Saturday, 14th December 2024

ಅಪ್ರಬುದ್ಧರಾಗಿ ವರ್ತಿಸಿದ ಸಂಸದರು

ಸಂಸತ್ತಿನ ಹೊರಗಿನ ದಾಳಿಯನ್ನಾದರೂ ಎದುರಿಸಿಬಿಡಬಹುದು; ಆದರೆ ಭಾರತದಂಥ ಬೃಹತ್ ಪ್ರಜಾಪ್ರಭುತ್ವದ ದೇಶದಲ್ಲಿ ಯೋಜಿತ ಸಂಸದೀಯ ಅಪರಾಧಗಳು, ಅಗ್ಗದ ಪ್ರಚಾರ ಹಾಗೂ ರಾಜಕೀಯ ಕಾರಣಗಳಿಗಾಗಿ ಉದ್ದೇಶಪೂರ್ವಕವಾಗಿ ನಡೆಸುವ ಆಂತರಿಕ ದಾಳಿಯನ್ನು ಎದುರಿಸುವುದು ಕಷ್ಟ. ಅತ್ತ ಸಂಸತ್‌ನ ಒಳನುಗ್ಗಿ ಗದ್ದಲ ಎಬ್ಬಿಸಿದ ಪ್ರಕರಣ ಹಾಗೂ ಅದರ ಬೆನ್ನಲ್ಲೇ ಒಂದಷ್ಟು ಸಂಸದರ ಅಮಾನತು ಕ್ರಮ ಈಗ ಚರ್ಚೆಗೊಳಗಾಗುತ್ತಿದೆ.

ಸುಗಮ ಕಲಾಪದ ದೃಷ್ಟಿಯಿಂದ, ಸದಸ್ಯರು ಸಮತೋಲನ ಸಾಧಿಸುವಲ್ಲಿ ವಿಫಲರಾಗಿರುವುದರಿಂದ, ಸಂಸತ್ತಿನ ಕಾರ್ಯವಿಧಾನ ಮತ್ತು ನಡವಳಿಕೆಯ ನಿಯಮ ೩೭೩, ೩೭೪ ಹಾಗೂ ೩೭೪ ಅ ಅಡಿಯಲ್ಲಿ ಸ್ಪೀಕರ್ ತಮಗಿರುವ ಅಧಿಕಾರ ಬಳಸಿ ಅಮಾನತು ಅಸ್ತ್ರ ಪ್ರಯೋಗಿಸಿರುವುದು ಸಮರ್ಥನೀಯ ವಾಗಿದ್ದರೂ, ಸರಕಾರದ ವಿರುದ್ಧ ದನಿಯೆತ್ತಿದ ಕಾರಣಕ್ಕೆ ಒಮ್ಮೆಲೇ ಇಷ್ಟೊಂದು ಸದಸ್ಯರನ್ನು ಅಮಾನತುಗೊಳಿಸಿರುವುದು ಪ್ರಶ್ನಾರ್ಹವೆನಿಸಿದೆ. ಇಲ್ಲಿ ಮತ್ತೊಂದು ಅಂಶವನ್ನೂ ಗಮನಿಸಬೇಕು.

ಸರಕಾರವು ಒಂದೊಮ್ಮೆ ಎಡವಿದಲ್ಲಿ ಕಿವಿ ಹಿಂಡಿ ಅದನ್ನು ಸರಿದಾರಿಯಲ್ಲಿ ಮುನ್ನಡೆಸಬೇಕಿರುವ ಪ್ರತಿಪಕ್ಷಗಳೇ ಅನಗತ್ಯ ಗೊಂದಲ ಸೃಷ್ಟಿಸಿದರೆ, ಅದರ ದುಷ್ಪರಿಣಾಮ ಊಹೆಗೂ ಮೀರಿದ್ದು. ದುಷ್ಕರ್ಮಿಗಳ ‘ಹೊಗೆ ಕೃತ್ಯ’ವನ್ನೇ ಮುಂದಿಟ್ಟುಕೊಂಡು ಪ್ರಧಾನಿ ಹಾಗೂ ಗೃಹಸಚಿವರ ಹೇಳಿಕೆಗೆ ಒತ್ತಾಯಿಸಿ, ಕಾಂಗ್ರೆಸ್ ಸೇರಿದಂತೆ ಪ್ರತಿಪಕ್ಷಗಳು ನಡೆಸುತ್ತಿರುವ ಗದ್ದಲ ಯೋಜಿತ ಅಡ್ಡಿಯೆನಿಸುತ್ತಿದೆ. ಅದಿಲ್ಲದಿದ್ದರೆ ಸ್ಪೀಕರ್ ಓಂ ಬಿರ್ಲಾ ಸ್ವತಃ ಪೀಠ ದಲ್ಲಿ ಕುಳಿತು, ಘಟನೆಯ ಸಂಪೂರ್ಣ ಜವಾಬ್ದಾರಿ ತಮ್ಮದಾಗಿದ್ದು, ಈ ಸಂಬಂಧ ಪ್ರಧಾನಿಯಾಗಲೀ, ಸಚಿವರಾಗಲೀ ಹೇಳಿಕೆ ನೀಡುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದ ಬಳಿಕವೂ ಕಲಾಪಕ್ಕೆ ಸಂಸದರು ಅಡ್ಡಿಮಾಡುವುದು ಅನುಚಿತವಾಗುತ್ತದೆ.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಂಸದರಿಗೆ ತಮ್ಮ ಅಭಿಪ್ರಾಯ ಮಂಡಿಸುವ ಹಕ್ಕಿದೆ. ಆದರೆ, ಸನ್ನಿವೇಶದ ಔಚಿತ್ಯವನ್ನೂ ಅವರು ಅರಿಯದಿದ್ದಲ್ಲಿ ಅದು
ಮಕ್ಕಳಾಟಿಕೆಯಾಗುತ್ತದೆ. ಹೀಗಾಗಿ, ಅನ್ಯಕಾರಣವಿಲ್ಲದೆ ಸಂಸದರು ಇಂಥ ವರ್ತನೆಗಿಳಿದಾಗ ಸುಗಮ ಕಲಾಪದ ದೃಷ್ಟಿಯಿಂದ ಅಮಾನತು ಬಿಟ್ಟು ಬೇರೆ ದಾರಿಯಿಲ್ಲ. ಪ್ರಸಕ್ತ ಸರಕಾರದ ಅವಧಿಯ ಕೊನೆ ಅಧಿವೇಶನದಲ್ಲಾದರೂ ಸಂಸದರು ಗಾಂಭೀರ್ಯ ಅರಿಯಬೇಕಿತ್ತು.