Saturday, 14th December 2024

ಬಿಜೆಪಿ ಲೋಕೋತ್ಸಾಹಕ್ಕೆ ಹೊಸ ಸವಾಲು

ವರ್ತಮಾನ

maapala@gmail.com

ಲೋಕಸಭೆ ಚುನಾವಣೆಗೆ ಬಿಜೆಪಿಯ ಉತ್ಸಾಹ ಎಷ್ಟರ ಮಟ್ಟಿಗೆ ಹೆಚ್ಚಾಗಿದೆ ಎಂದರೆ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಹೇಳಿದವರು, ಯೋಚಿಸಿದವರು ಮತ್ತೆ ಟಿಕೆಟ್‌ಗೆ ಹಪಹಪಿಸುವಷ್ಟರಷ್ಟು. ಆದರೆ, ಇದರ ಬೆನ್ನಲ್ಲೇ ಕಾಂಗ್ರೆಸ್ ಉರುಳಿಸಿರುವ ಬಸವಾದಿ ಶರಣರ ದಾಳ ಆ ಪಕ್ಷದ ಮುಂದೆ ಹೊಸ ಸವಾಲು ಇಟ್ಟಿದೆ.

ರಾಜಕೀಯ ಅಧಿಕಾರ ಎಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಅಧಿಕಾರ ಸಿಗುತ್ತದೆ ಎಂಬ ಸಣ್ಣ ಸುಳಿವು ಸಿಕ್ಕಿದರೂ ಅದಕ್ಕಾಗಿ ಹಪಹಪಿಸುತ್ತಾರೆ. ನಿವೃತ್ತಿ ವಾಪಸ್ ಪಡೆದು ಮತ್ತೆ ಚುನಾವಣೆಯಲ್ಲಿ ಸ್ಪರ್ಧಿಸಲು ಅಣಿಯಾಗುತ್ತಾರೆ. ಅದಕ್ಕೆ ಬೇಕಾದ ವಾತಾವರಣ ಸೃಷ್ಟಿ ಮಾಡಿಕೊಳ್ಳುತ್ತಾರೆ. ತಮ್ಮವರ ಕಡೆಯಿಂದ ಅವರು ಸ್ಪರ್ಧಿಸಲೇ ಬೇಕು ಎಂದು ಹೇಳಿಸಿ, ನಾನಾ ಕಸರತ್ತುಗಳನ್ನು ಮಾಡಿ ಟಿಕೆಟ್ ಗಿಟ್ಟಿಸಿಕೊಳ್ಳಲು ಶತ ಪ್ರಯತ್ನ ಮಾಡುತ್ತಾರೆ. ಇಂಥವರಲ್ಲಿ ಇನ್ನೂ ಒಂದು ವಿಭಾಗವಿದೆ. ಸಾಕಷ್ಟು ಬಾರಿ ಸ್ಪರ್ಧಿಸಿದ್ದೀರಿ. ಸಾಧ್ಯವಾಗುವ ಎಲ್ಲಾ ಅಧಿಕಾರವನ್ನೂ ಈಗಾಗಲೇ ಪಡೆದಿದ್ದೀರಿ.

ಹೀಗಾಗಿ ಹೊಸಬರಿಗೆ ಅವಕಾಶ ಮಾಡಿಕೊಡಿ ಎಂದರೆ ಕೇಳದೆ ಬಂಡಾಯವೇಳುತ್ತಾರೆ. ಅದಕ್ಕೂ ಸೊಪ್ಪು ಹಾಕದಿದ್ದರೆ ಮತ್ತೊಂದು ಪಕ್ಷವನ್ನು ಸೇರಿ ಅಲ್ಲಿ ಅವಕಾಶ, ಅಧಿಕಾರಕ್ಕಾಗಿ ಪ್ರಯತ್ನಿಸುತ್ತಾರೆ. ಒಮ್ಮೆ ರಾಜಕೀಯ ಅಧಿಕಾರದ ರುಚಿ ಕಂಡವರು ಕೊನೆಯುಸಿರು ಇರುವವರೆಗೂ ಅದರಲ್ಲೇ ಮುಂದುವರಿಯ ಬೇಕು ಎಂದು ನಾನಾ ಕಸರತ್ತುಗಳನ್ನು ಮಾಡುತ್ತಾರೆ. ಅದು ಸಾಧ್ಯವೇ ಇಲ್ಲ ಎಂದಾದರೆ ತನ್ನ ಪತ್ನಿ, ಮಗ, ಪುತ್ರಿ, ಸೊಸೆ… ಹೀಗೆ ತನ್ನ ಸಂಬಂಧಿಕರಿಗೆ ಅವಕಾಶ ಕಲ್ಪಿಸಲು ಮುಂದಾಗುತ್ತಾರೆ.

ಲೋಕಸಭೆ ಚುನಾವಣೆಗೆ ಸಿದ್ಧತೆ ಆರಂಭಿಸಿರುವ ಬಿಜೆಪಿಗೆ ಅಭ್ಯರ್ಥಿಗಳ ಆಯ್ಕೆ ಕಗ್ಗಂಟಾಗಿರುವುದು ಇದೇ ಕಾರಣಕ್ಕೆ. ಕೇಂದ್ರದಲ್ಲಿ ಮತ್ತೆ ಬಿಜೆಪಿ ನೇತೃತ್ವದ ಸರಕಾರ ಖಚಿತ ಎಂಬ ವಾತಾವರಣ ಇದ್ದರೂ ಮೂರ್ನಾಲ್ಕು ಸಂಸದರು ಮುಂಬರುವ ಚುನಾವಣೆಗೆ ಸ್ಪಽಸುವುದಿಲ್ಲ ಎಂದು ಘೋಷಿಸಿದ್ದರು. ನಾಲ್ಕೈದು ಸಂಸದರಿಗೆ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಟಿಕೆಟ್ ನೀಡುವುದಿಲ್ಲ ಎಂಬ ಸಂದೇಶವನ್ನು ಕೆಲವು ತಿಂಗಳ ಹಿಂದೆಯೇ ಬಿಜೆಪಿ ವರಿಷ್ಠರು ಕಳುಹಿಸಿ ದ್ದರು. ಒಬ್ಬ ಸಂಸದರಂತೂ ಮೂರು ವರ್ಷಕ್ಕೂ ಹೆಚ್ಚು ಕಾಲ ತೆರೆಮರೆಗೆ ಸರಿದಿದ್ದು, ಅವರು ಮತ್ತೆ ಸ್ಪರ್ಧಿಸುವುದಿಲ್ಲ ಎಂದೇ ಎಲ್ಲರೂ ಭಾವಿಸಿದ್ದರು. ಆದರೆ, ಯಾವಾಗ ಅಭ್ಯರ್ಥಿಗಳ ಆಯ್ಕೆಗೆ ಚಟುವಟಿಕೆಗಳು ಆರಂಭ ವಾದವೋ ತೆರೆಮರೆಯಲ್ಲಿದ್ದವರು, ಮತ್ತೆ ಸ್ಪರ್ಧಿಸುವುದಿಲ್ಲ ಎಂದವರೆಲ್ಲರೂ ಮತ್ತೆ ಚುರುಕಾಗಿದ್ದಾರೆ.

ಕೊನೆಯ ಬಾರಿ ಒಂದು ಛಾನ್ಸ್ ನೋಡೋಣ ಎನ್ನುತ್ತಿದ್ದಾರೆ. ತಮಗೆ ಟಿಕೆಟ್ ಸಿಗದಿದ್ದಲ್ಲಿ ಕ್ಷೇತ್ರದಲ್ಲಿ ಬಿಜೆಪಿ ಗೆಲುವು ಅಸಾಧ್ಯ ಎಂಬುದನ್ನು ಬಿಂಬಿಸುವ
ಪ್ರಯತ್ನಕ್ಕಿಳಿದಿದ್ದಾರೆ. ಮತ್ತೊಂದೆಡೆ ಹಾಲಿ ಸಂಸದರಿಗೆ ಟಿಕೆಟ್ ಬೇಡ ಎಂದು ಪಕ್ಷದ ಸ್ಥಳೀಯ ಮುಖಂಡರು, ಶಾಸಕರು ಒತ್ತಡ ಹೇರುತ್ತಿದ್ದಾರೆ. ಹೀಗಾಗಿಯೇ ಇತ್ತೀಚೆಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ನಡೆದ ಲೋಕಸಭಾ ಚುನಾವಣೆಯ ಸಿದ್ಧತಾ ಸಭೆಯಲ್ಲಿ ಅಭ್ಯರ್ಥಿಗಳ  ಆಯ್ಕೆ ಬಗ್ಗೆ ಹೆಚ್ಚು ಚರ್ಚೆ ನಡೆಸದೆ ವರಿಷ್ಠರ ನಿರ್ಧಾರಕ್ಕೆ ಬಿಡಲಾಯಿತು.

ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಮತ್ತೊಮ್ಮೆ ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರಕಾರ ಅಧಿಕಾರಕ್ಕೆ ಬರುವುದು ಖಚಿತ
ಎಂಬುದು ಈಗಾಗಲೇ ಖಚಿತವಾಗಿದ್ದರೂ ಸ್ಪರ್ಧೆ ಬೇಡ ಎನ್ನುತ್ತಿರುವರು ಕೊನೆಯ ಬಾರಿ ಎಂದು ಹೇಳಿಕೊಂಡು ಮತ್ತೆ ಅವಕಾಶಕ್ಕಾಗಿ ಹಾತೊರೆಯುತ್ತಿ
ರುವುದಕ್ಕೆ ಕಾರಣಗಳೂ ಇವೆ. ಅಯೋಧ್ಯೆಯಲ್ಲಿ ಶ್ರೀರಾಮಮಂದಿರ ಉದ್ಘಾಟನೆ ಮತ್ತು ಶ್ರೀರಾಮನ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮ ನಡೆಯುತ್ತಿರುವುದರಿಂದ ದೇಶಾದ್ಯಂತ ರಾಜಕೀಯ ವಾತಾವರಣ ಬಿಜೆಪಿ ಪರ ಇನ್ನಷ್ಟು ವ್ಯಾಪಕವಾಗುತ್ತಿದೆ.

ಇದರೊಂದಿಗೆ ಮೋದಿ ಹವಾ, ಅಭಿವೃದ್ಧಿ ಕೆಲಸಗಳು ಎಷ್ಟರ ಮಟ್ಟಿಗೆ ಪಕ್ಷದ ನಾಯಕರು ಮತ್ತು ಕಾರ್ಯಕರ್ತರ ಉತ್ಸಾಹವನ್ನು ಇಮ್ಮಡಿಗೊಳಿಸಿದೆ ಎಂದರೆ ಮುಂಬರುವ ಲೋಕಸಭೆ ಚುನಾವಣೆ ಯಲ್ಲಿ ೪೦೦+ ಸ್ಥಾನಗಳ ಮೇಲೆ ಕಣ್ಣಿಟ್ಟು ಆ ನಿಟ್ಟಿನಲ್ಲಿ ಕೆಲಸ ಆರಂಭಿಸಿದೆ. ಮತ್ತೊಂದೆಡೆ ರಾಜ್ಯದ ಕಾಂಗ್ರೆಸ್ ಸರಕಾರದ ಕೆಲವೊಂದು ತೀರ್ಮಾನಗಳು ಬಹುಸಂಖ್ಯಾತ ಹಿಂದೂಗಳ ಆಕ್ರೋಶಕ್ಕೆ ಕಾರಣ ವಾಗಿವೆ. ಹೀಗಾಗಿ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಮೇಲೆ ಜಾರಿಗೊಳಿಸಿರುವ ಐದು ಗ್ಯಾರಂಟಿಗಳು ತಮಗೆ ಸೋಲು ತಂದೊಡ್ಡಬಹುದು ಎಂಬ ಆತಂಕ ಚುನಾವಣೆ ಬೇಡ ಎನ್ನುತ್ತಿದ್ದವರಲ್ಲಿತ್ತು. ಆದರೆ, ಇತ್ತೀಚಿನ ಬೆಳವಣಿಗೆಗಳು ಬಿಜೆಪಿ ಮತ್ತು ಕೇಂದ್ರ ಸರಕಾರಕ್ಕೆ ಪೂರಕವಾಗಿರುವುದರಿಂದ ಏಕೆ ಮತ್ತೊಮ್ಮೆ ಪ್ರಯತ್ನಿಸಿ ಗೆದ್ದು ಬರಬಾರದು ಎಂಬ ಆಸೆಯನ್ನು ಅವರಲ್ಲಿ ಮೂಡಿಸಿದೆ.

ಅಷ್ಟರಮಟ್ಟಿಗೆ ಬಿಜೆಪಿಯಲ್ಲಿ ಉತ್ಸಾಹ ಹೆಚ್ಚಾಗಿದೆ. ಅದಕ್ಕಾಗಿಯೇ ಉತ್ತರ ಕನ್ನಡ ಸಂಸದ ಅನಂತಕುಮಾರ್ ಹೆಗಡೆ ಮಾತನಾಡಲು ಆರಂಭಿಸಿದ್ದಾರೆ.
ಕಳೆದ ಮೂರು ವರ್ಷಕ್ಕೂ ಹೆಚ್ಚು ಅವಧಿಯಿಂದ ಅನಾರೋಗ್ಯ ಮತ್ತಿತರೆ ಕಾರಣಗಳಿಂದ ಬಹಿರಂಗ ವಾಗಿ ಹೆಚ್ಚು ಕಾಣಿಸಿಕೊಳ್ಳದ ಅವರು ಇದೀಗ  ಸಕ್ರಿಯ  ರಾಗಿದ್ದಾರೆ. ಅನಂತಕುಮಾರ್ ಹೆಗಡೆ ಮಾತು ಶುರುಮಾಡಿದರೆ ಅದರಲ್ಲಿ ವಿವಾದವೊಂದು ಸೃಷ್ಟಿಯಾಗುತ್ತದೆ. ಕೆಲವೊಮ್ಮೆ ಅದರಿಂದ ಪಕ್ಷಕ್ಕೆ ಹಾನಿಯಾದರೂ ಬಹುತೇಕ ಸಂದರ್ಭದಲ್ಲಿ ತನ್ನ ಸಾಂಪ್ರದಾಯಿಕ ಮತಗಳ ಕ್ರೋಢೀಕರಣಕ್ಕೆ ಬಿಜೆಪಿಗೆ ಸಹಾಯ ಮಾಡಿದೆ. ಹೀಗಾಗಿ ಮತ್ತೆ ತಮ್ಮ ವಿವಾದಾತ್ಮಕ ಮಾತುಗಳ ಮೊರೆ ಹೋಗಿರುವ ಅನಂತ್‌ಕುಮಾರ್, ಆ ಮೂಲಕ ಜನಬೆಂಬಲವಿದೆ ಎಂಬುದನ್ನು ವರಿಷ್ಠರಿಗೆ ತೋರಿಸಿಕೊಟ್ಟು ಮತ್ತೆ ಉತ್ತರ ಕನ್ನಡ ಕ್ಷೇತ್ರದಿಂದ ಬಿಜೆಪಿ ಟಿಕೆಟ್‌ಗೆ ಪ್ರಯತ್ನಿಸುತ್ತಿದ್ದಾರೆ.

ಅನಂತ್‌ಕುಮಾರ್ ಹೆಗಡೆ ಅವರು ಇತ್ತೀಚೆಗೆ ರಾಮಮಂದಿರ, ಭಟ್ಕಳದ ಚಿನ್ನದ ಪಳ್ಳಿ, ಶಿರಸಿಯ ಸಿಸಿ ಬಜಾರ್‌ನಲ್ಲಿರುವ ಮಸೀದಿ ಕುರಿತಂತೆ ನೀಡಿರುವ ಹೇಳಿಕೆ ವಿವಾದವಾದರೂ ಅದರಿಂದ ಕಾಂಗ್ರೆಸ್‌ಗೆ ಲಾಭ ಎಂಬುದನ್ನು ಗಮನಿಸಿದ ಕಾಂಗ್ರೆಸ್, ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಏಕವಚನ ಬಳಸಿದ್ದನ್ನೇ
ಮುಖ್ಯವಾಗಿಸಿಕೊಂಡು ಲಾಭ ಪಡೆಯಲು ಯತ್ನಿಸುತ್ತಿದೆ. ಇದು ಸಮಸ್ಯೆಯಾಗಬಹುದು ಎಂಬ ಕಾರಣಕ್ಕೆ ಬಿಜೆಪಿ ಆ ಹೇಳಿಕೆಯಿಂದ ದೂರ ಉಳಿದು ತನಗೆ ಸಂಬಂಧವೇ ಇಲ್ಲ ಎಂಬಂತೆ ಹೇಳಿಕೆ ನೀಡುತ್ತಿದೆಯಾದರೂ ನಂತ್‌ಕುಮಾರ್ ಹೆಗಡೆ ತಮ್ಮ ವಿವಾದಿತ ಹೇಳಿಕೆಗಳನ್ನು ಮುಂದುವರಿಸುತ್ತಲೇ ಇದ್ದಾರೆ. ಆ ಮೂಲಕ ಮತ್ತೆ ಉತ್ತರ ಕನ್ನಡದಲ್ಲಿ ತಾನು ಅನಿವಾರ್ಯ ಎಂಬುದನ್ನು ಪರೋಕ್ಷವಾಗಿ ಹೇಳುತ್ತಿದ್ದಾರೆ. ಇದರಿಂದಾಗಿ ಅವರ ಸ್ಥಾನಕ್ಕೆ ತಾನು ಎಂದು ಟವಲ್ ಹಾಕಿ ಕುಳಿತವರು ಇದರಿಂದ ಆತಂಕ ಗೊಂಡಿದ್ದಾರೆ.

ಇನ್ನು ಮಾಜಿ ಮುಖ್ಯಮಂತ್ರಿ, ಬೆಂಗಳೂರು ಉತ್ತರ ಕ್ಷೇತ್ರದ ಸಂಸದ ಡಿ.ವಿ.ಸದಾನಂದಗೌಡ ಕೂಡ ಇದಕ್ಕೆ ಹೊರತಾಗಿಲ್ಲ. ತಮಗೆ ಟಿಕೆಟ್ ಸಿಗುವುದಿಲ್ಲ ಎಂಬ ಸೂಚನೆ ಸಿಗುತ್ತಿದ್ದಂತೆ ಚುನಾವಣಾ ರಾಜಕೀಯದಿಂದ ನಿವೃತ್ತ ಘೋಷಿಸಿದ್ದ ಅವರು ಇದೀಗ ಒಂದು ಕೈ ನೋಡಿಯೇ ಬಿಡೋಣ ಎನ್ನುತ್ತಿದ್ದಾರೆ. ಮುಂಬರುವ ಲೋಕಸಭೆ ಚುನಾವಣೆಗೆ ತುಮಕೂರು ಸಂಸದ ಜಿ.ಎಸ್.ಬಸವರಾಜು, ದಾವಣಗೆರೆ ಸಂಸದ ಜಿ. ಸಿದ್ದೇಶ್ವರ, ಹಾವೇರಿ-ಗದಗ ಸಂಸದ ಶಿವಕುಮಾರ್ ಉದಾಸಿ, ಬಳ್ಳಾರಿಯ ಸಂಸದ ವೈ. ದೇವೇಂದ್ರಪ್ಪ, ಕೊಪ್ಪಳ ಸಂಸದ ಸಂಗಣ್ಣ ಕರಡಿ, ರಾಯಚೂರು ಸಂಸದ ರಾಜಾ ಅಮರೇಶ್ವರ್ ನಾಯಕ್, ವಿಜಯಪುರ ಸಂಸದ ರಮೇಶ್ ಜಿಗಜಿಣಗಿ, ಬಾಗಲಕೋಟೆ ಸಂಸದ ಪಿ.ಸಿ.ಗದ್ದಿಗೌಡರ್, ಬೆಳಗಾವಿ ಸಂಸದೆ ಮಂಗಳಾ ಅಂಗಡಿ ಅವರಿಗೆ ಟಿಕೆಟ್ ಸಿಗುವುದು ಅನುಮಾನ ಎನ್ನಲಾ
ಗುತ್ತಿದೆಯಾದರೂ ಈ ಪೈಕಿ ಜಿ.ಎಸ್.ಬಸವರಾಜು, ಶಿವಕುಮಾರ್ ಉದಾಸಿ, ವೈ.ದೇವೇಂದ್ರಪ್ಪ ಹೊರತುಪಡಿಸಿ ಉಳಿದವರೆಲ್ಲರೂ ಮತ್ತೊಮ್ಮೆ ನೋಡೋಣ ಎಂದು ಪ್ರಯತ್ನಿಸುತ್ತಲೇ ಇದ್ದಾರೆ.

ಈ ಪೈಕಿ ಕೆಲವರಿಗೆ ಟಿಕೆಟ್ ನೀಡಲು ಸ್ವಪಕ್ಷದಲ್ಲೇ ಆಕ್ಷೇಪವಿದೆ. ಇವರ ಜತೆಗೆ ಕೇಂದ್ರ ಸಚಿವ, ಬೀದರ್ ಸಂಸದ ಭಗಂವತ ಖೂಬಾ, ಕೋಲಾರ ಸಂಸದ
ಮುನಿಸ್ವಾಮಿ ಸೇರಿದಂತೆ ಕೆಲವರಿಗೆ ಟಿಕೆಟ್ ನೀಡಲು ಆ ಕ್ಷೇತ್ರಗಳ ಹಲವರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಈ ಕ್ಷೇತ್ರಗಳಲ್ಲಿ ಯಾರೇ ನಿಂತರೂ ಗೆಲ್ಲುತ್ತಾರೆ
ಎಂಬ ವಾತಾವರಣ ಇರುವುದರಿಂದಲೇ ಹಾಲಿ ಸಂಸದರ ಸ್ಪರ್ಧೆ ಬೇಡ ಎಂದು ಉಳಿದವರು ಹೇಳುತ್ತಿರುವುದು. ಇದು ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಗೆ ಮುಂದಾಗಿರುವ ರಾಜ್ಯ ಬಿಜೆಪಿ ನಾಯಕರ ತಲೆಕೆಡಿಸಿದೆ. ತಾವು ಯಾರ ಹೆಸರನ್ನು ಅಂತಿಮಗೊಳಿಸುತ್ತೇವೆಯೋ ಅವರ ಬಗ್ಗೆ ಸ್ಥಳೀಯರ ವಿರೋಧವಿದ್ದರೆ, ಅವರು ತಮ್ಮ ವಿರುದ್ಧ ಮುಗಿಬೀಳುವ ಆತಂಕ ಕಾಣಿಸಿಕೊಂಡಿದೆ.

ಹೀಗಾಗಿಯೇ ಅಭ್ಯರ್ಥಿಗಳ ಆಯ್ಕೆ ತೀರ್ಮಾನವನ್ನು ವರಿಷ್ಠರಿಗೆ ಬಿಟ್ಟಿದೆ. ಆದರೆ, ವಿಧಾನಭೆಯಲ್ಲಿ ಆದ ಗೊಂದಲ ಮರುಕಳಿಸದಂತೆ ನೋಡಿಕೊಳ್ಳಲು
ಶೀಘ್ರವೇ ಅಭ್ಯರ್ಥಿಗಳನ್ನು ಅಂತಿಮಗೊಳಿಸಲು ವರಿಷ್ಠರನ್ನು ಮನವಿ ಮಾಡಿಕೊಂಡಿದೆ. ಈ ರೀತಿ ಉತ್ಸಾಹದಲ್ಲಿ ಬೀಗುತ್ತಿರುವ ಬಿಜೆಪಿಗೆ ಮತ್ತೆ ಹೊಸ ಸಮಸ್ಯೆ ಎದುರಾಗಿದೆ. ವಿಧಾನಸಭೆ ಚುನಾವಣೆಯಲ್ಲಿ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಮತ್ತು ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿಗೆ ಟಿಕೆಟ್ ನಿರಾಕರಿಸಿ
ಅವರು ಕಾಂಗ್ರೆಸ್ ಸೇರುವಂತೆ ಮಾಡಲಾಗಿತ್ತು. ಇದು ಫಲಿತಾಂಶದ ಮೇಲೆ ಪರಿಣಾಮ ಬೀರಿ ಲಿಂಗಾಯತ ಮತದಾರರು ಇರುವ ಹಲವು ಕ್ಷೇತ್ರಗಳನ್ನು ಕಳೆದುಕೊಳ್ಳಬೇಕಾಯಿತು. ಈ ವೇಳೆ ಕಾಣಿಸಿಕೊಂಡಿದ್ದ ಲಿಂಗಾಯತ ವಿರೋಧಿ ಎಂಬ ಹಣೆಪಟ್ಟಿಯಿಂದ ಹೊರಬಂದು ಲೋಕಸಭೆ ಚುನಾವಣೆಗೆ ಸಿದ್ಧತೆ ತೀವ್ರಗೊಳಿಸುತ್ತಿದ್ದಂತೆ ಆಡಳಿತಾರೂಢ ಕಾಂಗ್ರೆಸ್ ಒಂದಲ್ಲಾ ಒಂದು ಪೆಟ್ಟು ಕೊಡುತ್ತಲೇ ಇದೆ.

ಜಾತಿ ಸಮೀಕ್ಷೆ ವಿಚಾರ ವೀರಶೈವ ಲಿಂಗಾಯತರ ವಿರೋಧಕ್ಕೆ ಕಾರಣವಾದರೂ ಸಾಮಾಜಿಕ ನ್ಯಾಯದ ಹರಿಕಾರ ಬಸವಣ್ಣ ಅವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ಘೋಷಿಸುವ ನಿರ್ಣಯ ಕೈಗೊಂಡು ಆ ಸಮುದಾಯವನ್ನು ಸಮಾಧಾನಪಡಿಸುತ್ತಿದೆ. ಅಲ್ಲದೆ, ಬಸವ ತತ್ವಗಳನ್ನು ಮನೆ ಮನೆಗೆ ತಲುಪಿಸುವ ಕಾರ್ಯಕ್ರಮಗಳನ್ನು ರೂಪಿಸಲು ಮುಂದಾಗಿದೆ. ಜತೆಗೆ ಶಿವಮೊಗ್ಗ ದಲ್ಲಿರುವ ಜೈಲಿನ ೪೬ ಎಕರೆ ಪ್ರದೇಶದಲ್ಲಿನ ಉದ್ಯಾನವನಕ್ಕೆ ಅಲ್ಲಮಪ್ರಭು ಉದ್ಯಾನವನ ಎಂದು ನಾಮಕರಣ ಮಾಡಲು ತೀರ್ಮಾನಿಸಿರುವ ಕಾಂಗ್ರೆಸ್ ಸರಕಾರ, ಶಿಕಾರಿಪುರದವರಾಗಿರುವ ಅಲ್ಲಮಪ್ರಭು ಹಾಗೂ ಅಕ್ಕಮಹಾದೇವಿ ಅವರ ಹೆಸರು ಚಿರಸ್ಥಾಯಿಯಾಗಿಸಲು ಹಲವು ಕಾರ್ಯ ಕ್ರಮಗಳನ್ನು ರೂಪಿಸುವುದಾಗಿ ಹೇಳಿಕೊಂಡಿದೆ.

ಇದು ಲಿಂಗಾಯತ ಮತಬ್ಯಾಂಕ್ ಗಟ್ಟಿಗೊಳಿಸಲು ಪ್ರಯತ್ನಿಸುತ್ತಿರುವ ಬಿಜೆಪಿಗೆ ಹೊಸ ಸವಾಲು ತಂದೊಡ್ಡಿದೆ. ಏಕೆಂದರೆ ಮತದಾರರ ನೆನಪಿನ ಶಕ್ತಿ ಕಡಿಮೆ ಎಂಬುದು ಕಳೆದ ವಿಧಾನಸಭೆ ಚುನಾವಣೆ ಯಲ್ಲಿ ಸಾಬೀತಾಗಿದೆ. ೨೦೧೩-೧೮ರ ಅವಧಿಯಲ್ಲಿ ಇದೇ ಸಿದ್ದರಾಮಯ್ಯ ನೇತೃತ್ವದ ಸರಕಾರ ಲಿಂಗಾಯತ ಪ್ರತ್ಯೇಕ ಧರ್ಮ ಸ್ಥಾಪಿಸಲು ಮುಂದಾಗಿ ೨೦೧೮ರ ವಿಧಾನಸಭೆ ಚುನಾವಣೆಯಲ್ಲಿ ಕೈಸುಟ್ಟು ಕೊಂಡಿತ್ತು. ಕಾಂಗ್ರೆಸ್ ಜತೆಗಿದ್ದ ಸಾಕಷ್ಟು ಲಿಂಗಾಯತರು ಪಕ್ಷದಿಂದ ದೂರವಾಗಿ ಬಿಜೆಪಿಯನ್ನು ಬೆಂಬಲಿಸಿದ್ದರು. ಆದರೆ, ೨೦೨೩ರ ಚುನಾವಣೆಯಲ್ಲಿ ಜಗದೀಶ್ ಶೆಟ್ಟರ್ ಮತ್ತು ಲಕ್ಷ್ಮಣ ಸವದಿಗೆ ಟಿಕೆಟ್ ನೀಡಿಲ್ಲ ಎಂಬ ಒಂದೇ ಕಾರಣ ಮಂದಿಟ್ಟುಕೊಂಡು ಲಿಂಗಾಯತರು ಬಿಜೆಪಿಯನ್ನು ದೂರವಿಟ್ಟು ಕಾಂಗ್ರೆಸ್ ಬೆಂಬಲಿಸಿದ್ದರು.

ಇದೀಗ ಬಸವಾದಿ ಶರಣರಿಗೆ ಕಾಂಗ್ರೆಸ್ ಮನ್ನಣೆ ನೀಡುತ್ತದೆ ಎಂದಾದರೆ ಬೆಂಬಲ ಮುಂದುವರಿಸುವರೇ ಎಂಬ ಆತಂಕ ಬಿಜೆಪಿ ನಾಯಕರಲ್ಲಿ ಕಾಣಿಸಿಕೊಂಡಿದೆ. ಕಾಂಗ್ರೆಸ್‌ಗೆ ತಿರುಗೇಟು ನೀಡಲು ಹೊಸ ತಂತ್ರಗಾರಿಕೆ ರೂಪಿಸಲು ಯೋಚಿಸುವಂತಾಗಿದೆ.

ಲಾಸ್ಟ್ ಸಿಪ್: ದಾರಿ ಸುಗಮವಾಗಿರುವಾಗ ಕೆಲವೊಮ್ಮೆ ಬರುವ ಸಣ್ಣ ಅಡೆತಡೆಗಳೂ ದೊಡ್ಡ ಸವಾಲಿನಂತೆ ಕಾಡುತ್ತದೆ.