ಸಂಗತ
ಡಾ.ವಿಜಯ್ ದರಡಾ
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಈ ಹಿಂದೆ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ನಡೆಸಿದ ಭಾರತ್ ಜೋಡೋ ಯಾತ್ರೆಯು ಅವರಿಗೆ ಸಾಕಷ್ಟು ಜನಪ್ರಿಯತೆ ಹಾಗೂ ದೇಶದ ಜನಮಾನಸದಲ್ಲಿ ಹೊಸ ಸ್ಥಾನವೊಂದನ್ನು ಗಳಿಸಿಕೊಟ್ಟಿದೆ ಎಂಬುದರಲ್ಲಿ ಅನುಮಾನವಿಲ್ಲ. ಆದರೆ ಈ ಬಾರಿ ಅವರು ಮಿಜೋರಾಂ ನಿಂದ ಮುಂಬೈವರೆಗೆ ಹಮ್ಮಿಕೊಂಡಿರುವ ಯಾತ್ರೆಯು ಬಿಜೆಪಿಯನ್ನು ಸೋಲಿಸಲು ಬೇಕಾಗುವಷ್ಟು ಜನಬೆಂಬಲ ಮತ್ತು ರಾಜಕೀಯ ಬೆಂಬಲವನ್ನು ಗಿಟ್ಟಿಸಿ ಕೊಳ್ಳುವಲ್ಲಿ ಸಫಲವಾಗುವುದೇ?
ಲೋಕಸಭೆ ಚುನಾವಣೆ ಸಮೀಪಿಸುತ್ತಿದೆ. ಬಿಜೆಪಿಯ ವಿರೋಧ ಪಕ್ಷಗಳ ಪಾಳಯದಲ್ಲಿ ಬಿರುಸಿನ ಚಟುವಟಿಕೆಗಳು ನಡೆಯುತ್ತಿವೆ. ಪ್ರಧಾನಿ ನರೇಂದ್ರ ಮೋದಿ
ಯನ್ನು ಸೋಲಿಸಲೇಬೇಕೆಂದು ಹಟಹಿಡಿದು ಹೊರಟಿರುವ ವಿಪಕ್ಷಗಳು ನಡೆಸುತ್ತಿರುವ ಈ ಚಟುವಟಿಕೆಗಳ ಪೈಕಿ ಎರಡು ಸಂಗತಿಗಳು ಅತಿಹೆಚ್ಚು ಮಹತ್ವ ಪಡೆದಿವೆ. ಮೊದಲನೆಯದು, ರಾಹುಲ್ ಗಾಂಧಿ ಕೈಗೊಂಡಿರುವ ಭಾರತ್ ಜೋಡೋ ನ್ಯಾಯ ಯಾತ್ರಾ. ಈ ಯಾತ್ರೆ ಜನವರಿ ೧೪ರಂದು ಆರಂಭವಾಗಿ ಮಾರ್ಚ್ ೨೦ರಂದು ಪೂರ್ಣಗೊಳ್ಳಲಿದೆ. ಈ ಅವಧಿಯಲ್ಲಿ ಅದು ಮಿಜೋರಾಂನಿಂದ ಮುಂಬೈವರೆಗೆ ಬರೋಬ್ಬರಿ ೬೭೦೦ ಕಿಲೋಮೀಟರ್ ದೂರ ಸಂಚರಿಸಲಿದೆ.
ಎರಡನೆಯದು, ಬಿಜೆಪಿ ವಿರುದ್ಧ ವಿಪಕ್ಷಗಳು ರಚಿಸಿಕೊಂಡಿರುವ ‘ಇಂಡಿಯ’ ಮೈತ್ರಿಕೂಟದಲ್ಲೇ ದಿನಕ್ಕೊಂದು ಹೊಸ ತಾತ್ವಿಕ ಭಿನ್ನಮತ ಉದ್ಭವಿಸುತ್ತಿದೆ! ಇಂಥ ಪರಿಸ್ಥಿತಿಯಲ್ಲಿ ರಾಹುಲ್ ಗಾಂಧಿ ನಡೆಸಲಿರುವ ನ್ಯಾಯ ಯಾತ್ರೆಯು ಕಾಂಗ್ರೆಸ್ ಪಕ್ಷಕ್ಕೆ ಪ್ರಬಲ ಬಿಜೆಪಿ ನಾಯಕ ನರೇಂದ್ರ ಮೋದಿ ವಿರುದ್ಧ ಹೋರಾಡಲು ಬೇಕಾದ ಶಕ್ತಿಯನ್ನು ಗಳಿಸಿಕೊಡಬಲ್ಲುದೇ? ಉತ್ತರವನ್ನು ಭವಿಷ್ಯವೇ ಹೇಳಬೇಕು. ಆದರೆ ಈ ಬಗ್ಗೆ ಮತದಾರರ ಮನದಲ್ಲಿ ಈಗಾಗಲೇ ಬೇರೆ ಬೇರೆ ರೀತಿಯ ವಿಶ್ಲೇಷಣೆಗಳು ಆರಂಭವಾಗಿರುವುದಂತೂ ನಿಜ.
ಈ ಹಿಂದೆ ರಾಹುಲ್ ಗಾಂಧಿ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ನಡೆಸಿದ ಭಾರತ್ ಜೋಡೋ ಯಾತ್ರೆಯು ಅವರಿಗೆ ಸಾಕಷ್ಟು ಜನಪ್ರಿಯತೆ ಹಾಗೂ
ದೇಶದ ಜನಮಾನಸದಲ್ಲಿ ಹೊಸ ಸ್ಥಾನವೊಂದನ್ನು ಗಳಿಸಿಕೊಟ್ಟಿದೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಆ ಯಾತ್ರೆ ಮುಗಿದ ಮೇಲೆ ನಡೆದ ಹಿಮಾಚಲ ಪ್ರದೇಶ, ಕರ್ನಾಟಕ ಹಾಗೂ ತೆಲಂಗಾಣ ರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಜಯ ಕೂಡ ಗಳಿಸಿತು. ರಾಜಸ್ಥಾನ ಹಾಗೂ ಛತ್ತೀಸ್‌ಗಢ ದಲ್ಲಿ ಅಧಿಕಾರ ಕಳೆದುಕೊಂಡಿತು ಎಂಬುದು ಕೂಡ ನಿಜವೇ. ಆದರೆ ಆ ಯಾತ್ರೆಯಿಂದ ಕಾಂಗ್ರೆಸ್ ಪಕ್ಷಕ್ಕೆ ತಕ್ಕಮಟ್ಟಿಗೆ ಅನುಕೂಲವಾಗಿದ್ದು ನಿಜ.
ಹಾಗಾಗಿ ಇನ್ನುಮುಂದೆ ನಡೆಯಲಿರುವ ಎರಡನೇ ಯಾತ್ರೆ ಕೂಡ ಸಹಜವಾಗಿಯೇ ಕುತೂಹಲ ಕೆರಳಿಸಿದೆ. ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಅನುಕೂಲವಾಗಲಿ ಎಂದೇ ರಾಹುಲ್ ಈ ಯಾತ್ರೆ ನಡೆಸುತ್ತಿದ್ದಾರೆ. ಅವರ ಯಾತ್ರೆಯು ಒಟ್ಟು ೧೫ ರಾಜ್ಯಗಳಲ್ಲಿ ಸಂಚರಿಸಲಿದೆ. ಅಂದರೆ ಅರ್ಧ ದೇಶ. ಆ ರಾಜ್ಯಗಳಲ್ಲಿ ಒಟ್ಟು ೩೫೭ ಲೋಕಸಭಾ ಸೀಟುಗಳಿವೆ. ಅವುಗಳ ಪೈಕಿ ೨೦೧೯ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ೨೩೯ ಕ್ಷೇತ್ರಗಳನ್ನು ಗೆದ್ದಿತ್ತು. ಹೀಗಾಗಿ ಕಾಂಗ್ರೆಸ್‌ನ ಸಂಕಷ್ಟವನ್ನು ಯಾರು ಬೇಕಾದರೂ ಸುಲಭವಾಗಿ ಅರ್ಥ ಮಾಡಿಕೊಳ್ಳಬಹುದು. ಏಕೆಂದರೆ ಈ ಭಾಗದಲ್ಲಿ ಕಾಂಗ್ರೆಸ್ ೨೦೧೯ರಲ್ಲಿ ಗೆದ್ದಿದ್ದು ಕೇವಲ ೧೪ ಸೀಟುಗಳನ್ನು!
ಮಣಿಪುರ, ನಾಗಾಲ್ಯಾಂಡ್, ಅರುಣಾಚಲ ಪ್ರದೇಶ, ರಾಜಸ್ಥಾನ, ಗುಜರಾತ್‌ನಂಥ ರಾಜ್ಯಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಖಾತೆ ತೆರೆಯುವುದಕ್ಕೂ ಸಾಧ್ಯವಾಗಿರಲಿಲ್ಲ. ಈ ಪೈಕಿ ಅನೇಕ ರಾಜ್ಯಗಳಲ್ಲಿ ಭಾರತ್ ಜೋಡೋ ಯಾತ್ರೆ ಸಂಚರಿಸಿತ್ತು. ಮೇಘಾಲಯ, ಉತ್ತರ ಪ್ರದೇಶ, ಬಿಹಾರ, ಜಾರ್ಖಂಡ್, ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರದಲ್ಲಿ ಅದು ತಲಾ ಒಂದು ಸೀಟನ್ನು ಮಾತ್ರ ಗೆದ್ದಿತ್ತು. ಅಸ್ಸಾಂನಲ್ಲಿ ಮೂರು ಸೀಟು ಹಾಗೂ ಪಶ್ಚಿಮ ಬಂಗಾಳ ಮತ್ತು ಛತ್ತೀಸ್‌ಗಢದಲ್ಲಿ ತಲಾ
ಎರಡು ಸೀಟುಗಳನ್ನು ಕಾಂಗ್ರೆಸ್ ಪಕ್ಷ ಗೆದ್ದಿತ್ತು. ತಮ್ಮ ಪಕ್ಷ ಹಿಂದೊಂದು ಕಾಲದಲ್ಲಿ ಇದ್ದಂತೆ ಈಗ ಪವರ್ ಫುಲ್ ಆಗಿಲ್ಲ ಎಂಬುದು ಸ್ವತಃ ರಾಹುಲ್ ಗಾಂಧಿಗೆ ಚೆನ್ನಾಗಿಯೇ ಗೊತ್ತಿದೆ.
ಚುನಾವಣೆಗೆ ಬೇಕಾದಷ್ಟು ಸಂಪನ್ಮೂಲವಾಗಲೀ, ಕಾರ್ಯಕರ್ತರ ಪಡೆಯಾಗಲೀ ಆ ಪಕ್ಷದ ಬಳಿ ಇಲ್ಲ. ಒಮ್ಮೆ ನಾನು ರಾಹುಲ್ ಗಾಂಧಿ ಜತೆ ಮಾತನಾಡುತ್ತಿದ್ದೆ. ಆಗ ಅವರು ತಮಗೆ ಅಧಿಕಾರದ ಬಗ್ಗೆ ಯಾವುದೇ ಮೋಹವಿಲ್ಲವೆಂದೂ, ತಮ್ಮ ಪಕ್ಷದ ಶಕ್ತಿಯ ಬಗ್ಗೆ ತಮಗೆ ಅರಿವಿದೆಯೆಂದೂ ಹೇಳಿದ್ದರು. ‘ನಾವು ಇವತ್ತೇ ಕೆಲಸ ಮಾಡಲು ಶುರುಮಾಡಿದರೆ ಖಂಡಿತ ಒಂದು ದಿನ ಗುರಿ ತಲುಪುತ್ತೇವೆ. ಇವತ್ತು ತುಪ್ಪ ತಿಂದು ನಾಳೆಯೇ ಗಟ್ಟಿಯಾಗಬೇಕು ಎಂದು ಹೊರಟರೆ ಸಾಧ್ಯವಿಲ್ಲ’ ಎಂದು ರಾಹುಲ್ ಹೇಳಿದ್ದರು. ಅವರ ಮಾತನ್ನು ಕೇಳಿದರೆ ಅವರಿಗೆ ಯಾವುದೇ ಆತುರವಿಲ್ಲ, ಅವರು ತಮ್ಮ ಪಕ್ಷದ ಬುಡವನ್ನು ಗಟ್ಟಿಗೊಳಿಸುತ್ತಿದ್ದಾರೆ ಎನಿಸುತ್ತದೆ. ಹಾಗಂತ ಬಿಜೆಪಿ ದುರ್ಬಲವಾಗಿದೆಯೇ ಎಂದು ಕೇಳಿದರೆ ಅದೂ ಇಲ್ಲ.
ಬಿಜೆಪಿ ಕೂಡ ವರ್ಷದಿಂದ ವರ್ಷಕ್ಕೆ ಗಟ್ಟಿಯಾಗುತ್ತಿದೆ. ಲೋಕಸಭೆ ಚುನಾವಣೆಯಲ್ಲಿ ಮೊದಲಿಗೆ ಅರ್ಧದಷ್ಟು ಸೀಟು ಗೆದ್ದಿದ್ದ ಬಿಜೆಪಿ, ನಂತರದ ಚುನಾವಣೆಯಲ್ಲಿ ಮೂರನೇ ಎರಡರಷ್ಟು ಸೀಟು ಗೆದ್ದಿದೆ! ಮೈದಾನದಲ್ಲಿ ಕುಸ್ತಿ ಪಟುವಿನಂತೆ ರಾಹುಲ್ ಧುಮುಕಿದ್ದಾರಾದರೂ, ಅವರ ಎದುರಾಳಿಗಳು ಪಂದ್ಯ ಮುಗಿಯುವುದಕ್ಕೂ ಮೊದಲೇ ಗೆಲುವಿನ ಧ್ವಜ ಹಿಡಿದುಕೊಂಡು ಓಡುತ್ತಿದ್ದಾರೆ. ರಾಹುಲ್ ಗಾಂಧಿ ಎಷ್ಟು ಪ್ರಬಲವಾದ ಸವಾಲೆಸೆಯುತ್ತಾರೋ ಅದಕ್ಕಿಂತ ಹೆಚ್ಚು ಗಟ್ಟಿಯಾಗಿ ನರೇಂದ್ರ ಮೋದಿಯವರ ಬಿಜೆಪಿ ಹೊರಹೊಮ್ಮುತ್ತಿದೆ.
ಹಾಗಾಗಿಯೇ ಮುಂದಿನ ಲೋಕಸಭೆ ಚುನಾವಣೆಯು ಮೋದಿ ವರ್ಸಸ್ ರಾಹುಲ್ ನಡುವಿನ ಸಮರವಾಗಲಿ ಎಂದೇ ಬಿಜೆಪಿ ಬಯಸುತ್ತಿದೆ. ಅದು ಬಿಜೆಪಿ ವರ್ಸಸ್ ‘ಇಂಡಿಯ’ ಮೈತ್ರಿಕೂಟದ ಕದನವಾಗುವುದು ಬಿಜೆಪಿಗೆ ಬೇಕಿಲ್ಲ. ಏಕೆಂದರೆ, ಒಂದು ವೇಳೆ ‘ಇಂಡಿಯ’ ಮೈತ್ರಿಕೂಟದ ಎಲ್ಲಾ ರಾಜಕೀಯ ಪಕ್ಷಗಳು ಒಗ್ಗಟ್ಟಿನಿಂದ ಚುನಾವಣೆ ಎದುರಿಸಿದರೆ ಬಿಜೆಪಿಗೆ ಗೆಲುವು ಸುಲಭವಿಲ್ಲ. ಹಾಗಂತ ‘ಇಂಡಿಯ’ ಮೈತ್ರಿಕೂಟದಲ್ಲಿ ಒಗ್ಗಟ್ಟು ಉಳಿಯುವುದು ಕೂಡ ಸುಲಭವಿಲ್ಲ. ಈ ಮೈತ್ರಿಕೂಟ ದಲ್ಲಿರುವ ರಾಜಕೀಯ ಪಕ್ಷಗಳ ಸಮಸ್ಯೆಯೇ ಅದು. ಸದ್ಯಕ್ಕೆ ಆ ಪಕ್ಷಗಳನ್ನೆಲ್ಲ ಬಿಗಿಯಾಗಿ ಒಂದೇ ಕಡೆ ಹಿಡಿದು ಕೂರಿಸುವ ಅಂಟು ಎಲ್ಲೂ ಸಿಗುತ್ತಿಲ್ಲ. ಅವುಗಳ ನಾಯಕರ ನಡುವೆ ಸಹಮತಕ್ಕಿಂತ ಭಿನ್ನಮತವೇ ಹೆಚ್ಚು ಕಾಣಿಸುತ್ತಿದೆ. ಅಲ್ಲಿರುವ ಪ್ರತಿಯೊಬ್ಬ ನಾಯಕನಿಗೂ ಅವನದೇ ಆದ ನಿಲುವು, ಸಿದ್ಧಾಂತ ಹಾಗೂ ಸಮರ್ಥನೆಗಳಿವೆ.
‘ಇಂಡಿಯ’ ಕೂಟದಲ್ಲಿ ಈವರೆಗೂ ಸೀಟು ಹಂಚಿಕೆ ಬಗ್ಗೆ ಒಪ್ಪಂದವೇ ಆಗಿಲ್ಲ. ಆದರೆ ಜೆಡಿಯು ಈಗಾಗಲೇ ಅರುಣಾಚಲ (ಪಶ್ಚಿಮ) ಕ್ಷೇತ್ರದಿಂದ ರೂಹಿತಗುಂಗ್ ಹೆಸರನ್ನು ಸ್ಪಽಯಾಗಿ ಘೋಷಿಸಿಬಿಟ್ಟಿದೆ. ವಾಸ್ತವವಾಗಿ ೨೦೧೯ರ ವಿಧಾನಸಭೆ ಚುನಾವಣೆಯಲ್ಲೂ ಜೆಡಿಯು ಪಕ್ಷ ಅರುಣಾಚಲ ಪ್ರದೇಶದಲ್ಲಿ ೧೫ ಸ್ಪರ್ಧಿಗಳನ್ನು ಕಣಕ್ಕಿಳಿಸಿತ್ತು. ಅವರ ಪೈಕಿ ಎಳು ಮಂದಿ ಗೆದ್ದಿದ್ದರು. ನಂತರ ಆ ಏಳು ಶಾಸಕರೂ ಬಿಜೆಪಿಗೆ ಸೇರ್ಪಡೆಯಾಗಿದ್ದರು. ಜೆಡಿಯು ಈಗ ಲೋಕಸಭೆ ಚುನಾವಣೆಗೆ
ಅರುಣಾಚಲ ಪ್ರದೇಶದಿಂದ ಮಾತ್ರ ಒಬ್ಬ ಅಭ್ಯರ್ಥಿಯ ಹೆಸರು ಘೋಷಣೆ ಮಾಡಿಲ್ಲ, ಅದರ ಜತೆಗೇ ಬಿಹಾರದ ಸೀತಾಮಾರಿ ಕ್ಷೇತ್ರದಲ್ಲಿ ದೇವೇಶ್ ಚಂದ್ರ ಠಾಕೂರ್ ಹಾಗೂ ದರ್ಭಾಂಗ ಕ್ಷೇತ್ರದಲ್ಲಿ ಸಂಜಯ್ ಝಾ ಅವರನ್ನು ತನ್ನ ಅಭ್ಯರ್ಥಿಯೆಂದು ಬಿಂಬಿಸಿದೆ.
‘ಇಂಡಿಯ’ ಮೈತ್ರಿಕೂಟದ ಮೇಲೆ ಒತ್ತಡ ಹೇರುವುದಕ್ಕೆಂದೇ ಉದ್ದೇಶಪೂರ್ವಕವಾಗಿ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಹೀಗೆ ಮಾಡಿದ್ದಾರೆಂದು ಹೇಳಲಾಗುತ್ತಿದೆ. ಮಜಾ ಏನು ಅಂದರೆ, ನಿತೀಶ್ ಕುಮಾರ್ ಯಾವುದನ್ನೂ ಬಹಿರಂಗವಾಗಿ ಹೇಳುತ್ತಿಲ್ಲ. ಆದರೆ ನಿತೀಶ್‌ಗೆ ತಾನು ‘ಇಂಡಿಯ’ ಮೈತ್ರಿಕೂಟದ ಸಂಚಾಲಕ ಆಗಬೇಕು ಎಂಬ ಆಸೆಯಿದೆ ಎಂಬುದು ಎಲ್ಲರಿಗೂ ಗೊತ್ತಿದೆ. ಆ ಆಸೆ ಏಕಿದೆ ಅಂದರೆ, ಒಂದು ವೇಳೆ ‘ಇಂಡಿಯ’ ಮೈತ್ರಿಕೂಟವೇನಾದರೂ ಲೋಕಸಭೆ ಚುನಾವಣೆಯಲ್ಲಿ ಗೆದ್ದರೆ ತಾವೇ ಪ್ರಧಾನಿಯಾಗಬೇಕು ಎಂಬ ಮಹತ್ವಾಕಾಂಕ್ಷೆಯೂ ಅವರಿಗಿದೆ. ಅವರು ಬಹಳ ದೊಡ್ಡ ಗುರಿಯನ್ನೇ ಇಟ್ಟುಕೊಂಡಿ ದ್ದಾರೆ.
‘ಇಂಡಿಯ’ ಕೂಟದೊಳಗಿನ ಅಪಸವ್ಯಗಳು ಇಷ್ಟಕ್ಕೇ ಮುಗಿಯಿತೇ? ಇಲ್ಲ. ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಹಾಗೂ ತೃಣಮೂಲ ಕಾಂಗ್ರೆಸ್ ಪಕ್ಷದ ನಾಯಕಿ ಮಮತಾ ಬ್ಯಾನರ್ಜಿ ಅವರು ‘ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರೇ ಇಂಡಿಯ ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿಯಾಗಬೇಕು’ ಎಂದು ಬಹಿರಂಗವಾಗಿ ಹೇಳಿದ್ದಾರೆ. ಅದನ್ನು ದೆಹಲಿ ಮುಖ್ಯಮಂತ್ರಿ ಹಾಗೂ ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ ಕೇಜ್ರಿವಾಲ್ ಬೆಂಬಲಿಸಿದ್ದಾರೆ. ಆದರೆ ಲಾಲು ಪ್ರಸಾದ್ ಯಾದವ್‌ಗೆ ನಿತೀಶ್ ಕುಮಾರ್ ಅಷ್ಟೊಂದು ದೊಡ್ಡ ಪ್ರಮಾಣದಲ್ಲಿ ಬೆಳೆಯುವುದು ಬೇಕಿಲ್ಲ.
ಅವರದು ಸ್ಥಳೀಯ ಪೈಪೋಟಿ/ವೈರತ್ವ. ಲಾಲು ಮತ್ತು ನಿತೀಶ್ ನಡುವೆ ಯಾವಾಗಲೂ ಮೇಲಾಟ ನಡೆಯುತ್ತಿರುತ್ತದೆ. ಈ ಸಲ ಹೊಸ ವರ್ಷಕ್ಕೆ ಅವರಿಬ್ಬರೂ
ಶುಭಾಶಯ ಕೂಡ ವಿನಿಮಯ ಮಾಡಿಕೊಳ್ಳಲಿಲ್ಲ. ಅದಕ್ಕಿಂತ ಹೆಚ್ಚಾಗಿ, ಹೊಸ ವರ್ಷದ ಮೊದಲ ದಿನ ರಾಬ್ರಿ ದೇವಿಯವರ ಹುಟ್ಟುಹಬ್ಬವಾಗಿತ್ತು. ಅವರಿಗೂ ನಿತೀಶ್ ಕುಮಾರ್ ಅವರು ಒಂದು ಹಾರೈಕೆಯ ಸಂದೇಶ ಕಳುಹಿಸಲಿಲ್ಲ! ಪಶ್ಚಿಮ ಬಂಗಾಳದಲ್ಲಿ ಕಾಂಗ್ರೆಸ್ ಹಾಗೂ ತೃಣಮೂಲ ಕಾಂಗ್ರೆಸ್ ಪಕ್ಷಗಳ ನಡುವೆ ಅಕ್ಷರಶಃ ಯುದ್ಧದಂಥ ಪರಿಸ್ಥಿತಿಯಿದೆ.
ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧುರಿಯವರು ‘ತೃಣಮೂಲ ಕಾಂಗ್ರೆಸ್ ಪಕ್ಷವು ಜಾರಿ ನಿರ್ದೇಶನಾಲಯ (ಇ.ಡಿ.) ಹಾಗೂ ಸಿಬಿಐ ಕುಣಿಕೆಯಿಂದ
ಪಾರಾಗಲು ನರೇಂದ್ರ ಮೋದಿಯವರನ್ನು ಓಲೈಸುತ್ತಿದೆ’ ಎಂದು ಬಹಿರಂಗವಾಗಿ ಆರೋಪಿಸಿದ್ದಾರೆ. ತೃಣಮೂಲ ಕಾಂಗ್ರೆಸ್ ಪಕ್ಷವು ಮೈತ್ರಿ ಬಗ್ಗೆ ಗಂಭೀರವಾಗಿ ಇರುವಂತಿಲ್ಲ. ಸಂದರ್ಭ ಬಂದರೆ ನಾವು ಏಕಾಂಗಿಯಾಗಿ ಲೋಕಸಭೆ ಚುನಾವಣೆಗೆ ಹೋಗುತ್ತೇವೆ ಎಂದು ಕೂಡ ಅದು ಹೇಳಿದೆ. ಇನ್ನೊಂದೆಡೆ, ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷ ಕೂಡ ತನ್ನ ಒಬ್ಬೊಬ್ಬರೇ ನಾಯಕರಿಗೆ ಲೋಕಸಭೆ ಚುನಾವಣೆಗೆ ಅಭ್ಯರ್ಥಿಯಾಗಲು ಸಿದ್ಧತೆ ಮಾಡಿಕೊಳ್ಳುವಂತೆ ಸೂಚಿಸಿ ಕಳುಹಿಸುತ್ತಿದೆ. ಒಟ್ಟಿನಲ್ಲಿ ‘ಇಂಡಿಯ’ ಕೂಟದೊಳಗೆ ಮೂಲೆಮೂಲೆಯಲ್ಲೂ ಗೊಂದಲಗಳೇ ಕಾಣಿಸುತ್ತಿವೆ.
ಮೇಲ್ನೋಟಕ್ಕೆ ಮಾತ್ರ ಆ ಮೈತ್ರಿಕೂಟವನ್ನು ಶಕ್ತಿಶಾಲಿ ಯಾಗಿಸುವ ಬಗ್ಗೆ ಮಾತುಗಳು ಕೇಳಿಬರುತ್ತವೆ. ಆದರೆ ಆಂತರ್ಯದಲ್ಲಿ ಮೈತ್ರಿಕೂಟವು ದಿನೇದಿನೆ ದುರ್ಬಲವಾಗುತ್ತಿದೆ. ಇವೆಲ್ಲದರ ನಡುವೆ ಬಿಜೆಪಿಯ ತೂಕ ಇನ್ನೂ ಕೊಂಚ ಹೆಚ್ಚುತ್ತಿದೆ. ಅದಕ್ಕೆ ಕಾರಣ ರಾಮಮಂದಿರ. ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಯಾಗುತ್ತಿದ್ದಂತೆ ಹಿಂದೂ ಗಳ ಮತ ಇನ್ನಷ್ಟು ಬಲವಾಗಿ ಬಿಜೆಪಿಯತ್ತ ಧ್ರುವೀಕರಣ ಗೊಳ್ಳುತ್ತದೆ. ಹೀಗಾಗಿ ಲೋಕಸಭೆ ಚುನಾವಣೆಯಲ್ಲಿ
ಬಿಜೆಪಿಗೆ ಕಠಿಣ ಸ್ಪರ್ಧೆ ನೀಡಬೇಕು ಎಂಬ ಆಸೆ ಇಂಡಿಯಾ ಮೈತ್ರಿಕೂಟದಲ್ಲಿರುವ ರಾಜಕೀಯ ಪಕ್ಷಗಳಿಗೆ ನಿಜವಾಗಿಯೂ ಇರುವುದಾದರೆ ರಾಹುಲ್ ಗಾಂಧಿ ಯವರ ಯಾತ್ರೆಯಷ್ಟೇ ‘ಇಂಡಿಯ’ ಮೈತ್ರಿಕೂಟದ ಒಗ್ಗಟ್ಟು ಕೂಡ ಬಹಳ ಮುಖ್ಯವಾಗುತ್ತದೆ.
ದೇಶದಲ್ಲಿರುವ ಸದ್ಯದ ರಾಜಕೀಯ ಪರಿಸ್ಥಿತಿಯಲ್ಲಂತೂ ನರೇಂದ್ರ ಮೋದಿ ನಾಯಕತ್ವದ ಬಿಜೆಪಿಯಿಂದ ಅಧಿಕಾರವನ್ನು ಕಿತ್ತುಕೊಳ್ಳುವುದು ಯಾವುದೇ ರಾಜಕೀಯ ಪಕ್ಷಕ್ಕಾದರೂ ಹಗಲುಗನಸೇ ಸರಿ.
(ಲೇಖಕರು ಹಿರಿಯ ಪತ್ರಕರ್ತರು)