‘ಮೇ ೧೦ರ ಬಳಿಕ ಭಾರತದ ಯಾವೊಬ್ಬ ಸೇನಾ ಸಿಬ್ಬಂದಿಯನ್ನೂ ಮಾಲ್ಡೀವ್ಸ್‌ನಲ್ಲಿ ಇಟ್ಟುಕೊಳ್ಳುವುದಿಲ್ಲ. ನಾಗರಿಕರ ಪೋಷಾಕಿನಲ್ಲಿ ಕೂಡ ಸೇನಾ ಸಿಬ್ಬಂದಿ ಯನ್ನು ದೇಶದಲ್ಲಿ ಇರಲು ಬಿಡುವುದಿಲ್ಲ’ ಎಂದು ಹೇಳುವ ಮೂಲಕ ಮಾಲ್ಡೀ ಅಧ್ಯಕ್ಷ ಮೊಹಮ್ಮದ್ ಮುಯಿಜು ಭಾರತ ವಿರೋಧಿ ಧೋರಣೆಯನ್ನು ಮುಂದು ವರಿಸಿದ್ದಾರೆ. ಇಂದು ಚೀನಾದತ್ತ ವಾಲುತ್ತಿರುವ ಮಾಲ್ಡೀವ್ಸ್‌ನ ಬೇರುಗಳು ಭಾರತದ್ದೇ ಎನ್ನುವುದನ್ನು ಮುಯಿಜು ಮರೆತಂತಿದೆ.
ಆಂತರಿಕ ದಂಗೆಯಿಂದ ಎಂದೋ ಮುಳುಗಿಹೋಗಿ, ಇವತ್ತಿನ ಶ್ರೀಲಂಕಾದ ಸ್ಥಿತಿ ತಲುಪಬೇಕಿದ್ದ ಮಾಲ್ಡೀವ್ಸ್ ಅನ್ನು ರಕ್ಷಿಸಿದ್ದು ಭಾರತೀಯ ಸೇನೆಯೇ. ಮಾಲ್ಡೀವ್ಸ್ ಕಷ್ಟದಲ್ಲಿದ್ದಾಗ ಮೊದಲು ಕೈಹಿಡಿದ ರಾಷ್ಟ್ರವೇನಾದರೂ ಇದ್ದರೆ ಅದು ಭಾರತವೇ. ೧೯೮೮ರ ನವೆಂಬರ್ ೩ರಂದು ಲಂಕಾದಲ್ಲಿದ್ದ ಮಾಲ್ಡೀವಿಯನ್ ಉದ್ಯಮಿ ಅಬ್ದು ಲತುಫಿ ಮಾಲ್ಡೀವ್ಸ್‌ನಲ್ಲಿ ದಂಗೆ ಎಬ್ಬಿಸಿದ. ಲಂಕೆಯ ಉಗ್ರಗಾಮಿಗಳನ್ನು ಮಾಲ್ಡೀವ್ಸ್‌ನ ರಾಜಧಾನಿ ಮಾಲೆಗೆ ನುಗ್ಗಿಸಿ, ರಕ್ತದ ಕೋಡಿಯನ್ನೇ ಹರಿಸಿದ. ಶಸ್ತ್ರಸಜ್ಜಿತ ಉಗ್ರರು ಮಾಲೆಯ ಸರಕಾರಿ ಕಟ್ಟಡಗಳನ್ನೇರಿ ಕುಳಿತು ಕೇಕೆ ಹಾಕಿದರು, ಅಪಾರ ಪ್ರಮಾಣದಲ್ಲಿ ನಾಗರಿಕರ ಮಾರಣಹೋಮ ನಡೆಸಿ
ದರು. ಯಾವ ಸೇನೆಯನ್ನೂ ಇಟ್ಟುಕೊಳ್ಳದ ಮಾಲ್ಡೀವ್ಸ್‌ಗೆ ಅಂದು ನೆನಪಾಗಿದ್ದು ಭಾರತವೇ.
ಕೂಡಲೇ ಮಾಲ್ಡೀ ರಾಜಧಾನಿ ಮಾಲೆಗೆ ಹೋಗಬೇಕು ಎಂದು ನಮ್ಮ ಪ್ರಧಾನಿ ಕರೆ ಕೊಟ್ಟಾಗ ಭಾರತೀಯ ಸೇನೆ ‘ಆಪರೇಷನ್ ಕ್ಯಾಕ್ಟಸ್’ ಹೆಸರಿನಲ್ಲಿ ವಿಮಾನ ವನ್ನೇರಿ ಆಗ್ರಾದಿಂದ ಕೇವಲ ನಾಲ್ಕೇ ಗಂಟೆ ಗಳಲ್ಲಿ ಮಾಲೆ ತಲುಪಿತ್ತು. ದ್ವೀಪಗಳಲ್ಲಿ ಅಡಗಿ ಕುಳಿತಿದ್ದ ಅಷ್ಟೂ ಉಗ್ರರನ್ನೂ ಮಾಲೆಯಿಂದ ಹೊರ ದಬ್ಬುವಲ್ಲಿ ನಮ್ಮ ಸೇನೆ ಸ-ಲವಾಗಿತ್ತು. ಸಮುದ್ರದಲ್ಲಿ ವಿಹರಿಸುತ್ತಿದ್ದ ಮಾಲ್ಡೀವ್ಸ್ ಪ್ರಜೆಗಳನ್ನು ಉಗ್ರರು ಹಡಗಿನೊಳಗೆ ಬಂಧಿಸಿಟ್ಟು ಹಿಂಸಿಸುತ್ತಿದ್ದಾಗ ನಮ್ಮ ನೌಕಾಪಡೆಯ ಕಮಾಂಡೊಗಳು ದಿಟ್ಟ ಹೋರಾಟ ವನ್ನೇ ನಡೆಸಿ ಹಿಮ್ಮೆಟ್ಟಿಸಿದರು. ಅಲ್ಲಿಂದ ಇಲ್ಲಿಯವರೆಗೆ ಭಾರತೀಯ ಸೇನಾ ತುಕಡಿಯೇ ಮಾಲ್ಡೀವ್ಸ್‌ಗೆ ರಕ್ಷಣೆ ನೀಡುತ್ತಿದೆ. ಅಷ್ಟೇ ಅಲ್ಲದೆ, ೨೦೧೮-೨೨ರ ನಡುವೆ ಭಾರತವು ೧,೧೦೦ ಕೋಟಿ ರು.ಗೂ ಹೆಚ್ಚು ನೆರವನ್ನು ಮಾಲ್ಡೀವ್ಸ್‌ಗೆ ನೀಡಿದೆ. ಬಹುಶಃ ಇದನ್ನೆಲ್ಲ ಇಂದು ಮರೆತಿರುವ ಮಾಲ್ಡೀವ್ಸ್ ತನ್ನ ನೆಲದಿಂದ ಭಾರತೀಯ ಸೇನೆಯನ್ನು ಹೊರದಬ್ಬಲು ನಿಂತಿರುವುದು ಉಪಕಾರಗೇಡಿತ ನದ ದ್ಯೋತಕವಷ್ಟೇ.