Wednesday, 11th December 2024

ಏಕಕಾಲಿಕ ಚುನಾವಣೆ ಪ್ರಗತಿಗೆ ಪೂರಕ

ವೀಕೆಂಡ್ ವಿತ್ ಮೋಹನ್
camohanbn@gmail.com

ದೇಶದೆಲ್ಲೆಡೆ ಕೇಳಿಬರುತ್ತಿದ್ದ ‘ಒಂದು ದೇಶ, ಒಂದು ಚುನಾವಣೆ’ ಅಥವಾ ‘ಏಕಕಾಲಿಕ ಚುನಾವಣೆ’ ಕೂಗು ನಿಜವಾಗುವ ಕಾಲ ಹತ್ತಿರವಾಗಿದೆ. ಈ ಸಂಬಂಧವಾಗಿ, ಮಾಜಿ ರಾಷ್ಟ್ರಪತಿ ರಾಮನಾಥ ಕೋವಿಂದ ಅವರ ನೇತೃತ್ವದಲ್ಲಿ ರಚಿಸಲಾಗಿದ್ದ ಸಮಿತಿಯು ತನ್ನ ವರದಿಯನ್ನು ಸಲ್ಲಿಸಿದೆ. ನಮ್ಮ ದೇಶದಲ್ಲಿ ವರ್ಷದ ಬಹುತೇಕ ದಿನಗಳಲ್ಲಿ, ಒಂದಲ್ಲಾ ಒಂದು ಚುನಾವಣೆ ನಡೆಯುತ್ತಿರುತ್ತದೆ. ಲೋಕಸಭೆ, ವಿಧಾನಸಭೆ, ಪಾಲಿಕೆ, ಜಿಲ್ಲಾ/ತಾಲೂಕು/ಗ್ರಾಮ ಪಂಚಾಯತ್, ಶಿಕ್ಷಕರ ಕ್ಷೇತ್ರ ಹೀಗೆ ವಿವಿಧ ಚುನಾವಣೆಗಳ ಕಾರಣದಿಂದಾಗಿ ಚುನಾವಣಾ ಆಯೋಗವು ಪ್ರತಿನಿತ್ಯ ಕೆಲಸ ಮಾಡಬೇಕಾಗಿ ಬರುತ್ತದೆ.

ಭಾರತದಲ್ಲಿ ಹೀಗೆ ವರ್ಷಪೂರ್ತಿ ನಿರಂತರ ಕೆಲಸ ಮಾಡುವ ಸಂಸ್ಥೆಯೆಂದರೆ ಇದೇ ಇರಬೇಕು. ಕಾರಣ, ಪ್ರತಿಯೊಂದು ಚುನಾವಣೆಯೂ ಆಯೋಗದ ಮೇಲ್ವಿಚಾರಣೆಯಲ್ಲಿಯೇ ನಡೆಯಬೇಕು. ಸಂವಿಧಾನಾತ್ಮಕವಾಗಿ ರಚನೆಯಾಗಿರುವ ಚುನಾವಣಾ ಆಯೋಗವು ತನ್ನದೇ ಆದ ನಿಯಮಾವಳಿಯ ಮೂಲಕ ಚುನಾವಣೆಗಳನ್ನು ನಡೆಸುತ್ತದೆ ಹಾಗೂ ಅವು ಪಾರದರ್ಶಕವಾಗಿ, ನ್ಯಾಯಸಮ್ಮತವಾಗಿ ನಡೆಯುವಂತಾಗಲು ಹಗಲಿರುಳೆನ್ನದೆ ಶ್ರಮಿಸುತ್ತದೆ.
ನಮ್ಮ ಸಂವಿಧಾನದ ಮೂಲಸ್ವರೂಪವು ಅತ್ತ ಅಮೆರಿಕದ ರೀತಿಯಲ್ಲಿ ಸಂಪೂರ್ಣ ‘ಫೆಡರಲ್ ವ್ಯವಸ್ಥೆ’ಯೂ ಅಲ್ಲ, ಇತ್ತ ಬ್ರಿಟನ್ನಿನ ರೀತಿಯಲ್ಲಿ ಸಂಪೂರ್ಣ ‘ಏಕಾತ್ಮಕ’ವೂ ಅಲ್ಲ.

ಕೆಲ ವಿಚಾರದಲ್ಲಿ ‘-ಡರಲ್’, ಮತ್ತೆ ಕೆಲ ವಿಚಾರದಲ್ಲಿ ‘ಏಕಾತ್ಮಕ’ ವೈಶಿಷ್ಟ್ಯಗಳನ್ನು ಇದು ಒಳಗೊಂಡಿದೆ. ಇಂಥ ಸಂದರ್ಭದಲ್ಲಿ ‘ಒಂದು ದೇಶ, ಒಂದು ಚುನಾವಣೆ’ ಸಾಧ್ಯವೇ? ನಮ್ಮ ಸಂವಿಧಾನದಲ್ಲಿ ಕೆಲ ವಿಷಯಗಳ ಬಗ್ಗೆ ನಿರ್ಧರಿಸುವ ಅಧಿಕಾರವನ್ನು ಕೇಂದ್ರ ಸರಕಾರಕ್ಕೆ, ಮತ್ತೆ ಕೆಲವದರ ಅಧಿಕಾರವನ್ನು ರಾಜ್ಯ ಸರಕಾರಗಳಿಗೆ ನೀಡಲಾಗಿದೆ. ಇವೆರಡಕ್ಕೂ ಹೊರತಾದ ಮತ್ತಷ್ಟು ವಿಷಯಗಳನ್ನು ಪಟ್ಟಿಮಾಡಿ, ಅವುಗಳ ಬಗ್ಗೆ ನಿರ್ಧರಿಸುವ ಅಧಿಕಾರವನ್ನು ಕೇಂದ್ರ ಮತ್ತು ರಾಜ್ಯ ಸರಕಾರಗಳೆರಡಕ್ಕೂ ನೀಡಲಾಗಿದೆ.

ರಾಮನಾಥ ಕೋವಿಂದರ ಸಮಿತಿಯ ವರದಿ ನೀಡಿರುವ ಶಿಫಾರಸು ಹೀಗಿದೆ: ಮೊದಲಿಗೆ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗಳನ್ನು ಒಟ್ಟಿಗೆ ನಡೆಸುವುದು. ಅದಾದ ೧೦೦ ದಿನಗಳಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸುವುದು. ಒಂದು ವೇಳೆ ಅತಂತ್ರ ಫಲಿತಾಂಶ ಬಂದು ವಿಶ್ವಾಸಮತ
ಸಾಬೀತುಪಡಿಸುವಲ್ಲಿ ವಿಫಲವಾದರೆ, ಉಳಿದ ಅವಧಿಗೆ ಅನ್ವಯಿಸುವಂತೆ ಮಾತ್ರ ಚುನಾವಣೆ ಮಾಡುವುದು. ೨೦೨೯ರ ವೇಳೆಗೆ ಒಮ್ಮೆಲೆ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆ ನಡೆಯಬೇಕಾದರೆ, ಈಗಿರುವ ಕರ್ನಾಟಕದ ವಿಧಾನಸಭೆಯನ್ನು ಒಂದು ವರ್ಷ ಕಾಲ ವಿಸ್ತರಿಸಬೇಕಾಗಬಹುದು. ೫ ವರ್ಷದ ಅವಧಿಯ ಕೊನೆಯಲ್ಲಿ ಸರಕಾರ ಬಿದ್ದರೆ, ರಾಷ್ಟ್ರಪತಿಗಳ ಆಡಳಿತ ಜಾರಿಯಲ್ಲಿರಬೇಕು.

ದೇಶದ ಆರ್ಥಿಕತೆಯ ವೇಗ ಹೆಚ್ಚಿಸಲು ‘ಒಂದು ದೇಶ, ಒಂದು ಚುನಾವಣೆ’ಯ ಅಗತ್ಯವಿದೆ. ಪ್ರತಿನಿತ್ಯವೂ ಒಂದಿಲ್ಲೊಂದು ಚುನಾವಣೆ ನಡೆಯುತ್ತಿದ್ದರೆ, ಆರಿಸಿ ಬಂದಂಥ ಸರಕಾರಗಳು ಅಭಿವೃದ್ಧಿಗಿಂತ ಚುನಾವಣೆಯ ಮೇಲೆಯೇ ಹೆಚ್ಚಿನ ಗಮನ ಹರಿಸಬೇಕಾಗುತ್ತದೆ. ಅಭ್ಯರ್ಥಿಯ ಆಯ್ಕೆ, ಚುನಾವಣಾ ಪೂರ್ವ ತಯಾರಿ, ಮತದಾರರ ಪಟ್ಟಿ ಪರಿಷ್ಕರಣೆ, ಚುನಾವಣಾ ಪ್ರಣಾಳಿಕೆ, ಸಾರ್ವಜನಿಕ ಸಭೆಗಳು ಹೀಗೆ ಸಂಬಂಧಿತ ಚಟುವಟಿಕೆಗಳಲ್ಲೇ ದಿನಗಳು ಕಳೆದುಹೋಗುತ್ತವೆ. ಸರಕಾರಿ ನೌಕರರು ತಮ್ಮ ದಿನನಿತ್ಯದ ಕಾರ್ಯಗಳ ಬದಲು ಚುನಾವಣಾ ಕಾರ್ಯದಲ್ಲೇ ನಿರತರಾಗಬೇಕಾಗುತ್ತದೆ. ನಗರಪಾಲಿಕೆ, ವಿಧಾನಸಭೆ ಮತ್ತು ಲೋಕಸಭಾ ಚುನಾವಣೆಗಳಿಗಾಗಿ ಮತದಾರರ ಪಟ್ಟಿಯನ್ನು ಪರಿಷ್ಕರಿಸಲು ಸರಕಾರಿ ನೌಕರರನ್ನು ಬಳಸಿಕೊಳ್ಳಲಾಗುತ್ತದೆ. ಈ ಒಂದೇ ಕೆಲಸವನ್ನು ಕನಿಷ್ಠವೆಂದರೂ ೪-೫ ಬಾರಿ ಮಾಡಬೇಕಾಗುತ್ತದೆ.

ಈ ಕೆಲಸಕ್ಕೆ ಸಾವಿರಾರು ಕೋಟಿ ಹಣ ಖರ್ಚಾಗುತ್ತದೆ. ಸರಕಾರಿ ಶಾಲಾ ಶಿಕ್ಷಕರಿಗೆ ಚುನಾವಣೆ ಕೆಲಸವೆಂಬುದು ಒಂದು ರೀತಿಯಲ್ಲಿ ಅರೆಕಾಲಿಕ ಉದ್ಯೋಗವಾಗಿದೆ; ಮಕ್ಕಳಿಗೆ ಬೇಸಗೆ ರಜೆ ಸಿಗುತ್ತದೆ, ಆದರೆ ಶಿಕ್ಷಕರಿಗೆ ಸಿಗುವುದಿಲ್ಲ. ಪರಿಷ್ಕರಣೆಯಾದರೂ ಪಟ್ಟಿಯಲ್ಲಿ ಹೆಸರಿಲ್ಲವೆಂದು ಮತದಾರರು ಚುನಾವಣೆಯ ದಿನದಂದು ಬೊಬ್ಬೆಹಾಕುವುದು ಕಡಿಮೆಯಾಗಿಲ್ಲ. ಪ್ರತಿ ಚುನಾವಣೆಯಲ್ಲೂ ಶಾಂತಿ-ಸುವ್ಯವಸ್ಥೆ ಕಾಪಾಡಲು ಪೊಲೀಸರು ಮತ್ತು ಅರೆಸೇನಾ ಪಡೆಗಳನ್ನು ಬಳಸಲಾಗುತ್ತದೆ. ಚುನಾವಣೆಗಳ ಸಂಖ್ಯೆ ಹೆಚ್ಚಾದಂತೆ, ಈ ಪಡೆಗಳಿಗೆ ನೀಡುವ ಭತ್ಯೆ, ಊಟ-ವಸತಿಯ ಖರ್ಚು, ಓಡಾಡಲು ಬಳಕೆಯಾಗುವ ಪೆಟ್ರೋಲ್ ವೆಚ್ಚ ಇತ್ಯಾದಿಗಳು ಹೆಚ್ಚುತ್ತಿರುತ್ತವೆ.

ಇದೆಲ್ಲವೂ ಯಾರ ಹಣ? ನಾವು-ನೀವು ಸರಕಾರಕ್ಕೆ ಕಟ್ಟುವ ತೆರಿಗೆಯ ಹಣ. ಜನರ ತೆರಿಗೆ ಹಣವು ಚುನಾವಣೆಗಳ ನೆಪದಲ್ಲಿ ಹೀಗೆ ಪದೇಪದೆ ಖರ್ಚಾದರೆ
ದೇಶದ ಅಭಿವೃದ್ಧಿಗೆ ಹಣದ ಕೊರತೆಯಾಗುತ್ತದೆ, ಜತೆಗೆ ಸಮಯ ವ್ಯರ್ಥವಾಗುತ್ತದೆ. ಒಮ್ಮೆ ಕಳೆದರೆ ಮತ್ತೆ ಸಿಗದ ಸಮಯವನ್ನು ಹೀಗೆ ಚುನಾವಣೆ ಗೋಸ್ಕರ ಪದೇಪದೆ ವ್ಯರ್ಥಮಾಡಿದರೆ ಅಭಿವೃದ್ಧಿ ಹೇಗಾದೀತು? ಇನ್ನು ಗ್ರಾಮ ಪಂಚಾಯತ್ ಚುನಾವಣೆ. ಪಂಚಾಯತಿಗಳಿಗೆ ಸರಕಾರದಿಂದ ಸಿಗುವ ಅನುದಾನದ ಆಧಾರದ ಮೇಲೆ ಇಲ್ಲಿ ಅಭ್ಯರ್ಥಿಗಳು ಹಣವನ್ನು ಖರ್ಚು ಮಾಡುತ್ತಾರೆ. ಹೆಚ್ಚಿನ ಅನುದಾನವಿರುವ ಪಂಚಾಯತಿಗಳಿಗೆ ಅಭ್ಯರ್ಥಿಗಳು ಕೋಟಿಗಟ್ಟಲೆ ಹಣವನ್ನು ಖರ್ಚುಮಾಡುತ್ತಾರೆ. ಚುನಾವಣೆಗಳು ಹೆಚ್ಚಾದಂತೆ ಭ್ರಷ್ಟಾಚಾರವೂ ಹೆಚ್ಚುತ್ತದೆ; ಕಾರಣ, ಮತದಾರರಿಗೆ ಹಣದ ಆಮಿಷವೊಡ್ಡಿ ವೋಟು ಪಡೆದವರು ಅದನ್ನು ಮರಳಿ ದಕ್ಕಿಸಿಕೊಳ್ಳಲು ಹೆಚ್ಚಿನ ಭ್ರಷ್ಟಾಚಾರದಲ್ಲಿ ತೊಡಗುತ್ತಾರೆ.

‘ಒಂದು ದೇಶ, ಒಂದು ಚುನಾವಣೆ’ ವ್ಯವಸ್ಥೆ ಜಾರಿಗೆ ಬಂದರೆ ಇಂಥ ಆಮಿಷ ಮತ್ತು ಭ್ರಷ್ಟಾಚಾರ ತಗ್ಗುತ್ತವೆ. ಏಕಕಾಲಿಕ ಚುನಾವಣೆ ಮಾಡುವುದು ಅಷ್ಟು ಸುಲಭವೇ? ಹೌದು, ಸುಲಭವಲ್ಲ; ಆದರೆ ಅಸಾಧ್ಯವಾದುದೇನಲ್ಲ. ಭಾರತದಲ್ಲಿ ಅಸಾಧ್ಯವೆಂದುಕೊಂಡಂಥ ಹಲವು ಜಟಿಲ ಸಮಸ್ಯೆಗಳು ಕಳೆದ ೧೦ ವರ್ಷಗಳಲ್ಲಿ ನೋಡನೋಡುತ್ತಲೇ ಬಗೆಹರಿದಿರುವಾಗ, ‘ಏಕಕಾಲಿಕ ಚುನಾವಣೆ’ ಅಸಾಧ್ಯವೇನಲ್ಲ. ಇದನ್ನು ನಡೆಸಲು ಸಂವಿಧಾನದ ತಿದ್ದು ಪಡಿಯ ಅವಶ್ಯಕತೆಯಿದೆ. ಸರ್ವಪಕ್ಷಗಳ ಒಪ್ಪಿಗೆ ಸಿಕ್ಕ ನಂತರವಷ್ಟೇ ಸಂವಿಧಾನದ ತಿದ್ದುಪಡಿ ಸಾಧ್ಯ. ಇದಕ್ಕೆ ಪ್ರಾದೇಶಿಕ ಪಕ್ಷಗಳು ಅಷ್ಟು ಸುಲಭವಾಗಿ ಒಪ್ಪುವುದಿಲ್ಲ; ಏಕೆಂದರೆ, ಅಲ್ಪ-ಸ್ವಲ್ಪ ಸೀಟುಗಳನ್ನು ಗೆದ್ದು ಬೆಂಬಲ ನೀಡಿ, ಸರಕಾರಗಳನ್ನು ಸದಾ ತಮ್ಮ ಹಿಡಿತದಲ್ಲಿಟ್ಟುಕೊಳ್ಳಲು ಬಯಸುವ ಪ್ರಾದೇಶಿಕ ಪಕ್ಷಗಳು, ಏಕಕಾಲಿಕ ಚುನಾವಣೆ ನಡೆದರೆ ತಮ್ಮ ಅಸ್ತಿತ್ವಕ್ಕೆ ಧಕ್ಕೆಯಾಗುತ್ತದೆ ಎಂಬ ಭಯದಲ್ಲಿರುತ್ತವೆ.

ಅಂದರೆ ರಾಜ್ಯ ಹಾಗೂ ಕೇಂದ್ರ ಸರಕಾರಕ್ಕೆ ಏಕಕಾಲದಲ್ಲಿ ಚುನಾವಣೆ ನಡೆದರೆ, ಮತದಾರರ ಮನಸ್ಸು ಪ್ರಾದೇಶಿಕ ಪಕ್ಷದಿಂದ ರಾಷ್ಟ್ರೀಯ ಪಕ್ಷದೆಡೆಗೆ ಎಲ್ಲಿ ವಾಲಿಬಿಡುತ್ತದೋ ಎಂಬ ಭಯ ಅವನ್ನು ಕಾಡುತ್ತಿರುತ್ತದೆ. ಆದರೆ, ಹಿಂದೆಯೂ ಹಲವು ಬಾರಿ ಕೇಂದ್ರ ಹಾಗೂ ರಾಜ್ಯ ಸರಕಾರಗಳಿಗೆ ಒಟ್ಟಿಗೆ ಚುನಾವಣೆ ನಡೆದಿರುವ ಹಲವು ಉದಾಹರಣೆಗಳಿವೆ ಮತ್ತು ಇಂಥ ವೇಳೆ ಮತದಾರರು ರಾಜ್ಯ ಹಾಗೂ ಕೇಂದ್ರಕ್ಕೆ ಬೇರೆ ಬೇರೆ ಪಕ್ಷಗಳಿಗೆ ಮತ ಚಲಾಯಿಸಿದ್ದಿದೆ. ೨೦೧೮ರಲ್ಲಿ ಕರ್ನಾಟಕದಲ್ಲಿ ಮತ್ತು ೨೦೧೯ರಲ್ಲಿ ಒಡಿಶಾದಲ್ಲಿ ನಡೆದ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗಳು ಇದಕ್ಕೆ ಸಾಕ್ಷಿ.
೧೯೫೨ರಿಂದ ೬೭ರವರೆಗೂ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗಳು ಒಟ್ಟಿಗೆ ನಡೆದಿದ್ದವು. ಈ ಅವಧಿಯಲ್ಲಿ ಕೇಂದ್ರದಲ್ಲಿ ಅಧಿಕಾರದಲ್ಲಿದ್ದುದು ಕಾಂಗ್ರೆಸ್ ಸರಕಾರ.

ನೆಹರು ಪ್ರಧಾನಿಯಾಗಿದ್ದವರೆಗೂ ಏಕಕಾಲಿಕ ಚುನಾವಣೆಗಳು ನಡೆಯುತ್ತಿದ್ದವು. ಹೀಗೆ ಕಾಂಗ್ರೆಸ್ ಅಧಿಕಾರಾವಧಿಯಲ್ಲಿ ಬಹಳ ಹಿಂದೆಯೇ ಏಕಕಾಲಿಕ ಚುನಾವಣೆ ನಡೆದಿರುವ ನಿದರ್ಶನಗಳಿದ್ದರೂ, ಮೋದಿಯವರು ಇಂದು ಅದನ್ನೇ ಮಾಡಹೊರಟರೆ ಕಾಂಗ್ರೆಸಿಗರೇ ವಿರೋಧಿಸುತ್ತಾರೆ. ರಷ್ಯಾ ಅಧ್ಯಕ್ಷ ಪುಟಿನ್ ತಮ್ಮ ದೇಶದ ಸಂವಿಧಾನವನ್ನು ತಿದ್ದುಪಡಿ ಮಾಡಿ, ೨೦೨೯ರವರೆಗೂ ತಾವೇ ಅಧ್ಯಕ್ಷರೆಂದು ಘೋಷಿಸಿಕೊಂಡಿದ್ದಾರೆ. ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್ ಕೂಡ ಹೀಗೇ ತಿದ್ದುಪಡಿ ಮಾಡಿ ಒಂದು ರಾಜಕೀಯ ಪಕ್ಷವಷ್ಟೇ ಅಸ್ತಿತ್ವದಲ್ಲಿರುವಂತೆ ನೋಡಿಕೊಂಡಿದ್ದಾರೆ. ಅಲ್ಲಿನ ಚುನಾವಣೆಯಲ್ಲಿ ಶೇ.೯೯ರಷ್ಟು ಮತವು ಒಂದೇ ಪಕ್ಷಕ್ಕೆ ಬಿದ್ದಿತ್ತು. ಜಿನ್‌ಪಿಂಗ್ ನಂತರ ಅವರದ್ದೇ ಪಕ್ಷದಿಂದ ಮತ್ತೊಬ್ಬರು ಹುಟ್ಟುತ್ತಾರೆ. ಚೀನಾದಲ್ಲಿ ವಿಪಕ್ಷವೆಂಬುದೇ
ಇಲ್ಲ.

ಇಂಥ ದೇಶದ ಪರವಾಗಿ ನಮ್ಮ ದೇಶದ ಕಮ್ಯುನಿಸ್ಟರು ನಿಲ್ಲುತ್ತಾರೆ ಹಾಗೂ ನಮ್ಮಲ್ಲಿನ ಪ್ರಜಾಪ್ರಭುತ್ವವನ್ನು ಅಣಕಿಸಿ, ಸಂವಿಧಾನ  ಅಪಾಯದಲ್ಲಿದೆ ಯೆಂದು ಬೊಬ್ಬೆ ಹೊಡೆಯುತ್ತಾರೆ. ಮೋದಿಯವರು ದೇಶದ ಅಭಿವೃದ್ಧಿಯ ದೃಷ್ಟಿಯಿಂದ ಏಕಕಾಲಿಕ ಚುನಾವಣೆ ಮಾಡಬಯಸಿದರೆ ಅದು ಇವರಿಗೆ ಸರ್ವಾಧಿಕಾರವಾಗಿ ಕಾಣುತ್ತದೆ; ಆದರೆ ತಮಗಿಷ್ಟ ಬಂದಂತೆ ಸಂವಿಧಾನವನ್ನು ತಿದ್ದುಪಡಿ ಮಾಡಿಕೊಂಡಿರುವ ಚೀನಾ ಮತ್ತು ರಷ್ಯಾ ದೇಶಗಳು ಇವರಿಗೆ ಸ್ವರ್ಗದಂತೆ ಕಾಣುತ್ತವೆ.

ಭಾರತದ ಸಂವಿಧಾನದ ೩೫೬ನೇ ವಿಽಯನ್ನು ಬಳಸಿಕೊಂಡು ಒಮ್ಮೆಲೇ ೯ ರಾಜ್ಯ ಸರಕಾರಗಳನ್ನು ವಜಾಮಾಡಿದ ಪಕ್ಷವಿಂದು ಸರ್ವಾಧಿಕಾರದ ಪಾಠ
ಹೇಳುತ್ತದೆ. ರಾಜ್ಯ ಸರಕಾರದಲ್ಲಿ ಬಿಕ್ಕಟ್ಟಿನ ಪರಿಸ್ಥಿತಿ ಉದ್ಭವಿಸಿದಾಗ ರಾಜ್ಯಪಾಲರು ಈ ವಿಧಿಯನ್ವಯ ರಾಷ್ಟ್ರಪತಿಯವರಿಗೆ ವರದಿ ಸಲ್ಲಿಸಿ, ವಿಧಾನಸಭೆಯನ್ನು ವಿಸರ್ಜಿಸುವ ಹಕ್ಕನ್ನು ಹೊಂದಿರುತ್ತಾರೆ. ಈ ವರದಿಯನ್ನು ಸಂಸತ್ತಿನಲ್ಲಿ ಅಂಗೀಕರಿಸಿದ ಮೇಲೆ ರಾಜ್ಯಪಾಲರು ವಿಧಾನಸಭೆ ಯನ್ನು ವಿಸರ್ಜಿಸಿ ರಾಜ್ಯದ ಆಡಳಿತವನ್ನು ತಮ್ಮ ವಶಕ್ಕೆ ತೆಗೆದುಕೊಳ್ಳಬಹುದು. ಏಕಕಾಲಿಕ ಚುನಾವಣೆ ನಡೆಯಬೇಕಾದರೆ ಈ ವಿಽಯನ್ನು ತಿದ್ದುಪಡಿ
ಮಾಡಬೇಕಾಗುತ್ತದೆ. ಅದರನ್ವಯ, ಈಗಾಗಲೇ ಅಸ್ತಿತ್ವದಲ್ಲಿರುವ ಅವಧಿ ಮುಗಿಯದ ವಿಧಾನಸಭೆಯನ್ನು ಬೇಗ ವಿಸರ್ಜಿಸಬೇಕಾಗಬಹುದು ಅಥವಾ ಒಟ್ಟಿಗೆ ಚುನಾವಣೆ ನಡೆಸುವವರೆಗೂ, ಅವಧಿ ಮುಗಿದ ವಿಧಾನಸಭೆಯನ್ನು ರಾಜ್ಯಪಾಲರ ಆಡಳಿತಕ್ಕೆ ನೀಡಬೇಕಾಗಬಹುದು ಅಥವಾ ಅವಧಿಯನ್ನು ಐದು ವರ್ಷಕ್ಕಿಂತಲೂ ಹೆಚ್ಚಿಸಬಹುದು. ಈ ತಿದ್ದುಪಡಿ ಕೇವಲ ತಾತ್ಕಾಲಿಕವಾದ್ದರಿಂದ, ತಿದ್ದುಪಡಿಯಾದ ಮೇಲೆ ಒಟ್ಟಿಗೆ ಚುನಾವಣೆ ನಡೆಸಿ
ಹಳೆಯ ನಿಬಂಧನೆಗಳನ್ನು ವಾಪಸ್ ತರಬೇಕಾಗುತ್ತದೆ.

ದೇಶದೆಲ್ಲೆಡೆ ವಿವಿಧ ಹಂತಗಳಲ್ಲಿ ಚುನಾವಣೆಗಳು ನಡೆಯುತ್ತಿದ್ದಲ್ಲಿ ನೀತಿಸಂಹಿತೆಯು ಯಾವಾಗಲೂ ಎಲ್ಲಾದರೊಂದು ಕಡೆ ಜಾರಿಯಲ್ಲಿರುತ್ತದೆ. ಇದು ಒಮ್ಮೆ ಜಾರಿಯಲ್ಲಿದ್ದರೆ ಆಯಾ ಪಂಚಾಯಿತಿ/ಜಿಲ್ಲೆ/ರಾಜ್ಯದ ಅಭಿವೃದ್ಧಿ ಕೆಲಸಗಳನ್ನು ಮುಂದುವರಿಸಲಾಗುವುದಿಲ್ಲ. ನೋಡನೋಡುತ್ತಲೇ ಕನಿಷ್ಠವೆಂದರೂ ಒಂದು ತಿಂಗಳು ಕೆಲಸಗಳು ನಿಲ್ಲುತ್ತವೆ. ಸರಕಾರದಿಂದ ಬಂದಂಥ ಹಣ ಬ್ಯಾಂಕಿನಲ್ಲಿರುತ್ತದೆ, ಅದನ್ನು ಬಳಸಲಾಗದೆ ರಸ್ತೆಯಲ್ಲಿನ ಗುಂಡಿಗಳನ್ನು ಮುಚ್ಚಲಾಗುವುದಿಲ್ಲ. ತಮ್ಮದೇ ಕಾರ್ಯಸೂಚಿಯಲ್ಲಿ ಕೆಲಸ ಮಾಡುವ ಪಕ್ಷಗಳು, ತಮ್ಮ ಅಸ್ತಿತ್ವಕ್ಕೆ ಧಕ್ಕೆ ಬರುತ್ತದೆ ಎಂಬ
ಭಯದಿಂದಾಗಿ ಏಕಕಾಲಿಕ ಚುನಾವಣೆಯನ್ನು ವಿರೋಧಿಸುತ್ತಿವೆ.

ಆದರೆ ಏಕಕಾಲಿಕ ಚುನಾವಣೆಯನ್ನು ನಡೆಸುವುದರಿಂದ ಆಗುವ ಲಾಭ, ಉಳಿತಾಯವಾಗುವ ಹಣ ಮತ್ತು ಸಮಯ, ಅಭಿವೃದ್ಧಿಗೆ ಪೂರಕವಾಗುವ ಅಂಶಗಳು ಇವೆಲ್ಲ ದರ ಬಗ್ಗೆ ಸಾರ್ವಜನಿಕ ವಲಯದಲ್ಲಿ ದೊಡ್ಡಮಟ್ಟದ ಚರ್ಚೆಯೊಂದು ಶುರುವಾಗಿದೆ. ಎಲ್ಲ ರಾಜಕೀಯ ಪಕ್ಷಗಳು ಈ ಉಪಕ್ರಮಕ್ಕೆ ಪಕ್ಷಾತೀತವಾಗಿ ಕೈಜೋಡಿಸಿದರೆ ಈ ಕೆಲಸ ಸುಲಭವಾಗಿ ಆಗುತ್ತದೆ. ಒಂದೊಮ್ಮೆ ಜೋಡಿಸದಿದ್ದಲ್ಲಿ, ಸಾರ್ವಜನಿಕ ವಲಯದಲ್ಲಿನ ಚರ್ಚೆಗಳು ತೀವ್ರಗೊಂಡರೆ ವಿಧಿಯಿಲ್ಲದೆ ಎಲ್ಲರೂ ಒಪ್ಪಿಕೊಳ್ಳಲೇಬೇಕಾದ ಪರಿಸ್ಥಿತಿ ಬರುತ್ತದೆ. ಭಾರತದ ಅಭಿವೃದ್ಧಿಯ ದೃಷ್ಟಿಯಿಂದ ‘ಒಂದು ದೇಶ, ಒಂದು ಚುನಾವಣೆ’ ಮಹತ್ವದ ನಿರ್ಧಾರವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.