Friday, 13th December 2024

ಆನ್‌ಲೈನ್‌ ಗೇಮ್‌ ಪಾಸ್‌ವರ್ಡ್‌ ಕೊಡಲಿಲ್ಲವೆಂದು ಗೆಳೆಯನ ಹತ್ಯೆ

ಕೋಲ್ಕತಾ: ಪಶ್ಚಿಮ ಬಂಗಾಳದಲ್ಲಿ ಆನ್‌ಲೈನ್‌ ಗೇಮ್‌ ಪಾಸ್‌ವರ್ಡ್‌ ಕೊಡಲಿಲ್ಲ ಎಂದು ಒಂದಷ್ಟು ಯುವಕರು ತಮ್ಮ ಗೆಳೆಯನನ್ನೇ ಹತ್ಯೆ ಮಾಡಿದ್ದಾರೆ.

ಆನ್‌ಲೈನ್‌ ಮೊಬೈಲ್‌ ಗೇಮ್‌ ಪಾಸ್‌ವರ್ಡ್‌ ಕೊಡದ ಕಾರಣಕ್ಕೆ ಮುರ್ಷಿದಾಬಾದ್‌ ಜಿಲ್ಲೆಯಲ್ಲಿ ಪಪಾಯ್‌ ದಾಸ್‌ (18) ಎಂಬ ಯುವಕನು ಹತ್ಯೆ ಗೀಡಾಗಿದ್ದಾನೆ. ಈತನ ಗೆಳೆಯರೇ ಕೊಂದು, ದೇಹವನ್ನು ಸುಟ್ಟು, ಬಳಿಕ ಶವವನ್ನು ಕಾಡಿನಲ್ಲಿ ಎಸೆದಿದ್ದಾರೆ ಎಂದು ತಿಳಿದುಬಂದಿದೆ. ಮುರ್ಷಿದಾಬಾದ್‌ ಜಿಲ್ಲೆಯ ಕಾಡಿನಲ್ಲಿ ಪಪಾಯ್‌ ದಾಸ್‌ ಶವ ಪತ್ತೆಯಾಗಿದೆ. ಮನೆಯಿಂದ ಹೊರಗೆ ಹೋದ ಮಗ ವಾಪಸ್‌ ಬರದ ಕಾರಣ ಆತನ ತಾಯಿ ಪೂರ್ಣಿಮಾ ದಾಸ್‌ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.

ಪಪಾಯ್‌ ದಾಸ್‌ ಹಾಗೂ ಆತನ ಗೆಳೆಯರಿಗೆಲ್ಲ ಆನ್‌ಲೈನ್‌ ಗೇಮ್‌ ಆಡುವ ಗೀಳು ಅಂಟಿಕೊಂಡಿದೆ. ಇವರು ಕಾಲೇಜಿಗೆ ಹೋದರೂ ಆನ್‌ಲೈನ್‌ ಗೇಮ್‌ ನಲ್ಲೇ ಮುಳುಗಿರುತ್ತಿದ್ದರು. ಎಲ್ಲರೂ ಆನ್‌ಲೈನ್‌ ಗೇಮ್‌ ಆಡಲು ಒಂದು ಕಡೆ ಸೇರಿದ್ದಾರೆ. ಆಗ ಒಬ್ಬನು ಪಾಸ್‌ವರ್ಡ್‌ ಕೊಡು ಎಂದು ದಾಸ್‌ಗೆ ಕೇಳಿದ್ದಾನೆ. ಇದಕ್ಕೆ ಪಪಾಯ್‌ ದಾಸ್‌ ಒಪ್ಪಿಲ್ಲ. ಇದರಿಂದಾಗಿ ವಾಗ್ವಾದ ನಡೆದಿದೆ. ವಾಗ್ವಾದವು ಜಗಳಕ್ಕೆ ತಿರುಗಿದೆ. ಜಗಳದ ವೇಳೆ ಎಲ್ಲ ಗಳೆಯರು ಒಂದಾಗಿ ಪಪಾಯ್‌ ದಾಸ್‌ನನ್ನು ಕೊಂದುಹಾಕಿದ್ದಾರೆ.

ಗೆಳೆಯನನ್ನೇ ಕೊಂದ ದುರುಳರು ಆತನ ಶವವನ್ನು ಊರಿನ ಆಚೆಗೆ ತೆಗೆದುಕೊಂಡು ಹೋಗಿದ್ದಾರೆ. ಅಲ್ಲದೆ, ಯಾರೂ ಇಲ್ಲದ ಜಾಗದಲ್ಲಿ ಶವವನ್ನು ಸುಟ್ಟುಹಾಕಿದ್ದಾರೆ. ಬಳಿಕ ಕಾಡಿನೊಳಗೆ ಶವವನ್ನು ಎಸೆದು ಪರಾರಿಯಾಗಿದ್ದಾರೆ. ಮನೆಯಿಂದ ಹೋಗಿ ಹಲವು ದಿನಗಳಾದರೂ ವಾಪಸ್‌ ಬರದ ಕಾರಣ ಪೂರ್ಣಿಮಾ ದಾಸ್‌ ಅವರು ದೂರು ನೀಡಿದ್ದಾರೆ. ಪೊಲೀಸರು ಪಪಾಯ್‌ ದಾಸ್‌ ಗೆಳೆಯರನ್ನು ಬಂಧಿಸಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ ಎಂದು ತಿಳಿದುಬಂದಿದೆ.