Saturday, 14th December 2024

ಮಮತಾ ಬಾಯಲ್ಲಿ ಖರ್ಗೆ ಹೆಸರೇಕೆ ಬಂತು ?

ಮೂರ್ತಿಪೂಜೆ

ಪ್ರಧಾನಿ ಹುದ್ದೆಗೆ ಖರ್ಗೆಯವರ ಹೆಸರು ಪ್ರಸ್ತಾಪಿಸಲ್ಪಟ್ಟಿದ್ದಕ್ಕೆ ಹಲವು ಕಾರಣಗಳಿವೆ. ಈ ಪೈಕಿ ಒಕ್ಕೂಟದ ಎಲ್ಲರನ್ನೂ ಒಗ್ಗೂಡಿಸಿಕೊಂಡು ಹೋಗುವ ಅವರ ಗುಣ ಮುಖ್ಯವಾದುದು. ಬಿಜೆಪಿ ವಿರೋಽ ಪಾಳಯದವರ ಜತೆ ಸಂಪರ್ಕದಲ್ಲಿರುವ ಖರ್ಗೆ ಒಡಕು ಎದುರಾದಾಗೆಲ್ಲ ಪರಿಹಾರ ಹುಡುಕುತ್ತಾರೆ.

ಕಳೆದ ವಾರ ನಡೆದ ’ಇಂಡಿಯ’ ಮೈತ್ರಿಕೂಟದ ಸಭೆಯ ನಂತರ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಹೆಸರು ಪ್ರಧಾನಿ ಹುದ್ದೆಯ ರೇಸಿನಲ್ಲಿ
ಕಾಣಿಸಿಕೊಂಡಿದೆ. ಅಂದ ಹಾಗೆ, ಅವರ ಹೆಸರನ್ನು ಈ ಜಾಗಕ್ಕೆ ಸೂಚಿಸಿದವರು ಪಶ್ಚಿಮಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ. ಹೀಗೆ ಅವರು ಖರ್ಗೆಯವರ ಹೆಸರನ್ನು ಸೂಚಿಸಿದ ನಂತರ ರಾಷ್ಟ್ರ ಮಟ್ಟದಲ್ಲಿ ಒಂದು ಚರ್ಚೆ ಆರಂಭವಾಗಿರುವುದು ನಿಜ ಮತ್ತು ವಿಶೇಷವಾಗಿ ಕರ್ನಾಟಕದ ರಾಜಕಾರಣದಲ್ಲಿ ಸಂಚಲನ ಉಂಟಾಗಿರುವುದು ನಿಜ.

ಹಾಗೆ ನೋಡಿದರೆ, ಚುನಾವಣೆಗೆ ಸಂಬಂಧಿಸಿದಂತ ರಾಜ್ಯ ಕಾಂಗ್ರೆಸ್ ಇನ್ನೂ ಮೈ ಕೊಡವಿ ಎದ್ದಿಲ್ಲ. ಕಾರಣ? ಇಲ್ಲಿರುವ ೨೮ ಲೋಕಸಭಾ ಕ್ಷೇತ್ರಗಳ ಪೈಕಿ ಬಹುತೇಕ ಕಡೆ ಸೂಟಬಲ್ ಕ್ಯಾಂಡಿಡೇಟುಗಳು ಸಿಗುತ್ತಿಲ್ಲ. ಆದರೆ ಯಾವಾಗ ಖರ್ಗೆ ‘ಇಂಡಿಯ’ ಮೈತ್ರಿಕೂಟದ ಪ್ರಧಾನಿ ಕ್ಯಾಂಡಿಡೇಟ್ ಆಗಲಿ ಎಂಬ ಪ್ರಪೋಸಲ್ಲು ಹೊರಬಿತ್ತೋ, ಪಾರ್ಲಿಮೆಂಟ್ ಚುನಾವಣೆಯಲ್ಲಿ ಸ್ಪಽಸಿದರೆ ಗೆಲ್ಲಬಹುದು ಎಂಬ ಭಾವನೆ ಹಲವರಲ್ಲಿ ಬಂದಿದೆ. ಇಂಥವರಲ್ಲಿ ಹಲವು ಸಚಿವ ರಿರುವುದೂ ನಿಜ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ಸಿಗೆ ಪ್ಲಸ್ ಆಗಿದ್ದ ಅಹಿಂದ ಸಮುದಾಯದ ಮತಗಳು ಈಗ ಖರ್ಗೆ ಕಾರಣಕ್ಕಾಗಿ ಮತ್ತಷ್ಟು ಸಾಲಿಡ್ಡಾಗಿ ಕ್ರೋಡೀಕರಣಗೊಳ್ಳುತ್ತವೆ ಎಂಬುದು ಕೈ ಪಾಳಯದ ಲೆಕ್ಕಾಚಾರ.

ಹೀಗಾಗಿ ಅಧಿಕಾರಕ್ಕೆ ಬಂದ ೭ ತಿಂಗಳ ನಂತರ ರಾಜ್ಯ ಕಾಂಗ್ರೆಸ್‌ನಲ್ಲಿ ಮರುಸಂಚಲನ ಆರಂಭವಾಗಿದೆ. ಆ ಮೂಲಕ ಕರ್ನಾಟಕದಲ್ಲಿ ಪಾರ್ಲಿಮೆಂಟ್ ಚುನಾವಣೆಗೆ ಜಿದ್ದಾಜಿದ್ದಿನ ಅಖಾಡ ರೆಡಿ ಆಗುವುದು ನಿಶ್ಚಿತವಾಗಿದೆ. ಅಂದ ಹಾಗೆ, ಭವಿಷ್ಯದ ಪ್ರಧಾನಿ ಹುದ್ದೆಯ ರೇಸಿನಲ್ಲಿ ‘ಇಂಡಿಯ’ ಮೈತ್ರಿಕೂಟದ ಹಲವು ನಾಯಕರಿದ್ದರೂ ಖರ್ಗೆಯವರ ಹೆಸರು ಮೇಲೆದ್ದು ಬಂದಿದ್ದು ಹೇಗೆ ಅಂತ ನೋಡಿದರೆ ಇದಕ್ಕೆ ಕಾರಣವಾದ ಹಲವು ಅಂಶಗಳು ಕಾಣಿಸುತ್ತವೆ. ಈ ಪೈಕಿ ಒಕ್ಕೂಟದಲ್ಲಿರುವ ಎಲ್ಲರನ್ನು ಒಗ್ಗೂಡಿಸಿಕೊಂಡು ಹೋಗುವ ಗುಣ ಮುಖ್ಯವಾದುದು.

ಎಐಸಿಸಿ ಅಧ್ಯಕ್ಷರಾದ ನಂತರ ಖರ್ಗೆಯವರು ಬಿಜೆಪಿ ವಿರೋಧಿ ಪಾಳಯದ ಎಲ್ಲ ನಾಯಕರ ಜತೆ ಸತತ ಸಂಪರ್ಕದಲ್ಲಿದ್ದಾರೆ. ಸಣ್ಣ-ಪುಟ್ಟ ಒಡಕಿನ ಮಾತು ಕೇಳಿಬಂದರೆ ಅದಕ್ಕೆ ಪರಿಹಾರ ಹುಡುಕುತ್ತಾರೆ. ಇದೇ ರೀತಿ ಲೋಕಸಭೆ ಮತ್ತು ರಾಜ್ಯಸಭೆಗಳಲ್ಲಿ ಪ್ರಧಾನಿ ಮೋದಿಯವರಿಗೆ ಖರ್ಗೆಯವರಂತೆ ಎದೆ ಕೊಟ್ಟು ಹೋರಾಡಿದ ಮತ್ತೊಬ್ಬ ನಾಯಕರಿಲ್ಲ. ಅದಕ್ಕಾಗಿ ತಮ್ಮ ಸಂಸದೀಯ ಅನುಭವವನ್ನು ಅವರು ಎಷ್ಟು ಚೆನ್ನಾಗಿ ಬಳಸಿಕೊಂಡಿದ್ದಾರೆ ಎಂದರೆ ಅದರ ಖದರ್ರಿಗೆ ಸ್ವತಃ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಫಿದಾ ಆಗಿದ್ದಾರೆ.

ಎಲ್ಲಕ್ಕಿಂತ ಮುಖ್ಯವಾಗಿ ಖರ್ಗೆ ದಲಿತ ಸಮುದಾಯದಿಂದ ಬಂದವರು. ಇವತ್ತು ಅವರು ಪ್ರಧಾನಿ ಅಭ್ಯರ್ಥಿಯಾದರೆ ದೇಶದಲ್ಲಿ ಶೇ.೨೦ಕ್ಕಿಂತ ಹೆಚ್ಚಿರುವ ದಲಿತರ ಮತಗಳು ಕ್ರೋಡೀಕರಣಗೊಳ್ಳಬಹುದು. ಈ ಹಿಂದೆ ದಲಿತ ನಾಯಕ ಬಾಬು ಜಗಜೀವನ ರಾಮ್ ಅವರ ಹೆಸರು ಪ್ರಧಾನಿ ಹುದ್ದೆಯ ರೇಸಿನಲ್ಲಿ ತೇಲಿಬಂದಾಗ, ದಲಿತ ಮತ ಬ್ಯಾಂಕಿನಲ್ಲಿ ಒಗ್ಗಟ್ಟು ಇರಲಿಲ್ಲ. ಆದರೆ ಅದಾಗಿ ೪ ದಶಕಗಳ ನಂತರ ದಲಿತರಲ್ಲಿ ರಾಜಕೀಯ ಪ್ರಜ್ಞೆ ಹೆಚ್ಚಾಗಿದೆ. ಪರಿಣಾಮ? ಖರ್ಗೆ ಅವರ ಹೆಸರು ದಲಿತ ಸಮುದಾಯದಲ್ಲಿ ದೊಡ್ಡ ಮಟ್ಟದ ಒಗ್ಗಟ್ಟಿಗೆ ಕಾರಣವಾಗಬಹುದು. ಹೀಗೆ ದಲಿತ, ಅಲ್ಪಸಂಖ್ಯಾತ ಮತ್ತು ಒಂದು ಮಟ್ಟದಲ್ಲಿ ಹಿಂದುಳಿದ
ವರ್ಗಗಳು ಒಗ್ಗೂಡಿದರೆ ಶೇ.೬೦ರಷ್ಟು ಮತಗಳು ‘ಇಂಡಿಯ’ ಮೈತ್ರಿಕೂಟಕ್ಕೆ ದಕ್ಕಬಹುದು ಎಂಬುದು ಮಮತಾ ಬ್ಯಾನರ್ಜಿ ಮತ್ತಿತರ ನಾಯಕರ ಲೆಕ್ಕಾಚಾರ. ಇನ್ನು ಖರ್ಗೆಯವರ ಹೆಸರು ಮುಂದೆ ಬರಲು ಅವರು ನೆಹರು ಕುಟುಂಬದ ಹೊರಗಿವರು ಎಂಬುದು ಮತ್ತೊಂದು ಕಾರಣ.

ಈ ಮಧ್ಯೆ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಪ್ರಧಾನಿ ಹುದ್ದೆಯ ರೇಸಿಗೆ ಬರಲು ಆತುರ ಹೊಂದಿದ್ದಾರಾ ದರೂ ‘ಇಂಡಿಯ’ ಮೈತ್ರಿಕೂಟದ ಬಹುತೇಕ ನಾಯಕರಿಗೆ ಅವರ ಬಗ್ಗೆ ನಂಬಿಕೆ ಇಲ್ಲ. ಕಾರಣ? ತಮ್ಮ ಅನುಕೂಲಕ್ಕೆ ತಕ್ಕಂತೆ ಆಟವಾಡುವ ನಿತೀಶ್ ಕುಮಾರ್ ಅವರು ಟೈಮು ಬಂದರೆ ನರೇಂದ್ರ ಮೋದಿ ಜತೆ ಕೈ ಜೋಡಿಸಲೂ ಹಿಂಜರಿಯುವುದಿಲ್ಲ ಎಂಬ ಅನುಮಾನ. ಹೀಗೆ ಹಲವು ಕಾರಣಗಳು ಸೇರಿ ಖರ್ಗೆ ‘ಇಂಡಿಯ’ ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿಯಾಗಲಿ
ಎಂಬ ಪ್ರಪೋಸಲ್ಲು ಮಂಡನೆಯಾಗಿದೆ. ಆ ಮೂಲಕ ಮೋದಿಯವರಿಗೆ ಪರ್ಯಾಯ ನಾಯಕ ಯಾರು ಅಂತ ತೋರಿಸುವ ಕೆಲಸ ಮೈತ್ರಿಕೂಟದಿಂದ ಆಗಿದೆ.
ಬಿಜೆಪಿ ಅಲ್ಲ ‘ವೈಜೆಪಿ’ ಇನ್ನು, ರಾಜ್ಯ ಬಿಜೆಪಿಯ ಪದಾಽಕಾರಿಗಳ ಪಟ್ಟಿ ಬಿಡುಗಡೆಯಾಗುತ್ತಿದ್ದಂತೆಯೇ ಕರ್ನಾಟಕದಲ್ಲಿ ಯಡಿಯೂರಪ್ಪ ವಿರೋಧಿ ಬಣದ ಆಕ್ರೋಶ ಮುಗಿಲು ಮುಟ್ಟಿದೆ.

ಕಾರಣ? ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡ ವಿ.ಸುನೀಲ್ ಕುಮಾರ್ ಅವರನ್ನು ಬಿಟ್ಟರೆ ಸಂಘದ ಹಿನ್ನೆಲೆ ಇರುವ ಪ್ರಮುಖರಿಗೆ ಆದ್ಯತೆ ಸಿಕ್ಕಿಲ್ಲ.  ಹೀಗಾಗಿ ಕರ್ನಾಟಕದ ಬಿಜೆಪಿ ಈಗ ‘ವೈಜೆಪಿ’ ಆಗಿದೆ ಎಂಬುದು ಈ ಬಣದ ಸಿಟ್ಟು. ಪಟ್ಟಿಯಲ್ಲಿರುವ ಎನ್. ಮಹೇಶ್ ಮತ್ತು ಕುಡಚಿಯ ಪಿ.ರಾಜೀವ್ ಅವರನ್ನು ಹೊರತುಪಡಿಸಿದರೆ ಉಳಿದ ಬಹುತೇಕರು ಯಡಿಯೂರಪ್ಪ ಗ್ಯಾಂಗಿನವರು ಎಂಬುದು ಅದರ ಆರೋಪ. ಅಂದ ಹಾಗೆ, ಪದಾಧಿಕಾರಿಗಳ ಪಟ್ಟಿ ತಯಾರಿಸುವಾಗ ಸಂಘ ಪರಿವಾರದ ಹಿನ್ನೆಲೆ ಇರುವವರಿಗೆ ಆದ್ಯತೆ ನೀಡಬೇಕು ಅಂತ ಸೂಚಿಸಲಾಗಿದ್ದರೂ, ಯಡಿಯೂರಪ್ಪ ಅದನ್ನು ನಿರ್ಲಕ್ಷಿಸಿದ್ದಾರೆ.
ಹೀಗಾಗಿ ಇದರ ಎಫೆಕ್ಟು ಪಾರ್ಲಿಮೆಂಟ್ ಚುನಾವಣೆಯ ಮೇಲಾಗುತ್ತದೆ ಅಂತ ಈ ಬಣ ದಿಲ್ಲಿ ನಾಯಕರಿಗೆ ಮೆಸೇಜು ಕಳಿಸಿದೆ.

ಬಲವಂತವಾಗಿ ಟಿಕೆಟ್ ತಪ್ಪಿಸಬೇಡಿ ಈ ಮಧ್ಯೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ನಡ್ಡಾ ಅವರ ಜತೆ ಮಾತನಾಡಿರುವ ಮಾಜಿ ಸಿಎಂ ಯಡಿಯೂರಪ್ಪ, ‘ಪಾರ್ಲಿಮೆಂಟ್ ಚುನಾವಣೆಯ ಟಿಕೆಟ್ ನೀಡುವಾಗ ಕಠಿಣ ಹೆಜ್ಜೆ ಇಡುವುದು ಬೇಡ’ ಎಂದಿದ್ದಾರೆ. ಕೆಲ ದಿನಗಳ ಹಿಂದೆ ಎದ್ದಿದ್ದ ಸುದ್ದಿಯೇ ಇದಕ್ಕೆ ಕಾರಣ. ಮುಂದಿನ ವರ್ಷ
ನಡೆಯಲಿರುವ ಪಾರ್ಲಿಮೆಂಟ್ ಚುನಾವಣೆಯಲ್ಲಿ ೧೩ ಮಂದಿ ಹಾಲಿ ಎಂ.ಪಿ.ಗಳಿಗೆ ಟಿಕೆಟ್ ನೀಡದಿರಲು ಹೈಕಮಾಂಡ್ ನಿರ್ಧರಿಸಿದೆ ಎಂಬುದು ಈ ಸುದ್ದಿ. ಆದರೆ
ಇತ್ತೀಚೆಗೆ ನಡ್ಡಾ ಅವರ ಜತೆ ಮಾತನಾಡಿದ ಯಡಿಯೂರಪ್ಪ, ‘ಕರ್ನಾಟಕದಲ್ಲಿ ಪಾರ್ಲಿಮೆಂಟ್ ಟಿಕೆಟ್ ಕೊಡುವಾಗ ಬಲವಂತವಾಗಿ ಯಾರಿಗೂ ಟಿಕೆಟ್ ತಪ್ಪಿಸಬಾರದು’ ಎಂದಿದ್ದಾರೆ.

ಕಾರಣ? ಬಲವಂತವಾಗಿ ಯಾರಿಗೇ ಟಿಕೆಟ್ ತಪ್ಪಿಸಿದರೂ ಅಂಥವರು ತಿರುಗಿ ಬೀಳುತ್ತಾರೆ, ಪಕ್ಷದ ಅಧಿಕೃತ ಅಭ್ಯರ್ಥಿಗೆ ಡ್ಯಾಮೇಜು ಮಾಡುತ್ತಾರೆ. ಎಷ್ಟೇ
ಆದರೂ ಪಾರ್ಲಿಮೆಂಟ್ ಚುನಾವಣೆಯಲ್ಲಿ ಮೋದಿ ಅಲೆ ಕೆಲಸ ಮಾಡುತ್ತದೆ. ಇದು ಅಭ್ಯರ್ಥಿಗಳಿಗೆ ಪ್ಲಸ್ ಆಗುವುದರಿಂದ ಹಾಲಿ ಎಂಪಿಗಳಿಗೆ ಟಿಕೆಟ್ ತಪ್ಪಿಸುವ ಹಠ ಬೇಡ ಎಂಬುದು ಯಡಿಯೂರಪ್ಪ ಸಜೆಷನ್ನು. ಅಂದ ಹಾಗೆ, ಕರ್ನಾಟಕದಿಂದ ಸಂಸದರಾದ ಬಿಜೆಪಿಯ ಹಲವರಿಗೆ ಮರಳಿ ಸ್ಪರ್ಧಿಸುವ ಮನಸ್ಸಿಲ್ಲ. ಡಿ.ವಿ.ಸದಾನಂದಗೌಡ, ಜಿ.ಎಂ.ಸಿದ್ದೇಶ್ವರ್, ಬಸವರಾಜು, ಬಚ್ಚೇಗೌಡ, ಶ್ರೀನಿವಾಸ ಪ್ರಸಾದ್, ಅನಂತಕುಮಾರ ಹೆಗಡೆ, ಶಿವಕುಮಾರ ಉದಾಸಿ ಸೇರಿದಂತೆ ೭-೮ ಮಂದಿಗೆ ಮರಳಿ ಪಾರ್ಲಿಮೆಂಟ್ ಮೆಟ್ಟಿಲು ಹತ್ತುವ ಆಸಕ್ತಿಯಲ್ಲ.

ಹೀಗಾಗಿ ಹಾಲಿ ಎಂಪಿಗಳ ಪೈಕಿ ಯಾರು ನಿಲ್ಲುವ ಆಸಕ್ತಿ ತೋರಿಸುವುದಿಲ್ಲವೋ ಅವರ ಜಾಗಕ್ಕೆ ಬೇರೆಯವರನ್ನು ಹುಡುಕೋಣ. ಆದರೆ ಸ್ಪರ್ಧಿಸುವ ಆಸಕ್ತಿ ಇರುವವರಿಗೆ ಟಿಕೆಟ್ ಕೊಡೋಣ. ಒಂದು ವೇಳೆ ಕ್ಷೇತ್ರಗಳಲ್ಲಿ ಅವರ ಇಮೇಜು ಕುಸಿದಿದ್ದರೆ ಅದನ್ನು ರೀಬಿಲ್ಡ್ ಮಾಡಿಕೊಳ್ಳಲು ಸೂಚನೆ ಕೊಡೋಣ. ಅವರು ತಿದ್ದಿಕೊಳ್ಳಲಿ ಎಂಬುದು ಯಡಿಯೂರಪ್ಪ ಪ್ರಪೋಸಲ್ಲು. ಇದಕ್ಕೆ ನಡ್ಡಾ ಕೂಡಾ ಒಲವು ತೋರಿಸಿದ್ದಾರೆ ಎಂಬುದು ಲೇಟೆಸ್ಟು ಸುದ್ದಿ. ಫ್ರೆಂಡ್‌ಷಿಪ್‌ಗೆ ಸಿದ್ದರಾಮಯ್ಯ ಒಪ್ಪುತ್ತಿಲ್ಲ ಈ ಮಧ್ಯೆ ದೇವೇಗೌಡರ ಕ್ಯಾಂಪಿನಿಂದ ದೂರವಾಗಿರುವ ಹಿರಿಯ ನಾಯಕ ಸಿ.ಎಂ.ಇಬ್ರಾಹಿಂ ಮರಳಿ ಸಿದ್ದರಾಮಯ್ಯ ಅವರ ಫ್ರೆಂಡ್‌ಷಿಪ್ ಬಯಸು ತ್ತಿದ್ದರೂ ಅದು ವರ್ಕ್‌ಔಟ್ ಆಗುತ್ತಿಲ್ಲ.

ಮೂಲಗಳ ಪ್ರಕಾರ, ಸಿದ್ದರಾಮಯ್ಯರ ಜತೆಗಿನ ಸ್ನೇಹವನ್ನು ಮುಂದುವರಿಸಲು ಬಯಸಿರುವ ಇಬ್ರಾಹಿಂ ಐದಾರು ಸಲ ಮೆಸೇಜು ಕಳಿಸಿದ್ದಾರಂತೆ. ಆದರೆ ಆ ಮೆಸೇಜುಗಳನ್ನು ಸಿದ್ದರಾಮಯ್ಯ ಪಾಸಿಟಿವ್ ಆಗಿ ಸ್ವೀಕರಿಸುತ್ತಿಲ್ಲ. ಕಾರಣ? ಈ ಹಿಂದೆ ವಿಧಾನಪರಿಷತ್ತಿನ ಪ್ರತಿಪಕ್ಷ ನಾಯಕನ ಸ್ಥಾನ ತಮಗೆ ಸಿಗಲಿಲ್ಲ ಅಂತ ಇಬ್ರಾಹಿಂ ಸಿಟ್ಟಿಗೆದ್ದಿದ್ದರಲ್ಲ? ಆ ಟೈಮಿನಲ್ಲಿ ವಿಧಾನಸಭೆಯ ಹೊರಭಾಗದ ಕ್ಯಾಂಟೀನಿನ ಬಳಿ ಸಿಕ್ಕ ಇಬ್ರಾಹಿಂ ಅವರನ್ನು ಸಿದ್ದರಾಮಯ್ಯ ಸಮಾಧಾನಿಸಲೆತ್ನಿಸಿ
ದ್ದರು. ಆದರೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪಟ್ಟು ಹಿಡಿದು ಬಿ.ಕೆ.ಹರಿಪ್ರಸಾದ್ ಅವರಿಗೆ ಪರಿಷತ್ತಿನ ಪ್ರತಿಪಕ್ಷ ನಾಯಕನ ಸ್ಥಾನ ಸಿಗುವಂತೆ ಮಾಡಿದರು. ಆದರೆ ‘ನೀವು ಬಿಗಿಪಟ್ಟು ಹಿಡಿದಿದ್ದರೆ ಅದು ನನಗೇ ಸಿಗುತ್ತಿತ್ತು’ ಅಂತ ಇಬ್ರಾಹಿಂ ತಕರಾರು ಎತ್ತಿದ್ದರಂತೆ.

ಅಷ್ಟೇ ಅಲ್ಲ, ಆಗಿದ್ದ ಕೋಪದ ಭರದಲ್ಲಿ ಅವರು ಜೆಡಿಎಸ್‌ಗೆ ಹೋಗುವ ನಿರ್ಧಾರವನ್ನೂ ತೆಗೆದುಕೊಂಡಿದ್ದರು. ಇದೇ ಕಾರಣಕ್ಕಾಗಿ ಸಿದ್ದರಾಮಯ್ಯ ಅವರು, ‘ಬೇಡ
ಕಣ್ರೀ ಇಬ್ರಾಹಿಂ, ನಾಳೆ ಅಸೆಂಬ್ಲಿ ಎಲೆಕ್ಷನ್ನು ನಡೆಯಲಿ. ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ. ನಿಶ್ಚಿತವಾಗಿ ನೀವು ಮಂತ್ರಿಯಾಗುತ್ತೀರಿ’ ಎಂದಿದ್ದರು. ಆದರೆ ಅವರೇನೇ ಹೇಳಿದರೂ ಒಪ್ಪದ ಇಬ್ರಾಹಿಂ ಜೆಡಿಎಸ್ ಪಾಳಯಕ್ಕೆ ಹೋದರು. ಆದರೆ ಹೀಗೆ ಹೋಗುವಾಗ ಇಬ್ರಾಹಿಂ ಮನಸ್ಸಿನಲ್ಲಿ ಸಮ್ಮಿಶ್ರ ಸರಕಾರ ರಚನೆ ಯಾಗಲಿದೆ ಎಂಬ ಲೆಕ್ಕಾಚಾರ ವಿತ್ತು. ಹಾಗೇನಾದರೂ ಆದರೆ ತಾವು ಮಂತ್ರಿಯಾಗಬಹುದು ಎಂಬ ಯೋಚನೆಯೂ ಇತ್ತು. ಇಂಥ ಲೆಕ್ಕಾಚಾರದ ಕಾರಣ ಕ್ಕಾಗಿಯೇ ಅವರು ಕಾಂಗ್ರೆಸ್ ಪಕ್ಷವನ್ನು, ಆ ಮೂಲಕ ತಮ್ಮನ್ನು ತೊರೆದರು ಎಂಬುದು ಸಿದ್ದರಾಮಯ್ಯ ಅವರ ಸಿಟ್ಟು. ಹೀಗಾಗಿ ಅವರು ಇಬ್ರಾಹಿಂ ಅವರ ಸ್ನೇಹದ ಆಹ್ವಾನವನ್ನು ಒಪ್ಪುತ್ತಿಲ್ಲ.