ಬೆಂಗಳೂರು: ರಾಜ್ಯದ ಎಲ್ಲ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಶೌಚಾಲಯಗಳ ಸ್ವಚ್ಛತೆ ನಿರ್ವಹಿಸಲು ವಿದ್ಯಾರ್ಥಿಗಳನ್ನು ಬಳಸು ವಂತಿಲ್ಲ ಎಂದು ರಾಜ್ಯ ಸರ್ಕಾರ ಮಾರ್ಗಸೂಚಿ ಬಿಡುಗಡೆ ಮಾಡಿದೆ.
ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಇತ್ತೀಚಿಗೆ ಶಾಲಾ ಮುಖ್ಯ ಶಿಕ್ಷಕರು, ಶಿಕ್ಷಕರು ಶೌಚಾಲಯಗಳನ್ನು ವಿದ್ಯಾರ್ಥಿಗಳಿಂದ ಸ್ವಚ್ಛತೆ ಮಾಡಿಸುತ್ತಿರುವ ಕುರಿತಾದ ಘಟನೆಗಳು ಸರ್ಕಾರದ ಮತ್ತು ಇಲಾಖೆಯ ಗಮನಕ್ಕೆ ಬಂದಿರುತ್ತದೆ.
ಶಾಲೆಗಳಲ್ಲಿ ವಿದ್ಯಾರ್ಥಿಗಳನ್ನು ಶೈಕ್ಷಣಿಕ ಚಟುವಟಿಕೆಗಳಲ್ಲಿ, ಸಹ ಪಠ್ಯ ಚಟುವಟಿಕೆಗಳಲ್ಲಿ ಹಾಗೂ ಕ್ರೀಡಾ ಚಟುವಟಿಕೆಗಳಲ್ಲಿ ಮಾತ್ರ ತೊಡಗಿಸಿಕೊಳ್ಳ ಬೇಕಾಗುತ್ತದೆ. ವಿದ್ಯಾರ್ಥಿಗಳನ್ನು ಶೌಚಾಲಯಗಳ ಸ್ವಚ್ಛತೆಯಂತಹ ಕಾರ್ಯಗಳಿಂದ ದೂರವಿರಿಸುವುದು ಅಧಿಕಾರಿಗಳ, ಮುಖ್ಯ ಶಿಕ್ಷಕರ, ಶಿಕ್ಷಕರ, ಸಿಬ್ಬಂದಿಗಳ ಕರ್ತವ್ಯವಾಗಿರುತ್ತದೆ. ಆದರೆ ಅವರುಗಳು ವಿದ್ಯಾರ್ಥಿಗಳನ್ನು ಶಾಲೆಗಳಲ್ಲಿ ಶೌಚಾಲಯಗಳ ಸ್ವಚ್ಛತೆಯಂತಹ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದು ಆಕ್ಷೇಪಣೀಯ ಮತ್ತು ಖಂಡನೀಯ. ಇಂತಹ ಘಟನೆಗಳನ್ನು ಸರ್ಕಾರ ಅತ್ಯಂತ ಗಂಭೀರವಾಗಿ ಪರಿಗಣಿಸಿದೆ.