ಐಪಿಎಲ್ ಬೆಟ್ಟಿಂಗ್ ಹಾಗೂ ಆನ್‌ಲೈನ್ ಗೇಮಿಂಗ್ ವ್ಯಸನಕ್ಕೆ ಬಲಿಯಾಗಿ ಬರೋಬ್ಬರಿ ಒಂದೂವರೆ ಕೋಟಿ ರುಪಾಯಿ ಸಾಲ ಮಾಡಿಕೊಂಡಿದ್ದ ವ್ಯಕ್ತಿಯೊಬ್ಬರ ಪತ್ನಿ ಇತ್ತೀಚೆಗೆ ಆತ್ಮಹತ್ಯೆ ಮಾಡಿಕೊಂಡ ಘಟನೆ ಚಿತ್ರದುರ್ಗದಿಂದ ವರದಿಯಾಗಿದೆ. ಪತಿಗೆ ಸಾಲ ಕೊಟ್ಟವರು ಮನೆಬಾಗಿಲಿಗೆ ಬಂದು ಪೀಡಿಸುತ್ತಿದ್ದುದನ್ನು ಕಂಡು ನೊಂದ ಆ ಹೆಣ್ಣುಜೀವ ಈ ದುರಂತಕ್ಕೆ ಒಡ್ಡಿಕೊಂಡಿದೆ. ಇದು ನಿಜಕ್ಕೂ ವಿಷಾದನೀಯ ಸಂಗತಿ.
ಆನ್ ಲೈನ್ ಗೇಮಿಂಗ್‌ನ ಚಾಳಿಗೆ ಸಿಲುಕಿ ಬದುಕನ್ನು ಮೂರಾಬಟ್ಟೆ ಮಾಡಿಕೊಂಡವರು ಸಾಕಷ್ಟು ಮಂದಿ ಕಾಣಬರುತ್ತಿರುವ ಹಿನ್ನೆಲೆಯಲ್ಲಿ ಈ ಪಿಡುಗಿಗೆ
ಲಗಾಮು ಹಾಕಬೇಕು ಎಂಬ ಕೂಗು ಬಹಳ ದಿನಗಳಿಂದ ಕೇಳಿಬರುತ್ತಿದೆ; ಆದರೆ ಸಂಬಂಧಪಟ್ಟವರು ಅದೇಕೋ ಮನಸ್ಸು ಮಾಡುತ್ತಿಲ್ಲ. ಆನ್‌ಲೈನ್ ಗೇಮಿಂಗ್ ಅಥವಾ ಜೂಜಿನ ವಕ್ತಾರರು, ‘ಈ ಆಟವು ಚಾಳಿಯಾಗಿ ಪರಿಣಮಿಸಬಹುದು’ ಎಂದು ಮುದ್ರಣ ಮಾಧ್ಯಮಗಳಲ್ಲಿ ಸಣ್ಣಕ್ಷರಗಳಲ್ಲಿ ಮತ್ತು ದೃಶ್ಯ ಮಾಧ್ಯಮಗಳಲ್ಲಿ ಸಣ್ಣದನಿಯಲ್ಲಿ (ಗಡಿಬಿಡಿಯಲ್ಲಿ) ಹೇಳಿ ಕೈತೊಳೆದುಕೊಳ್ಳುವುದಿದೆ.
ಹೀಗಾಗಿ, ಸಂಭಾವ್ಯ ಅಪಾಯದ ಅರಿವಿಲ್ಲದೆ ಜೂಜು ಎಂಬ ಬೆಂಕಿಯ ಸಂಗವನ್ನು ಅರಸಿ ಹೋಗುವ ಪತಂಗಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಇದು ನಿಲ್ಲಬೇ ಕೆಂದರೆ, ಬೆಟ್ಟಿಂಗ್ ಮತ್ತು ಆನ್‌ಲೈನ್ ಜೂಜುಗಳು ಅದೆಷ್ಟು ಕೆಡುಕನ್ನುಉಂಟುಮಾಡುತ್ತವೆ ಹಾಗೂ ಆರ್ಥಿಕ, ಸಾಮಾಜಿಕ, ಕೌಟುಂಬಿಕ ತಳಹದಿಗಳು ಅದೆಷ್ಟರ ಮಟ್ಟಿಗೆ ಕುಸಿಯುತ್ತವೆ ಎಂಬುದನ್ನು ಜನರಿಗೆ ಮನದಟ್ಟಾಗುವಂತೆ ತಿಳಿಹೇಳಬೇಕಿದೆ. ಕೌರವರು ನೀಡಿದ ಜೂಜಿನ ಪಂಥಾಹ್ವಾನವನ್ನು ಸ್ವೀಕರಿಸಿದ ಪಾಂಡವರು ಏನೆಲ್ಲಾ ನೋವು ಮತ್ತು ಅವಮಾನಗಳನ್ನು ಅನುಭವಿಸಬೇಕಾಗಿ ಬಂತು ಎಂಬುದನ್ನು ಹೇಳಿಕೊಂಡು-ಕೇಳಿಕೊಂಡೇ ಬಂದಿರುವ ಪರಂಪರೆ ನಮ್ಮದು.
ಇಷ್ಟಾಗಿಯೂ ಅದೇ ಕೂಪದಲ್ಲಿ ಮತ್ತೆ ಮತ್ತೆ ಬಿದ್ದು ಒದ್ದಾಡುವುದೇಕೆ? ಸಂಪತ್ತಿನ ಗಳಿಕೆ ತಪ್ಪಲ್ಲ, ಆದರೆ ಅದಕ್ಕೊಂದು ವಿಹಿತವಾದ ಮಾರ್ಗವಿದೆ. ಅದೇ ಪ್ರಾಮಾ ಣಿಕ ದುಡಿಮೆ. ಪರಿಶ್ರಮದ ದುಡಿಮೆಯಿಂದ ದಕ್ಕುವ ಸಂತಸ ಮತ್ತು ನೆಮ್ಮದಿಗಳು, ಜೂಜಿನ ಮಾರ್ಗೋಪಾಯದ ಗಳಿಕೆಯಿಂದ ಖಂಡಿತ ಸಿಗವು ಎಂಬುದನ್ನು ಜನರು ಇನ್ನಾದರೂ ಅರಿಯಲಿ; ಜೂಜಿನ ಅಡ್ಡೆಗಳಿಗೆ ಲಗಾಮು ಹಾಕುವತ್ತ ಆಳುಗರೂ ಗಮನ ಹರಿಸಲಿ.