Friday, 13th December 2024

ಎರಡು ವಿಭಿನ್ನ ಕ್ಷೇತ್ರಗಳ ಉದಾತ್ತ ಸಾಧಕರು !

ಸಂಗತ

ಡಾ.ವಿಜಯ್ ದರಡಾ

ಪದ್ಮವಿಭೂಷಣ ಫಾಲಿ ಎಸ್. ನಾರಿಮನ್ ಅವರು ನ್ಯಾಯಾಂಗ ಕ್ಷೇತ್ರದಲ್ಲಿ ಬಹುದೊಡ್ಡ ಹೆಸರು. ಪದ್ಮಶ್ರೀ ಅಮೀನ್ ಸಯಾನಿ ರೇಡಿಯೋ ನಿರೂಪಕರಾಗಿ ದೇಶಾದ್ಯಂತ ಚಿರಪರಿಚಿತರು. ಇಬ್ಬರೂ ಬೇರೆ ಬೇರೆ ರೀತಿಯ ವೃತ್ತಿಯಲ್ಲಿದ್ದರೂ ತಮ್ಮ ವಿಶಿಷ್ಟ ಧ್ವನಿಯಿಂದಾಗಿಯೇ ತಂತಮ್ಮ ಕ್ಷೇತ್ರದಲ್ಲಿ, ಇನ್ನಾರೂ ಏರಲು ಸಾಧ್ಯವಾಗದ ಎತ್ತರಕ್ಕೆ ಏರಿದರು.

ಕಳೆದ ವಾರ ನಾವು ಇಬ್ಬರಿಗೆ ಈ ಲೋಕದಿಂದ ವಿದಾಯ ಹೇಳಿದೆವು. ಇಬ್ಬರೂ ತಮ್ಮ ತಮ್ಮ ಕ್ಷೇತ್ರದಲ್ಲಿ ಬಹುದೊಡ್ಡ ಸಾಧನೆ ಮಾಡಿದವರು. ಒಬ್ಬರು ಫಾಲಿ ಎಸ್. ನಾರಿಮನ್. ಪದ್ಮವಿಭೂಷಣ ಪುರಸ್ಕೃತ ಸಂವಿಧಾನ ತಜ್ಞ. ಅವರನ್ನು ಕಾನೂನು ಲೋಕದ ಮಹರ್ಷಿ ಎಂದೇ ಕರೆಯಲಾಗುತ್ತಿತ್ತು. ಇನ್ನೊಬ್ಬರು ಅಮೀನ್ ಸಯಾನಿ. ಪದ್ಮಶ್ರೀ ಪುರಸ್ಕೃತ ಸಾಧಕ. ರೇಡಿಯೋ ಲೋಕದ ವೆಲ್ವೆಟ್ ವಾಯ್ಸ್ ಎಂದೇ ಅವರನ್ನು ಕರೆಯಲಾಗುತ್ತಿತ್ತು.
ಇಬ್ಬರೂ ಬೇರೆ ಬೇರೆ ರೀತಿಯ ವೃತ್ತಿಯಲ್ಲಿದ್ದರೂ ಅವರಲ್ಲಿ ಒಂದು ಗುಣ ಸಾಮಾನ್ಯವಾಗಿತ್ತು.

ಅದು- ವಿಶಿಷ್ಟ ಧ್ವನಿ. ಈ ಅನುಪಮ ಗುಣವೇ ಅವರಿಬ್ಬರನ್ನೂ ಅವರವರ ಕ್ಷೇತ್ರದಲ್ಲಿ ಇನ್ನಾರೂ ಏರಲು ಸಾಧ್ಯವಾಗದ ಎತ್ತರಕ್ಕೆ ಏರಿಸಿತು. ಅವರಿಬ್ಬರ ಬದುಕಿನ ವಿವರಗಳ ಮೇಲೆ ಕಣ್ಣಾಡಿಸಿದರೆ ನಮಗೆ ಅನೇಕ ಅಮೂಲ್ಯ ಜೀವನಪಾಠಗಳು ಸಿಗುತ್ತವೆ. ವೈಯಕ್ತಿಕ ಜೀವನದಲ್ಲೂ, ವೃತ್ತಿಜೀವನದಲ್ಲೂ ಎತ್ತರಕ್ಕೆ ಏರ ಬೇಕು ಅಂದರೆ ಏನು ಮಾಡಬೇಕು ಎಂಬ ಸಂದೇಶ ಅವರ ಬದುಕಿನಲ್ಲಿ ಅಡಗಿದೆ. ಅದೃಷ್ಟವಶಾತ್ ನನಗೆ ಈ ಇಬ್ಬರೂ ಸಾಧಕರ ಜತೆ
ವೈಯಕ್ತಿಕ ಸ್ನೇಹವಿತ್ತು. ಅವರ ಜತೆ ಬಹಳ ಹತ್ತಿರ ದಿಂದ ಕಾಲ ಕಳೆಯುವ ಅವಕಾಶ ನನ್ನದಾಗಿತ್ತು.

ಹೀಗಾಗಿ ಇಬ್ಬರಿಂದಲೂ ನಾನು ಬಹಳಷ್ಟನ್ನು ಕಲಿತಿದ್ದೇನೆ. ಪದ್ಮವಿಭೂಷಣ ಫಾಲಿ ನಾರಿಮನ್ ಅವರು ಸಂಸತ್ ಸದಸ್ಯ ಕೂಡ ಆಗಿದ್ದರು. ಆ ಸಮಯದಲ್ಲಿ ನನ್ನ ಜತೆ ತುಂಬಾ ಹತ್ತಿರದ ಸಂಬಂಧ ಹೊಂದಿದ್ದರು. ನನ್ನ ‘ರಿಂಗ್‌ಸೈಡ್’ ಪುಸ್ತಕಕ್ಕೆ ಅವರು ಬಹಳ ಉದಾರವಾಗಿ ಮುನ್ನುಡಿ ಬರೆದು ಕೊಟ್ಟಿದ್ದರು. ಕೊನೆಗೆ ಪುಸ್ತಕ ಬಿಡುಗಡೆ ಸಮಾರಂಭಕ್ಕೂ ಬಂದು ಶುಭ ಹಾರೈಸಿದ್ದರು. ಅವರ ಆಫೀಸಿಗೆ ಹೋದಾಗಲೆಲ್ಲ ನಾನೊಂದು ಸಂಗತಿಯನ್ನು ತುಂಬಾ ಕುತೂಹಲ ದಿಂದ ಗಮನಿಸುತ್ತಿದ್ದೆ. ಅವರ ಸುತ್ತ ಪುಸ್ತಕಗಳ ದೊಡ್ಡ ರಾಶಿಯೇ ಇರುತ್ತಿತ್ತು. ಅವರ ಪುಸ್ತಕ ಸಂಗ್ರಹ ಬಹಳ ದೊಡ್ಡದು.

ಕಾನೂನಿಗೆ ಸಂಬಂಧಿಸಿದ ಯಾವುದೇ ವಿಷಯದಲ್ಲಿ ಅವರು ಇಳಿಯುವಷ್ಟು ಆಳಕ್ಕೆ ಇನ್ನಾರೂ ಇಳಿಯಲು ಸಾಧ್ಯವಿರಲಿಲ್ಲ. ಈ ವಿಷಯದಲ್ಲಿ ಎಲ್ಲಾ ಕಾನೂನು ತಜ್ಞರನ್ನೂ ಅವರು ಮೀರಿಸಿದ್ದರು. ಫಾಲಿ ನಾರಿಮನ್ ಹೆಚ್ಚುಕಮ್ಮಿ ಒಬ್ಬ ಸಂತನಂತೆ ಬದುಕಿದವರು. ಅವರೊಬ್ಬ ಪರಮ ಬುದ್ಧಿವಂತ
ಸಂತ. ಕಾನೂನು ಲೋಕದ ಅಷ್ಟೂ ಜ್ಞಾನವನ್ನು ಅರೆದು ಕುಡಿದಿದ್ದರು. ಭಾರತೀಯ ಸಂವಿಧಾನವನ್ನು, ಅದರಲ್ಲಿ ಹೇಳಿರುವ ನಾಗರಿಕರ ಮೂಲ
ಭೂತ ಹಕ್ಕುಗಳನ್ನು, ರಾಜ್ಯ ಸರಕಾರಗಳಿಗೆ ಇರುವ ಅಧಿಕಾರವನ್ನು ಅವರು ವಿಶ್ಲೇಷಿಸುವ ರೀತಿಯಲ್ಲಿ ಬೇರಾರೂ ವಿಶ್ಲೇಷಣೆ ಮಾಡಲು ಸಾಧ್ಯವಿರಲಿಲ್ಲ.

ಜನಸಾಮಾನ್ಯರ ಹಕ್ಕುಗಳ ವಿಷಯ ಬಂದಾಗ ಅವನ್ನು ರಕ್ಷಿಸಲು ಅವರು ಕಾನೂನಿನ ಚೌಕಟ್ಟಿನಲ್ಲಿ ಯಾವ ಹಂತಕ್ಕೆ ಬೇಕಾದರೂ ಹೋಗುತ್ತಿದ್ದರು.
ಜನರಿಗಿರುವ ಹಕ್ಕುಗಳನ್ನು ಅವರು ಯಾವುದೇ ವೇದಿಕೆಯಲ್ಲಿ ನಿಂತು ಧೈರ್ಯವಾಗಿ ಪ್ರತಿಪಾದಿಸುತ್ತಿದ್ದರು. ೧೯೭೨ರಲ್ಲಿ ಅವರನ್ನು ಭಾರತ ಸರಕಾರವು
ಹೆಚ್ಚುವರಿ ಸಾಲಿಸಿಟರ್ ಜನರಲ್ ಆಗಿ ನೇಮಿಸಿತ್ತು. ೧೯೭೫ರಲ್ಲಿ ಅಂದಿನ ಪ್ರಧಾನಿ ಇಂದಿರಾ ಗಾಂಧಿಯವರು ದೇಶದಲ್ಲಿ ತುರ್ತುಸ್ಥಿತಿ ಘೋಷಣೆ ಮಾಡಿ
ದಾಗ ಫಾಲಿ ನಾರಿಮನ್ ಅದನ್ನು ಬಹಿರಂಗವಾಗಿ ಟೀಕಿಸಿದರು. ತುರ್ತುಸ್ಥಿತಿ ಜಾರಿಗೊಳಿಸುವುದು ಅಸಾಂವಿಧಾನಿಕ ಹಾಗೂ ಜನರ ಮೂಲಭೂತ
ಹಕ್ಕುಗಳ ಉಲ್ಲಂಘನೆ ಎಂದು ಧೈರ್ಯವಾಗಿ ಹೇಳಿದರು.

ತುರ್ತುಸ್ಥಿತಿಯ ವಿರುದ್ಧ ಸುಪ್ರೀಂಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಲು ಅವರು ಸಿದ್ಧರಾಗಿದ್ದರು. ಆದರೆ ಸರಕಾರ ಅದಕ್ಕೆ ಅವಕಾಶ ನೀಡಲಿಲ್ಲ. ಅದನ್ನು ವಿರೋಧಿಸಿ ನಾರಿಮನ್ ತಮ್ಮ ಅತೃಪ್ತಿಯನ್ನು ಇಂಗ್ಲಿಷ್ ಪತ್ರಿಕೆಯೊಂದರಲ್ಲಿ ಲೇಖನದ ಮೂಲಕ ಪ್ರಕಟಿಸಿದರು. ಜತೆಗೆ, ಆಲ್ ಇಂಡಿಯಾ ರೇಡಿಯೋ ದಲ್ಲೂ ಇದರ ಬಗ್ಗೆ ಮಾತನಾಡಿ ಅಸಮಾಧಾನ ವ್ಯಕ್ತಪಡಿಸಿದರು. ಈಗ ನಿಮಗಿದು ವಿಶೇಷ ಅನ್ನಿಸಲಿಕ್ಕಿಲ್ಲ. ಆದರೆ ಆ ಸಮಯದಲ್ಲಿ ದೇಶದಲ್ಲಿ ಇಂದಿರಾ ಗಾಂಽಯನ್ನು ಯಾರಾದರೂ ಬಹಿರಂಗವಾಗಿ ವಿರೋಽಸುತ್ತಾರೆ ಅಂದರೆ ಅದು ಬಹಳ ದೊಡ್ಡ ವಿಷಯವಾಗಿತ್ತು. ನಾರಿಮನ್ ಅವರ ಈ ಕೆಚ್ಚೆದೆಯ ನಡೆಯು ಅವರಿಗೆ ಮಹಾನ್ ಧೈರ್ಯಶಾಲಿ ಎಂಬ ಖ್ಯಾತಿ ತಂದುಕೊಟ್ಟಿತು.

ನಾರಿಮನ್ ಅವರ ಬದುಕನ್ನು ಗಮನಿಸಿದವರು ಅವರೊಬ್ಬ ನಿರ್ಭೀತ ಮತ್ತು ಯಾರಿಗೂ ತಲೆಬಾಗದ ಅಪ್ರತಿಮ ಧೈರ್ಯಶಾಲಿ ಎಂದು ಹೊಗಳು ತ್ತಿದ್ದರು! ಧೈರ್ಯ ತೋರುವುದಾದರೆ ನಾರಿಮನ್‌ರಂತೆ ತೋರಬೇಕು ಎಂಬ ಉಕ್ತಿಯೇ ಹುಟ್ಟಿಕೊಂಡಿತ್ತು. ಆದರೆ ಈ ವ್ಯಕ್ತಿತ್ವದಿಂದಾಗಿಯೇ ಅವರು ಸಾಲಿಸಿಟರ್ ಜನರಲ್ ಹುದ್ದೆಗೆ ರಾಜೀನಾಮೆ ನೀಡಬೇಕಾಗಿ ಬಂದಿತು. ಅವರಿಗೆ ಸುಪ್ರೀಂಕೋರ್ಟ್‌ನಲ್ಲಿ ವಕೀಲಿಕೆ ಮಾಡುವುದಕ್ಕೆ ನಿಷೇಧ ಹೇರಲಾ ಯಿತು. ಆದರೆ ಇದ್ಯಾವುದಕ್ಕೂ ಅವರು ಜಗ್ಗಲಿಲ್ಲ. ತಮ್ಮ ಬದ್ಧತೆಯೇನಿದೆಯೋ ಅದನ್ನು ಪಾಲಿಸಿಯೇ ತೀರುತ್ತೇನೆಂದು ಶಪಥ ಮಾಡಿದರು.

ಹೀಗಾಗಿ ಸತ್ಯದ ಪರ ವಾಗಿ ಧ್ವನಿ ಎತ್ತುವುದನ್ನು ಅವರು ಬದುಕಿನ ಕೊನೆಯವರೆಗೂ ಮುಂದುವರಿಸಿದರು. ಆದ್ದರಿಂದಲೇ ಅವರು ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಬಹುದೊಡ್ಡ ಪ್ರತಿಪಾದಕ ಹಾಗೂ ಪ್ರಜಾಪ್ರಭುತ್ವದ ರಕ್ಷಕರಾಗಿ ಸದಾ ನಮ್ಮ ನೆನಪಿನಲ್ಲಿ ಉಳಿಯುತ್ತಾರೆ. ಅವರ ಮಗ ರೋಹಿಂಟನ್ ನಾರಿಮನ್ ಕೂಡ ತಂದೆಯ ಹಾದಿಯಲ್ಲೇ ನಡೆದಿದ್ದಾರೆ. ರೋಹಿಂಟನ್ ಸುಪ್ರೀಂಕೋರ್ಟ್‌ನ ನ್ಯಾಯ ಮೂರ್ತಿಯಾಗಿ ಹಾಗೂ ಭಾರತದ ಸಾಲಿಸಿಟರ್ ಜನರಲ್ ಆಗಿ ಕರ್ತವ್ಯ ನಿರ್ವಹಿಸಿದ್ದಾರೆ.

ಫಾಲಿ ನಾರಿಮನ್ ತಮ್ಮ ಆತ್ಮಕತೆ ‘ಬಿ-ರ್ ಮೆಮರಿ ಫುಡ್ಸ್: ಆನ್ ಆಟೋಬಯಾಗ್ರಫಿ’ (ನೆನಪು ಮಾಸುವ ಮುನ್ನ: ಒಂದು ಆತ್ಮಕತೆ) ಪುಸ್ತಕದಲ್ಲಿ
ಜಾತ್ಯತೀತ ಭಾರತದಲ್ಲಿ ತಮ್ಮ ಬದುಕು ಹೇಗಿತ್ತು ಎಂಬುದನ್ನು ವಿಸ್ತಾರವಾಗಿ ವಿವರಿಸುತ್ತಾರೆ. ಈ ಮಣ್ಣಿನಲ್ಲೇ ತಾವು ಜೀವನದ ಯಾತ್ರೆ ಮುಗಿಸಬೇಕು
ಎಂದೂ ಹೇಳಿಕೊಳ್ಳುತ್ತಾರೆ. ನೆನಪಿಡಿ: ಅವರು ಮ್ಯಾನ್ಮಾರ್‌ನಿಂದ (ಹಿಂದಿನ ಬರ್ಮಾ) ಭಾರತಕ್ಕೆ ವಲಸೆ ಬಂದು ಬದುಕು ಕಟ್ಟಿಕೊಂಡವರು! ಬಹುಶಃ
ಭಾರತವನ್ನು ಅವರಷ್ಟು ಪ್ರೀತಿಸಿದವರು ವಿರಳ. ಆದರೆ ಕೊನೆಗಾಲದಲ್ಲಿ ಅವರು ಇಲ್ಲಿನ ಮತಾಂಧತೆ ಮತ್ತು ಧರ್ಮಾಂಧತೆಯನ್ನು ನೋಡಿ ಆತಂಕ
ಗೊಂಡಿದ್ದರೇ? ಈ ಪ್ರಶ್ನೆ ಹಾಗೇ ಉಳಿದುಬಿಡುತ್ತದೆ. ಏಕೆಂದರೆ ಉತ್ತರಿಸುವುದಕ್ಕೆ ಅವರು ನಮ್ಮೊಂದಿಗಿಲ್ಲ!

ಇನ್ನು, ಪದ್ಮಶ್ರೀ ಅಮೀನ್ ಸಯಾನಿ ಅವರ ಬಗ್ಗೆ ಏನು ಹೇಳಿದರೂ ಕಡಿಮೆಯೇ. ಅವರ ಚಿನ್ನದಂಥ ಕಂಠ ಈ ದೇಶದ ಕೋಟ್ಯಂತರ ಜನರನ್ನು ಸೆಳೆದಿತ್ತು. ನನಗಂತೂ ಅವರನ್ನು ಮುಖಾಮುಖಿ ಭೇಟಿ ಯಾಗಿ, ಆ ಸುಂದರ ಧ್ವನಿಯನ್ನು ಕೇಳುವುದು ತುಂಬಾ ಪ್ರಶಾಂತವಾದ, ಸ್ವಚ್ಛ ಹಾಗೂ ಆಧ್ಯಾತ್ಮಿಕ ಅನುಭೂತಿಯನ್ನು ನೀಡುತ್ತಿತ್ತು. ಲೋಕಮತ್ ಸಮಾಚಾರ್ ಪತ್ರಿಕೆಯ ರೀಲಾಂಚ್‌ಗೆ ಒಮ್ಮೆ ಅವರನ್ನು ನಾಗ್ಪುರಕ್ಕೆ ಕರೆಸಿ ಅವರೊಂದಿಗೆ ಓಡಾಡುವ ಮತ್ತು ಒಡನಾಡುವ ಭಾಗ್ಯ ನನ್ನದಾಗಿತ್ತು. ಅಮೀನ್ ಸಯಾನಿಯವರಿಗೆ ಈ ದೇಶದ ಜನ ಮಾನಸದಲ್ಲಿ ಶಾಶ್ವತ ಸ್ಥಾನ ತಂದುಕೊಟ್ಟ ರೇಡಿಯೋ ಕಾರ್ಯಕ್ರಮ ಬಿನಾಕಾ ಗೀತಮಾಲಾ. ಅದು ಹೇಗೆ ಆರಂಭವಾಯಿತು ಎಂಬ ಕುತೂಹಲಕರ ವಿಷಯ ಬಹಳ ಜನರಿಗೆ ಗೊತ್ತಿರಲಿಕ್ಕಿಲ್ಲ. ೧೯೫೨ರಲ್ಲಿ ಬಿ.ವಿ. ಕೇಸ್ಕರ್ ಅವರು ಭಾರತದ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವರಾಗಿ ಪದಗ್ರಹಣ ಮಾಡಿದ್ದರು.

ಕೇಸ್ಕರ್ ಅವರಿಗೆ ಸಿನಿಮಾ ಸಂಗೀತದ ಬಗ್ಗೆ ತುಂಬಾ ಪೂರ್ವಗ್ರಹಗಳಿದ್ದವು. ಬಾಲಿವುಡ್‌ನ ಸಂಗೀತದಲ್ಲಿ ಅಶ್ಲೀಲತೆಯಿದೆ, ಅದು ದೇಶದ ಯುವ ಜನರನ್ನು ಹಾಳುಮಾಡುತ್ತಿದೆ ಎಂದು ಅವರು ನಂಬಿದ್ದರು. ಹೀಗಾಗಿ ಅವರು ಆಲ್ ಇಂಡಿಯಾ ರೇಡಿಯೋದಲ್ಲಿ ಹಿಂದಿ ಚಿತ್ರಗೀತೆಗಳನ್ನು ಪ್ರಸಾರ ಮಾಡುವುದನ್ನೇ ನಿಷೇಧಿಸಿದರು. ಆಗ ಅಸಂಖ್ಯಾತ ಚಿತ್ರಪ್ರೇಮಿಗಳು ನಿರಾಶರಾದರು. ಈ ಅವಕಾಶವನ್ನು ಶ್ರೀಲಂಕಾ ಮೂಲದ ರೇಡಿಯೋ ಸಿಲೋನ್ ಸದುಪಯೋಗ ಮಾಡಿಕೊಂಡಿತು. ಅದು ಹಿಂದಿ ಚಿತ್ರಗೀತೆಗಳನ್ನು ಭಾರತದಲ್ಲಿ ಪ್ರಸಾರ ಮಾಡತೊಡಗಿತು. ಅದರ ಹೆಸರೇ ಬಿನಾಕಾ ಗೀತಮಾಲಾ. ಆ ಕಾರ್ಯಕ್ರಮ ನಡೆಸಿಕೊಡುವುದಕ್ಕೆ ಸುಮಧುರ ಕಂಠದ ನಿರೂಪಕ ರೊಬ್ಬರು ಅದಕ್ಕೆ ಬೇಕಾಗಿತ್ತು. ಸಾಕಷ್ಟು ಹುಡುಕಿದಾಗ ಸಿಕ್ಕವರೇ ಅಮೀನ್ ಸಯಾನಿ ಹೆಸರಿನ ಸುರದ್ರೂಪಿ ಯುವಕ. ಅವರು ರೇಡಿಯೋ ಸಿಲೋನ್‌ನ ಸ್ಟುಡಿಯೋದಲ್ಲಿ ಕುಳಿತು ‘ಬೆಹನೋ ಔರ್ ಭಾಯಿಯೋ, ಆಪ್ ಕಿ ಖಿದ್ಮತ್ ಮೇ ಅಮೀನ್ ಸಯಾನಿ ಕಾ ಆದಾಬ್!’ ಎಂದು ಹೇಳುತ್ತಿದ್ದರೆ ಭಾರತದಾದ್ಯಂತ ಕೋಟ್ಯಂತರ ಶ್ರೋತೃಗಳು ರೋಮಾಂಚನಗೊಳ್ಳುತ್ತಿದ್ದರು.

ಮುಂದಿನದು ಇತಿಹಾಸ!

ರೇಡಿಯೋ ಸಿಲೋನ್‌ನ ಬಿನಾಕಾ ಗೀತಮಾಲಾ ಬಹಳ ಜನಪ್ರಿಯತೆ ಪಡೆಯಿತು. ಅದು ಆಲ್ ಇಂಡಿಯಾ ರೇಡಿಯೋಕ್ಕೆ ಆತಂಕ ತಂದಿತು. ಹೀಗಾಗಿ ಸಿನಿಮಾ ಗೀತೆಗಳ ಪ್ರಸಾರಕ್ಕೆಂದೇ ೧೯೫೭ ರಲ್ಲಿ ಆಲ್ ಇಂಡಿಯಾ ರೇಡಿಯೋದಲ್ಲಿ ವಿವಿಧ ಭಾರತಿ ಎಂಬ ಪ್ರತ್ಯೇಕ ವಿಭಾಗ ಆರಂಭಿಸಲಾಯಿತು. ಆದರೆ ಅಮೀನ್ ಸಯಾನಿಯವರ ಬಿನಾಕಾ ಗೀತಮಾಲಾದ ಜಾಗವನ್ನು ಯಾರೂ ಬದಲಿಸಲು ಸಾಧ್ಯವಾಗಲಿಲ್ಲ. ಅದು ಅಷ್ಟರಲ್ಲಾಗಲೇ ಜನಮಾನಸದಲ್ಲಿ ಬಲವಾಗಿ ಸ್ಥಾನ ಪಡೆದಿತ್ತು. ಅಮೀನ್ ಸಯಾನಿಗೊಂದು ಅಲೌಕಿಕವಾದ ಧ್ವನಿ ಯಿತ್ತು ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಆದರೆ ಆ ಧ್ವನಿಯ ಆಕರ್ಷಣೆಯೊಂದೇ ಅವರಿಗೆ ಅಷ್ಟೊಂದು ಖ್ಯಾತಿ ತಂದುಕೊಟ್ಟಿತೇ? ನನ್ನ ಪ್ರಕಾರ ಅಲ್ಲ.

ಆ ಸುಮಧುರ ಧ್ವನಿಯನ್ನು ಬಳಸಿಕೊಂಡು ಅವರು ವಿಶಿಷ್ಟವಾಗಿ ಕಾರ್ಯಕ್ರಮವನ್ನು ನಿರ್ವಹಿಸುತ್ತಿದ್ದ ರೀತಿಗೆ ಜನರು ಮನಸೋತಿದ್ದರು. ಅವರ
ವೆಲ್ವೆಟ್ ಧ್ವನಿಯು ಅವರು ಬಳಕೆ ಮಾಡುತ್ತಿದ್ದ ಪದಗಳ ಜತೆ ಚಿನ್ನಾಟವಾಡುತ್ತಿತ್ತು. ಅವರು ತುಂಬಾ ಜತನದಿಂದ ಚಿತ್ರಗೀತೆಗಳನ್ನು ಆಯ್ಕೆ ಮಾಡಿ
ಕೊಳ್ಳುತ್ತಿದ್ದರು. ಅಷ್ಟೇ ನಾಜೂಕಾಗಿ ತಾವು ಬಳಸುವ ಪದಗಳನ್ನೂ ಆಯ್ದುಕೊಳ್ಳುತ್ತಿದ್ದರು. ನಾವು ಯಾವುದೇ ಕ್ಷೇತ್ರದಲ್ಲಿರಲಿ, ಹೀಗೆ ಸಣ್ಣಪುಟ್ಟ ಸಂಗತಿ
ಗಳಿಗೂ ಅತಿಹೆಚ್ಚು ಗಮನ ನೀಡುತ್ತಿದ್ದರೆ ಅಸಾಮಾನ್ಯ ಯಶಸ್ಸನ್ನು ಕಾಣಲು ಸಾಧ್ಯವಿದೆ.

ಏಕೆಂದರೆ ಸೂಕ್ಷ್ಮಾತಿಸೂಕ್ಷ್ಮ ಸಂಗತಿಗಳಿಗೆ ಗಮನ ನೀಡುವುದು ಯಾವುದೇ ಕ್ಷೇತ್ರದಲ್ಲಿ ಬೆಳವಣಿಗೆ ಹೊಂದಲು ಕೀಲಿಕೈ ಇದ್ದಂತೆ. ಸಾಧಕರು ಕೂಡ ಮನುಷ್ಯರು. ಅವರೂ ನಮ್ಮ ನಿಮ್ಮಂತೆ ಭೂಮಿಯ ಮೇಲೆ ಓಡಾಡಿಕೊಂಡಿದ್ದವರು. ಆದರೆ ಅವರೇಕೆ ಜನಸಾಮಾನ್ಯರಿಗಿಂತ ಭಿನ್ನವಾಗಿ ಮುನ್ನಡೆದು ದೊಡ್ಡ ಸಾಧನೆ ಮಾಡುತ್ತಾರೆಂದರೆ ಅವರಲ್ಲಿ ಆ ಕಠಿಣ ಹಾದಿಯಲ್ಲಿ ನಡೆಯುವ ಬದ್ಧತೆಯಿರುತ್ತದೆ. ಯಾರೂ ಆಯ್ಕೆ ಮಾಡಿಕೊಳ್ಳದ ವಿಶಿಷ್ಟವಾದ ದಾರಿಯನ್ನು ಆಯ್ಕೆ ಮಾಡಿಕೊಳ್ಳುವ ಚಾಕಚಕ್ಯತೆಯೇ ಅವರಿಗೆ ಖ್ಯಾತಿ ಯನ್ನು ತಂದುಕೊಡುತ್ತದೆ. ಸೃಜನಶೀಲ ಚಿಂತನೆ ಯನ್ನು ಮೈಗೂಡಿಸಿ ಕೊಂಡು, ಅದಕ್ಕೆ ಅಪಾರ ಪರಿಶ್ರಮವನ್ನು ಬೆರೆಸಿದರೆ ಎಲ್ಲರೂ ಸಾಧಕರಾಗ ಬಹುದು.

ಅಂಥವರು ಮನುಕುಲದ ಮೇಲೆ ಶಾಶ್ವತ ವಾದ ಪರಿಣಾಮ ಬೀರುವ ಉದಾತ್ತ ವ್ಯಕ್ತಿಯಾಗಿ ಹೊರ ಹೊಮ್ಮುತ್ತಾರೆ. ಹಾಗೆ ಎತ್ತರಕ್ಕೆ ಏರಬೇಕೆಂದರೆ
ಬೇರೆಯವರು ಈವರೆಗೆ ನಡೆಯದ ಹಾದಿಯನ್ನು ನಾವು ಆಯ್ಕೆ ಮಾಡಿಕೊಳ್ಳುವುದು ಬಹಳ ಮುಖ್ಯ. ಎಲ್ಲರೂ ನಡೆಯುವ ಹಾದಿಯಲ್ಲೇ ಹೋದರೆ
ಬೇರಾರಿಗೂ ಕಾಣದ ವಿಶಿಷ್ಟ ಸಂಗತಿ ನಮಗೆ ಹೇಗೆ ತಾನೇ ಕಾಣಿಸುತ್ತದೆ? ಹಾಗೆಯೇ, ನಾವೊಂದು ದಾರಿಯನ್ನು ಆಯ್ಕೆ ಮಾಡಿಕೊಂಡ ಮೇಲೆ ಅದರಲ್ಲಿ ಎಷ್ಟೇ ಕಲ್ಲು ಮುಳ್ಳುಗಳಿದ್ದರೂ, ಪ್ರಯಾಣ ದಲ್ಲಿ ಎಷ್ಟೇ ಅಡ್ಡಿ ಆತಂಕಗಳು ಎದುರಾದರೂ ಧೈರ್ಯಗುಂದದೆ ಬದ್ಧತೆಯಿಂದ ಮುನ್ನಡೆಯುವುದು ಕೂಡ ಅಷ್ಟೇ ಮುಖ್ಯ. ಅಂಥ ವಿಶಿಷ್ಟ ಸಾಧಕರಾದ ಫಾಲಿ ನಾರಿಮನ್ ಹಾಗೂ ಅಮೀನ್ ಸಯಾನಿಯವರಿಗೆ ಶ್ರದ್ಧಾಂಜಲಿ ಸಲ್ಲಿಸೋಣ.

(ಲೇಖಕರು ಹಿರಿಯ ಪತ್ರಕರ್ತರು)