ಮಾದಕ ವಸ್ತುಗಳ ವಿರುದ್ಧ ಸಮರ ಸಾರಿರುವ ಬೆಂಗಳೂರಿನ ಸಿಸಿಬಿ ಪೊಲೀಸರು ವಿದೇಶಿ ಮೂಲದವರು ಸೇರಿದಂತೆ ನಾಲ್ವರು ಡ್ರಗ್ ಪೆಡ್ಲರ್ಗಳನ್ನು ಬಂಧಿಸಿ, ೨.೩೫ ಕೋಟಿ ರುಪಾಯಿ ಮೌಲ್ಯದ ಮಾದಕ ವಸ್ತುಗಳನ್ನು ಅವರಿಂದ ಜಪ್ತಿ ಮಾಡಿರುವುದು ವರದಿಯಾಗಿದೆ. ಕೇವಲ ಒಂದು ಪ್ರಕರಣದಲ್ಲಿ ಈ ಮಟ್ಟದ ಮಾದಕ ದ್ರವ್ಯಗಳು ಸಿಕ್ಕಿವೆಯೆಂದರೆ, ಈ ದುರುಳರ ಜಾಲ ಎಲ್ಲೆಲ್ಲಿ ಹರಡಿರಬಹುದು ಹಾಗೂ ಅವರು ಮಾರುವ ಅಮಲುಕಾರಕಗಳು ಎಷ್ಟೆಲ್ಲಾ ಜನರನ್ನು ವ್ಯಸನಿಗಳನ್ನಾಗಿ ಸಿರಬಹುದು ಎಂದು ತಲ್ಲಣಗೊಳ್ಳುವಂತಾಗುತ್ತದೆ.
ಬೆಂಗಳೂರಿನ ಆರ್ ಎಂಸಿ ಯಾರ್ಡ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಮತ್ತೊಂದು ಪ್ರಕರಣದಲ್ಲಿ ವ್ಯಕ್ತಿಯೊಬ್ಬ ಅಂಚೆಯ ಮೂಲಕ ‘ಹೈಡ್ರೋ ಗಾಂಜಾ’ ತರಿಸಿಕೊಂಡು ಮಾರಾಟ ಮಾಡುತ್ತಿದ್ದ ಆಘಾತಕಾರಿ ಸಂಗತಿ ಬಯಲಾಗಿದೆ. ಮಾದಕ ದ್ರವ್ಯಗಳ ಮಾರಾಟ ಜಾಲವು ತನ್ನ ಕುತ್ಸಿತ ಚಿಂತನೆಯ ನೆರವೇರಿಕೆಗೆ ಚಿತ್ರವಿಚಿತ್ರ ಮಾರ್ಗೋಪಾಯಗಳನ್ನು ನೆಚ್ಚಿರುವುದು ಹೊಸದೇನಲ್ಲ. ಕಾಲಾನುಕಾಲಕ್ಕೆ ಇಂಥ ಮಾರ್ಗಗಳನ್ನು ಮುಚ್ಚಿ ದುರುಳರನ್ನು ಕಾನೂನು ಕ್ರಮಕ್ಕೆ ಒಳಪಡಿಸದಿದ್ದರೆ, ಗಣನೀಯ ಸಂಖ್ಯೆಯ ಜನರ ದೈಹಿಕ ಮತ್ತು ಮಾನಸಿಕ ಸ್ವಾಸ್ಥ್ಯವನ್ನು ಮಾದಕ ದ್ರವ್ಯಗಳು ಆಪೋಶನ ತೆಗೆದು ಕೊಂಡು ಬಿಡುವ ಎಲ್ಲಾ ಸಾಧ್ಯತೆಗಳಿವೆ.
ನಿರುದ್ಯೋಗ, ಹಣದ ಅಭಾವ, ಮಿತಿಮೀರಿದ ಸಾಲ, ಪ್ರೇಮವೈಫಲ್ಯ ಇವೇ ಮೊದಲಾದ ಕಾರಣಗಳಿಂದಾಗಿ ಹತಾಶರಾದವರು, ಆ ನೋವಿನಿಂದ ಕೆಲ ಕಾಲವಾದರೂ ದೂರವಿರಲು ಅಪ್ಪುವುದೇ ಕುಡಿತದಂಥ ನಶೆಯ ಮಾರ್ಗವನ್ನು. ಅದು ಮತ್ತೂ ಮುಂದುವರಿದು ಮಾದಕ ದ್ರವ್ಯಗಳ ಬಿಗಿಮುಷ್ಟಿಗೆ ಅವರು ಸಿಲುಕಿಬಿಟ್ಟರಂತೂ ಕಥೆ ಮುಗಿದಂತೆಯೇ; ಕಾರಣ, ದಿನಗಳೆದಂತೆ ಆ ಕೂಪದ ಆಳಕ್ಕೇ ಅವರು ಇಳಿಯುತ್ತಾ ಹೋಗುವುದು ಕಹಿವಾಸ್ತವ. ಯುವಪೀಳಿಗೆಯೇ ಇಂಥ ಡ್ರಗ್ ಪೆಡ್ಲರ್ಗಳ ಪ್ರಮುಖ ಗುರಿಯಾಗಿರುವುದು ಮತ್ತಷ್ಟು ಆತಂಕದ ಸಂಗತಿ.
ಆದ್ದರಿಂದ, ಈ ಪಿಡುಗಿನಿಂದ ಸಾಮಾಜಿಕ ಸ್ವಾಸ್ಥ್ಯಕ್ಕೆ ಉಂಟಾಗುತ್ತಿರುವ ಧಕ್ಕೆಯನ್ನು ಮನಗಂಡು, ಮಾದಕ ವಸ್ತುಗಳ ಮಾರಾಟಗಾರರ ಹೆಡೆಮುರಿ
ಕಟ್ಟಬೇಕಿದೆ. ಇಲ್ಲವಾದಲ್ಲಿ ರಾಜ್ಯವು ಮತ್ತೊಂದು ‘ಉಡ್ತಾ ಪಂಜಾಬ್’ ಆದೀತು.