Saturday, 23rd November 2024

ಇದು ಪಾಮ್ ಎಣ್ಣೆ ಅಲ್ಲ, ಪಾಮರ ಎಣ್ಣೆ !

ಶಿಶಿರ ಕಾಲ

shishirh@gmail.com

ಜಗತ್ತಿನ ಪಾಮ್ ಎಣ್ಣೆಯ ಅತಿ ದೊಡ್ಡ ಮಾರುಕಟ್ಟೆಗಳಲ್ಲಿ ಸಹಜವಾಗಿ ಭಾರತ ಕೂಡ ಒಂದು. ಭಾರತದಲ್ಲಿ ಅಡುಗೆ ಎಣ್ಣೆಯ ಬಳಕೆ ಕಳೆದ ದಶಕದಲ್ಲಿ ಸುಮಾರು ಶೇ.೨೦೦ರಷ್ಟು ಹೆಚ್ಚಿದೆ. ನಾವು ಇಂಡೋನೇಷ್ಯಾ ಮೊದಲಾದ ದೇಶಗಳಿಂದ ಪಾಮ್ ಎಣ್ಣೆಯನ್ನು ಆಮದುಮಾಡಿಕೊಳ್ಳುತ್ತೇವೆ. ಹೀಗಾಗಿ ಪರೋಕ್ಷವಾಗಿ ನಾವು ಕೂಡ ಈ ಎಣ್ಣೆಯ ಹಿಂದೆ ನಡೆವ ಮಾನವನ ದುರಾಚಾರಕ್ಕೆ ಕಾರಣರೇ.

ಶಿಕಾಗೋ ನಗರದ ಬೀದಿಗಳು ಸಂಜೆಯಾಗುತ್ತಿದ್ದಂತೆ ಹೊಸ ಜೀವಕಳೆ ಪಡೆಯುತ್ತವೆ. ಹಗಲಿನ ನೀರಸ ಪ್ರೊಫೆಷನಲ್ ವಾತಾವರಣದಿಂದ ಸೊರಗಿದ
ರಸ್ತೆಗಳನ್ನು ನಗು, ಕೇಕೆ, ಹರ್ಷೋದ್ಗಾರಗಳು ತುಂಬಿಕೊಳ್ಳುತ್ತವೆ. ರಸ್ತೆ ಬದಿಗಳಲ್ಲಿ ಹಾಡುವವರು, ನಾನಾ ರೀತಿಯ ಮ್ಯೂಸಿಕ್ ಬಾರಿಸುವವರು, ಸರ್ಕಸ್ ಮಾಡಿ ತೋರಿಸುವವರು, ದೊಂಬರಾಟದವರು ಹೀಗೆ. ಇದೆಲ್ಲವನ್ನು ನಿಂತು ಬೆರಗಿನಿಂದ ನೋಡುವ ಪ್ರವಾಸಿಗರು. ಅವರುಗಳ ನಡುವೆ ಬೇಗನೆ ಮನೆಗೆ ತಲುಪಬೇಕೆಂಬ ಗಡಿಬಿಡಿಯ ಜನರು. ಜನರ ಓಡಾಟದ ಧಾವಂತಗಳೇ ನಗರಗಳಿಗೆ ಜೀವ ತುಂಬುವುದು.

ಪ್ರತಿಯೊಂದು ನಗರದ ಜೀವಕಳೆಯೂ ಬೇರೆ ಬೇರೆ. ಅವೆಲ್ಲದಕ್ಕೂ ಅದರದೇ ಆದ ಸೊಬಗಿದೆ. ಇವೆಲ್ಲದರಲ್ಲಿ ನನಗಿಷ್ಟವಾಗುವುದು ಇಲ್ಲಿನ ಬೀದಿ ನಾಟಕಗಳು. ಇಲ್ಲಿ ಅವರ ಹತ್ತೆಂಟು ತಂಡಗಳಿವೆ. ಸಾಮಾನ್ಯವಾಗಿ ಸಾಮಾಜಿಕ ಕಳಕಳಿಯ ಬೀದಿ ನಾಟಕಗಳು. ಈ ತಂಡಗಳಿಗೆ ಅದೇ ಹೊಟ್ಟೆ ಪಾಡು. ಹಲವಾರು ಸಂಘ-ಸಂಸ್ಥೆಗಳು ಸ್ವಲ್ಪ ಪ್ರಮಾಣದ ಹಣವನ್ನು ಕೊಟ್ಟು ಈ ವಿಷಯದ ಮೇಲೆ ಬೀದಿ ನಾಟಕವಾಡಬೇಕು, ಜಾಗೃತಿ ಬೆಳೆಸಬೇಕು ಎಂದರಾಯಿತು. ಇವರು ಅದಕ್ಕೊಂದು
ನಾಟಕ ರೂಪಿಸಿ, ನಿರ್ದೇಶಿಸಿ, ಪ್ರದರ್ಶಿಸುತ್ತಾರೆ. ಅಲ್ಲಿ ಅವರಿಗೆ ಜನರಿಂದ ಭಕ್ಷೀಸ್ ಕೂಡ ಸಿಗುತ್ತದೆ. ಐದೇ ನಿಮಿಷದಲ್ಲಿ ಜೀವಮಾನ ಪೂರ್ತಿ ನೆನಪಿರುವಂತೆ ಬೀದಿ ನಾಟಕವಾಡುವ ಇವರ ಕಲೆ ವಿಶೇಷ.

ಅದೊಂದು ದಿನ ಇಂಥ ಒಂದು ಬೀದಿನಾಟಕ. ಪಕ್ಕದಲ್ಲೊಂದು ಬೋರ್ಡ್ ಹೀಗಿತ್ತು: “You cannot avoid death, tax and palm oil. The best you can do to yourself and earth is to avoid the last one, as much as possible”. ಅಂದರೆ- ‘ಸಾವು, ತೆರಿಗೆ ಮತ್ತು ಪಾಮ್ ಎಣ್ಣೆ ಇವು ಮೂರರಿಂದ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ. ಈ ಭೂಮಿಗೆ ಮತ್ತು ನಿಮಗೆ ಒಳ್ಳೆ ಯದು ಮಾಡಬೇಕೆಂದಿದ್ದರೆ ಕೊನೆಯದನ್ನು ಬಳಸುವುದನ್ನು ಆದಷ್ಟು ಕಡಿಮೆ ಮಾಡಿ’ ಎಂದರ್ಥ. ನಾಟಕ ಮುಗಿದ ಮೇಲೆ ಅವರಲ್ಲೊಬ್ಬನನ್ನು ಕರೆದು ಏನಿದರರ್ಥ ಮತ್ತು ಅದನ್ನು ಪ್ರಸ್ತಾಪಿಸಿದ್ದೇಕೆ ಎಂದು ಕೇಳಿದೆ.

ಚುಟುಕಾಗಿ ಒಂದಿಷ್ಟು ವಿವರ ಕೊಟ್ಟು ನಾವು ನಿತ್ಯ ಬಳಸುವ ಪಾಮ್ ಎಣ್ಣೆ ಆರೋಗ್ಯ ಮತ್ತು ಪರಿಸರಕ್ಕೆ ಹೇಗೆ ಮಾರಕ ಎಂಬುದನ್ನು ಮತ್ತು ಪಾಮ್ ಬೆಳೆಯ
ಹಿಂದಿನ ಕರಾಳತೆಯನ್ನು ಚಿಕ್ಕದಾಗಿ ವಿವರಿಸಿ ಇನ್ನಷ್ಟನ್ನು ಓದಿ ತಿಳಿದುಕೊಳ್ಳಲು ಅಲ್ಲಿರುವ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿಕೊಳ್ಳಲು ಹೇಳಿದ. ಇಂದಿನ ಅರೋಗ್ಯ ಸಮಸ್ಯೆಗೆ ನಾವು ಬಳಸುವ ಪಾಮ್ ಎಣ್ಣೆಯೇ ಕಾರಣವೋ ಅಥವಾ ನಮ್ಮ ದೈನಂದಿನ ಜೀವನದಲ್ಲಿ ಬದಲಾದ ದಿನಚರಿ, ಕಡಿಮೆಯಾದ ದೈಹಿಕ ಶ್ರಮ, ಅತಿಯಾದ ಕರಿದ ಆಹಾರ ಸೇವನೆ, ಸುಲಭದಲ್ಲಿ ಅಗ್ಗದಲ್ಲಿ ಯಥೇಚ್ಛ ಆಹಾರದ ಲಭ್ಯತೆ, ಬದಲಾದ ವಾತಾವರಣ ಇವೇ ಮೊದಲಾದ ಹಲವು ಕಾರಣಗಳೋ, ಆ ಚರ್ಚೆ ಬೇರೆ.

ಈ ನೂರಾರು ಆರೋಗ್ಯದ ಸಮಸ್ಯೆ ಈಗ ಕಳೆದ ೫-೬ ದಶಕದಲ್ಲಿ ಹೆಚ್ಚಿದೆಯೋ ಅಥವಾ ಮೊದಲು ಕೂಡ ಇವೆಲ್ಲ ಇಷ್ಟೇ ವ್ಯಾಪಕವಾಗಿ ಇದ್ದು ಈಗಿನ ಮುಂದು ವರಿದ ವಿಜ್ಞಾನದಿಂದ ಇವೆಲ್ಲ ಬೆಳಕಿಗೆ ಬರುತ್ತಿವೆಯೋ ತಿಳಿಯದು. ಆದರೆ ಆತ ಹೇಳಿದ್ದರ ಪೈಕಿ ಒಂದಂತೂ ನಿಜ- ಪಾಮ್ ಎಣ್ಣೆಯ ವ್ಯಾಪಕತೆಯನ್ನು ತಿಳಿಯುತ್ತ ಹೋರಟರೆ ಹೊಸದೊಂದು ಜಗತ್ತು ನಮ್ಮೆದುರು ತೆರೆದುಕೊಳ್ಳುತ್ತದೆ. ನಾವು ಸಾವನ್ನು ತಪ್ಪಿಸಿಕೊಳ್ಳಲು ಹೇಗೆ ಸಾಧ್ಯವಿಲ್ಲವೋ ಹಾಗೆಯೇ ಪಾಮ್ ಎಣ್ಣೆ ಬಳಕೆ ಯನ್ನು/ಸೇವನೆಯನ್ನು ತಪ್ಪಿಸಿಕೊಳ್ಳಲು ಕೂಡ ಇಂದಿನ ದಿನದಲ್ಲಿ ಅಸಾಧ್ಯ. ಇಂದು ಪಾಮ್ ಎಣ್ಣೆಯನ್ನು ಬಳಸದ ಮನುಷ್ಯನೇ ಜಗತ್ತಿನಲ್ಲಿ ಇಲ್ಲ; ಇಂದು ಈ ಎಣ್ಣೆಯು ನಾವು ಬಳಸುವ ಬಹುತೇಕ ವಸ್ತುಗಳಲ್ಲಿ ಇರುತ್ತದೆ.

ಚಾಕೊಲೆಟ್, ಬಿಸ್ಕೆಟ್, ಬ್ರೆಡ್, ಕೇಕ್, ಸೋಪ್, ಲಿಪ್ ಸ್ಟಿಕ್, ಐಸ್‌ಕ್ರೀಮ್, ಕರಿದ ಆಹಾರ ಪದಾರ್ಥ, ಪಿಜ್ಜಾ, ಬರ್ಗರ್, ನ್ಯೂಡಲ್ಸ್, ಶಾಂಪೂ, ಡಿಟಜೆಂಟ್, ಹೋಟೆಲ್ ತಿಂಡಿಗಳು, ಟೊಮೆಟೋ ಕೆಚಪ್, ಚಿಪ್ಸು-ಬಾಳಕ ಹೀಗೆ ಪ್ರತಿಯೊಬ್ಬರು ದಿನಂಪ್ರತಿ ಬಳಸುವ ಸುಮಾರು ಎರಡು ಸಾವಿರ ವಸ್ತುಗಳಲ್ಲಿ ಪಾಮ್ ಎಣ್ಣೆಯಿರುತ್ತದೆ! ಇದಕ್ಕೆ ಎರಡು ಕಾರಣ. ಮೊದಲನೆಯದು ಅಗ್ಗದ ಬೆಲೆ. ಎರಡನೆಯದು ಈ ಎಣ್ಣೆಯ ಗುಣವೈಶಿಷ್ಟ್ಯ. ಪೇಟೆಯ ಪಾರ್ಕುಗಳಲ್ಲಿ ಕಾಣುವ ಪಾಮ್
ಟ್ರೀ ಇದೆಯಲ್ಲ, ಅದೇ ಜಾತಿಯ ಮರದ ಹಣ್ಣಿನಿಂದ ತಯಾರಾಗುವುದು ಈ ಪಾಮ್ ಎಣ್ಣೆ.

ಇದರ ಇತಿಹಾಸ ಸುಮಾರು ಐದು ಸಾವಿರ ವರ್ಷದಷ್ಟು ಹಳೆಯದು. ಮೂಲತಃ ಆ ಕಾಲದಲ್ಲಿ ಪಶ್ಚಿಮ ಆಫ್ರಿಕಾದಲ್ಲಿ ಇದರ ಬಳಕೆ ಹೆಚ್ಚಾಗಿತ್ತು ಎಂಬ ಉಲ್ಲೇಖವಿದೆ. ಈಜಿಪ್ಟ್‌ನ ಮಮ್ಮಿಗಳಲ್ಲಿ ಕೂಡ ಈ ಪಾಮ್ ಎಣ್ಣೆಯನ್ನು ಬಳಸಿದ್ದನ್ನು ಗಮನಿಸಲಾಗಿದೆ. ಯುರೋಪ್‌ನಲ್ಲಿ ಹದಿನೈದನೇ ಶತಮಾನದಲ್ಲಿ ಕುರುಕಲು ತಿಂಡಿ ಮಾಡಲು ಮತ್ತು ಆಹಾರವಾಗಿ ಪಾಮ್ ಎಣ್ಣೆಯನ್ನು ಬಳಸುತ್ತಿದ್ದುದರ ಬಗ್ಗೆ ಹೇಳಲಾಗಿದೆ. ಹದಿನೆಂಟನೇ ಶತಮಾನದಲ್ಲಿ ಬ್ರಿಟಿಷರು ಇದನ್ನು ಹೆಚ್ಚಿನ ಕಡೆ ಒಯ್ದು ಜಗತ್ತಿನ ಹೆಚ್ಚಿನ ದೇಶಗಳಿಗೆ ಹರಡಿದರು ಎನ್ನಲಾಗುತ್ತದೆ. ಹೀಗೆ ಜಗತ್ತಿನಲ್ಲೆಲ್ಲ ಈ ಎಣ್ಣೆಯನ್ನು ಬಳಸುವಂತೆ ಮಾಡಿದ ಬ್ರಿಟಿಷರು ಕ್ರಮೇಣ ಈ ಎಣ್ಣೆಯ ಪ್ಲಾಂಟೇಷನ್ (ತೋಟ) ಗಳನ್ನು ಮಾಡಿ ಅಗ್ಗದ ದರದಲ್ಲಿ ಅವರಿಗೆ ಲಭ್ಯವಿದ್ದ ಜೀತದಾಳುಗಳನ್ನು ಬಳಸಿಕೊಂಡು ತಯಾರಿಸಿ ತಮ್ಮ ವಸಾಹತುಗಳಲ್ಲಿ ಮಾರಾಟ ಮಾಡಲು ಶುರುವಿಟ್ಟುಕೊಂಡದ್ದು.

ಪಾಮ್ ಎಣ್ಣೆ ಹೆಚ್ಚಿನ ಉದ್ಯಮಗಳಿಗೆ ಹೇಳಿ ಮಾಡಿಸಿದ್ದು. ತೀರಾ ಅಗ್ಗ. ಅದಕ್ಕೆ ಕಾರಣ ಇದನ್ನು ಬೆಳೆಯಲು ಒಣಭೂಮಿ ಸಾಕು. ಪಾಮ್ ಮರ ಮತ್ತು ಕಾಯಿಗಳಿಗೆ ರೋಗದ ಕಾಟ ಕಡಿಮೆ. ರಾಸಾಯನಿಕ ಕೀಟನಾಶಕಗಳನ್ನು ಸುಲಭದಲ್ಲಿ ಹೀರಿಕೊಳ್ಳಬಲ್ಲದು; ಹೆಚ್ಚಿನ ಬೆಳೆಗಳಲ್ಲಿ ಇದು ಮುಖ್ಯವಾಗುತ್ತದೆ. ಒಂದು ಎಕರೆಗೆ ಬೇರೆ ಯಾವ ಎಣ್ಣೆಯನ್ನು ಕೊಡುವ ಬೆಳೆ ಕೂಡ ಪಾಮ್ ಎಣ್ಣೆಯಷ್ಟು ಫಸಲು ಕೊಡಲಾರದು. ರೈತನಿಗೆ ಒಂದು ಟನ್ ಎಣ್ಣೆ ತೆಗೆಯಲು ಸೂರ್ಯಕಾಂತಿ ಅಥವಾ
ಇನ್ಯಾವುದೇ ಬೆಳೆಯಾದರೆ ದುಪ್ಪಟ್ಟು ಕೃಷಿಭೂಮಿ ಬೇಕಾಗುತ್ತದೆ. ಹೀಗೆ ಅಗ್ಗದಲ್ಲಿ ಸಿಗುವ ಅಡುಗೆ ಎಣ್ಣೆಯನ್ನು ಮೊದಲು ಉಳಿದ ಎಣ್ಣೆಯ ಬೆಲೆಗಿಂತ ಕಡಿಮೆ ದರದಲ್ಲಿ ಮಾರಿದರೂ ನಾಲ್ಕಾರು ಪಟ್ಟು ಜಾಸ್ತಿ ಲಾಭ.

ಇದೆಲ್ಲದರ ಜತೆ ಆ ಎಣ್ಣೆಯು ಆರೋಗ್ಯದ ಮೇಲೆ ಬೀರುವ ಧನಾತ್ಮಕ ಗುಣವನ್ನಷ್ಟೇ ಹೇಳಿ ಪ್ರಚಾರ ಮಾಡಿದರೆ ಮಾರಾಟ ಅತಿ ಸುಲಭ. ಅದರಲ್ಲಿಯೂ
ಪಾಶ್ಚಾತ್ಯರು ಮಾಧ್ಯಮಗಳಲ್ಲಿ ಬಂದು ನಮ್ಮ ಲೋಕಲ್ ಭಾಷೆಯಲ್ಲಿ ಹೇಳಿಬಿಟ್ಟರೆ ಮುಗಿದೇಹೋಯಿತು- ನಾವೆಲ್ಲ ಈ ಎಣ್ಣೆಯನ್ನು ಜೀವರಕ್ಷಕ ಎಂದು ಒಪ್ಪಿಕೊಳ್ಳಲು. ಕಡಿಮೆ ಬೆಲೆಗೆ ಉತ್ತಮ ಅರೋಗ್ಯ ಯಾರಿಗೆ ಬೇಡ? ಅದರಲ್ಲಿಯೂ ಪಾಮ್ ಎಣ್ಣೆ ಅಡುಗೆಗೆ ಹೇಳಿ ಮಾಡಿಸಿದ್ದು. ಹೆಚ್ಚಿಗೆ ಕಾಸಿದಾಗ ಕೂಡ ಎಣ್ಣೆ ಕಾದು ಸುಟ್ಟು ಹೋಗುವುದಿಲ್ಲ. ಈ ಎಣ್ಣೆಗೆ ಅದರದೇ ಆದ ಪರಿಮಳ/ವಾಸನೆಯಿಲ- ಹೀಗಾಗಿ ರುಚಿಗೆ ಹಿತ.

ಇದೆಲ್ಲದಕ್ಕಿಂತ ಹೆಚ್ಚಾಗಿ ಇದನ್ನು ಬಹಳ ಕಾಲ ಕೆಡದಂತೆ ಇಡಬಹುದು- ಹಾಗಾಗಿ ಅಂಗಡಿಕಾರರಿಗೆ ಮತ್ತು ದಾಸ್ತಾನು ಮಾಡುವವರಿಗೆ ಅಚ್ಚು ಮೆಚ್ಚು. ಇದೆ ಕಾರಣಗಳಿಂದ ಮತ್ತು ವ್ಯಾಪಾರಿ ಹಿತಾಸಕ್ತಿಯಿಂದ ಈ ಎಣ್ಣೆ ಕಳೆದ ಕೆಲ ದಶಕಗಳಲ್ಲಿ ಎಲ್ಲಿಲ್ಲದ ಜನಪಿಯತೆ ಪಡೆದುಕೊಂಡಿತು. ಅದೇ ಸಂದರ್ಭದಲ್ಲಿ ಪಾಮ್ ಎಣ್ಣೆಯನ್ನು ಅಲ್ಲಿಯವರೆಗೆ ಸಾಂಪ್ರದಾಯಿಕ ವಾಗಿ ಬಳಸುತ್ತಿದ್ದ ಅಡುಗೆ ಎಣ್ಣೆಯ ಬದಲಿಗೆ ಬಳಸುವುದರಿಂದ ಆಗಬಹುದಾದ ಅಡ್ಡ ಪರಿಣಾಮಗಳ ಬಗ್ಗೆ ವೈಜ್ಞಾನಿಕ
ಪ್ರಯೋಗಗಳು ನಡೆದರೂ ದೊಡ್ಡ ದೊಡ್ಡ ಕಂಪನಿಗಳ ಲಾಬಿಯಿಂದ ಅದನ್ನು ಅಲ್ಲಿಯೇ ಸುಮ್ಮನಾಗಿಸಲಾಯಿತು ಅಥವಾ ಅದರ ಲಾಭಗಳನ್ನಷ್ಟೇ ಹೆಕ್ಕಿ ಮಾಧ್ಯಮಗಳಲ್ಲಿ ತೋರಿಸಿ ಉಳಿದದ್ದೆಲ್ಲ ಸುಳ್ಳು ಎಂಬ ಭಾವನೆಯನ್ನು ಮೂಡುವಂತೆ ಮಾಡುವಲ್ಲಿ ಈ ದೈತ್ಯ ಕಂಪನಿಗಳು ಯಶಸ್ವಿಯಾದವು.

ಯುರೋಪ್ ಒಕ್ಕೂಟ ಪಾಮ್ ಎಣ್ಣೆಯನ್ನು ವಾಹನಕ್ಕೆ ಇಂಧನವಾಗಿ ಕೂಡ ಬಳಸತೊಡಗಿತು. ಇದೆಲ್ಲದರ ಪರಿಣಾಮ ವಾಗಿ ಕಳೆದ ಏಳು ದಶಕದಲ್ಲಿ ಪಾಮ್ ಎಣ್ಣೆಯ ವ್ಯಾಪಕತೆ ಅಂದಾಜಿಸಲಾಗದಷ್ಟು ಹೆಚ್ಚಾಗಿಬಿಟ್ಟಿತು. ಪಾಮ್ ಎಣ್ಣೆಯಿಂದಾಗಿ ಕೆಲವು ದೇಶಗಳು ತಮ್ಮನ್ನು ತಾವು ಕಟ್ಟಿಕೊಳ್ಳಲು ಸಾಧ್ಯವಾಯಿತು. ಮಲೇಷ್ಯಾ ಪಾಮ್ ಎಣ್ಣೆ ಯನ್ನು ತನ್ನ ಮುಖ್ಯ ಕೃಷಿ ಉತ್ಪನ್ನವಾಗಿಸಿಕೊಂಡಿದೆ. ಇದು ಅಲ್ಲಿನ ಕೃಷಿಕರ ಮತ್ತು ಕ್ರಮೇಣ ದೇಶದ ಸ್ಥಿತಿ ಉತ್ತಮವಾಗುವಲ್ಲಿ ಸಹಕಾರಿಯಾಗಿದೆ. ಇಂದು ಪ್ರಪಂಚ ಇಷ್ಟು ವ್ಯಾಪಕವಾಗಿ ಬಳಸುವ ಈ ಎಣ್ಣೆಯ ಶೇ.೪೫ರಷ್ಟು ಪಾಮ್ ಎಣ್ಣೆಯನ್ನು ಮಲೇಷ್ಯಾ ದೇಶವೊಂದೇ ಉತ್ಪಾದಿಸುತ್ತದೆ.

ಪಾಮ್ ಎಣ್ಣೆಯನ್ನು ಮಲೇಷ್ಯಾಕ್ಕೆ ಮೊದಲು ಪರಿಚಯಿಸಿದ್ದು ಕೂಡ ಬ್ರಿಟಿಷರೇ. ೧೯ನೇ ಶತಮಾನದ ಆದಿಯಲ್ಲಿ ಮನುಷ್ಯ ಹಿಂದೆಲ್ಲದಕ್ಕಿಂತ ನಾಲ್ಕಾರು ಪಟ್ಟು ಹೆಚ್ಚಿಗೆ ಅಡುಗೆ ಎಣ್ಣೆಯನ್ನು ಬಳಸಲು ಶುರುಮಾಡಿದ್ದ. ಇದನ್ನು ಗ್ರಹಿಸಿದ ಆಂಗ್ಲರು ತಮ್ಮ ವಸಾಹತುಗಳಲ್ಲೆಲ್ಲ ಇದನ್ನು ಬೆಳೆದು ಮಾರಾಟ ಮಾಡಲು
ಮುಂದಾದರು. ಅದಕ್ಕೆ ಅವರು ತಮ್ಮ ಬಾಹುಳ್ಯವುಳ್ಳ ದೇಶ ಗಳಲ್ಲೆಲ್ಲ ತೋಟ ಮಾಡಲು ಶುರುವಿಟ್ಟುಕೊಂಡರು. ಹೀಗೆ ಮಲೇಷ್ಯಾಕ್ಕೆ ಪರಿಚಯಿಸಿದ ಕೇವಲ ೬೦ ವರ್ಷದಲ್ಲಿ ಅದು ಜಗತ್ತಿನ ಅತಿ ಹೆಚ್ಚು ಪಾಮ್ ಎಣ್ಣೆಯನ್ನು ತಯಾರಿಸುವ ದೇಶವಾಗಿ ಮೇಲಕ್ಕೆದ್ದಿತು. ಇದಕ್ಕೂ ಮೊದಲು ಮಲೇಷ್ಯಾದಲ್ಲಿ ರಬ್ಬರ್ ಮುಖ್ಯ ಬೆಳೆಯಾಗಿತ್ತು ಆದರೆ ದೇಶ ಒಂದೇ ಕೃಷಿ ಉತ್ಪನ್ನದ ಮೇಲೆ ಅವಲಂಬಿತವಾಗಬಾರದು ಎಂದು ಅಲ್ಲಿನ ಸರಕಾರ ಪಾಮ್ ತೋಟಗಳನ್ನು ಪ್ರೋತ್ಸಾಹಿಸ ತೊಡಗಿತು.

ಕ್ರಮೇಣ ದೊಡ್ಡ ದೊಡ್ಡ ಕಂಪನಿಗಳು ಮಲೇಷ್ಯಾಕ್ಕೆ ಲಗ್ಗೆ ಇಟ್ಟವು ಮತ್ತು ಪಾಮ್ ಎಣ್ಣೆಯ ಲಾಭದಾಯಕ ಉದ್ಯಮವೊಂದನ್ನು ಬೆಳೆಸಿ ನಿಲ್ಲಿಸಿದವು.
ಮಲೇಷ್ಯಾದಲ್ಲಿ ಮೊದಲೆಲ್ಲ ಚೆನ್ನಾಗಿಯೇ ಇತ್ತು, ಬಂಜರು ಭೂಮಿಗಳಲ್ಲಿ ಏನನ್ನೂ ಬೆಳೆಯಲಾರದವರಿಗೆ ಪಾಮ್ ಕೃಷಿ ಒಂದು ವರವೇ ಸರಿ. ಮೊದಲು ಎಂಟಾಣಿ ಹುಟ್ಟದ ನೆಲ ಕ್ರಮೇಣ ಚಿನ್ನ ಬೆಳೆಯುವ ಕೃಷಿ ಭೂಮಿಯಾಯಿತು. ಯಾವುದೇ ಹೇಳಿಕೊಳ್ಳುವ ರೋಗ ಬಾರದ ಬೆಳೆ ಇದು. ನೀರೂ ಹೆಚ್ಚೇನು ಬೇಡ- ಮಳೆ ಹೆಚ್ಚು ಕಡಿಮೆ ಆದರೂ ಪರವಾಗಿಲ್ಲ. ಕಾಯನ್ನು ಕೊಯ್ಯುವುದು, ಸಾಗಾಣಿಕೆ, ಅದರಿಂದ ಎಣ್ಣೆ ತೆಗೆಯುವುದು ಎಲ್ಲವೂ ಬಾಕಿಯದಕ್ಕೆ ಹೋಲಿಸಿದರೆ ಬಹಳ ಸುಲಭ. ದೊಡ್ಡ ದೊಡ್ಡ ಕಂಪನಿಗಳು ತೋಟದ ಪಕ್ಕದಲ್ಲೇ ಎಣ್ಣೆ ತಯಾರಿಕಾ ಘಟಕವನ್ನು ತೆರೆದದ್ದಕ್ಕೆ ಆದಾಯ ಪಕ್ಕಾ- ಕೃಷಿಕನೊಬ್ಬನಿಗೆ ಇನ್ನೇನು ಬೇಕು? ಆದರೆ ಪರಿಸ್ಥಿತಿ ಹಾಗೆಯೇ ಇರಲಿಲ್ಲ.

ಕಳೆದ ೨೫ ವರ್ಷದಲ್ಲಿ ಎಣ್ಣೆಯ ಬಳಕೆ ಪ್ರಪಂಚದಲ್ಲಿ ಸುಮಾರು ಹತ್ತು ಪಟ್ಟು ಜಾಸ್ತಿಯಾಯಿತು. ಅದಾಗಲೇ ಖ್ಯಾತಿ ಪಡೆದಿದ್ದ ಪಾಮ್ ಎಣ್ಣೆಯ ಅಗತ್ಯ ಕೂಡ ಅದಕ್ಕನುಗುಣವಾಗಿ ಬೆಳೆದು ವೃದ್ಧಿಯಾಯಿತು. ಇದೆಲ್ಲದರ ಪರಿಣಾಮವಾಗಿ ಮಲೇಷ್ಯಾದ ಕಾಡನ್ನು ನಿಯಂತ್ರಣವೇ ಇಲ್ಲದೇ ಕಡಿಯಲು ಕೃಷಿಕರು ಶುರುವಿಟ್ಟು ಕೊಂಡರು. ಕ್ರಮೇಣ ಕಂಪನಿಗಳು ಕೃಷಿಕರ ಜಾಗ ವನ್ನು ಅತಿಕ್ರಮಿಸಲು ಶುರುಮಾಡಿಕೊಂಡವು. ಇದು ಅಲ್ಲಿನ ಸರಕಾರದ ಹಿಡಿತವನ್ನೆಲ್ಲ ಬಿಟ್ಟು ಬೆಳೆದು ನಿಂತಿತು. ಅಕ್ಷರಶಃ ನಮ್ಮ ರಾಜ್ಯದಲ್ಲಿ ಗಣಿಯಲ್ಲಾದದ್ದೇ ಅಲ್ಲಿ ಕೂಡ ನಡೆಯಿತು, ಆದರೆ ಪ್ರಮಾಣ ಮಾತ್ರ ಜಾಸ್ತಿಯಿತ್ತು.

ದುಡ್ಡು ಎಲ್ಲವನ್ನು ಮಾಡಿಸುತ್ತಿತ್ತು. ಅಲ್ಲಿ ತಮ್ಮ ಕಾರ್ಖಾನೆ ತೆರೆದ ಬಹುಕೋಟಿಯ ಕಂಪನಿಗಳು ಸರಕಾರ ಮತ್ತು ಅಧಿಕಾರಿಗಳನ್ನು ಲಂಚದಿಂದ ಅಥವಾ ಬೆದರಿಸಿ ಮನಸೋ ಇಚ್ಛೆ ವರ್ತಿಸಲು ಶುರುವಿಟ್ಟುಕೊಂಡವು. ದಿನಗಳೆದಂತೆ ಉಷ್ಣವಲಯದ ಸಮೃದ್ಧ ಕಾಡಿಗೆ ಕಾಡೇ ಮಾಯವಾಗಿ ಅಲ್ಲೆಲ್ಲ ಪ್ಲಾಂಟೇಷನ್ ಗಳು ತಲೆಯೆತ್ತಿ ನಿಂತವು. ಇದೆ ಕಾರಣಕ್ಕೆ ಮಲೇಷ್ಯಾದಲ್ಲಿ ೨೦೦೦ದಿಂದ ೨೦೧೨ರ ಮಧ್ಯೆ ಬರೋಬ್ಬರಿ ೧೫ ಕೋಟಿ ಎಕರೆ ಅರಣ್ಯಭೂಮಿ ನಾಶವಾಯಿತು. ಅಲ್ಲಿನ ಅಪಾರ ಜೀವ ಸಂಕುಲ ನಶಿಸಿ ಹೋದವು. ಲಕ್ಷಾಂತರ ಪ್ರಾಣಿ-ಪಕ್ಷಿ ಪ್ರಕಾರ ಗಳು ನಮ್ಮ ಭೂಮಿಯಿಂದ ಶಾಶ್ವತವಾಗಿ ಮರೆಯಾಗಿ ಹೋದವು.

ಇದು ಮಲೇಷ್ಯಾದಲ್ಲಷ್ಟೇ ಅಲ್ಲ; ಇಂಡೋನೇಷ್ಯಾ, ಥಾಯ್ಲೆಂಡ್, ನೈಜೀರಿಯಾದಲ್ಲಿ ಕೂಡ ಪಕ್ಕಾ ಇದೇ ಕಥೆ. ಬ್ರೆಜಿಲ್‌ನ ಅಮೆಜಾನ್ ಅರಣ್ಯ ನಾಶಕ್ಕೂ ಪಾಮ್ ಎಣ್ಣೆಯೇ ಕಾರಣ. ಅಮೆಜಾನ್ ಕಾಡು ಕಡಿಯುವ ಭರಾಟೆಯಲ್ಲಿ ಅಲ್ಲಿನ ಆದಿವಾಸಿಗಳು ಸಾವಿರಾರು ವರ್ಷಗಳಿಂದ ಬದುಕಿಕೊಂಡು ಬಂದ ಅರಣ್ಯ ಕಳೆದುಕೊಂಡಿ ದ್ದಾರೆ. ಹುಲಿ, ಆನೆ, ಕರಡಿ, ಘೇಂಡಾ ಇವೇ ಮೊದಲಾದ ನೂರಾರು ಪ್ರಾಣಿಗಳ ಮಾರಣಹೋಮ ನಿತ್ಯ ನಡೆಯುತ್ತಿದೆ. ಮಲೇಷ್ಯಾದ ಅರಣ್ಯನಾಶದಿಂದ ಅತಿ ಹೆಚ್ಚು ತೊಂದರೆಗೊಳಗಾದ ಪ್ರಾಣಿ ಯೆಂದರೆ ಉರಾಂಗ್ ಉಟಾನ್. ಅವು ವಾಸಿಸುತ್ತಿದ್ದ ಶೇ.೯೦ ರಷ್ಟು ಜಾಗ ಕಳೆದ ೨೦ ವರ್ಷಗಳಲ್ಲಿ ನಾಶವಾಗಿ ಹೋಗಿದೆ.
ಪ್ರತಿನಿತ್ಯ ನೂರಾರು ಉರಾಂಗ್ ಉಟಾನ್‌ಗಳನ್ನು ಬಂದೂಕು, ಏರ್ ಗನ್‌ನಲ್ಲಿ ಹೊಡೆದು ಕೊಲ್ಲಲಾಗುತ್ತಿದೆ.

ಕಾಡಿಗೆ ಬೆಂಕಿ ಇಟ್ಟಾಗ ನೂರಾರು ಜೀವಂತವಾಗಿ ಸುಟ್ಟು ಕರಕಲಾಗಿ ಸಾಯುತ್ತಿವೆ; ಇನ್ನುಳಿದವು ಆ ಬೂದಿಯಾದ ಕಾಡಿನ ಬಯಲಿನಲ್ಲಿ ಮನೆ ಕಳೆದುಕೊಂಡು ರೋದಿಸಿ ರೋದಿಸಿ ಸಾಯುತ್ತಿವೆ. ಪ್ರತಿವರ್ಷ ಸುಮಾರು ೭ ಸಾವಿರ ಉರಾಂಗ್ ಉಟಾನ್‌ಗಳನ್ನು ಮನುಷ್ಯ ಕೊಲ್ಲುತ್ತಿದ್ದಾನೆ. ಇದೇ ರೀತಿ ಮುಂದುವರಿದರೆ
ಮುಂದಿನ ೪ ವರ್ಷದಲ್ಲಿ ಉರಾಂಗ್ ಉಟಾನ್ ಸಂತತಿ ಸಂಪೂರ್ಣ ನಶಿಸಿ ಹೋಗಿಬಿಡುತ್ತದೆ. ಇದೊಂದೇ ಅಲ್ಲ- ಈ ರೀತಿ ಅದೆಷ್ಟೋ ಪ್ರಾಣಿಗಳು ನಶಿಸಿ ಹೋಗಿ ಕಾಲವೇ ಆಗಿದೆ. ಒಂದು ಅಂದಾಜಿನ ಪ್ರಕಾರ ಇಂದು ಸರಿಸುಮಾರು ಒಂದು ಸಾವಿರ ಕ್ರಿಕೆಟ್ ಸ್ಟೇಡಿಯನಷ್ಟು ಕಾಡನ್ನು ಪ್ರತಿದಿನ ಕಳೆದು ಕೊಳ್ಳುತ್ತಿರುವುದಕ್ಕೆ ನೇರ ಹೊಣೆ ಇದೇ ಪಾಮ್ ಎಣ್ಣೆ. ನಾವು ಭಾರತೀಯರು ಇದಕ್ಕೆಲ್ಲ ಏಕೆ ಮತ್ತು ಹೇಗೆ ಹೊಣೆ ಎಂದು ಕೇಳಿಕೊಂಡರೆ, ಜಗತ್ತಿನ ಪಾಮ್ ಎಣ್ಣೆಯ ಅತಿ ದೊಡ್ಡ
ಮಾರುಕಟ್ಟೆಗಳಲ್ಲಿ ಸಹಜವಾಗಿ ಭಾರತ ಕೂಡ ಒಂದು.

ಭಾರತದಲ್ಲಿ ಅಡುಗೆ ಎಣ್ಣೆಯ ಬಳಕೆ ಕಳೆದ ದಶಕದಲ್ಲಿ ಸುಮಾರು ಶೇ.೨೦೦ರಷ್ಟು ಹೆಚ್ಚಿದೆ. ನಾವು ಇಂಡೋನೇಷ್ಯಾ ಮೊದಲಾದ ಮೇಲೆ ಹೇಳಿದ ಎಲ್ಲ ದೇಶಗಳಿಂದ ಪಾಮ್ ಎಣ್ಣೆಯನ್ನು ಆಮದುಮಾಡಿಕೊಳ್ಳುತ್ತೇವೆ. ಹೀಗಾಗಿ ಪರೋಕ್ಷವಾಗಿ ನಾವು ಕೂಡ ಈ ಎಣ್ಣೆಯ ಹಿಂದೆ ನಡೆವ ಮಾನವನ ದುರಾಚಾರಕ್ಕೆ ಕಾರಣರೇ. ಹಾಗಾದರೆ ಇದನ್ನೆಲ್ಲಾ ಗಮನಿಸಿ ನಾವು ನಾಳೆಯಿಂದ ಪಾಮ್ ಎಣ್ಣೆಯನ್ನು ತಿನ್ನುವುದೇ ಬಿಟ್ಟು ಬಿಡಬೇಕೆ? ಹಾಗೆ ಮಾಡಿದಲ್ಲಿ ಈ ಸಮಸ್ಯೆ ಪರಿಹಾರವಾದೀತೇ? ಪಾಮ್ ಎಣ್ಣೆ ಬಿಟ್ಟು ಇನ್ನೊಂದು ಎಣ್ಣೆಯನ್ನು ಈ ಪರಿಯಲ್ಲಿ ತಿನ್ನಲು ಶುರುವಿಟ್ಟುಕೊಂಡರೂ ಅದಿನ್ನೆಲ್ಲೆಲ್ಲೋ ಇಂಥದ್ದೊಂದು ಅವಾಂತ
ರಕ್ಕೆ ಎಡೆ ಮಾಡಿಕೊಡುತ್ತದೆ.

ಈಗಾಗಲೇ ಕೋಟ್ಯಂತರ ಕೃಷಿಕರು ಪಾಮ್ ಬೆಳೆಯನ್ನು ನಂಬಿ ಬದುಕು ಕಟ್ಟಿಕೊಂಡಾಗಿದೆ, ಅವರು ಬೀದಿಗೆ ಬರುತ್ತಾರೆ. ಹಾಗೆ ಪಾಮ್ ಎಣ್ಣೆಯನ್ನು
ಸಂಪೂರ್ಣ ಬಳಸದೆ ಇರಲು ಅಸಾಧ್ಯ ಕೂಡ. ಇನ್ನು ನಮ್ಮ ಸ್ಥಳೀಯವಾಗಿ ಬೆಳೆವ ತೆಂಗಿನ ಎಣ್ಣೆ , ಶೇಂಗಾ ಎಣ್ಣೆ, ಸೂರ್ಯಕಾಂತಿ ಮೊದಲಾದ ಎಣ್ಣೆಯನ್ನು ಹಿತ ಮಿತದಲ್ಲಿ ಬಳಸಿಕೊಂಡರೆ ನಮ್ಮ ಕೃಷಿಕರಿಗೆ ಸಹಾಯ ಮಾಡಿದಂತಾಗುತ್ತದೆಯಲ್ಲದೇ, ಈ ವಿಕೃತಿಗೆ ಸ್ವಲ್ಪ ಮಟ್ಟಿಗೆ ತಡೆಯೊಡ್ಡಿ ದಂತಾಗುತ್ತದೆ. ಆದರೆ ಅದೇ ಇದಕ್ಕೆ ಪರಿಹಾರವೇ? ಕೆಲವೊಂದು ಸಮಸ್ಯೆಗೆ ಪರಿಹಾರ ಅಷ್ಟು ಸುಲಭ ಅಲ್ಲ ಅಥವಾ ಇಲ್ಲ.