ಬೆಂಗಳೂರು: ಕಾರು ಹಾಗೂ ಬಿಎಂಟಿಸಿ ಬಸ್ ನಡುವೆ ಸಂಭವಿಸಿದ ಅಪಘಾತದಲ್ಲಿ ಕಾರು ಹೊತ್ತಿ ಉರಿದ ಘಟನೆ ಬೆಂಗಳೂರಿನ ನಾಯಂಡಳ್ಳಿ ಸಮೀಪದ ರಿಂಗ್‌ರೋಡ್‌ನಲ್ಲಿ ನಡೆದಿದೆ.
ಬಿಎಂಟಿಸಿ ಬಸ್ ರಿಂಗ್‌ರೋಡ್‌ನಲ್ಲಿ ಪ್ರಯಾಣಿಕರನ್ನು ಹತ್ತಿಸಿಕೊಳ್ಳಲು ನಿಂತಿತ್ತು. ಈ ವೇಳೆ ನಿಂತಿದ್ದ ಬಸ್‌ಗೆ ವೇಗವಾಗಿ ಬಂದ i20 ಕಾರು ಚಾಲಕನ ನಿಯಂತ್ರಣ ತಪ್ಪಿ ಡಿಕ್ಕಿಯಾಗಿದೆ. ಡಿಕ್ಕಿ ಹೊಡೆದ ರಭಸಕ್ಕೆ ಇಂಜಿನ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ.
ನೋಡುತ್ತಿದ್ದಂತೆ ಕಾರು ಬೆಂಕಿ ಕೆನ್ನಾಲಿಗೆಗೆ ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿದೆ. ಘಟನೆಯಲ್ಲಿ ಬಿಎಂಟಿಸಿ ಬಸ್‌ಗೂ ಹಾನಿಯಾಗಿದ್ದು, ಅದೃಷ್ಟವಶಾತ್ ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ. ಇನ್ನು ಘಟನೆಯಲ್ಲಿ ಕಾರಿನಲ್ಲಿದ್ದ ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.
ಇನ್ನು ಅಗ್ನಿ ಅವಘಡ ಸಂಭವಿಸುತ್ತಿದ್ದಂತೆ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದ್ದು, ಬೆಂಕಿ ಆರಿಸುವಲ್ಲಿ ಯಶಸ್ವಿಯಾಗಿದ್ದಾರೆ. ನಾಯಂಡಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.