Wednesday, 11th December 2024

ವೃತ್ತಿ ತರಬೇತಿ ಶಿಕ್ಷಣಕ್ಕೆ ಪ್ರಾಶಸ್ತ್ಯ ಸಿಗುತ್ತಿದೆಯೇ ?

ವಿದ್ಯಾಪೀಠ

ಅನುರಾಗ್ ಬೆಹರ್‌

ವೃತ್ತಿ ತರಬೇತಿ ಶಿಕ್ಷಣವನ್ನು ಪರಿಣಾಮಕಾರಿಯಾಗಿ ಪಡೆಯುವುದು ಇತರ ಕಲಿಕಾ ವಿಷಯಗಳಾದ ಭಾಷೆ, ವಿಜ್ಞಾನ, ಸಮಾಜ ವಿಜ್ಞಾನ ಇವುಗಳಲ್ಲಿ ಪರಿಣಾಮಕಾರಿಯಾಗಿ ಶಿಕ್ಷಣವನ್ನು ಪಡೆಯುವುದರಿಂದ ಮಾತ್ರ ಸಾಧ್ಯ. ವೃತ್ತಿ ಶಿಕ್ಷಣದಲ್ಲಿ ಅವನ್ನು ಬಳಸಿದಾಗ ಮಾತ್ರ ಇತರೆ ಕಲಿಕಾ ವಿಷಯಗಳು ಇನ್ನಷ್ಟು ಬಲಗೊಳ್ಳುತ್ತವೆ.

ಶಾಲಾ ಶಿಕ್ಷಣಕ್ಕಾಗಿ ಇರುವ ‘ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು’ ೨೦೨೩ (ಎನ್ ಸಿಎಫ್)ರಲ್ಲಿ ಭಾರತೀಯ ಶಾಲಾ ಪಠ್ಯಕ್ರಮದಲ್ಲಿ ಗಣಿತ ಅಥವಾ ವಿಜ್ಞಾನ ವಿಷಯಗಳಿಗಿರುವಷ್ಟೇ ಪ್ರಾಮುಖ್ಯ ನೀಡಿ ವೃತ್ತಿ ತರಬೇತಿ ಶಿಕ್ಷಣವನ್ನೂ ಸಂಯೋಜಿಸಲಾಗುತ್ತಿದೆ. ಎನ್‌ಸಿಎಫ್ ಈ ರೀತಿಯ ಸಂಯೋಜನೆಗಳನ್ನು ಪರಿಚಯಿಸುತ್ತಿರುವ ಹಿಂದೆ ಸ್ಪಷ್ಟವಾದ ಉದ್ದೇಶವೂ ಇದೆ. ಏಕೆಂದರೆ ಭಾರತದಲ್ಲಿ ಹೆಚ್ಚಿನ ಮಕ್ಕಳಿಗೆ ಶಾಲಾ ವಿದ್ಯಾಭ್ಯಾಸವನ್ನು ಮುಗಿಸುತ್ತಿದ್ದಂತೆಯೇ ಉದ್ಯೋಗ ಗಳಿಸುವುದು ಮುಖ್ಯವಾಗುತ್ತದೆ. ಇದರೊಂದಿಗೆ ಇತ್ತ ಶಾಲಾ ವಿದ್ಯಾಭ್ಯಾಸ ಮುಗಿಯುತ್ತಿದ್ದಂತೆ ತಮ್ಮ ಜೀವನೋಪಾಯವನ್ನು ತುರ್ತಾಗಿ ಗಳಿಸಲೇ ಬೇಕೆಂಬ ಅಗತ್ಯವಿಲ್ಲದವರೂ, ವೃತ್ತಿ ತರಬೇತಿ ಶಿಕ್ಷಣದ ಮೂಲಕ ಅಭಿವೃದ್ಧಿಪಡಿಸಿಕೊಂಡಿರುವ ತಮ್ಮ ಸಾಮರ್ಥ್ಯ ಮತ್ತು ಜ್ಞಾನದೊಂದಿಗೆ ಜೀವನದ ಸವಾಲುಗಳನ್ನು ಎದುರಿಸಲು ಉತ್ತಮವಾಗಿ ಸಿದ್ಧರಾಗಬಹುದು.

ಈ ಸಂಯೋಜನೆಯನ್ನು ಏರ್ಪಡಿಸುವ ಸಂದರ್ಭದಲ್ಲಿ ಎನ್‌ಸಿಎ-ನ ೩ ವಿಧದ ಸವಾಲುಗಳನ್ನು ಎದುರಿಸಿ ಅವುಗಳ ನಡುವೆ ಪರಸ್ಪರ ಏಕೀಕರಣವನ್ನು ಸಾಧಿಸಬೇಕಾಗುತ್ತದೆ. ಮೊದಲನೆಯದಾಗಿ, ಈ ಸಂಯೋಜನೆ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ಪ್ರಾಯೋಗಿಕವಾಗಿ ನೋಡುವುದು.
ಎರಡನೆಯದಾಗಿ, ಮುಖ್ಯವಾಹಿನಿ ಶಿಕ್ಷಣದಲ್ಲಿ ಯಶಸ್ವಿಯಾಗಲು ಸಾಧ್ಯವಾಗದೆ ವೃತ್ತಿಪರ ಶಿಕ್ಷಣ ಪಡೆಯುವವರ ಕುರಿತಾಗಿ ಸಮಾಜದಲ್ಲಿ ಪ್ರಚಲಿತ
ದಲ್ಲಿರುವ ದೃಷ್ಟಿಕೋನ. ಮೂರನೆಯದಾಗಿ, ಭಾರತೀಯ ಶಿಕ್ಷಣ ಪದ್ಧತಿಯಲ್ಲಿ ವೃತ್ತಿ ತರಬೇತಿ ಶಿಕ್ಷಣದ ಕುರಿತಾಗಿ ಇರುವ ತಾತ್ತ್ವಿಕ ಪಕ್ಷಪಾತ, ಇದು
ಅನಾದರದಿಂದ ತೀವ್ರ ವಿರೋಧದವರೆಗೂ ಕೂಡಿದೆ. ವೃತ್ತಿ ತರಬೇತಿ ಶಿಕ್ಷಣವನ್ನು ಪರಿಚಯಿಸುವಾಗ ಎನ್‌ಸಿಎಫ್ ಈ ಎಲ್ಲ ಸವಾಲುಗಳನ್ನು
ಬಗೆಹರಿ ಸಲು ಯತ್ನಿಸುತ್ತದೆ.

ಈ ಸಮಸ್ಯೆಗಳನ್ನು ಬಗೆಹರಿಸುವ ವಿಧಗಳ ಬಗ್ಗೆ ಹೆಚ್ಚು ತಿಳಿಯುವ ಮೊದಲು, ಇದುವರೆಗೂ ಯಾರಿಗೂ ಹೆಚ್ಚಿಗೆ ತಿಳಿಯದಿರುವ ತಾತ್ತ್ವಿಕ ಪಕ್ಷಪಾತದ ಬಗ್ಗೆ ಅರಿಯೋಣ. ಶಾಲಾ ಶಿಕ್ಷಣದ ಬೌದ್ಧಿಕ ದಿಕ್ಕನ್ನು ಮುನ್ನಡೆಸಿದವರಲ್ಲಿ ವ್ಯಾಪಕವಾಗಿರುವ ಒಮ್ಮತವು, ಶಾಲೆಗಳು ಉತ್ತಮ ಮಾನವರನ್ನು
ಅಭಿವೃದ್ಧಿಪಡಿಸುವ ಗುರಿಯನ್ನು ಹೊಂದಿರಬೇಕು, ಜತೆಗೆ ನ್ಯಾಯಯುತ ಮತ್ತು ಮಾನವೀಯ ಸಮಾಜ ಹಾಗೂ ಚೈತನ್ಯಶೀಲ ಪ್ರಜಾಪ್ರಭುತ್ವವನ್ನು
ಹೊಂದಿರಬೇಕು ಎಂಬುದಾಗಿದೆ. ಈ ಒಮ್ಮತದೊಳಗೆ ಅನೇಕ ವ್ಯತ್ಯಾಸಗಳು ಇವೆ. ಉದಾಹರಣೆಗೆ, ಸ್ವಯಂ ಸಾಕಾರ ಮತ್ತು ಪೌರತ್ವ, ಶಿಕ್ಷಣದ
‘ಆರ್ಥಿಕ ಗುರಿಗಳು’ ಮತ್ತು ವಿದ್ಯಾರ್ಥಿಗಳನ್ನು ಉದ್ಯೋಗಗಳಿಗೆ ಸಿದ್ಧಪಡಿಸುವುದು ಇವು ಪರಸ್ಪರ ವೈರುಧ್ಯವನ್ನು ಹೊಂದಿದ್ದು ಇವುಗಳಿಗೆ ಅತ್ಯಂತ
ಕನಿಷ್ಠ ಪ್ರಾಮುಖ್ಯವನ್ನು ನೀಡಲಾಗುತ್ತಿದೆ ಮತ್ತು ಇದು ವ್ಯವಸ್ಥಿತವಾಗಿ ನಡೆಲಾಗುತ್ತಿರುವ ವಂಚನೆಯಂತೆ ತೋರುತ್ತದೆ.

ಏಕೆ? ಏಕೆಂದರೆ ಈ ಎಲ್ಲ ಇತರ ಕಲಿಕೆಯು ವಿದ್ಯಾರ್ಥಿಗಳನ್ನು ಉದ್ಯೋಗಕ್ಕೆ ತಯಾರು ಮಾಡುತ್ತದೆ ಮತ್ತು ವೃತ್ತಿ ಶಿಕ್ಷಣ ಎಂಬುದು ಶಿಕ್ಷಣವನ್ನು ನಿಯಂತ್ರಿಸಲು ‘ಮಾರುಕಟ್ಟೆ’ಗೆ ಲಭ್ಯವಿರುವ ಬೆಣೆಯ ಚೂಪಾಗಿರುವ ತುದಿಯ ಭಾಗವಾಗಿದೆ. ಹಲವರಿಗೆ ಅಸ್ಪಷ್ಟವಾಗಿ ಮತ್ತು ಇನ್ನು ಕೆಲವರಿಗೆ ಸ್ಪಷ್ಟವಾಗಿ ವೃತ್ತಿ ಶಿಕ್ಷಣವು ಸಾಕಷ್ಟು ಬೌದ್ಧಿಕ ಅಂಶಗಳನ್ನು ಒಳಗೊಂಡಿಲ್ಲ. ಹಾಗಾದರೆ, ಎನ್‌ಸಿಎಫ್ ನಲ್ಲಿ ವೃತ್ತಿ ತರಬೇತಿ ಶಿಕ್ಷಣವನ್ನು ಹೇಗೆ ಸಂಯೋ ಜಿಸಲಾಗಿದೆ? ಎಲ್ಲ ವಿದ್ಯಾರ್ಥಿಗಳು ಶಾಲಾ ಶಿಕ್ಷಣದ ಆರಂಭಿಕ ಹಂತ ದಿಂದಲೂ ವೃತ್ತಿ ತರಬೇತಿ ಶಿಕ್ಷಣವನ್ನು ಪಡೆಯುತ್ತಾರೆ. ಇದು ಬುನಾದಿ ಮತ್ತು ಪೂರ್ವಸಿದ್ಧತಾ ಹಂತಗಳಲ್ಲಿ (೫ನೇ ತರಗತಿಯವರೆಗೆ) ವೃತ್ತಿ ಶಿಕ್ಷಣವು ಆಯಾ ವಯಸ್ಸಿಗೆ- ಸೂಕ್ತ ಸಾಮರ್ಥ್ಯಗಳನ್ನು ಅಭಿವೃದ್ಧಿಪಡಿಸುತ್ತದೆ, ಈ ಮೂಲಕ ಅದು ನಂತರ ಕೈಗೊಳ್ಳುವ ಯಾವುದೇ ಕೆಲಸಕ್ಕೆ ಬೆಂಬಲ ನೀಡುತ್ತದೆ.

ಉದಾಹರಣೆಗೆ, ಸುರಕ್ಷಿತ ಸಾಧನದ ಮೇಲೆ ನಿಯಂತ್ರಣ, ಅಥವಾ ಏಕಾಗ್ರತೆ ಮತ್ತು ಯಾವುದೇ ಕೆಲಸವನ್ನು ಯಾವಾಗಲೂ ಸಂಪೂರ್ಣಗೊಳಿಸಲು
ನೋಡುವುದು, ಅಥವಾ ಆಟ ಮತ್ತು ಇತರ ಚಟುವಟಿಕೆಗಳ ಮೂಲಕ ಕಲಿಯುವಿಕೆಯನ್ನು ಉತ್ತಮಗೊಳಿಸುವುದು ಇತ್ಯಾದಿ. ಮಾಧ್ಯಮಿಕ ಹಂತದಲ್ಲಿ ಎಂದರೆ ೬ರಿಂದ ೮ನೇ ತರಗತಿಯ ವೇಳೆಗೆ – ವಿದ್ಯಾರ್ಥಿಗಳು ಪ್ರಾಜೆಕ್ಟ್-ಆಧರಿತ ಅಧ್ಯಯನದ ಮೂಲಕ ಇನ್ನೂ ಹೆಚ್ಚಿನ ಹಂತದ ಕೆಲಸದಲ್ಲಿ ತೊಡಗಿಸಿ ಕೊಳ್ಳುತ್ತಾರೆ, ಇದು ವಿವಿಧ ವೃತ್ತಿ ಸಂಬಂಧಿ ಕೌಶಲಗಳ ಕಲಿಕೆಗೆ ಅಡಿಪಾಯವನ್ನು ನಿರ್ಮಿಸುತ್ತದೆ.

೯ ಮತ್ತು ೧೦ನೇ ತರಗತಿಗಳಲ್ಲಿ ಎಲ್ಲ ವಿದ್ಯಾರ್ಥಿಗಳು ಕೆಲವು ನಿರ್ದಿಷ್ಟವಾಗಿರುವ ವೃತ್ತಿಗಳನ್ನು ಕಲಿಯುತ್ತಾರೆ. ೬ರಿಂದ ೧೦ನೇ ತರಗತಿಗಳ ಉದ್ದಕ್ಕೂ-
ವೇಳಾಪಟ್ಟಿಯಲ್ಲಿ ಗಣಿತ ಅಥವಾ ವಿಜ್ಞಾನದಂಥ ಇತರ ವಿಷಯಗಳಂತೆಯೇ ವೃತ್ತಿ ತರಬೇತಿ ಶಿಕ್ಷಣ ಕೂಡ ಸಮಾನ ಸಮಯಾವಕಾಶದೊಂದಿಗೆ
ಪ್ರಾಮುಖ್ಯವನ್ನು ಪಡೆದಿರುತ್ತದೆ; ಈ ವಿಷಯಕ್ಕೆ ಸಂಬಂಧಿಸಿದಂತೆ ೧೦ನೇ ತರಗತಿಯಲ್ಲಿ ಮಂಡಳಿ ಪರೀಕ್ಷೆಗಳನ್ನು ನಡೆಸಲಾಗುತ್ತಿದ್ದು ಅದು ಸೂಕ್ತ ವಾಗಿ ಮೌಲ್ಯಮಾಪನ ಪ್ರಕ್ರಿಯೆಗೂ ಒಳಗಾಗುತ್ತದೆ.

೧೧ ಮತ್ತು ೧೨ನೇ ತರಗತಿಗಳಲ್ಲಿ ವಿದ್ಯಾರ್ಥಿಗಳು ಈ ವೃತ್ತಿ ತರಬೇತಿ ಶಿಕ್ಷಣಕ್ಕೆ ಸಂಬಂಧಿಸಿದ ಯಾವುದೇ ವಿಷಯದಲ್ಲಿ ಪರಿಣತಿ ಪಡೆಯುವ ಆಯ್ಕೆ ಯನ್ನು ಆರಿಸಿಕೊಳ್ಳಬಹುದು ಅಥವಾ ಶಾಲಾ ಶಿಕ್ಷಣ ಹಾಗೂ ವೃತ್ತಿ ತರಬೇತಿ ಶಿಕ್ಷಣ ಎರಡನ್ನೂ ಆರಿಸಿಕೊಳ್ಳಬಹುದು ಅಥವಾ ಯಾವುದನ್ನೂ ಆರಿಸಿ ಕೊಳ್ಳದೆಯೂ ಇರಬಹುದು. ವೃತ್ತಿ ತರಬೇತಿ ಶಿಕ್ಷಣವನ್ನು ಪರಿಣಾಮಕಾರಿಯಾಗಿ ಪಡೆಯುವುದು ಇತರ ಕಲಿಕಾ ವಿಷಯಗಳಾದ ಭಾಷೆ, ವಿಜ್ಞಾನ, ಸಮಾಜ ವಿಜ್ಞಾನ ಮತ್ತು ಗಣಿತ ಇವುಗಳಲ್ಲಿ ಪರಿಣಾಮಕಾರಿಯಾಗಿ ಶಿಕ್ಷಣ ವನ್ನು ಪಡೆಯುವುದರಿಂದ ಮಾತ್ರ ಸಾಧ್ಯ.

ವೃತ್ತಿ ಶಿಕ್ಷಣದಲ್ಲಿ ಅವುಗಳನ್ನು ಬಳಸಿದಾಗ ಮಾತ್ರ ಈ ಇತರೆ ಕಲಿಕಾ ವಿಷಯಗಳು ಅವುಗಳ ಬಳಕೆಯಿಂದಾಗಿ ಇನ್ನಷ್ಟು ಬಲಗೊಳ್ಳುತ್ತವೆ. ಈ ವೃತ್ತಿ
ಗಳನ್ನು ನಿರ್ವಹಿಸುವಲ್ಲಿ ಅಭಿವೃದ್ಧಿ ಪಡಿಸಲಾಗುವ ಸಾಮರ್ಥ್ಯಗಳು, ಶಾಲಾ ಶಿಕ್ಷಣವು ಅಭಿವೃದ್ಧಿಪಡಿಸುವ ಇತರೆ ಸಾಮರ್ಥ್ಯಗಳಾದ ಜ್ಞಾನ ಮತ್ತು
ಮೌಲ್ಯಗಳೊಂದಿಗೆ ಆಳವಾಗಿ ಸಂಯೋಜಿಸಲ್ಪಡ ಬೇಕು. ಉದಾಹರಣೆಗೆ, ವಿಮರ್ಶಾತ್ಮಕ ಚಿಂತನೆ, ಸಂವಹನ ಮತ್ತು ಕಲಿಕೆಯಲ್ಲಿ ತೊಡಗುವುದು
ಇತ್ಯಾದಿ. ಒಟ್ಟಾರೆಯಾಗಿ ಶಾಲಾ ಶಿಕ್ಷಣ ಅಭಿವೃದ್ಧಿ ಪಡಿಸುವ ಈ ಸಾಮರ್ಥ್ಯಗಳು ವೃತ್ತಿ ಜಗತ್ತಿನಲ್ಲಿಯೂ ಸಮಾನವಾಗಿ ಮುಖ್ಯವಾಗಿದೆ.

ಎನ್ ಸಿಎಫ್ ಈ ಎರಡು ಅವಶ್ಯಕತೆಗಳ ಸಮತೋಲನವನ್ನು ಕಾಪಾಡುತ್ತದೆ. ಮೊದಲನೆಯದಾಗಿ, ವಿವಿಧ ರೀತಿಯ ವೃತ್ತಿಗಳ ಲಭ್ಯತೆ ಮತ್ತು ಸ್ಥಳೀಯ ಆದ್ಯತೆಗಳ ಹೊರತಾಗಿಯೂ, ನಿರ್ದಿಷ್ಟವಾಗಿ ಶಾಲೆಯಲ್ಲಿ ನಿಖರವಾಗಿ ಯಾವ ವೃತ್ತಿಗಳನ್ನು ಕಲಿಸಬೇಕು ಎಂಬುದನ್ನು ನಿರ್ಧರಿಸಲು ಎನ್‌ಸಿಎಫ್ ಗೆ ಸಾಧ್ಯವಾಗುವುದಿಲ್ಲ. ಆದರೂ, ಇದು ಎಲ್ಲ ವಿದ್ಯಾರ್ಥಿಗಳಿಗೆ ಯಾವುದೇ ವೃತ್ತಿಯನ್ನು ಕಲಿಯಲು ಬೇಕಾಗಿರುವ ರೂಪುರೇಷೆಗಳನ್ನು ಒದಗಿಸುತ್ತದೆ. ಕೆಲಸಕ್ಕೆ ಸಂಬಂಧಿಸಿದ ಕೆಲವೊಂದು ನಿರ್ದಿಷ್ಟ ವಿಧಾನವನ್ನು ಬಳಸಿಕೊಂಡು ‘ವೃತ್ತಿಯ ರೂಪ’ಗಳನ್ನು ರೂಪಿಸಲಾಗುತ್ತದೆ. ಇದು ಮೂಲಭೂತವಾಗಿ ಕೆಲವು ಸಾಮಾನ್ಯ ಅಂಶಗಳನ್ನು ಹೊಂದಿರುವ ಒಂದೇ ರೀತಿಯ ಸಾಮರ್ಥ್ಯಗಳು ಮತ್ತು ಜ್ಞಾನದ ಅಗತ್ಯವಿರುವ ವೃತ್ತಿಗಳನ್ನು ಒಟ್ಟಿಗೆ ಒಂದು ಗುಂಪಿ ನಲ್ಲಿ ಒಳಗೊಳ್ಳುತ್ತದೆ.

ಇದು ೩ರಿಂದ ೮ನೇ ತರಗತಿಯವರೆಗೆ ಉತ್ಪಾದಕ ಕೆಲಸಕ್ಕೆ ವಿಶಾಲವಾದ ನೆಲೆಯನ್ನು ಅಭಿವೃದ್ಧಿಪಡಿಸಲು ಸಹಾಯ ಮಾಡುತ್ತದೆ. ಜತೆಗೆ ೯ರಿಂದ ೧೨ನೇ ತರಗತಿಯವರೆಗೆ ತಮ್ಮ ಆಯ್ಕೆಯ ವೃತ್ತಿಯಲ್ಲಿ ಪರಿಣತಿಯನ್ನು ಪಡೆಯಲು ಅನುವು ಮಾಡಿಕೊಡುತ್ತದೆ. ಇಲ್ಲಿ ವೃತ್ತಿಯನ್ನು ೩ ವಿಭಾಗಗಳಾಗಿ ವಿಂಗಡಿ ಸಿದ್ದು ಅವು ಇಂತಿವೆ: ಜೈವಿಕ ಕಾರ್ಯವಿಧಾನ, ವಸ್ತುಗಳು ಮತ್ತು ಯಂತ್ರಗಳೊಂದಿಗೆ ಕೆಲಸ ಮಾಡುವುದು ಮತ್ತು ಮಾನವ ಸಂಬಂಧಿ ಸೇವೆಗಳನ್ನು ಒದಗಿಸುವ ಕೆಲಸ. ಇದರೊಂದಿಗೆ, ನಿರ್ದಿಷ್ಟ ವೃತ್ತಿಗಳ ಆಯ್ಕೆಯನ್ನು ಸ್ಥಳೀಯವಾಗಿ ಮಾಡಬೇಕು. ವಿದ್ಯಾರ್ಥಿಗಳ ಆಕಾಂಕ್ಷೆಗಳು, ಸ್ಥಳೀಯವಾಗಿ ವೃತ್ತಿಯ ಪ್ರಸ್ತುತತೆ ಮತ್ತು ಅವಕಾಶಗಳ ವಾಸ್ತವತೆ, ಹೊಸ ಮತ್ತು ಉದಯೋನ್ಮುಖ ವೃತ್ತಿಗಳು ಇವುಗಳನ್ನು ಗಣನೆಗೆ ತೆಗೆದುಕೊಳ್ಳಬೇಕು.

ವೃತ್ತಿ ತರಬೇತಿ ಶಿಕ್ಷಣಕ್ಕೆ ಸಂಬಂಧಿಸಿದಂತೆ ಎನ್ ಸಿಎಫ್ ನ ವಿಧಾನವು ಕೆಲವು ಇತರ ಪ್ರಮುಖ ಅಂಶಗಳನ್ನು ಪರಿಗಣಿಸುತ್ತದೆ; ವೃತ್ತಿಗಳಿಗೆ ಸಂಬಂಽಸಿ
ದಂತೆ ಸಾಮರ್ಥ್ಯಗಳಷ್ಟೇ ಅಲ್ಲದೆ, ಜ್ಞಾನ ಮತ್ತು ಮೌಲ್ಯಗಳು ಕೂಡಾ ಅಗತ್ಯವಿರುತ್ತದೆ. ಇವೆಲ್ಲವನ್ನೂ ವೃತ್ತಿ ಶಿಕ್ಷಣ ಅಭಿವೃದ್ಧಿಪಡಿಸುತ್ತದೆ. ವೃತ್ತಿ ತರಬೇತಿ ಶಿಕ್ಷಣವನ್ನು ಕೌಶಲ ತರಬೇತಿಯೊಂದಿಗೆ ಸಂಯೋಜಿಸಬಾರದು, ಏಕೆಂದರೆ ಅದರ ವ್ಯಾಪ್ತಿ ಇದಕ್ಕಿಂತ ಕಿರಿದಾದುದು. ಸಾಮರ್ಥ್ಯಗಳು ವಿಶಾಲವಾದ, ಆಳವಾದ ಮತ್ತು ಸಂಕೀರ್ಣವಾದ ಮಾನವ ಸಾಮರ್ಥ್ಯ ಗಳಾಗಿದ್ದು, ಅನೇಕ ಕೌಶಲಗಳಿಂದ ರೂಪುಗೊಂಡಿವೆ.

ಉದಾಹರಣೆಗೆ, ಬೆಳೆಗಳಿಗೆ ಸೂಕ್ತವಾದ ನೀರಾವರಿ ಎಂದರೆ ಭೂಪ್ರದೇಶ ಮತ್ತು ಅದರ ಇಳಿಜಾರು ಗಳನ್ನು ಅರ್ಥೈಸಿಕೊಳ್ಳುವ ಕೌಶಲಗಳು, ಕಂದಕ
ಮತ್ತು ಚಾನಲ್‌ಗಳನ್ನು ನಿರ್ಮಿಸುವುದು, ಮತ್ತು ಯಾವಾಗ ಮತ್ತು ಎಷ್ಟು ನೀರು ಹಾಕಬೇಕು ಎಂಬುದನ್ನು ಅರ್ಥಮಾಡಿಕೊಳ್ಳುವ ಸಾಮರ್ಥ್ಯ
ಇತ್ಯಾದಿಗಳನ್ನು ಒಳಗೊಳ್ಳುತ್ತದೆ. ಎಲ್ಲ ವಿದ್ಯಾರ್ಥಿಗಳು ಪ್ರಾಥಮಿಕ ವಲಯದಿಂದ ವಿವಿಧ ಶ್ರೇಣಿಯ ಎಲ್ಲ ಸೇವೆಗಳಿಗೆ ತೆರೆದು ಕೊಳ್ಳಬೇಕು. ಇದರಿಂದ ತರುವಾಯ ವೃತ್ತಿಗಳ ಆಯ್ಕೆಗೆ ನೆಲೆಯನ್ನು ಸೃಷ್ಟಿಸುವುದು ಸಾಧ್ಯವಾಗುವುದಲ್ಲದೆ ಎಲ್ಲ ರೀತಿಯ ವೃತ್ತಿಗೆ ಘನತೆಯನ್ನು ಸ್ಥಾಪಿಸಲು ಸಹ ಪ್ರಯತ್ನಿಸಿ ದಂತಾಗುತ್ತದೆ.

ವೃತ್ತಿ ತರಬೇತಿ ಶಿಕ್ಷಣವು ಸ್ವತಃ ವಿದ್ಯಾರ್ಥಿಗಳು ತಾವು ಕೈಯಿಂದ ಕೆಲಸಮಾಡುವುದನ್ನು ಮತ್ತು ಅದನ್ನು ಗೌರವಿಸುವುದನ್ನು ಕಲಿಸಬೇಕು. ನಮ್ಮ ಲಕ್ಷಾಂತರ ಮಕ್ಕಳು ಈಗಾಗಲೇ ತಮ್ಮ ಮನೆಗಳಲ್ಲಿ ಮತ್ತು ಸಮುದಾಯಗಳಲ್ಲಿ ಹಲವು ರೀತಿಯ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ. ಅಂಥ ಜೀವನಾನುಭವ ಅಮೂಲ್ಯವಾಗಿದೆ. ಇಂಥ ವಿದ್ಯಾರ್ಥಿಗಳು ಹೊಂದಿರುವ ಜ್ಞಾನ ಮತ್ತು ಸಾಮರ್ಥ್ಯಗಳನ್ನು ಸಂಪನ್ಮೂಲವಾಗಿ ಬಳಸಬಹುದು. ಅಸ್ತಿತ್ವದಲ್ಲಿರುವ ಸಾಮಾಜಿಕ ಅಸಮಾನತೆಗಳನ್ನು ಪ್ರಜ್ಞಾಪೂರ್ವಕವಾಗಿ ಪರಿಹರಿಸಬೇಕು. ಶಾಲೆಗಳು ನಿರ್ದಿಷ್ಟ ರೀತಿಯ ಕೆಲಸವನ್ನು, ನಿರ್ದಿಷ್ಟ ಸಮುದಾಯಗಳು ಅಥವಾ ಲಿಂಗಗಳಿಗೆ ವಹಿಸುವುದನ್ನು ತಪ್ಪಿಸಬೇಕು.

ಶಾಲಾ ಶಿಕ್ಷಣವು ಸಮಾನತೆಯನ್ನು ಸಾಽಸುವಂತಾಗಬೇಕಲ್ಲದೆ ಅಸಮಾನತೆಯನ್ನು ಪುನರುತ್ಪಾದಿಸುವಂತಾಗಬಾರದು. ಜತೆಗೆ ಇತರ ವಿಷಯಗಳ ಶಿಕ್ಷಕರಿಗೆ ತರಬೇತಿ ನೀಡುವ ಮೂಲಕ ಅಸ್ತಿತ್ವದಲ್ಲಿರುವ ಶಾಲೆಯ ಮತ್ತು ಸಮುದಾಯದ ಸಂಪನ್ಮೂಲಗಳನ್ನು ಬಳಸಿಕೊಂಡು ನಮ್ಮ ಶಾಲೆಗಳ ಪ್ರಸಕ್ತ
ವಾಸ್ತವ ಸ್ಥಿತಿಗೆ ಹೊಂದಿಕೊಳ್ಳುವಂತೆ ವೃತ್ತಿ ತರಬೇತಿ ಶಿಕ್ಷಣವನ್ನು ಕಾರ್ಯಗತಗೊಳಿಸಬೇಕು. ಉತ್ತಮ ಶಾಲಾ ಶಿಕ್ಷಣವು ಉತ್ತಮ ಮಾನವರನ್ನು ಮತ್ತು
ಉತ್ತಮ ಸಮಾಜವನ್ನು ನಿರ್ಮಿಸಬೇಕು- ಆರ್ಥಿಕ ಯೋಗಕ್ಷೇಮವು ಅದರ ಒಂದು ಅವಿಭಾಜ್ಯ ಅಂಗವಾಗಿದೆ.

ಎನ್‌ಸಿಎಫ್ ಈ ಎಲ್ಲ ವಾಸ್ತವವನ್ನು ಗಮನದಲ್ಲಿರಿಸಿಕೊಂಡು ಶಾಲೆಗಳಲ್ಲಿ ಅದಕ್ಕೆ ಸೂಕ್ತ ಸ್ಥಾನವನ್ನು ಕಲ್ಪಿಸುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತದೆ.

(ಲೇಖಕರು ಅಜೀಂ ಪ್ರೇಮ್‌ಜಿ ಯೂನಿವರ್ಸಿಟಿ ಮತ್ತು ಫೌಂಡೇಷನ್‌ನ ಸಿಇಒ)