ಹಿಂದಿರುಗಿ ನೋಡಿದಾಗ
ಮನುಷ್ಯನಿಗೆ ಬರಬಹುದಾದ ಮಾರಕ ರೋಗಗಳಲ್ಲಿ ಮುಖ್ಯವಾದದ್ದು ಕ್ಯಾನ್ಸರ್! ಕ್ಯಾನ್ಸರ್ ಕಾಯಿಲೆಯು ಮಾನವ ಜನಾಂಗಕ್ಕಿಂತಲೂ ಪುರಾತನ ವಾದದ್ದು ಎಂದರೆ ಆಶ್ಚರ್ಯವಾಗಬಹುದು. ಆದರಿದು ಸತ್ಯ. ಇಂದಿಗೆ ೭೦ ದಶಲಕ್ಷ ವರ್ಷಗಳ ಹಿಂದೆ ನಮ್ಮ ಭೂಮಿಯ ಮೇಲೆ ಡೈನೋಸಾರುಗಳ ಸಾಮ್ರಾಜ್ಯವಿತ್ತು. ಅವುಗಳ ಪಳೆಯುಳಿಕೆಗಳು ಇಂದಿಗೂ ದೊರೆಯುತ್ತವೆ.
ಇಂತಹ ಡೈನೋಸಾರುಗಳ ಬೆನ್ನುಮೂಳೆಯ ೧೦,೦೦೦ ಖಂಡಾಸ್ಥಿಗಳನ್ನು (ವರ್ಟೆಬ್ರೆ) ವಿಜ್ಞಾನಿಗಳು ಸಂಗ್ರಹಿಸಿದರು. ಅವನ್ನು ಪ್ರತಿದೀಪ್ತಿ ದರ್ಶನ (ಫ್ಲೂರೋಸ್ಕೋಪಿ) ಮತ್ತು ಸಿಟಿ ಸ್ಕ್ಯಾನ್ ಮೂಲಕ ಅಧ್ಯಯನವನ್ನು ಮಾಡಿದರು. ಇವು ಗಳಲ್ಲಿ ಡಕ್ ಬಿಲ್ಡ್ ಡೈನೋಸಾರ್ (ಕ್ರಿಟೇಷಿಯಸ್ ಹೈಡ್ರೋ ಸಾರಸ್) ಎಂಬ ನಮೂನೆಯ ಡೈನೋಸಾರುಗಳ ಮೂಳೆಗಳಲ್ಲಿ ಹಿಮಾಂಜಿಯೋಮ, ಡೆಸ್ಮೋಪ್ಲಾಸ್ಟಿಕ್ ಫೈಬ್ರೋಮ, ಆಸ್ಟಿಯೋಬ್ಲಾಸ್ಟೋಮ ಮುಂತಾದ ಗಂತಿಗಳು ಕಂಡುಬಂದವು.
ಇಂತಹ ಗಂತಿಗಳಲ್ಲಿ ಶೇ.೦.೨ ಗಂತಿಗಳು ಮಾರಕ ಕ್ಯಾನ್ಸರ್ ಗಂತಿಗಳಾಗಿದ್ದವು. ಅವು ಡೈನೋಸಾರುಗಳ ಒಡಲಿನಲ್ಲಿ, ಒಂದು ಭಾಗದಿಂದ ಹಲ ಭಾಗಗಳಿಗೆ (ಮೆಟ ಸ್ಟಾಸಿಸ್) ಹೋಗಬಲ್ಲ ಅಂದರೆ ಹರಡುವ ಸಾಮರ್ಥ್ಯ ಪಡೆದಿದ್ದವು. ಮಾನವನ ಇತಿಹಾಸದಲ್ಲಿ ಕ್ಯಾನ್ಸರ್ ಪ್ರಸ್ತಾಪವು ಮೊದಲ ಬಾರಿಗೆ ಈಜಿಪ್ಷಿಯನ್ ಸಂಸ್ಕೃತಿಯಲ್ಲಿ ದೊರೆಯುತ್ತದೆ. ಎಡ್ವಿನ್ ಸ್ಮಿತ್ ಪ್ಯಾಪಿರಸ್ ಮತ್ತು ಜಾರ್ಜ್ ಈಬರ್ಸ್ ಫ್ಯಾಪಿರಸ್ ಎಂಬ ಪ್ರಾಚೀನ ವೈದ್ಯ ಗ್ರಂಥಗಳು. ಇವು ಬಹುಶಃ ಕ್ರಿ.ಪೂ.೧೫೦೦-ಕ್ರಿ.ಪೂ.೧೬೦೦ ವರ್ಷಗಳ ಹಿಂದೆ ರಚನೆಯಾಗಿರಬೇಕು. ಈ ಅವಧಿಯ ಈಜಿಪ್ಷಿಯನ್ನರಲ್ಲಿ ಕ್ಯಾನ್ಸರ್ ಉದ್ಭವಿಸಲು ದೇವರ ಕೋಪ ಅಥವ ದುಷ್ಟಶಕ್ತಿಗಳ ಕಾಟ ಎನ್ನುವ ನಂಬಿಕೆಯೇ ಪ್ರಧಾನವಾಗಿತ್ತು.
ಈ ವೈದ್ಯಕೀಯ ಗ್ರಂಥಗಳನ್ನು ರಚಿಸಿದವನು ಈಜಿಪ್ಷಿಯನ್ ವೈದ್ಯ ಹಾಗೂ ಸಕ್ಕಾರದಲ್ಲಿ ರಚನೆಯಾಗಿರುವ ಮೆಟ್ಟಿಲ ಪಿರಮಿಡ್ ವಾಸ್ತು ವಿನ್ಯಾಸಕಾರ ನಾಗಿದ್ದ ಇಮ್ಹೋಟೆಪ್. ಇವನು -ರೋಜೋಸರ್ ಕಾಲದವನು. ಎಡ್ವಿನ್ ಸ್ಮಿತ್ ಪ್ಯಾಪಿರಸ್ಸಿನಲ್ಲಿರುವ ೨೫ನೆಯ ರೋಗ ಪ್ರಕರಣವು ಕ್ಯಾನ್ಸರಿಗೆ ಸಂಬಂಧಿಸಿದೆ. ಸ್ತನದಲ್ಲಿ ಉಬ್ಬಿರುವ, ಮುಟ್ಟಲು ತಣ್ಣಗಿರುವ ಹಾಗೂ ಸ್ತನದಾದ್ಯಂತ ವ್ಯಾಪಿಸಿರುವ ಗಂತಿಗಳು ಹಾಗೂ ಹುಣ್ಣುಗಳಾಗಿ ದುರ್ಗಂಧವನ್ನು ಬೀರುವ ೮ ಪ್ರಕರಣಗಳನ್ನು ವಿವರಿಸುತ್ತದೆ. ಈ ಕ್ಯಾನ್ಸರನ್ನು ಗುಣಪಡಿಸಲು ಗಂತಿಯನ್ನು ಛೇದಿಸುವ, ಉಪ್ಪನ್ನು ಲೇಪಿಸುವ ಹಾಗೂ ಈಜಿಪ್ಷಿಯನ್ ಆಯಿಂಟ್ಮೆಂಟ್ ಎಂದು ಹೆಸರಾದ ಶಂಖಪಾಷಾಣದ ಲೇಪನವನ್ನು ಹಚ್ಚುವ ಬಗ್ಗೆ ವಿವರಣೆಯನ್ನು ನೀಡುತ್ತದೆ.
ಈ ಗಡ್ಡೆ ಇಲ್ಲವೇ ಹುಣ್ಣಿನ ಭಾಗವನ್ನು ಅಗ್ನಿಭೈರಿಗೆಯಿಂದ (ಫಾರ್ ಡ್ರಿಲ್) ಸುಟ್ಟು ತೆಗೆಯುವ ಬಗ್ಗೆ ಮಾಹಿತಿಯನ್ನು ನೀಡುತ್ತದೆ. ಕೊನೆಗೆ ಇದು ಗುಣವಾಗುವು ದಿಲ್ಲ ಎನ್ನುವ ತೀರ್ಪನ್ನು ಕೊಡುತ್ತದೆ. ನಮಗೆ ದೊರೆತಿರುವ ಅತ್ಯಂತ ಪ್ರಾಚೀನ ಕ್ಯಾನ್ಸರ್ ಗ್ರಸ್ತ ಮಮ್ಮಿಯು ಇಂದಿಗೆ ಸುಮಾರು ಕ್ರಿ.ಪೂ.೨೭೦೦ ವರ್ಷಗಳಷ್ಟು ಹಿಂದಿನದು. ಇದು ದಕ್ಷಿಣ ಸೈಬೀರಿಯದ ಸ್ಟೆಪ್ಪಿಯಲ್ಲಿ ವಾಸವಾಗಿದ್ದ, ೪೦-೫೯ ವರ್ಷ ವಯಸ್ಸಿನ ಸಿಥಿಯನ್ ಅರಸ ನದ್ದು. ಆತನಿಗೆ ಪ್ರಾಸ್ಟೇಟ್ ಕ್ಯಾನ್ಸರ್ ಆಗಿದ್ದು, ಕ್ಯಾನ್ಸರ್ ಆತನ ಮೂಳೆ ಗಳಿಗೆಲ್ಲ ಹರಡಿರುವುದು ಪತ್ತೆಯಾಗಿದೆ.
ಚಿಕಿತ್ಸೆಯಿಲ್ಲದ ಕಾಯಿಲೆಗೆ ಕ್ಯಾನ್ಸರ್ ಎಂಬ ಹೆಸರನ್ನು ನೀಡಿದವನು ಗ್ರೀಕ್ ವೈದ್ಯ ಹಿಪ್ಪೋಕ್ರೇಟ್ಸ್ (ಕ್ರಿ.ಪೂ.೪೬೦ – ಕ್ರಿ.ಪೂ.೩೭೦). ಹಿಪ್ಪೋಕ್ರೇಟ್ಸ್ ಕ್ಯಾನ್ಸರ್ ಬರಲು ದೈವದ ಕೋಪವೇ ಕಾರಣ ಎನ್ನುವ ವಿವರಣೆಯನ್ನು ತಳ್ಳಿ ಹಾಕಿದ. ಹಿಪ್ಪೋಕ್ರೇಟ್ಸ್ ತನ್ನ ರಸ ಸಿದ್ಧಾಂತವನ್ನು (ಹ್ಯೂಮರಲ್ ಥಿಯರಿ) ಮಂಡಿಸಿದ. ನಮ್ಮ ದೇಹದಲ್ಲಿ ರಕ್ತ, ಕರ್ಫ್ಯೂ, ಹಳದಿ ಪಿತ್ತ ಮತ್ತು ಕಪ್ಪು ಪಿತ್ತಗಳೆಂಬ ರಸಗಳಿರುತ್ತವೆ. ಈ ನಾಲ್ಕೂ ರಸಗಳ ನಡುವೆ ಸಮತೋಲನೆ ಯಿದ್ದಾಗ ಆರೋಗ್ಯವು ಸಹಜ ಸ್ವರೂಪದಲ್ಲಿ ಇರುತ್ತದೆ. ಯಾವುದಾದರು ಒಂದು ಅಥವ ಹೆಚ್ಚಿನ ರಸಗಳ ಪ್ರಮಾಣ ಏರುಪೇರಾದರೆ ಅನಾರೋಗ್ಯವು ಸಂಭವಿಸುತ್ತದೆ – ಇದು ರಸ ಸಿದ್ಧಾಂತದ ತಿರುಳಾಗಿತ್ತು.
ಹಿಪ್ಪೋಕ್ರೇಟ್ ಕಪ್ಪು ಪಿತ್ತವು ಅಸಹಜ ಪ್ರಮಾಣದಲ್ಲಿ ಹೆಚ್ಚಾದಾಗ ಕ್ಯಾನ್ಸರ್ ಬರುತ್ತದೆ ಎಂದು ನಂಬಿದ್ದ. ಜಗತ್ತಿನ ಎಲ್ಲ ವೈದ್ಯರು ಸುಮಾರು ೧೪೦೦ ವರ್ಷಗಳವರೆಗೆ ಹಿಪ್ಪೋ ಕ್ರೇಟ್ಸ್ ಹೇಳಿದ ಮಾತನ್ನೇ ಸತ್ಯವೆಂದೇ ಭಾವಿಸಿದ್ದರು. ಕ್ಯಾನ್ಸರಿಗೆ ಆ ಹೆಸರನ್ನು ಕೊಟ್ಟವನು ಸ್ವಯಂ ಹಿಪ್ಪೋ ಕ್ರೇಟ್ಸ್. ಇವನು ಕ್ಯಾನ್ಸರ್ ಗಡ್ಡೆಯನ್ನು ಕಾರ್ಸಿನೋಸ್ ಎಂದು ಕರೆದ. ಇದರ ಮೂಲ ಕಾರ್ಕಿನೋಸ್ ಎಂಬ ಗ್ರೀಕ್ ಶಬ್ದ. ಇದರ ಅರ್ಥ ಏಡಿ. ಗ್ರೀಕ್ ಪುರಾಣದ ಅನ್ವಯ ಕಾರ್ಕಿ ನೋಸ್ ಒಂದು ಬೃಹತ್ ಏಡಿ. ಏಡಿಗೆ ಸಾಮಾನ್ಯವಾಗಿ ೧೦ ಕಾಲುಗಳಿರುತ್ತವೆ. ಈ ಹತ್ತು ಕಾಲುಗಳನ್ನು ಬಳಸಿಕೊಂಡು, ಅದು ತನಗೆ ಬೇಕಾದ ದಿಕ್ಕಿನಲ್ಲಿ ಹೇಗೆ ಬೇಕಾದರೂ ತ್ವರಿತ ವಾಗಿ ಚಲಿಸಬಲ್ಲುದು. ಕ್ಯಾನ್ಸರ್ ಬೆಳವಣಿಗೆಯೂ ಹಾಗೆಯೇ!
ಕ್ಯಾನ್ಸರ್ ಗಡ್ಡೆಯಿಂದ ಬೆರಳುಗಳ ರೂಪದ ಹೊರಚಾಚು ಬೆಳವಣಿಗೆಗಳು ಯಾವ ದಿಕ್ಕಿನಲ್ಲಿ ಬೇಕಾದರೂ ಅಥವ ಎಲ್ಲ ದಿಕ್ಕುಗಳಲ್ಲಿಯೂ ಹರಡ ಬಹುದು. ಹಾಗಾಗಿ ಇದನ್ನು ಕಾರ್ಸಿನೋಮ (ಮಾರಕ ಗಂತಿ) ಎಂದು ಕರೆದ. ಹಾಗೆಯೇ ಮಾರಕ ಗಂತಿಯಲ್ಲಿ ಬೆಳೆದಿರುವ ಹುಣ್ಣನ್ನು ಕ್ಯಾನ್ಸರ್ ಎಂದ. ಕಲ್ಲಿನ ಹಾಗೆ ಗಟ್ಟಿಯಾಗಿರುವ ಕ್ಯಾನ್ಸರನ್ನು ಸ್ಕಿರ್ರಸ್ ಎಂದು ನಾಮಕರಣವನ್ನು ಮಾಡಿದ. ಹಿಪ್ಪೋಕ್ರೇಟ್ಸ್ ನಿಗೆ ಮನುಷ್ಯ೫ರನ್ನು ಕಾಡುವ ಚರ್ಮ, ಬಾಯಿ, ಜಠರ ಮತ್ತು ಸ್ತನ ಕ್ಯಾನ್ಸರುಗಳ ಪರಿಚಯವಿತ್ತು.
ಹಾಗೆಯೇ ಗುದ-ಮಲನಾಳದಲ್ಲಿ (ಏನೋರೆಕ್ಟಲ್) ಕಾಂಡೈಲೋಮ ಮತ್ತು ಪಾಲಿಪ್ಗಳ ಬಗ್ಗೆ ತಿಳಿದಿತ್ತು. ರೋಗಿಗಳ ದೊಡ್ಡ ಕರುಳಿನವರೆಗೆ ವೀಕ್ಷಿಸಬಲ್ಲ ಸಾಧನವನ್ನೂ ರೂಪಿಸಿದ್ದ. ರಕ್ತಮಿಶ್ರಿತ ಸ್ರಾವವಿರುವ ಸ್ತನಕ್ಯಾನ್ಸರ್ ಹಾಗೂ ಗರ್ಭಕೊರಳ ಕ್ಯಾನ್ಸರ್ ಗುಣವಾಗುವುದಿಲ್ಲವೆಂದ. ಕ್ಯಾನ್ಸರನ್ನು ಮೇಲ್ ಸ್ತರದಲ್ಲಿ ಬೆಳೆದಿರುವ ಕ್ಯಾನ್ಸರ್ ಹಾಗೂ ಒಳಸ್ತರದಲ್ಲಿ ಬೆಳೆದಿರುವ ಕ್ಯಾನ್ಸರ್ ಎಂದು ಪ್ರತ್ಯೇಕಿಸಿದ. ಮೇಲ್ಪದರದ ಕ್ಯಾನ್ಸರುಗಳಿಗೆ ಸುಡುವುದರ ಮೂಲಕ ಹಾಗೂ ನಾನಾ ಲೇಪನಗಳನ್ನು ಹಚ್ಚುವುದರ ಮೂಲಕ ಚಿಕಿತ್ಸೆಯನ್ನು ನೀಡುತ್ತಿದ್ದ. ಒಳಸ್ತರದ ಕ್ಯಾನ್ಸರುಗಳನ್ನು ಸಾಧ್ಯವಿದ್ದ ಕಡೆ ಛೇದಿಸುತ್ತಿದ್ದ. ಛೇದನಕ್ಕೆ ನಿಲುಕದ ಕ್ಯಾನ್ಸರನ್ನು ಗುಣವಾಗದ್ದೆಂದು ಘೋಷಿಸುತ್ತಿದ್ದ.
ಕ್ರಿ.ಪೂ.೧೪೬ರಲ್ಲಿ ಗ್ರೀಸ್ ದೇಶವು ರೋಮ್ ಸಾಮ್ರಾಜ್ಯದ ಒಂದು ಭಾಗವಾಯಿತು. ಗ್ರೀಕ್ ದಾರ್ಶನಿಕರಿಗೆ, ಪಂಡಿತರಿಗೆ, ಮೇಧಾವಿಗಳಿಗೆ, ಕವಿಗಳಿಗೆ, ಕಲಾವಿದರಿಗೆ ರೋಮ್ ಸಾಮ್ರಾಜ್ಯದಲ್ಲಿ ಗೌರವಯುತವಾದ ನೆಲೆಯು ದೊರೆಯಿತು. ಹೀಗೆ ನೆಲೆಸಿದವರಲ್ಲಿ ರೋಮ್ ಸಾಮ್ರಾಜ್ಯದಲ್ಲಿ ಖ್ಯಾತ ವೈದ್ಯ ಔಲಸ್ ಸೆಲ್ಸಸ್ (ಕ್ರಿ.ಪೂ.೨೮-ಕ್ರಿಪೂ.೫೦) ಸಹ ಒಬ್ಬ. ಇವನು ಪ್ರಭಾವಿಯಾಗಿದ್ದ ಕಾರಣ, ವೈದ್ಯಕೀಯವನ್ನು ಗ್ರೀಕ್ ಭಾಷೆಯ ಬದಲು ಲ್ಯಾಟಿನ್ ಭಾಷೆಯಲ್ಲಿ ಬೋಽಸ
ಬೇಕೆಂದು ಆಳರಸರ ಮೇಲೆ ಒತ್ತಡವನ್ನು ತಂದು ಯಶಸ್ವಿ ಯಾದ. ಇವನು ಡಿ ಮೆಡಿಸಿನ ಎಂಬ ವೈದ್ಯಕೀಯ ಗ್ರಂಥ ವನ್ನು ಬರೆದ. ಅದರಲ್ಲಿ ಮೇಲ್ಸ್ಸ್ತರದ ಕ್ಯಾನ್ಸರುಗಳ ವರ್ಣನೆಯ ಜೊತೆಯಲ್ಲಿ ಜಠರ, ದೊಡ್ಡಕರುಳು, ಯಕೃತ್ತು, ಗುಲ್ಮ ಮುಂತಾದ ಅಂಗಗಳೂ ಕ್ಯಾನ್ಸರಿಗೆ ತುತ್ತಾಗುವುದರ ಬಗ್ಗೆ ಬರೆದ. ಮೇಲ್ಸ್ತರದ ಕ್ಯಾನ್ಸರನ್ನು ಗುಣಪಡಿಸಲು ಎಲೆಕೋಸನ್ನು ಬೇಯಿಸಿದ.
ಅದಕ್ಕೆ ಉಪ್ಪು, ಜೇನು ಹಾಗೂ ಕೋಳಿಮೊಟ್ಟೆಯ ಬಿಳಿಯ ಭಾಗವನ್ನು ಬೆರೆಸಿದ. ಈ ಲೇಪನವನ್ನು ಕ್ಯಾನ್ಸರಿನ ಮೇಲೆ ಹಚ್ಚಿದ. ಸ್ತನಕ್ಯಾನ್ಸರ್ ಬಲಿತಾಗ ಅದು ಕಂಕುಳಿಗೆ ಹಾಗೂ ದೇಹದ ಇತರ ಭಾಗ ಗಳಿಗೆ ಹರಡುವುದನ್ನು ದಾಖಲಿಸಿದ. ರೋಮ್ ಸಾಮ್ರಾಜ್ಯದ ಪ್ಲೀನಿ (ಕ್ರಿ.ಶ.೨೩-ಕ್ರಿ.ಶ.೭೯) ತನ್ನ ಸಮಕಾಲೀನ ಕ್ಯಾನ್ಸರ್ ಚಿಕಿತ್ಸಾ ವಿವರಗಳನ್ನು ತನ್ನ ‘ಮೆಟೀರಿಯ ಮೆಡಿಕ’ ಎನ್ನುವ ಗ್ರಂಥದಲ್ಲಿ ಸಂಗ್ರಹಿಸಿದ. ಇವನ್ನು ಹಲವು ಔಷಧಗಳನ್ನು ಶಸ್ತ್ರಚಿಕಿತ್ಸೆಗೆ ಮೊದಲು ಬಳಸಬೇಕು ಎಂದು ಸೂಚಿಸುವುದರ ಜೊತೆಯಲ್ಲಿ ಕೆಲವು ಔಷಧ ಗಳನ್ನು ಶಸಚಿಕಿತ್ಸೆಯ ನಂತರ ಬಳಸಿದರೆ ಹೆಚ್ಚು ಪರಿಣಾಮ ಕಾರಿ ಎಂದು ಹೇಳಿದ.
ಕ್ಯಾನ್ಸರ್ ಕಾಯಿಲೆಯ ಬಗ್ಗೆ ಕ್ರಮ ಬದ್ಧವಾಗಿ ಅಧ್ಯಯನ ಮಾಡಿ, ಅದರ ಲಕ್ಷಣಗಳು, ಚಿಹ್ನೆ ಗಳು ಹಾಗೂ ಲಭ್ಯ ಚಿಕಿತ್ಸಾ ವಿಧಾನಗಳನ್ನು, ಕ್ರಮಬದ್ಧ ವಾಗಿ ಸಂಗ್ರಹಿಸಿದವನ್ನು ಈಜಿಪ್ಟಿನ ಅಲೆಗ್ಸಾಂಡ್ರಿಯದಲ್ಲಿ ವೃತ್ತಿ ನಿರತನಾಗಿದ್ದ ಕಪ್ಪ ಡೋಸಿಯದ ಏರಿಯಾಟಸ್ (ಕ್ರಿ.ಶ.೮೧- ಕ್ರಿ.ಶ.೧೩೮) ಎಂಬ ವೈದ್ಯ. ಹಿಪ್ಪೋಕ್ರೇಟ್ಸ್ ಕ್ಯಾನ್ಸರನ್ನು ಏಡಿಗೆ ಹೋಲಿಸಿದ್ದನ್ನು ಒಪ್ಪಿ, ಅದೇ ಪ್ರತಿಮೆಯನ್ನು ಮುಂದುವರೆಸಿದ. ಏರಿಯಾ ಟಸ್ ಕ್ಯಾನ್ಸರನ್ನು ವಿಶಾಲವಾಗಿ ಎರಡು ಗುಂಪುಗಳಲ್ಲಿ ವಿಂಗಡಿಸಿದ. ಮೊದಲನೆಯ ಗುಂಪಿನಲ್ಲಿ ದುಂಡಗಿರುವ, ಸ್ಪರ್ಶಿಸಲು ಮೃದ್ವಸ್ಥ (-ರ್ಮ್) ವಾಗಿರುವ ಹಾಗೂ ಯಾವುದೇ ಹುಣ್ಣುಗಳಿಲ್ಲದ ಗಂತಿಗಳನ್ನು ಸೇರಿಸಿದ.
೨ನೆಯ ಗುಂಪಿನಲ್ಲಿ ಹುಣ್ಣುಗಳಾಗಿ, ಅತ್ಯಂತ ದುರ್ವಾಸನೆ ಬೀರುವ ಗಂತಿಗಳನ್ನು ಸೇರಿಸಿದ. ಕ್ಯಾನ್ಸರ್ ಗಂತಿಗಳು ವಿಪರೀತ ನೋಯುತ್ತವೆ ಹಾಗೂ ಗಳಲೆ ಕಟ್ಟುತ್ತವೆ ಎಂದ. ಮೊದಲನೆಯ ಗುಂಪಿನ ಗಂತಿಗಳಿಗಿಂತ, ೨ನೆಯ ನಮೂನೆಯು ಗಂತಿಗಳು ಉಗ್ರಸ್ವರೂಪಿಯಾಗಿದ್ದು, ಸಾಮಾನ್ಯವಾಗಿ ಸಾವಿನಲ್ಲಿ ಕೊನೆಗೊಳ್ಳುತ್ತದೆ ಎಂದ. ಗರ್ಭ ಕೋಶವು ಸಹಜ ಗಾತ್ರ ಕ್ಕಿಂತ ದೊಡ್ದದಾಗಿದ್ದು, ಅದರಿಂದ ಅಸಹಜ ರಕ್ತಸ್ರಾವವನ್ನು ಹರಿಯುತ್ತಿದ್ದರೆ, ಅದೂ ಸಹ ಕ್ಯಾನ್ಸರ್ ಆಗಿರುತ್ತದೆಯೆಂದ.
ಪ್ರಾಚೀನ ರೋಮ್ ಸಾಮ್ರಾಜ್ಯದ ಮತ್ತೊಬ್ಬ ಮಹಾನ್ ವೈದ್ಯನೆಂದರೆ ಅದು ಕ್ಲಾಡಿಯಸ್ ಗ್ಯಾಲನಸ್ (ಕ್ರಿ.ಪೂ. ೧೩೦-೨೦೦) ಇವನು ಮೊದಲ ಬಾರಿಗೆ ಕ್ಯಾನ್ಸರನ್ನು ಗುರುತಿಸಲು ಆಂಕೋಸ್ ಎಂಬ ಶಬ್ದವನ್ನು ಬಳಸಿದ. ಗ್ರೀಕ್ ಭಾಷೆ ಯಲ್ಲಿ ಆಂಕೋಸ್ ಎಂದರೆ ಊತ (ಸ್ವೆಲಿಂಗ್) ಎಂದರ್ಥ. ಈ ಪದವನ್ನು ಎಲ್ಲ ರೀತಿಯ ಕ್ಯಾನ್ಸರ್ ಗಂತಿಗಳಿಗೆ ಬಳಸಿದ. ಈ ಆಂಕೋಸ್ ಎಂಬ ಮೂಲ ಶಬ್ದದಿಂದಲೇ ಆಂಕಾಲಜಿ (ಕ್ಯಾನ್ಸರ್ ವಿಜ್ಞಾನ) ಎಂಬ ಶಬ್ದವು ಹಾಗೂ ಆಂಕಾಲಜಿಸ್ಟ್ (ಕ್ಯಾನ್ಸರ್ ವೈದ್ಯ) ಎಂಬ ಶಬ್ದಗಳು ರೂಪುಗೊಂಡಿವೆ. ಇಂದು ವಿಶ್ವದಾದ್ಯಂತ ಆಂಕಾಲಜಿ ಎನ್ನುವುದು ಒಪ್ಪಿತ ಶಬ್ದವಾಗಿದೆ. ಇವನು ರೋಮ್ ನಗರದಲ್ಲಿ ವೃತ್ತಿನಿರತನಾಗಿದ್ದ. ಇವನು ಹುಣ್ಣು ಕಂಡುಬರದ ಕ್ಯಾನ್ಸರ್ ಗಂತಿಗಳು ಸಾಮಾನ್ಯವಾಗಿ ಗುಣವಾಗುತ್ತವೆ ಎಂದ.
ಈ ನಮೂನೆಯ ಕ್ಯಾನ್ಸರ್ ತಲೆದೋರಲು ಹಳದಿ ಪಿತ್ತದ ವೈಪರೀತ್ಯವೇ ಕಾರಣವೆಂದ. ದುರ್ಗಂಧ ಬೀರುವ ಕ್ಯಾನ್ಸರ್ ಹುಣ್ಣುಗಳಿಗೆ ಕಪ್ಪು ಪಿತ್ತದ ವೈಪರೀತ್ಯವೇ ಕಾರಣವೆಂದು ಹಿಪ್ಪೋಕ್ರೇಟ್ಸ್ ವಾದವನ್ನು ಪುರಸ್ಕರಿಸಿದ. ಹಾಗಾಗಿ ಶರೀರದಲ್ಲಿ ಸಂಗ್ರಹವಾಗಿರುವ ಅತಿ ಕಪ್ಪುಪಿತ್ತವನ್ನು ನಿವಾರಿಸಲು ಸತತವಾಗಿ ವಿರೇಚಕ ಔಷಗಳನ್ನು ನೀಡಿದೆ. ರೋಮನ್ನರು ಶಸ್ತ್ರಚಿಕಿತ್ಸೆಯ ಮೂಲಕ ಕ್ಯಾನ್ಸರನ್ನು ನಿವಾರಿಸುವ ಪರಿಕಲ್ಪನೆಯನ್ನು ವಿರೋಧಿಸು ತ್ತಿದ್ದರು. ಗ್ಯಾಲನ್ ಶಸ್ತ್ರ ಚಿಕಿತ್ಸೆಯನ್ನು ಮಾಡಲು ಹೋಗಲಿಲ್ಲ. ಇವನ್ನು ಮಾಂಸಲವಾಗಿದ್ದ ಕ್ಯಾನ್ಸರ್ ಗಂತಿಗಳನ್ನು ಸಾರ್ಕೋಮ ಎಂದು ಕರೆದ. ಗ್ಯಾಲನ್ ಕ್ಯಾನ್ಸರ್ ಬಗ್ಗೆ ೧೦೦ಕ್ಕೂ ಹೆಚ್ಚು ಟಿಪ್ಪಣಿಗಳನ್ನು ಬರೆದ. ಆ ಟಿಪ್ಪಣಿಗಳನ್ನು ಕ್ರಿಶ್ಚಿಯನ್, ಬೈಜ಼ಂಟೈನ್ ಮತ್ತು ಅರಬ್ ದೇಶಗಳಲ್ಲಿದ್ದ ವೈದ್ಯರಿಗೆ ರವಾನಿಸಿದರು. ಈ ಬರಹಗಳು ವೈದ್ಯರನ್ನು ಹಾಗೂ ಸಂಶೋಧಕರನ್ನು ಸ್ವಲ್ಪಕಾಲ ದಿಕ್ಕು ತಪ್ಪಿಸಿದವು.