Saturday, 14th December 2024

ಸಮಾಜವನ್ನು ಮಾನವೀಯಗೊಳಿಸುವ ಪ್ರಯತ್ನ ನಡೆಯಲಿ

ಬೆಳಗಾವಿ ಜಿಲ್ಲೆಯ ವಂಟಮೂರಿ ಗ್ರಾಮದಲ್ಲಿ ಮಹಿಳೆಯೊಬ್ಬರನ್ನು ಬೆತ್ತಲುಗೊಳಿಸಿ ಥಳಿಸಿರುವ ದೌರ್ಜನ್ಯ ಅಮಾನುಷವಾದುದು. ಈ ಪ್ರಕರಣಕ್ಕೆ ಸರಕಾರವು ತಕ್ಷಣದಲ್ಲಿಯೇ ಸ್ಪಂದಿಸಿದ್ದರಿಂದ ಆರೋಪಿಗಳಲ್ಲಿ ಕೆಲವರನ್ನು ಬಂಧಿಸಿ ಮಾನಭಂಗ, ಕೊಲೆ ಯತ್ನ, ಹ, ದೊಂಬಿ, ನಿಂದನೆ, ಕಾನೂನು ಸುವ್ಯವಸ್ಥೆಗೆ ಧಕ್ಕೆ, ಜೀವ ಬೆದರಿಕೆ ಸೇರಿದಂತೆ ವಿವಿಧ ಪ್ರಕರಣಗಳನ್ನು ದಾಖಲಿಸಲಾಗಿದೆ.

ಘಟನೆಗೆ ಸಂಬಂಧಿಸಿದಂತೆ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿರುವ ಹೈಕೋರ್ಟ್, ಸೂಕ್ತ ಕ್ರಮ ಕೈಗೊಳ್ಳುವಂತೆ ರಿಜಿಸ್ಟ್ರಾರ್ ಜನರಲ್ ಅವರಿಗೆ ಆದೇಶಿಸಿದೆ. ಅಲ್ಲದೆ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಲಾಗಿದೆ. ಆದಷ್ಟು ಬೇಗ ವಿಚಾರಣೆ ಮುಗಿದು, ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗುವಂತೆ ನೋಡಿ ಕೊಳ್ಳುವ ಇಚ್ಛಾಶಕ್ತಿಯನ್ನು ಸರಕಾರ ತೋರಬೇಕಾಗಿದೆ. ಪ್ರತಿ ವರ್ಷ ದೇಶದಾದ್ಯಂತ ಇಂತಹ ಸರಿಸುಮಾರು ೧೦ ಸಾವಿರ ಪ್ರಕರಣಗಳು ದಾಖಲಾಗು ತ್ತಿವೆ. ಕೆಲವು ವರ್ಷಗಳಲ್ಲಿ ಇಂತಹ ಪ್ರಕರಣಗಳ ಸಂಖ್ಯೆ ೧೦ ಸಾವಿರವನ್ನೂ ದಾಟಿದೆ.

ಇಂತಹ ಕೃತ್ಯಗಳು ಸಾವಿರಾರು ಸಂಖ್ಯೆಯಲ್ಲಿ ನಡೆಯುತ್ತಿದ್ದರೂ, ಕೆಲವು ಪ್ರಕರಣಗಳಷ್ಟೇ ದೊಡ್ಡಮಟ್ಟದಲ್ಲಿ ಸುದ್ದಿಯಾಗುತ್ತಿವೆ. ಮಹಿಳೆಯನ್ನು
ಸಂಪೂರ್ಣವಾಗಿ ವಿವಸ್ತ್ರಗೊಳಿಸಿ ಮೆರವಣಿಗೆ ಮಾಡಿ, ಥಳಿಸಿದಂತಹ ಪ್ರಕರಣಗಳಷ್ಟೇ ಸುದ್ದಿಯಾಗುತ್ತಿವೆ. ಉಳಿದ ಕೃತ್ಯಗಳೂ ಅಷ್ಟೇ ಹೀನವಾಗಿದ್ದರೂ ಶಿಕ್ಷಾರ್ಹ ಅಪರಾಧವಾಗಿದ್ದರೂ ಅವು ಪೊಲೀಸ್ ದಾಖಲೆಗಳಲ್ಲಿ ಮಾತ್ರ ಉಳಿಯುತ್ತಿರುವುದು ನಮ್ಮ ವ್ಯವಸ್ಥೆಗೆ ಹಿಡಿದ ಕೈಗನ್ನಡಿ. ಮಹಿಳೆಯರ ಮೇಲೆ ನಡೆಯುವ ಬಹುತೇಕ ದೌರ್ಜನ್ಯದ ಕೃತ್ಯಗಳಲ್ಲಿ ಜಾತಿ ವ್ಯಸನದ ವಿಕೃತಿ ಇರುತ್ತದಾದರೂ ಹೆಣ್ಣನ್ನು ತನ್ನ ಅಡಿಯಾಳಾಗಿ ಭಾವಿಸುವ ಪುರುಷ ಅಹಂಕಾ ರವೂ ಪ್ರಮುಖವಾಗಿ ಇರುತ್ತದೆ.

ಸುಪ್ತವಾಗಿ ಇರುವ ಈ ಅಹಂಕಾರ ಅಥವಾ ದರ್ಪ, ಅವಕಾಶ ಸಿಕ್ಕಾಗ ಪ್ರಕಟಗೊಳ್ಳುತ್ತದೆ. ಹೆಣ್ಣನ್ನು ಸರಕಿನಂತೆ ಭಾವಿಸುವ ಗಂಡು ಮನಃಸ್ಥಿತಿಗೆ ಜಾತಿ ಶ್ರೇಷ್ಠತೆಯ ಗೀಳೂ ಜತೆಯಾದಲ್ಲಿ ಸಂತ್ರಸ್ತ ಹೆಣ್ಣಿನ ಸ್ಥಿತಿ ಮತ್ತಷ್ಟು ಘೋರವಾಗಿರುತ್ತದೆ. ಮಹಿಳೆಯರ ಮೇಲೆ ದೌರ್ಜನ್ಯವೆಸಗಿದ ತಪ್ಪಿತಸ್ಥರಿಗೆ ಶಿಕ್ಷೆಯಾಗುವಂತೆ ನೋಡಿಕೊಳ್ಳುವಷ್ಟಕ್ಕೆ ಸರಕಾರದ ಹೊಣೆಗಾರಿಕೆ ಮುಗಿಯುವುದಿಲ್ಲ. ಹೆಣ್ಣನ್ನು ಅವಮಾನಗೊಳಿಸುವ ಪ್ರತಿಯೊಂದು ಕೃತ್ಯವೂ ಲಿಂಗಸಮಾನತೆಯನ್ನು ಜಾರಿಗೆ ತರುವ ಪ್ರಯತ್ನಕ್ಕೆ ಎದುರಾಗುವ ಹಿನ್ನಡೆ ಎಂದೇ ಭಾವಿಸಬೇಕು. ಅಂತಹ ಕೃತ್ಯಗಳಿಗೆ ಅವಕಾಶವಿಲ್ಲದಂತೆ ಸಮಾಜ, ಶಿಕ್ಷಣವನ್ನು ಮಾನವೀಯಗೊಳಿಸುವ ಪ್ರಯತ್ನ ನಡೆಯಬೇಕು.