ವೀಕೆಂಡ್ ವಿತ್ ಮೋಹನ್
೧೮೫೭ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮಂಗಲ್ ಪಾಂಡೆ, ಝಾನ್ಸಿ ರಾಣಿ ಲಕ್ಷ್ಮೀಬಾಯಿ, ಖಾನ್ ಬಹಾದುರ್, ನಾನಾ ಸಾಹೇಬ್, ತಾಂತ್ಯಾ ಟೋಪೆ ಯಂಥ ಘಟಾನುಘಟಿ ಕ್ರಾಂತಿಕಾರಿಗಳು ಬ್ರಿಟಿಷರು ಊಹಿಸದ ರೀತಿಯಲ್ಲಿ ಈಸ್ಟ್ ಇಂಡಿಯಾ ಕಂಪನಿಯ ದಬ್ಬಾಳಿಕೆಯ ವಿರುದ್ಧ ತಿರುಗಿಬಿದ್ದಿದ್ದರು. ಬ್ರಿಟಿಷರು ಈ
ಸಂಗ್ರಾಮವನ್ನು ‘ಸಿಪಾಯಿ ದಂಗೆ’ ಎಂದು ಕರೆಯುವ ಮೂಲಕ ತಮ್ಮ ಅಸಮರ್ಥತೆಯನ್ನು ಮುಚ್ಚಿಹಾಕಲು ಯತ್ನಿಸಿದ್ದರು.
ಭಾರತೀಯ ಸೈನಿಕರು ಬ್ರಿಟಿಷರ ವಿರುದ್ಧ ಸುಖಾಸುಮ್ಮನೆ ತಿರುಗಿಬಿದ್ದರೆಂಬಂತೆ ಲಂಡನ್ನಿನ ಸಾರ್ವಜನಿಕರ ಮನಸ್ಸಿನಲ್ಲಿ ಬಿಂಬಿಸಿದ್ದರು. ಅಲ್ಲಿ ಬೀದಿನಾಟಕ ಗಳನ್ನು ಪ್ರದರ್ಶಿಸುವ ಮೂಲಕ ಭಾರತೀಯ ಕ್ರಾಂತಿಕಾರರನ್ನು ದಂಗೆಕೋರರಂತೆ ಬಿಂಬಿಸಿದ್ದರು. ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ಪರಿಣಾಮ ಎಷ್ಟಿತ್ತೆಂ
ದರೆ, ‘ಕ್ರಾಂತಿಕಾರಿಗಳನ್ನು ಕಟ್ಟಿಹಾಕದಿದ್ದರೆ ಬ್ರಿಟಿಷರಿಗೆ ಭಾರತ ದಲ್ಲಿ ಉಳಿಗಾಲವಿಲ್ಲ’ ಎಂಬ ಸತ್ಯವು ಲಂಡನ್ನಿನ ರಾಣಿಗೆ ಮನವರಿಕೆಯಾಗಿತ್ತು. ಹೀಗಾಗಿ ಸಂಗ್ರಾಮವನ್ನು ತಿಳಿಗೊಳಿ ಸಲು ಬ್ರಿಟಿಷರು ಸನ್ನದ್ಧರಾದರು.
ತಮ್ಮ ಅಧಿಕಾರಿ ವರ್ಗವನ್ನು ಕ್ಷಿಪ್ರವಾಗಿ ಒಂದೆಡೆ ಸೇರಿಸಿ, ನೂತನ ಆಡಳಿತ ವ್ಯವಸ್ಥೆಗ ಮೂಲಕ ಭಾರತೀಯರನ್ನು ಒಡೆಯಲು ಸನ್ನದ್ಧರಾದರು. ಸಂಗ್ರಾಮದ ಕ್ರಾಂತಿಕಾರಿಗಳು ಬ್ರಿಟಿಷರ ಈಸ್ಟ್ ಇಂಡಿಯಾ ಕಂಪನಿಯ ಆಡಳಿತವನ್ನು ತೀವ್ರವಾಗಿ ವಿರೋಧಿಸಿ, ಅದರ ಆಡಳಿತವನ್ನು ಕಾನೂನಾತ್ಮಕವಾಗಿ ಪ್ರಶ್ನಿಸ ತೊಡಗಿದ್ದರು. ಪರಿಣಾಮ, ಬ್ರಿಟಿಷರ ಆಡಳಿತ ವ್ಯವಸ್ಥೆಯು ಈಸ್ಟ್ ಇಂಡಿಯಾ ಕಂಪನಿಯಿಂದ ಬ್ರಿಟನ್ನಿನ ರಾಜಮನೆತನಕ್ಕೆ ನೇರವಾಗಿ ವರ್ಗಾಯಿಸಲ್ಪಟ್ಟಿತು. ೧೮೫೭ರ ಸಂಗ್ರಾಮದ ಮುನ್ನ ಬ್ರಿಟಿಷ್ ಅಧಿಕಾರಿಗಳು ಭಾರತದಲ್ಲಿನ ತಮ್ಮ ಆಡಳಿತದಲ್ಲಿ ತರಲು ಇಚ್ಛಿಸಿದ್ದಂಥ ಕಾನೂನಾತ್ಮಕ ಸುಧಾರಣೆಗಳನ್ನು ವಿರೋಧಿ
ಸಿದ್ದರು. ಆದರೆ ಸ್ವಾತಂತ್ರ್ಯ ಸಂಗ್ರಾಮದ ನಂತರ ಭಯದಲ್ಲಿದ್ದ ಬ್ರಿಟಿಷ್ ಅಧಿಕಾರಿಗಳಿಗೆ ಕಾನೂನಾತ್ಮಕ ಸುಧಾರಣೆಗಳ ಅವಶ್ಯ ಕತೆಯಿದೆ ಎನಿಸಿತ್ತು.
ಭಾರತೀಯ ಸಂಸ್ಕೃತಿಯ ಮೇಲೆ ದಾಳಿಮಾಡಿ ಬ್ರಿಟಿಷ್ ಶಿಕ್ಷಣ ಪದ್ಧತಿಯನ್ನು ಹೇರಿದ್ದ ಮೆಕಾಲೆಯು, ೧೮೩೩ರಲ್ಲಿ ಭಾರತದಲ್ಲಿ ಕಾನೂನಾತ್ಮಕ ಸುಧಾರಣೆ
ಗಳನ್ನು ಜಾರಿಗೆ ತರಲು ಸ್ಥಾಪಿಸಲಾಗಿದ್ದ ಕಾನೂನು ಆಯೋಗದ ಅಧ್ಯಕ್ಷನಾಗಿದ್ದ. ವಸಾಹತುಶಾಹಿ ಬ್ರಿಟಿಷರ ಸಾಮ್ರಾಜ್ಯ ವಿಸ್ತರಣೆಯಾಗುತ್ತಿದ್ದಂತೆ, ಅವರ ಅಗತ್ಯಕ್ಕೆ ತಕ್ಕಂತೆ ಭಾರತದಲ್ಲಿ ಕಾನೂನುಗಳು ಬೇಕಿದ್ದವು. ಅಂದರೆ, ಭಾರತೀಯ ಸಂಸ್ಕೃತಿಯನ್ನು ಬದಿಗೊತ್ತಿ ಬ್ರಿಟಿಷರ ಸಂಸ್ಕೃತಿಯನ್ನು ಹೇರುವುದಕ್ಕೆ
ಹೊಂದಿಕೊಳ್ಳುವ ಕಾನೂನಿನ ವ್ಯವಸ್ಥೆಯೊಂದು ಅವರಿಗೆ ಬೇಕಿತ್ತು.
೧೮೫೭ರ ಸಂಗ್ರಾಮದ ಕ್ರಾಂತಿಕಾರಿಗಳ ದಮನಕ್ಕೆ ಮೆಕಾಲೆ ನೇತೃತ್ವದಲ್ಲಿ ‘ಇಂಡಿಯನ್ ಪೀನಲ್ ಕೋಡ್-೧೮೬೨’ ಜಾರಿಗೆ ಬಂತು. ಬ್ರಿಟಿಷರು ಭಾರತವನ್ನು ಬಿಟ್ಟು ತೊಲಗಿದ ನಂತರವೂ ಅವರ ಈ ಕಾನೂನು ೭೫ ವರ್ಷಗಳ ಕಾಲ ಜಾರಿಯಲ್ಲಿತ್ತು. ಇದು ಜಗತ್ತಿನಲ್ಲಿ ಅತಿಹೆಚ್ಚು ವರ್ಷಗಳ ಕಾಲ ಜಾರಿಯಲ್ಲಿದ್ದ ಸಂಹಿತೆ ಯಾಗಿತ್ತು. ಬ್ರಿಟಿಷ್ ಆಡಳಿತದ ವಿರುದ್ಧ ದನಿಯೆತ್ತಿದ ವರನ್ನು ರಾಜದ್ರೋಹದ ಆರೋಪದಡಿ ಬಂಧಿಸಿ ಜೈಲಿಗಟ್ಟುವ ಮೂಲೋದ್ದೇಶದೊಂದಿಗೆ ಈ ಸಂಹಿತೆಯ ರಚನೆಯಾಗಿತ್ತು. ಅಂದರೆ ಬ್ರಿಟಿಷರ ವಿರುದ್ಧ ಮಾತಾಡುವವರ ಮೂಲಭೂತ ಹಕ್ಕುಗಳನ್ನು ಇದು ಕಸಿದುಕೊಂಡಿತ್ತು. ಹೀಗೆ ಮಾತಾಡಿದವರನ್ನು ರಾಜದ್ರೋಹ ದಡಿ ಜೈಲಿಗೆ ಹಾಕಲಾಗುತ್ತಿತ್ತು. ಆದರೆ ಬ್ರಿಟಿಷರು ರೂಪಿಸಿದ್ದ ರಾಜದ್ರೋಹದ ಕಾನೂನುಗಳು ಭಾರತದಲ್ಲಿ ಪ್ರಜಾಪ್ರಭುತ್ವ ಜಾರಿಗೆ ಬಂದ ನಂತರವೂ ಇಷ್ಟು ವರ್ಷ ಮುಂದುವರಿದಿದ್ದು ವಿಪರ್ಯಾಸವೇ ಸರಿ.
ಸ್ವಾತಂತ್ರ್ಯಾನಂತರದಲ್ಲಿ, ಸರಕಾರದ ವಿರುದ್ಧ ಮಾತನಾಡಿದ ಹಲವರು ಈ ‘ರಾಜದ್ರೋಹ ಕಾನೂನಿನಡಿ’ ಜೈಲಿಗೆ ಹೋದದ್ದಿದೆ, ತುರ್ತು ಪರಿಸ್ಥಿತಿಯ ಸಂದರ್ಭ ದಲ್ಲಿ ಹಲವು ಹೋರಾಟಗಾರರ ಬಂಧನವಾದದ್ದಿದೆ. ಸರಕಾರದ ವಿರುದ್ಧ ಮಾತನಾಡುವುದಕ್ಕೂ, ದೇಶದ ವಿರುದ್ಧ ಮಾತನಾಡುವುದಕ್ಕೂ ಬಹಳ ವ್ಯತ್ಯಾಸವಿದೆ. ಭಾರತದಲ್ಲಿದ್ದ ಬ್ರಿಟಿಷರ ಕಾಲದ, ೧೬೧ ವರ್ಷಗಳಷ್ಟು ಹಳೆಯ ಕಾನೂನಿಗೆ ಈಗ ಮುಕ್ತಿ ಸಿಕ್ಕಿದೆ. ಇಂಡಿಯನ್ ಪೀನಲ್ ಕೋಡ್ ಜಾಗದಲ್ಲಿ ‘ಭಾರತೀಯ ನ್ಯಾಯ ಸಂಹಿತೆ’, ಕೋಡ್ ಆಫ್ ಕ್ರಿಮಿನಲ್ ಪ್ರೊಸೀಜರ್ ಜಾಗದಲ್ಲಿ ‘ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ’, ಇಂಡಿಯನ್ ಎವಿಡೆನ್ಸ್ ಆಕ್ಟ್ ಜಾಗದಲ್ಲಿ ‘ಭಾರತೀಯ ಸಾಕ್ಷ್ಯ ಅಽನಿಯಮ’ ನೂತನವಾಗಿ ಪ್ರಸ್ತಾಪಿಸಲ್ಪಟ್ಟಿವೆ. ಭಾರತಕ್ಕೆ ತಾವು ಬಳುವಳಿಯಾಗಿ ನೀಡಿಹೋಗಿದ್ದ ರಾಜದ್ರೋಹದ ಕಾನೂನನ್ನು ಸ್ವತಃ ಬ್ರಿಟಿಷರೇ ತಮ್ಮ ದೇಶದಲ್ಲಿ ಕಿತ್ತುಹಾಕಿ ದಶಕಗಳು ಕಳೆದಿವೆ. ವಲಸಿಗರಿಗೆ ಮಾತ್ರ ಈ ಕಾನೂನು ಅನ್ವಯವಾಗುವಂತೆ ಅವರು ಮಾಡಿಕೊಂಡಿದ್ದಾರೆ.
ಅಮೆರಿಕ ತನ್ನ ಸಂವಿಧಾನದಲ್ಲಿ ಇಂಥ ಕಾನೂನಿಗೆ ಅವಕಾಶವನ್ನು ನಿಷೇಧಿಸಿದೆ. ಆದರೆ ಭಾರತದಲ್ಲಿ ಮಾತ್ರ ಸ್ವಾತಂತ್ರ್ಯಾ ನಂತರದ ೭೫ ವರ್ಷಗಳ ನಂತರವೂ ಈ ಕಾನೂನು ಜಾರಿಯ ಲ್ಲಿತ್ತು. ನೂತನ ವಿಧೇಯಕದಲ್ಲಿ ರಾಜದ್ರೋಹವನ್ನು ‘ದೇಶ ದ್ರೋಹ’ಕ್ಕೆ ಬದಲಾಯಿಸಿದ್ದು, ಸರಕಾರವನ್ನು ಪ್ರಶ್ನಿಸುವ
ಸಂಪೂರ್ಣ ಹಕ್ಕನ್ನು ನಾಗರಿಕರಿಗೆ ನೀಡಲಾಗಿದೆ. ಆದರೆ ಭಾರತದ ಸಾರ್ವಭೌಮತ್ವಕ್ಕೆ ಧಕ್ಕೆ ತರುವಂಥ ಹೇಳಿಕೆಗಳನ್ನು ಸಹಿಸಲಾಗುವುದಿಲ್ಲ; ಅಂಥ ಹೇಳಿಕೆಗಳನ್ನು ದೇಶದ್ರೋಹದ ಕಾನೂನಿನಡಿ ತರಲಾಗಿದೆ. ಮೂಲಭೂತ ಹಕ್ಕಿನ ಹೆಸರು ಹೇಳಿ ಕೊಂಡು, ಭಾರತದ ಸಾರ್ವಭೌಮತ್ವಕ್ಕೆ ಧಕ್ಕೆ ತರುವಂಥ
ಹೇಳಿಕೆಗಳನ್ನು ಬಹಿರಂಗವಾಗಿ ನೀಡುತ್ತಿದ್ದ ಎಡಚರ ಬೆಂಬಲಿ ಗರ ಸೊಕ್ಕು ಇನ್ನು ಮುಂದೆ ಅಡಗಲಿದೆ.
ಬ್ರಿಟಿಷರ ಕಾಲದ ಕಾನೂನುಗಳನ್ನು ವರ್ತಮಾನಕ್ಕೆ ಅನುಗುಣವಾಗಿ ಬದಲಿಸುವ ಅಗತ್ಯವಿತ್ತು. ಕಾರಣ ಅವು ಅವರ ಗುಲಾಮಿ ಕುರುಹುಗಳನ್ನು ಹೊಂದಿದ್ದವು. ತಂತ್ರಜ್ಞಾನ ಕ್ಕನುಗುಣವಾಗಿ ಜಗತ್ತು ಬದಲಾದಂತೆ, ನೂತನ ವಿಷಯ ಗಳನ್ನು ಕಾನೂನುಗಳಲ್ಲಿ ಅಳವಡಿಸುವ ಅವಶ್ಯಕತೆಯಿತ್ತು. ಕಾಗದದ ದಾಖಲೆಗಳ ಮೂಲಕ ವ್ಯವಹರಿಸುವ ಕಾಲ ಮುಗಿಯುತ್ತ ಬಂದಿದೆ. ನೂತನ ಅಪರಾಧ ಕಾನೂನುಗಳಲ್ಲಿ ಡಿಜಿಟಲ್ ದಾಖಲೆಗಳು, ಗಣಕ ಯಂತ್ರಗಳು, ಇ-ಮೇಲ್, ಮೊಬೈಲ್ ಫೋನ್, ಜಿಪಿಎಸ್‌ನಂಥ ತಂತ್ರಜ್ಞಾನ ಆಧರಿತ ಪುರಾವೆಗಳನ್ನು ಸೇರಿಸುವ ಅಗತ್ಯವಿತ್ತು.
ನೂತನ ವಿಧೇಯಕದಲ್ಲಿ ಅಪರಾಧ ಪ್ರಕರಣಗಳ ಸಂಪೂರ್ಣ ಪ್ರಕ್ರಿಯೆಯನ್ನು ಡಿಜಿಟಲೀಕರಣಗೊಳಿಸಲಾಗಿದೆ. ಪ್ರಥಮ ಮಾಹಿತಿ ವರದಿ ಯಿಂದ ಶುರುವಾಗಿ ನ್ಯಾಯಾಲಯದ ತೀರ್ಪಿನವರೆಗೂ ಸಂಪೂರ್ಣ ಡಿಜಿಟಲೀಕರಣಗೊಳಿಸಲಾಗಿದೆ. ವಿಚಾರಣೆಯ ನೆಪದಲ್ಲಿ ಪೊಲೀಸರು ನಾಗರಿಕರಿಗೆ ನೀಡಬಹುದಾದ ಹಿಂಸೆ
ಯಿಂದ ರಕ್ಷಿಸಲು, ಪೊಲೀಸರ ವಿಚಾರಣೆಯ ಸಂಪೂರ್ಣ ವಿಡಿಯೋ ಚಿತ್ರೀಕರಣ ಮಾಡಬೇಕಾಗಿದೆ. ವಿಡಿಯೋ ಸಾಕ್ಷಿಯಿಲ್ಲದೆ ಪೊಲೀಸರು ವ್ಯಕ್ತಿಯೊಬ್ಬನ ಮೇಲೆ ಚಾರ್ಜ್ ಶೀಟ್ ಸಲ್ಲಿಸುವಂತಿರುವುದಿಲ್ಲ. ನರೇಂದ್ರ ಮೋದಿಯವರು ಅಧಿಕಾರಕ್ಕೆ ಬಂದ ನಂತರ ‘ಫಾರೆನ್ಸಿಕ್ ವಿಶ್ವವಿದ್ಯಾಲಯ’ವನ್ನು ಸ್ಥಾಪಿಸಿದ್ದರು. ಮೂರು ವರ್ಷಗಳ ನಂತರ, ಪ್ರತಿವರ್ಷ ಸುಮಾರು ೩೩,೦೦೦ ಫಾರೆನ್ಸಿಕ್ ವಿಜ್ಞಾನಿಗಳು ಹೊರಬರುತ್ತಾರೆ.
ಕ್ರಿಮಿನಲ್ ಪ್ರಕರಣಗಳಲ್ಲಿ ಫಾರೆನ್ಸಿಕ್ ವಿಜ್ಞಾನ ದೊಡ್ಡ ಪರಿಣಾಮ ಬೀರುತ್ತದೆ. ೭ ವರ್ಷಗಳಿಗಿಂತಲೂ ಹೆಚ್ಚಿನ ಶಿಕ್ಷೆಯ ಪ್ರಮಾಣವಿರುವ ಅಪರಾಧಗಳಿಗೆ ಫಾರೆನ್ಸಿಕ್ ವಿಜ್ಞಾನಿಗಳ ಭೇಟಿಯನ್ನು ನೂತನ ವಿಧೇಯಕದಲ್ಲಿ ಕಡ್ಡಾಯವಾಗಿ ಸಲಾಗಿದೆ. ವೈಜ್ಞಾನಿಕ ಪುರಾವೆಗಳು ಹೆಚ್ಚಾದಂತೆ ಅಪರಾಧಿಗಳು ಕಾನೂನಿನಿಂದ ತಪ್ಪಿಸಿಕೊಳ್ಳುವ ಪ್ರಮಾಣ ಕಡಿಮೆಯಾಗುತ್ತದೆ. ಹೊಸ ವಿಧೇಯಕದ ಮತ್ತೊಂದು ವಿಶೇಷವೆಂದರೆ, ನಾಗರಿಕರು ತಮ್ಮ ವ್ಯಾಪ್ತಿಯ ಪೊಲೀಸ್ ಠಾಣೆಯನ್ನೂ ಮೀರಿ ಇತರೆ ಪೊಲೀಸ್ ಠಾಣೆಯಲ್ಲೂ ದೂರು ನೀಡಬಹುದಾಗಿದೆ.
ಈ ಹಿಂದೆ, ಪ್ರಕರಣ ನಡೆದ ಪೊಲೀಸ್ ಠಾಣೆಯ ವ್ಯಾಪ್ತಿ ಹುಡುಕಿ ದೂರು ನೀಡುವುದೇ ಒಂದು ದೊಡ್ಡ ಕೆಲಸವಾಗಿತ್ತು. ಲೈಂಗಿಕ ಕಿರುಕುಳದ ಪ್ರಕರಣಗಳಲ್ಲಿ ಬಲಿಪಶುವಾದವರ ಹೇಳಿಕೆಗಳನ್ನು ಕಡ್ಡಾಯವಾಗಿ ವಿಡಿಯೋ ಚಿತ್ರೀಕರಣ ಮಾಡಬೇಕಿದೆ. ಈ ಹಿಂದೆ ಅವರ ಹೇಳಿಕೆಗಳನ್ನು ಬರೆದುಕೊಂಡು ಸಹಿ ಹಾಕಿಸಿಕೊಳ್ಳಲಾಗುತ್ತಿತ್ತು. ಸಾರ್ವಜನಿಕರಿಂದ ದೂರು ಬಂದ ೯೦ ದಿನದೊಳಗೆ, ದೂರಿನನ್ವಯ ತೆಗೆದುಕೊಂಡಂಥ ಕ್ರಮಗಳ ಬಗ್ಗೆ ಪೊಲೀಸರು ದೂರುದಾರರಿಗೆ ಮಾಹಿತಿ ನೀಡಬೇಕು. ನಂತರ ಪ್ರತಿ ೧೫ ದಿನಗಳಿಗೊಮ್ಮೆ ದೂರುದಾರರಿಗೆ ತಮ್ಮ ಕ್ರಮದ ಬಗ್ಗೆ ವಿವರಿಸಬೇಕು. ನೂತನ ವಿಧೇಯಕದ
ಮತ್ತೊಂದು ಪ್ರಮುಖಾಂಶವೆಂದರೆ, ೭ ವರ್ಷಕ್ಕೂ ಮೇಲ್ಪಟ್ಟು ಶಿಕ್ಷೆಗೊಳಗಾಗಿರುವವರ ಮೇಲಿನ ಪ್ರಕರಣವನ್ನು ಸರಕಾರಗಳು ವಾಪಸ್ ಪಡೆಯಬೇಕೆಂದರೆ, ಪ್ರಕರಣದಲ್ಲಿ ಬಲಿಪಶುವಾಗಿರುವವರ ಹೇಳಿಕೆಯನ್ನು ಪಡೆಯಲೇಬೇಕು.
ಮೊಬೈಲ್ ಕಳ್ಳತನ, ಮಹಿಳೆಯರ ಚೈನ್ ದೋಚುವಿಕೆ ಇತ್ಯಾದಿಯನ್ನು ಅಪರಾಧವೆಂದು ಮೊಟ್ಟ ಮೊದಲ ಬಾರಿಗೆ ಪರಿಗಣಿಸಿ ನೂತನ ವಿಧೇಯಕದಲ್ಲಿ ವಿಶೇಷವಾಗಿ ಸೇರಿಸಲಾ ಗಿದೆ. ಭಯೋತ್ಪಾದಕತೆಯನ್ನು ವ್ಯಾಖ್ಯಾನಿಸಿ ಅದರ ವ್ಯಾಪ್ತಿ ಯನ್ನು ವಿಸ್ತರಿಸಲಾಗಿದೆ; ಸೈಬರ್ ಮತ್ತು ಆರ್ಥಿಕ ಭಯೋತ್ಪಾದನೆ ಯನ್ನೂ ಸೇರಿಸುವ ಮೂಲಕ, ದೇಶದ ಮೇಲಾಗುವ ತಂತ್ರಜ್ಞಾನ ಆಧರಿತ ದಾಳಿಗಳನ್ನು ನೂತನ ವಿಧೇಯಕದ ವ್ಯಾಪ್ತಿಗೆ ತರಲಾಗಿದೆ. ಹಿಂದಿನ ಕಾನೂನಿನಲ್ಲಿ
ಇವುಗಳ ಬಗ್ಗೆ ನಿರ್ದಿಷ್ಟ ವ್ಯಾಖ್ಯಾನಗಳಿರದ ಕಾರಣ, ಆರೋಪಿಗಳು ಕಾನೂನಿನ ಚೌಕಟ್ಟಿನಿಂದ ತಪ್ಪಿಸಿಕೊಳ್ಳುವ ಸಾಧ್ಯತೆಯಿತ್ತು.
ಕೆಲಸ ಕೊಡುವ ಅಥವಾ ಮದುವೆಯಾಗುವ ಅಥವಾ ಮುಂಬಡ್ತಿಯ ನೆಪದಲ್ಲಿ ಎಸಗುವ ಲೈಂಗಿಕ ಕ್ರಿಯೆಯನ್ನು ಅಪರಾಧೀಕರಣಗೊಳಿಸಲಾಗಿದ್ದು, ೨೦ ವರ್ಷಗಳ ಸಜೆಯನ್ನು ವಿಧಿಸಬಹುದಾಗಿದೆ; ಸಾಮೂಹಿಕ ಅತ್ಯಾಚಾರದ ಪ್ರಕರಣ ಗಳನ್ನು ಜೀವಾವಽ ಶಿಕ್ಷೆಯಡಿ ಸೇರಿಸಲಾಗಿದೆ. ೧೦ ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಶಿಕ್ಷೆ, ಜೀವಾವಧಿ ಮತ್ತು ಮರಣದಂಡನೆ ದೋಷಿಗಳನ್ನು ನೂತನ ವಿಧೇಯಕದಲ್ಲಿ ‘ಘೋಷಿತ ಅಪರಾಧಿಗಳು’ ಎಂದು ಪರಿಗಣಿಸಲಾಗಿದೆ.
ಘೋಷಿತ ಅಪರಾಧಿಗಳ ಭಾರತದಿಂದ ಹೊರಗಿರುವ ಆಸ್ತಿಯ ಜಪ್ತಿಗೆ ಹೊಸ ನಿಬಂಧನೆಯನ್ನು ತರಲಾಗಿದೆ. ಸಂಘಟಿತ ಅಪರಾಧಕ್ಕೆ ಸಂಬಂಧಿಸಿ ಹೊಸ ದಂಡನೆಗಳನ್ನು ಜೋಡಿ ಸಲಾಗಿದೆ. ೧೮ ವರ್ಷಕ್ಕಿಂತಲೂ ಕೆಳಗಿರುವ ಹೆಣ್ಣು ಮಕ್ಕಳ ಮೇಲಾಗುವ ಅತ್ಯಾಚಾರ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸ ಲಾಗಿದ್ದು, ಅಪರಾಽಗಳಿಗೆ ಗಲ್ಲುಶಿಕ್ಷೆ ಅಥವಾ ೭ ವರ್ಷಗಳ ಕನಿಷ್ಠ ಸಜೆಯನ್ನು ವಿಧಿಸಲಾಗುವುದು. ರಾಜಕೀಯ ಕಾರಣಗಳಿಗಾಗಿ ಕೆಲವೊಮ್ಮೆ ಅಪರಾಽಗಳನ್ನು
ಕ್ಷಮಿಸಿ ಸಂಪೂರ್ಣ ದೋಷಮುಕ್ತರನ್ನಾಗಿಸಿದ ಉದಾಹರಣೆ ಗಳಿದ್ದವು. ನೂತನ ವಿಧೇಯಕದಲ್ಲಿ ಇದಕ್ಕೆ ಅವಕಾಶ ನೀಡಿಲ್ಲ; ಕನಿಷ್ಠವೆಂದರೂ ೩ ವರ್ಷಗಳ ಶಿಕ್ಷೆಯನ್ನು ಅಪರಾಧಿಗಳು ಅನುಭವಿಸಲೇಬೇಕಿದೆ.
ಇನ್ನು, ವ್ಯಕ್ತಿಯೊಬ್ಬ ಭಾರತದ ನ್ಯಾಯಾಲಯದಲ್ಲಿ ಅಪರಾಧಿ ಎಂದು ಘೋಷಣೆಯಾದ ನಂತರ ಆತ ದೇಶ ಬಿಟ್ಟು ಓಡಿಹೋದರೆ, ಆತ ಭಾರತದಲ್ಲಿ ಇಲ್ಲದಿದ್ದರೂ/ಅವನ ಅನುಪಸ್ಥಿತಿಯಲ್ಲೂ ನ್ಯಾಯಾಲಯದಲ್ಲಿ ವಿಚಾರಣೆ ನಡೆಯಲಿದೆ. ವಿಚಾರಣೆಯ ನಂತರ ನೀಡುವ ಶಿಕ್ಷೆಯಿಂದ ಆತ ತಪ್ಪಿಸಿಕೊಳ್ಳಲಾಗದು. ಅದರ ವಿರುದ್ಧ ಮೇಲ್ಮನವಿ ಸಲ್ಲಿಸಲು ಆತ ಭಾರತಕ್ಕೆ ಬರಲೇಬೇಕು. ದೇಶ ಬಿಟ್ಟು ಓಡಿಹೋಗಿರುವ ವಿಜಯ್ ಮಲ್ಯ, ನೀರವ್ ಮೋದಿ, ಮೆಹುಲ್ ಚೋಕ್ಸಿಯಂಥ ಅಪರಾಽಗಳು ಅಷ್ಟು ಸುಲಭವಾಗಿ ಭಾರತದ ಕಾನೂನುಗಳಿಂದ ಇನ್ನು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ.
ನೂತನ ವಿಧೇಯಕದಲ್ಲಿ ೩೧೩ ಬದಲಾವಣೆಯನ್ನು ಮಾಡಲಾಗಿದ್ದು, ಭಾರತೀಯ ಕ್ರಿಮಿನಲ್ ನ್ಯಾಯಾಂಗ ವ್ಯವಸ್ಥೆಯನ್ನು ದೊಡ್ಡಮಟ್ಟದಲ್ಲಿ ಬದಲಿಸಲಾಗಿದೆ. ನೂತನ ವಿಧೇಯಕಕ್ಕೆ ರಾಷ್ಟ್ರಪತಿಗಳ ಅಂಕಿತ ಬಿದ್ದು ಕಾನೂನು ಎನಿಸಿಕೊಂಡು ಸಂಪೂರ್ಣವಾಗಿ ಅನುಷ್ಠಾನಕ್ಕೆ ಬಂದ ನಂತರ, ಗರಿಷ್ಠ ೩ ವರ್ಷಗಳ ಒಳಗೆ ನ್ಯಾಯ ಸಿಗಲಿದೆ. ಒಟ್ಟಿನಲ್ಲಿ, ೧೮೫೭ರ ಸಂಗ್ರಾಮದ ಭಾರತೀಯ ಕ್ರಾಂತಿಕಾರರನ್ನು ಕಟ್ಟಿಹಾಕಲು ಬ್ರಿಟಿಷರು ಜಾರಿಗೆ ತಂದಿದ್ದ ಕಾನೂನುಗಳು ಬದಲಾಗಲಿದ್ದು,
ಬ್ರಿಟಿಷರ ಗುಲಾಮಿ ಕುರುಹುಗಳು ಮಾಯವಾಗಲಿವೆ.