Saturday, 14th December 2024

ಸಂಕಷ್ಟದಲ್ಲಿರುವ ಜನರ ಕಣ್ಣೀರು ಒರೆಸಿ

ಕಳಕಳಿ

ಕುಮಾರಸ್ವಾಮಿ ವಿರಕ್ತಮಠ 

ಈ ವರ್ಷ ಭೀಕರ ಬರಗಾಲಕ್ಕೆ ಸಿಲುಕಿ ನಲುಗಿ ಹೋಗಿರುವ ರೈತರ ಸಂಕಷ್ಟಕ್ಕೆ ಸರಕಾರದಿಂದ ಸಿಕ್ಕಿರುವುದು ಅರೆಕಾಸಿನ ಮಜ್ಜಿಗೆ. ಏಕಿಂಥ ಜಾಣ ಕುರುಡು? ದಿನ ಬೆಳಗಾದರೆ ರಾಜಕೀಯದ ಕೆಸರೆರಚಾಟದಲ್ಲಿ ವ್ಯಸ್ತರಾಗುವ ನಮ್ಮ ಜನಪ್ರತಿನಿಧಿಗಳು ಜನರ ಮೂಲಭೂತ ಸಮಸ್ಯೆಗಳನ್ನು ಪರಿಹರಿಸು ವೆಡೆಗೆ ಗಮನ ಹರಿಸುವುದು ಯಾವಾಗ? ಹೀಗಾದಲ್ಲಿ ‘ಸುಸ್ಥಿರ ಅಭಿವೃದ್ಧಿ’ ಎಂಬುದು ಕನಸಿನ ಮಾತಾಗುವುದಿಲ್ಲವೇ? ಚುನಾವಣೆಯಲ್ಲಿ ಗೆದ್ದು ಗದ್ದುಗೆ ಯೇರುವ ಸರಕಾರ ಗಳಿಗೆ, ಐದು ವರ್ಷಗಳವರೆಗೆ ತಮ್ಮ ಅಧಿಕಾರ ಮತ್ತು ಅಸ್ತಿತ್ವವನ್ನು ಉಳಿಸಿಕೊಂಡು, ಸರಿದೂಗಿಸಿಕೊಂಡು ಹೋಗುವುದೇ ಒಂದು ದೊಡ್ಡ ಸವಾಲಾಗಿಬಿಟ್ಟಿದೆ.

ಹೀಗಿರುವಾಗ ಅಭಿವೃದ್ಧಿಯ ಮಾತೆಲ್ಲಿ, ಜನರ ಅಳಲುಗಳಿಗೆ ಅದು ಕಿವಿ ಯಾಗುವುದೆಲ್ಲಿ! ಹೀಗಾಗಿ, ಸದನದಲ್ಲಿ ಸಂವಿಧಾನದ ಬಗ್ಗೆ ವಿಸ್ತೃತವಾಗಿ ಚರ್ಚಿಸುವ ಜನಪ್ರತಿನಿಧಿಗಳು, ಸದನದಿಂದ ಹೊರಬಂದಾಕ್ಷಣ ಸಂವಿಧಾನದ ಆಶಯಗಳನ್ನೆಲ್ಲಾ ಮರೆತು ಬಿಡುತ್ತಾರಾ? ನಾವು ನಿಜಕ್ಕೂ ಪ್ರಜಾ ಪ್ರಭುತ್ವದ ರಾಷ್ಟ್ರದಲ್ಲಿದ್ದೀವಾ? ಎಂಬ ಸಂಶಯಗಳು ಕೆಲವೊಮ್ಮೆ ಕಾಡುತ್ತವೆ. ಆಡಳಿತ ಪಕ್ಷ ಮತ್ತು ವಿರೋಧ ಪಕ್ಷಗಳು ಜನಕಲ್ಯಾಣದ ದೃಷ್ಟಿಕೋನ ವನ್ನು ಹೊಂದಿರದೆ ಕೇವಲ ಸ್ವಹಿತಕ್ಕಾಗಿ ಹವಣಿಸುತ್ತಿದ್ದರೆ ಇಂಥ ಅಭಿಪ್ರಾಯಗಳು ಜನಮನದಲ್ಲಿ ಮೂಡುವುದು ಸಹಜವಲ್ಲವೇ? ಎಲ್ಲರಿಗೂ ತಿಳಿದಿರು ವಂತೆ, ಬೆಳಗಾವಿಯಲ್ಲೀಗ ವಿಧಾನ ಸಭೆಯ ಚಳಿಗಾಲದ ಅಽವೇಶನ ನಡೆಯುತ್ತಿದೆ.

ಇದು ಕೇವಲ ನಾಮಮಾತ್ರದ ಅಧಿವೇಶನವಾಗಿರದೆ, ಈ ಭಾಗದ ಜನರ ಸಮಸ್ಯೆಗಳಿಗೆ ಸ್ಪಂದಿಸುವಂತಾಗಲಿ ಎಂಬುದು ಬಹುತೇಕರ ಆಶಯ. ಉತ್ತರ ಕರ್ನಾಟಕ ಭಾಗದ ರೈತರ ಮಕ್ಕಳು ಕೃಷಿಯನ್ನು ನೆಚ್ಚಲಾಗದೇ ಬೆಂಗಳೂರಿನಂಥ ಬೃಹತ್ ನಗರಗಳ ಕಂಪನಿ, ಕಾರ್ಖಾನೆಗಳಲ್ಲಿ ಕೂಲಿ ಕಾರ್ಮಿಕರಾಗು ತ್ತಿದ್ದಾರೆ. ಹೊಟ್ಟೆಪಾಡಿಗಾಗಿ ಹೊರರಾಜ್ಯಗಳಾದ ಗೋವಾ, ಕೇರಳ, ತಮಿಳುನಾಡು, ಆಂಧ್ರಪ್ರದೇಶಕ್ಕೆ ಗುಳೆ ಹೋಗುವವರ ಸಂಖ್ಯೆಯೂ ಸಾಕಷ್ಟಿದೆ. ಅಲ್ಲಿ ಸಿಗುವ ಅಲ್ಪಸ್ವಲ್ಪ ಸಂಬಳಕ್ಕೆ ಅವರು ಕತ್ತೆಚಾಕರಿ ಮಾಡಬೇಕು.

ಜನಪ್ರತಿನಿಧಿಗಳು ಸ್ಥಳೀಯವಾಗಿ ಉದ್ಯೋಗಾವಕಾಶಗಳನ್ನು ಸೃಷ್ಟಿಸುವುದರ ಕಡೆಗೆ ಗಮನ ಹರಿಸಿದರೆ ಈ ಸಮಸ್ಯೆ ಇರುತ್ತಿತ್ತೇ? ರೈತರು ಬೆಳೆದ ಅಲ್ಪ ಫಸಲಿಗೂ ಉತ್ತಮ ಬೆಲೆ ಸಿಗುತ್ತಿಲ್ಲ, ಹೊಟ್ಟೆಯ ಮೇಲೆ ದೊಡ್ಡದೊಂದು ಕಲ್ಲುಚಪ್ಪಡಿ. ತಥಾಕಥಿತ ಕೃಷಿ ಉತ್ಪನ್ನ ಮಾರುಕಟ್ಟೆಗಳು ಹೆಸರಿಗಷ್ಟೇ. ಆದರೆ ವ್ಯಾಪಾರಿಗಳು ಮಾತ್ರ ಮಾರುಕಟ್ಟೆಯಲ್ಲಿ ಕೆಲವು ವಸ್ತುಗಳ ಕೃತಕ ಅಭಾವ ಸೃಷ್ಟಿಸಿ ಅದರ ಬೆಲೆ ಹೆಚ್ಚುವಂತೆ ಮಾಡಿ ಲಾಭ ಗಳಿಸಿ ಕೊಳ್ಳುತ್ತಾರೆ. ಈ ಸಮಸ್ಯೆ ಇವತ್ತಿನದಲ್ಲ, ಹಿಂದಿನಿಂದಲೂ ಇದೇ ಗೋಳು. ಹೀಗಾಗಿ ಯಾವಾಗ ಒಳ್ಳೆಯ ದಿನಗಳು ಬರುವುದೋ ಎಂದು ರೈತರು ಕಾದುನೋಡುವಂತಾಗಿದೆ.

ಹಳ್ಳಿಗಳಲ್ಲಿ ಜಮೀನ್ದಾರರು ಜಮೀನ್ದಾರರಾಗೇ ಇದ್ದಾರೆ. ಆದರೆ ಬಡವರ ಜಮೀನುಗಳು ತುಂಡುಭೂಮಿಗಳಾಗಿದ್ದು, ಇರುವ ಅಲ್ಪ ಭೂಮಿಯಲ್ಲೇ ಸಣ್ಣ ಹಿಡುವಳಿದಾರರಾಗಿ ಹೊಟ್ಟೆ ತುಂಬಿಸಿಕೊಳ್ಳಲು ಪರದಾಡುತ್ತಿದ್ದಾರೆ. ಈ ಪರಿಸ್ಥಿತಿ ತಮ್ಮ ಮಕ್ಕಳಿಗೂ ಬರುವಂತಾಗಬಾರದು ಎಂಬ ಕಾರಣಕ್ಕೆ
ಅವರಿಗೆ ಉತ್ತಮ ಶಿಕ್ಷಣ ಕೊಡಿಸಲು ಇನ್ನಿಲ್ಲದ ಪಾಡು ಪಡುತ್ತಿದ್ದಾರೆ.

ಆದರೆ ಓದು ಮುಗಿಸಿದ ನಂತರ ಆ ಮಕ್ಕಳಿಗೆ ಅವರ ಯೋಗ್ಯತೆಗೆ ತಕ್ಕಂಥ ಕೆಲಸ ದೊರೆಯುವುದೂ ಗಗನಕುಸುಮವೇ. ಮತ್ತೊಂದೆಡೆ, ಬಹಳಷ್ಟು ಮಂದಿ ತಾವು ರೈತರ ಮಕ್ಕಳು ಎಂದು ಹೇಳಿಕೊಳ್ಳಲು ಹಿಂಜರಿಯುತ್ತಿದ್ದಾರೆ.

ಕಾರಣ ಇಂದು ರೈತರ ಮನೆಗಳಿಗೆ ಹೆಣ್ಣು ಕೊಡಲು ಯಾರೂ ಮುಂದೆ ಬರುತ್ತಿಲ್ಲ. ಹೀಗಾಗಿ ಅನೇಕರು ಮನೆ-ಮಠ ಮತ್ತು ಕೃಷಿಭೂಮಿಗಳನ್ನು ಮಾರಿ ಪಟ್ಟಣ ಸೇರಿಬಿಟ್ಟಿದ್ದಾರೆ. ಊರ ಗೋಮಾಳದ ಜಾಗಗಳಲ್ಲಿ ಕಾರ್ಖಾನೆಗಳು ತಲೆಯೆತ್ತುತ್ತಿವೆ, ಫಲವತ್ತಾದ ಕೃಷಿಭೂಮಿಗಳು ನಿವೇಶನಗಳಾಗುತ್ತಿವೆ. ದೇಶದ ಕೃಷಿಕ್ಷೇತ್ರವು ಯಾಂತ್ರೀಕೃತಗೊಳ್ಳುವುದು, ಎತ್ತು ಮತ್ತು ನೇಗಿಲುಗಳ ಜಾಗದಲ್ಲಿ ಟ್ರಾಕ್ಟರ್ ಬರುವುದು ಸ್ವಾಗತಾರ್ಹವೇ; ಆದರೆ ರಾಸಾಯನಿಕ ಗೊಬ್ಬರ ಮತ್ತು ಕ್ರಿಮಿನಾಶಕ ಗಳ ವಿಪರೀತ ಬಳಕೆಯಿಂದ ಭೂಮಿಯು ಫಲವತ್ತತೆಯನ್ನು ಕಳೆದುಕೊಳ್ಳುತ್ತಿದೆ. ಸಾವಯವ ಕೃಷಿಯತ್ತ ರೈತರು ಗಮನ ಹರಿಸಬೇಕಿದೆ, ಆದರೆ ಅದು ಸಮರ್ಥವಾಗಿ ಕೈಗೂಡುವ ನಿಟ್ಟಿನಲ್ಲಿ ಅವರಿಗೆ ಸೂಕ್ತ ವ್ಯವಸ್ಥೆಗಳಿಲ್ಲ, ಸಂಪನ್ಮೂಲಗಳಿಲ್ಲ.

ಕೃಷಿ ವಿಶ್ವವಿದ್ಯಾಲಯಗಳು, ಸಂಶೋಧನಾ ಸಂಸ್ಥೆಗಳು, ವಿಸ್ತರಣಾ ಕೇಂದ್ರಗಳು ಸ್ಥಾಪನೆಯಾಗಿವೆ ನಿಜ; ಆದರೆ ಅವೆಲ್ಲವೂ ಕೆಲವು ಕಿಲೋಮೀಟರು ಗಳಿಗಷ್ಟೇ ಸೀಮಿತವಾಗಿವೆ.

ಒಟ್ಟಿನಲ್ಲಿ ಕೃಷಿಕರಿಗೆ, ಅವರ ಬೆಳೆಗಳಿಗೆ ಸರಿಯಾದ ಬೆಲೆ ದೊರೆಯುತ್ತಿಲ್ಲ. ಇದರಿಂದಾಗಿ ಅವರು ಹತಾಶರಾಗಿದ್ದಾರೆ. ಇಡೀ ದೇಶಕ್ಕೆ ಅನ್ನದಾತರಾಗಿರುವ ರೈತರ ಸಂಕಷ್ಟಗಳಿಗೆ ಯಾರೂ ಸ್ಪಂದಿಸುತ್ತಿಲ್ಲ ಎಂಬುದು ವಿಷಾದದ ಸಂಗತಿ. ಇನ್ನು ಬೇಸಗೆ ಶುರುವಾದರಂತೂ ಸಣ್ಣ ಹಳ್ಳಿಯಿಂದ ಹಿಡಿದು
ಪಟ್ಟಣಗಳವರೆಗೆ ಕುಡಿಯುವ ನೀರಿನ ಸಮಸ್ಯೆ ಏಕಪ್ರಕಾರ ವಾಗಿರುತ್ತದೆ. ವಿದ್ಯುಚ್ಛಕ್ತಿಯ ಲೋಡ್ ಶೆಡ್ಡಿಂಗ್‌ನಿಂದಾಗಿ ಕೃಷಿಕರ ಬೋರ್‌ವೆಲ್‌ಗಳು ಮತ್ತು ಪಂಪ್‌ಸೆಟ್‌ಗಳಿಗೆ ಈಗಾಗಲೇ ತೊಂದರೆ ಉಂಟಾಗುತ್ತಿದೆ. ಹೀಗಾಗಿ ಬೆಳಗಾವಿಯ ಅಧಿವೇಶನದಲ್ಲಿ ವೃಥಾ ಕಾಲಹರಣ ಮಾಡದೆ, ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳಿಗೆ ಹೆಚ್ಚಿನ ಒತ್ತುಕೊಟ್ಟು ಚರ್ಚಿಸಿ ಪರಿಹಾರ ಸೂಚಿಸಬೇಕಿದೆ.

ಅದನ್ನು ಬಿಟ್ಟು ಜಾತಿ, ಮತ, ಧರ್ಮ, ಭಾಷೆ, ಪ್ರಾದೇಶಿಕತೆ ಇತ್ಯಾದಿ ವಿಚಾರಗಳನ್ನು ಮುಂದಿಟ್ಟುಕೊಂಡು ಕಿತ್ತಾಡುವುದು, ಕಾಟಾಚಾರಕ್ಕೆ ಅಧಿವೇಶನ ವನ್ನು ಮುಗಿಸುವುದು ಜನಪ್ರತಿನಿಧಿಗಳಿಗೆ ಸಲ್ಲ. ವಿರೋಧ ಪಕ್ಷದವರು ರಚನಾತ್ಮಕ ಟೀಕೆಗಳ ಮೂಲಕ ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸಬೇಕು.

ಆದರೆ ಈಗಿನ ಟ್ರೆಂಡ್ ನೋಡಿದರೆ, ಜಾತಿಗಣತಿ ವಿಚಾರವೇ ಅಧಿವೇಶನದ ಬಹುತೇಕ ಸಮಯವನ್ನು ನುಂಗಿಹಾಕುವ ಎಲ್ಲಾ ಲಕ್ಷಣಗಳೂ ಕಾಣುತ್ತಿವೆ. ಆದ್ದರಿಂದ ಬೆಳಗಾವಿಯ ಈ ಅಧಿವೇಶನವು ಕೇವಲ ‘ವಾರ್ಷಿಕ ಸಮ್ಮೇಳನ’ವಾಗದೆ, ನಿಜಾರ್ಥದಲ್ಲಿ ಜನರ ಸಮಸ್ಯೆಗಳ ಕುರಿತು ಚರ್ಚಿಸುವ ಮಹತ್ತರ ಸಂದರ್ಭವಾಗಲಿ, ತನ್ಮೂಲಕ ಜನಕಲ್ಯಾಣದ ಆಶಯಕ್ಕೆ ನೀರೆರೆಯಲಿ ಎಂಬುದು ಸಹೃದಯಿಗಳ ಆಶಯ.

(ಲೇಖಕರು ಹವ್ಯಾಸಿ ಬರಹಗಾರರು)