Saturday, 14th December 2024

ಭಯಪಡಿಸಬೇಡಿ, ಪ್ರೋತ್ಸಾಹಿಸಿ

ವಿದ್ಯಾರ್ಥಿಗಳಿಗೆ ಶಾಲಾಪಠ್ಯದಲ್ಲಿರುವ ಪಾಠಗಳನ್ನು ಬೋಧಿಸುವುದರ ಜತೆಜತೆಗೆ ನೈಜ ಅನುಭವಗಳಿಗೆ ಒಡ್ಡಿಕೊಳ್ಳುವುದಕ್ಕೆ ಅವರಿಗೆ ಅನುವು ಮಾಡಿ ಕೊಡಬೇಕಾದ್ದು ಅತ್ಯಗತ್ಯ. ಅವರನ್ನು ವಿವಿಧ ವಿಷಯಗಳಲ್ಲಿ ಹೆಚ್ಚೆಚ್ಚು ಸಕ್ರಿಯಗೊಳಿಸಿ ಪಠ್ಯೇತರ ಚಟುವಟಿಕೆಗಳಲ್ಲಿ ಆಸಕ್ತಿ ತಳೆಯುವಂತೆ ಪ್ರೇರೇಪಿಸುವ ಹಾಗೂ ಹೊರಲೋಕದ ಪರಿಚಯ ಮಾಡಿಸುವ ದೃಷ್ಟಿಯಿಂದ ಬಹುತೇಕ ಶಾಲೆಗಳಲ್ಲಿ ನವೆಂಬರ್ ಮತ್ತು ಡಿಸೆಂಬರ್ ಮಾಹೆಯಲ್ಲಿ ಶೈಕ್ಷಣಿಕ ಪ್ರವಾಸಗಳನ್ನು ಕೈಗೊಳ್ಳಲಾಗುತ್ತದೆ. ಈ ಪರಿಪಾಠವು ಮಕ್ಕಳಲ್ಲಿ ಮನೋಸ್ಥೈರ್ಯ, ಸಂವಹನ ಕಲೆ, ಆತ್ಮವಿಶ್ವಾಸವನ್ನು ಬೆಳೆಸುವುದರ ಜತೆಗೆ ಅವರ ಸರ್ವಾಂಗೀಣ ಬೆಳವಣಿಗೆಗೆ ಮಹತ್ತರ ಕೊಡುಗೆ ನೀಡುತ್ತದೆ.

‘ದೇಶ ಸುತ್ತಿನೋಡು, ಕೋಶ ಓದಿನೋಡು’ ಎಂಬುದು ಬಲ್ಲವರ ಮಾತು. ವಿದ್ಯಾರ್ಥಿಗಳ ಜ್ಞಾನದ ಪರಿಧಿ ವಿಸ್ತಾರಗೊಳ್ಳಲು ಈ ಮಾತಿನ ಅನುಸರಣೆ ಬಹಳ ಮುಖ್ಯ. ಆದರೆ ಪ್ರವಾಸದ ವಿಷಯದಲ್ಲಿ ಕೆಲವೊಂದು ಮಕ್ಕಳಲ್ಲಿ ಕಂಡುಬರುವ ಭಯ ಹಾಗೂ ಪಾಲಕರಲ್ಲಿನ ಆಸಕ್ತಿಯ ಕೊರತೆಯಿಂದಾಗಿ ಈ ಮಾತಿನ ಅನುಸರಣೆಗೆ ಹಿನ್ನಡೆ ಒದಗುತ್ತದೆ ಎನ್ನಬೇಕು. ಆರಂಭದಲ್ಲಿ ಮಕ್ಕಳಿಗೆ ಇಂಥ ಭಯ ಇರುವುದು ಸಹಜ ಎಂಬ ಮಾತನ್ನು ಒಪ್ಪೋಣ; ಆದರೆ ಪೋಷಕರು ಕೂಡ ಮಕ್ಕಳ ಪ್ರವಾಸದ ವಿಷಯದಲ್ಲಿ ನಿರಾಸಕ್ತಿ ತೋರಿದರೆ ಹೇಗೆ? ಮಕ್ಕಳಿಗೆ ಅವರ ವಿದ್ಯಾರ್ಥಿ ಜೀವನದ ಪ್ರತಿ ಹಂತದಲ್ಲೂ ಪ್ರೋತ್ಸಾಹಿಸಿ, ಧೈರ್ಯ ತುಂಬಿ, ಮುನ್ನುಗ್ಗಲು ಪ್ರೇರೇಪಿಸಬೇಕಾದವರೇ ಪೋಷಕರಲ್ಲವೇ? ಈ ನಿಟ್ಟಿನಲ್ಲಿ ಪೋಷಕರು ಟೊಂಕ ಕಟ್ಟಿದರೆ, ಮಕ್ಕಳ ದೈಹಿಕ ಮತ್ತು ಬೌದ್ಧಿಕ ವಿಕಾಸಕ್ಕೆ ಅದು ಇಂಬುಕೊಡುವುದರಲ್ಲಿ ಎರಡು ಮಾತಿಲ್ಲ.

ಸ್ವತಃ ಪಾಲಕರೇ ಹೀಗೆ ಆಸಕ್ತಿ ತೋರಿಸಿ ಧೈರ್ಯ ತುಂಬಿದರೆ ಮಕ್ಕಳು ಎದೆಗುಂದುವುದಿಲ್ಲ. ಆದರೆ ಅವರನ್ನು ಶಾಲಾ ಪ್ರವಾಸಕ್ಕೆ ಕಳಿಸಲು ತೀರ್ಮಾನಿಸಿದ ಮೇಲೆ, ‘ಶಿಕ್ಷಕರಿಗೆ ಹೇಳದೇ ಎಲ್ಲಿಗೂ ಹೋಗಬೇಡ, ಅವರು ನೀಡುವ ಸಲಹೆ-ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು; ಸ್ಥಳಗಳ ವೀಕ್ಷಣೆಯ ವೇಳೆ ಅಪರಿಚಿತರು ಕರೆದರೆ ಹೋಗದೆ ಸದಾ ನಿನ್ನ ಸ್ನೇಹಿತರ ಗುಂಪಿನಲ್ಲೇ ಇರಬೇಕು’ ಎಂಬೆಲ್ಲಾ ಸೂಚನೆಗಳನ್ನು ಪಾಲಕರು ಮಕ್ಕಳಿಗೆ ನೀಡಬೇಕಾದ್ದು ಅಗತ್ಯ. ಜತೆಗೆ, ನವೆಂಬರ್-ಡಿಸೆಂಬರ್ ತಿಂಗಳು ಚಳಿಗಾಲವಾದ್ದರಿಂದ, ದೇಹವನ್ನು ಬೆಚ್ಚಗಿರಿಸುವಂಥ ಸ್ವೆಟರ್, ಟೋಪಿ ಇತ್ಯಾದಿಗಳನ್ನು ಮಕ್ಕಳಿಗೆ ಒದಗಿಸಬೇಕು.

ಪ್ರತಿನಿತ್ಯ ಶಾಲೆಯಲ್ಲಿ, ಅದು ಬಿಟ್ಟಾಗ ಮನೆಯಲ್ಲಿ ಹೆಚ್ಚಾಗಿ ಇದ್ದುಕೊಂಡು ಮನೆಯೂಟಮಾಡಿ ಕಾಲದೂಡುತ್ತಿದ್ದ ಮಕ್ಕಳು ಪ್ರವಾಸದ ನಿಮಿತ್ತವಾಗಿ
ಹೊರಬಂದಾಗ, ಕಣ್ಣಿಗೆ ಕಾಣುವ ತಿಂಡಿ-ತಿನಿಸುಗಳನ್ನು ತಿನ್ನಲು ಹಂಬಲಿಸುವುದು ಸಹಜ. ಇಂಥ ಬಾಯಿಚಪಲಕ್ಕೆ ಸಿಲುಕಿ ಸಿಕ್ಕಿದ್ದನ್ನೆಲ್ಲಾ ತಿಂದಾಗ ಮಕ್ಕಳು ವಾಂತಿ-ಬೇಧಿಯಂಥ ಸಮಸ್ಯೆಗಳಿಗೆ ಈಡಾಗುವ ಸಾಧ್ಯತೆ ಇರುತ್ತದೆ. ಆದ್ದರಿಂದ ಪರಸ್ಥಳಕ್ಕೆ ತೆರಳಿದಾಗ, ಬಹಳ ದಿನಗಳ ಹಿಂದೆ ಮಾಡಿಟ್ಟ ಅಥವಾ ಎಣ್ಣೆಯಲ್ಲಿ ಕರಿದ ತಿನಿಸುಗಳನ್ನು ತಿನ್ನದಂತೆ ಮಕ್ಕಳಿಗೆ ಪಾಲಕರು ಕಟ್ಟುನಿಟ್ಟಿನ ಸೂಚನೆ ನೀಡಬೇಕು.

ಪ್ರವಾಸಕ್ಕೆ ತೆರಳಿದಾಗ ತುರ್ತು ಸಂದರ್ಭ ಎದುರಾದರೆ ಯಾರನ್ನು-ಹೇಗೆ-ಎಂಥ ವಿಷಯಗಳಿಗೆ ಸಂಪರ್ಕಿಸಬೇಕು ಎಂಬಿತ್ಯಾದಿ ಸೂಕ್ಷ್ಮಗಳನ್ನೂ ಮಕ್ಕಳಿಗೆ ತಿಳಿಹೇಳಬೇಕು. ಜತೆಗೆ ಕುಟುಂಬದ ಸದಸ್ಯರೊಬ್ಬರ ಹಾಗೂ ಪ್ರವಾಸಕ್ಕೆ ಜತೆಯಾಗಿರುವ ಶಿಕ್ಷಕರ -ನ್ ನಂಬರ್‌ಗಳನ್ನು ಇಟ್ಟುಕೊಂಡಿರುವಂತೆ ಅವರಿಗೆ
ಸೂಚಿಸಬೇಕು. ಮಕ್ಕಳನ್ನು ಪ್ರವಾಸಕ್ಕೆ ಕಳಿಸಿದ ನಂತರವೂ ಪಾಲಕರು ಆಯಾ ಸಹವರ್ತಿ ಶಿಕ್ಷಕರ ಜತೆಗೆ ನಿರಂತರ ಸಂಪರ್ಕದಲ್ಲಿರಬೇಕು. ಮಕ್ಕಳನ್ನೂ ಆಗಾಗ ಫೋನ್‌ನಲ್ಲಿ ಸಂಪರ್ಕಿಸಿ, ‘ಯಾವೆಲ್ಲಾ ಸ್ಥಳವನ್ನು ನೋಡಿದೆ? ಅದರ ವಿಶೇಷವೇನು? ಮುಂದೆ ಎಲ್ಲಿಗೆ ಹೋಗುತ್ತಿರುವೆ?’ ಮುಂತಾಗಿ ಪ್ರಶ್ನಿಸಿ ಆರೋಗ್ಯವನ್ನೂ ವಿಚಾರಿಸಿಕೊಳ್ಳುತ್ತಾ ಅವರಲ್ಲಿ ಹುರುಪು ತುಂಬುತ್ತಿರಬೇಕು.

ಮೊದಲ ಬಾರಿಗೆ ಪ್ರವಾಸಕ್ಕೆಂದು ತೆರಳಿದ ಮಕ್ಕಳಿಗೆ ಸಣ್ಣ ಮಟ್ಟದಲ್ಲಿ ಸುಸ್ತು, ವಾಂತಿ ಇತ್ಯಾದಿ ಸಮಸ್ಯೆಗಳು ಒದಗಬಹುದು, ಈ ವಿಷಯ ತಿಳಿದ ಪಾಲಕರು ಗಾಬರಿಗೊಳ್ಳಬಾರದು. ಮಕ್ಕಳೊಂದಿಗೆ ತೆರಳಿದ ಶಿಕ್ಷಕರು ಸೂಕ್ತ ಮಾತ್ರೆ/ಔಷಽಗಳನ್ನು ಜತೆಗಿಟ್ಟುಕೊಂಡಿರುತ್ತಾರೆ ಎಂಬುದನ್ನು ಪಾಲಕರು ಮರೆಯಬಾರದು. ಇಲ್ಲಿ ನೀಡಿರುವ ಸೂಚನೆಗಳು ಮಕ್ಕಳ ಪೋಷಕರಿಗೆ ಗೊತ್ತಿಲ್ಲದವು ಎಂದೇನಲ್ಲ; ಆದರೂ ಮತ್ತೊಮ್ಮೆ ನೆನಪಿಸಲೆಂದೇ ಈ ಪುಟ್ಟಬರಹ, ಅಷ್ಟೇ.

(ಲೇಖಕರು ಹವ್ಯಾಸಿ ಬರಹಗಾರರು)