Saturday, 14th December 2024

ಅಕ್ಷೋಹಿಣಿಯ ಕ್ರೋಢೀಕರಣವೇ?

ಸಾರ್ವತ್ರಿಕ ಚುನಾವಣೆ ಎದುರಾದಾಗಲೆಲ್ಲ ರಾಜಕೀಯ ಪಕ್ಷಗಳು ತಮ್ಮದೇ ಆದ ಲೆಕ್ಕಾಚಾರ, ಮೈತ್ರಿ-ಮಾತುಕತೆ, ಸ್ಥಾನ ಹೊಂದಾಣಿಕೆಗಳಿಗೆ ಮುಂದಾಗು ವುದು ವಾಡಿಕೆ. ಇದರ ಮುಂದುವರಿದ ಭಾಗವಾಗಿ, ಅವುಗಳ ನಾಯಕರು ಎದುರಾಳಿಗಳನ್ನು ಹಣಿಯಲು ವ್ಯೂಹಾತ್ಮಕ ಕಾರ್ಯತಂತ್ರಗಳ ಮೊರೆ ಹೋಗುವುದುಂಟು. ಸನ್ನಿಹಿತವಾಗಿ ರುವ ಲೋಕಸಭಾ ಚುನಾವಣೆಯೂ ಇಂಥ ಪರಿಪಾಠಗಳಿಗೆ ಹೊರತಾಗಿಲ್ಲ.

ಅದರಲ್ಲೂ ನಿರ್ದಿಷ್ಟವಾಗಿ ಬಿಜೆಪಿ ಈ ಬಾಬತ್ತಿನಲ್ಲಿ ಒಂದು ಹೆಜ್ಜೆ ಮುಂದಿದೆ ಎಂದೇ ಹೇಳಬೇಕು. ವಿವಿಧ ರಾಜ್ಯಗಳಲ್ಲಿನ ‘ಎದುರಾಳಿ ಪಕ್ಷಸ್ಥರನ್ನು’ ತನ್ನೆಡೆಗೆ ಸೆಳೆಯುವಲ್ಲಿ ಬಿಜೆಪಿ ಈಗಾಗಲೇ ಯಶ ಕಂಡಿದೆ. ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಹಾಗೂ ಕಾಂಗ್ರೆಸಿಗ ಅಶೋಕ್ ಚವ್ಹಾಣ್ ಇಂಥ ಮಹಾರಥಿಗಳಲ್ಲೊಬ್ಬರು. ಇಷ್ಟು ಸಾಲದೆಂಬಂತೆ, ಅಲ್ಲಿನ ಕಾಂಗ್ರೆಸ್‌ನ ೫೫ ಮಂದಿ ಮಾಜಿ ಶಾಸಕರು ಚವ್ಹಾಣರ ಹೆಜ್ಜೆಯನ್ನೇ ಅನುಸರಿಸಿ ಇತ್ತೀಚೆಗೆ ನಾಂದೇಡ್‌ನಲ್ಲಿ ಬಿಜೆಪಿಯನ್ನು ಸೇರಿಕೊಂಡಿದ್ದಾರೆ. ಇದೇ ರೀತಿಯಲ್ಲಿ ಮಧ್ಯಪ್ರದೇಶದ ಪ್ರಭಾವಿ ಕಾಂಗ್ರೆಸಿಗ ಕಮಲ್‌ನಾಥ್ ಕೂಡ ‘ಕಮಲ’ ಪಾಳಯ ವನ್ನು ಸೇರಿಕೊಳ್ಳಲಿದ್ದಾರೆ ಎಂಬ ಸುದ್ದಿ ರಾಜಕೀಯ ಪಡಸಾಲೆಗಳಲ್ಲಿ ಕೆಲ ದಿನಗಳ ಹಿಂದೆ ಹಬ್ಬಿದ್ದುಂಟು.

ಆದರೆ ಅದೇನಾಯ್ತೋ ಗೊತ್ತಿಲ್ಲ, ‘ನಾನವನಲ್ಲ, ನಾನವನಲ್ಲ’ ಎಂದರು ಕಮಲನಾಥರು. ಹೀಗಾಗಿ ಅವರ ಭದ್ರ ಕೋಟೆ ಎನಿಸಿರುವ ಛಿಂದ್ವಾರ ಲೋಕ ಸಭಾ ಕ್ಷೇತ್ರವನ್ನು ಶತಾಯಗತಾಯ ತನ್ನದಾಗಿಸಿಕೊಳ್ಳಲು ಬಿಜೆಪಿ ಯೋಜಿಸುತ್ತಿದೆಯಂತೆ. ಇದರ ಭಾಗವಾಗಿ ಅಲ್ಲಿನ ಬರೋಬ್ಬರಿ ೫೦ ಸಾವಿರ ಮಂದಿ ಕಾಂಗ್ರೆಸ್ ಕಾರ್ಯಕರ್ತರನ್ನು ತನ್ನ ಮಡಿಲಿಗೆ ತುಂಬಿಕೊಳ್ಳುವುದು ಅದರ ಕಾರ್ಯತಂತ್ರ ಎನ್ನಲಾಗಿದೆ. ಯುದ್ಧ ಗೆಲ್ಲುವುದೇ ಯೋಧರ ಅಂತಿಮ ಗುರಿ ಎಂಬುದರಲ್ಲಿ ಎರಡು ಮಾತಿಲ್ಲ; ಆದರೆ ಬಿಜೆಪಿ ಹೀಗೆ ಸಾರಾ ಸಗಟಾಗಿ ಅಕ್ಷೋಹಿಣಿಯ ಕ್ರೋಡೀಕರಣಕ್ಕೇ ಕೈಹಾಕಿರುವುದು ನೋಡಿದರೆ, ಈ ಬಾರಿಯ ಲೋಕಸಭಾ ಚುನಾವಣೆಯನ್ನು ಅದು ತೀರಾ ಗಂಭೀರವಾಗಿ ಮತ್ತು ‘ಪ್ರತಿಷ್ಠೆಯ ಪ್ರಶ್ನೆ’ಯಾಗಿ ಪರಿಗಣಿಸಿದಂತೆ ತೋರುತ್ತದೆ.

ಆದರೆ ಇಂಥದೇ ರಣೋತ್ಸಾಹ ಕಾಂಗ್ರೆಸ್ ಪಾಳಯ ದಿಂದ ವ್ಯಕ್ತವಾಗದಿರುವುದು ವಿಷಾದನೀಯ. ಸಮಬಲಿಗಳು ಇದ್ದಾಗಲೇ ಯುದ್ಧಕ್ಕೊಂದು ಕಳೆ.
ಪ್ರಜಾಪ್ರಭುತ್ವವು ಏಕಪಕ್ಷದ ಆಡುಂಬೊಲವಾಗ ಬಾರದು ಎಂದಾದಲ್ಲಿ ಕಾಂಗ್ರೆಸ್ ಇನ್ನಾದರೂ ಮೈಕೊಡವಿಕೊಂಡು ಏಳಬೇಕು.