Wednesday, 11th December 2024

ಟಾಟಾ ಮೋಟರ್ಸ್ ನಿಂದ ಟಾಟಾ ಸ್ಟೀಲ್ ಗೆ ಪರಿಸರಸ್ನೇಹಿ ವಾಣಿಜ್ಯ ವಾಹನಗಳ ಹಸ್ತಾಂತರ

• ಎಲ್ಎನ್ ಜಿ ಮತ್ತು ಬ್ಯಾಟರಿ ಚಾಲಿತ ಟ್ರಾಕ್ಟರ್, ಟಿಪ್ಪರ್ ಮತ್ತು ಬಸ್ ಗಳ ಪೂರೈಕೆ
• ಟಾಟಾ ಸ್ಟೀಲ್ ಪೂರೈಕೆ ಜಾಲವನ್ನು ಹಸಿರುಗೊಳಿಸಲು ಪೂರಕ

ಬೆಂಗಳೂರು: ಭಾರತದ ಅತಿದೊಡ್ಡ ವಾಣಿಜ್ಯ ವಾಹನಗಳ ತಯಾರಿಕಾ ಸಂಸ್ಥೆಯಾಗಿರುವ ಟಾಟಾ ಮೋಟರ್ಸ್ ನೆಕ್ಸ್ಟ್ ಜನರೇಶನ್ (ಮುಂದಿನ ಪೀಳಿಗೆ)ನ ಹಸಿರು ಇಂಧನ ಚಾಲಿತ ವಾಣಿಜ್ಯ ವಾಹನಗಳನ್ನು ಟಾಟಾ ಸ್ಟೀಲ್ ಗೆ ಹಸಿರು ನಿಶಾನೆ ತೋರಿಸಲಾಯಿತು. ಈ ಫ್ಲೀಟ್ ನಲ್ಲಿ ಪ್ರೈಮಾ ಟ್ರ್ಯಾಕ್ಟರ್ ಗಳು, ಟಿಪ್ಪರ್ ಗಳು ಮತ್ತು ಅಲ್ಟ್ರಾ ಇವಿ ಬಸ್ ಗಳಿರಲಿವೆ. ಈ ವಾಹನಗಳು ಲಿಕ್ವಿಫೈಡ್ ನ್ಯಾಚುರಲ್ ಗ್ಯಾಸ್ (LNG) ಮತ್ತು ಬ್ಯಾಟರಿ ಎಲೆಕ್ಟ್ರಿಕ್ ಟೆಕ್ನಾಲಾಜಿಯಿಂದ ಚಾಲಿತವಾಗಲಿವೆ. ಜೆಮ್ಷಡ್ ಪುರದಲ್ಲಿ ನಡೆದ ಟಾಟಾ ಸಮೂಹದ ಸಂಸ್ಥಾಪಕದ ದಿನಾಚರಣೆ ಸಮಾರಂಭದಲ್ಲಿ ಟಾಟಾ ಸನ್ಸ್ ನ ಅಧ್ಯಕ್ಷ ಎನ್.ಚಂದ್ರಶೇಖರನ್ ಅವರು ಈ ಪರಿಸರ ಸ್ನೇಹಿ ವಾಹನಗಳಿಗೆ ಹಸಿರು ನಿಶಾನೆ ತೋರಿದರು. ಈ ಸಂದರ್ಭದಲ್ಲಿ ಟಾಟಾ ಸ್ಟೀಲ್ ನ ಸಿಇಒ ಮತ್ತು ವ್ಯವಸ್ಥಾಪಕ ನಿರ್ದೇಶಕ ಟಿ.ವಿ.ನರೇಂದ್ರನ್, ಟಾಟಾ ಮೋಟರ್ಸ್ ನ ಕಾರ್ಯಕಾರಿ ನಿರ್ದೇಶಕ ಗಿರೀಶ್ ವಾಘ್ ಮತ್ತು ಸಂಸ್ಥೆಯ ಹಲವಾರು ಗಣ್ಯರು ಪಾಲ್ಗೊಂಡಿದ್ದರು.

ಟಾಟಾ ಮೋಟರ್ಸ್ ನೊಂದಿಗಿನ ಈ ದೀರ್ಘಾವಧಿ ಪಾಲುದಾರಿಕೆ ಬಗ್ಗೆ ಮಾತನಾಡಿದ ಟಾಟಾ ಸ್ಟೀಲ್ ನ ಮುಖ್ಯ ಕಾರ್ಯಕಾರಿ ಅಧಿಕಾರಿ & ವ್ಯವಸ್ಥಾಪಕ ನಿರ್ದೇಶಕ ಟಿ.ವಿ.ನರೇಂದ್ರನ್ ಅವರು, “ಟಾಟಾ ಮೋಟರ್ಸ್ ನೊಂದಿಗಿನ ನಮ್ಮ ದೀರ್ಘಾವಧಿಯ ಪಾಲುದಾರಿಕೆಯಲ್ಲಿ ಈ ವಾಹನಗಳ ಪೂರೈಕೆಯು ಒಂದು ದೊಡ್ಡ ಮೈಲಿಗಲ್ಲಾಗಿದೆ. ನಮ್ಮದೇ ಉದ್ಯಮ ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿರುವ ಟಾಟಾ ಸ್ಟೀಲ್ ಮತ್ತು ಟಾಟಾ ಮೋಟರ್ಸ್ ಸಂಸ್ಥೆಗಳೆರಡೂ ಸುಸ್ಥಿರತೆ ಮತ್ತು ಆವಿಷ್ಕಾರದಲ್ಲಿ ಒಂದೇ ರೀತಿಯ ದೃಷ್ಟಿಕೋನವನ್ನು ಇಟ್ಟುಕೊಂಡಿದ್ದು, ಅವುಗಳನ್ನು ಪರಸ್ಪರ ಹಂಚಿಕೆ ಮಾಡಿಕೊಳ್ಳುತ್ತಿವೆ. ನಮ್ಮ ಸಾಮೂಹಿಕ ಪರಿಣತಿ ಮತ್ತು ಸಂಪನ್ಮೂಲಗಳನ್ನು ಬಳಸಿಕೊಳ್ಳುವ ಮೂಲಕ ನಾವು ನಮ್ಮ ಉದ್ಯಮಗಳನ್ನು ಕ್ರಾಂತಿಕಾರಿಗೊಳಿಸುವುದಲ್ಲದೇ ಪರಿಸರ ಕಾಳಜಿ ಇಟ್ಟುಕೊಂಡು ಮುನ್ನಡೆಸುತ್ತಿದ್ದೇವೆ. ಒಟ್ಟಾರೆ, ಸಕಾರಾತ್ಮಕವಾದ ಬದಲಾವಣೆಗಳನ್ನು ತರಲು ಮತ್ತು ಪರಿಸರ ಸ್ನೇಹಿ ಪರಿಹಾರಗಳನ್ನು ಕಂಡುಕೊಳ್ಳಲು ನಾವು ಬದ್ಧರಾಗಿದ್ದೇವೆ. ಇದು ನಮ್ಮ ವ್ಯವಹಾರಗಳಿಗೆ ಪ್ರಯೋಜನಗಳನ್ನು ನೀಡುವುದಲ್ಲದೇ, ಹಸಿರು ನಾಳೆಗೆ ಕೊಡುಗೆ ನೀಡುತ್ತದೆ’’ ಎಂದರು.

ಭವಿಷ್ಯಕ್ಕೆ ಸಿದ್ಧವಾಗಿರುವ ವಾಹನಗಳಿಗೆ ಚಾಲನೆ ನೀಡಿ ಮಾತನಾಡಿದ ಟಾಟಾ ಮೋಟರ್ಸ್ ನ ಕಾರ್ಯಕಾರಿ ನಿರ್ದೇಶಕ ಗಿರೀಶ್ ವಾಘ್ ಅವರು, “ಟಾಟಾ ಮೋಟರ್ಸ್ ಭಾರತದಲ್ಲಿ ಸುಸ್ಥಿರ, ಸುರಕ್ಷಿತ ಮತ್ತು ಸ್ಮಾರ್ಟ್ ಸಾರಿಗೆ ವ್ಯವಸ್ಥೆಯ ಜಾಗತಿಕ ಮೆಗಾಟ್ರೆಂಡ್ ಗೆ ಚಾಲನೆ ನೀಡಿದೆ. ನಮ್ಮ ಹಸಿರು ವಾಣಿಜ್ಯ ವಾಹನಗಳ ಸಮೂಹವು ಟಾಟಾ ಸ್ಟೀಲ್ ತನ್ನ ಪೂರೈಕೆ ಜಾಲದಲ್ಲಿನ ಇಂಗಾಳ ಹೊರಸೂಸುವಿಕೆಯನ್ನು ತಟಸ್ಥಗೊಳಿಸುವ ಪ್ರಯತ್ನಗಳಿಗೆ ವೇಗವನ್ನು ತುಂಬುತ್ತದೆ. ಕ್ರಿಯಾತ್ಮಕತೆ, ಕಾರ್ಯಕ್ಷಮತೆ, ಸಂಪರ್ಕ ಮತ್ತು ಸುರಕ್ಷತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಸಮಗ್ರ ಪರಿಹಾರಗಳನ್ನು ವಿನ್ಯಾಸಗೊಳಿಸಲು ನಾವು ಅವರೊಂದಿಗೆ ಮತ್ತು ಅವರ ಸಾರಿಗೆ ಪಾಲುದಾರರೊಂದಿಗೆ ಸಹಕಾರ ನೀಡುತ್ತಿದ್ದೇವೆ. ವಿವಿಧ ಕಾರ್ಯಭಾರಗಳು ಮತ್ತು ವಿಶೇಷ ಅಪ್ಲಿಕೇಶನ್ ಗಳನ್ನು ಪೂರೈಸುವ ದಿಸೆಯಲ್ಲಿ ಈ ವಾಹನಗಳ ಪ್ರತಿಯೊಂದು ಅಂಶವನ್ನು ಉದ್ದೇಶಪೂರ್ವಕವಾಗಿ ಹೆಚ್ಚಳ ಮಾಡಲಾಗಿದೆ. 2045 ರ ವೇಳೆಗೆ ಇಂಗಾಲದ ಪ್ರಮಾಣವನ್ನು ಕಡಿಮೆ ಮಾಡುವ ಮತ್ತು ನಿವ್ವಳ-ಶೂನ್ಯ ಹೊರಸೂಸುವಿಕೆಯನ್ನು ಸಾಧಿಸುವ ನಮ್ಮ ಬದ್ಧತೆಯ ಐತಿಹಾಸಿಕ ಪಾಲುದಾರಿಕೆಯನ್ನು ಬಲಪಡಿಸಲು ನಾವು ಎದುರುನೋಡುತ್ತಿದ್ದೇವೆ’’ ಎಂದು ತಿಳಿಸಿದರು.

ಟಾಟಾ ಮೋಟರ್ಸ್ ನ ಹೊಸ ಪೀಳಿಗೆಯ ವಾಣಿಜ್ಯ ವಾಹನಗಳು ಅಡ್ವಾನ್ಸ್ಡ್ ಡ್ರೈವರ್ ಅಸೆಸ್ಟೆನ್ಸ್ ಸಿಸ್ಟಮ್ (ADAS), ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್, ಆ್ಯಕ್ಟೀವ್ ಟ್ರಾಕ್ಷನ್ ಕಂಟ್ರೋಲ್ ಮತ್ತು ಡ್ರೈವರ್ ಮಾನಿಟರಿಂಗ್ ಸಿಸ್ಟಮ್ ನಂತಹ ಬಹು ಸುರಕ್ಷಿತ ಅಂಶಗಳೊಂದಿಗೆ ಸುಸಜ್ಜಿತವಾಗಿವೆ. ಸ್ಟೀಲ್ ಉತ್ಪನ್ನಗಳು ಮತ್ತು ಕಚ್ಚಾ ವಸ್ತುಗಳನ್ನು ಸಾಗಿಸಲು ಈ ವಾಹನಗಳನ್ನು ಟಾಟಾ ಸ್ಟೀಲ್ ನ ಪೂರೈಕೆ ಪಾಲುದಾರರಿಗೆ ಹಸ್ತಾಂತರ ಮಾಡಲಾಯಿತು.
ವೈವಿಧ್ಯಮಯ ಕಾರ್ಯಗಳಿಗೆ ಬಳಸಲು ಪೂರಕವಾಗಿ ಈ ಟಾಟಾ ಪ್ರೈಮಾ ಎಲ್ಎನ್ ಜಿ ಶ್ರೇಣಿಯ ಟಿಪ್ಪರ್ ಗಳು (3530.K) ಮತ್ತು ಟ್ರ್ಯಾಕ್ಟರ್ (5530.S) ಗಳನ್ನು ವಿನ್ಯಾಸಗೊಳಿಸಲಾಗಿದೆ. ಇವುಗಳನ್ನು ಸರ್ಫೇಸ್, ಮೈನಿಂಗ್, ಲಾಂಗ್ –ಹೌಲ್ ಕಮರ್ಷಿಯಲ್ ಟ್ರಾನ್ಸ್ ಪೋರ್ಟೇಶನ್ ಗೆ ಬಳಕೆ ಮಾಡಿಕೊಳ್ಳಬಹುದಾಗಿದೆ. ಇನ್ನು ಬ್ಯಾಟರಿ-ಎಲೆಕ್ಟ್ರಿಕ್ ಚಾಲಿತ ಶ್ರೇಣಿಯ 28ಟಿ ಇವಿ ಟಿಪ್ಪರ್ (E28.K) ಮತ್ತು 46ಟಿ ಇವಿ ಟ್ರ್ಯಾಕ್ಟರ್ (E46.S) ಅತ್ಯುತ್ತಮ ಕಾರ್ಯಕ್ಷಮತೆಗೆ ರೂಪಿಸಲಾಗಿದೆ. ಇವು ಟಾಟಾ ಸ್ಟೀಲ್ ನ ಲಾಜಿಸ್ಟಿಕ್ ಚಲನೆಯನ್ನು ಉತ್ತಮಗೊಳಿಸಲಿವೆ. ಇದಲ್ಲದೇ, ಶೂನ್ಯ-ಮಾಲಿನ್ಯ ಟ್ರಕ್ ಗಳ ಜೊತೆಗೆ ಕಂಪನಿಯು ಉದ್ಯೋಗಿಗಳ ಸಂಚಾರಕ್ಕೆಂದು ಟಾಟಾ ಅಲ್ಟ್ರಾ ಇವಿ ಬಸ್ ಗಳನ್ನು ಪೂರೈಕೆ ಮಾಡಲಾಗುತ್ತಿದೆ.

ಬ್ಯಾಟರಿ ಎಲೆಕ್ಟ್ರಿಕ್, ಸಿಎನ್ ಜಿ, ಎಲ್ಎನ್ ಜಿ, ಹೈಡ್ರೋಜನ್ ಇಂಟರ್ನಲ್ ಕಂಬಶನ್ ಎಂಜಿನ್ ಮತ್ತು ಹೈಡ್ರೋಜನ್ ಫ್ಯುಯೆಲ್ ಸೆಲ್ ಟೆಕ್ನಾಲಾಜಿ ಯಂತಹ ಪರ್ಯಾಯ ಇಂಧನ ತಂತ್ರಜ್ಞಾನವನ್ನು ಆವಿಷ್ಕರಿಸಲು ಮತ್ತು ಅಭಿವೃದ್ಧಿಪಡಿಸಿ ಅತ್ಯುತ್ತಮ ಪರ್ಯಾಯ ಸಾರಿಗೆ ಪರಿಹಾರಗಳನ್ನು ಒದಗಿಸುವಲ್ಲಿ ಟಾಟಾ ಮೋಟರ್ಸ್ ನಿರಂತರ ಪ್ರಯತ್ನಗಳನ್ನು ನಡೆಸುತ್ತಿದೆ. ಆಟೋ ಎಕ್ಸ್ ಪೋ 2023 ಮತ್ತು ಫೆಬ್ರವರಿಯಲ್ಲಿ ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್ ಪೋದಲ್ಲಿ ಟಾಟಾ ಮೋಟರ್ಸ್ ತನ್ನ ವಿಸ್ತಾರವಾದ ಪರ್ಯಾಯ ಇಂಧನ ಚಾಲಿತ ವಾಹನಗಳನ್ನು ಪ್ರದರ್ಶಿಸಿದೆ. ಇದುವರೆಗೆ ಟಾಟಾ ಮೋಟರ್ಸ್ ಭಾರತದ ವಿವಿಧ ನಗರಗಳಿಗೆ 2,000 ಕ್ಕೂ ಹೆಚ್ಚು ಎಲೆಕ್ಟ್ರಿಕ್ ಬಸ್ ಗಳನ್ನು ಪೂರೈಕೆ ಮಾಡಿದೆ. ಆ ಬಸ್ ಗಳು 12 ಕೋಟಿ ಕಿಲೋಮೀಟರ್ ಗಳನ್ನು ಕ್ರಮಿಸುವ ಮೂಲಕ ಶೇ.95 ಕ್ಕೂ ಹೆಚ್ಚು ಕಾರ್ಯಕ್ಷಮತೆಯನ್ನು ತೋರಿವೆ.