Saturday, 23rd November 2024

ಸಮರಕ್ಕೆ ಮುನ್ನವೇ ಕುಸಿಯಿತೇ ವಿಪಕ್ಷಗಳ ಆತ್ಮವಿಶ್ವಾಸ ?

ವರ್ತಮಾನ

maapala@gmail.com

ಸದ್ಯದಲ್ಲೇ ಲೋಕಸಭೆ ಚುನಾವಣೆ ಇದ್ದರೂ ಹೊಸ ಘೋಷಣೆಗಳನ್ನು ಮಾಡದೆ, ಜನಪ್ರಿಯ ಕಾರ್ಯಕ್ರಮಗಳ ಮೂಲಕ ಜನರನ್ನು ಮರುಳು ಮಾಡದೆ, ಉಚಿತ ಘೋಷಣೆಗಳಿಗೆ ಎಳ್ಳು-ನೀರು ಬಿಟ್ಟಿದ್ದಲ್ಲದೆ, ‘ಮತ್ತೆ ಅಧಿಕಾರಕ್ಕೆ ಬರುತ್ತೇವೆ; ಪೂರ್ಣ ಆಯವ್ಯಯ ಮಂಡಿಸುತ್ತೇವೆ’ ಎಂದು ಹೇಳುವ ಧೈರ್ಯ ಒಂದು ಸರಕಾರಕ್ಕಿದೆ ಎಂದರೆ ಅದು ನಿರ್ವಿವಾದವಾಗಿ ಆತ್ಮವಿಶ್ವಾಸದ ಪ್ರತೀಕ. ಜತೆಗೆ ಈ ಸರಕಾರವನ್ನು ಕಟ್ಟಿಹಾಕುವಲ್ಲಿ ಪ್ರತಿಪಕ್ಷಗಳು ಯಾವ ರೀತಿ ವಿಫಲವಾಗಿವೆ? ಸರಕಾರದ ವಿರುದ್ಧ ಎದ್ದುನಿಂತು ಹೋರಾಟ ನಡೆಸಿ ತಮ್ಮ ಸಾಮರ್ಥ್ಯ ಹೆಚ್ಚಿಸಿಕೊಳ್ಳುವಲ್ಲಿ ಪ್ರತಿ ಪಕ್ಷಗಳು ಎಷ್ಟು ನಿಷ್ಕ್ರಿಯವಾಗಿವೆ? ಎಂಬುದೂ ಸ್ಪಷ್ಟವಾಗುತ್ತದೆ.

ಇಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದ ಸಾಧನೆ ಮತ್ತು ಅದನ್ನು ಜನರಿಗೆ ತಲುಪಿಸುವ ದಿಸೆಯಲ್ಲಿ ಮಾಡಿದ ಕೆಲಸಗಳು ಎಷ್ಟು ಪ್ರಾಮುಖ್ಯ ಪಡೆಯುತ್ತವೆಯೋ, ಒಂದೊಳ್ಳೆಯ ಮತ್ತು ಸಮರ್ಥ, ಜನಪರ ಪ್ರತಿಪಕ್ಷವಾಗಿ ಕೆಲಸ ಮಾಡದೆ ಜನರ ಭಾವನೆಗಳನ್ನು ಕೆರಳಿಸುತ್ತ ಪ್ರಧಾನಿ ಮತ್ತು ಕೇಂದ್ರ ಸರಕಾರದ ಬಗ್ಗೆ ಟೀಕಿಸುತ್ತಾ ಕಾಲಹರಣ ಮಾಡಿದ ಇತರೆ ಪಕ್ಷಗಳ ಕಾರ್ಯನೀತಿಗಳೂ ಈಗಿನ ರಾಜಕೀಯ ಪರಿಸ್ಥಿತಿಗೆ ಮುಖ್ಯವಾಗುತ್ತವೆ.

ಸರಕಾರದ ಜನಪ್ರಿಯತೆ ಹೆಚ್ಚಾಗಲು, ಪ್ರತಿಪಕ್ಷಗಳ ದೂರದೃಷ್ಟಿಯಿಲ್ಲದ ಆಲೋಚನೆಗಳು, ಬಹುಸಂಖ್ಯಾತ ಸಮುದಾಯವನ್ನು ನೋಯಿಸುವ ಅರ್ಥ ವಿಲ್ಲದ ಮಾತುಗಳು ಕೂಡ ಕಾರಣ ಎಂಬುದರಲ್ಲಿ ಎರಡು ಮಾತಿಲ್ಲ. ಇದರಿಂದಾಗಿ ಪ್ರತಿಪಕ್ಷಗಳಿಗೆ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎಗೆ ಪ್ರಬಲ ಪೈಪೋಟಿ ನೀಡುವ ಸಾಮರ್ಥ್ಯದ ಜತೆ ಉತ್ಸಾಹವೂ ಇಲ್ಲ ಎನ್ನುವಂತಾಗಿದೆ. ಬಿಜೆಪಿಯನ್ನು ಕಟ್ಟಿಹಾಕಲೆಂದು ಪ್ರತಿಪಕ್ಷಗಳೆಲ್ಲವೂ ಸೇರಿ ಕಾಂಗ್ರೆಸ್ ನೇತೃತ್ವದಲ್ಲಿ ‘ಇಂಡಿಯನ್ ನ್ಯಾಷನಲ್ ಡೆವಲಪ್‌ಮೆಂಟಲ್ ಇನ್ ಕ್ಲೂಸಿವ್ ಅಲಯನ್ಸ್’ (ಐಎನ್‌ಡಿಐಎಫ್ ‘ಇಂಡಿಯ’ ಮೈತ್ರಿಕೂಟ) ಸ್ಥಾಪಿಸಿಕೊಂಡವು.

ಆರಂಭದ ಒಂದೆರಡು ಸಭೆಗಳ ನಂತರ, ‘ಇಂಡಿಯ ಮೈತ್ರಿಕೂಟವು ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟವನ್ನು ಸೋಲಿಸಲು ಸಾಧ್ಯವಿಲ್ಲದೇ ಇದ್ದರೂ ಪ್ರಬಲ ಪೈಪೋಟಿ ನೀಡಬಲ್ಲದು’ ಎಂಬ ಸಾಧ್ಯತೆಯನ್ನು ಹೊಮ್ಮಿಸಿದ್ದುಂಟು. ಆದರೆ, ಅದೆಲ್ಲವೂ ಕೆಲವೇ ದಿನಗಳಿಗೆ ಸೀಮಿತವಾಯಿತು. ಅಧ್ಯಕ್ಷ, ಸಂಚಾಲಕರ ನೇಮಕದ ವೇಳೆಯೇ ಈ ಮೈತ್ರಿಕೂಟದ ಹುಳುಕುಗಳು ಬಹಿರಂಗವಾದವು. ಸ್ಥಾನ ಹೊಂದಾಣಿಕೆ ಚರ್ಚೆ ಆರಂಭದಲ್ಲೇ ಕೆಲವು ಪಕ್ಷಗಳು ಮೈತ್ರಿಕೂಟ ತೊರೆದವು. ಮತ್ತೆ ಕೆಲವು ಪಕ್ಷಗಳು, ತಮ್ಮ ರಾಜ್ಯದಲ್ಲಿ ಕಾಂಗ್ರೆಸ್‌ಗೆ ಇಂತಿಷ್ಟೇ ಸೀಟುಗಳನ್ನು ನೀಡುತ್ತೇವೆ.

ಬೇಕಿದ್ದರೆ ಜತೆಗಿರಿ, ಇಲ್ಲವಾದಲ್ಲಿ ನಮ್ಮ ದಾರಿ ನಮಗೆ, ನಿಮ್ಮ ದಾರಿ ನಿಮಗೆ ಎಂಬಂತೆ ವರ್ತಿಸಿದವು. ಇದೆಲ್ಲದರ ಪರಿಣಾಮ ಇತ್ತೀಚೆಗೆ ‘ಇಂಡಿಯ’
ಮೈತ್ರಿಕೂಟ ಒಟ್ಟಾರೆಯಾಗಿ ಏನು ಮಾಡುತ್ತಿದೆ ಎಂಬುದೇ ತಿಳಿಯದಾಯಿತು. ಪ್ರಮುಖ ಪಕ್ಷಗಳು ಮೈತ್ರಿಕೂಟದಿಂದ ಹೊರಬಂದವು. ಈ ಪೈಕಿ ಕೆಲವು ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟದ ಜತೆ ಗುರುತಿಸಿಕೊಂಡರೆ, ಇನ್ನು ಕೆಲವು ತಮ್ಮ ರಾಜ್ಯಕ್ಕಷ್ಟೇ ಸೀಮಿತವಾದವು. ಅದರಲ್ಲೂ ಸ್ವಾತಂತ್ರ್ಯಾ ನಂತರ ೫ ದಶಕಕ್ಕೂ ಹೆಚ್ಚು ಕಾಲ ದೇಶವನ್ನು ಆಳಿದ, ಒಂದು ಕಾಲದಲ್ಲಿ ಎದುರಾಳಿಗಳೇ ಇಲ್ಲದೆ ಲೋಕಸಭೆ ಚುನಾವಣೆಯಲ್ಲಿ ೪೦೦ಕ್ಕೂ ಹೆಚ್ಚು ಸ್ಥಾನಗಳನ್ನು ಗೆದ್ದು ಬೀಗಿದ್ದ ಕಾಂಗ್ರೆಸ್‌ಗೆ ಇದೀಗ ೩೦೦ಕ್ಕೂ ಕಡಿಮೆ ಕ್ಷೇತ್ರಗಳಲ್ಲಿ ಸ್ಪರ್ಧೆಗಿಳಿಯಬೇಕಾದ ಅನಿವಾರ್ಯತೆ ಎದುರಾಗಿದೆ.

ಮುಖ್ಯವಾಗಿ ಉತ್ತರ ಭಾರತದಲ್ಲಿ ೨-೩ ರಾಜ್ಯಗಳನ್ನು ಹೊರತುಪಡಿಸಿ ಕಾಂಗ್ರೆಸ್‌ಗೆ ನೆಲೆಯೇ ಇಲ್ಲ ಎನ್ನುವ ಪರಿಸ್ಥಿತಿ ಇದೆ. ಆ ಮಟ್ಟಿಗೆ ದಕ್ಷಿಣದ
ರಾಜ್ಯಗಳಲ್ಲಿ ಕಾಂಗ್ರೆಸ್ ಸ್ವಲ್ಪ ಮಟ್ಟಿಗೆ ಶಕ್ತಿ ಉಳಿಸಿಕೊಂಡಿದೆ. ಅದರಲ್ಲೂ ಕರ್ನಾಟಕ ಮತ್ತು ತೆಲಂಗಾಣದಲ್ಲಿ ಅಧಿಕಾರದಲ್ಲಿರುವ ಕಾರಣ ಈ ಬಾರಿ ಕಾಂಗ್ರೆಸ್‌ನ ಮಾನವನ್ನು ದಕ್ಷಿಣ ಭಾರತವೇ ಉಳಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಇದಕ್ಕೆ ಮತದಾರರಿಗಿಂತ ಪಕ್ಷದ ನಾಯಕತ್ವವೇ ಕಾರಣ.

ರಾಜೀವ್ ಗಾಂಧಿ ಅವರ ನಿಧನಾನಂತರ ಪಕ್ಷಕ್ಕೆ ಸಮರ್ಥ ನಾಯಕತ್ವ ಸಿಗಲೇ ಇಲ್ಲ. ಸೋನಿಯಾ ಗಾಂಧಿ ಯುಪಿಎ ಅಧ್ಯಕ್ಷರಾಗಿ, ೨೦೦೪ರಲ್ಲಿ ಪ್ರಧಾನಿಯಾಗುವ ಅವಕಾಶವಿದ್ದರೂ ಮನಮೋಹನ್ ಸಿಂಗ್ ಅವರನ್ನು ಅಧಿಕಾರದಲ್ಲಿ ಕುಳ್ಳಿರಿಸಿ ‘ಕಿಂಗ್ ಮೇಕರ್’ ಎನಿಸಿಕೊಂಡರೂ ಅದು ಪರಿಣಾಮ ಬೀರಲಿಲ್ಲ. ಸೋನಿಯಾ ಪುತ್ರ ರಾಹುಲ್ ಗಾಂಧಿ ಪಕ್ಷದ ನಾಯಕತ್ವ ವಹಿಸಿಕೊಂಡ ಮೇಲಂತೂ ಪಕ್ಷ ಇನ್ನಷ್ಟು ದುರ್ಬಲವಾಯಿತೇ ಹೊರತು ಮೇಲೇಳಲಿಲ್ಲ. ಪಕ್ಷದ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರನ್ನು ಎಐಸಿಸಿ ಅಧ್ಯಕ್ಷರನ್ನಾಗಿ ಮಾಡಿ, ದಲಿತರೊಬ್ಬರಿಗೆ ಪಕ್ಷದ ಉನ್ನತ ಸ್ಥಾನ ನೀಡಿದ್ದೇವೆ ಎಂದು ಪಕ್ಷದ ನಾಯಕರು ಬೊಬ್ಬಿರಿದರೂ ಜನರು ಅದನ್ನು ಗಂಭೀರವಾಗಿ ಪರಿಗಣಿಸಲೇ ಇಲ್ಲ.

ಅತ್ತ ಬಿಜೆಪಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ದೇಶಾದ್ಯಂತ ತನ್ನ ಜಾಲವನ್ನು ವ್ಯಾಪಿಸುತ್ತ ಹೋದರೆ, ಇತ್ತ ರಾಹುಲ್ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ತನ್ನ ಶಕ್ತಿ ಕಳೆದುಕೊಳ್ಳುತ್ತ ಸಾಗಿತು. ಬಿಜೆಪಿಗೆ ಸೆಡ್ಡು ಹೊಡೆಯಲು ರಾಹುಲ್ ೨ ಹಂತದಲ್ಲಿ ಭಾರತ್ ಜೋಡೋ ಯಾತ್ರೆ ನಡೆಸಿದರೂ ಅದು ಪ್ರಯೋಜನಕ್ಕೆ ಬರಲಿಲ್ಲ. ಇದಕ್ಕೆ ಕಾರಣ ಕಾಂಗ್ರೆಸ್‌ನ ಪ್ರಧಾನಿ ಅಭ್ಯರ್ಥಿ ಎಂದೇ ಪರಿಗಣಿಸಲ್ಪಟ್ಟಿರುವ ರಾಹುಲ್ ಅವರ ದೂರದೃಷ್ಟಿಯಿಲ್ಲದ ಆಲೋಚನೆ ಮತ್ತು ಮಾತುಗಳು ಹಾಗೂ ಕಾಂಗ್ರೆಸ್ ಸೇರಿದಂತೆ ಅದರ ಮಿತ್ರಪಕ್ಷಗಳ ಅತಿಯಾದ ಅಲ್ಪಸಂಖ್ಯಾತರ ಓಲೈಕೆ ರಾಜಕಾರಣ. ಇನ್ನೇನು ‘ಇಂಡಿಯ’ ಮೈತ್ರಿಕೂಟ ತನ್ನ ಬಲ ಹೆಚ್ಚಿಸಿಕೊಳ್ಳಲಿದೆ ಎಂಬ ಲಕ್ಷಣ ಕಾಣಿಸುತ್ತಿದ್ದಂತೆ ಮಿತ್ರಪಕ್ಷ ಡಿಎಂಕೆಯ ಉದಯನಿಧಿ ಮಾರನ್ ಸನಾತನ ಧರ್ಮವನ್ನು ಕ್ಯಾನ್ಸರ್, ಡೆಂ, ಮಲೇರಿಯಾಕ್ಕೆ ಹೋಲಿಸಿ ನೀಡಿದ ಹೇಳಿಕೆ ಮೈತ್ರಿಕೂಟದ ಬುಡಕ್ಕೆ ಕೊಡಲಿ ಪೆಟ್ಟು ನೀಡಿತು.

ಕಾಂಗ್ರೆಸ್ ಸೇರಿದಂತೆ ಮೈತ್ರಿಕೂಟದ ಕೆಲವು ಪಕ್ಷಗಳು ಆ ಹೇಳಿಕೆಯನ್ನು ಅರೆ ಮನಸ್ಸಿನಲ್ಲಿ ಸಮರ್ಥಿಸಿಕೊಳ್ಳುತ್ತಿದ್ದಂತೆ ಉತ್ತರ ಭಾರತ ಮೂಲದ ಮಿತ್ರಪಕ್ಷಗಳು ನಿಧಾನವಾಗಿ ಮೈತ್ರಿಕೂಟವನ್ನೇ ತೊರೆಯಲಾರಂಭಿಸಿದವು. ಏಕೆಂದರೆ, ಇಂಥ ಹೇಳಿಕೆಗಳನ್ನು ಒಪ್ಪಿಕೊಂಡರೆ ಬಹುಸಂಖ್ಯಾತರು ಹೆಚ್ಚಾಗಿರುವ ತಮ್ಮ ರಾಜ್ಯಗಳಲ್ಲಿ ಸೋಲು ಅನುಭವಿಸಬೇಕಾಗುತ್ತದೆ ಎಂಬುದು ಅವಕ್ಕೆ ಸ್ಪಷ್ಟವಾಗಿತ್ತು. ಮೈತ್ರಿಕೂಟದ ಪಕ್ಷಗಳ ಇಂಥ ಹೇಳಿಕೆಗಳಿಂದ
ಬಹುಸಂಖ್ಯಾತರು ದೂರವಾಗುತ್ತಾರೆ ಎಂಬುದು ಗೊತ್ತಿದ್ದರೂ ಕಾಂಗ್ರೆಸ್ ಎಚ್ಚೆತ್ತುಕೊಳ್ಳಲಿಲ್ಲ. ಕನಿಷ್ಠ ಅವುಗಳ ಹೇಳಿಕೆಯನ್ನು ಖಂಡಿಸುವ ಪ್ರಯತ್ನ
ವನ್ನೂ ಮಾಡಲಿಲ್ಲ. ಮತ್ತೊಂದೆಡೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತಮ್ಮ ಬಾಲಿಶ ಹೇಳಿಕೆಗಳನ್ನು ಮುಂದುವರಿಸಿದರು.

ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಜಾತಿಗಣತಿ ಮಾಡಿಸುತ್ತೇವೆ. ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಕಾಯ್ದೆ ಜಾರಿಗೊಳಿಸುತ್ತೇವೆ. ೩೦ ಲಕ್ಷ ಸರಕಾರಿ ಹುದ್ದೆಗಳನ್ನು ಭರ್ತಿ ಮಾಡುತ್ತೇವೆ. ಪದವೀಧರರು ಮತ್ತು ಡಿಪ್ಲೊಮಾ ಹೊಂದಿರುವವರಿಗೆ ೧ ಲಕ್ಷ ರು. ಜತೆಗೆ ಅಪ್ರೆಂಟಿಸ್‌ಶಿಪ್ ಕೊಡಿಸುತ್ತೇವೆ ಎಂಬ
ಜನಪ್ರಿಯ ಘೋಷಣೆಗಳಿಗಷ್ಟೇ ತಮ್ಮನ್ನು ಸೀಮಿತಗೊಳಿಸಿಕೊಂಡರೇ ಹೊರತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ಯಾವ ರೀತಿ ಮುನ್ನಡೆ ಸುತ್ತೇವೆ ಎಂಬ ದೂರದೃಷ್ಟಿಯ ಮಾತುಗಳು ಅವರಿಂದ ಹೊರಬರಲಿಲ್ಲ. ಈಗ ಎಂ.ಎಸ್. ಸ್ವಾಮಿನಾಥನ್ ವರದಿಯಂತೆ ಕನಿಷ್ಠ ಬೆಂಬಲ ಬೆಲೆ ಘೋಷಿಸುತ್ತೇವೆ ಎಂದು ಹೇಳುತ್ತಿದ್ದಾರೆ ರಾಹುಲ್.

ಈ ಹಿಂದೆ ಅವರದ್ದೇ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರ ಸ್ವಾಮಿನಾಥನ್ ವರದಿಯನ್ನು ತಿರಸ್ಕರಿಸಿತ್ತು. ಇದನ್ನು ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಮರೆತರೂ ಜನ ಮರೆತಿಲ್ಲ. ಅದೇ ರೀತಿ ಕೇಂದ್ರ ಸರಕಾರದ ಯೋಜನೆಗಳು ಜನಪ್ರಿಯತೆಗಿಂತ ಜನಪರವಾಗಿರಬೇಕು. ಜನರ ಕೊಳ್ಳುವ ಸಾಮರ್ಥ್ಯವನ್ನು ಹೆಚ್ಚಿಸಬೇಕು. ಜನರಿಗೆ ಉಚಿತವಾಗಿ ಏನನ್ನೂ ನೀಡದೆ ಅವರನ್ನು ಸಶಕ್ತರನ್ನಾಗಿ ಮಾಡಬೇಕು ಎಂಬುದನ್ನು ಕಳೆದ ಒಂದು ದಶಕದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರಕಾರ ಸಾಬೀತುಪಡಿಸಿದೆ. ಯಾರಿಗೆ ಸರಕಾರದಿಂದ ಯಾವ ರೀತಿಯ ನೆರವು ಬೇಕು ಎಂಬುದನ್ನು ಅರ್ಥೈಸಿಕೊಂಡು ಅದರಂತೆ ನಡೆದುಕೊಳ್ಳುವ ಮೂಲಕ ಜನರಿಗೆ ಒಂದಲ್ಲಾ ಒಂದು ರೀತಿಯಲ್ಲಿ ಸಹಾಯ ಮಾಡಿದೆ.

ಜತೆಗೆ ತನ್ನ ಅಂತಾರಾಷ್ಟ್ರೀಯ ನಿಲುವುಗಳಿಂದಾಗಿ ಜಾಗತಿಕ ಮಟ್ಟದಲ್ಲಿ ಭಾರತ ಅನಿವಾರ್ಯ ಎನ್ನುವ ಪರಿಸ್ಥಿತಿಯನ್ನು ನಿರ್ಮಾಣ ಮಾಡಿದೆ. ಆರ್ಥಿಕತೆಯಲ್ಲೂ ದೇಶವು ಮುಂದುವರಿದ ರಾಷ್ಟ್ರಗಳಿಗೆ ಪೈಪೋಟಿ ನೀಡುವಂತೆ ಮಾಡಿದೆ. ಜತೆಗೆ ಅದನ್ನು ಅಷ್ಟೇ ಪರಿಣಾಮಕಾರಿಯಾಗಿ ಜನರ ಮನಮುಟ್ಟುವಂತೆ ಹೇಳಿದೆ. ಹೀಗಾಗಿ ಜನರೂ ಇಂಥ ಜನಪರ ಕಾರ್ಯಕ್ರಮಗಳನ್ನು ನಿರೀಕ್ಷಿಸುತ್ತಿದ್ದಾರೆ. ಜನರು ಸರಕಾರವನ್ನೇ ಅವಲಂಬಿಸಿರುವಂತೆ ಮಾಡುವವರು ಬೇಡ ಎನ್ನುವ ಯೋಚನೆಯನ್ನೂ ಮಾಡುತ್ತಿದ್ದಾರೆ. ಆದರೆ, ಇದನ್ನು ಇನ್ನೂ ಅರ್ಥ ಮಾಡಿಕೊಳ್ಳದ ರಾಹುಲ್ ಗಾಂಧಿ ಸೇರಿದಂತೆ ಕಾಂಗ್ರೆಸ್ ನಾಯಕರು ಇನ್ನೂ ಹಳೆಯ ಮಾದರಿಯ ಜನಪ್ರಿಯ, ಉಚಿತ ಘೋಷಣೆಗಳ ಹಿಂದೆಯೇ ಬಿದ್ದು ಗೆಲ್ಲಲು ಇರುವ ಅವಕಾಶವನ್ನೂ ಕಳೆದು ಕೊಳ್ಳುತ್ತಿದ್ದಾರೆ.

ಅಂತಾರಾಷ್ಟ್ರೀಯ ನೀತಿಗಳ ಬಗ್ಗೆಯೂ ಸ್ಪಷ್ಟತೆ ಇಲ್ಲದೆ ತೊಳಲಾಡುತ್ತಿದ್ದಾರೆ. ಇದೆಲ್ಲದರ ಪರಿಣಾಮ, ಮೊದಲಿನಿಂದಲೂ ತಾನು ನಿರ್ಲಕ್ಷ್ಯ ಮಾಡಿದ ದಕ್ಷಿಣ ಭಾರತ ಕೈಹಿಡಿದರೆ ಮಾತ್ರ ತಾನು ದೇಶದಲ್ಲಿ ಉಳಿದುಕೊಳ್ಳಲು ಸಾಧ್ಯ ಎನ್ನುವ ಹಂತಕ್ಕೆ ಕಾಂಗ್ರೆಸ್ ತಲುಪಿದೆ. ಪ್ರಸ್ತುತ ದಕ್ಷಿಣದ ಕರ್ನಾಟಕ ಮತ್ತು ತೆಲಂಗಾಣ ಹೊರತುಪಡಿಸಿ ಉತ್ತರದ ಹಿಮಾಚಲಪ್ರದೇಶದಲ್ಲಿ ಮಾತ್ರ ಕಾಂಗ್ರೆಸ್ ಅಧಿಕಾರದಲ್ಲಿದೆ. ಆದರೆ, ಹಿಮಾಚಲಪ್ರದೇಶದಲ್ಲಿ ಆ ಪಕ್ಷದ ಪರಿಸ್ಥಿತಿ ಯಾವ ರೀತಿ ಇದೆ ಎಂಬುದನ್ನು ಇತ್ತೀಚೆಗೆ ನಡೆದ ರಾಜ್ಯಸಭೆ ಚುನಾವಣೆ ಹೇಳಿದೆ. ಹೀಗಾಗಿ ಕರ್ನಾಟಕ ಮತ್ತು ತೆಲಂಗಾಣ ರಾಜ್ಯಗಳನ್ನೇ
ಕಾಂಗ್ರೆಸ್ ನೆಚ್ಚಿಕೊಳ್ಳಬೇಕಾಗಿದೆ. ಈ ಎರಡೂ ರಾಜ್ಯಗಳಲ್ಲಿ ಕಾಂಗ್ರೆಸ್‌ನ ಸ್ಥಳೀಯ ನಾಯಕತ್ವ ಪ್ರಬಲವಾಗಿದ್ದು, ಪ್ರತಿಪಕ್ಷ ಬಿಜೆಪಿಯನ್ನು ಮಟ್ಟ
ಹಾಕುವ ಸಾಮರ್ಥ್ಯವಿದ್ದರೂ ರಾಷ್ಟ್ರೀಯ ನಾಯಕತ್ವ ಗಟ್ಟಿತನ ಉಳಿಸಿಕೊಳ್ಳದೇ ಇರುವ ಕಾರಣ ಜನರು ವಿಧಾನಸಭೆ ಚುನಾವಣೆಯಲ್ಲಿ ಪಕ್ಷದ
ಕೈಹಿಡಿದಂತೆ ಲೋಕಸಭೆ ಚುನಾವಣೆಯಲ್ಲೂ ಕೈಹಿಡಿಯುತ್ತಾರೆ ಎಂಬ ನಿರೀಕ್ಷೆ ಇಲ್ಲವಾಗಿದೆ.

ರಾಷ್ಟ್ರೀಯ ನಾಯಕರ ವೈಫಲ್ಯವು ರಾಜ್ಯ ನಾಯಕತ್ವದ ಗಟ್ಟಿತನವನ್ನೇ ಪ್ರಶ್ನಿಸುವಂತೆ ಮಾಡುತ್ತಿದೆ. ಈ ಎಲ್ಲಾ ಕಾರಣಗಳಿಂದ ಲೋಕಸಭೆ ಚುನಾವಣೆಗೆ ಈ ಎರಡು ರಾಜ್ಯಗಳಲ್ಲೂ ಗೆಲ್ಲುವ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದೇ ಕಾಂಗ್ರೆಸ್‌ಗೆ ದೊಡ್ಡ ಸವಾಲಾಗಿದೆ. ಸಚಿವರನ್ನು ಕಣಕ್ಕಿಳಿಸಲು
ಆಲೋಚಿಸುತ್ತಿದ್ದರೂ ಅವರು ಒಪ್ಪುತ್ತಿಲ್ಲ. ಇಷ್ಟೆಲ್ಲಾ ಆದರೂ ಕರ್ನಾಟಕ ಮತ್ತು ತೆಲಂಗಾಣದಲ್ಲಿ ಕಾಂಗ್ರೆಸ್ ಇನ್ನೂ ಗಟ್ಟಿಯಾಗಿ ನೆಲೆ ನಿಲ್ಲಲು ಕಾರಣಗಳೇನು ಎಂಬುದನ್ನು ಯೋಚಿಸಿ, ಆ ತಂತ್ರಗಾರಿಕೆಗಳನ್ನು ರಾಷ್ಟ್ರಮಟ್ಟದಲ್ಲಿ ಅಳವಡಿಸಿಕೊಳ್ಳಲು ಪಕ್ಷದ ರಾಷ್ಟ್ರೀಯ ನಾಯಕರು ಯೋಚಿಸು ತ್ತಿಲ್ಲ. ಇದು ಕೇವಲ ಕಾಂಗ್ರೆಸ್ ಮಾತ್ರವಲ್ಲ, ಅದರ ಮಿತ್ರಪಕ್ಷಗಳ ಮೇಲೂ ಪರಿಣಾಮ ಬೀರುತ್ತಿದೆ.

ಮೈತ್ರಿಕೂಟದ ನಾಯಕತ್ವ ವಹಿಸಿರುವವರೇ ಸೋಲಿಗಾಗಿ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ ಎನ್ನುವ ಪರಿಸ್ಥಿತಿ ಇರುವಾಗ ಅವರು ಕೂಡ ಗೆಲ್ಲುವ
ಆತ್ಮವಿಶ್ವಾಸ ಕಳೆದುಕೊಂಡು ಚುನಾವಣೆ ಇನ್ನೇನು ಘೋಷಣೆಯಾಗುತ್ತಿದೆ ಎನ್ನುವಾಗ ಸ್ಪರ್ಧೆಗೆ ಅಣಿಯಾಗುತ್ತಿದ್ದಾರೆ. ಇದು ಬಿಜೆಪಿ ನೇತೃತ್ವದ
ಎನ್‌ಡಿಎ ಮೈತ್ರಿಕೂಟದ ಬಲವನ್ನು ಇನ್ನಷ್ಟು ಹೆಚ್ಚಿಸಿದೆ ಎಂದರೆ ಅತಿಶಯೋಕ್ತಿಯಲ್ಲ.

ಲಾಸ್ಟ್ ಸಿಪ್: ತಪ್ಪು ತಿದ್ದಿಕೊಳ್ಳದೆ ತಾನು ನಡೆದಿದ್ದೇ ದಾರಿ ಎಂದು ಭಾವಿಸಿದರೆ, ಅದು ತನ್ನ ಸೋಲಿಗೆ ತಾನೇ ಅಡಿಪಾಯ ಹಾಕಿಕೊಂಡಂತೆ.