ನವಿಮುಂಬೈ: ಹರ್ಮನ್ಪ್ರೀತ್ ಕೌರ್ ನಾಯಕತ್ವದ ಭಾರತ ಮಹಿಳಾ ಕ್ರಿಕೆಟ್ ತಂಡವು ಶುಕ್ರವಾರ ಆಸ್ಟ್ರೇಲಿಯಾ ಎದುರಿನ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಕಣಕ್ಕಿಳಿಯಲಿದೆ.
ಪ್ರವಾಸಿ ಆಸ್ಟ್ರೇಲಿಯಾ ಎದುರಿನ ಏಕೈಕ ಟೆಸ್ಟ್ನಲ್ಲಿ ಭಾರತವು ಗೆದ್ದಿತ್ತು. ನಂತರ ಏಕದಿನ ಸರಣಿಯಲ್ಲಿ 0-3ರಿಂದ ಸೋತಿತ್ತು.
ಏಕದಿನ ಸರಣಿಯ ಎರಡನೇ ಪಂದ್ಯದಲ್ಲಿ ಕಳಪೆ ಫೀಲ್ಡಿಂಗ್ನಿಂದಾಗಿ ಹರ್ಮನ್ ಬಳಗವು ಸೋತಿತ್ತು. ಮೂರನೇ ಪಂದ್ಯದಲ್ಲಿ ಭಾರತ ತಂಡದ ಬೌಲರ್ ಗಳನ್ನು ದಂಡಿಸಿದ್ದ ಆಸ್ಟ್ರೇಲಿಯಾ ಬ್ಯಾಟರ್ಗಳು 338 ರನ್ಗಳ ಬೃಹತ್ ಗುರಿ ಒಡ್ಡಿದ್ದರು. ಆ ಪಂದ್ಯದಲ್ಲಿ ಭಾರತ 190 ರನ್ಗಳಿಂದ ಪರಾಭವ ಗೊಂಡಿತ್ತು.
ತಂಡದ ಆರಂಭಿಕ ಬ್ಯಾಟರ್ ಶಫಾಲಿ ವರ್ಮಾ ಅವರು ಲಯ ಕಂಡುಕೊಳ್ಳುವಲ್ಲಿ ವಿಫಲರಾಗುತ್ತಿದ್ದಾರೆ. ಅದರಿಂದಾಗಿ ಸ್ಮೃತಿ ಮಂದಾನ ಮತ್ತು ಯಷ್ಟಿಕಾ ಭಾಟಿಯಾ ಅವರು ಇನಿಂಗ್ಸ್ ಆರಂಭಿಸುವ ಸಾಧ್ಯತೆ ಇದೆ. ಹರ್ಮನ್ಪ್ರೀತ್, ಆಲ್ರೌಂಡರ್ಗಳಾದ ದೀಪ್ತಿ ಶರ್ಮಾ, ಪೂಜಾ ವಸ್ತ್ರಾಕರ್ ಹಾಗೂ ಕನ್ನಡದ ಹುಡುಗಿ ಶ್ರೇಯಾಂಕ ಪಾಟೀಲ ಉತ್ತಮ ಲಯದಲ್ಲಿದ್ದಾರೆ.
ಆರು ಬಾರಿಯ ವಿಶ್ವ ಚಾಂಪಿಯನ್ ಆಸ್ಟ್ರೇಲಿಯಾ ತಂಡವು ಎಲ್ಲ ವಿಭಾಗಗಳಲ್ಲಿಯೂ ಬಲಿಷ್ಠವಾಗಿದೆ. ಫೋಯೆಬಿ ಲಿಚ್ಫೀಲ್ಡ್ ಮತ್ತು ತಹಲಿಯಾ ಮೆಕ್ಗ್ರಾ ಕಳೆದ ಸರಣಿಗಳಲ್ಲಿ ತಲಾ ಮೂರು ಅರ್ಧಶತಕಗಳನ್ನು ಗಳಿಸಿದ್ದಾರೆ. ನಾಯಕಿ ಅಲೀಸಾ ಹೀಲಿ ಅವರು ಅಬ್ಬರದ ಬ್ಯಾಟಿಂಗ್ ಪ್ರದರ್ಶನಕ್ಕೆ ಸಿದ್ಧರಾಗಿದ್ದಾರೆ. ಟಿ20 ಸರಣಿಯಲ್ಲಿಯೂ ಕಿರೀಟ ಧರಿಸುವ ಛಲದಲ್ಲಿದ್ಧಾರೆ.
ತಂಡಗಳು:
ಭಾರತ: ಹರ್ಮನ್ಪ್ರೀತ್ ಕೌರ್ (ನಾಯಕಿ), ಸ್ಮೃತಿ ಮಂದಾನ (ಉಪನಾಯಕಿ), ಜೆಮಿಮಾ ರಾಡ್ರಿಗಸ್, ಶಫಾಲಿ ವರ್ಮಾ, ದೀಪ್ತಿ ಶರ್ಮಾ, ಯಷ್ಟಿಕಾ ಭಾಟಿಯಾ, ರಿಚಾ ಘೋಷ್ (ಇಬ್ಬರೂ ವಿಕೆಟ್ಕೀಪರ್), ಅಮನ್ಜೋತ್ ಕೌರ್, ಶ್ರೇಯಾಂಕ ಪಾಟೀಲ, ಮನ್ನತ್ ಕಶ್ಯಪ್, ಸೈಕಾ ಇಷ್ಕೀ, ರೇಣುಕಾ ಸಿಂಗ್ ಠಾಕೂರ್, ತಿತಾಸ್ ಸಾಧು, ಪೂಜಾ ವಸ್ತ್ರಾಕರ್, ಕನಿಕಾ ಅಹುಜಾ, ಮಿನು ಮಣಿ.
ಆಸ್ಟ್ರೇಲಿಯಾ: ಅಲಿಸಾ ಹೀಲಿ (ನಾಯಕಿ-ವಿಕೆಟ್ಕೀಪರ್), ಡಾರ್ಸಿ ಬ್ರೌನ್, ಹೀತರ್ ಗ್ರಹಾಂ, ಆಷ್ಲೆ ಗಾರ್ಡನರ್, ಕಿಮ್ ಗಾರ್ಥ್, ಗ್ರೇಸ್ ಹ್ಯಾರಿಸ್, ಜೆಸ್ ಜಾನಸೆನ್, ಅಲನಾ ಕಿಂಗ್, ಫೊಯೆಬಿ ಲಿಚ್ಫೀಲ್ಡ್, ತಹಲಿಯಾ ಮೆಕ್ಗ್ರಾ (ಉಪನಾಯಕಿ), ಬೆತ್ ಮೂನಿ (ವಿಕೆಟ್ಕೀಪರ್), ಎಲಿಸ್ ಪೆರಿ, ಮೆಗನ್ ಶುಟ್, ಅನಾಬೆಲ್ ಸದರ್ಲೆಂಡ್, ಜಾರ್ಜಿಯಾ ವೇರ್ಹ್ಯಾಮ್.