Wednesday, 11th December 2024

ಧಾವಂತದ ಸುಳಿಯಲ್ಲಿ ಸೊರಗುತ್ತಿದೆ ಪ್ರಕೃತಿಪ್ರೇಮ

ಹಸಿರುಹೊನ್ನು 

ಮಹಾದೇವ ಬಸರಕೋಡ

ಆಧುನಿಕತೆಯನ್ನು ಅಪ್ಪುವ ಭರದಲ್ಲಿ ನಾವು ಸುತ್ತಣ ಪರಿಸರವನ್ನು ಪ್ರೀತಿಸದಷ್ಟು ಸ್ವಾರ್ಥಿಗಳಾಗಿದ್ದೇವೆ. ಪ್ರಕೃತಿಯಲ್ಲಿ ನೈಜವಾಗಿ ದೊರೆಯುವ ಆನಂದವನ್ನು ಅನುಭವಿಸಲೂ ನಮಗೆ ಸಾಧ್ಯವಾಗುತ್ತಿಲ್ಲ. ನಿಸರ್ಗವನ್ನು ಕೊಳ್ಳೆ ಹೊಡೆಯುವುದನ್ನೇ ನಿತ್ಯದ ವ್ಯವಹಾರವನ್ನಾಗಿಸಿಕೊಂಡಿರುವ ನಾವು, ಪ್ರಕೃತಿಯನ್ನು ಮಾರಾಟದ ವಸ್ತುವಾಗಿಸಿಕೊಂಡು ತಿನ್ನುವ ಅನ್ನ, ಕುಡಿಯುವ ನೀರು, ಉಸಿರಾಡುವ ಗಾಳಿಯನ್ನು ಮಲಿನವಾಗಿಸಿದ್ದೇವೆ.

ಗ್ರಾಮೀಣ ಪ್ರದೇಶದಲ್ಲಿರುವ ಬಹುತೇಕ ಜನರಿಗೆ ಮಹಾನಗರಗಳು ಎಂದರೆ ತುಂಬಾ ಇಷ್ಟ. ಬೆಂಗಳೂರು, ದೆಹಲಿ, ಮುಂಬೈ, ಚೆನ್ನೈನಂಥ ಮಹಾನಗರಗಳ ಮಾಯಾಜಾಲವು ಗ್ರಾಮೀಣ ಪ್ರದೇಶದ ಜನರನ್ನು, ಅದರಲ್ಲೂ ಯುವಕರನ್ನು ಕೈಬೀಸಿ ಕರೆಯುತ್ತದೆ. ಈ ನಗರಗಳಿಗೆ ತೆರಳಿ ಬದುಕು ಕಟ್ಟಿಕೊಳ್ಳುವ ಕನಸು ಇಂಥವರದ್ದು. ಮಹಾನಗರಗಳಿಗೆ ತೆರಳುವುದೆಂದರೆ ಬಹುತೇಕರಿಗೆ ಇಂದಿಗೂ ಅದೇನೋ ಹೇಳಿಕೊಳ್ಳಲಾಗದ ತವಕ, ಅಸೀಮ ಪುಳಕ. ಅಲ್ಲಿನ ಹೆಚ್ಚಿನ ಜನರ ಬದುಕಿನ ರೀತಿ, ಸೌಲಭ್ಯ-ಸವಲತ್ತುಗಳು, ಇಂಗ್ಲಿಷ್-ಮಿಶ್ರಿತ ಕನ್ನಡವನ್ನು ಮಾತಾಡುವ ಶೈಲಿ, ಚಿತ್ರವಿಚಿತ್ರ ಉಡುಪುಗಳನ್ನು ಧರಿಸಿ ಮುಂದುವರಿದ ಜನಾಂಗದವರಂತೆ ಬಿಂಬಿಸಿಕೊಳ್ಳುವಿಕೆ ಇವನ್ನೆಲ್ಲ ಕಂಡವರಿಗೆ ನಗರಿಗರ ಕುರಿತಾಗಿ ಅದೇನೋ ವಿಚಿತ್ರ ಸೆಳೆತ.

ಹಳ್ಳಿಯಿಂದಲೇ ಹೋಗಿದ್ದರೂ, ನಗರಗಳಲ್ಲಿ ಕೆಲವೇ ದಿನ ನೆಲೆಸಿ ಮರಳಿ ತಮ್ಮೂರಿಗೆ ಬಂದವರು, ತಮ್ಮ ಗ್ರಾಮೀಣ ಪ್ರದೇಶದ ಭಾಷೆ ಮತ್ತು ಪರಿಸರದ ಸೊಗಡನ್ನು ಮರೆತು ಅತ್ಯಂತ ಮುಂದುವರಿದವರಂತೆ ಮಾತಾಡುವ ಶೈಲಿ, ವೇಷಭೂಷಣ ಮತ್ತು ಆಚಾರ-ವಿಚಾರಗಳಲ್ಲಿ ತೋರಿಸುವ ಒಂದಿಷ್ಟು ಗತ್ತು-ಗಮ್ಮತ್ತು ಇವುಗಳು ಇಂದಿಗೂ ಗ್ರಾಮೀಣ ಪ್ರದೇಶದಲ್ಲಿ ವಾಸಿಸುತ್ತಿರುವ ಜನರಲ್ಲಿ ವಿಚಿತ್ರವಾದ ಆಕರ್ಷಣೆಯನ್ನು ಹುಟ್ಟುಹಾಕುತ್ತವೆ.

ಹೀಗಾಗಿ ಮಹಾನಗರಗಳೆಂಬ ಮಾಯಾಲೋಕದತ್ತ ಧಾವಿಸುವ ಧಾವಂತ ಅವರನ್ನು ಕಾಡತೊಡಗುತ್ತದೆ. ನಾನು ಕೂಡ ಇಂಥದೇ ಉಮೇದಿನಲ್ಲಿ ಹೆಂಡತಿ-ಮಕ್ಕಳೊಂದಿಗೆ ಆಗಾಗ ಬೆಂಗಳೂರಿಗೆ ತೆರಳಿದರೂ, ಮರಳಿ ಬರುವಾಗ ಆ ಉಮೇದು ಸಂಪೂರ್ಣ ಅಳಿದಿರುತ್ತದೆ. ವಿಚಿತ್ರವೆಂದರೆ, ಮತ್ತೆ ಕೆಲವು ದಿನ ಕಳೆದರೆ ಸಾಕು ಅದೇ ಉಮೇದು ಅದೇಕೋ ಆವರಿಸಿಕೊಳ್ಳುತ್ತದೆ.

ಕೆಲವು ದಿನಗಳ ಹಿಂದೆ ಇಂಥ ಉಮೇದು ಆವರಿಸಿದಾಗ ಹೆಂಡತಿ-ಮಕ್ಕಳೊಂದಿಗೆ ಬೆಂಗಳೂರು ತಲುಪಿ ಅಲ್ಲಿರುವ ನನ್ನ ಸಹೋದರನಿಗೆ ಫೋನಾಯಿಸಿದೆ. ನಮ್ಮನ್ನು ಕರೆದುಕೊಂಡು ಹೋಗಲು ತಾನು ಬರುತ್ತಿರುವುದಾಗಿ ಅವನು ತಿಳಿಸಿದ. ನಾನು ಇಳಿದ ಸ್ಥಳದಿಂದ ನನ್ನ ಸಹೋದರನ ಮನೆಗೆ ತಲುಪುವುದಕ್ಕೆ ೧೦ ನಿಮಿಷದ ಹಾದಿ. ಆದರೆ ೧೫ ನಿಮಿಷ ಕಳೆದರೂ ಅವನು ಬಾರದಿದ್ದಾಗ ಮತ್ತೊಮ್ಮೆ ಕರೆ ಮಾಡಿದಾಗ, ‘ಕಾರು ಪಂಕ್ಚರ್ ಆಗಿದೆ. ಅರ್ಧ ತಾಸಿನೊಳಗೆ ಅಲ್ಲಿಯೇ
ಇರ‍್ತೀನಿ. ಒಂದಷ್ಟು ಕಾಯಿರಿ’ ಎಂದ. ‘ಬ್ಯಾಡ ಬಿಡು, ನಾನ ಬರ‍್ತೀನಿ’ ಎನ್ನುವಷ್ಟರಲ್ಲಿಯೇ ಅವನು ‘ಲಗೇಜ್ ಇದೆಯೇನೋ, ನಾನೇ ಬರ‍್ತೀನಿ’ ಎಂದು ಹೇಳಿ ಕರೆಯನ್ನು ತುಂಡರಿಸಿದ. ಬೇರೆ ದಾರಿಗಾಣದೆ, ‘ಹೇಗಪ್ಪಾ ಅರ್ಧ ಗಂಟೆ ಕಳೆಯೋದು?’ ಅಂತ ಯೋಚಿಸುತ್ತಿರುವಾಗಲೇ ಸನಿಹದಲ್ಲಿದ್ದ ಉದ್ಯಾನವೊಂದು ಕಂಡಿತು. ಅಲ್ಲಿಯೇ ಒಂದಷ್ಟು ಹೊತ್ತು ಕುಳಿತುಕೊಂಡರಾಯಿತು ಎಂದುಕೊಂಡು ಹೆಂಡತಿ-ಮಕ್ಕಳೊಂದಿಗೆ ತೆರಳಿದೆ.

ಅಲ್ಲಿನ ಬೆಂಚೊಂದರ ಮೇಲೆ ಎಲ್ಲರೂ ಆಸೀನರಾದೆವು. ತುಂಬಾ ಸುಂದರವಾಗಿದ್ದ, ಹಚ್ಚ ಹಸಿರಿನಿಂದ ಕಂಗೊಳಿಸುತ್ತಿದ್ದ ಕೃತ್ರಿಮ ಉದ್ಯಾನವದು. ತೆಂಗುಗರಿಗಳ
ಚಾಮರಗಳಿಂದ ಹಿತವಾಗಿ ತಂಗಾಳಿ ಬೀಸುತ್ತಿತ್ತು. ಹಳೆಯದನ್ನು ಕಳಚಿಕೊಂಡು ಹೊಸ ಹೂವನ್ನುಟ್ಟ ಗಿಡಮರಗಳ ರೆಂಬೆ-ಕೊಂಬೆಗಳ ಮಧ್ಯೆ ಆಗಾಗ ಮೆಲ್ಲನೆ ಇಣುಕುತ್ತಿದ್ದ ನೇಸರನ ಹೊಂಬೆಳಕು, ಅಲ್ಲಿಯೇ ಪುಟ್ಟದಾಗಿ ಹರಿಯುತ್ತಿದ್ದ ತೊರೆಯ ಜುಳುಜುಳು ನಿನಾದ ಮನಸ್ಸಿಗೆ ಮುದ ನೀಡುತ್ತಿದ್ದವು. ಅಲ್ಲಲ್ಲಿ ಮರಗಳ ಮಡಿಲಲ್ಲಿ ಅವಿತುಕೊಂಡಿದ್ದ ಒಂದಷ್ಟು ಹಕ್ಕಿಗೂಡುಗಳು, ರೆಂಬೆ-ಕೊಂಬೆಗಳ ಮೇಲೆ ಸ್ವಚ್ಛಂದವಾಗಿ ಉಲಿಯುತ್ತಿದ್ದ ಹಕ್ಕಿಗಳು ನನ್ನನ್ನು ಪ್ರಯಾಣದ ಆಯಾಸ ದಿಂದ ಮುಕ್ತಗೊಳಿಸಿ ನವೋಲ್ಲಾಸವನ್ನು ಮೂಡಿಸಿದವು.

ಹಾಗೇ ಸುತ್ತಲೂ ಒಮ್ಮೆ ಕಣ್ಣು ಹಾಯಿಸಿದಾಗ, ಬೆಳಗಿನ ವಾಯುವಿಹಾರಕ್ಕೆಂದು ಉದ್ಯಾನಕ್ಕೆ ಆಗಮಿಸಿದ್ದ ಜನರ ವಿವಿಧ ಚಟುವಟಿಕೆಗಳು ನನ್ನನ್ನು ಆಕರ್ಷಿಸಿ ದವು. ಒಂದೆಡೆ ತಮ್ಮ ದೇಹದ ಬೊಜ್ಜನ್ನು ಕರಗಿಸಲೆಂದು ವೇಗವಾಗಿ ನಡೆಯುತ್ತಿದ್ದ ಜನರು, ಮತ್ತೊಂದೆಡೆ ಸುಮ್ಮನೆ ಹರಟುತ್ತಿದ್ದ ನಿವೃತ್ತ ನೌಕರರು, ಮೌನ ವಾಗಿ ಧ್ಯಾನದಲ್ಲಿ ನಿರತರಾಗಿದ್ದ ಕೆಲವೊಬ್ಬರು. ವಿಚಿತ್ರವಾಗಿ ದನಿ ಹೊರಡಿಸುತ್ತಾ ನಗುವಿನಲ್ಲಿ ನಿರತರಾಗಿದ್ದ ಜನರ ಗುಂಪು ಇನ್ನೊಂದು ಬದಿಯಲ್ಲಿ.

ವ್ಯಾಯಾಮದ ಹೆಸರಲ್ಲಿ ದೇಹದಂಡನೆಯಲ್ಲಿ ನಿರತರಾಗಿದ್ದ ದಢೂತಿ ಜನರ ಚಿತ್ರವಿಚಿತ್ರ ಭಂಗಿಗಳೂ ನನ್ನ ಕಣ್ಣು ತುಂಬಿದವು. ಒಟ್ಟಿನಲ್ಲಿ, ಎಲ್ಲರೂ ತಮ್ಮದೇ ಆದ ಪ್ರಪಂಚದಲ್ಲಿ ಮುಳುಗಿಹೋಗಿದ್ದರು. ಹೊಟ್ಟೆಗೆ ಹಿಟ್ಟಿಲ್ಲದೆ ನರಳುವ ನೂರೆಂಟು ಜನರ ನಡುವೆಯೇ, ಉಂಡಿದ್ದನ್ನು ಕರಗಿಸಿಕೊಳ್ಳಲು ಹರಸಾಹಸ ಪಡುವ ಜನರನ್ನು ನೋಡಿದಾಗ ನಿಜಕ್ಕೂ ವಿಪರ್ಯಾಸವೆನಿಸಿತು. ನನ್ನ ಅವಲೋಕನ ಹೀಗೆಯೇ ಸಾಗುತ್ತಿರುವಾಗ, ನಡಿಗೆಯಲ್ಲಿ ನಿರತರಾಗಿದ್ದ ದಂಪತಿ ಕಾಣಿಸಿಕೊಂಡರು. ಅವರು ವೇಗವಾಗಿ ನಡೆಯುತ್ತಿದ್ದರೆ, ಸುಮಾರು ೬ ವರ್ಷದ ಹುಡುಗನೊಬ್ಬ ಇಯರ್ ಫೋನ್ ಸಿಕ್ಕಿಸಿಕೊಂಡು ಅವರನ್ನು ಹಿಂಬಾಲಿಸುತ್ತಿರು ವುದು ಕಾಣಿಸಿತು.

ಒಂದೆರಡು ಸುತ್ತಿನ ನಂತರ, ದಂಪತಿಯ ನಡಿಗೆಯ ವೇಗಕ್ಕೆ ಸಮನಾಗಿ ನಡೆಯಲಾಗದೇ ಆ ಹುಡುಗ ಸುಸ್ತಾಗಿ ನನ್ನ ಪಕ್ಕದಲ್ಲಿ ಬಂದು ಕುಳಿತುಕೊಂಡ. ಮೊಬೈಲ್‌ನಲ್ಲಿಯ ಹಾಡು ಕೇಳುತ್ತಾ ಅವನು ಏನೋ ಗುನುಗುನಿಸುತ್ತಿರುವುದನ್ನು ಗಮನಿಸಿದೆ. ಒಂದೆರಡು ನಿಮಿಷದ ಬಳಿಕ, ‘ಏನಪ್ಪಾ ನಿನ್ನ ಹೆಸರು?’ ಎಂದು ಕೇಳಿದೆ. ಅವನು ಸುಮ್ಮನೆ ತಲೆಯಾಡಿಸಿ ಸುಮ್ಮನಾದ. ನನ್ನ ಮಾತು ಅವನಿಗೆ ಕೇಳಿಸಲಿಲ್ಲ ಎಂಬುದು ನನಗರ್ಥವಾಗಿ, ಅವನು ಸಿಕ್ಕಿಸಿಕೊಂಡಿದ್ದ ಇಯರ್ ಫೋನ್ ತೆಗೆದು ಮತ್ತೊಮ್ಮೆ, ‘ಏನಪ್ಪಾ ನಿನ್ನ ಹೆಸರು’ ಎಂದು ಪ್ರಶ್ನಿಸಿದೆ. ‘ಅತೀಶ್ ಅಂಕಲ್’ ಎಂದು ಚುಟುಕಾಗಿ ಉತ್ತರಿಸಿ ಮತ್ತೆ ಇಯರ್ ಫೋನ್ ತಗುಲಿಸಿಕೊಂಡ.

ನಾನು ಮತ್ತೆ ಇಯರ್ ಫೋನ್ ತೆಗೆದು ನನ್ನ ಕೈಯಲ್ಲಿ ಹಿಡಿದುಕೊಂಡು, ‘ಯಾವ ಶಾಲೆ? ಯಾವ ತರಗತಿಯಾಗ ಓದಾಕತ್ತಿ?’ ಎಂದು ಪ್ರಶ್ನಿಸಿದಾಗ ‘ಫಸ್ಟ್ ಸ್ಟಾಂಡರ್ಡ್ ಅಂಕಲ್’ ಎಂದ. ಅವನ ದೃಷ್ಟಿಯೆಲ್ಲ ನನ್ನ ಕೈಯಲ್ಲಿರುವ ಇಯರ್ ಫೋನ್ ಮೇಲೆಯೇ ಇತ್ತು. ಮುಂದುವರಿದ ನಾನು, ‘ಅವರು ನಿಮ್ಮ ಅಪ್ಪ ಮತ್ತು
ಅವ್ವಾನಾ?’ ಎಂದೆ. ‘ಹೌದು’ ಎಂದು ತಲೆಯಾಡಿಸಿ ಸುಮ್ಮನಾದ ಅವನು. ‘ನೀನ್ಯಾಕ ವಾಕಿಂಗ್ ಮಾಡಾಕತ್ತಿ? ನಿಂಗೂ ಸಕ್ರಿ ರೋಗನಪಾ? ಮನೆಯಲ್ಲಿ ಇರಬೇಕಿಲ್ಲೋ?’ ಎಂದೆ. ಅದಕ್ಕವನು, ‘ಇಲ್ಲ ಅಂಕಲ್, ಮನೆಯಲ್ಲಿ ಇರೋದು ನಮ್ಮ ಡ್ಯಾಡಿ, ಮಮ್ಮಿ ಮತ್ತು ನಾನು ಅಷ್ಟೇ. ಮನೆಯಲ್ಲಿ ಒಬ್ಬನೇ ಇರೋದು ಬೇಡ ಅಂತ ನಿತ್ಯವೂ ನನ್ನನ್ನು ಕರೆದುಕೊಂಡು ಬರ‍್ತಾರೆ’ ಎಂದ ಮುಗ್ಧ ದನಿಯಲ್ಲಿ.

‘ಅದೇನೋ, ಬೆಳಗ್ಗೆ ಬೆಳಗ್ಗೆನೇ ಇಯರ್ ಫೋನ್ ಹಾಕ್ಕೋಂಡಿ?’ ಎಂದು ಮತ್ತೆ ಮಾತಿಗೆಳೆದಾಗ, ‘ಹೌದು ಅಂಕಲ್, ರೈಮ್ಸ್ ಬೈಹಾರ್ಟ್ ಮಾಡಿಕೊಂಡು ಹೋಗದಿದ್ದರೆ ಸ್ಕೂಲ್‌ನಲ್ಲಿ ಫೋನ್ ಹಾಕ್ತಾರೆ; ಅದನ್ನೇ ಕೇಳ್ತಾ ಇದ್ದೆ’ ಎಂದ. ನಮ್ಮಿಬ್ಬರ ಈ ಮಾತಿನ ಮಧ್ಯೆಯೂ ಆಗಾಗ ಉಲಿಯುತ್ತಿದ್ದವು ಹಕ್ಕಿಗಳು. ಆ ಇಂಚರ ನನ್ನ ಕಿವಿಯನ್ನು ತುಂಬಿಕೊಂಡು ಆಹ್ಲಾದಕರ ಅನುಭವ ನೀಡುತ್ತಿತ್ತು, ಮನಸ್ಸು ಪ್ರಫುಲ್ಲಿತಗೊಳ್ಳುತ್ತಿತ್ತು. ಅದನ್ನೇ ಗಮನದಲ್ಲಿಟ್ಟುಕೊಂಡು ನಾನು, ‘ಏ ಅತೀಶ್, ಹಕ್ಕಿಗಳ ಹಾಡು ನಿನಗೆ ಕೇಳಸ್ತದೇನು?’ ಎಂದು ಕೇಳಿದೆ. ಅದಕ್ಕವನು ಬೆರಗಾಗಿ, ‘ಅದೆಂತ ಸುಳ್ಳು ಹೇಳುತ್ತೀರಿ ಅಂಕಲ್ ನೀವು? ಹಕ್ಕಿಗಳು ಹಾಡುತ್ತವೆಯೇ?’ ಎಂದ.

‘ಹೌದು ಬಿಡು, ನೀನು ಹೇಳುತ್ತಿರುವುದು ನಿಜವೇ. ಅವುಗಳ ದನಿಯಾದ್ರೂ ಕೇಳ್ತದೇನು?’ ಎಂದೆ. ಅದಕ್ಕವನು, ‘ಹಕ್ಕಿಗಳ ಧ್ವನಿಯೇ? ಎಲ್ಲಿ? ನನಗೇನೂ ಕೇಳುತ್ತಿಲ್ಲ’ ಎಂದ. ಮರದ ಕೊಂಬೆಗಳಲ್ಲಿ ಕೂತಿದ್ದ ಹಕ್ಕಿಗಳ ಕಲರವವನ್ನು ಕೇಳಿಸಿಕೊಳ್ಳಲಾಗದಷ್ಟು ಕಿವುಡನಾಗಿದ್ದ ಆ ಪುಟ್ಟ ಹುಡುಗ. ಕಿವುಡಾಗಿರುವುದು ಆ ಹುಡುಗ ಮಾತ್ರವೇ ಅಲ್ಲ, ನಾವು ಕೂಡ. ಇದು ತೀರಾ ವಿಷಾದಕರ ಸಂಗತಿ. ಇದು ಬೆಂಗಳೂರಿನ ಬದುಕು ಮಾತ್ರವಲ್ಲ, ನಾವು ಬದುಕುತ್ತಿರುವ ವಾಸ್ತವ
ಪ್ರಪಂಚದ ವಿಪರ್ಯಾಸ. ನಾವೆಲ್ಲ ಇಂದು, ನಮ್ಮ ಸುತ್ತಲಿನ ಹಕ್ಕಿಗಳ ಕಲರವ ಕಿವಿಗೆ ಕೇಳಿಸದಷ್ಟು ಕಿವುಡರಾಗಿದ್ದೇವೆ. ಒಂದು ಕಾಲಕ್ಕೆ ನಿಸರ್ಗದ ಶಿಶುವಾಗಿದ್ದ ನಮಗೆಲ್ಲ ಪ್ರಕೃತಿಯೇ ಸರ್ವಸ್ವವಾಗಿತ್ತು.

ಪುರಾಣ-ಪುಣ್ಯಕಥೆ, ರಾಮಾಯಣ-ಮಹಾಭಾರತ ಸೇರಿದಂತೆ ಇತರೆಲ್ಲ ಧರ್ಮಗ್ರಂಥಗಳೂ ‘ಪ್ರಕೃತಿಯೇ ದೇವರು’ ಎಂಬ ಬಹುದೊಡ್ಡ ಮೌಲ್ಯವನ್ನು ಬಿತ್ತುತ್ತವೆ. ಪಾಂಡವರು ಜೂಜಿನಲ್ಲಿ ಎಲ್ಲವನ್ನೂ ಕಳೆದುಕೊಂಡು ವನವಾಸದಲ್ಲಿದ್ದ ಸಂದರ್ಭವದು. ದ್ರೌಪದಿಯ ವಸಾಪಹರಣ, ಕೇಶಾಪಕರ್ಷಣದಂಥ ಅಪಮಾನಕರ ಘಟನೆಗಳಿಂದಾಗಿ ತೀವ್ರವಾಗಿ ನೊಂದಿದ್ದ ಪಾಂಡವರ ಮನಸ್ಸು ಜರ್ಜರಿತವಾಗಿತ್ತು. ಒಂದು ಮುಂಜಾನೆ ತಂಗಾಳಿಯಲ್ಲಿ ಹೂವೊಂದರ ಕಂಪು ತೇಲಿಬಂತು.
ದೂರದಲ್ಲಿದ್ದುಕೊಂಡೇ ಪರಿಮಳದ ಮಧುರಾನುಭೂತಿಯನ್ನು ಈ ಪರಿಯಲ್ಲಿ ನೀಡುವ ಆ ಹೂವಿನ ಸೌಂದರ್ಯ ಹೇಗಿರಬಹುದು ಎಂದು ದ್ರೌಪದಿ ಕಲ್ಪಿಸಿಕೊಳ್ಳ ತೊಡಗಿ, ‘ಅದು ನನಗೆ ಬೇಕು, ತಂದುಕೊಡು’ ಎಂದು ಭೀಮನಿಗೆ ಹೇಳಿದಳು. ಭೀಮ ಅದಕ್ಕೆಂದು ಸಿದ್ಧನಾದ. ಎಲ್ಲವನ್ನೂ ಕಳೆದುಕೊಂಡು ನಿರ್ಗತಿಕರಂತೆ ಕಾಡಿನಲ್ಲಿದ್ದರೂ ಪ್ರಕೃತಿಯ ಜತೆಗಿನ ನಂಟು ಪಾಂಡವರಲ್ಲಿ ಕಮ್ಮಿಯಾಗಿರಲಿಲ್ಲ. ಸಾಕಷ್ಟು ತೊಂದರೆ-ತೊಡಕು ಎದುರಿಸಿ ಭೀಮನು ಆ ಸೌಗಂಧಿಕಾ ಪುಷ್ಪವನ್ನು ಪತ್ತೆ ಹಚ್ಚಿ ದ್ರೌಪದಿಗೆ ತಂದುಕೊಟ್ಟ. ಪ್ರಕೃತಿಯ ಜತೆಗಿನ ನಮ್ಮ ಹೊಕ್ಕಳುಬಳ್ಳಿ ಸಂಬಂಧವನ್ನು ಸಾಕ್ಷೀಕರಿಸುವ, ನಮ್ಮದೇ ನೆಲದ ಇಂಥ ಮೌಲ್ಯಗಳೆಲ್ಲವೂ ಕ್ರಮೇಣ ನೇಪಥ್ಯಕ್ಕೆ ಜಾರುತ್ತಿವೆ.

ಇದಕ್ಕೆ ಕಾರಣವೂ ಇಲ್ಲದಿಲ್ಲ. ಆಧುನಿಕತೆಯನ್ನು ಅಪ್ಪುವ ಭರದಲ್ಲಿ ನಾವು ಸುತ್ತಣ ಪರಿಸರವನ್ನು ಪ್ರೀತಿಸದಷ್ಟು ಸ್ವಾರ್ಥಿಗಳಾಗಿದ್ದೇವೆ. ಪ್ರಕೃತಿಯಲ್ಲಿ ನೈಜವಾಗಿ ದೊರೆಯುವ ಆನಂದವನ್ನು ಅನುಭವಿಸಲೂ ನಮಗೆ ಸಾಧ್ಯವಾಗುತ್ತಿಲ್ಲ. ಸಲ್ಲದ ಅಸಂಗತ ನಿಲುವುಗಳಲ್ಲಿ ಬಂದಿಯಾಗಿದ್ದೇವೆ. ಅಭಿವೃದ್ಧಿಶೀಲತೆಯ ಬೆನ್ನತ್ತಿರುವ ನಾವು ನಿಸರ್ಗಕ್ಕೆ ಬೆನ್ನು ಹಾಕಿರುವುದನ್ನು ಉದ್ಯಾನದಲ್ಲಿದ್ದ ಆ ಹುಡುಗನ ಸ್ಥಿತಿಯೇ ಮತ್ತೊಮ್ಮೆ ಸಾಕ್ಷೀಕರಿಸಿತು. ನಿಸರ್ಗವನ್ನು ಕೊಳ್ಳೆ ಹೊಡೆಯುವುದನ್ನೇ ನಿತ್ಯದ ವ್ಯವಹಾರವನ್ನಾಗಿಸಿಕೊಂಡಿರುವ ನಾವು, ಪ್ರಕೃತಿಯನ್ನು ಮಾರಾಟದ ವಸ್ತುವಾಗಿಸಿಕೊಂಡು ತಿನ್ನುವ ಅನ್ನ, ಕುಡಿಯುವ ನೀರು, ಉಸಿರಾಡುವ ಗಾಳಿಯನ್ನು ಮಲಿನವಾಗಿಸಿದ್ದೇವೆ.

ನಮ್ಮ ಬದುಕಿಗೆ ನೆಮ್ಮದಿ ನೀಡುವ ಗಿಡ, ಹೂವು, ಹಕ್ಕಿ, ಹರಿವ ಹೊಳೆ ಮೊದಲಾದವನ್ನು ಪ್ರೀತಿಸುವುದನ್ನು ಮರೆತಿದ್ದೇವೆ. ನಾಗರಿಕರೆನಿಸಿಕೊಳ್ಳುವ ಧಾವಂತ ದಲ್ಲಿ ಸುತ್ತಲ ಜಗತ್ತಿನ ರಮ್ಯತೆ, ಬೆರಗುಗಳನ್ನು ಅನುಭವಿಸಲಾರದಷ್ಟು ಬದಲಾಗಿದ್ದೇವೆ. ಸುಂದರ ಪ್ರಕೃತಿಯಿಂದ ದೂರ ಸರಿದು ಯಾವುದೋ ಮೂಲೆಯಲ್ಲಿ ಒಂಟಿಯಾಗಿ ನಿಲ್ಲುತ್ತಿದ್ದೇವೆ. ಇರುವುದೆಲ್ಲವನ್ನೂ ಬಿಟ್ಟು ಇಲ್ಲದುದರೆಡೆಗೆ ತುಡಿಯುವ ಧಾವಂತದಲ್ಲಿ, ಸ್ವಾರ್ಥಸಾಧನೆಗೆ ಇನ್ನಿಲ್ಲದ ಪ್ರಾಧಾನ್ಯ ನೀಡಿ ಸುತ್ತಲಿನ ಸಹಜ-ಸಂಬಂಧಗಳನ್ನೆಲ್ಲ ಕಡಿದುಕೊಳ್ಳುತ್ತಿದ್ದೇವೆ, ಬದುಕನ್ನು ತೀರಾ ಶೋಚನೀಯವಾಗಿಸಿಕೊಂಡಿದ್ದೇವೆ. ಇಂಥ ಭ್ರಾಂತಿಯಿಂದ ಬಿಡುಗಡೆ ಸಾಧ್ಯವೇ? ಇದು ನಮ್ಮೆಲ್ಲರನ್ನೂ ಕಾಡಬೇಕಾದ ಗಂಭೀರ ಪ್ರಶ್ನೆ.

(ಲೇಖಕರು ಶಿಕ್ಷಕರು)