ಹೆಂಗರುಳು
ಸಿಂಚನ ಎಂ.ಕೆ. ಮಂಡ್ಯ
ಹೆಣ್ಣೊಬ್ಬಳು ಗರ್ಭ ಧರಿಸಿದ ಅವಸ್ಥೆಯಲ್ಲಿದ್ದಾಗ ಆಕೆಯನ್ನು ಸಮಾಜದಲ್ಲಿ ಹೆಚ್ಚು ರಕ್ಷಣಾತ್ಮಕವಾಗಿ ನೋಡಿಕೊಳ್ಳಲಾಗುತ್ತದೆ. ಅಂತೆಯೇ ಆಕೆಯೂ ತನ್ನ ಬಗೆಗೆ ಹೆಚ್ಚು ಕಾಳಜಿ ವಹಿಸಲು ಶುರುಮಾಡುತ್ತಾಳೆ. ಏಕೆಂದರೆ ಅಂದಿನಿಂದ ಅವಳದು ಏಕಾಂತದ ಪಯಣವಲ್ಲ, ಭವಿಷ್ಯದ ಜೀವವು ಅವಳ ಜತೆಯಾಗಿರುವ ಜಂಟಿ ಪಯಣ ಶುರುವಾಗುತ್ತದೆ. ಪ್ರಕೃತಿಯು ಆಕೆಗೆ ತನ್ನ ಸೃಜನ ಕಾರ್ಯದ ಜವಾಬ್ದಾರಿಯನ್ನು ನೀಡಿರುವುದರಿಂದ, ಸೃಷ್ಟಿ ಚೈತನ್ಯವು ಸದಾಕಾಲ ಸಂಪದ್ಭರಿತ ವಾಗಿರುವಂತೆ ನೋಡಿಕೊಳ್ಳುತ್ತಾ ತನ್ನ ಕರ್ತವ್ಯವನ್ನು ಶ್ರದ್ಧೆಯಿಂದ ನಿರ್ವಹಿಸುತ್ತಾಳೆ.
ಶರನ್ನವರಾತ್ರಿಯ ನಾಲ್ಕನೇ ದಿನ ಆರಾಽಸಲಾಗುವ ಜಗನ್ಮಾತೆ ಕೂಷ್ಮಾಂಡ ದೇವಿಯು ಇಡೀ ಜಗತ್ತನ್ನೇ ತನ್ನ ಗರ್ಭವಾಗಿ ಧರಿಸಿದ್ದಾಳೆ ಎಂದು ದೇವಿ ಮಹಾತ್ಮೆಯಲ್ಲಿ ಉಲ್ಲೇಖಿಸಲಾಗಿದೆ. ಈ ಪ್ರಪಂಚದಲ್ಲಿ, ಬೀಜ ಬಿತ್ತಿದಾಗ ಫಲವನ್ನು ನೀಡುವ ಭೂಮಿಯನ್ನಾಗಲಿ, ಬೆಳವಣಿಗೆಗೆ ಅವಶ್ಯಕವಾದ ಜಲವನ್ನು ನೀಡುವ ನದಿಯನ್ನಾಗಲಿ, ಜೀವ ನಪರ್ಯಂತ ಪೋಷಣೆಯಲ್ಲಿ ಪ್ರಮುಖವಾಗುವ ಹಾಲನ್ನು ನೀಡುವ ಗೋವನ್ನಾಗಲಿ, ನಮಗೆ ಜನ್ಮ ನೀಡುವುದರಿಂದ ಮೊದಲ್ಗೊಂಡು ಬದುಕು ಕಟ್ಟಿಕೊಳ್ಳಲು ಸಂಪೂರ್ಣ ಸಹಾಯ ಮಾಡುವ ತಾಯಿಯನ್ನಾಗಲಿ ಮಾತೃಸ್ಥಾನದಲ್ಲಿ ಪೂಜಿಸಿ ಗೌರವಿಸಲಾಗುತ್ತದೆ.
ಇಂಥ ಸ್ತ್ರೀಯನ್ನು (ಜನನಿಯನ್ನು) ಆಕೆ ಜನಿಸುವ ಮೊದಲೇ ಹತ್ಯೆ ಮಾಡುತ್ತಿರುವ, ಪುತ್ರಿಕಾ-ಸುಮಗಳು ಅರಳುವ ಮುನ್ನವೇ ಅವನ್ನು ಬಾಡಿಸುತ್ತಿರುವ ಅಂಧರು, ಅಜ್ಞಾನಿಗಳು ಮತ್ತು ಅವಿವೇಕಿಗಳಿಗೆ ಘೋರ ಽಕ್ಕಾರವಿರಲಿ. ಮಂಡ್ಯದ ಆಲೆಮನೆಯೊಂದರಲ್ಲಿ ರಹಸ್ಯವಾಗಿ ನಡೆಯುತ್ತಿದ್ದ ಹೆಣ್ಣು ಭ್ರೂಣಹತ್ಯೆಯ ಪ್ರಕರಣವು ಇತ್ತೀಚೆಗೆ ಬೆಳಕಿಗೆ ಬಂದು ರಾಜ್ಯಾದ್ಯಂತ ಸಂಚಲನ ಮೂಡಿಸಿದೆ. ಐದು ತಿಂಗಳುಗಳವರೆಗಿನ ಹೆಣ್ಣು ಭ್ರೂಣಗಳನ್ನು ಹೀಗೆ ಹತ್ಯೆ ಮಾಡಿರುವುದು, ಅಂಥ ಕುಕೃತ್ಯದಲ್ಲಿ ತೊಡಗಿಸಿಕೊಂಡಿದ್ದ ಖದೀಮರ ಮತ್ತು ಅವರಿಂದ ಭ್ರೂಣಹತ್ಯೆ ಮಾಡಿಸಿದ ಕುಟುಂಬದವರ ವಿಕೃತ ಮನಸ್ಥಿತಿಗೆ ದ್ಯೋತಕವಾಗಿದೆ.
ಐದು ಹೆಣ್ಣು ಮಕ್ಕಳನ್ನು ಪಡೆದ ತರುವಾಯ ತಾಯಿ ಭುವನೇಶ್ವರಿಯು ಅನನ್ಯ ಭಕ್ತಿಯಿಂದ ಕಾಶಿ ವಿಶ್ವನಾಥ ಸ್ವಾಮಿಯಲ್ಲಿ ಪ್ರಾರ್ಥನೆ ಮಾಡಿ, ಮುಂದೆ ಜಗದ್ವಿ ಖ್ಯಾತರಾದ ಸ್ವಾಮಿ ವಿವೇಕಾನಂದರಂಥ ಶ್ರೇಷ್ಠ ಪುತ್ರನನ್ನು ಹಡೆದರು. ಹಾಗೆಯೇ ಇಂದಿನ ಕಾಲದಲ್ಲೂ, ಎರಡು ಅಥವಾ ಮೂರು ಹೆಣ್ಣು ಮಕ್ಕಳ ನಂತರ ದೇವರಲ್ಲಿ ಹರಕೆ ಹೊತ್ತು, ಪ್ರಾರ್ಥನೆ ಮಾಡಿ ‘ವಂಶೋದ್ಧಾರಕ’ ಗಂಡು ಮಗುವನ್ನು ಪಡೆಯುವವರಿದ್ದಾರೆ. ಯಾವುದಾದರೂ ಹರಕೆಯನ್ನು ಹೊತ್ತರೆ, ೧೨ ವರ್ಷದ ಕಾಲಾವಧಿಯೊಳಗೆ ಅದನ್ನು ತೀರಿಸಬೇಕೆಂಬ ಪ್ರತೀತಿ ನಮ್ಮ ಸಂಸ್ಕೃತಿಯಲ್ಲಿದೆ. ಆದಾಗ್ಯೂ ತಂದೆ-ತಾಯಿ, ಜತೆಗೆ ಅವರ ಬಂಧುಗಳೆಲ್ಲಾ ಪುತ್ರರತ್ನನಿ ಗಾಗಿ ಎಷ್ಟೊಂದು ಹರಕೆಗಳನ್ನು ಹೊರುತ್ತಾರೆಂದರೆ, ೧೨ ವರ್ಷದೊಳಗೆ ಆ ಎಲ್ಲಾ ದೇವಸ್ಥಾನಗಳಿಗೆ ತೆರಳಿ ಹರಕೆ ತೀರಿಸುವುದು ಸಾಧ್ಯವೇ ಆಗುವುದಿಲ್ಲ.
ಹೀಗಾಗಿ ತಪ್ಪುಕಾಣಿಕೆ ಸಲ್ಲಿಸಿ ಆ ಮಗುವಿಗೆ ೧೮-೨೦ ವರ್ಷಗಳಾಗುವ ತನಕವೂ ಹರಕೆ ತೀರಿಸುತ್ತಲೇ ಇರುವ ನಿದರ್ಶನಗಳು ಕಂಡುಬರುತ್ತವೆ. ವಂಶೋ ದ್ಧಾರಕನನ್ನು ಪಡೆಯಲು ಹೀಗೆ ಹಲವಾರು ಹರಕೆ, ಪ್ರಾರ್ಥನೆ, ವ್ರತಗಳನ್ನು ಕೈಗೊಳ್ಳುವುದು ಅತ್ಯುತ್ತಮ ವಿಚಾರವೇ ಸರಿ; ಇದು ಆಕ್ಷೇಪಾರ್ಹವೇನೂ ಅಲ್ಲ. ಆದರೆ, ಅದೇ ಸಂದರ್ಭದಲ್ಲಿ ಹೆಣ್ಣು ಭ್ರೂಣದ ಹತ್ಯೆ ಮಾಡಿ ವಂಶೋದ್ಧಾರಕನನ್ನು ಪಡೆದುಕೊಳ್ಳುವ ಪ್ರಯತ್ನಕ್ಕೆ ಮುಂದಾಗುವುದು ದೊಡ್ಡ ಅಪರಾಧವೇ ಸರಿ. ಏಕೆಂದರೆ ಈ ವಂಶೋದ್ಧಾರಕನು ಇಂಥವರ ವಂಶವನ್ನು ಬೆಳೆಸಲು ಮತ್ತೊಂದು ಉತ್ತಮ ಮನೆತನದ ಕನ್ಯೆಯನ್ನು ವರಿಸಬೇಕಲ್ಲವೇ? ಹಾಗೆಯೇ ಇಂಥವರ ಕುಟುಂಬದ ಕನ್ಯೆಯು ಅನ್ಯ ಮನೆತನದ ವಂಶೋದ್ಧಾರಕನನ್ನು ವರಿಸಿ ಆ ವಂಶವನ್ನು ಬೆಳೆಸಬೇಕಲ್ಲವೇ? ಹಾಗಾಗಿ ಸೃಷ್ಟಿಗೆ ಇಬ್ಬರೂ ಅತ್ಯವಶ್ಯಕ.
ಗಂಡು ಸಂತಾನ ಇಲ್ಲದವರು ತಮ್ಮ ಅಳಿಯನನ್ನೇ ಮಗನಂತೆ ಪ್ರೀತಿಯಿಂದ ಕಂಡರೆ ಹಾಗೂ ಹೆಣ್ಣು ಸಂತಾನವಿಲ್ಲದವರು ತಮ್ಮ ಸೊಸೆಯನ್ನೇ ಮಗಳಂತೆ ವಾತ್ಸಲ್ಯದಿಂದ ಕಂಡರೆ ಯಾವ ಸಮಸ್ಯೆಯೂ ಸುಳಿಯುವುದಿಲ್ಲ! ಸೃಜನ ಕಾರ್ಯವು ಪ್ರಕೃತಿ ದತ್ತವಾಗಿ ಹೆಣ್ಣಿಗೆ ದೊರೆತಿರುವುದರಿಂದ, ಪ್ರತಿಯೊಂದು ಹೆಣ್ಣು ಕೂಡ ತಾಯಿಯಾಗುವವಳೇ, ತಾಯಿಯೇ. ಹೀಗಿರುವಾಗ, ಹೆಣ್ಣು ಮಗು ಬೇಡವೆಂದು ಹೆಣ್ಣು ಭ್ರೂಣಹತ್ಯೆ ಮಾಡುತ್ತಿದ್ದಾರೆಂದರೆ, ಪರೋಕ್ಷವಾಗಿ ಅವರು ತಾಯಿಯನ್ನೇ ಕೊಲ್ಲುತ್ತಿದ್ದಾರೆ ಎಂದು ಅರ್ಥವಲ್ಲವೇ? ಶಿಶುವು ತನ್ನ ಗರ್ಭದಲ್ಲಿರುವಾಗ ಗಣನೀಯ ಪ್ರಮಾಣದಲ್ಲಿ ಉತ್ತಮ ಸಂಸ್ಕಾರಗಳು ಅದಕ್ಕೆ ದಕ್ಕುವಂತಾಗಲು ತಪಸ್ವೀ ಜೀವನ ಮಾಡುವವಳು ತಾಯಿ; ಹಾಗಿದ್ದರೂ ಹೆಣ್ಣು ಭ್ರೂಣಹತ್ಯೆ ಮಾಡುತ್ತಿದ್ದಾರೆಂದರೆ, ಸಂಸ್ಕಾರದಾತೆಯನ್ನು ಕೊಲ್ಲುತ್ತಿದ್ದಾರೆ ಎಂದಾಯಿತಲ್ಲವೇ? ‘ಮನೆಯೆ ಮೊದಲ ಪಾಠಶಾಲೆ, ಜನನಿ ತಾನೆ ಮೊದಲ ಗುರುವು’ ಎಂದಿದ್ದಾರೆ ನಮ್ಮ ಹಿಂದಿನವರು.
ಹಾಗಿದ್ದರೂ ಹೆಣ್ಣು ಭ್ರೂಣಹತ್ಯೆಗೆ ಮುಂದಾಗುತ್ತಿದ್ದಾರೆಂದರೆ, ಅವರು ಮಕ್ಕಳ ಮೊದಲ ಗುರುವನ್ನು ಕೊಲ್ಲುತ್ತಿದ್ದಾರೆ ಎಂದಾಯಿತಲ್ಲವೇ? ಹುಡುಗಿಯರು ಎಲ್ಲಾ ಕ್ಷೇತ್ರಗಳಲ್ಲೂ ತಮ್ಮ ಛಾಪನ್ನು ಮೂಡಿಸುತ್ತಿದ್ದಾರೆ, ಸಾಧನೆಗೈದು ಗೌರವಾದರಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಆದಾಗ್ಯೂ ಪ್ರಪಂಚದ ಯಾವುದೇ ಕ್ಷೇತ್ರಗಳಲ್ಲಿ ಮಹಿಳೆಯು ಕಾರ್ಯತತ್ಪರಳಾಗದಿದ್ದರೆ ನಷ್ಟವಿಲ್ಲ. ಆದರೆ ಸಮರ್ಪಣಾ ಭಾವದಿಂದ ಕುಟುಂಬವನ್ನು ಬೆಳೆಸುವ, ಪೊರೆಯುವ ಆದರ್ಶಮಯಿ ತಾಯಿಯಾಗಿ
ಆಕೆ ಕಾರ್ಯನಿರ್ವಹಿಸದಿದ್ದರೆ ಸಮಾಜಕ್ಕೆ ಆಗುವುದು ತುಂಬಲಾರದ ನಷ್ಟ. ಕಾರಣ ಆ ಸ್ಥಾನವನ್ನು ಮತ್ತಾರೂ ತುಂಬಲಾರರು. ಈ ಒಂದು ಮಹತ್ಕಾರ್ಯವನ್ನು ಹೆಣ್ಣು ವಹಿಸಿಕೊಂಡಿರುವುದರಿಂದಲೇ ನಮ್ಮ ಸಂಸ್ಕೃತಿಯು ಆಕೆಗೆ ಅಪಾರ ಗೌರವ ಮತ್ತು ಪ್ರಾಮುಖ್ಯವನ್ನು ನೀಡುತ್ತದೆ.
ಎಂಥ ಧೀಮಂತ, ಪೌರುಷವಂತ, ಸಾಹಸವಂತ ವ್ಯಕ್ತಿಯಾದರೂ ಆತ ತಾಯಿಯ ಮುಂದೆ ಮಗುವೇ; ಅದೇ ತಾಯಿಯ ಪದವಿಗಿರುವ ಪ್ರಚಂಡಶಕ್ತಿ. ಬಹುತೇಕ ಯಶಸ್ವಿ ವ್ಯಕ್ತಿಗಳ ಹಿಂದೆ ಅವರ ತಂದೆ-ತಾಯಿಯರ, ಅದರಲ್ಲೂ ವಿಶೇಷವಾಗಿ ತಾಯಿಯ ಪಾತ್ರ ಗಣನೀಯವಾಗಿರುತ್ತದೆ. ‘ಕೊಟ್ಟ ಹೆಣ್ಣು ಕುಲಕ್ಕೆ ಹೊರಗೆ’ ಅನ್ನುವ ಹಾಗೆ, ಹೆಣ್ಣಿಗೆ ಮದುವೆ ಮಾಡಿಕೊಟ್ಟು ತವರುಮನೆಯಿಂದ ಬೀಳ್ಕೊಟ್ಟ ಮೇಲೆ ಪತಿಯ ಮನೆಯೇ ಆಕೆಗೆ ಸರ್ವಸ್ವ. ತರುವಾಯದಲ್ಲಿ ಆಕೆ ತವರಿಗೆ ಬರುವುದು ವಿರಳಾತಿವಿರಳ. ಆದ್ದರಿಂದ, ‘ಗಂಡು ಮಗುವಿದ್ದರೆ ಕೊನೆಯುಸಿರು ಇರುವ ತನಕ ತಮ್ಮ ಜತೆಗಿರಬಹುದು, ಉಸಿರು ನಿಂತುಹೋದ ಮೇಲೂ ನಮಗೆ
ಮೋಕ್ಷ ಸಿಗುವಂತಾಗಲು ಆತ ಯಥೋಚಿತ ಸಂಸ್ಕಾರ ಕಾರ್ಯಗಳನ್ನು ಮಾಡಬಹುದು’ ಎಂಬುದಾಗಿ ಹಿಂದೆಲ್ಲ ತಂದೆ-ತಾಯಿ ಗಂಭೀರವಾಗಿ ಆಲೋಚಿಸು ತ್ತಿದ್ದರು.
ಆದರೆ ಈಗಿನ ಕಾಲ ಹಾಗಿಲ್ಲ; ಸಂಪರ್ಕ-ಸಾರಿಗೆ, ತಂತ್ರಜ್ಞಾನದಲ್ಲಿ ತೀವ್ರಗತಿಯ ಬೆಳವಣಿಗೆಯಾಗಿದೆ. ಒಂದೇ ದಿನ ಹಲವಾರು ಕಡೆ ಸಂಚರಿಸಬಹುದು, ಕೆಲವೇ ದಿನಗಳಲ್ಲಿ ಪ್ರಪಂಚವನ್ನು ಸುತ್ತಬಹುದು. ಮಗಳು ಎಷ್ಟೇ ದೂರದಲ್ಲಿದ್ದರೂ, ಹೆತ್ತವರನ್ನು ನೋಡುವ ಆಸೆಯಾದರೆ ಕ್ಷಿಪ್ರವಾಗಿ ಧಾವಿಸಬಹುದು. ಆದ್ದರಿಂದ, ಗಂಡು ಮಗುವನ್ನು ಪಡೆಯುವ ಸಲುವಾಗಿ ಹೆಣ್ಣು ಭ್ರೂಣವನ್ನು ಹತ್ಯೆ ಮಾಡಿ ನೈತಿಕವಾಗಿ ಮಾತ್ರವಲ್ಲದೆ ವೈಜ್ಞಾನಿಕವಾಗಿಯೂ ಅಪರಾಧ ಮಾಡಿ ಪ್ರಕೃತಿಯ ಸಮತೋಲನವನ್ನು ಹಾಳುಮಾಡಬೇಡಿ. ಒಂದೊಮ್ಮೆ ಗಂಡು ಸಂತಾನವಾಗದಿದ್ದರೆ, ಭವಿಷ್ಯದಲ್ಲಿ ಬರುವ ಅಳಿಯನನ್ನೇ ಮಗನಂತೆ ಕಾಣಿರಿ. ಭವಿಷ್ಯದಲ್ಲಿ ಬೆಳಗಬೇಕಾದ ದೀಪಗಳನ್ನು ಒತ್ತಾಯಪೂರ್ವಕವಾಗಿ ಆರಿಸಬೇಡಿ.
(ಲೇಖಕಿ ಹವ್ಯಾಸಿ ಬರಹಗಾರ್ತಿ)