Friday, 13th December 2024

ಉಪನ್ಯಾಸದ ವೇಳೆ ಹೃದಯಾಘಾತ: ಐಐಟಿ ಕಾನ್ಪುರದ ಉಪನ್ಯಾಸಕ ಸಾವು

ಕಾನ್ಪುರ: ವೇದಿಕೆ ಮೇಲೆ ಉಪನ್ಯಾಸ ನೀಡುತ್ತಿರುವ ವೇಳೆ ಹೃದಯಾಘಾತಗೊಂಡು ಐಐಟಿ ಕಾನ್ಪುರದ ಹಿರಿಯ ಉಪನ್ಯಾಸಕ ಮೃತಪಟ್ಟ ಘಟನೆ ನಡೆದಿದೆ. ಐಐಟಿ ಕಾನ್ಪುರದ ಹಿರಿಯ ಪ್ರಾಧ್ಯಾಪಕ ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥರಾಗಿದ್ದ ಸಮೀರ್ ಖಂಡೇಕ ಮೃತ ಪ್ರಾಧ್ಯಾ ಪಕರು.

ವಿಶ್ವವಿದ್ಯಾಲಯದಲ್ಲಿ ಹಳೆಯ ವಿದ್ಯಾರ್ಥಿಗಳನ್ನುದ್ದೇಶಿಸಿ ಭಾಷಣ ಮಾಡುತ್ತಿದ್ದ ವೇಳೆ ಹೃದಯಸ್ತಂಭನದಿಂದ ಸಾವನ್ನಪ್ಪಿದ್ದಾರೆ. ಸಮೀರ್ ಖಂಡೇಕರ್ ಐಐಟಿ ಕಾನ್ಪುರ ಸಭಾಂಗಣದಲ್ಲಿ ನಡೆದ ಹಳೆಯ ವಿದ್ಯಾರ್ಥಿಗಳ ಸಮಾವೇಶದಲ್ಲಿ ಭಾಷಣ ಮಾಡುತ್ತಿದ್ದರು.

ಖಂಡೇಕರ್ ಅವರು ಉತ್ತಮ ಆರೋಗ್ಯ ಕಾಪಾಡಿಕೊಳ್ಳುವ ಮಾರ್ಗಗಳ ಬಗ್ಗೆ ಮಾತನಾಡುತ್ತಿದ್ದರು. ಖಂಡೇಕರ್ ಇದ್ದಕ್ಕಿದ್ದಂತೆ ಅಸ್ವಸ್ಥರಾದರು, ಎದೆ ಯಲ್ಲಿ ಸ್ಬಲ್ಪ ನೋವು ಕಾಣಿಸಿಕೊಂಡಿತ್ತು. ಅವರು ಭಾವುಕರಾಗಿದ್ದಾರೆ ಎಂದು ವಿದ್ಯಾರ್ಥಿಗಳು ಭಾವಿಸಿದ್ದರು. ಸ್ವಲ್ಪ ಸಮಯದ ನಂತರ ಬೆವರು ಬರಲು ಶುರುವಾಗಿತ್ತು. ವೇದಿಕೆ ಮೇಲೆಯೇ ಕುಸಿದು ಬಿದ್ದರು. ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯಿತು. ವೈದ್ಯ ನೀರಜ್ ಕುಮಾರ್ ಪ್ರಕಾರ, ಆಸ್ಪತ್ರೆಗೆ ಕರೆತರುವ ಮೊದಲೇ ಖಂಡೇಕರ್ ಮೃತಪಟ್ಟಿದ್ದರು.

ಸುಮಾರು ಐದು ವರ್ಷಗಳ ಹಿಂದೆ ಖಾಂಡೇಕರ್ ಅವರಿಗೆ ಅರೋಗ್ಯ ಸಮಸ್ಯೆ ಎದುರಾದಾಗ ಪರೀಕ್ಷೆ ನಡೆಸಿದ ವೈದ್ಯರು ರಕ್ತದಲ್ಲಿ ಕೊಲೆಸ್ಟ್ರಾಲ್ ಪ್ರಮಾಣ ಹೆಚ್ಚಿರುವುದಾಗಿ ಹೇಳಿದ್ದರು ಎಂದು ಅವರ ಆಪ್ತ ಪ್ರಾಧ್ಯಾಪಕರೊಬ್ಬರು ಹೇಳಿದ್ದರು. ಅವರು ತಂದೆ-ತಾಯಿ, ಪತ್ನಿ ಹಾಗೂ ಪುತ್ರನನ್ನು ಅಗಲಿದ್ದಾರೆ.