? ನಾನು ಬದುಕುತ್ತಿರುವುದು ಮಹಾವೀರ, ಬುದ್ಧ ಹಾಗೂ ಮಹಾತ್ಮ ಗಾಂಧೀಜಿಯ ನೆಲದಲ್ಲಿ. ಇವರೆಲ್ಲರಿಗೂ ಮನುಷ್ಯತ್ವವೇ ಅತಿದೊಡ್ಡ ಧರ್ಮವಾಗಿತ್ತು. ‘ವಸುಧೈವ ಕುಟುಂಬಕಂ’, ಜಗತ್ತೇ ಒಂದು ಕುಟುಂಬ ಎಂದು ನಂಬುವ ಭಾರತ ದಲ್ಲಿ ನಾನು ಬದುಕುತ್ತಿದ್ದೇನೆ. ಹೀಗಾಗಿ ಜಗತ್ತಿನ ಯಾವ ಭಾಗದಲ್ಲಿ ಮಾನವೀಯತೆ ಸತ್ತರೂ ನಮಗೆ ಖಂಡಿತ ನೋವಾಗುತ್ತದೆ!
ಹಿಂದೆ ಹಿಟ್ಲರ್ನಿಂದ ಯೆಹೂದಿಗಳು ನರಮೇಧಕ್ಕೆ ಒಳಗಾದ ಜರ್ಮನಿಯ ಪ್ರದೇಶಗಳಿಗೆ ನಾನು ಭೇಟಿ ನೀಡಿದ್ದೇನೆ. ಆ ಬೆಂಕಿ ಈಗಲೂ ಯೆಹೂದಿಗಳ ಎದೆಯಲ್ಲಿ ಉರಿಯುತ್ತಿದೆ. ಆದರೆ, ದ್ವೇಷವು ಎಲ್ಲವನ್ನೂ ನುಂಗಿಹಾಕುತ್ತದೆ ಎಂಬುದನ್ನು ಕೂಡ ನಾವು ಅರ್ಥ ಮಾಡಿಕೊಳ್ಳಬೇಕು. ಹಾಗಾಗಿ ದ್ವೇಷವನ್ನು ಬದಿಗಿಟ್ಟು ಮಾನವೀಯತೆಯನ್ನು ಅಪ್ಪಿಕೊಳ್ಳಬೇಕು. ಜಾತಿ, ಧರ್ಮ, ಮತ, ಪಂಥಗಳನ್ನು ಬದಿಗಿಟ್ಟು ಜಗತ್ತನ್ನೇ ಒಂದು ಕುಟುಂಬದಂತೆ ನೋಡಬೇಕು. ಆದರೆ ಅದಕ್ಕೆ ವ್ಯತಿರಿಕ್ತವಾಗಿ ಇಂದು ಜಗತ್ತು ನಾನಾ ಸಿದ್ಧಾಂತಗಳ ಜೇಡರ ಬಲೆಯೊಳಗೆ ಸಿಲುಕಿಕೊಂಡಿದೆ. ನಾವೀಗ ನೋಡುತ್ತಿರುವುದು ಅದರ ಹೊಸಲು ಅಭಿವ್ಯಕ್ತಿಯನ್ನಷ್ಟೆ. ನಾನು ಈ ಹಿಂದೆ ಗಾಜಾಪಟ್ಟಿಗೂ ಭೇಟಿ ನೀಡಿದ್ದೆ.
ಅದು ಕೇವಲ ೪೧ ಕಿ.ಮೀ. ಉದ್ದ, ೧೦ ಕಿ.ಮೀ. ಅಗಲದ ಪುಟ್ಟ ಭೂ ಪ್ರದೇಶ. ಆದರೆ ಜಗತ್ತಿನಲ್ಲೇ ಅತಿಹೆಚ್ಚು ಜನಸಾಂದ್ರತೆಯ ಪ್ರದೇಶ ಕೂಡ ಹೌದು. ನಾನಾಗ ನೋಡಿದ ಚಿತ್ರಣವನ್ನು ಈಗ ಕಲ್ಪಿಸಿಕೊಂಡರೆ ಆ ಜನನಿಬಿಡ ಪ್ರದೇಶದಲ್ಲಿ ಹೇಗೆ ಜನರು ಸಾಯುತ್ತಿರಬಹುದು ಎಂಬ ಚಿತ್ರಣ ಕೂಡ ನನ್ನ
ಕಣ್ಮುಂದೆ ಬರುತ್ತದೆ. ಗಾಜಾ ನಗರವನ್ನು ಇಸ್ರೇಲಿನ ಬಾಂಬುಗಳು ಬಹುತೇಕ ನಿರ್ನಾಮ ಮಾಡಿವೆ. ಅಲ್ಲಿರುವ ಬೃಹತ್ ಆಸ್ಪತ್ರೆಯ ಮೇಲೆ ನಡೆಸಿದ ಕ್ಷಿಪಣಿ ದಾಳಿಯು ೫೦೦ಕ್ಕೂ ಹೆಚ್ಚು ರೋಗಿಗಳನ್ನು ಕೊಂದುಹಾಕಿದೆ. ಇನ್ನೊಂದು ಬೃಹತ್ ಆಸ್ಪತ್ರೆಯಾಗಿರುವ ಅಲ್ ಶಿ-ದಲ್ಲಿ ೫೫,೦೦೦ಕ್ಕೂ ಹೆಚ್ಚು
ಜನರು ಆಶ್ರಯ ಪಡೆದಿದ್ದಾರೆ. ಆದರೆ ಈ ಆಸ್ಪತ್ರೆಯ ನೆಲಮಾಳಿಗೆಯಲ್ಲಿರುವ ಬಂಕರ್ಗಳಲ್ಲಿ ಹಮಾಸ್ನವರು ಕಮಾಂಡ್ ಸೆಂಟರ್ ಸ್ಥಾಪಿಸಿಕೊಂಡಿದ್ದಾರೆ ಎಂದು ಇಸ್ರೇಲ್ ಹೇಳುತ್ತಿದೆ. ಈ ಆಸ್ಪತ್ರೆಯ ಮೇಲೇನಾದರೂ ಇಸ್ರೇಲ್ ದಾಳಿ ನಡೆಸಿದರೆ ಅದು ಜಗತ್ತಿನ ಅತಿದೊಡ್ಡ ದುರಂತಗಳಲ್ಲಿ ಒಂದಾಗುತ್ತದೆ. ಅಷ್ಟಕ್ಕೂ ಈ ಆಸ್ಪತ್ರೆಯಲ್ಲೀಗ ರೋಗಿಗಳಿಗೆ ಚಿಕಿತ್ಸೆ ನೀಡಲು ಔಷಧ, ಇಂಜೆಕ್ಷನ್ನುಗಳಿಲ್ಲ. ಶಸ್ತ್ರಚಿಕಿತ್ಸೆಗಳನ್ನು
ನಡೆಸಲು ಉಪಕರಣಗಳಿಲ್ಲ. ಕರೆಂಟ್ ಇಲ್ಲದ ಕಾರಣ ತುರ್ತು ಶಸ್ತ್ರಚಿಕಿತ್ಸೆಗಳನ್ನು ಟಾರ್ಚ್ ಬೆಳಕಿನಲ್ಲಿ ನಡೆಸಲಾಗುತ್ತಿದೆ.
ಆಂಟಿಬಯೋಟಿಕ್ಗಳು, ಪೇನ್ ಕಿಲ್ಲರ್ಗಳು ಸಿಗುತ್ತಿಲ್ಲ. ಅನಸ್ತೇಶಿಯಾ ನೀಡದೆ ದೇಹವನ್ನು ಕೊಯ್ಯಲಾಗುತ್ತಿದೆ! ಮಾನವೀಯ ನೆರವು ನೀಡುವ ಸಂಘಟನೆಗಳು ಕೂಡ ಅಲ್ಲಿಗೆ ಹೋಗಲು ಸಾಧ್ಯವಾಗುತ್ತಿಲ್ಲ. ಕೊನೆಗೂ ಈಗ ಗಾಜಾಪಟ್ಟಿಗೆ ಅಗತ್ಯ ವಸ್ತುಗಳನ್ನು ಪೂರೈಸಲು ಈಜಿಪ್ಟ್ ಕಡೆಯಿಂದ
ದಾರಿಯನ್ನು ತೆರೆಯಲಾಗಿದೆ. ಆದರೆ ಅದರ ಮೂಲಕ ನೆರವು ರವಾನಿಸುವುದು ಬಹಳ ನಿಧಾನವಾಗುತ್ತಿದೆ. ಹೀಗಾಗಿ ಜನರಿಗೆ ಸಾಕಷ್ಟು ನೆರವು ಸಿಗುತ್ತಿಲ್ಲ. ಜನರು ಒಂದು ತುಂಡು ಬ್ರೆಡ್ ಗಾಗಿ ಎಷ್ಟು ಹತಾಶರಾಗಿದ್ದಾರೆ ಅಂದರೆ ಅವರು ವಿಶ್ವಸಂಸ್ಥೆಯ ಉಗ್ರಾಣವನ್ನೇ ಲೂಟಿ ಮಾಡಿದ್ದಾರೆ. ಅದಕ್ಕಾಗಿ ಆ
ಅಸಹಾಯಕ ಜನರನ್ನು ಖಂಡಿತ ದೂರಲು ಸಾಧ್ಯವಿಲ್ಲ.
ಹಸಿವಿನಿಂದ ಅಳುವ ತಮ್ಮ ಮಕ್ಕಳನ್ನು ನೋಡಿ ಅವರು ಹೇಗೆ ತಾನೇ ಸುಮ್ಮನಿರಲು ಸಾಧ್ಯ? ಕೆಲ ದಿನಗಳ ಹಿಂದೆ ಇಸ್ರೇಲ್ನ ಸೇನಾಪಡೆಯವರು
ಗಾಜಾದಲ್ಲಿನ ಜನರಿಗೆ ‘ಉತ್ತರ ಗಾಜಾ ಪ್ರದೇಶವನ್ನು ತೊರೆದು ಎಲ್ಲರೂ ದಕ್ಷಿಣ ಗಾಜಾಕ್ಕೆ ಹೋಗಿಬಿಡಿ, ನಾವು ಉತ್ತರ ಗಾಜಾ ಮೇಲೆ ದಾಳಿ ನಡೆಸಿ ಹಮಾಸ್ನ ನೆಲೆಗಳನ್ನು ನಾಶಪಡಿಸುವವರಿದ್ದೇವೆ’ ಎಂದು ಎಚ್ಚರಿಕೆ ನೀಡಿದ್ದರು. ಆದರೆ ಉತ್ತರ ಗಾಜಾ ಬಿಟ್ಟು ದಕ್ಷಿಣ ಗಾಜಾಕ್ಕೆ ಹೋಗುವುದು
ಅಷ್ಟು ಸುಲಭವೇ? ಅಲ್ಲಿ ಹೋಗಿ ಉಳಿದುಕೊಳ್ಳುವುದಕ್ಕೆ ಜಾಗವಾದರೂ ಎಲ್ಲಿದೆ! ಮೊದಲೇ ಜಗತ್ತಿನ ಅತ್ಯಂತ ಜನನಿಬಿಡ ಪ್ರದೇಶ. ಅಲ್ಲಿ ಹೊಸಬರಿಗೆ ಜಾಗ ಸಿಗುವುದು ಹೇಗೆ? ಮೇಲಾಗಿ, ಅಲ್ಲಿರುವ ನಿರಾಶ್ರಿತರ ಕೇಂದ್ರಗಳ ಮೇಲೂ ನಿರಂತರವಾಗಿ ಬಾಂಬ್ ಹಾಗೂ ಕ್ಷಿಪಣಿಗಳು ಬಂದು ಬೀಳುತ್ತಿವೆ. ಗಾಜಾ ಮೇಲೆ ಬಾಂಬ್ಗಳ ಮಳೆ ಸುರಿಸುವುದರ ಜತೆಗೆ ಇಸ್ರೇಲ್ ಈಗ ಭೂದಾಳಿಯನ್ನೂ ನಡೆಸುತ್ತಿದೆ.
ಇದರರ್ಥ, ಇಸ್ರೇಲ್ ಹಾಗೂ ಹಮಾಸ್ ನಡುವಿನ ಯುದ್ಧ ಇನ್ನೂ ದೀರ್ಘಕಾಲ ನಡೆಯುವುದಿದೆ ಮತ್ತು ಗಾಜಾಪಟ್ಟಿಯು ಇನ್ನೊಂದು ಮೊಸುಲ್ ಆಗಲಿದೆ. ನಿಮಗೆ ಮೊಸುಲ್ನ ಕಥೆ ಗೊತ್ತಿರಬೇಕು. ಇರಾಕ್ನ ಮೊಸುಲ್ ನಗರವನ್ನು ಆಕ್ರಮಿಸಿಕೊಂಡಿದ್ದ ಇಸ್ಲಾಮಿಕ್ ಸ್ಟೇಟ್ ಉಗ್ರರನ್ನು ಅಲ್ಲಿಂದ ಓಡಿಸಿ ನಗರವನ್ನು ಮರಳಿ ವಶಕ್ಕೆ ಪಡೆಯಲು ಕುರ್ದಿಶ್ ಹಾಗೂ ಅಮೆರಿಕದ ಜಂಟಿ ಸೇನೆಗೆ ೯ ತಿಂಗಳು ಬೇಕಾಯಿತು. ಅಷ್ಟರೊಳಗೆ ಸಾವಿರಾರು ಅಮಾ
ಯಕ ಜನರು ಸಾವನ್ನಪ್ಪಿದ್ದರು. ಈಗ ಇಲ್ಲೂ ಅಂತಹುದೇ ಸನ್ನಿವೇಶ ಮರುಕಳಿಸುವ ಸಾಧ್ಯತೆಯಿದೆ. ಹಮಾಸ್ನವರು ಕರೆದೊಯ್ದಿರುವ ಕಟ್ಟಕಡೆಯ ಒತ್ತೆಯಾಳನ್ನು ಬಿಡಿಸಿಕೊಳ್ಳುವವರೆಗೂ ನಾವು ದಾಳಿ ನಿಲ್ಲಿಸುವುದಿಲ್ಲ ಎಂದು ಇಸ್ರೇಲ್ ಪಟ್ಟು ಹಿಡಿದಿದೆ. ಇನ್ನೊಂದೆಡೆ, ಇಸ್ರೇಲ್ಗೆ ಇನ್ನಷ್ಟು ಆರ್ಥಿಕ
ನೆರವು ನೀಡಲು ಅಮೆರಿಕ ಸರಕಾರ ಒಪ್ಪಿಗೆ ನೀಡಿದೆ. ಈ ಆರ್ಥಿಕ ನೆರವು ದೀಪಾವಳಿಗೆ ಸಿಹಿ ಖರೀದಿಸುವುದಕ್ಕಲ್ಲ, ಬದಲಿಗೆ ಇನ್ನಷ್ಟು ಬಾಂಬುಗಳನ್ನು ಖರೀದಿಸಿ ಹಮಾಸ್ ಮೇಲೆ ಸುರಿಸುವುದಕ್ಕೆ!
ಇಸ್ರೇಲ್ನವರು ಇನ್ನೂ ಒಂದು ಹೆಜ್ಜೆ ಮುಂದೆಹೋಗಿ, ಗಾಜಾಪಟ್ಟಿಯಲ್ಲಿರುವ ಸುರಂಗಗಳಿಂದ ಕಾರ್ಯಾಚರಣೆ ನಡೆಸುತ್ತಿರುವ ಹಮಾಸ್ ಸದಸ್ಯರನ್ನು ಸಾಯಿಸಲು ಸುರಂಗದೊಳಗೆ ವಿಷಕಾರಿ ಅನಿಲದ ದಾಳಿ ನಡೆಸಬಹುದು ಎಂಬ ಆತಂಕ ನನಗಿದೆ! ಹಾಗೇನಾದರೂ ಮಾಡಿದರೆ ಹಮಾಸ್ ಸದಸ್ಯರ ಜತೆಗೆ ಅಲ್ಲಿ ಅಡಗಿರುವ ಸಾಕಷ್ಟು ಸಾಮಾನ್ಯ ನಾಗರಿಕರೂ ಸಾವಿಗೀಡಾಗುತ್ತಾರೆ. ಆಗ ಯುದ್ಧವು ಸೃಷ್ಟಿಸಿರುವ ನರಕ ಇನ್ನೂ ಘನಘೋರವಾಗುತ್ತದೆ. ಹಮಾಸ್ ಹಾಗೂ ಇಸ್ರೇಲ್ ನಡುವೆ ಕದನವಿರಾಮ ಏರ್ಪಡಬೇಕು, ಅದಕ್ಕಾಗಿ ಎರಡೂ ಕಡೆಯವರು ಮಾತುಕತೆ
ನಡೆಸಿ ನಿರ್ಧಾರ ಕೈಗೊಳ್ಳಬೇಕು ಎಂದು ವಿಶ್ವಸಂಸ್ಥೆಯ ಸಾಮಾನ್ಯ ಸಭೆ ನಿಲುವಳಿ ಅಂಗೀಕಾರ ಮಾಡಿದೆ.
ಮಾನವೀಯತೆಯ ದೃಷ್ಟಿಯಿಂದ ಈ ಕದನವಿರಾಮ ಘೋಷಿಸಬೇಕು ಎಂದು ಅದು ಒತ್ತಾಯಿಸಿದೆ. ಆದರೆ ಆ ನಿರ್ಧಾರ ಪಾಲಿಸುವುದು ಇಸ್ರೇಲ್ಗಾಗಲೀ ಹಮಾಸ್ಗಾಗಲೀ ಕಡ್ಡಾಯವಲ್ಲ. ಇನ್ನು, ಇಸ್ರೇಲ್-ಹಮಾಸ್ ನಡುವಿನ ಯುದ್ಧವೀಗ ಜಗತ್ತನ್ನೇ ಇಬ್ಭಾಗ ಮಾಡಿದೆ. ಪ್ಯಾಲೆಸ್ತೀನ್ನ ಕಟ್ಟರ್
ಬೆಂಬಲಿಗರಾದ ಮಧ್ಯಪ್ರಾಚ್ಯ ದೇಶಗಳು ಕೂಡ ಗಾಜಾಪಟ್ಟಿಯಲ್ಲಿ ನಿರಾಶ್ರಿತರಾದವರಿಗೆ ತಮ್ಮ ದೇಶಗಳಲ್ಲಿ ಆಶ್ರಯ ನೀಡಲು ಒಪ್ಪುತ್ತಿಲ್ಲ. ಆದರೆ, ಹಮಾಸ್ನ ನಾಯಕರೆಲ್ಲ ಕತಾರ್ನಲ್ಲಿ ಈಗಾಗಲೇ ಆಶ್ರಯ ಪಡೆದು ಸುರಕ್ಷಿತರಾಗಿದ್ದಾರೆ. ಅವರ್ಯಾರಿಗೂ ಬಾಂಬ್ ದಾಳಿಯಲ್ಲಿ ಸಾಯುವ ಭಯವಿಲ್ಲ. ಅವರ ಕಾರಣದಿಂದ ಈಗ ಗಾಜಾ ಪಟ್ಟಿಯಲ್ಲಿ ಜೀವ ತೆರುತ್ತಿರುವವರು ಪ್ಯಾಲೆಸ್ತೀನಿಯರು.
ಅಲ್ಲಿ ಮುಗ್ಧ ಜನರ ಮಾರಣಹೋಮವನ್ನು ತಡೆಯಲು ಯಾರೂ ಇಲ್ಲ. ಇಸ್ರೇಲ್ ಒಂದಾದ ಮೇಲೊಂದು ಬಾಂಬ್ ಹಾಗೂ ಕ್ಷಿಪಣಿಗಳನ್ನು ಎಸೆಯುತ್ತಿದೆ. ಜನರು ಸಾಯುತ್ತಲೇ ಇದ್ದಾರೆ. ಈ ಮಾರಣಹೋಮ ಶೀಘ್ರದಲ್ಲೇ ನಿಲ್ಲಲಿ ಎಂದು ನಾವೆಲ್ಲರೂ ಪ್ರಾರ್ಥಿಸೋಣ!