Wednesday, 11th December 2024

ಕರ್ನಾಟಕದ ರಿಪೋರ್ಟು ಮೋದಿಗೆ ಸಪೋರ್ಟು ?

ಮೂರ್ತಿಪೂಜೆ

ಲೋಕಸಭೆಗೆ ಅವಧಿಪೂರ್ವ ಚುನಾವಣೆ ನಡೆದರೆ ಕರ್ನಾಟಕದಲ್ಲಿ ಮಿನಿಮಮ್ ೨೦ ಕ್ಷೇತ್ರಗಳಲ್ಲಿ ಪಕ್ಷ ಗೆಲುವು ಗಳಿಸಲಿದೆ ಎಂಬ ವರದಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ತಲುಪಿದೆ. ಇದನ್ನು ಅವರಿಗೆ ತಲುಪಿಸಿದ್ದು ಪಕ್ಷದ ಸರ್ವೇ ಟೀಮು. ಅಂದ ಹಾಗೆ, ಲೋಕಸಭೆ ಚುನಾವಣೆಗೆ ಸಂಬಂಧಿಸಿದಂತೆ ಬಿಜೆಪಿಯ ದಿಲ್ಲಿ ನಾಯಕರು ನೇಮಕ ಮಾಡಿದ ಈ ಸರ್ವೇ ಟೀಮು ಕಳೆದ ಮೂರು ತಿಂಗಳಲ್ಲಿ ಮೂರು ವರದಿ ನೀಡಿದೆಯಂತೆ ಮತ್ತು ಈ ಟೀಮು ಮಾಡಿದ ಶಿಫಾರಸುಗಳನ್ನು ಪ್ರಧಾನಿ ಮೋದಿಯವರು ಗಂಭೀರವಾಗಿ ಪರಿಗಣಿಸುತ್ತಿದ್ದಾರೆ.

ಮೊನ್ನೆ ಮೊನ್ನೆಯ ತನಕ ರಾಜ್ಯ ಬಿಜೆಪಿಯ ವ್ಯವಹಾರಗಳನ್ನು ನೋಡಿಕೊಳ್ಳುತ್ತಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ ಈಗ ಇದ್ದಕ್ಕಿದ್ದಂತೆ ಸೈಡಿಗೆ ಸರಿದಿರುವು ದಕ್ಕೆ ಮತ್ತು ಇಂಥ ವ್ಯವಹಾರಗಳನ್ನು ಖುದ್ದು ಪ್ರಧಾನಿಯವರೇ ನೋಡಿಕೊಳ್ಳುತ್ತಿರುವುದಕ್ಕೆ ಈ ಸರ್ವೇ ಟೀಮು ನೀಡಿದ ಶಿಫಾರಸೇ ಕಾರಣ. ಅಂದ ಹಾಗೆ, ಅಮಿತ್ ಶಾ ಅವರದು ‘ಏಕ್ ಮಾರ್, ದೋ ತುಕಡಾ’ ಸ್ಟೈಲು. ಹೀಗಾಗಿಯೇ ತಮ್ಮ ನಡೆಗೆ ಪೂರಕವಾಗಿದ್ದ ಯಡಿಯೂರಪ್ಪ ವಿರೋಧಿ ಬಣವನ್ನು ಅವರು ಹತ್ತಿರದಲ್ಲಿಟ್ಟುಕೊಂಡಿದ್ದರು. ಯಡಿಯೂರಪ್ಪ ಸೇರಿದಂತೆ ಇಂತಿಂಥವರನ್ನು ದೂರವಿಡಬೇಕು ಎಂದು ಈ ಬಣ ಹೇಳಿದರೆ ಅಮಿತ್ ಶಾ ಅದನ್ನು ಚಾಚೂ ತಪ್ಪದೆ ಮಾಡುತ್ತಿದ್ದರು.

ಆದರೆ ವಿಧಾನಸಭಾ ಚುನಾವಣೆಯಲ್ಲಿ ಪಕ್ಷ ಸೋಲು ಅನುಭವಿಸಿದ ನಂತರ ಕರ್ನಾಟಕಕ್ಕೆ ಅಮಿತ್ ಶಾ ಮಾಡೆಲ್ಲು ವಕ್ ಔಟ್ ಆಗುವುದಿಲ್ಲ ಎಂಬ ಭಾವನೆ ಪ್ರಧಾನಿಯವರಲ್ಲಿ ಮೂಡಿದೆ. ಹೀಗಾಗಿ ಯಡಿಯೂರಪ್ಪ ಅವರ ಕೈಗೆ ಹೆಚ್ಚಿನ ಶಕ್ತಿ ತುಂಬಿದ ಅವರು, ಇವತ್ತಿಗೂ ಯಡಿಯೂರಪ್ಪ ಅವರ ವಿರುದ್ಧ ಗುಟುರು ಹಾಕುತ್ತಿರುವವರ ಮಾತಿಗೆ ಶಕ್ತಿ ತುಂಬುತ್ತಿಲ್ಲ. ಒಂದು ವೇಳೆ ರಾಜ್ಯ ಬಿಜೆಪಿಯ ವ್ಯವಹಾರಗಳು ಅಮಿತ್ ಶಾ ಅವರ ಕಣ್ಣಳತೆಯಲ್ಲಿ ನಡೆಯುತ್ತಿದ್ದರೆ
ಇಷ್ಟೊತ್ತಿಗಾಗಲೇ ಆಟವೇ ಬೇರೆಯಾಗಿರುತ್ತಿತ್ತು.

ಮೂಲಗಳ ಪ್ರಕಾರ, ಲೋಕಸಭೆ ಚುನಾವಣೆಯವರೆಗೂ ‘ಹಾವು ಸಾಯಬಾರದು, ಕೋಲು ಮುರಿಯಬಾರದು’ ಎಂಬ ನೀತಿಯಂತೆ ರಾಜ್ಯ ಬಿಜೆಪಿಯ ವ್ಯವಹಾರಗಳನ್ನು ನೋಡಿಕೊಳ್ಳುವುದು ಮೋದಿಯವರ ಬಯಕೆ. ಕಾರಣ? ಕರ್ನಾಟಕದಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಸರಿಸಮನಾದ ಮತ್ತೊಬ್ಬ ನಾಯಕ ಪಕ್ಷದಲ್ಲಿಲ್ಲ ಎಂಬುದು ಮತ್ತು ಈ ಕಾರಣಕ್ಕಾಗಿ ಯಡಿಯೂರಪ್ಪರ ಕೈಗೆ ಹೆಚ್ಚಿನ ಶಕ್ತಿಯನ್ನೂ ತುಂಬಿದ್ದು ನಿಜ. ಆದರೆ ಅವರ ಕೈಗೆ
ಹೆಚ್ಚಿನ ಶಕ್ತಿ ನೀಡಲಾಗಿದೆ ಎಂದ ಮಾತ್ರಕ್ಕೆ ಅವರ ವಿರೋಧಿ ಬಣವನ್ನು ನಿರ್ಲಕ್ಷಿಸುವ ಸ್ಥಿತಿಯೂ ಇಲ್ಲ. ಯಾಕೆಂದರೆ ಸಂಘಟನೆಯ ಮಟ್ಟದಲ್ಲಿ ಇವತ್ತಿಗೂ ಯಡಿಯೂರಪ್ಪ ವಿರೋಧಿ ಬಣವೇ ಪವರ್ ಫುಲ್ಲಾಗಿದೆ. ಹೀಗಾಗಿ ಯಾವುದೇ ಒಂದು ಬಣವನ್ನು ಓಲೈಸಲು ಹೋದರೆ ಮತ್ತೊಂದು ಬಣ ಉಲ್ಟಾ ಹೊಡೆಯಬಹುದು ಎಂಬುದು ಮೋದಿಯವರ ಯೋಚನೆ.

ಹೀಗಾಗಿಯೇ ಯಡಿಯೂರಪ್ಪ ಟೀಮಿಗೆ ಪವರ್ ನೀಡಲಾಗಿದ್ದರೂ, ಅವರ ವಿರುದ್ದ ಗುಟುರು ಹಾಕುತ್ತಿರುವ ಯತ್ನಾಳ್, ಸೋಮಣ್ಣ, ಲಿಂಬಾವಳಿ, ಬೆಲ್ಲದ್
ತರಹದವರಿಗೆ ಮತ್ತವರ ಹಿಂದಿರುವ ಶಕ್ತಿಗೆ ‘ಬೀ ಕೂಲ್’ ಎಂಬ ಸಿಗ್ನಲ್ಲು ರವಾನೆಯಾಗುತ್ತಿಲ್ಲ. ಅಂದ ಹಾಗೆ, ಹಾವು ಸಾಯಬಾರದು, ಕೋಲು ಮುರಿಯಬಾರದು ಎಂಬ ಈ ನೀತಿಯನ್ನು ಮೋದಿ ಅನುಸರಿಸುತ್ತಿರುವುದಕ್ಕೆ ಒಂದು ಕಾರಣವಿದೆ. ಅದೆಂದರೆ ಲೋಕಸಭಾ ಚುನಾವಣೆಗೆ ಸಂಬಂಧಿಸಿದ ಅವರ ಲೆಕ್ಕಾಚಾರ. ದಿಲ್ಲಿ
ಮೂಲಗಳ ಪ್ರಕಾರ, ಮಧ್ಯಪ್ರದೇಶ, ರಾಜಸ್ಥಾನ ಮತ್ತು ಛತ್ತೀಸ್‌ಗಡ ವಿಧಾನಸಭಾ ಚುನಾವಣೆಯ ಫಲಿತಾಂಶದಿಂದ ಉತ್ಸಾಹಗೊಂಡಿರುವ ಅವರಿಗೆ, ಅವಽಪೂರ್ವ ಚುನಾವಣೆಗೆ ಹೋದರೆ ವಿರೋಽಗಳನ್ನು ನಿರಾಯಾಸವಾಗಿ ಬಗ್ಗು ಬಡಿಯಬಹುದು ಎಂಬ ಯೋಚನೆ ಬಂದಿದೆ. ಮೂರು ರಾಜ್ಯಗಳ ವಿಧಾನಸಭಾ ಚುನಾವಣೆಯ ಫಲಿತಾಂಶ ದೇಶದಲ್ಲಿ ಬಿಜೆಪಿ ಪರವಾದ ಅಲೆ ಇದೆ ಎಂಬುದರ ಸಂಕೇತವಾಗಿರುವುದರಿಂದ ಮತ್ತು ಇಂಥ ಸೋಲಿನಿಂದ ಕಾಂಗ್ರೆಸ್ ಮತ್ತಿತರ ಪ್ರತಿಪಕ್ಷಗಳು ಮಂಕಾಗಿರುವುದರಿಂದ ಆದಷ್ಟು ಬೇಗ, ಅಂದರೆ ಮಾರ್ಚ್ ಹೊತ್ತಿಗೆ ಇನ್ನೊಂದು ರೌಂಡು ನುಗ್ಗಿಬಿಡಬೇಕು ಎಂಬುದು ಈ ಯೋಚನೆಯ ಭಾಗ.

ಆದರೆ ಇಂಥ ಯೋಚನೆಗೆ ಎಲ್ಲ ರಾಜ್ಯಗಳಲ್ಲೂ ಪೂರಕ ವಾತಾವರಣ ಇರಬೇಕಲ್ಲ? ಹಾಗಂತಲೇ ಅವಧಿಪೂರ್ವ ಚುನಾವಣೆ ನಡೆದರೆ ಕರ್ನಾಟಕದಲ್ಲಿ ಫಲಿತಾಂಶ ಏನಾಗಬಹುದು? ಅಂತ ಅವರು ಸರ್ವೇ ಟೀಮಿಗೆ ವರದಿ ಕೇಳಿದ್ದರಂತೆ. ಅದರ ಪ್ರಕಾರ ವರದಿ ನೀಡಿರುವ ಸರ್ವೇ ಟೀಮು, ಕರ್ನಾಟಕದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಕೂಟ ಮೇಲೆದ್ದು ನಿಲ್ಲಬೇಕಿದೆಯಾದರೂ, ಆಡಳಿತಾರೂಢ ಕಾಂಗ್ರೆಸ್ ಪಕ್ಷ ಯಾವ ಯುದ್ಧಕ್ಕೂ ಸಜ್ಜಾಗಿಲ್ಲ. ಹೀಗಾಗಿ ಕರ್ನಾಟಕದ ನೆಲೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಕೂಟಕ್ಕೇ ಅನುಕೂಲಕರ ಪರಿಸ್ಥಿತಿ ಇದೆ ಎಂದು ವಿವರಿಸಿದೆ.

ಅದರ ಪ್ರಕಾರ, ಲೋಕಸಭೆಯ ೨೮ ಕ್ಷೇತ್ರಗಳಿಗೆ ಯಾರನ್ನು ಕಣಕ್ಕಿಳಿಸಬೇಕು ಎಂಬ ಬಗ್ಗೆ ಕಾಂಗ್ರೆಸ್ ಪಕ್ಷ ಇದುವರೆಗೆ ಪ್ರಾಥಮಿಕ ಪಟ್ಟಿಯನ್ನೂ ತಯಾರಿಸಿಲ್ಲ.
ಇದ್ದುದರಲ್ಲಿ ಬೆಳಗಾವಿಯಿಂದ ಸತೀಶ್ ಜಾರಕಿಹೊಳಿ, ಚಾಮರಾಜನಗರದಿಂದ ಎಚ್.ಸಿ.ಮಹದೇವಪ್ಪ, ತುಮಕೂರಿನಿಂದ ಕೆ.ಎನ್.ರಾಜಣ್ಣ ಸೇರಿದಂತೆ ಐದಾರು ಮಂದಿ ಹಾಲಿ ಸಚಿವರನ್ನು ಕಣಕ್ಕಿಳಿಸಬೇಕು ಎಂಬ ಯೋಚನೆ ಅದಕ್ಕಿದೆ. ಆದರೆ ಸಚಿವರಾದವರನ್ನು ಕಣಕ್ಕಿಳಿಸಬೇಕು ಅಂತ ಅದು ಯೋಚಿಸಿದ್ದರೂ ಬಹುತೇಕ ಸಚಿವರಿಗೆ ಸ್ಪರ್ಧಿಸುವ ಮನಸ್ಸಿಲ್ಲ. ಕಾರಣ? ಲೋಕಸಭೆಗೆ ಸ್ಪಽಸಿ ಕರ್ನಾಟಕದಲ್ಲಿ ತಮ್ಮ ನೆಲೆಯನ್ನು ದುರ್ಬಲಗೊಳಿಸಿಕೊಳ್ಳುವ ಮನಸ್ಸು ಅವರಿಗಿಲ್ಲ. ಹೀಗಾಗಿ ಕಣಕ್ಕಿಳಿಯಬೇಕು ಅಂತ ಯಾವ ಸಚಿವರಿಗೆ ಸಿಗ್ನಲ್ ನೀಡಲಾಗಿದೆಯೋ ಅವರೆಲ್ಲ ಪರ್ಯಾಯ ಅಭ್ಯರ್ಥಿಗಳ ಹೆಸರುಗಳನ್ನು ಮುಂದಿಟ್ಟು, ‘ಇವರಿಗೆ ಟಿಕೆಟ್ ಕೊಡಿ, ಗೆಲ್ಲಿಸಿಕೊಂಡು ಬರುತ್ತೇವೆ’ ಎನ್ನುತ್ತಿದ್ದಾರೆ.

ಇನ್ನು ಮೈಸೂರು ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ತಮಗೆ ಟಿಕೆಟ್ ನೀಡುವಂತೆ ಮಾಜಿ ಸಚಿವ, ಬಿಜೆಪಿಯಲ್ಲಿರುವ ಎಚ್.ವಿಶ್ವನಾಥ್ ಅವರು ಇಂಡೆಂಟ್ ಇಟ್ಟಿದ್ದಾರಾ ದರೂ ‘ಇಲ್ಲ ಇಲ್ಲ, ಒಕ್ಕಲಿಗರಿಗೇ ಅಲ್ಲಿಂದ ಟಿಕೆಟ್ ನೀಡಬೇಕು’ ಅಂತ ಸಿದ್ದರಾಮಯ್ಯ ಹೇಳುತ್ತಿದ್ದಾರೆ. ಹೀಗೆ ಕರ್ನಾಟಕದ ಬಹುತೇಕ ಕ್ಷೇತ್ರಗಳನ್ನು ನೋಡಿದರೆ ಇಂಥದ್ದೇ ಗೊಂದಲದ ಪರಿಸ್ಥಿತಿ ಇರುವುದರಿಂದ ಕಾಂಗ್ರೆಸ್ ಸೈನ್ಯ ಇನ್ನೂಯುದ್ಧಕ್ಕೆ ಸಜ್ಜಾಗಿಲ್ಲ. ಹೀಗಾಗಿ ಲೋಕಸಭೆಗೆ ಅವಧಿ ಪೂರ್ವ ಚುನಾವಣೆ ನಡೆದರೆ ಬಿಜೆಪಿ-ಜೆಡಿಎಸ್ ಮೈತ್ರಿ ಕೂಟಕ್ಕೆ ಬಂಪರ್ ಗೆಲುವು ಸಿಗುತ್ತದೆ ಎಂಬುದು ಸರ್ವೇ ಟೀಮಿನ ವರದಿ.

ಇಂಥ ವರದಿಗಳನ್ನು ತರಿಸಿಕೊಂಡಿರುವ ಮೋದಿ ಯಾವ ಹೆಜ್ಜೆ ಇಡುತ್ತಾರೋ ಗೊತ್ತಿಲ್ಲ. ಆದರೆ ೨೦೨೪ನೇ ಸಾಲಿನ ಕೇಂದ್ರ ಬಜೆಟ್ ಅನ್ನು ಫೆಬ್ರವರಿ ಒಂದಕ್ಕೆ ನಿಗದಿ ಮಾಡಿರುವ ಮತ್ತು ಅಯೋಧ್ಯೆಯ ರಾಮಮಂದಿರವನ್ನು ಅದಕ್ಕೂ ಮುನ್ನ ಉದ್ಘಾಟಿಸುವ ಅವರ ಲೆಕ್ಕಾಚಾರಗಳೆಲ್ಲ ಲೋಕಸಭೆಗೆ ಅವಧಿಪೂರ್ವ ಚುನಾವಣೆ ನಡೆಸುವ ತಂತ್ರದಂತೆ ಕಾಣಿಸುತ್ತಿವೆ.

ಕುಮಾರಸ್ವಾಮಿ ಕೂಲ್ ಆಗಿದ್ದೇಕೆ?
ಅಂದ ಹಾಗೆ, ವಿಧಾನಸಭೆಯ ಅಧಿವೇಶನದಲ್ಲಿ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆಶಿ ವಿರುದ್ಧ ಅಬ್ಬರಿಸಿ-ಬೊಬ್ಬಿರಿಯಬೇಕಿದ್ದ ಜೆಡಿಎಸ್ ರಾಜ್ಯಾಧ್ಯಕ್ಷ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕೂಲ್ ಆಗಿದ್ದರು. ಬರಗಾಲದ ಮೇಲೆ ಚರ್ಚೆ ಮಾಡುವಾಗಲೇ ಇರಬಹುದು, ಇನ್ಯಾವುದೇ ವಿಷಯಗಳನ್ನು ಹಿಡಿದುಕೊಂಡು ಮಾತನಾಡಿದ್ದಿರಬಹುದು, ಕುಮಾರಸ್ವಾಮಿ ಮಾತ್ರ ತಮ್ಮ ಎಂದಿನ ಶೈಲಿಯಲ್ಲಿ ಸಿಎಂ ಮತ್ತು ಡಿಸಿಎಂ ವಿರುದ್ಧ ಮುಗಿಬೀಳಲಿಲ್ಲ. ಹೀಗೆ ಕೂಲ್ ಆಗಿರುವುದು ಕುಮಾರಸ್ವಾಮಿ ಅವರ ಸ್ವಭಾವವೇ ಅಲ್ಲ. ಸರಕಾರ ಅಸ್ತಿತ್ವಕ್ಕೆ ಬಂದ ದಿನದಿಂದ ಒಂದೇ ಸಮನೆ ಅದರ ಮೇಲೆ ದಾಳಿ ಮಾಡುತ್ತಿದ್ದ ಕುಮಾರ
ಸ್ವಾಮಿ ಇದ್ದಕ್ಕಿದ್ದಂತೆ ಅಧಿವೇಶನದಲ್ಲಿ ಕೂಲ್ ಆಗಿದ್ದೇಕೆ? ಜೆಡಿಎಸ್ ಮೂಲಗಳ ಪ್ರಕಾರ, ಕುಮಾರಸ್ವಾಮಿಯವರ ಈ ಶಾಂತ ನಡಿಗೆಗೆ ಪಕ್ಷದ ಶಾಸಕರು ಕಾರಣ.

ಅಧಿವೇಶನದ ಪ್ರಾರಂಭಕ್ಕೂ ಮುಂಚೆ ಸರಕಾರದ ಪ್ರಮುಖರ ಬಗ್ಗೆ ತಮ್ಮ ಬಳಿ ಇರುವ ಪೆನ್ ಡ್ರೈವನ್ನು ಬಹಿರಂಗಪಡಿಸಲು ಅವರು ಯೋಚಿಸಿದ್ದರಂತೆ. ಆದರೆ ಇದು ಗೊತ್ತಾಗುತ್ತಲೇ ಅವರನ್ನು ಭೇಟಿ ಮಾಡಿದ ಪಕ್ಷದ ಕೆಲ ಶಾಸಕರು, ‘ಕುಮಾರಣ್ಣ, ದಯವಿಟ್ಟು ಅಧಿವೇಶನದಲ್ಲಿ ಸರಕಾರದ ವಿರುದ್ಧ ದಾಳಿ ಮಾಡಬೇಡಿ. ನೀವು ಸರಕಾರದಲ್ಲಿರುವ ಅಥವಾ ಸರಕಾರದ ಸಂಪರ್ಕದಲ್ಲಿರುವ ವ್ಯಕ್ತಿಗಳ ಮೇಲೆ ಮುಗಿಬಿದ್ದರೆ ಸಿಎಂ ಮತ್ತು ಡಿಸಿಎಂ ಅದನ್ನು ವೈಯಕ್ತಿಕ ನೆಲೆಯಲ್ಲಿ ಗ್ರಹಿಸುತ್ತಾರೆ. ಯಾವಾಗ ಅವರು ಈ ರೀತಿ ಗ್ರಹಿಸುತ್ತಾರೋ, ನಾಳೆ ನೀವೂ ಅದೇ ನೆಲೆಗೆ ಇಳಿದು ಸಂಘರ್ಷ ಮಾಡುವುದು ಅನಿವಾರ್ಯವಾಗುತ್ತದೆ. ನಿಮ್ಮ ನಡುವಣ ಈ ಸಂಘರ್ಷವನ್ನು ನೋಡಿ ನಿಜವಾದ ಪ್ರತಿಪಕ್ಷ ನಾಯಕ ಎಂದರೆ ಕುಮಾರಸ್ವಾಮಿ ಅಂತ ಜನ ಮಾತನಾಡಬಹುದು.

ಸಮಸ್ಯೆ ಎಂದರೆ ನಿಮ್ಮ ನಡುವೆ ಕದನ ಶುರುವಾದಾಗಲೆಲ್ಲ ನಮ್ಮ ಕ್ಷೇತ್ರಗಳು ಕಷ್ಟ ಅನುಭವಿಸಬೇಕಾಗುತ್ತದೆ. ಯಾಕೆಂದರೆ ಈ ಕದನ ಶುರುವಾದ ನಂತರ ಸಿಎಂ, ಡಿಸಿಎಂ ಮಾತ್ರವಲ್ಲ, ಸರಕಾರದ ಬಹುತೇಕ ಮಂತ್ರಿಗಳೂ ನಾವು ತೆಗೆದುಕೊಂಡು ಹೋಗುವ ಪ್ರಪೋಸಲ್ಲುಗಳ ಕಡೆ ತಿರುಗಿ ನೋಡುವುದಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ನೀವು ಸರಕಾರದ ಮೇಲೆ ಏನೇ ಆರೋಪ ಮಾಡಿದರೂ ಜನ ಈಗಾಗಲೇ ಅವರ ಪರವಾಗಿ ತೀರ್ಪು ಕೊಟ್ಟಿದ್ದಾರೆ. ಇಂಥವರು ಭ್ರಷ್ಟರು ಅಂತ ನೀವೆಷ್ಟೇ ಅಬ್ಬರಿಸಿದರೂ ಅಂಥವರನ್ನು ಒಪ್ಪಿಕೊಂಡು ಜನ ವಿಧಾನಸಭೆಗೆ ಕಳಿಸಿದ್ದಾರಲ್ಲ?’ ಅಂತ ಈ ಶಾಸಕರು ಹೇಳಿದ ಮೇಲೆ ಕುಮಾರಸ್ವಾಮಿ ಅವರಿಗೂ ಇದು ಹೌದೆನ್ನಿಸಿದೆ ಯಂತೆ. ಹೀಗಾಗಿ ಸಿಎಂ-ಡಿಸಿಎಂ ವಿರುದ್ಧ ನಾನು ಮುಗಿಬೀಳಲು ಹೋಗಿ ಪಕ್ಷದ ಶಾಸಕರೇಕೆ ಕಷ್ಟ ಎದುರಿಸಬೇಕು? ಅಂತ ಯೋಚಿಸಿರುವ ಅವರು ಅಧಿವೇಶನದಲ್ಲಿ ‘ಥಂಡಾ ಥಂಡಾ, ಕೂಲ್ ಕೂಲ್’ ಆಗಿದ್ದಾರಂತೆ.

ಉಸ್ಸಪ್ಪ ಅಂದ ಕೈ ಶಾಸಕರು

ಈ ಮಧ್ಯೆ ಸರಕಾರ ಬಂದಾಗಿನಿಂದ ಗುರುಗುಟ್ಟುತ್ತಿದ್ದ ಆಡಳಿತಾರೂಢ ಕಾಂಗ್ರೆಸ್ ಪಕ್ಷದ ಶಾಸಕರು ಈಗ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಕಾರಣ? ಕಳೆದ ವಾರ ಬೆಳಗಾವಿಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ‘ಶಾಸಕರ ನಿಧಿಯಡಿ ನಿಮಗೆಲ್ಲ ಹಣ ಬಿಡುಗಡೆ ಮಾಡಿಸುತ್ತೇನೆ’ ಎಂದಿದ್ದಾರೆ. ಅಂದ ಹಾಗೆ, ಸರಕಾರ ಅಸ್ತಿತ್ವಕ್ಕೆ ಬಂದ ನಂತರ ತಮ್ಮ ಕ್ಷೇತ್ರಕ್ಕೆ ಸಂಬಂಧಿಸಿದ ಪ್ರಪೋಸಲ್ಲುಗಳನ್ನು ತೆಗೆದುಕೊಂಡು ಬರುತ್ತಿದ್ದ ಶಾಸಕರಿಗೆ, ‘ಈ ವರ್ಷ ಹಣ ಕೊಡಕ್ಕಾಗಲ್ಲ ಕಣ್ರೀ’ ಅಂತ ಸಿದ್ದರಾಮಯ್ಯ ನೇರವಾಗಿ ಹೇಳುತ್ತಿದ್ದರು. ಯಾವಾಗ ಸಣ್ಣ ಪುಟ್ಟ ಕೆಲಸಗಳಿಗೂ ಹಣ ಸಿಗುವುದಿಲ್ಲ ಎಂದಾಯಿತೋ, ಆಗ ಶಾಸಕರು ಕಿರಿಕಿರಿ ಶುರು ಮಾಡತೊಡಗಿದರು. ಕೊನೆಗೆ ಇದು ಯಾವ ಹಂತಕ್ಕೆ ಹೋಯಿತೆಂದರೆ ಸರಕಾರದಲ್ಲಿರುವ ಹಲ ಸಚಿವರ ಮೇಲೂ ಶಾಸಕರು ತಿರುಗಿ ಬೀಳುವಲ್ಲಿಗೆ ಹೋಯಿತು. ಕಳೆದ ವಾರ ಕಾಂಗ್ರೆಸ್ ಶಾಸಕಾಂಗ ಸಭೆ ನಡೆದಾಗಲೂ ಶಾಸಕರಾದ ಬಿ.ಆರ್.ಪಾಟೀಲ್, ಬಸ ರಾಜ್, ಬೇಳೂರು ಗೋಪಾಲಕೃಷ್ಣ ಸೇರಿದಂತೆ ಹಲ ಶಾಸಕರು, ಕೆಲ ಸಚಿವರ ದುರಹಂಕಾರದ ಬಗ್ಗೆ ಧ್ವನಿ ಎತ್ತಿದ್ದಾರೆ.

‘ನಾವಿರುವುದಕ್ಕೆ ಮಂತ್ರಿಗಳಾದ ಇವರು ನಮ್ಮ ಕೆಲಸ ಮಾಡಿಕೊಡಲು ನಿರ್ಲಕ್ಷ್ಯ ತೋರಿಸುತ್ತಿದ್ದಾರೆ’ ಎಂದು ಅವರು ಅಬ್ಬರಿಸಿದಾಗ ಮಧ್ಯೆ ಪ್ರವೇಶಿಸಿದ ಸಿದ್ದರಾಮಯ್ಯ, ಸದ್ಯದಲ್ಲೇ ಶಾಸಕರ ನಿಧಿಯಡಿ ಹಣ ಬಿಡುಗಡೆ ಮಾಡುವ ಭರವಸೆ ನೀಡಿದ್ದಾರೆ. ಅಷ್ಟೇ ಅಲ್ಲ, ‘ಮಾರ್ಚ್ ಕಳೆಯಲಿ, ನೀವೆಷ್ಟು ಅನುದಾನ
ಕೇಳುತ್ತೀರೋ ಅಷ್ಟು ಕೊಡಿಸುತ್ತೇನೆ. ಯಾರೂ ಯೋಚಿ ಸಬೇಡಿ’ ಅಂತ ಖಚಿತ ಧ್ವನಿಯಲ್ಲಿ ಹೇಳಿದ್ದಾರೆ. ಮೂಲಗಳ ಪ್ರಕಾರ, ವಿಧಾನಮಂಡಲ ಅಧಿವೇಶನ ಮುಗಿದ ಕೆಲವೇ ದಿನಗಳಲ್ಲಿ ಶಾಸಕರಿಗೆ ತಲಾ ಐವತ್ತು ಕೋಟಿ ರೂಪಾಯಿ ಬಿಡುಗಡೆ ಆಗಲಿದೆ.