Saturday, 14th December 2024

ಜೆ.ಎನ್.೧ ಹೆಚ್ಚಳ: ಮೈಮರೆಯದಿರಿ

ಕೋವಿಡ್ ಮಹಾಮಾರಿಯಿಂದ ತಪ್ಪಿಸಿಕೊಂಡೆವು ಎಂದು ನಿಟ್ಟುಸಿರು ಬಿಡುವಾಗಲೇ ದೇಶದಲ್ಲಿ ದಿನದಿಂದ ದಿನಕ್ಕೆ ಕೋವಿಡ್ ವೈರಾಣುವಿನ ಹೊಸ ಉಪತಳಿ ಜೆ.ಎನ್.೧ನ ಸೋಂಕು ಹೆಚ್ಚುತ್ತಲೇ ಇದೆ. ಈವರೆಗೂ ದೇಶದಲ್ಲಿ ೧,೦೧೩ ಜನರಿಗೆ ಸೋಂಕು ತಗಲಿರುವುದು ದೃಢಪಟ್ಟಿದೆ.

ಒಟ್ಟು ೧೬ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಜೆಎನ್.೧ ಪ್ರಕರಣಗಳು ವರದಿಯಾಗಿವೆ. ಇದರಲ್ಲಿ ಕರ್ನಾಟಕದ ಅತಿ ಹೆಚ್ಚು ಪ್ರಕರಣ ಗಳು ವರದಿಯಾಗಿದ್ದು ಆತಂಕ ಮೂಡಿಸಿದೆ. ಕೋವಿಡ್ ಮೊದಲ ಮತ್ತು ಎರಡನೇ ಅಲೆಯಲ್ಲಿ ಆದ ಪ್ರಮಾದಗಳಿಂದ ಸಾಕಷ್ಟು ಜೀವಹಾನಿ ಯಾಗಿದ್ದು ಇನ್ನೂ ಮರೆತಿಲ್ಲ. ಆದರೂ ಜನರು ಅಗತ್ಯ ಮುನ್ನಚ್ಚರಿಕೆ ವಹಿಸುತ್ತಿಲ್ಲ.

ಬಹುತೇಕ ಜನರಲ್ಲಿ ಕೋವಿಡ್ ನಿಯಂತ್ರಣದಲ್ಲಿದೆ, ಲಸಿಕೆ ಹಾಕಿಸಿಕೊಂಡಿದ್ದೇವೆ ಎಂಬ ಭಾವನೆ ಇರುವುದರಿಂದ ಮೈ ಮರೆತಂತಿದೆ. ಜೆ.ಎನ್.೧ ಉಪತಳಿ ಮಾರಣಾಂತಿಕವಾದ ಕಾಯಿಲೆ ಅಲ್ಲವೆಂದರೂ ಮೈಮರೆಯುವುದು ಸರಿಯಲ್ಲ. ಈ ಬಗ್ಗೆ ಕೇಂದ್ರ ಮತ್ತು ರಾಜ್ಯ ಸರಕಾರಗಳು ಅಗತ್ಯ ಮುನ್ನೆಚ್ಚರಿಕೆ ವಹಿಸುವಂತೆ ಹೇಳುತ್ತಿವೆಯಾದರೂ ಕಟ್ಟುನಿಟ್ಟಿನ ಯಾವುದೇ ಆದೇಶ ಹೊರಡಿಸುತ್ತಿಲ್ಲ. ಹೀಗಾಗಿ ಜನರು ಕೂಡ ಇದನ್ನು ಗಂಭೀರವಾಗಿ ಪರಿಗಣಿಸಿಲ್ಲ. ಸಾವಿನ ಪ್ರಮಾಣ ಕಡಿಮೆ ಇದ್ದರೂ ಅನಾರೋಗ್ಯದಿಂದ ಬಳಲುತ್ತಿರುವವರ ಸಂಖ್ಯೆ ಹೆಚ್ಚುತ್ತಲೇ ಇದೆ.

ಯುದ್ಧಕಾಲದಲ್ಲಿ ಶಸಾಭ್ಯಾಸ ಮಾಡದೆ ಈಗಲೇ ಸೋಂಕು ತಡೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕಿದೆ. ಕೋವಿಡ್ ನಿರ್ವಹಣೆಯಲ್ಲಿ ಉದಾಸೀನತೆ ತೋರಿದರೆ ಸಂಬಂಧಪಟ್ಟವರ ಮೇಲೆ ಶಿಸ್ತು ಕ್ರಮ ಕೈಗೊಳ್ಳಬೇಕಿದೆ. ವೈದ್ಯಕೀಯ ಆಮ್ಲಜನಕ ಹಾಸಿಗೆ, ವೆಂಟಿಲೇಟರ್, ಔಷಧ ಸೇರಿ ಯಾವುದಕ್ಕೂ ಕೊರತೆ ಆಗದಂತೆ ನೋಡಿಕೊಳ್ಳಬೇಕಿದೆ. ೬೦ ವರ್ಷ ಮೇಲ್ಪಟ್ಟವರು ವಿಶೇಷವಾಗಿ ಕಿಡ್ನಿ, ಹೃದಯ, ಲೀವರ್ ಮತ್ತು ಇತರ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವವರು ಹಾಗೂ ಗರ್ಭಿಣಿಯರು, ಹಾಲುಣಿಸುವ ತಾಯಂದಿರು ಜನ ದಟ್ಟಣೆ, ಹೊರಾಂಗಣ ಪ್ರದೇಶಗಳಲ್ಲಿ ಸ್ವಯಂಪ್ರೇರಿತವಾಗಿ ಮಾ ಧರಿಸ
ಬೇಕು.

ಜ್ವರ, ಕೆಮ್ಮು, ನೆಗಡಿ, ಉಸಿರಾಟದ ಸೋಂಕಿನ ಲಕ್ಷಣಗಳು ಕಾಣಿಸಿ ದರೆ ವೆದ್ಯಕೀಯ ಸಲಹೆ ಪಡೆಯಬೇಕು. ಆರೋಗ್ಯ ಸಮಸ್ಯೆ ಇದ್ದರೆ ಮನೆ ಯಲ್ಲಿರುವುದು ಸೂಕ್ತ. ಕೋವಿಡ್ ನಿಯಂತ್ರಣಕ್ಕೆ ಮುಂಜಾಗ್ರತೆಯೊಂದೇ ಪರಿಹಾರವೆಂಬುದನ್ನು ಪ್ರತಿಯೊಬ್ಬರೂ ತಿಳಿದುಕೊಂಡು ಪಾಲಿಸಬೇಕಿದೆ.