ಯುಗಾವತಾರಿ
ಟಿ.ಎಂ.ಸತೀಶ್
ಕಲ್ಯಾಣ ಕರ್ನಾಟಕ ಭಾಗದಲ್ಲಿ ‘ನಡೆದಾಡುವ ದೇವರು’ ಎಂದೇ ಖ್ಯಾತರಾಗಿರುವ ಭೀಮಣ್ಣ ಖಂಡ್ರೆಯವರು ಸಾಧನೆಗಳ ಮೇರು ಪರ್ವತ. ‘ಆಡು ಮುಟ್ಟದ ಸೊಪ್ಪಿಲ್ಲ, ಭೀಮಣ್ಣ ಖಂಡ್ರೆ ಅರಿಯದ ಕ್ಷೇತ್ರ ವಿಲ್ಲ’ ಎಂಬ ಅವರ ಸಮಕಾಲೀನರ ಮಾತಿನಲ್ಲಿ ಅತಿಶಯೋಕ್ತಿಯಿಲ್ಲ.
ಕಾರಣ ಖಂಡ್ರೆಯವರು ಮುನ್ಷಿ ಫಾಜಿಲ್ ಪರೀಕ್ಷೆಯಲ್ಲಿ ಪ್ರಾಂತ್ಯಕ್ಕೇ ಪ್ರಥಮ ರ್ಯಾಂಕ್ ಪಡೆದ ಪ್ರತಿಭಾವಂತರು, ಸ್ವಾತಂತ್ರ್ಯ ಯೋಧರು, ಏಕೀಕ
ರಣದ ನೇತಾರರು, ವಕೀಲರು, ಶಿಕ್ಷಣತಜ್ಞರು, ರೈತಪರ ಹೋರಾಟಗಾರರು, ಸಮಾಜಸೇವಕರು, ಪರನಾರಿ ಸೋದರರು, ಅತ್ಯುತ್ತಮ ಸಂಘಟಕರು, ಸಹಕಾರಿಗಳು ಮಾತ್ರವಲ್ಲದೆ, ೭ ದಶಕಗಳ ತಮ್ಮ ಸುದೀರ್ಘ ರಾಜಕೀಯ ಜೀವನದಲ್ಲಿ ಶಾಸಕ-ಸಚಿವರಾಗಿ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಗೌರವಾಧ್ಯಕ್ಷರಾಗಿ ನಿಷ್ಕಳಂಕವಾಗಿ ಜನಸೇವೆ ಮಾಡಿದ ಆದರ್ಶವಾದಿ.
ಮೋಸ, ವಂಚನೆ ಮಾಡದೆ ಲೋಕೋಪಕಾರಿಯಾಗಿ ಬದುಕಬೇಕೆಂಬ ತಾಯಿಯ ಮಾತನ್ನೇ ವೇದವಾಕ್ಯದಂತೆ ಪಾಲಿಸಿ, ‘ಸಾಧನೆಗೆ ಅಸಾಧ್ಯವಾದದ್ದು ಯಾವುದೂ ಇಲ್ಲ, ಆದರೆ ಸಾಽಸುವ ಛಲ ಮನುಷ್ಯನಿಗಿರಬೇಕು’ ಎಂಬ ಹಿರಿಯರ ಮಾತನ್ನು ಬದುಕಿನಲ್ಲಿ ಅಳವಡಿಸಿಕೊಂಡ ಖಂಡ್ರೆಯವರ ಸಾಧನೆ-ಕೊಡುಗೆಗಳು ಅನನ್ಯವಾದಂಥವು. ಬೀದರ್ ಜಿಲ್ಲೆ ಬಸವಕಲ್ಯಾಣ ತಾಲೂಕಿನ ಗೋರ್ಟಾ (ಬಿ)ಯಲ್ಲಿ ೧೯೨೩ರ ಜನವರಿ ೮ರಂದು ಹುಟ್ಟಿದ ಖಂಡ್ರೆ ಯವರು ಭಾಲ್ಕಿಯ ಖಾಸಗಿ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ನಂತರ ಬೀದರ್, ಮೊಮಿನಾಬಾದ್ನಲ್ಲಿ ಪ್ರೌಢಶಿಕ್ಷಣ ಮುಂದುವರಿಸಿ, ಹೈದ್ರಾಬಾದ್ನ ಉಸ್ಮಾನಿಯಾ ವಿಶ್ವವಿದ್ಯಾಲಯದಿಂದ ಕಾನೂನು ಪದವಿ ಪಡೆದು, ಭಾಲ್ಕಿಯ ಸ್ಥಳೀಯ ನ್ಯಾಯಾಲಯ ದಲ್ಲಿ ವೃತ್ತಿ ಆರಂಭಿಸಿ, ಬಡವರಿಗೆ ನ್ಯಾಯ ಒದಗಿಸಿ ಜನ ನಾಯಕರಾದರು.
ಕಾಲೇಜು ವಿದ್ಯಾಭ್ಯಾಸದ ವೇಳೆಯಲ್ಲೇ ಮಹಾತ್ಮಗಾಂಧಿಯ ವರ ಕರೆಗೆ ಓಗೊಟ್ಟು ಸ್ವಾತಂತ್ರ್ಯ ಸಂಗ್ರಾಮಕ್ಕೆ ಧುಮುಕಿದ ಅವರು, ಸ್ವಾತಂತ್ರ್ಯಾ
ನಂತರವೂ ಭಾರತ ಒಕ್ಕೂಟದಲ್ಲಿ ಸೇರಲೊಪ್ಪದ ನಿಜಾಮರ ವಿರುದ್ಧ ನಡೆದ ಹೋರಾಟದಲ್ಲೂ ಸಕ್ರಿಯ ವಾಗಿ ಭಾಗಿಯಾದರು. ಭಾಷಾವಾರು ಪ್ರಾಂತ್ಯ
ವಿಭಜನೆ ವೇಳೆ ಏಕೀಕರಣ ಹೋರಾಟದಲ್ಲಿ ಪಾಲ್ಗೊಂಡು, ‘ರೈಲ್ ರೋಕೋ’ ಮೊದಲಾದ ಸತ್ಯಾಗ್ರಹ ನಡೆಸಿ, ಬಹುಭಾಷಿಕ ಕನ್ನಡಿಗರಿದ್ದ ಹೈದ್ರಾಬಾದ್
ಕರ್ನಾಟಕದ ಬಹು ಭಾಗವು ಅನ್ಯರಾಜ್ಯದ ಪಾಲಾಗದೆ ಕರುನಾಡಿನಲ್ಲೇ ಉಳಿಯುವಂತೆ ಮಾಡುವಲ್ಲಿ ಯಶಸ್ವಿಯಾದರು. ಇವರ ಈ ಅಮೂಲ್ಯ ಕೊಡುಗೆ ಯನ್ನು ಪರಿಗಣಿಸಿ ಕರ್ನಾಟಕ ಸರಕಾರವು ೨೦೦೬ರಲ್ಲಿ ಸುವರ್ಣ ಕರ್ನಾಟಕ ಏಕೀಕರಣ ಪ್ರಶಸ್ತಿ ನೀಡಿ ಗೌರವಿಸಿದ್ದರೆ, ಕಲಬುರ್ಗಿ ವಿಶ್ವವಿದ್ಯಾಲಯವು ಗೌರವ ಡಾಕ್ಟರೇಟ್ ಅನ್ನು ಪ್ರದಾನಿಸಿದೆ.
ಬಾಲ್ಯದಿಂದಲೂ ಪ್ರಗತಿಪರ ಚಿಂತನೆಯನ್ನು ಮೈಗೂಡಿಸಿಕೊಂಡು ಸಾಮಾಜಿಕ ಪಿಡುಗುಗಳ ವಿರುದ್ಧ ಹೋರಾಡುತ್ತಿದ್ದ ಖಂಡ್ರೆಯವರು, ಅಸ್ಪೃಶ್ಯತೆಯ ನಿವಾರಣೆಗಾಗಿ ತಮ್ಮ ದೀಕ್ಷಾಗುರು ಭಾಲ್ಕಿ ಹಿರೇಮಠದ ಶ್ರೀ ಚನ್ನಬಸವ ಪಟ್ಟದೇವರ ಆಶೀರ್ವಾದ ಮತ್ತು ಬೆಂಬಲದೊಂದಿಗೆ ಕ್ರಾಂತಿ
ಯನ್ನೇ ಮಾಡಿದರು. ೧೯೪೦-೫೦ರ ದಶಕದಲ್ಲಿ, ದಲಿತರು ಕುಡಿಯುವ ನೀರಿನ ಬಾವಿಯನ್ನು, ಕೆರೆಯ ನೀರನ್ನು ಸ್ಪರ್ಶಿಬಾರದು ಎಂಬ ಕಟ್ಟು ಪಾಡುಗಳಿದ್ದವು. ಜೀವಜಲವಿಲ್ಲದೆ ಜನ ಬದುಕುವುದು ಹೇಗೆ? ಈ ಅನಿಷ್ಟ ಪದ್ಧತಿ ಸಮಾಜದಿಂದ ತೊಲಗಬೇಕು ಎಂಬ ಹಠತೊಟ್ಟ ಖಂಡ್ರೆಯವರು
ತಮ್ಮ ಸಮು ದಾಯದವರು ಮತ್ತು ಸಂಪ್ರದಾಯವಾದಿ ಗಳ ವಿರೋಧ ಕಟ್ಟಿಕೊಂಡು, ಭಾಲ್ಕಿಯ ಅಶೋಕ ನಗರದ ನಿವಾಸಿಗಳೆಲ್ಲರನ್ನೂ ಹಿರೇ ಮಠಕ್ಕೆ ಕರೆತಂದು ವಿಭೂತಿಧಾರಣೆ ಮಾಡಿಸಿ, ಮೆರವಣಿಗೆಯಲ್ಲಿ ಭಾಲ್ಕೇಶ್ವರ ದೇಗುಲಕ್ಕೆ ಕರೆತಂದು ಅಲ್ಲಿ ಅವರಿಂದಲೇ ಬಾವಿಯಿಂದ ನೀರು ಸೇದಿಸಿ ಕುಡಿಸಿದರು.
ಇಂಥ ದೂರದರ್ಶಿತ್ವದ ಖಂಡ್ರೆಯವರನ್ನು ಶ್ರೀ ಚನ್ನಬಸವ ಪಟ್ಟದೇವರು ‘ಲೋಕ ನಾಯಕ’ ಎಂದು ಕೊಂಡಾಡಿದರು. ಅನ್ನದಾತರಾದ ರೈತರಿಗೆ ಅನ್ಯಾಯವಾಗಬಾರದು ಎಂದು ಪ್ರತಿಪಾದಿಸುತ್ತಿದ್ದ ಖಂಡ್ರೆಯವರು ಸದಾ ರೈತರ ಹಿತಕಾಯುತ್ತಿದ್ದರು. ೧೯೭೨ ಮತ್ತು ೧೯೭೩ರಲ್ಲಿ ಸತತವಾಗಿ ಬರ ಬಂದಾಗ ರೈತರು ಮನೆಯಲ್ಲಿದ್ದ ಚಿನ್ನ, ಪಾತ್ರೆ ಗಳನ್ನು ಮಾರಿ ಜೀವನ ನಡೆಸುವ ಸ್ಥಿತಿ ಬಂದಿತ್ತು. ಆಗ ತಮ್ಮ ಸರಕಾರದ ವಿರುದ್ಧವೇ ಹೋರಾಡಿ ಬರಪೀಡಿತ ಪ್ರದೇಶದ ರೈತರಿಗೆ ಉಚಿತವಾಗಿ ಬಿತ್ತನೆ ಬೀಜ ಕೊಡಿಸಿದ ಖಂಡ್ರೆಯವರು ಬೀದರ್ ಜಿಲ್ಲೆಯಲ್ಲಿ ಬೆಂಕಿಮಳೆಯಿಂದ ಬೆಳೆಹಾನಿಯಾದಾಗಲೂ ಸರಕಾರದ ವಿರುದ್ಧ ಹೋರಾಡಿದರು, ನ್ಯಾಯಾಲಯ ಮತ್ತು ಮಾನವ ಹಕ್ಕು ಆಯೋಗದವರೆಗೆ ಹೋರಾಟವನ್ನು ಮುಂದುವರಿಸಿದರು. ರೈತರು ಬೆಳೆವ ಕಬ್ಬು ಅರೆಯಲು ಸಕ್ಕರೆ ಕಾರ್ಖಾನೆ ಬೇಕೆಂಬುದನ್ನು ಮನಗಂಡು ಮೊದಲಿಗೆ ಹಳ್ಳಿಖೇಡದಲ್ಲಿ ಬೀದರ್ ಸಹಕಾರ ಸಕ್ಕರೆ ಕಾರ್ಖಾನೆ ಕಟ್ಟಿ ಬೆಳೆಸಿ ಅದರ ಅಧ್ಯಕ್ಷರಾದ ಖಂಡ್ರೆಯವರು ನಂತರ ಹುಣಜಿಯಲ್ಲಿ ಮಹಾತ್ಮ ಗಾಂಧಿ ಸಹಕಾರ ಸಕ್ಕರೆ ಕಾರ್ಖಾನೆ ಸ್ಥಾಪಿಸಿ ರೈತರ ಪಾಲಿಗೆ ಆಶಾಕಿರಣವಾದರು.
ಕಾನೂನು ಪದವಿ ಪಡೆದ ಬಳಿಕ ಖಂಡ್ರೆಯವರು ಪುಣೆ, ಹೈದ್ರಾಬಾದ್ ಅಥವಾ ಬೆಂಗಳೂರು ಹೈಕೋರ್ಟ್ಗಳಲ್ಲಿ ವಕೀಲಿಕೆ ಆರಂಭಿಸಿ ಲಕ್ಷಾಂತರ
ರುಪಾಯಿ ಹಣ ಗಳಿಸಬಹುದಾಗಿತ್ತಾದರೂ, ತವರೂರು ಭಾಲ್ಕಿಯ ನ್ಯಾಯಾಲಯದಲ್ಲೇ ವಕೀಲಿಕೆ ಆರಂಭಿಸಿ ನೊಂದವರಿಗೆ ನ್ಯಾಯ ಒದಗಿಸಿ ಜನನಾಯಕರಾದರು. ಇದರ ಪರಿಣಾಮವಾಗಿ ೧೯೫೩ರಲ್ಲಿ ಭಾಲ್ಕಿ ಪುರಸಭೆಯ ಪ್ರಥಮ ಅಧ್ಯಕ್ಷರಾಗಿ ಆಯ್ಕೆಯಾದರು. ೧೯೬೨ರಲ್ಲಿ ಮೊದಲ ಬಾರಿಗೆ ವಿಧಾನಸಬಾ ಸದಸ್ಯರಾಗಿ ಆಯ್ಕೆಯಾಗಿ, ತರುವಾಯದಲ್ಲಿ ೪ ಬಾರಿ ಶಾಸಕರಾದರು, ೨ ಬಾರಿ ವಿಧಾನಪರಿಷತ್ ಸದಸ್ಯರಾದರು. ವೀರಪ್ಪ ಮೊಯ್ಲಿ ಯವರ ಸಂಪುಟದಲ್ಲಿ ಸಾರಿಗೆ ಸಚಿವರಾಗಿ ಇಲಾಖೆಗೆ ಕಾಯಕಲ್ಪ ನೀಡಿದರು. ನಕಲಿ ಟಿಕೆಟ್ ಹಾವಳಿಯನ್ನು ತಡೆಗಟ್ಟಿ, ನಷ್ಟದಲ್ಲಿದ್ದ ರಸ್ತೆ ಸಾರಿಗೆ ಸಂಸ್ಥೆಯನ್ನು ಲಾಭದತ್ತ ಮುನ್ನಡೆಸಿದರು.
ಬೀದರ್ ಜಿಲ್ಲೆಯ ಬಡಮಕ್ಕಳೂ ವಿದ್ಯಾವಂತರಾಗಿ ಸಮಾಜದಲ್ಲಿ ತಲೆಯೆತ್ತಿ ಬಾಳಬೇಕೆಂದು, ತಮ್ಮ ದೀಕ್ಷಾಗುರು ಶ್ರೀ ಚನ್ನಬಸವ ಪಟ್ಟದೇವರ
ಸಾನ್ನಿಧ್ಯದಲ್ಲಿ ಶಾಂತಿವರ್ಧಕ ಶಿಕ್ಷಣ ಸಂಸ್ಥೆಯನ್ನು ಬೆಳೆಸಿದರು. ಸಚಿವರಾಗುವ ಅವಕಾಶವಿದ್ದರೂ, ಭಾಲ್ಕಿ ತಾಲೂಕಿನ ಯುವಜನರು ತಾಂತ್ರಿಕ ಶಿಕ್ಷಣ
ಪಡೆಯುವಂತಾಗಲೆಂದು ಮಂತ್ರಿಪದವಿಯನ್ನೇ ತ್ಯಾಗಮಾಡಿ, ಗ್ರಾಮೀಣ ಎಂಜಿನಿಯರಿಂಗ್ ಕಾಲೇಜು ಕಟ್ಟಿ ಯುವಜನರ ಕನಸುಗಳಿಗೆ ರೆಕ್ಕೆ ಮೂಡಿಸಿ ದರು. ಹೆಣ್ಣುಮಕ್ಕಳನ್ನೂ ವಿದ್ಯಾವಂತರನ್ನಾಗಿಸುವ ಸದಾಶಯದೊಂದಿಗೆ ಬೀದರ್ನಲ್ಲಿ ಅಕ್ಕಮಹಾದೇವಿ ಶಾಲೆ, ಕಾಲೇಜು ಸ್ಥಾಪಿಸಲು ಶ್ರಮಿಸಿದರು.
೧೯೭೬ರಲ್ಲಿ, ಜನಸಂಖ್ಯಾ ನಿಯಂತ್ರಣಕ್ಕಾಗಿ ಕೆಲವು ಅಧಿಕಾರಿಗಳು ಯುವಜನರಿಗೆ ಬಲವಂತವಾಗಿ ಸಂತಾನಶಕ್ತಿಹರಣ ಶಸಚಿಕಿತ್ಸೆ ಮಾಡಿಸುತ್ತಿ ದ್ದುದನ್ನು ಖಂಡಿಸಿ, ತಾವೇ ಜನರ ಮನವೊಲಿಸಿ ಒಂದೇ ದಿನದಲ್ಲಿ ೨೫೦೦ಕ್ಕೂ ಹೆಚ್ಚು ಮಂದಿ ಸ್ವಯಂಪ್ರೇರಿತರಾಗಿ ಈ ಶಸಚಿಕಿತ್ಸೆ ಮಾಡಿಸಿಕೊಳ್ಳು ವಂತೆ ಪ್ರೇರೇಪಿಸಿ ದಾಖಲೆ ನಿರ್ಮಿಸಿದರು. ಎಲ್ಲ ಜಾತಿ, ಮತ, ಧರ್ಮದವರನ್ನೂ ಸಮಾನವಾಗಿ ಕಾಣುವ ಖಂಡ್ರೆಯವರು ತಮ್ಮ ಸಮುದಾಯದ ಏಳಿಗೆಗೆ
ನೀಡಿರುವ ಕೊಡುಗೆ ಕಡಿಮೆಯೇನಲ್ಲ. ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಅಧ್ಯಕ್ಷರಾಗಿ, ಕೆಲವೇ ಸಾವಿರವಿದ್ದ ಆಜೀವ ಸದಸ್ಯರ ಸಂಖ್ಯೆಯನ್ನು ಲಕ್ಷಕ್ಕೂ ಹೆಚ್ಚಾಗುವಂತೆ ಮಾಡಿ, ಬೆಂಗಳೂರಿನ ಹೃದಯಭಾಗದಲ್ಲಿ ನಿವೇಶನ ಖರೀದಿಸಿ ಭವ್ಯಭವನ ಕಟ್ಟಿ, ತನ್ನ ಕಾಲ ಮೇಲೆ ತಾನು ನಿಲ್ಲುವಂತೆ ಮಹಾಸಭಾಕ್ಕೆ ಆರ್ಥಿಕ ಸದೃಢತೆ ತಂದುಕೊಟ್ಟರು.
ಇತಿಹಾಸ ತಿರುಚಿ, ಶರಣರನ್ನು ಅವಮಾನಿಸಿದ ‘ಧರ್ಮಕಾರಣ’, ‘ಮಹಾ ಚೈತ್ರ’, ‘ಆನುದೇವ ಹೊರಗಣವನು’ ಇತ್ಯಾದಿ ಕೃತಿಗಳನ್ನು ಸರಕಾರ ಮುಟ್ಟುಗೋಲು ಹಾಕಿಕೊಳ್ಳುವಂತೆ ಹೋರಾಡಿದ ಅವರು, ವಿಧಾನ ಮಂಡಲದಲ್ಲೇ ಮೈಮೇಲೆ ಪೆಟ್ರೋಲ್ ಸುರಿದುಕೊಂಡು ಆತ್ಮಾಹುತಿಗೂ
ಮುಂದಾಗಿದ್ದರು.
ಬಸವಕಲ್ಯಾಣದಲ್ಲಿ ಈಗಿರುವ ಆಧುನಿಕ ಅನುಭವ ಮಂಟಪದ ನಿರ್ಮಾಣಕ್ಕೆ ಶ್ರೀ ಚನ್ನಬಸವ ಪಟ್ಟದೇವರು ಸಂಕಲ್ಪಿಸಿದಾಗ ಸ್ವತಃ ೨೫,೦೦೦
ರು. ಹಣ ನೀಡಿದ್ದರ ಜತೆಗೆ ಶಿವಭಕ್ತರಿಂದ ಹಣ ಸಂಗ್ರಹಿಸಿಕೊಟ್ಟು ಸಹಕರಿಸಿ ದರು. ಶಿವಲಿಂಗಾಕೃತಿಯ ಗೋಪುರ ನಿರ್ಮಿಸುವಾಗ ಸಂಜೆಯಾಯಿತೆಂದು
ಕಾರ್ಮಿಕರು ಕೆಲಸ ನಿಲ್ಲಿಸಿದಾಗ, ಖಂಡ್ರೆಯವರು ಸ್ವತಃ ತಲೆಮೇಲೆ ಸಿಮೆಂಟ್, ಜಲ್ಲಿ, ಮರಳಿನ ಬುಟ್ಟಿ ಹೊತ್ತು ಮಧ್ಯರಾತ್ರಿಯೊಳಗೆ ಗೋಪುರ
ನಿರ್ಮಿಸಿದ್ದನ್ನು ಮರೆಯಲಾದೀತೇ? ೭ ದಶಕಗಳ ಸಾರ್ವಜನಿಕ ಜೀವನದಲ್ಲಿ ಕಪ್ಪುಚುಕ್ಕೆಯಿಲ್ಲದೆ ದಕ್ಷತೆ, ಪ್ರಾಮಾಣಿಕತೆ, ನಿಸ್ಪೃಹತೆಯಿಂದ ಸಮಾಜಸೇವೆ ಮಾಡಿ ಶತಾಯುಷಿಗಳಾಗಿರುವ ಭೀಮಣ್ಣ ಖಂಡ್ರೆಯವರಿಗೆ ನಮ್ಮ ಸಲಾಂ.
(ಲೇಖಕರು ಹಿರಿಯ ಪತ್ರಕರ್ತರು)