ಗಂಟಾಘೋಷ
ಗುರುರಾಜ್ ಗಂಟಿಹೊಳೆ
ವಿಶ್ವ ಪರ್ಯಟನೆ ಮತ್ತು ಪ್ರವಾಸೋದ್ಯಮ ಸಮಿತಿಯ ವರದಿಯ ಪ್ರಕಾರ, ಪರ್ಯಟನ ವಲಯದಲ್ಲಿ ಅತಿಹೆಚ್ಚು ಅಭಿವೃದ್ಧಿಯ ಸಾಮರ್ಥ್ಯವಿರುವ ಭಾರತಕ್ಕೆ ಮುಂದಿನ ೧೦ ವರ್ಷಗಳವರೆಗೆ ಪ್ರವಾಸೋ ದ್ಯಮಕ್ಕೆ ಪೂರಕವಾದ ಸಾಮರ್ಥ್ಯವಿದೆ ಮತ್ತು ತನ್ನ ಸಾಂಸ್ಕೃತಿಕ ವೈವಿಧ್ಯದಿಂದಾಗಿ ಭಾರತವು ವಿಶ್ವದಲ್ಲೇ ಜನಪ್ರಿಯ ಪ್ರವಾಸಿ ಕೇಂದ್ರಬಿಂದುವಾಗಿ ಹೊರಹೊಮ್ಮಲಿದೆ.
ಈ ವರದಿಯ ಪ್ರಕಾರ, ಭಾರತವು ದರಗಳ ಸ್ಪರ್ಧೆಯಲ್ಲಿ ೬ನೇ ಸ್ಥಾನದಲ್ಲಿದ್ದು, ಹೋಟೆಲ್ ಕೊಠಡಿಗಳ ಕೊರತೆ, ರಸ್ತೆ ಮತ್ತು ಸ್ಥಳೀಯ ಮೂಲ ಸೌಕರ್ಯಗಳ ಅಭಿವೃದ್ಧಿ ಸೇರಿದಂತೆ ಅಲ್ಪ ಮತ್ತು ಮಧ್ಯಮಾವಧಿಯ ಹಿನ್ನಡೆಯುಂಟಾದರೂ, ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಿಂದಾಗಿ ಪ್ರವಾಸಿಗರ ಆಗಮನ ನಿರಂತರವಾಗಿ ಬೆಳೆಯುತ್ತಿದೆ.
ದೇಶದ ಪ್ರವಾಸೋದ್ಯಮವು ೧೪.೦೨ ಲಕ್ಷ ಕೋಟಿ ರುಪಾಯಿ, ಅಂದರೆ ರಾಷ್ಟ್ರದ ಜಿಡಿಪಿಯ ಶೇ.೯.೬ರಷ್ಟನ್ನು ಉತ್ಪಾದಿಸಿದೆ ಮತ್ತು ಸ್ಥಳೀಯರಿಗೆ ೪೦.೩೪೩ ಮಿಲಿಯನ್ ಉದ್ಯೋಗಗಳನ್ನು ಸೃಷ್ಟಿಸಿದೆ. ಆದ್ದರಿಂದ, ಈ ವಲಯವು ೨೦೨೭ರ ವೇಳೆಗೆ ಶೇ.೬.೮ರ ವಾರ್ಷಿಕ ದರದಲ್ಲಿ ೨೮.೪೯ ಲಕ್ಷ
ಕೋಟಿ ರು.ವರೆಗೆ, ಅಂದರೆ ಜಿಡಿಪಿಯ ಶೇ.೧೦ರಷ್ಟು ಬೆಳೆಯುತ್ತದೆ ಎಂದು ಅಂದಾಜಿಸಲಾಗಿದೆ. ಇದೇ ವರದಿಯಲ್ಲಿ, ವಿದೇಶಿ ಯಾತ್ರಿಕರು ಕರ್ನಾಟಕಕ್ಕೆ ಭೇಟಿ ನೀಡುವುದನ್ನು ಕಡಿಮೆ ಮಾಡಿದ್ದಾರೆಂದೂ ಮತ್ತು ದೇಶದ ೧೦ ಆದ್ಯತಾ ರಾಜ್ಯಗಳ ಪಟ್ಟಿಯಿಂದ ಕರ್ನಾಟಕವು ಹೊರಗಿದೆ ಎಂದೂ ತಿಳಿಸಲಾಗಿದೆ.
ಇದನ್ನು ಸರಕಾರ ಗಂಭೀರವಾಗಿ ಪರಿಗಣಿಸಬೇಕಿದೆ. ವಿದೇಶಿಗರಿಗೆ ಸುರಕ್ಷತೆ, ಭದ್ರತೆ ಮತ್ತು ಅಗತ್ಯ ಸೌಕರ್ಯ ಒದಗಿಸುವುದು ಸರಕಾರ ಮತ್ತು ಪ್ರವಾಸೋ ದ್ಯಮ ಇಲಾಖೆಯ ಕರ್ತವ್ಯವಾಗಿದೆ. ಪ್ರವಾಸೋದ್ಯಮದ ವಿಷಯದಲ್ಲಿ ದೇಶದ ೩ನೇ ಅತ್ಯಂತ ಜನಪ್ರಿಯ ತಾಣವಾಗಿರುವ ಕರ್ನಾಟಕವು ಅತಿಹೆಚ್ಚು ರಾಷ್ಟ್ರೀಯ ಸಂರಕ್ಷಿತ ಸ್ಮಾರಕಗಳನ್ನು ಹೊಂದಿರುವ ರಾಜ್ಯವೂ ಹೌದು. ಸರ್ವಶ್ರೇಷ್ಠ ದೇಗುಲಗಳು, ಶಿಲ್ಪ ಕೆತ್ತನೆಗಳು, ವಿದೇಶಗಳಲ್ಲೂ ಖ್ಯಾತಿ ಪಡೆದ ಐತಿಹಾಸಿಕ ತಾಣಗಳು ನಮ್ಮಲ್ಲಿವೆ.
ನಿಸರ್ಗ ಸೌಂದರ್ಯಕ್ಕೂ ರಾಜ್ಯ ಹೆಸರುವಾಸಿಯಾಗಿದೆ. ರಾಜ್ಯದ ಕರಾವಳಿ ಪ್ರವಾಸಿ ತಾಣಗಳು ಕೂಡ ಅತ್ಯಂತ ವಿಶಿಷ್ಟವಾಗಿವೆ. ಪಶ್ಚಿಮ ಘಟ್ಟಗಳು ಮತ್ತು ಅರಬ್ಬಿ ಸಮುದ್ರದ ನಡುವಿನ ತಗ್ಗುಪ್ರದೇಶವು ಕರಾವಳಿ ಎಂದು ಕರೆಯಲ್ಪಟ್ಟಿದ್ದು, ಇದು ಸುಮಾರು ೩೨೦ ಕಿ.ಮೀ. ಉದ್ದವಿದೆ. ಕರಾವಳಿ
ಪ್ರವಾಸೋದ್ಯಮವು ಕರ್ನಾಟಕದ ಆಚಾರ-ವಿಚಾರ, ಕಲೆ- ಸಂಸ್ಕೃತಿಗಳಲ್ಲಿ ವಿಭಿನ್ನವಾಗಿ ನಿಲ್ಲುವಂಥದ್ದು. ಇದು ಉಡುಪಿ, ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ವ್ಯಾಪ್ತಿಯಲ್ಲಷ್ಟೇ ಬರುವಂಥದ್ದು. ನರೇಂದ್ರ ಮೋದಿಯವರ ಆಡಳಿತದಲ್ಲಿ ಪ್ರವಾಸೋದ್ಯಮಕ್ಕೆ ಹೆಚ್ಚು ಒತ್ತು ನೀಡಲಾಗಿದೆ; ‘ಲೋಕಲ್ ಫಾರ್ ವೋಕಲ್’ ಎಂಬ ಘೋಷವಾಕ್ಯದೊಂದಿಗೆ ಸ್ಥಳೀಯ ವಸ್ತುಗಳನ್ನು, ಸ್ಥಳಗಳನ್ನು ದೇಶ-ವಿದೇಶಗಳ ಮಟ್ಟದಲ್ಲಿ ಗುರುತಿಸು ವಂತಾಗಲು ಅವರು ಹೆಚ್ಚು ಮಹತ್ವ ನೀಡಿದ್ದಾರೆ.
ಇಡೀ ದೇಶದಲ್ಲಿ ಜವಳಿ ಉದ್ಯಮ ಬಿಟ್ಟರೆ ಪ್ರವಾಸೋದ್ಯಮವು ಅತಿಹೆಚ್ಚು ಉದ್ಯೋಗಗಳನ್ನು ಸೃಷ್ಟಿಸುತ್ತಿರುವ ಮತ್ತು ಆದಾಯವನ್ನು ತಂದು ಕೊಡುತ್ತಿರುವ ೨ನೇ ದೊಡ್ಡ ವಲಯವಾಗಿದೆ ಹಾಗೂ ಇದು ನಮ್ಮ ಕಲೆ-ಸಂಸ್ಕೃತಿಗಳನ್ನು ಅನ್ಯರಿಗೆ ಸಮರ್ಪಕವಾಗಿ ತಲುಪಿಸಲು ಇರುವ ಮಾರ್ಗ
ವಾಗಿದೆ ಎಂಬುದನ್ನೂ ನಾವಿಲ್ಲಿ ಮರೆಯಬಾರದು. ಈ ಸಂಗತಿಯನ್ನು ಮನಗಂಡೇ ಮೋದಿ ಸರಕಾರವು ಕೇಂದ್ರ ಬಜೆಟ್ನಲ್ಲಿ ಪ್ರವಾಸೋದ್ಯಮ ಇಲಾಖೆಗೆ ಸುಮಾರು ೨,೪೦೦ ಕೋಟಿ ರು. ಅನುದಾನವನ್ನು ಮೀಸಲಿಟ್ಟಿತು ಹಾಗೂ ಪ್ರವಾಸೋದ್ಯಮದ ಅಭಿವೃದ್ಧಿಯ ಉದ್ದೇಶದೊಂದಿಗೆ ‘ಸ್ವದೇಶ್ ದರ್ಶನ’ ಯೋಜನೆಯನ್ನು ೨೦೧೫ರಲ್ಲಿ ಆರಂಭಿಸಿತು.
ಪ್ರವಾಸೋದ್ಯಮ ಮಾತ್ರವಲ್ಲದೆ, ದೇಶದ ಒಟ್ಟಾರೆ ಆರ್ಥಿಕ ಅಭಿವೃದ್ಧಿಗಾಗಿ ಈ ಯೋಜನೆಯೊಂದಿಗೆ ಡಿಜಿಟಲ್ ಇಂಡಿಯಾ, ಸ್ಕಿಲ್ ಇಂಡಿಯಾ ಎಂಬ ಸಾಕಷ್ಟು ಪೂರಕ ಯೋಜನೆಗಳನ್ನೂ ಸೇರಿಸಲಾಗಿದೆ. ‘ಸ್ವದೇಶ್ ದರ್ಶನ’ ಮತ್ತು ‘ಪ್ರಸಾದ್’ ಯೋಜನೆಗಳ ಅಡಿಯಲ್ಲಿ ಪ್ರವಾಸೋದ್ಯಮ ಸಚಿವಾಲ ಯವು ರಾಜ್ಯ ಸರಕಾರಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ಹಣಕಾಸು ನೆರವನ್ನು (ಸಿಎಫ್ ಎ) ಒದಗಿಸುತ್ತದೆ.
ಸ್ವದೇಶ್ ದರ್ಶನ ಯೋಜನೆಯಡಿ ಸ್ಥಳ ಅಭಿವೃದ್ಧಿಗಾಗಿ ೧೩ ವಿಷಯಾಧಾರಿತ ಸರ್ಕ್ಯೂಟ್ಗಳನ್ನು (ಈಶಾನ್ಯ ಭಾರತ, ಬೌದ್ಧ, ಹಿಮಾಲಯನ್, ಕೋಸ್ಟಲ್, ಕೃಷ್ಣಾ, ಡೆಸರ್ಟ್, ಟ್ರೈಬಲ್, ಇಕೋ, ವೈಲ್ಡ್ಲೈ-, ರೂರಲ್, ಆಧ್ಯಾತ್ಮಿಕ, ರಾಮಾಯಣ ಮತ್ತು ಹೆರಿಟೇಜ್) ಗುರುತಿಸಲಾಗಿದೆ. ಇವುಗಳಲ್ಲಿ ರಾಜ್ಯ ಸರಕಾರವು ತನ್ನ ಆದ್ಯತೆ ತೋರಿಸಬೇಕಿತ್ತು ಹಾಗೂ ಹಕ್ಕೊತ್ತಾಯದ ಮೂಲಕ ಇಂಥ ಯೋಜನೆಗಳನ್ನು ನಮ್ಮಲ್ಲಿನ ಕರಾವಳಿ ಭಾಗಕ್ಕೆ ಪಡೆದು ಕೊಳ್ಳಬೇಕಿತ್ತು; ಆದರೆ ಈ ನಿಟ್ಟಿನಲ್ಲಿ ಅದು ಉದಾಸೀನ ತೋರಿತು. ಆದರೆ ಆಂಧ್ರಪ್ರದೇಶ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳು ಈ ನಿಟ್ಟಿನಲ್ಲಿ ಉತ್ಸಾಹ ತೋರಿವೆ.
ಇವು ಕ್ರಮವಾಗಿ ೭೦ ಕೋಟಿ ಮತ್ತು ೮೫.೩೯ ಕೋಟಿ ರು. ಹಣವನ್ನು ಈ ನಿಟ್ಟಿನಲ್ಲಿ ದಕ್ಕಿಸಿಕೊಂಡವು; ಅಂದರೆ, ತಂತಮ್ಮ ಕರಾವಳಿ ಪ್ರದೇಶಗಳು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲ್ಪಡುವಂತಾಗಲು ‘ಕರಾವಳಿ ಸರ್ಕ್ಯೂಟ್’ ಯೋಜನೆಯಡಿಯಲ್ಲಿ ಇವು ಕೇಂದ್ರದಿಂದ ಹಣ ಪಡೆದುಕೊಂಡಿವೆ. ಈ ವಿಚಾರದಲ್ಲಿ ರಾಜ್ಯ ಸರಕಾರ ಮತ್ತು ರಾಜ್ಯ ಪ್ರವಾಸೋದ್ಯಮ ಇಲಾಖೆಯ ಪ್ರಯತ್ನ ಶೂನ್ಯ. ಅಸಾಧಾರಣ ಸೌಂದರ್ಯ, ಸಾಂಸ್ಕೃತಿಕ ಸಂಪತ್ತು ಮತ್ತು ವೈವಿಧ್ಯದಿಂದ ಕೂಡಿರುವ ನಮ್ಮ ಕರಾವಳಿ ಪ್ರದೇಶಗಳು ರಜಾದಿನಗಳನ್ನು ಕಳೆಯಲು ಆದ್ಯತೆಯ ತಾಣಗಳಾಗಿವೆ.
ಈಜು, ಸರ್ಫಿಂಗ್, ಸೂರ್ಯಸ್ನಾನ ಸೇರಿದಂತೆ ಇತರ ಮನರಂಜನಾ ಚಟುವಟಿಕೆಗಳನ್ನು ಒಳಗೊಳ್ಳುವ ಮೂಲಕ ಕರಾವಳಿ ಪ್ರವಾಸೋದ್ಯಮವು ಆಪ್ತತೆಯನ್ನು ಹೊಮ್ಮಿಸಿ ಪ್ರವಾಸಿಗರನ್ನು ಸೆಳೆದರೆ, ಸಮುದ್ರ ಆಧರಿತ ಚಟುವಟಿಕೆಗಳಾದ ಬೋಟಿಂಗ್, ವಿಹಾರನೌಕೆ, ಸಮುದ್ರಯಾನ ಇತ್ಯಾದಿಗಳು
ಕೂಡ ಸ್ಥಳೀಯರಿಗೆ ಉದ್ಯೋಗ ಮತ್ತು ಉತ್ತಮ ಆದಾಯವನ್ನು ಕೊಡಬಲ್ಲವಾಗಿವೆ.
ಇನ್ನು ವಿಶೇಷತೆಗಳ ಬಗ್ಗೆ ಮಾತನಾಡುವುದಾದರೆ, ಉತ್ತರ ಕನ್ನಡ ಜಿಲ್ಲೆಯಲ್ಲಿ ಉದ್ದನೆಯ ಕಡಲತೀರವನ್ನು ಕಾಣಬಹುದಾಗಿದೆ. ಪಡುಬಿದ್ರಿ ಬೀಚ್ ಕರ್ನಾಟಕದ ಅತ್ಯಂತ ಸ್ವಚ್ಛ ಕಡಲತೀರ ಎಂದು ಹೆಸರಾಗಿದ್ದು, ಸ್ಪಷ್ಟ ನೀಲಿ ನೀರು ಮತ್ತು ಬಿಳಿ ಮರಳು ಇಲ್ಲಿನ ವೈಶಿಷ್ಟ್ಯವಾಗಿದೆ. ಇಲ್ಲಿ ದಿನವಿಡೀ ಸುಮ್ಮನೆ ಕುಳಿತು ಸಮುದ್ರವನ್ನೇ ವೀಕ್ಷಿಸುತ್ತಿರಬಹುದು. ಗೋವಾ ನಂತರದಲ್ಲಿ ವಿದೇಶಿಗರನ್ನು ಆಕರ್ಷಿಸಿದ ನಮ್ಮಲ್ಲಿನ ಮತ್ತೊಂದು ಕಡಲತೀರವೆಂದರೆ ಗೋಕರ್ಣ. ಕರ್ನಾಟಕದ ಅತ್ಯಂತ ಸುರಕ್ಷಿತ ಬೀಚ್ ಎಂಬ ಹೆಗ್ಗಳಿಕೆ ಪಣಂಬೂರು ಕಡಲತೀರಕ್ಕೆ ಸಂದಿದೆ. ಇವೆಲ್ಲವನ್ನೂ ಮೀರಿದ ಮತ್ತೊಂದು ವಿಶೇಷ ಮರವಂತೆ ಬೀಚ್ನದ್ದು. ಇದು ಭಾರತದಲ್ಲೇ ವಿಶಿಷ್ಟ ಮತ್ತು ಏಕೈಕ ಎನ್ನುವಂಥ ಸಮುದ್ರ ಕಿನಾರೆ.
ಒಂದು ಕಡೆ ಅರಬ್ಬಿ ಸಮುದ್ರ, ಇನ್ನೊಂದು ಕಡೆ ಸೌಪರ್ಣಿಕಾ ನದಿಯನ್ನು ಹೊಂದಿರುವ ವೈಶಿಷ್ಟ್ಯ ಇದರದ್ದು. ಹೆದ್ದಾರಿಯಲ್ಲಿ ಸಾಗುವಾಗ ಒಂದು ಬದಿಯಲ್ಲಿ ಸಮುದ್ರ, ಮತ್ತೊಂದು ಬದಿಯಲ್ಲಿ ನದಿ ಕಾಣಿಸುವಂಥ ವಿಶಿಷ್ಟ ಸಂಯೋಜನೆ ಬೇರೆಡೆ ಕಾಣುವುದು ದುಸ್ತರ ಹಾಗೂ ಇದು ಭಾರತದಲ್ಲಿ ಮಾತ್ರ ಲಭ್ಯ ಎನ್ನಲಾಗುತ್ತದೆ. ಇಷ್ಟೆಲ್ಲಾ ಪ್ರಾಕೃತಿಕ ಪ್ರವಾಸೋದ್ಯಮ ಸಂಪನ್ಮೂಲಗಳಿದ್ದರೂ ರಾಜ್ಯ ಸರಕಾರ ಕೈಚೆಲ್ಲಿ ಕುಳಿತಿದ್ದರ ಜತೆಗೆ, ಯಥೇಚ್ಛ ಆದಾಯ ಕೊಡಬಲ್ಲ ಮತ್ತು ಉದ್ಯೋಗಾವಕಾಶಗಳನ್ನು ಸೃಷ್ಟಿಸಬಲ್ಲ ಯೋಜನೆಗಳನ್ನು ಕೈಗೊಳ್ಳದಿರುವುದು ಮಾತ್ರ ವಿಪರ್ಯಾಸವೇ ಸರಿ.
ರಾಜ್ಯ ಸರಕಾರವು ತೋರಿಕೆಗೆ ಎಂಬಂತೆ ತನ್ನ ಬಜೆಟ್ನಲ್ಲಿ ‘ಸಾಗರಮಾಲಾ’ ಯೋಜನೆಯಡಿ ೫೯೭ ಕೋಟಿ ರು. ವೆಚ್ಚದ ೧೨ ಹೊಸ ಕಿರುಬಂದರುಗಳ ನಿರ್ಮಾಣ, ಉತ್ತರ ಕನ್ನಡ ಜಿಲ್ಲೆಯ ಕೇಣಿ ಮತ್ತು ಪಾವಿನ ಕುರ್ವೆಯಲ್ಲಿ ಸರ್ವಋತು ಬಂದರು ಅಭಿವೃದ್ಧಿಗೆ ಕ್ರಮ ಮತ್ತು ಬಹೂಪಯೋಗಿ ಬಂದರು
ನಿರ್ಮಾಣ, ರಾಜ್ಯದ ಎಲ್ಲ ಬಂದರುಗಳಲ್ಲಿ ಪ್ರತಿವರ್ಷಕ್ಕೆ ೨ ಬಾರಿ ಹೂಳೆತ್ತುವ ಕಾರ್ಯಕ್ರಮ, ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲು ಉಡುಪಿ ಜಿಲ್ಲೆಯ ಬೈಂದೂರಿನಲ್ಲಿನ ಮರೀನಾ ಬೀಚ್ ಅಭಿವೃದ್ಧಿಗೆ ಕ್ರಮ, ಉತ್ತರ ಕನ್ನಡದ ಕೋಡ್ಕಣಿಯಲ್ಲಿ ಹೊಸ ಕೈಗಾರಿಕಾ ವಸಾಹತು ಸ್ಥಾಪನೆ ಮೊದಲಾ ದವನ್ನು ಘೋಷಿಸಿತು.
ಆದರೆ ಇವೆಲ್ಲ ಜಾರಿಗೆ ಬರುವುದು ಯಾವಾಗ ಎಂಬುದೇ ಈ ಭಾಗದ ಜನರ, ಜನಪ್ರತಿನಿಧಿಗಳ ಪ್ರಶ್ನೆಯಾಗಿದೆ ಕೂಡ. ಆಳುವ ಸರಕಾರಗಳು ಸಮರ್ಪಕ ವಾಗಿ ಸ್ಪಂದಿಸಿದರೆ, ಸಮಸ್ಯೆಗಳನ್ನೇ ಅವಕಾಶಗಳನ್ನಾಗಿ ಬದಲಾಯಿಸಿಕೊಳ್ಳಬಲ್ಲರು ನಮ್ಮ ಜನ ಎಂಬುದನ್ನು ಈ ಮೂಲಕ ಹೇಳಬಯಸುವೆ.
ಇದಿಷ್ಟೇ ಅಲ್ಲದೆ, ಜನಸಾಮಾನ್ಯರ ಮತ್ತು ಇಲ್ಲಿಗೆ ಬರುವ ಪ್ರವಾಸಿಗರ ಬೇಡಿಕೆಗಳು ಹೀಗಿವೆ:
? ಉದ್ಯೋಗಗಳನ್ನು ಸೃಷ್ಟಿಸುವ, ಸ್ಥಳೀಯ ಸಂಸ್ಕೃತಿ ಮತ್ತು ಉತ್ಪನ್ನಗಳನ್ನು ಉತ್ತೇಜಿಸುವ ಸುಸ್ಥಿರ ಪ್ರವಾಸೋದ್ಯಮಕ್ಕೆ ಪೂರಕವಾಗಬಲ್ಲ ನೀತಿಗಳನ್ನು ಜಾರಿಗೊಳಿಸಬೇಕು.
? ಇಂಥ ಸುಸ್ಥಿರ ಅಭಿವೃದ್ಧಿ ಪರಿಣಾಮಗಳನ್ನು ಮೇಲ್ವಿಚಾರಣೆ ಮಾಡಲು ಪರಿಕರಗಳನ್ನು ಅಭಿವೃದ್ಧಿಪಡಿಸಬೇಕು ಮತ್ತು ಕಾರ್ಯಗತಗೊಳಿಸಬೇಕು.
? ಅನೇಕ ಪ್ರವಾಸಿಗರು ಕರಾವಳಿ ಪರಿಸರದಿಂದ ಸ್ವಾಭಾವಿಕವಾಗಿ ಆಕರ್ಷಿತರಾಗಿರುವುದರಿಂದ, ಸ್ಥಳೀಯ ಸಮುದಾಯ ಮತ್ತು ಸಾಗರ ಪರಿಸರವನ್ನು ಹೆಚ್ಚಿಸುವ ಸುಸ್ಥಿರ, ಪುನರುತ್ಪಾದಕ ಅನುಭವಗಳನ್ನು ನೀಡಲು ವೈವಿಧ್ಯಮಯ ಅವಕಾಶಗಳಿದ್ದು ಇವುಗಳ ಸದುಪಯೋಗ ಪಡೆದು ಕೊಳ್ಳಬೇಕು.
ಇದೇ ಫೆಬ್ರವರಿಯಲ್ಲಿ ಬರುವ ಈ ವರ್ಷದ ಬಜೆಟ್ ನಲ್ಲಾದರೂ ಈ ಕುರಿತಾದ ಸಮರ್ಪಕ ಯೋಜನೆಗಳಿಗೆ ಅವಕಾಶ ಕಲ್ಪಿಸಿದಲ್ಲಿ ಮತ್ತು ಅವುಗಳಿಗೆ ತಾರತಮ್ಯವಿಲ್ಲದೆ ಅನುದಾನವನ್ನು ಬಿಡುಗಡೆ ಮಾಡಿದಲ್ಲಿ, ದೇಶದಲ್ಲಿಯೇ ಅತ್ಯುತ್ತಮವಾದ ಬಂದರುಗಳಿಗೆ ಹಾಗೂ ಕರಾವಳಿ ಪ್ರವಾಸೋದ್ಯಮಕ್ಕೆ ಕರ್ನಾಟಕವು ಸಾಕ್ಷಿಯಾಗಬಲ್ಲದು.