Wednesday, 11th December 2024

ಭಟ್ಟರು ಛಲಗಾರರು

ಪ್ರತಿಸ್ಪಂದನ

ಶಂಕರನಾರಾಯಣ ಭಟ್

ಎಂ. ಶ್ರೀನಿವಾಸ್ ಅವರು ಬರೆದ ‘ಭಟ್ಟರು ಕೇವಲ ವ್ಯಕ್ತಿಯಲ್ಲ, ಶಕ್ತಿ…’ ಬರಹದಲ್ಲಿ (ವಿಶ್ವವಾಣಿ ಜ.೧೭) ಅತಿಶಯೋಕ್ತಿ ಏನೂ ಇಲ್ಲ ಅಂತಲೇ ಹೇಳಬಹುದು. ವಿಶ್ವೇಶ್ವರ ಭಟ್ಟರು ತಮ್ಮ ‘ವಿಶ್ವವಾಣಿ’ ಪತ್ರಿಕೆಯನ್ನು ಆರಂಭಿಸುವುದಕ್ಕಿಂತ ಮೊದಲೂ ಹಲವು ಮಾಧ್ಯಮ ಸಂಸ್ಥೆಗಳಲ್ಲಿ ಸಂಪಾದಕ ರಾಗಿಯೋ, ಪ್ರಧಾನ ಸಂಪಾದಕರಾಗಿಯೋ ಕೆಲಸ ಮಾಡಿದ್ದಾರೆ.

ಅಷ್ಟೇ ಅಲ್ಲ, ಅಂದಿನಿಂದಲೂ ತಮ್ಮದೇ ಅಂಕಣವನ್ನು ನಿಯತವಾಗಿ ಪ್ರಕಟಿಸುತ್ತ ಬಂದವರು ಎಂಬುದು ಹೊಸ ವಿಷಯವೇನಲ್ಲ. ಆದರೆ ಹಿಂದೆ ಅವರೊಬ್ಬ ‘ಉದ್ಯೋಗಿ’ ಆಗಿದ್ದರೇ ವಿನಾ, ‘ಉದ್ಯಮಿ’ ಆಗಿರಲಿಲ್ಲ. ಇಲ್ಲೇ ಇರುವುದು ವ್ಯತ್ಯಾಸ. ಒಬ್ಬ ಉದ್ಯಮಿಯಾಗಿ, ಪತ್ರಿಕೆ ಅಂದರೆ ಹೇಗಿರಬೇಕು, ಓದುಗ ಏನನ್ನು ಬಯಸುತ್ತಾನೆ ಎಂಬುದರ ಸ್ಪಷ್ಟ ಕಲ್ಪನೆ ಇರಲೇಬೇಕು. ಆ ಕಲ್ಪನೆ ಭಟ್ಟರಲ್ಲಿ ಇದ್ದುದರಿಂದಲೇ, ಎಡವಿ ನಡೆದು ಬಂದುದಕ್ಕಿಂತ ಕೊಡವಿ ನಡೆದಿದ್ದೇ ಜಾಸ್ತಿ! ಆರಂಭದಲ್ಲಿ ಸಾಥ್ ಕೊಟ್ಟವರು ನಂತರ ಕೈಕೊಟ್ಟಾಗಲೂ, ಒಂದಿಷ್ಟೂ ವಿಚಲಿತರಾಗದೆ ಮುನ್ನಡೆದ ಪರಿಣಾಮ
‘ವಿಶ್ವವಾಣಿ’ ಯಶಸ್ವೀ ೮ ವರ್ಷ ಕಳೆದು ೯ಕ್ಕೆ ಕಾಲಿಟ್ಟಿದೆ.

ಹಾಗೆ ನೋಡಿದರೆ, ಭಟ್ದರು ಪತ್ರಿಕೋದ್ಯಮದ ಪರಿಭಾಷೆಯನ್ನೇ ಬದಲಿಸಿದ್ದಾರೆ ಅಂದರೂ ತಪ್ಪಲ್ಲ. ದಿನಪತ್ರಿಕೆ ಅಂದರೆ, ಒಂದಿಷ್ಟು ಸುದ್ದಿ ಜತೆಯಲ್ಲಿ ಇನ್ನೊಂದಿಷ್ಟು ಜಾಹೀರಾತು ಎಂಬ ಗ್ರಹಿಕೆಯೇ ದಟ್ಟವಾಗಿರುವಾಗ, ಅದರಲ್ಲಿ ಬದಲಾವಣೆ ತಂದವರೇ ಭಟ್ಟರು. ಅಂದರೆ, ಸುದ್ದಿಯನ್ನೂ ಒಳಗೊಂಡು ಬುದ್ಧಿಗೂ ಅವಕಾಶ ಕೊಟ್ಟಿದ್ದು ಅವರ ಹೆಗ್ಗಳಿಕೆ. ಇನ್ನೂ ಒಂದು ವಿಷಯವೆಂದರೆ, ಸಂಪಾದಕರಾ ಗಿದ್ದುಕೊಂಡು ಕೇವಲ ಸಂಪಾದ ಕೀಯಕ್ಕಷ್ಟೇ ಸೀಮಿತರಾಗಿರದೇ, ಪ್ರತಿವಾರ ಒಂದಕ್ಕಿಂತ ಹೆಚ್ಚು ಅಂಕಣ, ಅದರ ಜತೆ ವಿದೇಶದಲ್ಲಿದ್ದಾಗ ಅಲ್ಲಿನ ಮಾಹಿತಿಯನ್ನು ಓದುಗರಿಗೆ ತಲುಪಿಸುವಿಕೆ ಅವರ ಪರಿಪಾಠ.

ಇದನ್ನು ಕಂಡಾಗ ಓದುಗನಿಗೇ ಆಶ್ಚರ್ಯವಾಗುವುದೂ ಇದೆ. ಇರುವುದು ವಿದೇಶದಲ್ಲಾದರೂ, ಇಲ್ಲಿ ಪ್ರಕಟಗೊಳ್ಳುವ ತಮ್ಮ ಪತ್ರಿಕೆಯಲ್ಲಿ ತಮ್ಮ ಎಲ್ಲ ಅಂಕಣಗಳನ್ನೂ ಜಾರಿ ಇಡುವ ಅವರ ಅಭ್ಯಾಸ ಇದಕ್ಕೆ ಕಾರಣ. ಅವರು ರಾತ್ರಿ-ಹಗಲೆನ್ನದೇ ಕೇವಲ ಕೆಲವು ಗಂಟೆಯಷ್ಟೇ ನಿದ್ರಿಸುವ ಅಭ್ಯಾಸವನ್ನೂ ರೂಢಿಸಿಕೊಂಡಿದ್ದಾರೆ ಎಂಬುದೂ ತಿಳಿಯಿತು. ಇಷ್ಟೇ ಅಲ್ಲ, ಎಳಸುಗಳಿಗೂ ಅವಕಾಶ ಕೊಟ್ಟು ಅವರಿಂದಲೂ ಬರೆಯಿಸುವ ಪ್ರಯತ್ನ  ಪತ್ರಿಕೋದ್ಯ ಮದಲ್ಲೇ ವಿಶೇಷ. ಕೆಲವೊಮ್ಮೆ ಕಾರಣಾಂತರಗಳಿಂದ ಪತ್ರಿಕೆ ಕೈಸೇರದಿದ್ದರೂ ತಾಂತ್ರಿಕ ಬೆಳವಣಿಗೆಯಿಂದಾಗಿ ಇ-ಪೇಪರ್ ಮುಖಾಂತರವೂ ‘ವಿಶ್ವವಾಣಿ’ಯ ಸ್ವಾದವನ್ನು ಅನುಭವಿಸಬಹುದು. ಪತ್ರಿಕೆಯ ಇಂದಿನ ಈ ಯಶಸ್ಸಿಗೆ ಕಾರಣ, ಭಟ್ಟರ ಛಲ, ಹಠ, ಗುರಿ ತಲುಪಲೇಬೇಕೆಂಬ ಸಂಕಲ್ಪ.

ಮೊನ್ನೆ ಅವರೇ ಬರೆದುಕೊಂಡಿರುವಂತೆ, ತಮ್ಮ ಪಯಣವನ್ನು ಇಷ್ಟಕ್ಕೇ ಸೀಮಿತಗೊಳಿಸದ ಅವರು ತಮ್ಮದೇ ಆದ ಟಿ.ವಿ. ಚಾನಲ್ ಮತ್ತು ನಿಯತ ಕಾಲಿಕವನ್ನೂ ಸದ್ಯದಲ್ಲೇ ಶುರುಮಾಡಲಿದ್ದಾರಂತೆ. ಸದ್ಯ ಇದು ಬೇಕಿತ್ತೇ ಅಂತಲೂ ಕೆಲ ಓದುಗರಿಗೆ ಈಗಾಗಲೇ ಅನಿಸಿರಲೂ ಸಾಕು. ಉದ್ಯಮದಲ್ಲಿ ಐದು, ಎಂಟು ವರ್ಷಗಳೆಲ್ಲ ಮಾಮೂಲು. ಇದರ ಯಶಸ್ಸನ್ನು ಕಂಡು ಬೇರೆ ಸಾಹಸಗಳಿಗೆ ಧುಮುಕುವುದು ಅಷ್ಟು ಹಿತಕಾರಿ ಆಗಲಿಕ್ಕಿಲ್ಲ ಎಂಬುದು ಇಂಥ ಓದುಗರ ಕಳವಳವಾಗಿರಲಿಕ್ಕೂ ಸಾಕು. ಆದರೂ, ಇದು ಭಟ್ಟರ ನಿರ್ಧಾರ ಅಂತ ತೆಪ್ಪಗೆ ಇರುವುದೇ ಲೇಸು!

(ಲೇಖಕರು ಹವ್ಯಾಸಿ ಬರಹಗಾರರು)